• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಪ್ಪತ್ತು ದಿನಗಳ ಮುಫತ್‌ ಚಿಂತನೆ, ಬೇದೂರಿನ ಭಟ್ಟರ ಆಸ್ಟ್ರೇಲಿಯನ್‌ ಸಫಾರಿ...

By Staff
|

*ಸತ್ಯವ್ರತ ಹೊಸಬೆಟ್ಟು

ಕೃತಿ - ಆಸ್ಟ್ರೇಲಿಯಾದಲ್ಲಿ ಎಪ್ಪತ್ತು ದಿನಗಳು
ಲೇ- ಟಿ. ಮಹಾಬಲೇಶ್ವರ ಭಟ್ಟ
ಪ್ರ- ಹೇಮಂತ ಸಾಹಿತ್ಯ, ಬೆಂಗಳೂರು
ಪುಟ- 136, ಬೆಲೆ - 100 ರೂಪಾಯಿ


ಕೃತಿಯನ್ನು ಓದುವ ಮೊದಲೇ ವಿಮರ್ಶೆ ಬರೆಯಬೇಕೆಂದು ನಿರ್ಧರಿಸುವ ಅಥವಾ ವಿಮರ್ಶೆ ಬರೆಯಬೇಕೆಂದು ನಿರ್ಧರಿಸಿಯೇ ಕೃತಿಯಾಂದನ್ನು ಓದುವ ಯುವ ವಿಮರ್ಶಕನ ಉತ್ಸಾಹದಿಂದಲೇ ಟಿ. ಮಹಾಬಲೇಶ್ವರ ಭಟ್ಟರು ಆಸ್ಟ್ರೇಲಿಯಾಕ್ಕೆ ಹೊರಟಿದ್ದಾರೆ. ಈ ಸಂಚಿನಲ್ಲಿ ಅವರ ಮಿತ್ರರ ಪಾಲೂ ಇದ್ದಂತಿದೆ. ನೀವು ಆಸ್ಟ್ರೇಲಿಯಾಕ್ಕೆ ಎಲ್ಲರಂತೆ ಹೋಗಿ ಬರುವವರಲ್ಲ. ಅಲ್ಲಿಯ ಜನಜೀವನ, ಕೃಷಿ, ಸರಕಾರದ ವ್ಯವಸ್ಥೆ ಇವೆಲ್ಲವನ್ನೂ ತಿಳಿದು ಒಂದು ಪುಸ್ತಕವನ್ನು ಬರೆಯಿರಿ ಎಂದು ಬೀಳ್ಕೊಡುಗೆ ಸಮಾರಂಭದ ಸತ್ಕಾರ ಕೂಟದಲ್ಲಿ ಮಿತ್ರರೂ ಆತ್ಮೀಯರೂ ಬಂಧುಗಳೂ ಹೇಳಿದ್ದನ್ನು ಭಟ್ಟರು ಪಾಲಿಸಬೇಕಾಗಿತ್ತು. ಎಷ್ಟೆಂದರೂ ಅನ್ನದ ಋಣ.

ಕೃತಿಯನ್ನು ಓದುತ್ತಿದ್ದಂತೆ ಭಟ್ಟ ರ ಸಖ ಬಾಂಧವರು ಅಂಥ ಪ್ರಮಾದವನ್ನೇನೂ ಮಾಡಿಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಸಾಕಷ್ಟು ಲವಲವಿಕೆ ಮತ್ತು ಅಧ್ಯಯನ ಶೀಲತೆ ಎರಡನ್ನೂ ಬೆರೆಸಿ, ಭಟ್ಟರು ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ತೀರಾ ಖಾಸಗಿಯಾಗಿಯಾಗುವಂಥ ಅನುಭವಗಳು ಸಾರ್ವತ್ರಿಕವಾಗುವಂತೆ ಮಾಡಿದ್ದಾರೆ. ಗೊರೂರರ ಪ್ರವಾಸ ಕಥನದಿಂದ ಪ್ರಭಾವಿತರಾದದ್ದೂ ಭಟ್ಟರ ಪ್ರವಾಸ ಕಥನದ ಸರಳತೆಗೆ ಕಾರಣವಿರಬಹುದು.

ಭಟ್ಟರು ಹುಟ್ಟಿದ್ದು ಶುದ್ಧ ಹಳ್ಳಿಯಲ್ಲಿ. ಓದಿದ್ದು ಎಸ್ಸೆಸ್ಸೆಲ್ಸಿ. ಹೀಗಾಗಿ ಅವರಿಗೆ ವಿದೇಶ ಬಿಡಿ, ಆಂಧ್ರ ಪ್ರದೇಶಕ್ಕೆ ಹೋಗಿಬರುವುದೂ ಖಚಿತವಿರಲಿಲ್ಲ. ಆದರೆ ಕಿರಿಯ ಮಗಳು ಭಾಗ್ಯಳ ಭಾಗ್ಯ ವಿಶೇಷದಿಂದ, ಆಕೆಯ ಬಾಣಂತನದ ವಿಶೇಷ ಕರ್ತವ್ಯಾಧಿಕಾರಿಯಾಗಿ ಭಟ್ಟ ದಂಪತಿಗಳು ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಾಗಿ ಬಂತು.

‘ಆಸ್ಟ್ರೇಲಿಯಾದಲ್ಲಿ ಎಪ್ಪತ್ತು ದಿನಗಳು’ ಕೃತಿಯ ಮೊದಲ ಇಪ್ಪತ್ತು ಪುಟಗಳು ವಂದನಾರ್ಪಣೆ ಹಾಗೂ ಪರಿಚಯ ಭಾಷಣಕ್ಕೆ ಮೀಸಲಾಗಿದೆ. ನಂತರದ ಪುಟಗಳಲ್ಲಿ ಭಟ್ಟರು ಬರೆಯುತ್ತಾರೆ :

‘ಹಾರುವ ಮುನ್ನ ಪ್ರತಿ ಸೀಟಿನಲ್ಲಿರುವ ಬೆಲ್ಟ್‌ಗಳನ್ನು ಎಲ್ಲಾ ಪ್ರಯಾಣಿಕರೂ ಹಾಕಿಕೊಳ್ಳಬೇಕು. ವಿಮಾನ ನಿಲ್ದಾಣವನ್ನು ಬಿಡುವಾಗ ಬಹಳ ದೂರ ನೆಲದಲ್ಲೇ ಓಡುತ್ತದೆ. ಓಡಿ ಓಡಿ ನಂತರ ನೆಲ ಬಿಡುತ್ತದೆ. ನೆಲದಲ್ಲಿ ಓಡುವಾಗಿನ ಶಬ್ದ ನೆಲಬಿಟ್ಟು ಹಾರುವಾಗಿನ ಶಬ್ದ ಬೇರೆಯಾಗಿಯೇ ಇರುವುದು... ’

ಭಟ್ಟರ ಮುಗ್ಧತೆ ಕುತೂಹಲಕಾರಿಯಾಗಿದೆ. ಅಂತರಿಕ್ಷದಲ್ಲಿ ಹಾರಾಟ ಎಂಬ ಮೊದಲ ಅಧ್ಯಾಯದ ತುಂಬ ಇಂಥ ವಿವರಗಳೇ ಇವೆ. ಮುಂದಿನ ಅಧ್ಯಾಯದಲ್ಲಿ ಭಟ್ಟರು ಸಿಡ್ನಿಯ ಜನಜೀವನದ ಬಗ್ಗೆ ಹೇಳುತ್ತಾರೆ. ಅಲ್ಲಿಯ ಒಟ್ಟು ಜನಸಂಖ್ಯೆ ಎರಡೂವರೆ ಕೋಟಿಗೆ ಕಡಿಮೆ ಎಂಬ ವಿಷಾದಾಶ್ಚರ್ಯಗಳೊಂದಿಗೆ ಆರಂಭವಾಗುವ ಅಧ್ಯಾಯದಲ್ಲಿ ಧೂಳಿಲ್ಲದ ವಿಶಾಲ ರಸ್ತೆಗಳ ಪ್ರಸ್ತಾಪವೂ, ಅಲ್ಲಿನ ಟ್ರಾಫಿಕ್‌ ವ್ಯವಸ್ಥೆಯ ವಿವರವೂ ಆಸ್ಟ್ರೇಲಿಯನ್ನರ ಹೊಗಳಿಕೆಯೂ ಇದೆ. ಮುಂದಿನ ಅಧ್ಯಾಯಗಳಲ್ಲಿ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ತಾವು ಬೇಟಿ ನೀಡಿದ್ದನ್ನು ಭಟ್ಟರು ವಿವರಿಸುತ್ತಾರೆ. ಮುರುಗನ್‌ ಟೆಂಪಲ್‌ನಿಂದ ಹಿಡಿದು ಒಲಂಪಿಕ್‌ ಕ್ರೀಡಾಂಗಣದ ತನಕ, ಅಲ್ಲಿಯ ಕೃಷಿ, ಅಲ್ಲಿ ಭೇಟಿಯಾದ ಧಾರವಾಡದ ಹಳ್ಳಿಯಾಂದರಿಂದ ಹೋಗಿ ನೆಲೆಸಿದ ವಿಜಯಕುಮಾರ ಹಲಗಲಿಯವರಂಥವರ ಸಖ್ಯದ ಚಿತ್ರಣವಿದೆ. ಆಸ್ಟ್ರೇಲಿಯಾದಲ್ಲಿ ಊಟಕ್ಕೆ ಕರೆದ ಆರೋಡಿ ಮಂಜಯ್ಯನವರ ಸೊಸೆ ಉಷಾ ಗುರುಮೂರ್ತಿ, ಅಲ್ಲಿ ಸಿಕ್ಕಿದ ಪ್ರಭಾಕರ ಭಟ್‌, ಅಳಿಯನ ಗೆಳೆಯ ಬಾಬು, ಹೊಸ ಪರಿಚಯ ದಿವಾಕರ ಪಂಡಿತ್‌, ಶಿರಸಿಯ ಪ್ರಕಾಶ್‌ ಭಟ್‌... ಎಲ್ಲರ ಬಗ್ಗೆಯೂ ಭಟ್ಟರು ಮೆಚ್ಚುಗೆಯ ಮಾತಾಡಿದ್ದಾರೆ.

ಕೊನೆಯ ಪ್ಯಾರಾ ಹೀಗಿದೆ :

ಕಳೆದ ಮೂರು ತಿಂಗಳಿಂದ ಬೆಳೆದಿದ್ದ ನನ್ನ ತಲೆಗೂದಲನ್ನು ಕತ್ತರಿಸಲು ಕ್ಷೌರಿಕನಿಗೆ ನನ್ನ ತಲೆಯನ್ನು ಕೊಟ್ಟಿರಲಿಲ್ಲ. ಊರಿನಲ್ಲಿದ್ದಾಗ ತಿಂಗಳಿಗೊಮ್ಮೆ ಕ್ಷೌರಿಕ ನನ್ನ ತಲೆಯ ಮೇಲೆ ಮೇಸೆ ಕತ್ತರಿ ಆಡಿಸುತ್ತಿದ್ದ. ಆಸ್ಟ್ರೇಲಿಯಾದಲ್ಲಿ ಕಟಿಂಗ್‌ ಮಾಡುವುದಕ್ಕೆ ಒಬ್ಬರಿಗೆ 15 ಡಾಲರ್‌. ಭಾರತೀಯ ಹಣದಲ್ಲಿ 405 ರೂಪಾಯಿ ಆಗುತ್ತದೆ. ನನ್ನ ತಲೆಗೂದಲು ಇಷ್ಟೊಂದು ಬೆಲೆ ಬಾಳುವ ವಸ್ತು ಅಲ್ಲ ಎಂದುಕೊಂಡು ಈವರೆಗೂ ಅಲ್ಲಿಯ ಕ್ಷೌರಿಕನಿಗೆ ನನ್ನ ತಲೆಕೊಡಲು ಮನಸ್ಸಾಗಿರಲಿಲ್ಲ. ಬಂದವನೇ ಮೊದಲು ಮಾಡಿದ ಎರಡು ಕೆಲಸಗಳೆಂದರೆ, ಇಲ್ಲಿನ ಅಭ್ಯಾಸದಂತೆ ಮೊದಲು ರಸ್ತೆ ಮೇಲೆ ಉಗುಳಿದ್ದು ಹಾಗೂ ಕ್ಷೌರಿಕನಿಗೆ ನನ್ನ ತಲೆಕೊಟ್ಟದ್ದು.

ಟಿ. ಮಹಾಬಲೇಶ್ವರ ಭಟ್ಟರ ಈ ಪ್ರವಾಸ ಕಥನದಲ್ಲಿ ಒಳನೋಟಗಳಿಲ್ಲ. ಹಾಗಿರುವುದೇ ಅನುಕೂಲವೂ ಹೌದು. ಅವರು ಸರಳವಾಗಿ, ಗೆಳೆಯನೊಬ್ಬನಿಗೆ ತನ್ನ ಅನುಭವ ಹೇಳುವಂತೆ ಬರೆಯುತ್ತಾ ಹೋಗಿದ್ದಾರೆ. ಅಲ್ಲಿ ಜಾಣತನವಾಗಲೀ, ಭಾಷಾ ಚಮತ್ಕಾರವಾಗಲೀ ಕಾಣುವುದಿಲ್ಲ.

ಭಟ್ಟರು ಗುಲಾಬಿ, ತೋರಣ ಎಂಬೆರಡು ಕಥಾ ಸಂಕಲನಗಳನ್ನೂ, ಋತುಗಾನ, ಹೂಮಾಲೆಯೆಂಬ ಕವಿತಾ ಸಂಕಲನವನ್ನೂ, ಹೊಸೂರಿನ ಕೆಲವರು ಎಂಬ ಪ್ರಬಂಧ ಸಂಕಲನವನ್ನೂ ಹೊರತಂದಿದ್ದಾರೆ. ಅವರ ಕೃತಿಗಳ ಪಟ್ಟಿಯಲ್ಲಿ ಬೇವು ಬೆಲ್ಲ, ಅಂಕಣಬರಹ ಎಂಬಂತೆ, ನನ್ನ ಬದುಕು ಎಂಬ ಕೃತಿಯ ಮುಂದೆ ಅಪೂರ್ಣ

ಎಂಬುದು ನಗೆ ತರಿಸುವಂತಿದೆ. ಅದು ಸಾಹಿತ್ಯ ಪ್ರಕಾರವೋ, ಅವರ ಬದುಕಿನ ಬಗ್ಗೆ ಹೇಳಿಕೆಯೋ ಗೊತ್ತಾಗುವುದಿಲ್ಲ. ಐವತ್ತನೇ ವರ್ಷಕ್ಕೊಮ್ಮೆ, ಎಪ್ಪತ್ತನೇ ವರ್ಷಕ್ಕೊಮ್ಮೆ ಅಭಿನಂದನಾ ಗ್ರಂಥ ಸಮರ್ಪಣೆಯಾಗಿದೆ. ಆಸ್ಟ್ರೇಲಿಯಾದಲ್ಲಿ 70 ದಿನಗಳು ಕೃತಿಗೆ ಇತ್ತೀಚೆಗೆ, ಬೇವು ಬೆಲ್ಲಕ್ಕೆ ಹಿಂದೊಮ್ಮೆ - ಹೀಗೆ ಗೊರೂರು ಸಾಹಿತ್ಯ ಪ್ರಶಸ್ತಿ ಕೃತಿಯನ್ನು ಅವರು ಎರಡು ಬಾರಿ ಗಳಿಸಿದ್ದು ಮಾತ್ರ ಕೊಂಚ ಅನುಮಾನಾಸ್ಪದ. ಆದರೆ ನೀವು ಮತ್ತೂರು ಕೃಷ್ಣ ಮೂರ್ತಿಯವರನ್ನು ನಂಬುವವರಾಗಿದ್ದರೆ ಕೇಳಿ, ಭಟ್ಟರು ಉತ್ತಮ ಬರಹಗಾರರ ಸಾಲಿಗೆ ಎಂದೋ ಸೇರಿಯಾಗಿದೆ !

ಆದರೆ ನಿಮಗೆ ತಮಾಷೆ ಬೇಕಿದ್ದರೆ, ದೊಡ್ಡರಂಗೇಗೌಡರ ಹೇಳಿಕೆಯಾಂದನ್ನು ನೋಡಬಹುದು. ತಾವು ಧೀಮಂತ ಚೈತನ್ಯಗಳ ಸಂಸರ್ಗದಲ್ಲಿ ಕಂಡ ಉಜ್ವಲ ಬೆಳಕನ್ನು ವಾಚಕರ ಅಂತರಂಗಕ್ಕೆ ಹಾಯಿಸುವ ಈ ಸಾಹಿತ್ಯ ಪರಿಚಾರಿಕೆಯಲ್ಲಿ ಸಂಸ್ಕೃತಿ ಪ್ರಸಾರವೇ ಸದಾಶಯವಾಗಿದೆ. ಸತ್ಯದರ್ಶಿ ಶ್ರೀ ಮಹಾಬಲೇಶ್ವರ ಭಟ್ಟರಲ್ಲಿ ಸತ್‌ ಚಿಂತನೆಗಳು ಧಾರಾಳವಾಗಿವೆ!

ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more