• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಥೆಯಾಂದು ಹೇಳುವೆ ನೀ ಕೇಳು ಮಗುವೆ..

By Staff
|

*ಕೆ.ರಾಜಲಕ್ಷ್ಮಿ ರಾವ್‌

ಆಟ ಊಟ ಪಾಠ. ಅದು ಶಾಲಾ ದಿನಗಳ ಕಾಲ. ವೇಳಾಪಟ್ಟಿಯಲ್ಲಿ ‘ನೀತಿ, ಕೈ ಕೆಲಸ’ ಎನ್ನುವಂತೆ ‘ಗ್ರಂಥಾಲಯ’ ಎನ್ನುವ ಪೀರಿಯೆಡು ವಾರಕ್ಕೊಂದು ಇರುತ್ತಿತ್ತು . ಆ ಪೀರಿಯೆಡ್ಡಿನ ಸಮಯದಲ್ಲಿ ಆಟವಾಡುತ್ತಿದ್ದೆವು. ಸ್ಕೂಲ ಮುಂದಿನ ಮೈದಾನದಲ್ಲಿ , ಹಿಂಭಾಗದ ಹುಣಸೆ ತೋಪಿನಲ್ಲಿ . ಮರಕೋತಿ, ಕಳ್ಳ ಪೊಲೀಸ್‌, ಲಗೋರಿ , ಖೋ ಖೋ.. ಒಂದೆರಡಲ್ಲ . ಬಿದ್ದು ಮಂಡಿ ತರಚುತ್ತಿತ್ತು . ಅಂಗಿ ಮಾಸುತ್ತಿತ್ತು . ಅಮ್ಮನ ಬೈಗುಳ ನೆನಪಾಗಿ ಕಣ್ಣು ತೇವವಾಗುತ್ತಿದ್ದವು. ಎಲ್ಲ ಸ್ವಲ್ಪ ಹೊತ್ತು ಮಾತ್ರ. ಆಟಕ್ಕೆ ಯಾವುದೂ ಅಡ್ಡಿಯಾಗುವುದಿಲ್ಲ .

ಒಂದಿನ-

ಗ್ರಂಥಾಲಯದ ಪೀರಿಯೆಡು. ಇವತ್ತು ಆಟ ಬೇಡ ಅಂದ್ರು ಕನ್ನಡದ ಕನ್ನಡಕದ ಮೇಷ್ಟು . ‘ಸರಸ್ವತಿ ಮಂದಿರ’ ಎಂದು ಬೋರ್ಡು ತಗುಲಿಸಿದ್ದ ರೂಮಿನೊಳಗೆ ಹುಡುಗ ಹುಡುಗಿಯರನ್ನು ಕರೆದುಕೊಂಡು ಹೋದರು. ಎರಡೊ ಮೂರೊ ಗಾಜಿನ ಬಾಗಿಲ ಬೀರುಗಳು. ಬೀರುಗಳ ತುಂಬಾ ಪುಸ್ತಕಗಳು. ಅಷ್ಟೊಂದು ಪುಸ್ತಕಗಳನ್ನು ನೋಡಿದ್ದು ಅದೇ ಮೊದಲು.

A Kannada Book story of Bharata Bharatiಟೇಬಲ್ಲಿನ ಮೇಲೆ ಮೇಷ್ಟ್ರು ಪುಸ್ತಕಗಳನ್ನು ಒಂದರ ಮೇಲೊಂದು ನೀಟಾಗಿ ಜೋಡಿಸಿಟ್ಟಿದ್ದರು. ಕಮಲ, ರಂಗ, ಪುಟ್ಟಿ .. ರಿಜಿಸ್ಟರು ಪುಸ್ತಕ ತೆರೆದು ಒಬ್ಬೊಬ್ಬರ ಹೆಸರನ್ನೇ ಕರೆಯುತ್ತಾ ಹೋದರು. ಹೆಸರಿನ ಮುಂದೆ ಪುಸ್ತಕದ ಹೆಸರು ಬರೆದು ಎಲ್ಲರಿಗೂ ಒಂದೊಂದು ಪುಸ್ತಕ ಕೊಟ್ಟರು. ಅಂಗೈ ಅಗಲದ ಪುಸ್ತಕ. ಓದಿ ವಾರದಲ್ಲಿ ವಾಪಸ್ಸು ಮಾಡಬೇಕು. ಪುಸ್ತಕ ಗಲೀಜಾಗಬಾರದು, ಹರಿಯಬಾರದು- ಮೇಷ್ಟ್ರ ಕಟ್ಟೆಚ್ಚರಿಕೆ.

ಸರಸ್ವತಿ ಮಂದಿರದಿಂದ ಹೊರಬಂದವರ ಕೈಯ್ಯಲ್ಲಿ ಮಹಾತ್ಮಗಾಂಧಿ, ಸುಭಾಷ್‌, ತಿಲಕ್‌, ಗೋಖಲೆ ಮುಂತಾಗಿ ದೇಶದ ನಾಯಕರ ಮುಖಪುಟದ ಚಿತ್ರಗಳ ಪುಸ್ತಕಗಳು. ಎಷ್ಟು ಚಿಕ್ಕ ಪುಸ್ತಕ. ಪುಟಾಣಿಗಳಿಗಾಗಿ ಪುಟ್ಟ ಪುಸ್ತಕ. ಪುಸ್ತಕದೊಳಗೂ ಚಿತ್ರಗಳು. ಪುಸ್ತಕದ ಬೆನ್ನಿನಲ್ಲಿ ಭಾರತದ ಭೂಪಟ. ಅದರ ತುಂಬಾ ಮಕ್ಕಳು. ಆ ಗುಂಪಿನಲ್ಲಿ ನಾವೆಲ್ಲಾ ಇದ್ದೆವು! ಓದು ಯಾರಿಗೆ ಬೇಕು, ಚಿತ್ರವಷ್ಟೇ ಸಾಲದೆ? ಉಹ್ಞುಂ, ಓದಿದಿರಾ- ಎಂದು ಮೇಷ್ಟ್ರು ದಿನಾ ಕೇಳುತ್ತಿದ್ದರು. ರಂಗಣ್ಣನ ಕನಸಿನ ದಿನಗಳ ಕಾಲದಂಥ ಕಾಮಧೇನುವಿನಂಥ ಮೇಷ್ಟ್ರು ಕಥೆ ಹೇಳಿಸುತ್ತಿದ್ದರು. ಒಬ್ಬ ಓದಿದ ಪುಸ್ತಕ ಎಲ್ಲರಿಗೂ ತಲುಪುತ್ತಿತ್ತು .

ಓದಿನ ರುಚಿ ಹತ್ತಿದ್ದು ಹೀಗೆ. ಬುದ್ಧ, ಗಾಂಧಿ, ಗೋಖಲೆ ಮುಂತಾದ ದೇಶನಾಯಕರು ಎದೆಯಾಳಗೆ ಪ್ರವೇಶಿಸಿದ್ದು ಹೀಗೆ.

***

ಘಿಲ್‌ ಘಿಲ್‌ ಅಂತ ಕಾಲ ಕಡಗದ ಸದ್ದು ಮಾಡುತ್ತಾ ನಾಲ್ಕು ಹೆಜ್ಜೆ ಹಾಕಿ ದಪ್‌ ಅಂತ ಬೀಳುವ ಮಗು. ಕೈಗೆ ಸಿಕ್ಕದ್ದನ್ನ, ಬಣ್ಣ ಬಣ್ಣವಾಗಿ ಕಂಡದ್ದನ್ನ ಹರಿದು ಹಾಕುವ, ಎತ್ತಿ ಬಿಸಾಕುವ ಹುಮ್ಮಸ್ಸಿನ ಮಗು. ಅದೇ ಮಗು ಪೆನ್ನು ಪೇಪರು ಸಿಕ್ಕಿದರೆ ಉರುಟುರಟಾಗಿ ಗೀಚುವುದಕ್ಕೇ ಶುರು. ಪುಸ್ತಕದೊಂದಿಗೆ ಮಗುವಿನ ನಂಟು ಶುರುವಾಗುವುದೇ ಹೀಗೆ.

ಅಜ್ಜಿ ಹೇಳುವ ಕತೆಯೋ, ಅಮ್ಮ ಹಾಡೋ ಲಾಲಿಯೋ ಮಗುವಿನ ಕಲ್ಪನೆಯ ಗಡಿಗಳನ್ನು ದೂಡುತ್ತಾ ಹೋಗುತ್ತದೆ ಅಂತ ಮಾನಸಿಕ ತಜ್ಞ ಅಶೋಕ್‌ ಪೈ ಹೇಳುತ್ತಾರೆ. ಈ ಮಾತಿಗೆ ಮಕ್ಕಳ ಮನಃಶಾಸ್ತ್ರ ಹೂಂಗುಡುತ್ತದೆ. ಅಜ್ಜಿ ಕಥೆಯ ಭಂಡಾರವಂತೂ ಮುಗಿಯುವುದೇ ಇಲ್ಲ. ಆದರೆ ಮಗು ಬೆಳೆಯುತ್ತಾ ಹೋದಂತೆಲ್ಲಾ ಪ್ರಶ್ನೆಗಳು ದಾಳಿ ಮಾಡುತ್ತವಲ್ಲಾ. ಆಗ ಆಲಿ ಬಾಬ ಮತ್ತು ಕಳ್ಳರು, ಮೂವರು ಮಾಂತ್ರಿಕರು, ಸೀತಾ ವನವಾಸ ಕತೆಗಳಷ್ಟೇ ಸಾಕಾಗುವುದಿಲ್ಲ . ಇತಿಹಾಸ, ಪುರಾಣ, ದೇಶದ ನಾಯಕರ ಜೀವನಗಾಥೆ ಇವೆಲ್ಲಾ ಕಥೆಗಳಾಗಿ ಮಕ್ಕಳ ಮನಸ್ಸನ್ನು ತಲುಪಬೇಕು. ಅಂಥ ಮಹತ್ತರ ಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹುಟ್ಟಿದ್ದು ‘ಭಾರತ-ಭಾರತಿ’ ಪುಸ್ತಕಮಾಲೆ.

ರಾಷ್ಟ್ರೋತ್ಥಾನ ಪರಿಷತ್‌

ಪುರಂದರ ದಾಸರು ಮತ್ತು ಮೂಗುತಿಯ ಕತೆ, ನೆಹರು ಪೆನ್ನು ಕದ್ದ ಕತೆ, ಸಾವರ್ಕರ್‌ ಹಡಗಿನಿಂದ ಜಿಗಿದದ್ದು, ಭಗತ್‌ಸಿಂಗ್‌ರ ದೇಶಭಕ್ತಿ ಸೇರಿದಂತೆ ದೇಶದ ಧೀಮಂತ ನಾಯಕರ ಜೀವನ ಕಥೆಗಳನ್ನು ಆಟ ಆಡುವ ಮಕ್ಕಳ ಬಳಿ ಕೊಂಡು ಹೋದ ಕೀರ್ತಿ ರಾಷ್ಟ್ರೋತ್ಥಾನ ಪರಿಷತ್‌ಗೆ ಸಲ್ಲಬೇಕು. ಚಂದಮಾಮ, ಬೊಂಬೆ ಮನೆ, ಬಾಲ ಮಿತ್ರ ಪುಸ್ತಕಗಳನ್ನು ಓದುವ ಮಕ್ಕಳ ಕೈಗೆ, ಸರಳ ಕನ್ನಡದ 510 ಭಾರತ ಭಾರತಿ ಪುಸ್ತಕವನ್ನು ರಾಷ್ಟ್ರೋತ್ಥಾನ ಪರಿಷತ್ತು ಕೊಟ್ಟಿದೆ. ಅಂಗೈಯಗಲದ ಈ ಪುಸ್ತಕಗಳು ನಿಮ್ಮ ಬಾಲ್ಯದ ಪುಟಗಳಲ್ಲೂ ಇರಬಹುದು, ನೆನಪಿಸಿಕೊಳ್ಳಿ.

ಭಾರತ ಭಾರತಿ ಕಥೆಗಳು ನೇತಾಜಿಯ ಆಜಾದ್‌ ಹಿಂದ್‌ ಪೌಜ್‌ ಬಗ್ಗೆ ಹೇಳುತ್ತವೆ. ಕಮಲ ನೆಹರು ಎಂದರೆ ಯಾರು, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮರ ದೇಶಭಕ್ತಿ ಎಂಥದ್ದು ಎಂದು ಮಕ್ಕಳಿಗೆ ತಿಳಿಸಿಕೊಡುತ್ತವೆ. ಮಗು ವಿಚಾರವನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯೆಗೆ ಓನಾಮ ಹಾಕಲು ಈ ಪುಸ್ತಕಗಳಿಗಿಂತ ಬೇರೆ ಗುರು ಬೇಕಾ? ಈ ಹಿಟ್‌ ಸಿರೀಸ್‌ - ಭಾರತ ಭಾರತಿ ಪುಸ್ತಕ ಮಾಲೆಯನ್ನು ಸಂಪಾದಿಸಿದವರು ಪ್ರೊ.ಎಲ್‌.ಎಸ್‌.ಶೇಷಗಿರಿ ರಾಯರು.

ಇಂಥದೊಂದು ಪುಸ್ತಕ ಮಾಲೆಯನ್ನು ಸಂಪಾದಿಸುವಲ್ಲಿನ ತಮ್ಮ ಅನುಭವಗಳನ್ನು ಹೇಳಿ ಎಂದು ಶೇಷಗಿರಿರಾಯರನ್ನು ಕೇಳಿದಾಗ, ಅವರು 1972 ನೇ ಇಸವಿಯ ದಿನಗಳನ್ನು ನೆನಪಿಸಿಕೊಂಡರು:

  • ಮಹಾತ್ಮರ ಜೀವನವನ್ನು ಸುಮಾರು 2000 ಪದಗಳಲ್ಲಿ ವಿವರಿಸುವುದು ಎಂದರೆ ಸುಲಭದ ಮಾತಲ್ಲ . ಆಳವಾದ ವ್ಯಕ್ತಿತ್ವ ಹೊಂದಿದ ರಾಮನನ್ನೋ, ವಿವೇಕಾನಂದರನ್ನೋ, ಗಾಂಧೀಜಿಯನ್ನೋ ಅಂಗೈಯಗಲದ 40 ಪುಟಗಳಲ್ಲಿ ಕಟ್ಟಿಹಾಕುವುದು ಕಷ್ಟ ಸಾಧ್ಯ. ಇಂಥ ಸಾಹಸಕ್ಕೆ ನಾವು ಕೈ ಹಾಕಿದೆವು. ಇಪ್ಪತ್ತಕ್ಕೂ ಹೆಚ್ಚು ಮಂದಿ ಲೇಖಕರು ದೇಶದ ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ ಬರೆಯುವ ಮೂಲಕ ಈ ಪುಸ್ತಕ ಮಾಲೆಗೋಸ್ಕರ ಕೆಲಸ ಮಾಡಿದರು. ಈ ಪುಸ್ತಕ ಬರೆಯುವ ಮೂಲಕವೇ ಕೆಲವರು ಬರವಣಿಗೆಯನ್ನು ಆರಂಭಿಸಿದ್ದುಂಟು. ಬೇಂದ್ರೆ, ಮಾಸ್ತಿ, ಎನ್‌. ಎಸ್‌. ಲಕ್ಷ್ಮಿನಾರಾಯಣ ಭಟ್ಟರಂತಹ ಪ್ರಸಿದ್ಧ ಲೇಖಕರೂ ಈ ಪುಸ್ತಕ ಯಜ್ಞಕ್ಕೆ ಹವಿಸ್ಸು ಸಲ್ಲಿಸಿದ್ದಾರೆ.
  • ರಾಷ್ಟ್ರೋತ್ಥಾನ ಪರಿಷತ್‌ನ ಅರ್ಪಣಾ ಮನೋಭಾವ, ಶಿಸ್ತು ಮತ್ತು ಲೇಖಕರ ಶ್ರಮದಿಂದ ಈ ಯೋಜನೆ ಯಶಸ್ವಿಯಾಗಿದೆ. ಮಕ್ಕಳ ಮನಸ್ಸು ಬಿಳೀ ಪರದೆಯಷ್ಟು ಸ್ವಚ್ಛ. ಮಕ್ಕಳ ಮನಸ್ಸು ತಲುಪುವ ಈ ಪುಸ್ತಕಗಳಲ್ಲಿ ಒಂದೇ ಒಂದು ತಪ್ಪಿರಬಾರದು ಎಂಬ ಉದ್ದೇಶದಿಂದ ಪ್ರತಿಯಾಂದು ಪುಸ್ತಕದ ಪುಟಪುಟವನ್ನೂ ಓದಿ ಪ್ರಕಟಣೆಗೆ ಕಳುಹಿಸಲಾಗಿದೆ. ಯೋಜನೆಯ ಮೊದಲ ಪುಸ್ತಕ ವಾಲ್ಮೀಕಿ, ಕೊನೆಯ ಪುಸ್ತಕ ಜಯಪ್ರಕಾಶ್‌ ನಾರಾಯಣ್‌.

ಶೇಷಗಿರಿರಾಯರಿಗೆ ಆರೆಸ್ಸೆಸ್‌ ಬಣ್ಣ ಬಳಿದರು !

Prof. L.S.Sheshagiri Raoರಾಷ್ಟ್ರೋತ್ಥಾನ ಪರಿಷತ್ತು ಆರೆಸ್ಸೆಸ್‌ನ ಅಂಗ. ಅಂಥ ಸಂಸ್ಥೆಯಾಂದಿಗೆ ಶೇಷಗಿರಿರಾಯರು ಕೆಲಸ ಮಾಡುತ್ತಿದ್ದಾರೆ. ಶೇಷಗಿರಿ ರಾಯರು ಚೆಡ್ಡಿ....ಎಂಬ ದೂರೂ ಕೇಳಿ ಬಂದಿತ್ತು. ಆದರೆ ನಮ್ಮ ಉದ್ದೇಶ ಉತ್ತಮ ಪುಸ್ತಕವೊಂದನ್ನು ಮಗುವಿನ ಕೈಲಿಡುವುದು. ಯಾವುದೇ ಪುಸ್ತಕದ ಯಾವ ಮೂಲೆಯಲ್ಲೇ ಆಗಲಿ ಒಂದೇ ಒಂದು ಪೂರ್ವಾಗ್ರಹ ಪೀಡಿತ ಮಾತುಗಳಿಲ್ಲ - ಶೇಷಗಿರಿರಾಯರದು ವಿಶ್ವಾಸದ ಮಾತು.

ಭಾರತ ಭಾರತಿ ಪುಸ್ತಕಗಳು ಮಾರುಕಟ್ಟೆಯಲ್ಲಿ ಎಂದೂ ಸೋಲುವುದಿಲ್ಲ ಎನ್ನುವ ಆತ್ಮವಿಶ್ವಾಸ ಪ್ರಸ್ತುತ ಪ್ರಕಾಶನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಹಗೀರ್‌ದಾರ್‌ ಅವರದು. ಅವರು ಹೇಳಿದ ಪ್ರಕಾರ- ಇಂದಿಗೂ ಭಾರತ-ಭಾರತೀ ಪುಸ್ತಕ ಮಾರಾಟ ಕಾರ್ಯ ಕನಿಷ್ಠ 50 ಪೈಸೆ ಲಾಭದಲ್ಲಿ ನಡೀತಾ ಇದೆ. ಇನ್ಫೋಸಿಸ್‌ನ ಸುಧಾ ಮೂರ್ತಿ ರಾಜ್ಯದ 6,500 ಶಾಲೆಗಳಿಗೋಸ್ಕರ ಈ ಪುಸ್ತಕ ಮಾಲೆಯನ್ನು ಖರೀದಿಸಿದ್ದಾರೆ.

***

ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಮುಂದಿನ ಪೀಳಿಗೆ ಪುಸ್ತಕದಿಂದಲೇ ದೂರವಾಗುತ್ತದೆ ಎನ್ನುವ ಆತಂಕ ವ್ಯಾಪಕವಾಗುತ್ತಿದೆ. ಈ ಆತಂಕವನ್ನು ನಾವು ಪುಸ್ತಕಗಳ ಮೂಲಕವೇ ಎದುರಿಸಬೇಕಾಗಿದೆ. ಬರ್ತ್‌ಡೇಗೆ ಡಂ ಡಂ ಅಂತ ಬಡಿಯುವ ಇಲೆಕ್ಟ್ರಾನಿಕ್‌ ಗಣೇಶ, ಬೆಳ್ಳಗಿನ ಟೆಡ್ಡಿ ಬೇರ್‌ನ್ನು ಕೊಡುವ ಬದಲು ಒಂದು ಪುಸ್ತಕವನ್ನು ಮಗುವಿನ ಕೈಲಿಟ್ಟು, ಮಗುವಿಗೆ ಪುಸ್ತಕದ ರುಚಿ ಹತ್ತಿಸಿದರೆ ಸಾಕು ಸಮಸ್ಯೆ ತಂತಾನೇ ಪರಿಹಾರವಾಗುತ್ತದೆ.

ಪುಟಾಣಿ ಓದುತ್ತಾ ಓದುತ್ತಾ ಪುಸ್ತಕದ ಪುಟಗಳು ಕೊಳೆಯಾಗಲಿ.. .ಆಟದ ಜೊತೆಗೇ ಮಗು ಓದಲಿ. ಪುಸ್ತಕದ ಪುಟಗಳು ಹರಿದು ಹೋದರೆ ಹೋಗಲಿ... ಓದಿರುವುದು ಎರಡು ಪುಟವಾದರೂ ಸರಿ. ಪರಿಣಾಮ ದೊಡ್ಡದಾಗಿರುತ್ತದೆ. ಇವತ್ತು ನಮ್ಮ ದೇಶದ ಮಹಾತ್ಮರನ್ನು ಮಕ್ಕಳಿಗೆ ಪರಿಚಯಿಸ ಬೇಕಿದ್ದರೆ ಸುಲಭವಾಗಿ ಕೈಗೆ ಸಿಗುವ, ಯಾವುದೇ ಪೂರ್ವಾಗ್ರಹ ಇಲ್ಲದ, ಪರ್ಫೆಕ್ಟ್‌ ಪುಸ್ತಗಳೆಂದರೆ ಭಾರತ-ಭಾರತಿ. ಅಪವಾದಗಳಿರಬಹುದು. ಆದರೆ ಭಾರತ ಭಾರತಿ ಸರಣಿ ಪುಸ್ತಕ- ರಾತ್ರಿ ಮಗುವಿಗೆ ಯಾವ ಕಥೆ ಹೇಳಬೇಕು ಎಂಬ ನಿಮ್ಮ ಪ್ರಶ್ನೆಗೆ ಉತ್ತರಿಸುತ್ತದೆ; ಮಗುವನ್ನು ಭವಿಷ್ಯದ ಸತ್ಪ್ರಜೆಯನ್ನಾಗಿ ರೂಪಿಸುವ ನಿಮ್ಮ ಕನಸಿಗೆ ನೀರೂ ಉಸಿರೂ ಆಗುತ್ತದೆ.

ಮಕ್ಕಳ ಮಾತು ಬಿಡಿ, ಒಮ್ಮೆ ನೀವೇ ಭಾರತ ಭಾರತಿ ಪುಸ್ತಕ ಕೈಗೆತ್ತಿಕೊಳ್ಳಿ. ದಿನಪತ್ರಿಕೆ ಓದಿದಂತೆ ಹದಿನೈದಿಪ್ಪತ್ತು ನಿಮಿಷದಲ್ಲಿ 40ಪುಟಗಳ ಪುಸ್ತಕ ಓದಿ. ಆನಂತರ ಆ ಕಥೆಯನ್ನು ಮಗುವಿಗೆ ಹೇಳಿ. ಆಹ್ಲಾದವೊಂದು ಎದೆ ತುಂಬತ್ತುದೆ. ಮಗು ನಿಮ್ಮನ್ನು ಅರ್ಥಾತ್‌ ನಿಮ್ಮ ಓದನ್ನು ಅನುಕರಿಸದೇ?

ಮಕ್ಕಳಿಗಾಗಿ ಭಾರತ ಭಾರತಿ ಪುಸ್ತಕ ಕೊಳ್ಳುತ್ತೀರಾ, ಸಂಪರ್ಕಿಸಿ: parishat@blr.vsnl.net.in

ಇದನ್ನೂ ಓದಿ

ಮಾಯಾಪ್ರಪಂಚದ ಹ್ಯಾರಿ ಪಾಟರ್‌

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more