• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನಂತ ಮೂರ್ತಿ ಸಮೂಹ ಶೋಧನೆಯೇ ಸಮಾರಾಧನೆಯೇ ?

By Staff
|

*ಸತ್ಯವ್ರತ ಹೊಸಬೆಟ್ಟು

Ananth Murthyಇತ್ತೀಚಿನ ದಿನಗಳಲ್ಲಿ ಮೌನಿಯಾಗಿರುವ ಅನಂತ ಮೂರ್ತಿ ಕಳೆದೆರಡು ವರ್ಷಗಳ ಹಿಂದೆ ನಾನಾ ಕಾರಣಗಳಿಗಾಗಿ ಸುದ್ದಿಯಲ್ಲಿದ್ದವರು. ಡಾಲರ್‌ ಕಾಲನಿಯಲ್ಲಿ ಸರಕಾರದಿಂದ ಮನೆ ಮಾಡಿಕೊಂಡರೆಂದು ಅವರ ನೈತಿಕತೆಯನ್ನು ಲಂಕೇಶ್‌ ಪ್ರಶ್ನಿಸಿದ್ದರು. ಗಂಗಾಧರ ಕುಷ್ಠಗಿ ಲಂಕೇಶರ ಮೇಲೆ ಬಂದ ಲೇಖನಗಳನ್ನು ಸಂಪಾದಿಸಿ ‘ತಲೆಮಾರಿನ ತಳಮಳ’ ಎಂಬ ಪುಸ್ತಕ ಹೊರತಂದಾಗ, ಅದರಲ್ಲಿ ತನ್ನ ಲೇಖನಗಳನ್ನು ಬಳಸಿಕೊಂಡಿದ್ದಾರೆಂದು ಆ ಪುಸ್ತಕಕ್ಕೆ ತಡೆಯಾಜ್ಞೆ ತಂದವರು ಅನಂತ ಮೂರ್ತಿ.

ಅನಂತರ ಅನಂತಮೂರ್ತಿ ಅಷ್ಟಾಗಿ ಸುದ್ದಿಯಲ್ಲಿಲ್ಲ. ಜ್ಞಾನ ಪೀಠ ಬಂದಾಗಿದೆ. ಸಿಗಬೇಕಾದ ಸ್ಥಾನಮಾನಗಳೆಲ್ಲ ಸಿಕ್ಕಿವೆ. ಬರೆಯುವಷ್ಟನ್ನು ಬರೆದಾಗಿದೆ. ಒಂದು ಕಾಲದಲ್ಲಿ ನವ್ಯ ಲೇಖಕರ ಮೇಲೆ ಅವರು ಬೀರಿದಷ್ಟು ಪ್ರಭಾವವನ್ನು ಇನ್ನಾರೂ ಬೀರಲಿಲ್ಲ ಅನ್ನುವುದೂ ಸತ್ಯ. ಕೊಟ್ಟಾಯಂ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದೂ ಆಗಿದೆ. ಅನಂತಮೂರ್ತಿ ಮಾತನಾಡುತ್ತಾರೆ. ಎದುರಿಗಿರುವವರನ್ನು ಕನ್‌ವಿನ್ಸ್‌ ಮಾಡುತ್ತಾರೆ. ಮಾಡಲಾಗಿದಿದ್ದರೆ ಕನ್‌ಫ್ಯೂಸ್‌ ಮಾಡುತ್ತಾರೆ. ಅದೆರಡೂ ಆಗದಿದ್ದರೆ ಕನ್‌ಫೆಸ್‌ ಮಾಡಿಕೊಳ್ಳುತ್ತಾರೆ. ಹೀಗಾಗಿ ಸದಾ ನಾಯಕರೂ,ವಿನಯವಂತರೂ ಆಗಿ ಉಳಿದಿದ್ದಾರೆ ಅನ್ನುವ ಮಾತು ಅವರ ಬಗ್ಗೆ ಕೆಲವು ವರ್ಷಗಳ ಹಿಂದೆ ಕೇಳಿ ಬರುತ್ತಿತ್ತು. ಅದು ಕೇವಲ ತಮಾಷೆಯೇ ಆಗಿರಬಹುದು. ಆದರೆ ಅನಂತ ಮೂರ್ತಿ ಬರಹಗಳನ್ನು ಓದಿದವರಿಗೆ ದಟ್ಟವಾಗಿ ಎದ್ದು ಕಾಣುವುದು ಅವರ ಅಬ್ಬರದ ಭಾಷೆ ಹಾಗೂ ಅದರಲ್ಲಿರುವ ನಿಖರತೆ. ಎಷ್ಟು ನಿಜ ಎಂದು ಓದುಗ ಬೆರಗಾಗುವಂತೆ ಬರೆಯಬಲ್ಲ ಮೂರ್ತಿ , ಆ ಬರವಣಿಗೆಯ ಮೂಲಕವೇ ಹಾದಿ ತಪ್ಪಿಸಬಲ್ಲರು ಕೂಡ.

ಈ ಸಾಲುಗಳನ್ನು ಓದಿ :

‘ಕುರುಡು ಪಾಶ್ಚಾತ್ಯೀಕರಣ ಮತ್ತು ಅಂತರರಾಷ್ಟ್ರೀಯತೆಯ ಈ ಕೆಟ್ಟ ದಿನಗಳಲ್ಲಿ ಸಾರ್ವಜನಿಕ ಘಟನೆಗಳು ಮುಟ್ಟಲಾರದ ಒಂದು ಖಾಸಗಿ ಬದುಕಿದೆ ಎಂದು ತಿಳಿಯುವುದೇ ಸಾಧ್ಯವಿಲ್ಲವಾಗಿದೆ. ಆದ್ದರಿಂದ ನಾವು ಲೇಖಕರು ವಿಶೇಷ ವ್ಯಕ್ತಿಗಳೆಂದೂ, ನಮ್ಮ ಏಕಾಕಿತನದಲ್ಲಿ ನಮ್ಮ ಕಲೆಯನ್ನು ಉಜ್ವಲಗೊಳಿಸಬಲ್ಲವರೆಂದೂ ನಾವು ಅಂದುಕೊಂಡರೆ ನಾವು ಜುಜುಬಿ ಕಲಾರಾಧಕರಾಗಿ ಕೊಳೆಯುವುದೇ ಸರಿ. ಬದುಕುವುದೆಂದರೆ ತೊಡಗಿಸಿಕೊಳ್ಳುವುದು. ನಮ್ಮ ಕೈ ಮೀರಿದ ಘಟನೆಗಳಿಗೂ ತುತ್ತಾಗುವುದು. ಆದರೆ ಬರೆಯುವ ಕ್ರಿಯೆಗೆ ದೂರ ನಿಂತು ನೋಡುವ ಅಗತ್ಯವಿದೆ. ಆದರೆ ಹೀಗೆ ದೂರದಿಂದಲೋ, ವೆೆುೕಲಿನಿಂದಲೋ ನೋಡುವುದು ಕಷ್ಟ ಮಾತ್ರವಲ್ಲದೆ ನೈತಿಕವಾಗಿಯೂ ತಪ್ಪು ಎಂದು ಕೆಲವೊಮ್ಮೆ ಅನ್ನಿಸ್ತದೆ’.

ಈ ಆಕರ್ಷಕ ಸಾಲುಗಳ ನಿರರ್ಥಕತೆಯನ್ನು ಗಮನಿಸಿ. ಇದನ್ನು ಅನಂತ ಮೂರ್ತಿ ಯಾವ ಸಂದರ್ಭದಲ್ಲಿ ಹೇಳಿರಬಹುದು ಯೋಚಿಸಿ. ಕೊನೆಯ ಎರಡು ಸಾಲುಗಳಲ್ಲಿ ಕಾಣಿಸುವ ಕಾಣಿಸಿಕೊಂಡಿರುವ ಗೊಂದಲ , ವಿರೋಧಾಭಾಸವನ್ನು ಗಮನಿಸಿ. ಲೇಖಕನ ಅಗತ್ಯ ಹೇಗೆ ಅವನ ನೈತಿಕ ದೋಷವಾಗುತ್ತದೆ ಎಂದು ಕೇಳಿದರೆ ಅವರು ಏನೆಂದು ಉತ್ತರಿಸಬಹುದು ?

ಇದನ್ನು ಹೇಳುವುದಕ್ಕೆ ಕಾರಣ ನಮ್ಮ ಮುಂದಿರುವ ಅನಂತ ಮೂರ್ತಿಯವರ ಮೇಲೆ ಬಂದಿರುವ ಬರಹಗಳನ್ನು ಸಂಗ್ರಹಿಸಿ ಮುರಳೀಧರ ಉಪಾಧ್ಯ ಸಂಪಾದಿಸಿರುವ ಪುಸ್ತಕ ‘ಅನಂತಮೂರ್ತಿ’. ಅನಂತ ಮೂರ್ತಿಯವರ ಸಾಧನೆಗಳ ಸಮೂಹ ಶೋಧ ಎಂದು ಉಪಾಧ್ಯ ಹೇಳಿಕೊಂಡಿದ್ದಾರೆ. ಸಾಧನೆಗಳ ಶೋಧ ನಡೆಯಬೇಕಾಗಿರುವುದು ಮತ್ತೊಬ್ಬರಿಂದ. ಓದುಗ ವಿಮರ್ಶಕರಿಂದ. ಇಲ್ಲಿ ಉಪಾಧ್ಯ ಮೊದಲ ಭಾಗಗಳಲ್ಲಿ ಅನಂತ ಮೂರ್ತಿಯವರು ಬರೆದ ಲೇಖನಗಳನ್ನು ಕೊಡುತ್ತಾರೆ. ಇಡೀ ಪುಸ್ತಕದಲ್ಲಿ ಆನಂತಮೂರ್ತಿ ಬರೆದ ಮೂರು ಲೇಖನಗಳಿವೆ.

ಉಳಿದಂತೆ ಇಲ್ಲಿ ಅನಂತಮೂರ್ತಿಯರ ಬಗ್ಗೆ ಸುಬ್ರಾಯ ಚೊಕ್ಕಾಡಿಯಿಂದ ಹಿಡಿದು ಎಸ್‌.ಆರ್‌. ವಿಜಯ ಶಂಕರ ತನಕ ಅನೇಕರು ಬರೆದ ಲೇಖನಗಳಿವೆ. ಅನಂತ ಮೂರ್ತಿ ಬಗ್ಗೆ ಲಂಕೇಶ್‌ ಬರೆದ ಲೇಖನಗಳಾಗಲೀ ವಿಮರ್ಶೆಯಾಗಲೀ ಇಲ್ಲಿಲ್ಲ. ಹಾಗೆ ನೋಡಿದರೆ ಅನಂತಮೂರ್ತಿಯವರ ಬಗ್ಗೆ ಬಂದ ಅತ್ಯುತ್ತಮ ವಿಮರ್ಶೆ ಬರೆದವರು ಲಂಕೇಶ್‌. ಇಡೀ ಪುಸ್ತಕದಲ್ಲಿ ಅನಂತ ಮೂರ್ತಿ ಅವರ ಕೃತಿಯ ಬಗ್ಗೆ ವಿಮರ್ಶೆಯಿಲ್ಲ , ಬರೀ ಹೊಗಳಿಕೆಯಿದೆ. ಹೀಗಾಗಿ ಇದು ಸಾಧನೆಯ ಶೋಧವಲ್ಲ. ಡಂಗುರ.ಈ ಕಾರಣಕ್ಕಾಗಿಯಾದರೂ ಇದನ್ನು ನೀವು ಓದಬೇಕು. ಪ್ರಕಟಣೆ : ಕರ್ಣಾಟಕ ಸಂಘ, ಪುತ್ತೂರು. ಪುಟ : 534, ಬೆಲೆ : 270 ರೂಪಾಯಿ.

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more