ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗೆರೆಯ ಟೈಮ್‌ಪಾಸ್‌!

By Staff
|
Google Oneindia Kannada News

*ಶಾಮ್‌

ಲೇಖಕರಲ್ಲಿ ಎರಡು ವಿಧ;
ವಿಮರ್ಶಕರು ಮೆಚ್ಚಿಕೊಂಡವರು. ಓದುಗರು ಮೆಚ್ಚಿಕೊಂಡವರು.

ವಿಮರ್ಶಕರಲ್ಲೂ ಎರಡು ಬಗೆ ;
ಲೇಖಕರು ಮೆಚ್ಚಿಕೊಂಡವರು ಮತ್ತು ತಮ್ಮನ್ನು ತಾವೇ ಮೆಚ್ಚಿಕೊಂಡವರು.

ಓದುಗರಲ್ಲಿ ಮಾತ್ರ ಒಂದೇ ವರ್ಗ;
ಇಷ್ಟವಾದದ್ದನ್ನು ಮೆಚ್ಚುವವರು.

ಸಾಹಿತ್ಯ ಚರಿತ್ರೆ ಎಂಬ ಕಾಲದ ಕಸದ ಬುಟ್ಟಿಗೆ ಈ ವಿಮರ್ಶಕರು ಮೆಚ್ಚಿಕೊಂಡದ್ದರ ಬಗ್ಗೆ ವಿನಾಕಾರಣ ಪ್ರೀತಿ. ಓದುಗ ಎಂಬ ವರ್ತಮಾನಕ್ಕೆ ಸ್ಪಂದಿಸುವ ಜೀವಭಾವಕ್ಕೆ ಸಾಹಿತ್ಯ ಚರಿತ್ರೆಯ ಬಗ್ಗೆ ಆಸಕ್ತಿಯಿಲ್ಲ, ವಿಮರ್ಶಕರ ಬಗ್ಗೆ ಗೌರವವಿಲ್ಲ . ಬೇಕಿದ್ದರೆ ಹಳೆಯ ಉದಾಹರಣೆಗಳನ್ನೇ ನೋಡಿ;

ಜನ ಮೆಚ್ಚಿದ ಅ.ನ.ಕೃಷ್ಣರಾಯರು ವಿಮರ್ಶಕರಿಗೆ ಇಷ್ಟವಾಗಲಿಲ್ಲ. ಜನ ಕೊಂಡಾಡಿದ ಬೀಚಿಯನ್ನು ಸಾಹಿತ್ಯ ಚರಿತ್ರೆಯ ನಿರ್ಮಾಪಕರು ಗಂಭೀರವಾಗಿ ಪರಿಗಣಿಸಲಿಲ್ಲ . ಒಂದು ಕಾಲದಲ್ಲಿ ಓದುಗರನ್ನು ಹುಟ್ಟುಹಾಕಿದ ಗಳಗನಾಥರ ಬಗ್ಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಸ್ತಾಪವೇ ಇಲ್ಲ. ಶತಮಾನದ ಕಥಾಸಾಹಿತ್ಯದಲ್ಲಿ ವ್ಯಾಸ, ಶತಮಾನದ ಪ್ರಬಂಧ ಸಾಹಿತ್ಯದಲ್ಲಿ ರಾಕು, ಶತಮಾನದ ಕಾವ್ಯದಲ್ಲಿ ಯರ್ಮುಂಜ ರಾಮಚಂದ್ರ ಸೇರ್ಪಡೆಯಾಗಲಿಲ್ಲ . ಇವತ್ತಿಗೂ ಜನಪದ ಸಾಹಿತ್ಯಕ್ಕೆ ಸಾಹಿತ್ಯದ ಪಟ್ಟವಿಲ್ಲ . ಯಾವ ವಿಭಾಗಕ್ಕೂ ಸಲ್ಲದ ನವರತ್ನರಾಮರಾಯರ ಕೆಲವು ನೆನಪುಗಳು, ಎಂ.ಆರ್‌.ಶ್ರೀಯವರ ರಂಗಣ್ಣನ ಕನಸಿನ ದಿನಗಳು, ಖುಷಿ ಕೊಡುವಂತೆ ಬರೆಯುತ್ತಿದ್ದ ಟಿ.ಕೆ.ರಾಮರಾವ್‌, ಕಣ್ಣಮುಂದೆ ಮತ್ತೊಂದು ಲೋಕವನ್ನೇ ತಂದಿಟ್ಟ ದೇವುಡು.. ಹೀಗೆ ಅಸಂಖ್ಯ ಲೇಖಕರನ್ನು ಚರಿತ್ರೆಯೆಂಬ ವಿಸ್ಮೃತಿ ನಿರಾಯಾಸವಾಗಿ ಮರೆತಿದೆ.

ಇದು ಒಂದು ಮುಖವಾದರೆ, ನವ್ಯಸಾಹಿತ್ಯ ಎಂಬ ಬ್ರಹ್ಮರಾಕ್ಷಸ ಒಂದು ಸಾಹಿತ್ಯ ಜಗತ್ತನ್ನೇ ಕಲುಷಿತಗೊಳಿಸಿದ್ದು ಮತ್ತೊಂದು ಕಥೆ. ಶ್ರೇಷ್ಠತೆಯ ವ್ಯಸನ ಮತ್ತು ವ್ಯಸನಿಗಳ ಸೃಷ್ಠಿಯೇ ಶ್ರೇಷ್ಠ ಎಂಬ ಭ್ರಮೆಯಲ್ಲಿ ನವ್ಯಾಲೋಕ ಅಪ್ರಾಮಾಣಿಕತೆಯನ್ನೇ ಪ್ರಾಮಾಣಿಕತೆ ಎನ್ನತೊಡಗಿತು. ಪ್ರಗತಿಪರ ನಿಲುವು, ಬದುಕಿನ ಸಹಜ ಆಸೆ ಮತ್ತು ಆಶಯಗಳನ್ನು ನವ್ಯಸಾಹಿತ್ಯ ಕಡೆಗಣಿಸಿತು. ಒಳ್ಳೆಯತನವನ್ನು ಮುಖವಾಡವೆಂದೂ, ವಿಕೃತಿಯೆಂದೂ ಕರೆದು ನವ್ಯರು ‘ಮುಕ್ತ’ ರೆನಿಸಿಕೊಂಡರು, ಧೈರ್ಯಸ್ಥರೆನಿಸಿಕೊಂಡರು. ವಿಕ್ಷಿಪ್ತ ಮತ್ತು ವಿಕೃತ ಅನುಭವಗಳನ್ನು ತಮ್ಮ ಖಾಸಗಿ ಅನುಭವಗಳಂತೆ ಚಿತ್ರಿಸಿದರು. ದೇಸಾಯಿಯವರ ಮುಕ್ತಿ ಮತ್ತು ವಿಕ್ಷಿಪ್ತ, ಚಿತ್ತಾಲರ ಶಿಕಾರಿ, ಅನಂತಮೂರ್ತಿಯವರ ಅವಸ್ಥೆ , ಲಂಕೇಶರ ಬಿರುಕು, ಶರ್ಮರ ಅನೇಕ ಕತೆಗಳೂ ಕವಿತೆಗಳೂ ಹೀಗೆ ಒಂದು ವರ್ಗಕ್ಕಷ್ಟೇ ಸೀಮಿತವಾಗತೊಡಗಿದವು. ಇವುಗಳನ್ನು ವಿಮರ್ಶಕರು ಶತಮಾನದ ಶ್ರೇಷ್ಠ ಸಾಹಿತ್ಯವೆಂದು ವರ್ಣಿಸಿದರು. ಆನಂದಕಂದರಂಥ ಕವಿಗಳು, ಪುತಿನರಂಥ ಗೀತ ರೂಪಕದ ಕವಿಯನ್ನು, ಕೊನೆಗೆ ಮಾಸ್ತಿಯಂಥ ಕತೆಗಾರರನ್ನು ನವ್ಯರು ನಿರ್ಲಕ್ಷಿಸಿದರು. ಇವರೆಲ್ಲರೂ ಈ ಹುಚ್ಚುಹೊಳೆಯಲ್ಲಿ ಕೊಚ್ಚಿಹೋಗದೇ ದಡದಲ್ಲೇ ಉಳಿದುಕೊಂಡರು. ಪಾಡಿಗಾರು ವೆಂಕಟರಮಣಾಚಾರ್ಯರಂಥ ಪ್ರಕಾಂಡ ಮಾನವತಾವಾದಿಗಳು ಕೂಡ ನವ್ಯದವರಿಂದ ನಿರ್ಲಕ್ಷ್ಯಕ್ಕೆ ಒಳಗಾದರು.

1

Time Passಅಲ್ಲಿಂದ ಓದುಗ ಸಾಹಿತ್ಯದಿಂದ ದೂರವಾದ. ನಮ್ಮ ಸಾಹಿತ್ಯ ಯಾವುದನ್ನು ಅತ್ಯಂತ ಹುಲುಸಾದ ಸಾಹಿತ್ಯಕೃಷಿಯ ಅವಧಿ ಎಂದು ಕರೆಯುತ್ತದೋ, ಆ ಅವಧಿಯಲ್ಲಿ ಬಂದ ಕೃತಿಗಳೇ ಕನ್ನಡದ ಓದುಗರ ಆಸಕ್ತಿ ಕುಗ್ಗುವುದಕ್ಕೆ ಕಾರಣ. 1965 ರಿಂದ 1995 ರ ತನಕ- ಮೂರು ದಶಕಗಳ ಕಾಲ ಕನ್ನಡದ ಓದುಗರು ರೀಮೇಕ್‌ ಸಾಹಿತ್ಯವನ್ನೇ ಓದಬೇಕಾಯಿತು. ಇಂಗ್ಲೀಷ್‌ ಪ್ರಜ್ಞೆಯೇ ಸಾಹಿತ್ಯ ಕ್ಷೇತ್ರವನ್ನು ಆಳಿತು. ಛಂದಸ್ಸು ಮತ್ತು ಓಘದ ಜೊತೆಗೆ ನಾವು ಅನುಭವವನ್ನೂ ಎರವಲು ತಂದುಕೊಂಡೆವು. ‘ಅವಳ ಉಡುಗೆ ಇವಳಿಗಿಟ್ಟು ನೋಡಬಯಸಿದೆ’ ಎನ್ನುತ್ತಾ ಬಿಎಂಶ್ರೀ ಇಂಗ್ಲೀಷ್‌ ಗೀತೆಗಳನ್ನು ಕನ್ನಡಕ್ಕೆ ತಂದದ್ದೇ ಪ್ರಮಾದವಾಯಿತೇನೋ ಎಂದು ಅನ್ನಿಸುವಷ್ಟರ ಮಟ್ಟಿಗೆ ಪರಕೀಯ ‘ಪ್ರಜ್ಞೆ ಮತ್ತು ಪರಿಸರ’ ನಮ್ಮ ಸಾಹಿತ್ಯ ಸೊಗಡನ್ನು ಕದಡಿತು.

ಸಾಹಿತ್ಯ ಗೆಲ್ಲುವುದು ಓದುಗನ uncritical admiration- ವಿಮರ್ಶಾತೀತ ಮೆಚ್ಚುಗೆಗೆ ಪಕ್ಕಾದಾಗ. ಮೊದಲ ಬಾರಿ ಓದಿದಾಗ ಆ ಕೃತಿಯನ್ನು ಆತ ಸುಮ್ಮನೆ ಮೆಚ್ಚಿಕೊಳ್ಳಬೇಕು. ‘ನನಗೂ ಹೀಗೇ ಅನ್ನಿಸಿತ್ತು’ ಹಾಗೂ ‘ಅರೇ.. ನನಗೆ ಹೀಗೆ ಅನ್ನಿಸಿರಲೇ ಇಲ್ಲ’ ಎಂಬ ಎರಡು ಭಾವಗಳ ಸಂಗಮಕ್ಕೆ ಕಾರಣವಾಗುವ ಕೃತಿಯನ್ನಷ್ಟೇ ಓದುಗನ ಆಸಕ್ತಿ ಕೆರಳಿಸುತ್ತದೆ, ಆತನ ಮೆಚ್ಚುಗೆ ಗಳಿಸುತ್ತದೆ. ಇದಕ್ಕಿಂತ ಪರಕೀಯ ಕೃತಿ ಬಂದಾಗ ಓದುಗ ‘ನನಗೆ ಹೀಗೆ ಅನ್ನಿಸಿರಲಿಲ್ಲ, ಬಹುಶಃ ಅನ್ನಿಸೋದಕ್ಕೂ ಸಾಧ್ಯವಿಲ್ಲ’ ಎಂದು ಅದನ್ನು ತಳ್ಳಿಹಾಕುವ ಸಾಧ್ಯತೆಯೇ ಹೆಚ್ಚು . ನವ್ಯಕ್ಕಾದದ್ದೂ ಅದೇ.

ನಂತರ ಬಂದ ಬಂಡಾಯ, ದಲಿತ ಸಾಹಿತ್ಯ ಚಳವಳಿಗಳು(ಸಾಹಿತ್ಯ ಒಂದು ಚಳವಳಿ ಎನ್ನುವುದೇ ಮೂರ್ಖತನ.ಯಾಕೆಂದರೆ ಅದು ಬಳುವಳಿಯೇ ಹೊರತು ಚಳವಳಿಯಲ್ಲ ) ಓದುಗರಿಂದ ಮತ್ತಷ್ಟು ದೂರವಾದವು. ಬಂಡಾಯಗಾರರು ಒಂದು ವರ್ಗವನ್ನು ಬೈಯುವುದನ್ನೇ ಕಸಬು ಮಾಡಿಕೊಂಡರು. ದಲಿತ ಲೇಖಕರಲ್ಲಿ ದೇವನೂರು ಮಹಾದೇವರಂಥ ಕೆಲವರನ್ನು ಬಿಟ್ಟರೆ ಉಳಿದವರಿಗೆ ಸಾಹಿತ್ಯ ಆಯುಧವಾಗಿ ಪರಿಣಮಿಸಿತು. ಇವು ಮೂಲತಃ ಓದು ಬರಹಬಲ್ಲ ವರ್ಗದ ವಿರುದ್ಧ ಮಂಡಿತವಾದ ವಾದಗಳನ್ನು ಪ್ರೋತ್ಸಾಹಿಸಿದ್ದೂ ಓದುಗರನ್ನು ಕಳಕೊಳ್ಳುವಂತೆ ಮಾಡಿತು.

ಹಾಗಾಗುತ್ತಿದ್ದಂತೆ ಕೀರ್ತಿನಾಥ ಕುರ್ತಕೋಟಿ ‘ಪ್ರತ್ಯಭಿಜ್ಞಾನ’ , ಕೆ.ವಿ.ಸುಬ್ಬಣ್ಣ ‘ಅಕ್ಷರ ಚಿಂತನ’, ಹಂಪಿ ವಿಶ್ವ ವಿದ್ಯಾಲಯ ‘ದೇಸಿಯಾಳ್‌ ಪುಗುವುದು’ - ಹೀಗೆ ಮತ್ತೆ ಹಳೆಯದರತ್ತ ಮರಳುವ ಯತ್ನಗಳೂ ನಡೆದವು. ಅವು ಯಶಸ್ವಿಯಾಗಲಿಲ್ಲ.

ಇವತ್ತು ನಾವು ಮತ್ತೆ ಓದುಗರನ್ನು ಸೃಷ್ಟಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಫಲವತ್ತತೆ ಕಳಕೊಂಡ ನೆಲವನ್ನು ಮತ್ತೆ ಫಲವಂತಿಕೆ ತುಂಬಿಕೊಳ್ಳುವಂತೆ ಮಾಡುವಷ್ಟೇ ಕಷ್ಟದ ಕೆಲಸ ಇದು. ಇದನ್ನು ವ್ಯಂಗ್ಯದ ಮೂಲಕ, ದಂಗುಬಡಿಸುವ ಮೂಲಕ ಅಥವಾ ಭಾವ ತೀವ್ರತೆಯ ಮೂಲಕ ಮಾಡಬೇಕು. ಇವುಗಳಲ್ಲಿ ಭಾವತೀವ್ರತೆ ಹಾಗೂ ದಂಗುಬಡಿಸುವ ಕೆಲಸವನ್ನು ನಮ್ಮ ಇಲೆಕ್ಟ್ರಾನಿಕ್‌ ಮಾಧ್ಯಮಗಳು ಮಾಡುತ್ತಿವೆ.

ಅಂದರೆ ನಮಗೆ ಉಳಿದಿರುವ ಮಾರ್ಗವೆಂದರೆ ಸುಖಸಮ್ಮಿತಿ. ಗೆಳೆಯನ ಜೊತೆ ಮಾತನಾಡಿದಂತೆ ಆತ್ಮೀಯವಾಗಿ ಮಾತನಾಡುತ್ತಾ, ಓದುಗನಿಗೆ ಕತೆ ಹೇಳುವುದು. ಆತನಿಗೆ ಮೆಚ್ಚುಗೆಯಾಗುವಂತೆ, ಅರ್ಥವಾಗುವಂತೆ ವಿವರಿಸುವುದು. ಆತನಿಗೆ ಆಸಕ್ತಿ ಇರುವ ವಿಷಯಗಳನ್ನಷ್ಟೇ ಹೇಳುವುದು. ಒಲ್ಲದ ಪ್ರೇಯಸಿಯನ್ನು ಒಲಿಸಿಕೊಳ್ಳುವ ಪ್ರೇಮಿಯ ಹಾಗೆ, ಇದ್ದಾನೋ ಇಲ್ಲವೋ ಎಂದು ಗೊತ್ತಿಲ್ಲದ ದೇವನ ಸಾಕ್ಷಾತ್ಕಾರಕ್ಕಾಗಿ ತಪಸ್ಸಿಗೆ ಕೂತ ತಾಪಸಿಯ ಹಾಗೆ, ಬೆಳದಿಂಗಳ ಮೊದಲ ಹನಿಗಾಗಿ ಕಾದು ಕೂತ ಕಡಲಿನ ಹಾಗೆ...

ಏಕಾಗ್ರವಾಗಿ ಮತ್ತು ಸಮಗ್ರವಾಗಿ ಹೇಳುವುದು!

2

Ravi Belagereಹಾಗೆ ಏಕಾಗ್ರವಾಗಿ ಮತ್ತು ಸಮಗ್ರವಾಗಿ ಹೇಳುವ ಸಮಕಾಲೀನ ಲೇಖಕರ ಪೈಕಿ ಇಬ್ಬರು ಥಟ್ಟನೆ ನೆನಪಾಗುತ್ತಾರೆ. ಪೂರ್ಣಚಂದ್ರ ತೇಜಸ್ವಿ ಮತ್ತು ರವಿ ಬೆಳಗೆರೆ.

ತೇಜಸ್ವಿ ಕೂಡ ಸಾಹಿತ್ಯಿಕ ಚರಿತ್ರೆಯ ಒಂದು ಅಧ್ಯಾಯವಾಗಿದ್ದವರು. ಕ್ರಮೇಣ ಸ್ವಂತ ಇಚ್ಛೆಯಿಂದ ಅದರಿಂದೀಚೆಗೆ ಸರಿದವರು. ನವ್ಯಕತೆಗಾರರು ಸಂಕೇತ, ಪ್ರತಿಮೆ ಮತ್ತು ರೂಪಕಗಳ ಮೂಲಕ ಕತೆ ಹೇಳುತ್ತಿದ್ದ ಸಂದರ್ಭದಲ್ಲಿ ತೇಜಸ್ವಿ ತಬರನ ಕತೆ ಬರೆದರು. ಕತೆಯಾಳಗೇ ರೂಪಕಗಳಿರಲಿಲ್ಲ , ಇಡೀ ಕತೆಯೆ ರೂಪಕವಾಯಿತು. ಅದಕ್ಕೂ ಮುಂಚೆ ಬರೆದ ಕುಬಿ ಮತ್ತು ಇಯಾಲ, ಅವನತಿ, ಅಬಚೂರಿನ ಪೋಸ್ಟಾಫೀಸು ಮುಂತಾದ ಕತೆಗಳಲ್ಲೂ ನಿಗೂಢ ಮನುಷ್ಯರು ನೀಳ್ಗತೆಯಲ್ಲೂ ಅವರು ನವ್ಯದ ಸಾಂಕೇತಿಕತೆಯನ್ನು ಗೇಲಿ ಮಾಡಿದರು. ಅದು ಕರ್ವಾಲೋ ಕಾದಂಬರಿಯಲ್ಲಿ ಇನ್ನಷ್ಟು ಸ್ಪಷ್ಟವಾಯಿತು.

ರವಿ ಬೆಳಗೆರೆ ಪಾ.ವೆಂ.ಹೇಳಿದ ಕಥೆಯಲ್ಲಿ ಮಾಡಿದ್ದೂ ಅದನ್ನೇ. ಅಲ್ಲಿ ಕತೆ ಕೇಳುವಾಕೆಯೇ ಪಾತ್ರವಾಗುತ್ತಾಳೆ. ಆಕೆಯೇ ಪಾತ್ರ ಎನ್ನುವುದು ಕತೆ ಹೇಳುವಾತನಿಗೂ ಗೊತ್ತಿದೆ. ಓದುಗ ಮತ್ತು ಕತೆಗಾರನ ನಡುವೆ ಸಾಧ್ಯವಾಗಬಹುದಾದ ಅತ್ಯಂತ ಆತ್ಮೀಯ ಸಂಬಂಧ ಇದು. ಆತ ಯಾರದೋ ಕತೆಯೆಂಬಂತೆ ಹೇಳುತ್ತಾನೆ. ಆಕೆಯೂ ಇನ್ನಾರದೋ ಕತೆಯೆಂಬಂತೆ ತನ್ನ ಕತೆಯನ್ನೇ ಕೇಳಿಸಿಕೊಳ್ಳುತ್ತಾಳೆ. ಎಲ್ಲೋ ಒಂದು ಕಡೆ ಒಂದು ಸಾಂತ್ವನ, ಒಂದು ಉತ್ತರ, ಒಂದು ಭರವಸೆ, ಮತ್ತೊಂದು ಬೆಳಕು ಕಂಡೀತೆಂದು ಕಾಯುತ್ತಾಳೆ.

ಯಾರಾದರೂ ಆಕೆ ತನ್ನ ಕತೆಯೆಂಬಂತೆ ಇನ್ನೊಬ್ಬಳ ಕತೆಯನ್ನು ಯಾಕೆ ಕೇಳಿಸಿಕೊಳ್ಳಬೇಕು?

ಯಾಕೆಂದರೆ ಇನ್ನೊಬ್ಬಪರ ಕತೆ ನಮ್ಮ ಕತೆಯೂ ಆಗಿರುತ್ತದೆ. ರವಿ ಬೆಳಗೆರೆ ಹೇಳುವುದೂ ಅದನ್ನೇ. ಯಾರದೋ ಕತೆ ಹೇಳುತ್ತಾ ಲೇಖಕ ಮನುಕುಲದ ಕತೆಯನ್ನೇ ಹೇಳುತ್ತಾನೆ. ಉದಾಹರಣೆಗೆ ದುಷ್ಯಂತ ಮತ್ತು ಶಕುಂತಲೆಯರ ಕತೆ ಎಲ್ಲಾ ವಿರಹಿಗಳ ಕತೆಯೂ ಹೌದು ತಾನೇ? ಅಗ್ನಿಮಿತ್ರನ ಪ್ರೇಯಸಿಯನ್ನು ಕಂಡು ಮಾಲವಿಕಾ ಸಿಟ್ಟಾದದ್ದು ಬರಿಯ ನಾಟಕವಷ್ಟೇ ಹೌದೇನು?

‘ಪಾವೆಂ ಹೇಳಿದ ಕತೆ’ ಗಳಂಥ ಕತೆಗಳಿರುವ ಸಂಕಲನ, ಮಾಂಡೋವಿಯಂಥ ಭಾವಾನುವಾದ, ಖಾಸ್‌ಬಾತ್‌ನಂಥ ಅನುಭವ ಕಥನಗಳನ್ನು ಬರೆಯುತ್ತಾ ರವಿ ಬೆಳಗೆರೆ ತಮ್ಮದೇ ಆದ ಓದುಗ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ. ಇವತ್ತು ಕನ್ನಡ ಸಾಹಿತ್ಯ ಹೀಗೆ ಲೇಖಕರ ಮೂಲಕವೇ ಓದುಗರನ್ನು ಸೃಷ್ಟಿಸಿಕೊಳ್ಳಬೇಕಾಗಿದೆ. ಇಂಗ್ಲೀಷ್‌ ಸಿನಿಮಾದ ಹೀರೋ ಯಾರು, ನಿರ್ದೇಶಕ ಯಾರು ಎಂದು ಕೇಳದೇ ಸಿನಿಮಾ ನೋಡುವ ಮಂದಿ, ಕನ್ನಡದ ವಿಚಾರಕ್ಕೆ ಬಂದರೆ ಹೀರೋ ಯಾರಂತೆ ಎಂದು ಕೇಳುತ್ತಾರೆ. ಹಾಗೆ ಸಾಹಿತ್ಯ ಕೂಡ. ಹೊಸ ಲೇಖಕನ ಇಂಗ್ಲಿಷ್‌ ಕೃತಿಯೂ ಮಾರಾಟವಾಗುತ್ತದೆ. ಆದರೆ ನೂರು ಕಾದಂಬರಿ ಬರೆದ ಕನ್ನಡ ಲೇಖಕನ ಹೊಸ ಕಾದಂಬರಿಗೆ ಶಿಫಾರಸು ಪತ್ರ ಬೇಕಾಗುತ್ತದೆ, ವಿಮರ್ಶಕರದ್ದಲ್ಲ , ಮತ್ತೊಬ್ಬ ಓದುಗನದು.

ಆದರೆ ರವಿ ಬೆಳಗೆರೆ ಬರೆದದ್ದು ನೇರವಾಗಿ ಓದುಗರನ್ನು ತಲುಪುತ್ತದೆ. ಅಲ್ಲಿ ಮಧ್ಯವರ್ತಿಗಳಿಲ್ಲ . ಅವು ಲೈಬ್ರರಿಗಳಲ್ಲಿ ಓದುಗರಿಗಾಗಿ ಕಾಯುವುದಿಲ್ಲ . ಸರ್ಕಾರಿ ಲೈಬ್ರರಿ ಸೇರಿ ಯಾವುದೋ ಪುಸ್ತಕದ ನಡುವೆ ಹುದುಗಿಹೋಗುವುದಿಲ್ಲ. ಅದು ರವಿ ಬೆಳಗೆರೆಯ ಸ್ವಾತಂತ್ರ್ಯ ಮತ್ತು ಬಂಧನ! ಓದುಗರನ್ನು ತಲುಪುವ ಖುಷಿ ಮತ್ತು ನಿಜವಾಗಿಯೂ ತಲುಪಲೇ ಬೇಕಾದ ಕಷ್ಟ ಎರಡನ್ನೂ ಅವರೇ ಮೈಮೇಲೆ ತಂದುಕೊಂಡಿದ್ದಾರೆ.

ಈ ನಡುವೆ ಅನುವಾದ ಸಾಹಿತ್ಯದ ಬಗ್ಗೆ ಚರ್ಚೆಗಳೂ, ಸೆಮಿನಾರುಗಳೂ ನಡೆಯುತ್ತಾ, ಅನುವಾದಕರೆಂಬ ಹಣೆಪಟ್ಟಿ ಕಟ್ಟಿಸಿಕೊಂಡ ಅನೇಕಾನೇಕ ಲೇಖಕರು ಬರಹಗಳಲ್ಲಿ ಉಗ್ಗುತ್ತಿರುವ ಹೊತ್ತಿಗೆ, ರವಿ ಬೆಳಗೆರೆ ಮೂಲದ ಶೈಲಿ, ಸೊಗಸು ಮತ್ತು ಸೊಗಡು ಸೋರಿಹೋಗದಂತೆ ಪ್ರೊತಿಮಾ ಬೇಡಿಯ ಆತ್ಮಕತೆಯನ್ನು ಕನ್ನಡಕ್ಕೆ ತಂದಿದ್ದಾರೆ. ಬೇಡಿಯ ಮಗಳು ಪೂಜಾ ಹೆಣೆದ ಕತೆ ಅದು.

‘ಸ್ವಲ್ಪ ಕುಡಿ. ಸ್ವಲ್ಪ ನಗು. ಪರವಾಗಿಲ್ಲ’ ಎಂದು ಅಪ್ಪ ಅನುಮತಿ ಕೊಟ್ಟಿದ್ದ. ಅಮ್ಮನ ಕಣ್ಣುಗಳಲ್ಲಿ ತುಂಟ ವಾಂಛೆಗಳು ಜಾಗೃತವಾಗಿಬಿಡುತ್ತಿದ್ದವು. ಆಕೆಯ ಹೆಸರು ರೇಬಾಗುಪ್ತಾ ಎಂದು ಶುರುವಾಗುವ ಆತ್ಮಕತೆ ‘ಸಂಜೆಯಾಗತೊಡಗಿದಂತೆಲ್ಲ ನನ್ನೊಳಗೊಂದು ಉನ್ಮಾದ ಜಾಗೃತವಾಯಿತು. ಕಾರಿನ ಹಾರ್ನ್‌ ಸದ್ದಾಗುತ್ತಿದ್ದಂತೆ ಫ್ರೆಡ್‌ ಬಂದುಬಿಟ್ಟ ಅಂತ ಗೊತ್ತಾಯಿತು. ತಕ್ಷಣ ಬಾಲ್ಕನಿಗೆ ಓಡಿ ಇಣುಕಿದೆ. ಫ್ರೆಡ್‌ ಕಣ್ಣು ಮೀಟಿದ’ ಎಂದು ಮುಂದುವರಿದು ‘1989 ರ ಮಾರ್ಚ್‌ ತಿಂಗಳ ಅದೊಂದು ಪ್ರಖರ ಮುಂಜಾವಿನಂದು ನನ್ನ ಸೂಟ್‌ಕೇಸ್‌ಗಳನ್ನೂ, ಉದಯ್‌ಪುರದ ಮಹಾರಾಜರು ಕಾಣಿಕೆಯಾಗಿ ನೀಡಿದ್ದ ಪ್ರಖರ ಅಮೃತಶಿಲೆಯ ಒಂದು ನಂದಿ ವಿಗ್ರಹವನ್ನೂ, ಎರಡು ಲಕ್ಷ ರುಪಾಯಿಗಳದೊಂದು ಚೆಕ್‌ ಲೀಫನ್ನೂ ನನ್ನ ಕೆಂಪು ಮಾರುತಿ ಕಾರಿಗೆ ತುಂಬಿಸಿಕೊಂಡು ಬಾಂಬೆಯಿಂದ ಹೆಸರಘಟ್ಟಕ್ಕೆ ಒಬ್ಬಳೇ ಡ್ರೆೃವ್‌ ಮಾಡಿಕೊಂಡು ಬಂದುಬಿಟ್ಟೆ’ ಎಂದು ಆತ್ಮಕತೆಯ ಅನುವಾದ ಸುರಳೀತ ಸಾಗುತ್ತದೆ. ಎಲ್ಲೂ ಒಂದು ಅಪಶಬ್ದವಿಲ್ಲ , ಅನುವಾದಿಸಿಕೊಂಡ ಕೃತಿಯೆಂಬ ಸುಳಿವಿಲ್ಲ .

ಬೇಕಿದ್ದರೆ ನೀವು ಬೇರೆ ಅನುವಾದದೊಡನೆ ಹೋಲಿಸಿ ನೋಡಿ. ತಕ್ಷಣ ಕೈಗೆ ಸಿಕ್ಕಿದ ಸಾಹಿತ್ಯ ಅಕಾಡೆಮಿಗಾಗಿ ಅರುವತ್ತು ಕೃತಿಗಳನ್ನು ಬರೆದಿರುವ ಪಂಚಾಕ್ಷರಿ ಹಿರೇಮಠ ಉರ್ದುವಿನಿಂದ ಅನುವಾದಿಸಿದ ಡಾಲನ್‌ವಾಲಾ ಕತೆಯ ಆರಂಭ ನೋಡಿ ;

‘ಪ್ರತಿ ಮೂರು ದಿವಸಕ್ಕೊಮ್ಮೆ ಅಪರಾಹ್ನ ತಗ್ಗಿದ ನಂತರ ಅತ್ಯಂತ ಬೆಳ್ಳಗಿನ, ಮುಪ್ಪಿನ, ಅಲ್ಲಲ್ಲಿ ಹೊಲಸು ಮಿಂಚುವ ಕರಿಕೋಟು-ಪ್ಯಾಂಟು ಧರಿಸಿದ, ಕಪ್ಪಗಿನ ದುಂಡುಟೊಪ್ಪಿಗೆ, ತೆಳ್ಳಗಿನ ಫ್ರೇಮಿನ ಚಾಳೀಸು ಹಾಕಿಕೊಂಡ ಓರ್ವ ವ್ಯಕ್ತಿ ಕೈಯಲ್ಲಿ ಕೋಲು ಹಿಡಿದು ಬರುತ್ತಾನೆ.’

ಇದನ್ನು ಓದಿದ ನಂತರ ಅನುವಾದ ಹೇಗಿರಬೇಕು ಎಂದು ವಿವರಿಸಬೇಕಾಗಿಲ್ಲ . ರವಿ ಬೆಳಗೆರೆ ಸ್ವಂತ ಕತೆಯಷ್ಟೇ ಪ್ರೀತಿಯಿಂದ ಅನುವಾದ ಕೂಡ ಮಾಡುತ್ತಾರೆ ಅನ್ನುವುದಕ್ಕೆ ಟೈಮ್‌ಪಾಸ್‌ ಒಂದು ಉದಾಹರಣೆ ಅಷ್ಟೇ. ಉಳಿದಂತೆ ಆತ್ಮಚರಿತ್ರೆಯನ್ನು ವಿಮರ್ಶಿಸುವುದು ಒಂದು ವ್ಯಕ್ತಿಚಿತ್ರ ಬರೆದಷ್ಟೇ ಕಷ್ಟ ಮತ್ತು ನಿಷ್ಠುರದ ಕೆಲಸ. ಅಲ್ಲಿ ನೀವು ಅನುಮಾನಿಸುವುದು ಸೃಜನಶೀಲತೆಯನ್ನಲ್ಲ, ಪ್ರಾಮಾಣಿಕತೆಯನ್ನು !

ಹಾಗಿದ್ದೂ ಪ್ರೊತಿಮಾಬೇಡಿ ಆತ್ಮ ಚರಿತ್ರೆ ಓದಲೇಬೇಕಾದ ಕೃತಿ. ಕೃತಿಯ ಭಾವ ಮತ್ತು ಅನುವಾದ ಎರಡೂ ನಿಮ್ಮನ್ನು ಸೆರೆಹಿಡಿಯುವುದರಲ್ಲಿ ಅನುಮಾನ ಬೇಕಿಲ್ಲ . ಅನುವಾದಕರೇ ಹೇಳುವಂತೆ‘ಅದೊಂದು ವಿಲಕ್ಷಣ ಬದುಕಿನ ವಿಫುಲವಾದ ಕತೆ’.

ಆಪ್ಘಾನಿಸ್ತಾನದ ಯಾವುದೋ ಮೂಲೆಯಲ್ಲಿ ಬೆಳಗೆರೆ

ಯುದ್ಧ ವರದಿಗಳನ್ನು ಪ್ರತ್ಯಕ್ಷವಾಗಿ ದಾಖಲಿಸಲು ಹೊರಟಿರುವ ಏಕೈಕ ಕನ್ನಡ ಪತ್ರಿಕೆ ಹಾಯ್‌ ಬೆಂಗಳೂರ್‌ ! ಅದರ ಸಂಪಾದಕ ರವಿ ಬೆಳಗೆರೆ. ಯುದ್ಧ ವರದಿಗಳನ್ನು ನೀವು ಓದುತ್ತಿರುವ ಈ ಹೊತ್ತು , ಆಪ್ಘಾನಿಸ್ತಾನದ ಯಾವುದೋ ಮೂಲೆಯಲ್ಲಿ ಯಾವುದೋ ಘಟನೆಯಲ್ಲಿ ರವಿ ಬೆಳಗೆರೆ ಮುಳುಗಿಹೋಗಿದ್ದಾರೆ. ಅವರು ವಾಪಸ್ಸಾದಾಗ ಅವರ ಬಗಲಿನಲ್ಲಿ ಇನ್ನಷ್ಟು ‘ಟೈಂಪಾಸ್‌’ !

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X