ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ಸುಧಾರಣೆಯ ಜೊತೆಗೆ ಕಾವ್ಯ ಕನ್ನಿಕೆಯ ಆರಾಧನೆ

By Staff
|
Google Oneindia Kannada News

ಬೆಂಗಳೂರು : ‘ಗದ್ಯವನ್ನು ಬರೆಯಲಿಕ್ಕೆ ಗೊತ್ತಿಲ್ಲ . ಪದ್ಯವನ್ನು ಓದಲಿಕ್ಕೆ ಗೊತ್ತಿಲ್ಲ . ಮಹಾಕಾವ್ಯವನ್ನು ಅರ್ಥೈಸಿಕೊಳ್ಳಲಿಕ್ಕೆ ಗೊತ್ತಿಲ್ಲ . ಹೀಗಾಗಿ, ಪಾಮರನಾದ ನನಗೆ ಈ ಕೃತಿಯನ್ನು ಬಿಡುಗಡೆ ಮಾಡುವ ಅರ್ಹತೆ ಎಷ್ಟಿದೆಯೋ ಅರ್ಥವಾಗುತ್ತಿಲ್ಲ’.

ಭಾರತದ ಸಿಲಿಕಾನ್‌ ವ್ಯಾಲಿಯ ರೂವಾರಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ , ಭಾನುವಾರ ತಮ್ಮ ಸಾಹಿತ್ಯ ಅಜ್ಞಾನವನ್ನು ಮುಜುಗರವಿಲ್ಲದೆ ಒಪ್ಪಿಕೊಂಡರು. ಸಂದರ್ಭ - ರಾಜ್ಯ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿಯವರ ಶ್ರೀ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯದ ಉದ್ಘಾಟನಾ ಸಮಾರಂಭ. ಸ್ಥಳ - ರವೀಂದ್ರ ಕಲಾಕ್ಷೇತ್ರ.

ದಿನದ ಇಪ್ಪತ್ತನಾಲ್ಕು ತಾಸುಗಳೂ ಸಾಲದೆನ್ನುವ ಮುಳ್ಳಿನ ಹಾಸಿಗೆಯ ರಾಜಕಾರಣದಲ್ಲಿದ್ದರೂ ಮೊಯ್ಲಿ ಇಂಥ ದೊಡ್ಡ ಕೆಲಸಕ್ಕೆ ಕೈ ಹಚ್ಚಿ ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಆಡಳಿತಗಾರರು, ಪ್ರಗತಿಪರ ಚಿಂತಕರೂ ಆದ ಮೊಯ್ಲಿ ತಮ್ಮ ಅಂತರಂಗದ ಧಾರೆಗಳನ್ನು ಸದಾ ಜೀವಂತವಾಗಿರಿಸಿಕೊಂಡಿದ್ದಾರೆ ಎಂದು ಕೃಷ್ಣ ಶ್ಲಾಘಿಸಿದರು.

ಮಹಾಕಾವ್ಯ ರಚನೆಯನ್ನು ಮೊಯ್ಲಿಯವರ ಪುನರ್ಜನ್ಮ ಎಂದು ಬಣ್ಣಿಸಿದ ಮುಖ್ಯಮಂತ್ರಿಗಳು, ಬಿಡುಗಡೆ ಮಾಡಿದ ಕೃತಿಯ ಮೊದಲ ಪ್ರತಿಯನ್ನು ಮೊಯ್ಲಿ ಅವರ ಪತ್ನಿ ಮಾಲತಿ ಅವರಿಗೆ ಕೃಷ್ಣ ನೀಡಿದರು. ಮೊಯ್ಲಿ ಹಾಗೂ ಮಾಲತಿಯವರ ದಾಂಪತ್ಯಕ್ಕೆ 36 ವರ್ಷಗಳು ತುಂಬಿದ ನೆನಪಿಗಾಗಿ ಈ ಕೃತಿಯನ್ನು ಮಾಹೇಶ್ವರಿ ಪ್ರಕಾಶನ ಹಾಗೂ ಅಂಕಿತ ಪ್ರಕಾಶನಗಳು ಪ್ರಕಟಿಸಿವೆ.

ಪುತ್ತೂರು ನರಸಿಂಹ ನಾಯಕರಿಂದ ಗಮಕ ವಾಚನ

ಶ್ರೀ ರಾಮಾಯಣ ಮಹಾನ್ವೇಷಣಂ ಮಹಾಕಾವ್ಯದ ಆಯ್ದ ಭಾಗಗಳ ಗಮಕ ವಾಚನವನ್ನು ಪುತ್ತೂರು ನರಸಿಂಹ ನಾಯಕರು ವಾಚಿಸಿದರು. ಇದೇ ಸಂದರ್ಭದಲ್ಲಿ ಕೃತಿಯ ಅಹಲ್ಯಾಂತರಂಗ ಭಾಗವನ್ನು ಕೆರೆಮನೆ ಶಂಭು ಹೆಗಡೆ ಯಕ್ಷಗಾನಕ್ಕೆ ಅಳವಡಿಸಿ ಪ್ರದರ್ಶಿಸಿದರು. ಇದೇ ಭಾಗವನ್ನು ಹಂಸಾ ಮೊಯ್ಲಿ ತೋಷ್ನಿವಾಲ್‌ ಅವರು ಭರತನಾಟ್ಯಕ್ಕೆ ಅಳವಡಿಸಿ ಪ್ರದರ್ಶಿಸಿದರು.

ಕೃತಿಯ ವಸ್ತು ಕುರಿತು ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಮಾತನಾಡಿದರೆ, ಕೃತಿಯಲ್ಲಿನ ಯುಗಚಿಂತನೆ ಕುರಿತು ಪ್ರೊ. ಎಂ.ಎಚ್‌. ಚನ್ನಯ್ಯ ಮಾತನಾಡಿದರು. ಡಾ. ಕೆ. ಅನಂತರಾಮು ಕೃತಿಯ ಕಾವ್ಯಾವಲೋಕನ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ ಪ್ರೊ. ಎಲ್‌.ಎಸ್‌. ಶೇಷಗಿರಿರಾವ್‌ ವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X