ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪು ಹಾಗೂ ಮಾಗಿದ ಅನುಭವಗಳ ‘ಎದೆ ತುಂಬ ನಕ್ಷತ್ರ’

By Staff
|
Google Oneindia Kannada News

* ಕೆ.ರಾಜಲಕ್ಷ್ಮಿ ರಾವ್‌

Coverpage of K.S.Narasimha Swamys new collection of poems Ede Tumba Nakshatraತಾರುಣ್ಯದಲ್ಲಿ ಕಣ್ಣುಗಳ ತುಂಬಾ ಕನಸುಗಳು.... ವೃದ್ಧಾಪ್ಯದಲ್ಲಿ ಮನಸಿನ ತುಂಬಾ ನೆನಪುಗಳು... ಇವುಗಳೆರಡೂ ಬದುಕಿನ ರಥವನ್ನು ಮುಂದೊಯ್ಯುತ್ತವೆ. ಕೆ. ಎಸ್‌. ನರಸಿಂಹ ಸ್ವಾಮಿ ಅವರ ಕವನ ಸಂಕಲನ ‘ಎದೆ ತುಂಬ ನಕ್ಷತ್ರ’ ನೆನಪು ಹಾಗೂ ಮಾಗಿದ ಅನುಭವಗಳ ಅಪೂರ್ವ ರತ್ನ ಕೋಶ...

-ಕೆ. ಎಸ್‌. ನ. ಅವರ ಹೊಸ ಕವನ ಸಂಕಲನ ‘ಎದೆ ತುಂಬ ನಕ್ಷತ್ರ’ ವನ್ನು ಭಾನುವಾರ (ಸೆ. 15) ಅನವಾರಣಗೊಳಿಸಿದ ಕವಿ ಹಾಗೂ ವಿಮರ್ಶಕ ಬಿ. ಸಿ. ರಾಮಚಂದ್ರಶರ್ಮ ಅವರು ಸಂಕಲನದ ಬಗ್ಗೆ ಹೇಳಿದ ಮಾತುಗಳಿವು.

ಅದು ವಿ.ಸೀ. ಸಂಪದ ಆಯೋಜಿಸಿದ ಸುಂದರ ಸಮಾರಂಭ. ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣದ ತುಂಬ ಕೆಎಸ್‌ನ ಅಭಿಮಾನಿಗಳು. ಬೆಂಗಳೂರೆಂಬ ವ್ಯಸ್ತ ನಗರಿಯಲ್ಲಿ ಸಾಹಿತ್ಯ ಸಭೆಗೆ ಈಪಾಟಿ ಜನ ಸೇರಿದ್ದು ನೋಡಿ ಎಲ್ಲರಿಗೂ ಆಶ್ಚರ್ಯ- ಸಂತಸ. ಮುಕ್ಕಾಲು ಪಾಲು ಮಂದಿ ಕೂದಲು ಬೆಳ್ಳಗಾದ ಹಿರಿಯ ಸಹೃದಯರು. ಸಭೆಯ ಮುಂದಿನ ಸಾಲಿನಲ್ಲಿ ಕೆಎಸ್‌ನ ಕುಳಿತಿದ್ದರು.

ಕವನ ಸಂಕಲನದಲ್ಲಿ ನೆನಪಿನ ಬಗ್ಗೆ ತುಂಬ ಮಾತುಗಳಿವೆ. ಕೆಎಸ್‌ನ ಅವರು ಈ ವಯಸ್ಸಿನಲ್ಲಿ ನೆನಪುಗಳನ್ನು ರಾಶಿ ಹಾಕಿಕೊಂಡು ಹೀಗೆ ಬರೆಯುವುದು ಸಹಜ ಎಂದು ರಾಮಚಂದ್ರ ಶರ್ಮ ಮಾತಿಗಾರಂಭಿಸಿದರು. ಶರ್ಮ ಹೇಳಿದ್ದು :

  • ಕೆಎಸ್‌ನ ಅವರ ಕಾವ್ಯವನ್ನು ನೋವುಂಡವರಿಗೆ ಸಮಾಧಾನ ಹೇಳುವ ಕರವಸ್ತ್ರ ಎಂದು ಕರೆದರು. ಕಷ್ಟಗಳು ಬರುತ್ತಲೇ ಇರುತ್ತವೆ. ನೋವನ್ನೇ ಮತ್ತೆ ಮತ್ತೆ ಹಾಡಿ ನೋವ ಹೆಚ್ಚಿಸಿಕೊಳ್ಳುವಿರೇಕೆ ಎಂದು ಕೇಳುವ ಕವಿ ‘ಹೆರಿಗೆಯ ನೋವನು ಹಾಡುವಿರೇತಕೆ, ಪಕ್ಕದಲ್ಲೇನಿದೆ ನೋಡಿ...’ ಎನ್ನುತ್ತಾ ಸುಖದ ನೆನಪನ್ನು ತಂದುಕೊಂಡು ಕಡುಕಷ್ಟವನ್ನು ಮರೆಯಲೆತ್ನಿಸಿದವರು.
  • ಬದುಕಿನ ಬಗ್ಗೆ ಚಿಂತನೆ, ಕಾವ್ಯ ಅಂದರೇನು ಮತ್ತು ಅದರ ಕರ್ತವ್ಯವೇನು ಹಾಗೂ ಕಿರಿಯ ಕವಿಗಳಿಗೆರಡು ಮಾತು ಎಂದು ಎದೆ ತುಂಬ ನಕ್ಷತ್ರ ಸಂಕಲನವನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು . ಅವುಗಳಲ್ಲಿ ನನಗೆ ಮೆಚ್ಚಿಕೆಯಾದದ್ದು ಕೊನೆಯ ಭಾಗ.
  • ‘ಶಾಸ್ತ್ರಗಾರರ ಬೀದಿಯಲ್ಲಿ ಓಡಾಡದಿರು, ಶಾಸ್ತ್ರವನು ಮೀರಿಹುದು ಕವಿತೆ’ ಎನ್ನುವ ಸ್ವಾಮಿಯವರ ಹೆಚ್ಚಿನ ಕವನಗಳು ತುಂಬಾ ಸರಳವಾಗಿವೆ. ಆದರೆ ಕವಿತೆಗೆ ಅಸ್ಪಷ್ಟತೆಯೇ ಚೆಲುವು ಎಂಬುದು ಕವಿ ಹೇಳುವ ಕಿವಿ ಮಾತು.
  • ಈ ಸಂದರ್ಭದಲ್ಲಿ ಕೆಎಸ್‌ನ ಅವರ ‘ಗಡಿಯಾರದಂಗಡಿಯ ಮುಂದೆ’ ಎಂಬ ಕ್ಲಿಷ್ಟ ಕವನವನ್ನು ನೆನಪಿಗೆ ಬರುತ್ತದೆ. ಜನಪ್ರಿಯತೆ, ಜನಪ್ರೀತಿಯನ್ನು ಗಳಿಸುವ ಸಾಹಿತಿಯೋರ್ವನನ್ನು ಸಂಶಯದಿಂದ ನೋಡುವ ಈ ಕಾಲದಲ್ಲಿ ಕೆಎಸ್‌ನ ಅವರು ಒಬ್ಬ ಪಕ್ವಗೊಂಡ ಸಾಹಿತಿ ಎನಿಸಿಕೊಂಡಿದ್ದಾರೆ. ಅವರ ಇನ್ನೊಂದು ಕವನ ಸಂಕಲನ ಆದಷ್ಟು ಬೇಗನೆ ಮೂಡಿ ಬರಲಿ.
  • ಕಾರ್ಯಕ್ರಮದಲ್ಲಿ ವಿಮರ್ಶಕರಾದ ಎಂ. ಎಚ್‌. ಕೃಷ್ಣಯ್ಯ ಹಾಗೂ ಕೆಎಸ್‌ನ ಸಮಗ್ರ ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್‌ ಗಿಟ್ಟಿಸಿಕೊಂಡ ನರಹಳ್ಳಿ ಬಾಲಸುಬ್ರಹ್ಮಣ್ಯ ಎದೆ ತುಂಬ ನಕ್ಷತ್ರ ಸಂಕಲನದ ಬಗ್ಗೆ ಮಾತನಾಡಿದರು.
ಚಿನ್ನಕ್ಕೆ ತುಕ್ಕಿಲ್ಲ, ಕಬ್ಬಿಣಕ್ಕುಂಟು ತುಕ್ಕು, ಚಿನ್ನವಾಗುವುದು ಕಾಲ ಕಾಲಕ್ಕೆ ಆಭರಣ... ಎನ್ನುತ್ತಾ ಕೆಎಸ್‌ನ ಕವನಗಳನ್ನು ಹೊಗಳಿದ ಕೃಷ್ಣಯ್ಯನವರ ಪ್ರಕಾರ ಈ ಕವನಗಳು ಓದುಗನ ಹೃದಯದಲ್ಲಿ ಶರತ್ಕಾಲದ ಪ್ರಶಾಂತತೆಯನ್ನು ತುಂಬುತ್ತವೆ. ಹಾಡು ಮುಗಿದ ಮೇಲೂ ಎದೆಯ ತುಂಬಿಕೊಂಡಿರುವ ಗುನುಗಿನ ಹಾಗೆ ಕೆಎಸ್‌ನ ಕವನಗಳು ಪ್ರಭಾವಶಾಲಿಯಾದವು.

ಜನಪ್ರಿಯತೆಯನ್ನು ಸಂಶಯಿಸುತ್ತಿದ್ದ ಶರ್ಮರಿಗೂ ಜನಪ್ರೀತಿ ಬೇಕು ಎಂಬುದನ್ನು ತೋರಿಸಿಕೊಟ್ಟವರು ಕೆಎಸ್‌ನ. ಅವರು ‘ಜನಪ್ರಿಯತೆ’ ಎಂಬುದಕ್ಕೇ ಮುೌಲ್ಯವನ್ನು ತಂದುಕೊಟ್ಟಿದ್ದಾರೆ ಎಂದು ಬಾಲಸುಬ್ರಹ್ಮಣ್ಯ ಕೆಎಸ್‌ನ ಅವರನ್ನು ಆಭಿನಂದಿಸಿದರು. ಕವನ ಸಂಕಲನ ಅನಾವರಣಗೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದ ಕೆಎಸ್‌ನ ಅವರು ಕವನಗಳನ್ನು ಬರೆಯಲು ಹಾಗೂ ಪುಸ್ತಕ ರೂಪದಲ್ಲಿ ಹೊರತರಲು ನೆರವಾದ ಎಂ. ವಿ. ವೆಂಕಟೇಶ್‌ ಮೂರ್ತಿ ಅವರನ್ನು ನೆನೆಸಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯನವರು ಕೆಎಸ್‌ನ ಅವರ ಮುಂದಿನ ಹುಟ್ಟುಹಬ್ಬಕ್ಕೆ ಇನ್ನೊಂದು ಕವನ ಸಂಕಲನವನ್ನು ಹೊರತರುವಂತಾಗಲಿ ಎಂದು ಹಾರೈಸಿದರು.

Post your views

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X