• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಅಮೆರಿಕಾಯಣ’ವೆಂಬ ಅನುಭವಾಮೃತ

By Super
|

ಪ್ರೊ. ವೈ.ಆರ್‌.ಮೋಹನ್‌ ಅವರ ‘ಅಮೆರಿಕಾಯಣ’ ನನ್ನ ಅಭಿಪ್ರಾಯದಲ್ಲಿ ಒಂದು ಮೇರು ಕೃತಿ. ಈ ಗ್ರಂಥದಲ್ಲಿ ಪ್ರೊ. ಮೋಹನ್‌ ಅವರು ಅಮೆರಿಕದ ಭೌಗೋಳಿಕ ವಿವರಣೆಯಿಂದ ಪ್ರಾರಂಭಿಸಿ, ವಸಾಹತುಶಾಹಿ ಯುರೋಪಿಯನ್ನರ, ಅನ್ವೇಷಕರ ಆಗಮನ ಹಾಗೂ ಭಯೋತ್ಪಾದನೆಯಿಂದ, ಬಲಾತ್ಕಾರದಿಂದ, ಸಂಧಾನದಿಂದ, ಆದಿವಾಸಿಗಳ ಭೂಮಿಯ ವಶೀಕರಣ, ಇತ್ಯಾದಿಗಳನ್ನು ವಿವರಿಸಿ, ಇಲ್ಲಿನ ನಾಗರೀಕತೆ ಬೆಳೆದುಬಂದ ಬಗೆಯನ್ನು, ಹಲವಾರು ಆಧಾರ ಗ್ರಂಥಗಳನ್ನು ಓದಿ ಅರಗಿಸಿಕೊಂಡು ಬರೆದಿದ್ದಾರೆ. ಈ ಗ್ರಂಥವನ್ನು ರಚಿಸಿದ ಲೇಖಕರ ದೈಹಿಕ, ಮಾನಸಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಪರಿಗಣಿಸಿದರೆ ಇದು ಒಂದು ಮಹಾ ಮೇರು ಗ್ರಂಥ. ಮನುಷ್ಯನ ಸಾಧನೆಗೆ ಯಾವುದೇ ಇತಿಮಿತಿಗಳಿಲ್ಲ ಎಂಬುದಕ್ಕೆ ಪ್ರೊ. ಮೋಹನರ ಈ ಕೃತಿಸಾಧನೆಯೇ ಸಾಕ್ಷಿ.

‘ಅಮೆರಿಕಾಯಣ’ ಗ್ರಂಥದ ಬಗ್ಗೆ ಬರೆಯುವ ಮೊದಲು ನನ್ನ ಒಂದೆರಡು ಅನಿಸಿಕೆಗಳು:

ನಮ್ಮ ಬದುಕಿನಲ್ಲಿ ಸದಾ ಸುಖ, ಶಾಂತಿ, ನೆಮ್ಮದಿ ಇರಬೇಕೆಂದು ನಾವೆಲ್ಲ ಸಹಜವಾಗಿಯೇ ಬಯಸುತ್ತೇವೆ. ಒಬ್ಬರು ಸುಖವಾಗಿರಲು ಇನ್ನೊಬ್ಬರ ನೋವು ಕಷ್ಟಗಳು ಅಗತ್ಯವೇ ಅಥವಾ ನಾವೆಲ್ಲರೂ ಸುಖ, ಶಾಂತಿ, ನೆಮ್ಮದಿಗಳಿಂದ ಇರಲು ಸಾಧ್ಯವೇ? ‘ಲೋಕಾಃ ಸಮಸ್ತಾ ಸುಖಿನೋ ಭವಂತು’ ಎಂಬ ಧ್ಯೇಯ ವಾಕ್ಯವನ್ನು ನಾವು ಅನುಸರಿಸಿದರೆ ಪ್ರಪಂಚದವರೆಲ್ಲ ಸುಖ, ಶಾಂತಿ, ನೆಮ್ಮದಿಗಳಿಂದ ಇರಲು ಸಾಧ್ಯ. ಹೀಗಾಗಲು ‘ನಮ್ಮ’ ಶಬ್ದದ ಪರಿಮಿತಿಯನ್ನು ನಾವು ಬಹಳ ವಿಸ್ತಾರ ಮಾಡಿಕೊಳ್ಳಬೇಕು. ಆದರೆ ಒಬ್ಬರು ಸುಖ, ಶಾಂತಿ, ನೆಮ್ಮದಿಗಳಿಂದ ಇರಲು ಇನ್ನೊಬ್ಬರ ಶೋಷಣೆ ಅಗತ್ಯವಾಗಿರುವಂತೆ ಜನ ವ್ಯವಹರಿಸುತ್ತಾರೆ. ಇದಕ್ಕೆ ಕಾರಣ ಮಿತವಾದ ಅವಕಾಶ ಮತ್ತು ಸಂಪನ್ಮೂಲಗಳು ಇರುವುದು. ಒಳ್ಳೆಯ ಮನೆ ಕಟ್ಟಿಸಲು ಉತ್ತಮ ಸ್ಥಳಗಳು ಕೆಲವೇ ಇರುವುದರಿಂದ, ಅದನ್ನು ಪಡೆಯಲು ಸ್ಪರ್ಧೆ ಉಂಟಾಗುತ್ತದೆ. ಈ ಸ್ಪರ್ಧೆಯಲ್ಲಿ ಗೆಲ್ಲಲು ಲಂಚ, ರುಷುವತ್ತುಗಳು ಹುಟ್ಟಿಕೊಳ್ಳುತ್ತವೆ. ಇದರಿಂದ ಸ್ವಾರ್ಥ, ಅಸೂಯೆ, ದ್ವೇಷ, ವೈರತ್ವ ಹೆಚ್ಚಿ ಇನೊಬ್ಬರನ್ನು, ಅವರ ವಸ್ತುಗಳನ್ನು ನಾಶಪಡಿಸುವ ದುಷ್ಟ ಪ್ರವೃತ್ತಿ ಸೃಷ್ಟಿ ಆಗುತ್ತದೆ. ಇದರಿಂದ ನಮ್ಮ ಹಾಗೂ ಎಲ್ಲರ ಶಾಂತಿ ನೆಮ್ಮದಿಗಳು ನಾಶವಾಗುತ್ತವೆ.

ಈ ವಿಷಯದಲ್ಲಿ ನಮ್ಮ ಮತ್ತು ಪಾಶ್ಚಾತ್ಯರ ಮನೋಭಾವದಲ್ಲಿ ಬಹಳ ವ್ಯತ್ಯಾಸ ಇದೆಯೆಂದು ನನಗನ್ನಿಸುತ್ತದೆ. ಉದಾಹರಣೆಗೆ ನಮ್ಮ ದೇಶದಲ್ಲಿ ವಿಪರೀತ ಜನಸಂಖ್ಯೆಯ ಕಾರಣ ನಮ್ಮ ಜನ ಸಾಂದ್ರತೆ ಅತಿ ಹೆಚ್ಚಿನದಾಯಿತು. ಇದರಿಂದ ನಮ್ಮ ಜೀವನಾವಶ್ಯಕ ವಸ್ತುಗಳ ಕೊರತೆ ಹೆಚ್ಚಿತು. ಎಲ್ಲ ಪಾಶ್ಚಾತ್ಯರೂ ಯುರೋಪಿನಲ್ಲೆ ಇದ್ದಿದ್ದರೆ ಅವರ ಜನಸಂದ್ರತೆಯೂ ನಮಗಿಂತ ದೊಡ್ಡ ಸಮಸ್ಯೆಯನ್ನು ಅವರಿಗೆ ತರುತ್ತಿತ್ತು. ಈಗಿನ ಉತ್ತರ ಅಮೆರಿಕ (ಅಮೆರಿಕದ ಸಂಯುಕ್ತ ಸಂಸ್ಥಾನಗಳು ಮತ್ತು ಕೆನಡ), ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌, ಹಲವಾರು ದ್ವೀಪಗಳಲ್ಲಿ ನೆಲಸಿದ ಬಿಳಿಜನರು ಯುರೋಪು ಬಿಟ್ಟು ಹೊರದೇಶಗಳಿಗೆ ವಲಸೆ ಹೋಗಿಲ್ಲದಿದ್ದಲ್ಲಿ, ಅಲ್ಲಿನ ಜನಸಾಂದ್ರತೆ ನಮ್ಮಂತೆಯೇ ಇರುತ್ತಿತ್ತು. ಹಾಗೆಯೇ ಅವರ ದೈನಂದಿನ ಸುಖ ಸಂತೋಷಗಳ ತೃಪ್ತಿಗಾಗಿ ಅವರು ನಡೆಸಿದ ಸಂಶೋಧನೆಗಳ ಫಲವಾಗಿ ಬೆಳೆದ ಅವರ ವಸ್ತು ಸಂಪತ್ತು ಅವರಿಗೆ ಸಮೃದ್ಧಿಯನ್ನು ತಂದಿತು. ಇದನ್ನು ಇಂಗ್ಲಿಷ್‌ನಲ್ಲಿ ಅಬಂಡೆನ್ಸ್‌, ಪ್ಲೆಂಟಿಫುಲ್‌, ಅಫ್ಫ್ಲುಯೆನ್ಸ್‌, ಇತ್ಯಾದಿ ಶಬ್ದಗಳಿಂದ ವರ್ಣಿಸುತ್ತಾರೆ. ಜಗತ್ತಿನಲ್ಲಿರುವ ವಸ್ತುಗಳು ಸೀಮಿತ ಎಂದು ತಿಳಿದು ಅವುಗಳಿಗಾಗಿ ಬಡಿದಾಡುವುದಕ್ಕಿಂತ, ಇನ್ನೂ ಹೊಸ ವಸ್ತು ಮೂಲಗಳನ್ನು ಹುಡುಕಿ, ಸಂಶೋಧಿಸಿ, ಎಲ್ಲರ ಉಪಯೋಗಕ್ಕಾಗಿ ಅಳವಡಿಸುವುದರಿಂದ ಎಲ್ಲರ ಜೀವನಮಟ್ಟ ಸುಧಾರಿಸುತ್ತದೆ ಎಂಬ ತಿಳಿವಳಿಕೆಯಿಂದ ಪಾಶ್ಚಾತ್ಯರ ಜೀವನ ಮಟ್ಟ ಅತ್ಯುನ್ನತ ಮಟ್ಟಕ್ಕೇರಿತು. ಜಪಾನಿನಲ್ಲೂ ಜನಸಾಂದ್ರತೆ ನಮಗಿಂತ ಜಾಸ್ತಿ ಇದ್ದರೂ ಸಂಪನ್ಮೂಲಗಳನ್ನು ಬೇರೆ ದೇಶಗಳಿಂದ ತರಿಸಿಕೊಂಡು, ಯಂತ್ರ ತಂತ್ರ ಜ್ಞಾನಗಳಿಂದ ಅವುಗಳನ್ನು ಪರಿವರ್ತಿಸಿ, ಅವರ ಜೀವನಮಟ್ಟವನ್ನು ಸುಧಾರಿಸಿಕೊಂಡರು.

ನಮ್ಮಲ್ಲಿ , ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಉಳ್ಳವರೇ ಕಾರಣ, ಅವರಿಂದಲೇ ನಮ್ಮ ಪರಿಸ್ಥಿತಿ ಹೀಗಾಯಿತೆಂದು ಕೊರಗುವ, ದ್ವೇಷಿಸುವ ಪ್ರವೃತ್ತಿ ಇಲ್ಲದವರಲ್ಲಿ ಬೆಳೆದಿದೆ. ಇರುವುದನ್ನೆಲ್ಲ ಎಲ್ಲರಿಗೂ ಸಮವಾಗಿ ಹಂಚಿದರೆ ನಾವೆಲ್ಲರೂ ಸದಾ ಸುಖವಾಗಿ ಇರಬಹುದೆಂಬ ನಂಬಿಕೆ ನಮ್ಮದು. ಇರುವುದು ಎಲ್ಲರಿಗೂ ಸಾಲದು, ಅದಕ್ಕಾಗಿ ಇರುವುದರ ಬಗ್ಗೆ ಹೊಡೆದಾಡುವುದರಲ್ಲೇ ಸಮಯ ವ್ಯರ್ಥ ಮಾಡುವುದರ ಬದಲು, ಹೊಸ ಸಂಪನ್ಮೂಲಗಳನ್ನು ಸಂಶೋಧಿಸಬೇಕೆನ್ನುವ ಪ್ರವೃತ್ತಿ ಪಾಶ್ಚಾತ್ಯರದು. ಈ ಚಿಂತನೆಯಲ್ಲಿನ ಮೂಲಭೂತ ವ್ಯತ್ಯಾಸವೇ ಅವರ ಸಮೃದ್ಧಿಗೆ ಕಾರಣವೆಂದು ನನಗನ್ನಿಸುತ್ತದೆ.

ಈ ಮುನ್ನುಡಿಯನ್ನು ಯಾಕೆ ಹೇಳಿದೆನೆಂದರೆ, ಇದು ಅಮೆರಿಕದ ಸೃಷ್ಟಿಯ ಕಾರಣವನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ. ಪ್ರೊಫೆಸರ್‌ ವೈ.ಆರ್‌.ಮೋಹನರ ‘ಅಮೆರಿಕಾಯಣ’ ಗ್ರಂಥವನ್ನು ಅಮೆರಿಕಾದ ಇತಿಹಾಸದ ಬಗ್ಗೆ ಬರೆದ ರಚನೆ ಎನ್ನುವ ಬದಲು ಒಂದು ದೇಶದ ಹುಟ್ಟು, ಬೆಳವಣಿಗೆ, ಮತ್ತು ಪ್ರಬುದ್ಧತೆಯನ್ನು ಒಬ್ಬ ಸತ್ಯಾನ್ವೇಷಕ ಲೇಖಕ, ತನ್ನ ತುಲನಾತ್ಮಕ ಮನೋಭಾವದಿಂದ, ಜೀವನದ ಅನುಭವಗಳ ಜರಡಿಯಲ್ಲಿ ಸೋಸಿ, ಪರಿಶೋಧಿಸಿ, ನಿರ್ವಿಕಲ್ಪತೆಯಿಂದ, ನಿಷ್ಪಕ್ಷಪಾತವಾಗಿ ವರ್ಣಿಸಿ ಬರೆದ ಅನುಭವಾಮೃತ ಎಂದು ನನಗನ್ನಿಸಿತು.

ಒಬ್ಬ ವ್ಯಕ್ತಿಯ ಬೆಳವಣಿಗೆಯ ಸಮಯದಲ್ಲಿ ಆಗುವ ನೋವು, ನಲಿವುಗಳನ್ನು ಒಂದು ದೇಶದ ಹುಟ್ಟು, ಬೆಳವಣಿಗೆಗಳಲ್ಲೂ ನಾವು ಹೋಲಿಸಿ ನೋಡಬಹುದು. ಪ್ರಮುಖ ವಿಷಯವೆಂದರೆ, ವ್ಯಕ್ತಿಯಂತೆ ದೇಶವೂ ಕೂಡ ತನ್ನ ಅನುಭವಗಳಿಂದ ಪಾಠ ಕಲಿತು, ನಿರಂತರ, ಅವಿರತ ಬದಲಾವಣೆಗಳಿಂದ ಉತ್ತಮತೆಯ ಕಡೆಗೆ ಗುರಿಯಿಟ್ಟು ನಡೆದರೆ ಇದರಿಂದ ಮಾನವ ಕಲ್ಯಾಣ, ಲೋಕ ಕಲ್ಯಾಣಗಳಾಗುತ್ತವೆ ಎನ್ನುವುದಕ್ಕೆ ಅಮೆರಿಕಾದ ಇತಿಹಾಸವೇ ಸಾಕ್ಷಿ. ಪಾಶ್ಚಾತ್ಯರು ಈ ಹೊಸ ಖಂಡಕ್ಕೆ ಬಂದು ಇಲ್ಲಿನ ಆದಿವಾಸಿಗಳನ್ನು (ವಿವಾದಾತ್ಮಕ?) ಹಿಂಸೆಯಿಂದ ಕ್ರೂರವಾಗಿ ಬಗ್ಗು ಬಡಿದು, ತಮ್ಮ ನಡುವಿನ ವೈಮನಸ್ಯಗಳನ್ನು ಯುದ್ಧ, ಹಿಂಸೆಗಳಿಂದಲೇ ಇತ್ಯರ್ಥ ಮಾಡಿಕೊಂಡರೂ, ಆ ಬಳಿಕ ವಿಶ್ವಕ್ಕೇ ಮಾದರಿಯಾದ ಒಂದು ನಾಗರೀಕತೆಯನ್ನು ಸ್ಥಾಪಿಸಿ, ಸಿರಿಸಂಪದಗಳ ಹೊಳೆಯನ್ನೇ ಹರಿಸಿದರು. ತಮ್ಮ ದೈಹಿಕ, ಬೌದ್ಧಿಕ, ಆರ್ಥಿಕ ಸಂಘಟನೆಗಳ ಮೂಲಕ ಜಗತ್ತಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಕಾರ್ಯಾಚರಣೆಯಲ್ಲಿ ತೋರಿದ ಕ್ರೌರ್ಯ, ಶೌರ್ಯಗಳನ್ನು, ಅಮೆರಿಕನ್ನರು ಬದಿಗಿಟ್ಟು ತಮ್ಮ ಪ್ರಬುದ್ಧತೆಯನ್ನು, ಅತ್ಯಂತ ಶಕ್ತಿಯುತ ರಾಷ್ಟ್ರವಾದರೂ ಮಾನವ ಕುಲದ ಒಳಿತಿಗೆ, ಯಾಂತ್ರಿಕ, ತಾಂತ್ರಿಕ, ಬೌದ್ಧಿಕ, ಶಕ್ತಿಯಿಂದಲೂ, ಸಾಮಾಜಿಕ ಜವಾಬ್ದಾರಿಗಳ ಅನುಷ್ಠಾನದಿಂದಲೂ, ಏಕಮೇವಾದ್ವಿತೀಯ ರಾಷ್ಟ್ರವಾಗಿ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಂಡರು.

ಒಂದು ಲೆಕ್ಕದಲ್ಲಿ ಪ್ರೊ. ಮೋಹನ್‌ ಅವರ (ನಮ್ಮೆಲ್ಲರ) ಅಮೆರಿಕತೆಯ ಅನುಭವವೂ ಹಲವಾರು ಬೆಳವಣಿಗೆಯ ನೋವುಗಳಿಂದ ಕೂಡಿವೆ. ನಾವೆಲ್ಲರೂ ಇಲ್ಲಿನ ನೋವುನಲಿವುಗಳ ಅನುಭವಗಳಿಂದ ಪಾಠ ಕಲಿತು, ನಮ್ಮ ದೃಷ್ಟಿಕೋನವನ್ನು ನಿರಂತರವಾಗಿ ಬದಲಿಸಿಕೊಂಡು ನಮ್ಮ ಬೌದ್ಧಿಕ, ದೈಹಿಕ, ಮತ್ತು ಸಾಮಾಜಿಕ ನಿಲುವುಗಳನ್ನು ಪರಿಷ್ಕರಿಸುವುದರಿಂದ ಉತ್ತಮ ಜೀವಿಗಳಾಗಲು ಪರಿಶ್ರಮಿಸಿದ್ದೇವೆ, ಮತ್ತು ಪರಿಶ್ರಮಿಸುತ್ತಿದ್ದೇವೆ. ಈ ಕೃತಿಯನ್ನು ಅಮೆರಿಕಕ್ಕೆ ಬಂದ ಕನ್ನಡಿಗ ಸಂದರ್ಶಕರಿಗಾಗಿ ಬರೆದೆನೆಂದು ಪ್ರೊ. ಮೋಹನ್‌ ಮುನ್ನುಡಿಯಲ್ಲಿ ತಿಳಿಸುತ್ತಾರೆ. ತಮ್ಮ ಸಹಿಸಲಾರದ ನೋವಿನಲ್ಲೂ ಪ್ರೊ. ಮೋಹನ್‌ ಅವರ ಪರೋಪಕಾರದ, ಸಾಧನೆಯ, ಶೋಧನೆಯ, ಆವಿಷ್ಕಾರದ, ಚಿಂತನೆಯ ಮನೋಭಾವ, ತಮ್ಮ ಪರಿಶ್ರಮದಿಂದ ಇತರರಿಗೆ ಸುಖವಾಗಲೆಂಬ ಕಾಳಜಿ, ನಮಗೆಲ್ಲರಿಗೂ ಆದರ್ಶವಾಗಿದೆ.

ಅಮೆರಿಕದ ಇತಿಹಾಸದಲ್ಲಿ ಕಳಂಕಪೂರಿತ ಘಟನೆಗಳೆಂದರೆ, ಲಕ್ಷಾಂತರ ಆದಿವಾಸಿಗಳ ಕೊಲೆ, ಮತ್ತು ಗುಲಾಮಗಿರಿಯಿಂದ ದಸ್ಯುಗಳನ್ನು ನಡೆಸಿಕೊಂಡ ಬಗೆ. ಈ ದುಷ್ಕೃತ್ಯಗಳಿಂದ ಈ ದೇಶದ ಉನ್ನತಿ ತೀವ್ರವಾಗಿ ಆಗಲು ಸಾಧ್ಯವಾಗಿದ್ದರೂ, ಇದಕ್ಕಿಂತ ಬೇರೆ ವಿಧಾನದಿಂದ ಇದನ್ನು ಸಾಧಿಸಬಹುದಾಗಿತ್ತೇನೋ ಎಂಬ ಸಂಶಯ ಎಲ್ಲರಿಗೂ ಇದೆ. ಈ ಪಾಪದಲ್ಲಿ ನಾವೂ ಭಾಗಿಗಳೇನೋ ಎಂದು ಒಮ್ಮೊಮ್ಮೆ ನಮಗೆ ವ್ಯಥೆಯಾಗುತ್ತದೆ. ಈ ದುಷ್ಕೃತ್ಯಗಳ ಪ್ರಯೋಜನವನ್ನು ನಾವು ಸುಖಿಸುತ್ತಿರುವುದರಿಂದ ನಮಗೆಲ್ಲ ಇದರ ಪಾಪ ತಟ್ಟೀತು ಎನ್ನಿಸಿದರೂ, ಇತಿಹಾಸವನ್ನು ನಾವು ಬದಲಾಯಿಸಲು ಸಾಧ್ಯವೇ? ಎಂಬ ಅಸಹಾಯಕತೆಯಿಂದ ಸಮಾಧಾನ ಮಾಡಿಕೊಳ್ಳುತ್ತಾರೆ ಪ್ರೊ. ಮೋಹನ್‌ ಅವರು. ಮುಂದೆ ಇಂತಹ ಕ್ಲಿಷ್ಟ ಪರಿಸ್ಥಿತಿ ಬಂದಾಗ ನಾಗರೀಕತೆಯಿಂದ, ಕಡಿಮೆ ಹಿಂಸೆಯಿಂದ ಪರಿಹಾರವನ್ನು ಕಂಡುಕೊಂಡಿದ್ದಾರೆ. ಸಂವಿಧಾನದಲ್ಲೂ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸುಖ ಜೀವನದ ಬಗ್ಗೆ ಆಶ್ವಾಸನೆಯನ್ನು ನೀಡಿದುದಲ್ಲದೆ ಅದನ್ನು ಪರಿಪಾಲಿಸಿಕೊಂಡು ಬಂದ ಘನತೆ ಅಮೆರಿಕದ ಜನತೆಗೆ ಸಲ್ಲುತ್ತದೆ.

ಪ್ರೊ.ಮೋಹನ್‌ ಹಲವಾರು ಆಧಾರ ಗ್ರಂಥಗಳನ್ನು ಓದಿ, ಅರಗಿಸಿಕೊಂಡು, ಅವುಗಳ ಸಾರವನ್ನು ಸರಳವಾದ ಶೈಲಿಯಲ್ಲಿ ಸಲೀಸಾಗಿ ಓದುವಂತೆ ನಿರೂಪಿಸಿದ್ದಾರೆ. ಒಂದು ದೇಶದ ಚರಿತ್ರೆ ಅದನ್ನು ಬರೆದ ಚರಿತ್ರಕಾರನ ಮನೋಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆದರೆ ಹಲವಾರು ಲೇಖಕರು ಬರೆದ ಚರಿತ್ರೆಯ ಸಾರಾಂಶವನ್ನು ಭಟ್ಟಿ ಇಳಿಸಿದಾಗ ಅವರೆಲ್ಲರ ಪಕ್ಷಪಾತಪೂರಿತ ಅಭಿಪ್ರಾಯಗಳನ್ನು ತುಲನಾತ್ಮಕ ದೃಷ್ಟಿಯಿಂದ ಸಮೀಕ್ಷಿಸಿ, ತಮ್ಮದೇ ಸ್ವಂತ ವಿಚಾರಧಾರೆಯಿಂದ ಸಮೀಕರಿಸಿ, ನಿಷ್ಪಕ್ಷಪಾತವಾಗಿ ವಿವರಿಸಿದ ಕೀರ್ತಿ ಮೋಹನ್‌ ಅವರಿಗೆ ಸಲ್ಲುತ್ತದೆ.

ಪ್ರೊ. ಮೋಹನ್‌ ಅವರ ಪತ್ನಿ ಶ್ರೀಮತಿ ನಂದಾ ಅವರು ತಮ್ಮ ವೃತ್ತಿಜೀವನದ ಜತೆಗೆ ಗಂಡನ ಸೇವೆ, ಶುಶ್ರೂಷೆಗಳನ್ನೂ ಅತ್ಯುತ್ತಮ ರೀತಿಯಲ್ಲಿ ಮಾಡುತ್ತಿರುವುದನ್ನು ಅವರು ಕೃತಜ್ಞತಾಭಾವದಿಂದ ಸ್ಮರಿಸಿದ್ದಾರೆ. ಶ್ರೀಮತಿ ನಂದಾ ಅವರು ಈ ವ್ಯಕ್ತಿಯ ಹಿಂದಿನ ಮಹಾ ಶಕ್ತಿ. ಈ ಮಹಾ ತಾಯಿಗೆ ನಮ್ಮ ಗೌರವಪೂರ್ವಕವಾದ, ಅಭಿನಂದನೆಗಳನ್ನು ಇಲ್ಲಿಂದಲೇ ಸಮರ್ಪಿಸುತ್ತೇನೆ. ಅವರ ಈ ಗ್ರಂಥವನ್ನು ಕನ್ನಡೀಕರಿಸಲು ಸಹಾಯಮಾಡಿದ ಶ್ರೀಮತಿ ಸುಜಾತ ಮತ್ತು ಚಂದ್ರ ಐತಾಳರಿಗೂ ನಮ್ಮ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.

ಪ್ರೊ.ಕೆ.ಎಸ್‌.ಶಿವಣ್ಣವರು ಈ ಉದ್ಗ್ರಂಥವನ್ನು ಪರಿಷ್ಕರಿಸಿ ತಮ್ಮ ಅಮೂಲ್ಯ ಸಲಹೆಗಳಿಂದ ಮತ್ತು ಮುನ್ನುಡಿಯಿಂದ ಶೋಭೆ ತಂದಿದ್ದಾರೆ. ಪ್ರೊ.ಪ್ರಭುಶಂಕರ್‌ರವರು ಪ್ರೊ.ಮೋಹನ್‌ರ ಪ್ರತಿಭೆ - ಪರಿಶ್ರಮಗಳಿಗೆ ತಮ್ಮ ಗೌರವದ ಕಾಣಿಕೆಯನ್ನು ವ್ಯಕ್ತಪಡಿಸಿದ್ದಾರೆ. ಮಿತ್ರ ನಾಗ ಐತಾಳರು ಮತ್ತು ಅಯೋವಾದ ಕೃಷ್ಣ ಶಾಸ್ತ್ರಿ ಅವರ ಸಹಾಯವನ್ನು ಪ್ರೊ. ಮೋಹನ್‌ ಅವರು ಸ್ಮರಿಸಿದ್ದಾರೆ.

ಪ್ರೊ. ಮೋಹನರ ಜೀವನದಿಂದ ನಮಗೂ, ನಮ್ಮ ಮುಂದಿನ ಪೀಳಿಗೆಗೂ ಬದುಕನ್ನು ಸಾರ್ಥಕವಾಗಿಸಿಕೊಳ್ಳುವ ಸ್ಫೂರ್ತಿ ಬರಲೆಂದು ಆಶಿಸುತ್ತ, ದೇವರು ಪ್ರೊ. ಮೋಹನರಿಗೂ ಅವರ ಕುಟುಂಬದವರಿಗೂ ವೇದನೆಯನ್ನು ಸಹಿಸುವ ಶಕ್ತಿ ಕೊಡಲೆಂದು ಬೇಡಿಕೊಳ್ಳುತ್ತ ಅವರಿಗೆ ನನ್ನ ಪ್ರಣಾಮಗಳನ್ನು ಅರ್ಪಿಸುತ್ತೇನೆ.

English summary
KumBhasi Srinivasa Bhat writes about the novel Americayana by Y.R.Mohan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X