ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೇ ಬಳಸಲು ಇಷ್ಟವಿಲ್ಲದ ಭಾಷೆ ನಮಗೇಕೆ ಹೇರುತ್ತೀರಿ?

By Staff
|
Google Oneindia Kannada News

ಪರಾವಲಂಬಿತನವನ್ನು ಬಿಟ್ಟು ಸ್ವಾವಲಂಬಿಯಾಗಬೇಕಾದ ಅಗತ್ಯವಿದೆ ಎನ್ನುವುದನ್ನು ಅವರ ‘ಸೆಲ್ಫ್‌ ಸ್ಟಾರ್ಟರ್‌’ ಪ್ರತಿಮೆಯಲ್ಲಿ ಬಿಂಬಿಸುತ್ತಾರೆ. ಆತ್ಮ ನಿಂದನೆಯ ಧಾಟಿಯಲ್ಲಿನ ಈ ಕವಿತೆಯ ಸಾಲುಗಳು ಹೀಗಿವೆ -

‘ನಾನು ಸೆಲ್ಫ್‌ ಸ್ಟಾರ್ಟರ್‌ ಆಗುವುದು ಯಾವಾಗ ?
ಕುದುರೆಯ ಕಸಿನ್‌ಗಾದಷ್ಟು ವಯಸ್ಸು,
ಹುಟ್ಟಿ ಬೆಳೆದ ನಾಡಿನ ಹವಾನಲ್ಲಿ
ಸಾವಿರಾರು ಡಾಲರ್‌ ಸಮಾ ಖರ್ಚಿನಲ್ಲಿ
ದಿನವಿಡೀ ಅವಿರತ ಶ್ರಮದ ಹಣ್ಣ ತಿರುಳು ಅಂಗೈನಲ್ಲಿ
ಅನುಭವದ ಸೊಂಪಾದ ಬೆಳೆ, ಕಳೆ ಇದ್ದೂ
ಹೊತ್ತು ಪರಿಮಳವ ಅರಿಯದ ಹುಂಬ
ಸ್ವಾರಂಭಿಯಾಗುವುದು ಯಾವಾಗ ? ’
- ಎಂದು ?

ಸುಪ್ತ ಶಕ್ತಿ , ಪ್ರತಿಭೆಗಳಿದ್ದರೂ ಕಂಡು ಕೊಳ್ಳುವ, ತನ್ನ ಒಳಗನ್ನು ಇಣುಕಿ ನೋಡುವ ಹುಮ್ಮಸ್ಸಿಲ್ಲ.

ದೇಶಾಭಿಮಾನದಂತೆ ಭಾಷಾಭಿಮಾನವೂ ಇರುವುದಾದರೂ ಕೆಲವೊಮ್ಮೆ ಹುಸಿಯೆನಿಸುತ್ತದೆ. ದೊಡ್ಡ ದೊಡ್ಡ ಮಾತುಗಳಲ್ಲಿ ಕನ್ನಡದ ಬಗ್ಗೆ ಮಾತಾಡುತ್ತೇವೆ. ಅನುಷ್ಠಾನದಲ್ಲಿ ಮಾತ್ರ ಹಿಂದೆ ಉಳಿಯುತ್ತೇವೆ. ಹಬ್ಬ , ಆಚರಣೆಗಳಲ್ಲಿ ಮಾತ್ರವೇ ಭಾಷೆಯ ಒಲವನ್ನು ಎತ್ತಿ ತೋರುತ್ತೇವೆ. ಮತ್ತೆ ಮರೆಯುತ್ತೇವೆ. ತಾವೇ ಮಾತಾಡ ಬಯಸದ , ಮಾತನಾಡದ ಮಾತೃ ಭಾಷೆಯನ್ನು ನಿರೀಕ್ಷಿಸುವ ತಂದೆ ತಾಯಿಗಳ ಆತ್ಮ ಸಾಕ್ಷಿಗೇ ಸವಾಲಿನಂತೆ.

‘ನಿಮಗೇ ಬಳಸಲು ಇಷ್ಟವಿಲ್ಲದ ಭಾಷೆ
ನಮಗೇಕೆ ಹೇರುತ್ತೀರಿ ’
- ಮಂಗಳಾರತಿ

ಎನ್ನುವ ಪ್ರಶ್ನೆಗೆ ತಂದೆ ತಾಯಿಗಳಿಂದ ಬರುವ ಉತ್ತರ ಮೌನವಲ್ಲದೇ ಬೇರೇನೂ ಅಲ್ಲ.

ಹರಿಹರೇಶ್ವರ ಅವರ ಕವಿತೆಗಳಲ್ಲಿ ಇಂತಹ ಗಂಭೀರ ಚಿಂತನೆಗಳ ಜೊತೆಗೆ ತಿಳಿಹಾಸ್ಯ, ನಾಟಕೀಯತೆಗಳು ಹೊಚ್ಚ ಹೊಸ ತಂಗಾಳಿಯ ಸ್ಪರ್ಶದ ಅನುಭವವನ್ನು ನೀಡುತ್ತವೆ. ನಾಟಕೀಯತೆ, ಮೊನಚು ವ್ಯಂಗ್ಯಗಳಿಗೆ ‘ಖಾಲಿ ಇದೆ, ಉಪಾಧ್ಯಕ್ಷ ಸ್ಥಾನ ’ ಒಂದು ಉತ್ತಮ ಉದಾಹರಣೆ . ಸಂಘ, ಸಂಘಟನೆ, ಸಾಹಿತ್ಯ ಅದೂ ಇದೂ ಅಂತ ನಿಸ್ಪೃಹತೆಯಿಂದ ಕೆಲಸ ಮಾಡುವ ಒಬ್ಬನನ್ನು ಹೊಗಳುತ್ತಾ , ಅವನ ಪ್ರಾಮಾಣಿಕತೆ, ಸಾಮರ್ಥ್ಯಗಳನ್ನು, ಆತನ ಹೆಂಡತಿ ಮಕ್ಕಳನ್ನು ಹೊಗಳುತ್ತಲೇ ಅವನನ್ನು ಬಿಟ್ಟರೆ ಉಪಾಧ್ಯಕ್ಷರಾಗಲು ಬೇರೆ ಅರ್ಹ ವ್ಯಕ್ತಿ ಇಲ್ಲವೇ ಇಲ್ಲ ಎಂದು, ವಿಶ್ವ ಮಹಾಸಂಘಕ್ಕೆ ಉಪಾಧ್ಯಕ್ಷರಾಗಲು ಎಲ್ಲ ಕ್ಷಮತೆಗಳನ್ನುಳ್ಳವರೆಂದು ಹೊಗಳಿ ಕಡೆಗೆ ನಿರೂಪಕ ಮಹಾಶಯ

‘ನನಗಂತೂ ಕೆಲಸವೇ ಮುಖ್ಯ
ಅದೇ ಲಕ್ಷ್ಯ, ಅದೇ ಲಕ್ಷ
ಕಿಂಚಿತ್ತೂ ಇಲ್ಲ, ನನಗೆ ಪದವಿ ವ್ಯಾಮೋಹ, ಆದರೂ
ಬೇರೆ ಯಾರಿದ್ದಾರೆ, ಎಂದು ನಾನೇ ಅದ್ಯಕ್ಷ !’

-ಖಾಲಿ ಇದೆ, ಉಪಾಧ್ಯಕ್ಷ ಸ್ಥಾನ

ಎಂದು ಘೋಷಿಸಿಕೊಳ್ಳುವಲ್ಲಿ ಮೊನಚಾದ ವ್ಯಂಗ್ಯವಿದೆ.

ಹರಿಹರೇಶ್ವರರಿಗೆ ವೈಯಕ್ತಿಕ, ಸಾಮಾಜಿಕ ಅನುಭವ, ಸನ್ನಿವೇಶಗಳೆಲ್ಲದಕ್ಕೂ ಅಭಿವ್ಯಕ್ತಿ ಕೊಡುವ ಸಾಮರ್ಥ್ಯವಿದೆ. ಒಂದೊಂದು ಕವಿತೆಯೂ ಅವರ ಹಲವು ರೀತಿಯ ಭಾವ ಲಹರಿಗಳನ್ನು ಬಿಂಬಿಸುತ್ತವೆ. ವಧುವಿಗೆ ವರನ ಬೆಣ್ಣೆ ಮಾತು ಏಕೆ, ವಿಜಯಕ್ಕೆ ಅಪ್ಪಂದಿರು ನೂರು, ಸೋಲು ಮುಂತಾದ ಕವಿತೆಗಳನ್ನು ಅವರ ತಿಳಿ ಹಾಸ್ಯ ಪ್ರಜ್ಞೆಗೆ ನಿದರ್ಶನವಾಗಿ ನೋಡಬಹುದು.

ಸ್ವತಂತ್ರ ಕವಿತೆಗಳ ಜೊತೆಗೆ ಗುಜರಾತಿ, ಸಂಸ್ಕೃತ, ಇಂಗ್ಲಿಷ್‌ ಮೂಲದ ಅನುವಾದಗಳೂ ಈ ಸಂಕಲನದಲ್ಲಿ ಸೇರಿವೆ. ಮೂಲದ ಕವಿತೆಗಳ ಭಾವಾನುವಾದ ಅತ್ಯಂತ ಸಮರ್ಥವಾಗಿ ಮೂಡಿ ಬಂದಿದೆ. ಮರಳ ಮೇಲಣ ಹೆಜ್ಜೆ ಗುರುತು, ಸಪ್ತ ಪದಿ, ಶ್ರೀ ಸೂಕ್ತಗಳು, ದಡಕ್ಕೆ ದಾಟಿಸು ನನ್ನ ತಂದೆ ಮುಂತಾದ ಕವಿತೆಗಳು ಅವರ ಅನುವಾದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಗಳಾಗಿವೆ. ಮೂಲದ ಭಾವವನ್ನು ಕನ್ನಡ ಭಾಷೆಯ ಜಾಯಮಾನಕ್ಕೆ ಹೊಂದುವಂತೆ ಛಂದೋರೂಪಗಳನ್ನು ಅಳವಡಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹರಿಹರೇಶ್ವರ ಅವರ ಕಾವ್ಯ ಸಂವೇದನೆಗಳ ಸಾರ್ಥಕ ಅಭಿವ್ಯಕ್ತಿ ಈ ಸಂಕಲನದಲ್ಲಿ ಕಾಣಸಿಗುತ್ತದೆ. ಇನ್ನಷ್ಟು ಪ್ರಯತ್ನಿಸಿದಲ್ಲಿ ಈ ಸಂಕಲನದಲ್ಲಿ ಅಷ್ಟಾಗಿ ಕಾಣದ ಸೂಕ್ಷ್ಮತೆ, ಧನ್ಯತೆ, ಸಾಂಕೇತಿಕತೆ, ಪ್ರತಿಮಾತ್ಮಕತೆಗಳನ್ನು ಬಳಸಿಕೊಂಡು ಉತ್ತಮವಾದ ಮತ್ತೊಂದು ಕವನ ಸಂಕಲನವನ್ನು ತರಬಲ್ಲರೆಂಬ ಭರವಸೆಯ ದನಿ ಇದರಲ್ಲಿದೆ.

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X