ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ದಿವ್ಯ’ದ ಮೂಲಕ ಹೆಡೆಯೆತ್ತಿರುವ ‘ಭವ’ದಲ್ಲಿ ಭಂಗಗೊಂಡ ಅನಂತ ಪ್ರತಿಭೆ

By Staff
|
Google Oneindia Kannada News

‘ಹಸಿದ ಹಳ್ಳಿಯವನೊಬ್ಬ ಅಮೇರಿಕಾಗೆ ಹೋಗಿ ನೆಲೆ ಕಂಡುಕೊಳ್ಳಲು ಸಾಧ್ಯವೆ!?
ಅದೇ ಪಕ್ಷಿಗಳನ್ನು ನೋಡಿ, ಆಹಾರದ ಕೊರತೆ ಬಿದ್ದಾಗ ಸಾವಿರಾರು ಮೈಲು ದೂರವಾದರೂ ಸರಿ ವಲಸೆ ಹೋಗುತ್ತವೆ. ತಮ್ಮದಲ್ಲದ ನೆಲದಲ್ಲಿ ಗೂಡು ಕಟ್ಟುತ್ತವೆ, ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ನಡೆಸುತ್ತವೆ. ಪರಿಸ್ಥಿತಿ ಸುಧಾರಿಸಿದ ನಂತರ ತವರಿಗೆ ವಾಪಸ್ಸಾಗುತ್ತವೆ.

ಪಕ್ಷಿಗಳಿಗೆ ಸಾಧ್ಯವಾದದ್ದು ಮನುಷ್ಯರ ನಡುವೆ ಸಾಧ್ಯವಾಗುವುದೇ ಇಲ್ಲ . ಹಾಗಾದಲ್ಲಿ ಜಾಗತಿಕ ಹಳ್ಳಿ ಎನ್ನುವ ಪರಿಕಲ್ಪನೆಗೆಲ್ಲಿಯ ಅರ್ಥ’. ಜಾಗತೀಕರಣದ ಹುಸಿ ಭ್ರಮೆಗಳನ್ನು ಅನಂತಮೂರ್ತಿ ಬಿಡಿಸಿಡುವುದು ಈ ರೀತಿ. ಜಾಗತೀಕರಣದ ಮಾತು ಬಂದಾಗಲೆಲ್ಲ ಅನಂತಮೂರ್ತಿಯವರ ಮಾತುಗಳು ಹಿತ್ತಲತ್ತ ಹೊರಳುತ್ತವೆ. ಪ್ರಚಲಿತ ಸಮಸ್ಯೆಗಳಿಗವರು ಗಾಂಧಿಯಲ್ಲಿ ಪರಿಹಾರ ಹುಡುಕುತ್ತಾರೆ. ಭಾನುವಾರ ಬಿಡುಗಡೆಯಾಗಲಿರುವ ಅನಂತಮೂರ್ತಿಯವರ ಹೊಸ ಕಾದಂಬರಿ ‘ದಿವ್ಯ’ದ ತಿರುಳು ಕೂಡ ಇದೇನೇ. (ಅಕ್ಷರ ಪ್ರಕಾಶನ ಪ್ರಕಟಿಸಿರುವ ‘ದಿವ್ಯ’ ಭಾನುವಾರ ಬೆಂಗಳೂರಿನ ಬನಶಂಕರಿ ಬಡಾವಣೆಯಲ್ಲಿರುವ ಸುಚಿತ್ರಾ ಚಲನಚಿತ್ರಾ ಅಕಾಡೆಮಿ ಸಭಾಂಗಣದಲ್ಲಿ ಬಿಡುಗಡೆಯಾಗುತ್ತಿದೆ).

ಜಾಗತೀಕರಣದ ಬಗ್ಗೆ , ಅದರ ಅರ್ಥಹೀನತೆಯ ಬಗ್ಗೆ , ಅದು ಉಂಟು ಮಾಡುವ ದ್ವಂದ್ವಗಳ ಬಗ್ಗೆ ಅನಂತಮೂರ್ತಿ ಯೋಚಿಸುತ್ತಿರುವುದು ಇತ್ತೀಚೆಗೇನಲ್ಲ . ಹತ್ತು ವರ್ಷಗಳ ಹಿಂದೆ ಬರೆದ ‘ಸೂರ್ಯನ ಕುದುರೆ’ ಕಥೆಯಲ್ಲೇ ಅನಂತಮೂರ್ತಿ ಕಾಲದ ಸಂಘರ್ಷಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದರು. ಅವರೇ ಹೇಳುವಂತೆ, ಜಾಗತೀಕರಣ ಅವರನ್ನು ಕಾಡುತ್ತಿರುವ ದೊಡ್ಡ ರೂಪಕ. ಸೂರ್ಯನ ಕುದುರೆಯ ನಂತರ ಈ ರೂಪಕಕ್ಕೆ ಒಂದು ರೂಪ ದಕ್ಕಿದ್ದು ‘ದಿವ್ಯ’ದ ಮೂಲಕ.

ದಿವ್ಯದ ಅನನ್ಯತೆಯಾದರೂ ಏನು? ಅದರ ಅಗತ್ಯವಾದರೂ ಎಂಥದ್ದು?

ದಿವ್ಯದ ಕಥೆ ಹೊಸತೇನೂ ಅಲ್ಲ . ಅಲ್ಲಿನ ಪಾತ್ರಗಳು ಕೂಡ ಈ ಮುನ್ನ ಅನಂತಮೂರ್ತಿಯವರ ಇತರ ಕೃತಿಗಳಲ್ಲಿ ಯಾವುದೋ ರೂಪದಲ್ಲಿ ಬಂದು ಹೋಗಿರುವಂಥವೇ ಆಗಿವೆ. ಆದರೆ, ದಿವ್ಯದ ಹೆಚ್ಚುಗಾರಿಕೆಯಿರುವುದು ಜಾಗತೀಕರಣದ ಸಂದರ್ಭದಲ್ಲಿ ಈ ಕಾಲದ ಅಗತ್ಯಗಳನ್ನು ಕುರಿತು ಚಿಂತಿಸುವಲ್ಲಿ ಹಾಗೂ ಚಿಂತನೆಗೆ ಹಚ್ಚುವಲ್ಲಿ . ರಾಜಕೀಯವಾಗಿ, ತಾತ್ವಿಕವಾಗಿ ಅತೃಪ್ತಿ ಮೂಡಿಸಿದ ಜಾಗತೀಕರಣದಿಂದ ಭಾಷೆ, ಸಂಸ್ಕೃತಿಗೆ ಅಪಾಯ ಎನಿಸಿತು. ಈ ಕುರಿತು ನನ್ನಲ್ಲಿ ಮೂಡಿದ ಅತೃಪ್ತಿಯೇ ದಿವ್ಯ ಎನ್ನುತ್ತಾರೆ ಅನಂತಮೂರ್ತಿ.

ಬಾಲವಿಧವೆಯಾಬ್ಬಳು ಚಿಗುರಿಗೇ ಮುರುಟಿಹೋದ ತನ್ನ ಬದುಕನ್ನು ಆಧುನಿಕ ಮನೋಭಾವದ ಶಿಕ್ಷಕನಲ್ಲಿ ಕಂಡುಕೊಳ್ಳಲು ಪಡುವ ಪ್ರಯತ್ನ, ಆ ನಿಟ್ಟಿನಲ್ಲಿ ಎದುರಾಗುವ ತಾಕಲಾಟ ದಿವ್ಯದ ವಸ್ತು . ಪ್ರಪಂಚ ಅರಿಯುವ ಮುನ್ನವೇ ಗಂಡನನ್ನು ಕಳೆದುಕೊಂಡ ನತದೃಷ್ಟೆ ಇಲ್ಲಿನ ಕಥಾನಾಯಕಿ. ಅಪ್ಪನೋ ಸಂಪ್ರದಾಯದ ತೊನ್ನು ಹತ್ತಿದ ಶತ ಒರಟ, ಕ್ರೂರಿಯೆಂದರೂ ಆದೀತು. ಆದರೆ, ಕೇಶಮುಂಡನ ಮಾಡಿಸುವಲ್ಲಿ ಮಗಳಿಗೆ ವಿನಾಯಿತಿ ತೋರುವ ಆ ಕಲ್ಲು ಮನಸ್ಸು ಯಾವುದೋ ಒಂದು ಸಂದರ್ಭದಲ್ಲಿ ಮಗಳು ಶಾಲೆಯ ಮೆಟ್ಟಿಲು ಹತ್ತಲೂ ಅನುಮತಿಸುತ್ತದೆ. ಪರಿಣಾಮವಾಗಿ ಹುಡುಗಿ ಬಯಲಿನ ಬೆರಗಿಗೆ ಸಾವಿರ ಕಣ್ಣಿನ ನವಿಲಾಗುತ್ತಾಳೆ.

Dr U.R.Ananthmurthyಶಾಲೆಯ ಮಾಸ್ತರ ಅವಳ ಹೆಣ್ತನವನ್ನು ಎಚ್ಚರಿಸುತ್ತಾನೆ. ಅವಳ ಕನಸುಗಳಿಗೆ ಆತ ಕಣ್ಣಾಗುತ್ತಾನೆ, ಹೊಸತೊಂದು ಜಗತ್ತು - ವಿಚಾರಗಳ ಕನ್ನಡಿಯಾಗುತ್ತಾನೆ. ಕಾಡಿನ ದಾರಿಯಲ್ಲಿ ಇಬ್ಬರೂ ಏಕವಾಗುತ್ತಾರೆ. ಕೊನೆಗೆ, ಅಪ್ಪನ ಕೆಂಪು ಕಣ್ಣುಗಳಿಂದ ಮಾಸ್ತರನ ಆಸರೆಗೆ ಜಾರುವ ಹುಡುಗಿ, ಅವನೊಟ್ಟಿಗೆ ನಗರಕ್ಕೆ ಹಾರಲು ಸಿದ್ಧವಾಗುತ್ತಾಳೆ. ..

ಒಂದು ಸಿನಿಮಾ ಕಥೆಯಲ್ಲ ..

ಮಲೆನಾಡಿನ ಮಡಿಲಿನಲ್ಲಿ ಜರುಗುವ ಈ ಕಥೆ ಥೇಟ್‌ ಒಂದು ಸಿನಿಮಾ ಕಥೆಯಂತೆಯೇ ಓದಿಸಿಕೊಳ್ಳುತ್ತದೆ. ಅನಂತಮೂರ್ತಿಯವರಿಗೆ ಆಪ್ತವಾಗಿ ಕಥೆ ಹೇಳುವ ಕಲೆಯೂ ಕರಗತವಾಗಿದೆ. ಆದರೆ, ಈ ರೀತಿ ಕಥೆ ಓದಿದರೆ ದಿವ್ಯ ದಕ್ಕುವಂಥದ್ದಲ್ಲ . ಅಲ್ಲಲ್ಲಿ ನಿಂತು, ಹಿನ್ನೋಟವನ್ನು ಅರಗಿಸಿಕೊಂಡು ಮುನ್ನೋಟಕ್ಕೆ ಸಿದ್ಧತೆ ನಡೆಸುವ ತಾಳ್ಮೆ ದಿವ್ಯದ ಓದಿಗೆ ಬೇಕು. ಏಕೆಂದರೆ ಮೇಲ್ನೋಟಕ್ಕೆ ಕಾಣುವಂತೆ ದಿವ್ಯ ಪ್ರೇಮಿಗಳ ಕಥೆಯಲ್ಲ . ಕೆಲವರು ಅಭಿಪ್ರಾಯ ಪಡುವಂತೆ ಅದು ಚರಿತ್ರೆಯ ಮರುಸೃಷ್ಟಿಯೂ ಅಲ್ಲ . ದಿವ್ಯ ಈ ಹೊತ್ತಿನ ನಮ್ಮ ಕಥೆ, ನಾವು ಬದುಕುತ್ತಿರುವ ಕಥೆ.

ಅನಂತಮೂರ್ತಿ ತಮ್ಮ ಮಾತುಗಳಲ್ಲಿ ಧ್ಯಾನ ಎನ್ನುವ ಶಬ್ದವನ್ನು ಆಗಾಗ ಬಳಸುವುದುಂಟು. ಇಂಥ ಧ್ಯಾನಸ್ಥ ಸ್ಥಿತಿಯಿಂದಲೇ ದಿವ್ಯ ಸೃಷ್ಟಿಯಾಗಿದೆ ಎನ್ನುವುದು ಈಗಾಗಲೇ ದಿವ್ಯವನ್ನು ಅರಗಿಸಿಕೊಂಡ ವಿಮರ್ಶಕರ ಮಾತು. ‘ಭವ’ದಲ್ಲಿ ಭಂಗಗೊಂಡಿದ್ದ ಅನಂತಮೂರ್ತಿಯವರ ಪ್ರತಿಭೆ ‘ದಿವ್ಯ’ದಲ್ಲಿ ಮತ್ತೆ ಉಜ್ವಲಗೊಂಡಿದೆ ಅನ್ನುವವರೂ ಉಂಟು. ಅನಂತಮೂರ್ತಿ ಅವರನ್ನು ಕೇಳಿದರೆ, ಸದ್ಯಕ್ಕೆ ದಿವ್ಯ ನನ್ನ ಅತ್ಯುತ್ತಮ ಕೃತಿ ಎನ್ನುತ್ತಾರೆ.

ಬಲ್ಲಾಳರಿಗೆ ವಯಸ್ಸಾಗಿದೆ. ಭೈರಪ್ಪನವರು ಸುಸ್ತಾಗಿದ್ದಾರೆ. ದೇವನೂರು ಕಳೆದುಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಕಾದಂಬರಿ ಲೋಕ ಮಂಕಾಗಿರುವ ಹೊತ್ತಿನಲ್ಲಿ ಅನಂತಮೂರ್ತಿಯವರ ದಿವ್ಯ ಹೊರ ಬೀಳುತ್ತಿದೆ. ಅಂದಹಾಗೆ, ದಿವ್ಯ ಎಂದರೇನು ಗೊತ್ತಾ? ದಿವ್ಯ ಅಂದರೆ ಅಲೌಕಿಕ ಸಾಕ್ಷಾತ್ಕಾರದ ಸೂಚಕ. ಪಣ, ಪರೀಕ್ಷೆ ಅನ್ನುವ ಅರ್ಥಗಳೂ ಉಂಟು ಎನ್ನುತ್ತದೆ ಬೆನ್ನುಡಿ.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X