ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಹಿತ್ತಲಿಂದ ಇಂಗ್ಲಿಷ್‌ಅಂಗಳಕ್ಕೆ ಸಿಂಗಾರವ್ವನ ತಂದ ಲಕ್ಷ್ಮಿಚಂದ್ರಶೇಖರ್‌

By Staff
|
Google Oneindia Kannada News

ಬೆಂಗಳೂರು : ಚಂದ್ರಶೇಖರ ಕಂಬಾರರ ಸಿಂಗಾರೆವ್ವ ಮತ್ತು ಅರಮನೆ ಈಗ ಇಂಗ್ಲೀಷ್‌ಗೆ. ಅಪ್ಪಟ ಕನ್ನಡ ಸೊಗಡಿನ ಈ ಕೃತಿಯನ್ನು ಲಕ್ಷ್ಮೀ ಚಂದ್ರಶೇಖರ್‌ ಇಂಗ್ಲಿಷ್‌ಗೆ ಭಾಷಾಂತರಿಸಿದ್ದು, ದೆಹಲಿಯ ‘ಕಥಾ’ ಸಂಸ್ಥೆ ಪುಸ್ತಕವನ್ನು ಪ್ರಕಟಿಸಿದೆ.

ಜಾನಪದ ಸೊಗಡಿನ ಚಂದ್ರಶೇಖರ ಕಂಬಾರರ ಸಿಂಗಾರೆವ್ವ ಮತ್ತು ಅರಮನೆಯ ಕಥೆ ಸಿಂಗಾರಿ ಎಂಬ ಹಳ್ಳಿ ಹುಡುಗಿಯ ಸುತ್ತ ಸುತ್ತುತ್ತದೆ. ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಬಿ.ಕೆ. ಚಂದ್ರಶೇಖರ್‌ ಅವರ ಪತ್ನಿ ಲಕ್ಷ್ಮೀ ಚಂದ್ರಶೇಖರ್‌ ಈ ಕಾದಂಬರಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಬೆಂಗಳೂರಿನ ಎನ್‌. ಎಂ. ಕೆ. ಆರ್‌.ವಿ. ಕಾಲೇಜಿನಲ್ಲಿ ಆಂಗ್ಲ ಉಪನ್ಯಾಸಕಿ ಆಗಿರುವ ಲಕ್ಷ್ಮಿ ಚಂದ್ರಶೇಖರ್‌ ರಂಗಭೂಮಿಯಲ್ಲೂ ಹೆಸರು ಮಾಡಿದ ಕಲಾವಿದೆ.

ಸಾಕ್ಷರತೆ, ಸಾಹಿತ್ಯ ಮತ್ತು ಶೈಕ್ಷಣಿಕ ವಲಯದಲ್ಲಿ ಹೆಸರು ಮಾಡಿರುವ ದೆಹಲಿ ಮೂಲದ ಕಥಾ ಸಂಸ್ಥೆ ಕಳೆದ ಒಂದು ದಶಕದಿಂದಲೂ ಸಣ್ಣ ಕಥೆಗಳ ಭಾಷಾಂತರ ಕಾರ್ಯವನ್ನು ಮಾಡುತ್ತಿದೆ. ಈ ಅವಧಿಯಲ್ಲಿ ಕಥಾ ಸಂಘಟನೆಯು 10 ಸಂಪುಟಗಳ ಸಣ್ಣಕಥೆಗಳನ್ನು ಪ್ರಕಟಿಸಿದೆ. ಆದರೆ ಇಂಗ್ಲಿಷ್‌ಗೆ ಅನುವಾದಿಸಿದ ಪ್ರಥಮ ಕೃತಿ ಎಂಬ ಅಗ್ಗಳಿಕೆ ಸಿಂಗಾರೆವ್ವ ಮತ್ತು ಅರಮನೆಗೆ ಸಲ್ಲುತ್ತದೆ.

ಸಿಂಗಾರೆವ್ವ ಮತ್ತು ಅರಮನೆ ಕೃತಿಯು ಬೆಂಗಳೂರು, ಕಲ್ಕತ್ತಾ, ದೆಹಲಿ ಮತ್ತು ಪುಣೆಯಲ್ಲಿ ಏಕ ಕಾಲಕ್ಕೆ ಬಿಡುಗಡೆಯಾಗಲಿದೆ. ಬೆಂಗಳೂರಿನಲ್ಲಿ ಏಪ್ರಿಲ್‌ 13 ರ ಯುಗಾದಿಯಂದು ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ. ಸುಚಿತ್ರಾ ಫಿಲ್ಮ್‌ ಸೊಸೈಟಿ ಸಭಾಂಗಣದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದ್ದು, ಜ್ಞಾನ ಪೀಠ ಪ್ರಶಸ್ತಿ ವಿಜೇತ ಲೇಖಕ ಡಾ. ಯು.ಆರ್‌. ಅನಂತಮೂರ್ತಿ ಹಾಗೂ ಮಾಜಿ ಸಚಿವ ಎಂ. ಪಿ. ಪ್ರಕಾಶ್‌ ಅವರ ಉಪಸ್ಥಿತಿಯಲ್ಲಿ ಪುಸ್ತಕವು ಅನಾವರಣಗೊಳ್ಳಲಿದೆ.

ಪುಸ್ತಕ ಬಿಡುಗಡೆ ಸಮಾರಂಭದ ನಂತರ ಲಕ್ಷ್ಮಿ ಚಂದ್ರಶೇಖರ್‌ ಅವರು ಸೌಮಿ ವರ್ಮಾ ಅವರ ನಿರ್ದೇಶನದ ಸಿಂಗಾರೆವ್ವ ಮತ್ತು ಅರಮನೆ ಎಂಬ ಏಕವ್ಯಕ್ತೀ ಪ್ರದರ್ಶನವನ್ನು ನೀಡಲಿದ್ದಾರೆ.

(ಇನ್ಫೋ ವಾರ್ತೆ)

Post Your Views

ವಾರ್ತಾ ಸಂಚಯ

ಲಕ್ಷ್ಮೀ ಚಂದ್ರಶೇಖರ್‌ ಸಂದರ್ಶನ

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X