ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೃಜನಶೀಲ ಸಾಹಿತ್ಯಕ್ಕೆ ಸರ್ಕಾರ ಏನೇನೂ ಕೊಡಬಾರದು - ಭೈರಪ್ಪ

By Staff
|
Google Oneindia Kannada News

*ವಿಶಾಖ ಎನ್‌.

  • ನಾನು ವಿಮರ್ಶಕನನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ವಿಮರ್ಶಕ ಅನ್ನುವ Special Speciesನ ಒಪ್ಪಿಕೊಳ್ಳೋದಿಲ್ಲ.
  • ನನ್ನನ್ನು ರಸಿಕ ಅಂದರೆ ಸಂತೋಷವಾಗಿ ಒಪ್ಪಿಕೋತೀನಿ.
  • ಸಾಹಿತ್ಯ ಅಂದರೆ ರಸಾನುಭವ. ಇದನ್ನ ಹೇಳಿದರೆ ವಿಮರ್ಶಕರು ಬಿಲ್ಲು ಹಿಡಿದು ನಿಲ್ಲುತ್ತಾರೆ!
  • ಬರೆಯುವವನೊಳಗೆ ರಸ ಇದ್ದರೆ ಅವನ ಕೃತಿಯಲ್ಲೂ ರಸ ಇದ್ದೇ ಇರುತ್ತೆ....
S.L.Bhyrappa Avara Kruthigala Vimarshe, Rs.300ಭೈರಪ್ಪನವರು ವಿಮರ್ಶಕರ ವಿರುದ್ಧ ಮಾತಿನ ಚಾಟಿ ಚಟಾಯಿಸಿದಂತೆ ಬೆಂಗಳೂರಿನ ಎಚ್ಚೆನ್‌ ಕಲಾಕ್ಷೇತ್ರದಲ್ಲಿ ನೆರೆದಿದ್ದ ಅವರ ದೊಡ್ಡದೊಂದು ಸಹೃದಯ ಬಳಗದಲ್ಲಿ ಗೊಳ್ಳೆಂಬ ನಗೆಯ ಸಂಚಲನ. ಸಂದರ್ಭ- ಮಂಗಳವಾರ, ಎಸ್‌.ಎಲ್‌.ಭೈರಪ್ಪ ಅವರ ಕೃತಿಗಳ ವಿಮರ್ಶೆ’ ಕೃತಿ ಬಿಡುಗಡೆಯಾದಾಗ.

ಸಾಮಾನ್ಯವಾಗಿ ವೇದಿಕೆಗೇ ಅಪರೂಪವಾದ ಭೈರಪ್ಪನವರ ದರ್ಶನಕ್ಕೆ, ಅವರ ಮಾತುಗಳ ಮೊಗೆದುಕೊಳ್ಳುವುದಕ್ಕೆ ಅಪಾರ ಅಭಿಮಾನಿ ವೃಂದ ನೆರೆದಿತ್ತು. ಆ ವೃಂದಕ್ಕೆ ಭೈರಪ್ಪ ನಿರಾಸೆ ಮಾಡಲಿಲ್ಲ. ವೇದಿಕೆ ಮೇಲಿದ್ದ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರಿಗೆ ಹಾಗೂ ಕನ್ನಡಿಗರಿಗೆ ಭೈರಪ್ಪನವರು ಹೇಳಿದ ಕಿವಿಮಾತು ಇದು...

ಸೃಜನಶೀಲ ಸಾಹಿತ್ಯಕ್ಕೆ ಸರ್ಕಾರ ಏನೇನೂ ಕೊಡಬಾರದು. ಹಾಗೆ ಕೊಟ್ಟರೆ ಅದು ಹಣದ ದುರುಪಯೋಗ ಅಂತೀನಿ. ಜನರೇ ಸಾಹಿತ್ಯವನ್ನು ಪ್ರಮೋಟ್‌ ಮಾಡಬೇಕು. ಆಗ ಸಾಹಿತ್ಯದ ವಾತಾವರಣ ಹಸುರಾಗಿರುತ್ತೆ. ಪ್ರತಿಯಾಂದು ಊರಲ್ಲೂ ಇವತ್ತು library movememt ಆಗಬೇಕು. ಈಗ ಸರ್ಕಾರದ ಒಂದು ಕಮಿಟಿಯೇ ರಾಜ್ಯದ ಎಲ್ಲಾ ಗ್ರಂಥಾಲಯಗಳಿಗೆ ಪುಸ್ತಕ ಕೊಳ್ಳುತ್ತಿದೆ. ಆದರೆ ಆಯಾ ಹಳ್ಳಿಯ ಓದುಗರಿಗೆ ಏನು ಬೇಕು ಅನ್ನುವುದರ ಬಗ್ಗೆ ಇವರಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.

ತಾಲ್ಲೂಕು ಹೆಡ್‌ಕ್ವಾರ್ಟಸ್‌ ಒಂದಕ್ಕೆ ಕನಿಷ್ಠ ಒಂದು ಪುಸ್ತಕದಂಗಡಿ ಇರಬೇಕು. ಅಂಗಡಿಯವ ಓದುವ ಜನರನ್ನು ತಲುಪಿ, ಕನ್ನಡ ಪುಸ್ತಕಗಳಿಗೆ ಮಾರುಕಟ್ಟೆ ಒದಗಿಸಬೇಕು. ಹಳ್ಳಿಗೊಂದು ಲೈಬ್ರರಿ ಕಮಿಟಿ ಆಗಬೇಕು. ಅದು ತನ್ನ ಓದುಗರಿಗೆ ಬೇಕಾದ ಪುಸ್ತಕವನ್ನು ಆರಿಸಿ, ಕೊಂಡುಕೊಳ್ಳುವಂತಾಗಬೇಕು. ಹೀಗೆ ವಿಕೇಂದ್ರೀಕರಣವಾದಾಗ ಮಾತ್ರ ಕನ್ನಡದ ಸಾಹಿತ್ಯ ಉಳಿಯುತ್ತೆ. ಹಿಂದೆ ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌ ವಿದ್ಯಾರ್ಥಿಗಳು ನನ್ನನ್ನು ಕಂಡೊಡನೆ ಗುರುತಿಸುತ್ತಿದ್ದರು. ಆದರಿವತ್ತು ಹಾಗಾಗುತ್ತಿಲ್ಲ. ಯಾಕೆಂದರೆ, ಅವರೆಲ್ಲ ಇಂಗ್ಲಿಷ್‌ ಮಾಧ್ಯಮದಲ್ಲೇ ಓದಿರುತ್ತಾರೆ. ಭೈರಪ್ಪ ಗೊತ್ತೇ ಇರೋದಿಲ್ಲ !

ಸುಂದರ ಪ್ರಕಾಶನ ಪ್ರಕಟಿಸಿರುವ ವಿವಿಧ ಲೇಖಕರು ಭೈರಪ್ಪನವರ ಕೃತಿಗಳ ಕುರಿತು ಮಾಡಿರುವ ವಿಮರ್ಶೆಯಿರುವ ಹೊತ್ತಗೆಯನ್ನು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬಿಡುಗಡೆ ಮಾಡಿದರು. ಭೈರಪ್ಪನವರ ಬರವಣಿಗೆಯನ್ನು, ಕಥನ ಶೈಲಿಯನ್ನು ವಾಚಾಮಗೋಚರ ಹೊಗಳಿದ ಕೃಷ್ಣ, ಅಪ್ಪಿ ತಪ್ಪಿ ಕೂಡ ರಾಜಕೀಯದ ಬಗ್ಗೆ ಒಂದು ಮಾತೂ ಉಸುರಲಿಲ್ಲ. ಅಕಾಡೆಮಿಗೆ ದುಡ್ಡು ಕೊಟ್ಟು, ಸುಮ್ಮನಾದರೆ ಸಂಸ್ಕೃತಿ ಉದ್ಧಾರವಾಗೋದಿಲ್ಲ. ಮುಖ್ಯಮಂತ್ರಿ ಹಾಗೂ ಸಾಹಿತಿಗಳ ನಡುವೆ ಒಡನಾಟ ಇರಬೇಕು ಎಂಬ ಪುಸ್ತಕದ ಸಂಪಾದಕ ಸುಮತೀಂದ್ರ ನಾಡಿಗರ ಆಗ್ರಹಕ್ಕೆ ಮುಖ್ಯಮಂತ್ರಿ ಕೃಷ್ಣ ಸ್ಪಂದಿಸಿದರು. ಇನ್ನು ಮೇಲೆ ಕೃಷ್ಣ ಸಾಹಿತಿಗಳ, ಸಂಗೀತಗಾರರ ಹಾಗೂ ಕಲೆಗಾರರ ಜೊತೆಯಲ್ಲಿ ಪದೇಪದೇ ಕಾಣಿಸಿಕೊಳ್ಳಲಿದ್ದಾರೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾದಂಬರಿಕಾರ ವ್ಯಾಸರಾಯ ಬಲ್ಲಾಳರೂ ತರಾಟೆಗೆ ತೆಗೆದುಕೊಂಡದ್ದು ಪೂವ್ರಾಗ್ರಹ ಪೀಡಿತ, ಸಿದ್ಧಾಂತಕ್ಕೆ ಕಟ್ಟು ಬಿದ್ದು ತಗಾದೆ ತೆಗೆಯುವ ವಿಮರ್ಶಕರನ್ನು. ಮತ್ತೊಬ್ಬ ಹಿರಿಯ ಚೇತನ ಜಿ.ವಿ.ಅಯ್ಯರ್‌, ಭೈರಪ್ಪನವರ ಕೃತಿಗಳಲ್ಲಿ ‘ಧರ್ಮ ಜಿಜ್ಞಾಸೆ’ಯ ಕುರಿತು ಮಾತಾಡಿದರು. ಧರ್ಮ, ವಿಜ್ಞಾನ, ಸಾಧನೆಗಳನ್ನು ಭೈರಪ್ಪ ತೇಲಿಸಲು ನೋಡುತ್ತಾರೆ. ಅದು ಸುಲಭ ಸಾಧ್ಯವಲ್ಲ. ಅನುಭವದಿಂದ ಮಾತ್ರ ದಕ್ಕುವ ಸಾಮರ್ಥ್ಯ ಎಂದು ಅಯ್ಯರ್‌ ಅಭಿಪ್ರಾಯ ಪಟ್ಟರು.

ಸುಂದರ ಪ್ರಕಾಶನದ ಗೌರೀ ಸುಂದರ್‌ ಚುಟುಕು ವಂದನಾರ್ಪಣೆ , ಸುಮತೀಂದ್ರ ನಾಡಿಗರು ಬಲ್ಲಾಳರ ‘ಹೆಜ್ಜೆ ’ ಕೃತಿಯನ್ನು ‘ಹೆಜ್ಜೆಗಳು’ ಅಂದಾಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಸಿ.ಸೋಮಶೇಖರ್‌ ಭೈರಪ್ಪನವರನ್ನು ಎಗ್ಗಿಲ್ಲದೆ ತರಾವರಿ ಪದಪುಂಜಗಳಿಂದ ಹೊಗಳಲು ಶುರುವಿಟ್ಟಾಗ ಸಭಿಕರಿಂದ ದನಿ ಹೊಮ್ಮಿದ್ದು ಕಾರ್ಯಕ್ರಮದ ಸೈಡ್‌ಲೈಟ್ಸ್‌.

ಅಂದಹಾಗೆ, ಭೈರಪ್ಪನವರ ಹೊಸ ಕಾದಂಬರಿ ‘ಮಂದ್ರ’ದ ಮೊದಲ ಆವೃತ್ತಿಯ ಎಲ್ಲಾ ಪ್ರತಿಗಳು ಬಿಡುಗಡೆಯಾದ ಮೂರೇ ವಾರದಲ್ಲಿ ಖಾಲಿಯಾಗಿವೆ ! ಬೇಕಾದವರು ಎರಡನೇ ಆವೃತ್ತಿಗೆ ಕಾಯಬೇಕು. ಅವರ ಕೃತಿಗಳ ಕುರಿತ ವಿಮರ್ಶಾ ಪುಸ್ತಕದ ಬೆಲೆ 300 ರುಪಾಯಿ.

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X