ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಂಧಿಬಜಾರಿನಲ್ಲಿಸಜ್ಜನರ ಪಿತೂರಿ

By Staff
|
Google Oneindia Kannada News

* ಎಸ್ಕೆ. ಶಾಮಸುಂದರ

ಬೆಂಗಳೂರು : ತುಂತುರು ಮಳೆಯ ತಣ್ಣನೆ ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಎರಡು ಪುಸ್ತಕಗಳು ಏಕಕಾಲಕ್ಕೆ ಬೆಳಕು ಕಂಡವು. ಮನುಷ್ಯ ಸ್ವಭಾವಗಳನ್ನು ನವಿರಾಗಿ ಸ್ಪರ್ಷಿಸಿ ಸುಖಿಸುವ ‘ಕಾನನದ ಮಲ್ಲಿಗೆ’ - ಜೀವಂತ ಮಾಧ್ಯಮಗಳ ಒಡನಾಟದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಸಾಧ್ಯತೆಗಳನ್ನು ಅನಾವರಣಗೊಳಿಸುವ Live Media for Development Journalism - ಗಾಂಧೀಬಜಾರ್‌ ಓಣಿಯಿಂದ ಕೊಂಡು ಓದುವ ಕನ್ನಡಿಗರ ಜಗತ್ತಿನತ್ತ ಹೆಜ್ಜೆ ಹಾಕಿದವು.

ಈ ಎರಡೂ ಪುಸ್ತಕಗಳ ಲೇಖಕರು ಎಚ್‌ಕೆಗಳಾಗಿರುವುದು ಒಂದು ನೋಟದಲ್ಲಿ ಕಾರ್ಯಕ್ರಮದ ಹೆಚ್ಚುಗಾರಿಕೆ ಆಗಿತ್ತು ! ಕಾನನದ ಮಲ್ಲಿಗೆ ಬರೆದವರು ಫ್ಲಾರಿಡಾದಲ್ಲಿ ನೆಲೆಸಿರುವ ಪ್ರಸಿದ್ಧ ವೈದ್ಯ ಮೈಸೂರಿನ ಎಚ್‌.ಕೆ. ನಂಜುಂಡಸ್ವಾಮಿ , ಲೈವ್‌ ಮೀಡಿಯಾ ಬರೆದವರು ಸ್ವಾಮಿಯವರ ಅಣ್ಣ , ಡಾಕ್ಟರ್‌ ಅಲ್ಲದ ವೈದ್ಯ ಎಚ್‌.ಕೆ. ರಂಗನಾಥ್‌.

ಮನುಷ್ಯ ಸ್ವಭಾವಗಳನ್ನು ಮುದವಾಗಿ ಬರೆಯುವುದರಲ್ಲಿ ರಂಗನಾಥ್‌ ಪಳಗಿದ ಕೈ. ಅವರ ನೆನಪಿನ ಅಂಗಳ, ಜೇನಹನಿ. ಇವರೂ ನಮ್ಮವರೇ ಮುಂತಾದ ಕೃತಿಗಳನ್ನು ನೀವು ಪುರುಸೊತ್ತು ಮಾಡಿಕೊಂಡು ಓದಬೇಕು. ಶೈಲಿ ಆತ್ಮೀಯವಾಗಿರುತ್ತದೆ, ಬೋರು ಹೊಡೆಸುವುದಿಲ್ಲ, ಭಾಷಣ ಬಿಗಿಯುವುದಿಲ್ಲ,

ಎಷ್ಟಾದರೂ ನಂಜುಂಡಸ್ವಾಮಿ ಅಣ್ಣನಂತೆಯೇ ತಮ್ಮ . ರಂಗನಾಥ್‌ ಅವರಂತೆ, ಒಂದು ಕೈಯಲ್ಲಿ ಸ್ಟೆಥಾಸ್ಕೋಪ್‌ ಇನ್ನೊಂದು ಕೈಯಲ್ಲಿ ಲೇಖನಿ ಹಿಡಿದ ರಾಶಿ ಅವರಂತೆ ಆಡುಭಾಷೆಯಲ್ಲಿ, ಸಂಭಾಷಣೆಯ ಧಾಟಿಯಲ್ಲಿ ನಗೆ ಉಕ್ಕಿಸುವ ಪದಾರ್ಥಗಳನ್ನು ಬರಹಕ್ಕಿಳಿಸುವಲ್ಲಿ ನಿಸ್ಸೀಮರು. ಇತ್ತೀಚೆಗಷ್ಟೇ ಬೆಳಕುಕಂಡ ಅವರ ‘ನಿಶ್ಯಬ್ದ ಸಂಗೀತ’ದಂತಹ ಗಹನ-ಗಂಭೀರ ಕೃತಿ ಓದಿದವರಿಗೆ ’ಕಾನನದ ಮಲ್ಲಿಗೆ’ ಮತ್ತೊಂದು ಬಗೆಯ ನಿರುಮ್ಮಳ ಅನುಭವ ಕೊಡುವಂಥದು.

ಕೃತಿಯನ್ನು ಬಿಡುಗಡೆ ಮಾಡಿದ ನಿವೃತ್ತ ನ್ಯಾಯಮೂರ್ತಿ ಕೋ.ಚೆನ್ನಬಸಪ್ಪ ಮಲ್ಲಿಗೆಯ ಬೆನ್ನುಡಿಯಲ್ಲಿ ಬರೆಯುತ್ತಾರೆ :

‘ ಎಂಥ ದೊಡ್ಡ ದೇವರ ಪ್ರಸಾದವಾದರೂ ಇಷ್ಟು ಹುಳಿ ಇದ್ದರೆ ಯಾರು ನುಂಗುತ್ತಾರೆ- ಎಂಬರ್ಥ ಬರುವ ತೆಲುಗು ಗಾದೆಯಾಂದನ್ನು ಕೇಳಿದ್ದೇನೆ. ಹೇಳುವ ಸತ್ಯ ಎಷ್ಟೇ ದೊಡ್ಡದಾದರೂ ತಲೆ ಚಿಟ್ಟು ಹಿಡಿಸುವಂತೆ ಕೊರೆದರೆ ಯಾರೂ ಓದುವುದಿಲ್ಲ. ಹೇಳುವ ರೀತಿಯಲ್ಲಿ ಸಾಹಿತ್ಯದ ರುಚಿ ಇರಬೇಕು. ಡಾ. ಸ್ವಾಮಿ ಅವರ ಈ ಬರಹದಲ್ಲಿ ತಿಳಿಹಾಸ್ಯದ ರಸ ಹರಿಯುವುದರಿಂದ ಓದುಗ ಬಾಯಿ ಚಪ್ಪರಿಸಿ ಈ ಪ್ರಸಾದವನ್ನು ಗಬಗಬ ನುಂಗುತ್ತಾನೆಂಬ ವಿಚಾರದಲ್ಲಿ ನನಗೆ ಸಂದೇಹವಿಲ್ಲ’ .

ಕೋಚೆ ಅವರ ಈ ಅಭಿಪ್ರಾಯ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲಡ್‌ ಕಲ್ಚರ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೂ ಅನ್ವಯಿಸುತ್ತೆ ಎಂಬ ಅಭಿಪ್ರಾಯ ನಿಮ್ಮ ಈ ವಿಶ್ವಾಸಿಯದು. ನವಚೇತನ ಟ್ರಸ್ಟಿನ ಶ್ರೀನಿವಾಸರಾಜು ರಸವತ್ತಾದ ಕೇಸರಿಭಾತ್‌ , ರವಾ ವಾಂಗೀಭಾತ್‌ , ಘಮಘಮ ಕಾಫಿಯನ್ನಷ್ಟೇ ಬಡಿಸುವುದಿಲ್ಲ . ಮನೋಜ್ಞ ಮಾತುಗಾರರೂ ಕೂಡ ಎಂಬುದನ್ನು ಮತ್ತೊಮ್ಮೆ ತೋರ್ಪಡಿಸಿದರು. ಅವರ ಮಾತಿನ ವರಸೆಯ ಒಂದು ತುಣುಕು ನೋಡಿ :

‘ ಪುಸ್ತಕ ಬಿಡುಗಡೆ ಕಾಯಕ್ರಮ ಕೇವಲ ಒಂದು ನೆಪ. ಇದು ಸ್ನೇಹ ಸಮ್ಮಿಲನ. ಪ್ರಾಜ್ಞರೂ, ಸಾಹಿತಿಗಳೂ, ಸಜ್ಜನರೂ ಹಾಗೂ ಸುಸಂಸ್ಕೃತರ ಜತೆ ಒಡನಾಟಕ್ಕೆ ಈ ಬೆಳಗ್ಗೆ ಮೀಸಲು. ಪ್ರೊ. ಜಿ. ವೆಂಕಟಸುಬ್ಬಯ್ಯ, ಎಚ್‌.ಕೆ. ರಂಗನಾಥ್‌, ಪ್ರೊ. ಎಸ್‌. ರಾಮಸ್ವಾಮಿ , ಎಚ್‌.ಜಿ. ಸೋಮಶೇಖರ ರಾವ್‌, ‘ವೀಸೀ ಸಂಪದ’ದ ವೆಂಕಟೇಶ ಮೂರ್ತಿ, ಎಚ್‌.ಎಸ್‌. ಪಾರ್ವತಿ, ಹಿರಿಯ ಪತ್ರಕರ್ತರಾದ ಸಿ. ಸೀತಾರಾಂ, ಮತ್ತು ಸಿ.ಎನ್‌.ಕೃಷ್ಣಮಾಚಾರ್‌, ಬೆಂಗಳೂರು ವಿವಿ ಸಂವಹನ ಕೇಂದ್ರದ ಡಾ. ಅಶೋಕ್‌ಕುಮಾರ್‌, ಪ್ರಿಸಂ ಬುಕ್‌ ಸ್ಟಾಲ್‌ನ ಪ್ರಾಣೇಶ್‌ರಾವ್‌, ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಎನ್‌.ಗರುಡಾಚಾರ್‌, ಲೇಖಕ ಬಿ.ಎಸ್‌.ಕೇಶವ ರಾವ್‌, ಪಂಡಿತ ರಾಜಗೋಪಾಲ ಶರ್ಮ..... ಹೀಗೆ ಒಂದು ಸಂಸ್ಕೃತಿಯ ಮೊತ್ತವನ್ನು ಕಟ್ಟಿಕೊಡುವ ವೃಂದವೇ ಇಲ್ಲಿ ನೆರೆದಿದೆ. ದೈನಂದಿನ ಬದುಕನ್ನು ಇನ್ನಷ್ಟು..ಮತ್ತಷ್ಟು ಸಹನೀಯಗೊಳಿಸುವತ್ತ ಇವೆರಲ್ಲರ ಯೋಚನಾಲಹರಿ ಹರಿಯುತ್ತದೆ’

ಒಂದು ಭಾನುವಾರ ಬೆಳಗ್ಗೆಯನ್ನು ಆಹ್ಲಾದಿಸುವ ಜನಸಮೂಹ ಬಿಪಿ ವಾಡಿಯಾ ರಸ್ತೆಗೆ ಬಂದಿತ್ತು. ವಿಶ್ವ ಸಂಸ್ಕೃತಿಯ ಕರ್ನಾಟಕದ ಚಾವಡಿ ಎನಿಸಿರುವ Institute of world culture ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ನಗರ ಜೀವನದ ವೇಗ ಒತ್ತಡಗಳನ್ನು ಬದಿಗೊತ್ತಿ ಸಂತಸಗೊಳಿಸಿತು.

ಇಡೀ ಕಾರ್ಯಕ್ರಮವನ್ನು ಪಾಂಗಿತವಾಗಿ ನಡೆಸಿಕೊಟ್ಟ ರಂಗನಾಥ್‌ ಅವರ ಟಿಪಿಕಲ್‌ ಡೈಲಾಗ್ಸ್‌ ಸಭಿಕರನ್ನು ನಗೆಗಡಲಲ್ಲಿ ತೇಲಿಸುತ್ತಿತ್ತು. ಪುಸ್ತಕ ಬಿಡುಗಡೆ ನಿಮಿತ್ತ ಫ್ಲಾರಿಡಾದಿಂದ ಆಗಮಿಸಿದ್ದ ನಂಜುಡಸ್ವಾಮಿ ಉರುಫ್‌ ನಂಜುಂಡ ಉರುಫ್‌ ಗುಂಡ ಅವರನ್ನೂ , ಅವರ ಹೆಂಡತಿ ಲೀಲಾ ಶಾಮರಾವ್‌ , ಮಗಳು ಸೀತಾ ಮತ್ತು ಅಳಿಯ ಬಿಲ್‌ ಪ್ರೆೃಸ್‌ ಹಾಗೂ ಮೊಮ್ಮಗ ಪುಟಾಣಿ ಅಲೆಕ್ಸ್‌ ಶಾಮರಾವ್‌ ಪ್ರೆೃಸ್‌ ಅವರನ್ನು ರಂಗನಾಥ್‌ ಸಭೆಗೆ ಪರಿಚಯಿಸಿದರು. ಪುಸ್ತಕವನ್ನು ಅಚ್ಚುಕಟ್ಟಾಗಿ ಅಚ್ಚು ಮಾಡುವಲ್ಲಿ ಶ್ರಮಿಸಿದ ಶ್ರೀನಿವಾಸರಾಜು, ಪ್ರಾಣೇಶ್‌ರಾವ್‌ ಹಾಗೂ ಸದಭಿರುಚಿಯ ಓದುಗ ಬಳಗಕ್ಕೆ ಧಾರಾಳ ಧನ್ಯವಾದ ಅರ್ಪಿಸಿದರು. ಕೊನೆಗೊಂದು ಮಾತು ಹೇಳಿದರು :

‘As prof, GVK Rao used to say...This entire function is a conspiracy of good people for good cause’

ಪುಸ್ತಕದ ವಿವರ
ಕಾನನದ ಮಲ್ಲಿಗೆ (ವ್ಯಕ್ತಿಚಿತ್ರಗಳು)
ಲೇಖಕ- ಎಚ್‌.ಕೆ.ನಂಜುಂಡ ಸ್ವಾಮಿ
ಪುಟಗಳು- 12 + 148
ಮೊದಲ ಮುದ್ರಣ- 2001
ಬೆಲೆ- 75 ರುಪಾಯಿ
ಪ್ರಕಾಶಕರು- ಪ್ರಿಸಂ ಬುಕ್ಸ್‌ ಪ್ರೆೃ. ಲಿಮಿಟೆಡ್‌, ನಂ. 1865, 32ನೇ ಕ್ರಾಸ್‌, ಬನಶಂಕರಿ, 2ನೇ ಹಂತ, ಬೆಂಗಳೂರು- 560070. ದೂರವಾಣಿ ಸಂಖ್ಯೆ- (080) 6713979. ಐಎಸ್‌ಬಿಎನ್‌ : 81- 7286-218-0
ಮುದ್ರಕರು- ಕೀರ್ತಿ ಪ್ರಿಂಟರ್ಸ್‌

Post your response to [email protected]

ವಾರ್ತಾ ಸಂ-ಚ-ಯ

‘ನಿಶ್ಯಬ್ದ- ಸಂಗೀತ’ ವೆಂಬ ಅನುಭವ ಲಹರಿ

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X