• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನಕರ್‌ ಹುಚ್ಚ , ನಾನು ಅರೆಹುಚ್ಚ- ರವಿ ಬೆಳಗೆರೆ

By Staff
|

*ಚೇತನ್‌ ನಾಡಿಗೇರ್‌

Ravi Belagere‘ಸತ್ಯ ಹೇಳಿದವರೇನೋ ಹುಚ್ಚರು; ಅದನ್ನು ತರ್ಜುಮೆ ಮಾಡಿದ ನೀವು ಏನು’ ಅಂತ ಟಿವಿ ಸಂದರ್ಶನವೊಂದರಲ್ಲಿ ನನ್ನನ್ನು ಕೇಳಿದರು. ಅದಕ್ಕೆ ನಾನು ಹೇಳಿದೆ- ‘ಸತ್ಯ ಹೇಳಿದವನು ಹುಚ್ಚ; ಅದನ್ನು ತರ್ಜುಮೆ ಮಾಡಿದವನು ಅರೆಹುಚ್ಚ !’

- ಡಿಸೆಂಬರ್‌ 1ನೇ ತಾರೀಕಿನ ಸಣ್ಣಗೆ ಕೊರೆಯುವ ಚಳಿಯ ಸಂಜೆಯಲ್ಲಿ ‘ಹಾಯ್‌ ಬೆಂಗಳೂರು’ ಸಾರಥಿ ರವಿ ಬೆಳಗೆರೆ ತಮ್ಮ ಎಂದಿನ ಶೈಲಿಯ ಮೊನಚಿನ ಮಾತಿನ ಬಿಸಿ ಹಾಯಿಸಿದರು.

ದಿನಕರ್‌ ಬರೆದಿರುವ ಇಂಗ್ಲಿಷ್‌ ಪುಸ್ತಕ ‘ವೀರಪ್ಪನ್ಸ್‌ ಪ್ರೆೃಸ್‌ ಕ್ಯಾಚ್‌: ರಾಜ್‌ಕುಮಾರ್‌’ನ್ನು ನಾಲ್ಕೇ ದಿನಗಳಲ್ಲಿ ತರ್ಜುಮೆ ಮಾಡಿದ ರವಿ, ಆ ಪುಸ್ತಕಕ್ಕಿಂತ ಭಾರೀ ಅಗ್ಗದ ಬೆಲೆಗೆ ಕನ್ನಡಾನುವಾದದ ಹೊತ್ತಗೆಯನ್ನು ಓದುಗರ ಕೈಗಿಟ್ಟಿದ್ದರು. ದಿನಕರ್‌ ಇಂಗ್ಲಿಷ್‌ನಲ್ಲಿ ಹೇಳಿದ ಸತ್ಯಕ್ಕೆ 400 ರುಪಾಯಿ. ಅದನ್ನು ಕನ್ನಡಕ್ಕೆ ತಂದು ರವಿ ಬೆಳಗೆರೆ ಪ್ರಕಟಿಸಿದ ಪುಸ್ತಕಕ್ಕೆ ಕೇವಲ 100 ರುಪಾಯಿ (ಬಿಡುಗಡೆಯ ದಿನದ ದರ. ನಿಜ ಬೆಲೆ 120 ರುಪಾಯಿ). ಆ ಮಟ್ಟಿಗೆ ಕನ್ನಡದ ಓದುಗನಿಗೆ ಭಾರೀ ಬೋನಸ್ಸು. ಅಂದಹಾಗೆ, ಕನ್ನಡಕ್ಕೆ ಅನುವಾದಗೊಂಡಿರುವ ದಿನಕರ್‌ ಪುಸ್ತಕದ ಹೆಸರು ‘ರಾಜ ರಹಸ್ಯ’.

ಪುಸ್ತಕ ಖರೀದಿಸಲು ನೂಕು ನುಗ್ಗಲು ಒಂದು ಕಡೆ. ಹಿಂಡಿನಲ್ಲಿ ಪುಸ್ತಕ ಕೊಂಡು ಧನ್ಯರಾದವರಲ್ಲಿ ಪಡೆದ ಪುಸ್ತಕದ ಬಿಡುಗಡೆ ಸಮಾರಂಭ ನೋಡುವ ತವಕ ಇನ್ನೊಂದು ಕಡೆ. ನೆಪಕ್ಕೆ ಪುಸ್ತಕ ಬಿಡುಗಡೆ ಸಮಾರಂಭವಾದರೂ, ಬಿಡುಗಡೆಗೆ ಮುನ್ನವೇ ಪುಸ್ತಕ ಬಿಕರಿಯಾಗಿ ಗೊಂದಲ ಆಗಿದ್ದೇ ಇದಕ್ಕೆ ಕಾರಣ. ಜನರಲ್ಲಿ ರವಿ ಕ್ರೇಜ್‌ ಹಾಗಿದೆ !

ಪದ್ಮನಾಭ ನಗರದ ಹಾಯ್‌ ಬೆಂಗಳೂರು ಕಚೇರಿ ಬಳಿಯ ಚಿಕ್ಕ ಜಾಗೆ ಅಷ್ಟೊಂದು ಜನರಿಗೆ ಕಿಷ್ಕಿಂದೆಯಾಗಿತ್ತು. ಒಂಟಿಕಾಲಲ್ಲೇ ನಿಂತು ನಿಗುರಿ ನೋಡುತ್ತಿದ್ದವರಿಗೆ ವೇದಿಕೆ ಮೇಲೆ ಕಂಡಿದ್ದು- ವೀರಪ್ಪನ್‌ನಿಂದ ಹತರಾದ ಅಧಿಕಾರಿ ಶಕೀಲ್‌ ಅಹಮದ್‌ ಅವರ ತಂದೆ ಅಬ್ದುಲ್‌ ಕರೀಂ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಾಣಗೆರೆ ವೆಂಕಟರಾಮಯ್ಯ, ವಿಜಯ ಕರ್ನಾಟಕ ಪತ್ರಿಕೆಯ ಕಾರ್ಯಕಾರಿ ಸಂಪಾದಕ ವಿಶ್ವೇಶ್ವರ ಭಟ್‌, ಅಂಕಣಕಾರ ಚಂದ್ರಶೇಖರ ಆಲೂರು ಮತ್ತು ರವಿ ಬೆಳೆಗೆರೆ. ಅಬ್ದುಲ್‌ ಕರೀಂ ಅವರನ್ನು ಸನ್ಮಾನಿಸಿ, ಅವರಿಗೆ ಹಣದ ಸಹಾಯ ಮಾಡಿದ ನಂತರ ರವಿ ಮಾತಿಗೆ ಎದ್ದು ನಿಂತರು. ತಾವು ಟಿ.ವಿ.ಸಂದರ್ಶನಕ್ಕೆ ಹೇಳಿದ ಮಾತಿನಿಂದ ಮಾತು ಶುರುವಾಗಿ ಹೀಗೆ ಮುಂದುವರೆಯಿತು...

‘ಅಕ್ಷರಕ್ಕೆ ಬಹಳ ಶಕ್ತಿ ಇದೆ. ಎಷ್ಟೋ ಸಾಮಾನ್ಯ ಜನರು ಇಂಗ್ಲೀಷ್‌ ಪುಸ್ತಕವನ್ನು ಓದುವುದಿಲ್ಲ. ಅದಕ್ಕಾಗಿ ಈ ಪುಸ್ತಕವನ್ನು ಕನ್ನಡಕ್ಕೆ ತರ್ಜುಮೆ ಮಾಡಿದೆ. ಹುಚ್ಚರು ಮಾತ್ರ ಇಂತಹ ಸತ್ಯವನ್ನು ಹೇಳುತ್ತಾರೆ. ಅವರಿಗೆ ಮಾತ್ರ ಇಂತಹ ಧೈರ್ಯವಿರುತ್ತದೆ. ರಾಜ್‌ ಅಪಹರಣವಾದಾಗ ಒತ್ತೆ ಹಣವಲ್ಲದೆ ಇತರೆ ಖರ್ಚು ಸೇರಿ ಕರ್ನಾಟಕಕ್ಕೆ ಸುಮಾರು 150 ಕೋಟಿ ರುಪಾಯಿ ಖರ್ಚಾಗಿದೆ. ಈ ಪುಸ್ತಕವನ್ನು ನಾನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ. ಈ ಪುಸ್ತಕದ ವಿಶೇಷವೆಂದರೆ-ಇದರಲ್ಲಿ ಕೆಲವು ಅತಿರೇಕಗಳಿದ್ದರೂ, ಎಲ್ಲೂ ಯಾರ ಬಗ್ಗೆಯೂ ಕೀಳಾಗಿ ಬರೆದಿಲ್ಲ. ಒಂದು ಸರ್ಕಾರದ ವಿರುದ್ಧ ಹೋರಾಡುವುದು ಬಹಳ ಕಷ್ಟ. ಅಂತಹ ಕೆಲಸವನ್ನು ದಿನಕರ್‌ ಮಾಡಿದ್ದಾರೆ. ಪುಸ್ತಕ ಬಿಡುಗಡೆ ಮಾಡಲು ನಮಗೊಂದು ಸರಿಯಾದ ಜಾಗ ಕೊಡಲಿಲ್ಲ. ಆದ್ದರಿಂದ ನಮ್ಮ ಆಫೀಸಿನ ಎದುರಿನಲ್ಲೇ ಮಾಡಬೇಕಾಯಿತು’.

ರವಿ ಫ್ಲ್ಯಾಷ್‌ಬ್ಯಾಕ್‌..

‘ರಾಜ್‌ ಅಪಹರಣದ 108 ದಿನಗಳಲ್ಲಿ ಕರ್ನಾಟಕದ ಜನರ ಜತೆ ಧಾವಂತ ಪಟ್ಟುಕೊಂಡವರಲ್ಲಿ ನಾನೂ ಒಬ್ಬ. ಪಾರ್ವತಮ್ಮನವರು ಮಲ್ಯ ಆಸ್ಪತ್ರೆಗೆ ಎದೆ ನೋವಿನ ನೆಪ ಹೇಳಿ ದಾಖಲಾದಾಗ ಶಿವರಾಜ್‌ ಕುಮಾರ್‌ ಫೋನ್‌ ಮಾಡಿ, ಆಸ್ಪತ್ರೆ ಸೇರಿದ ವಿಷಯವನ್ನು ಪತ್ರಿಕೆಯಲ್ಲಿ ಬರೆಯುವುದಕ್ಕೆ ಹೇಳಿದರು. ಆಮೇಲೆ ಅವರನ್ನು ಮಾತಾಡಿಸಲು ಆಸ್ಪತ್ರೆಗೆ ಹೋದೆ. ಅವರು ಅಸ್ವಸ್ಥರಾಗಿ ಮಲಗಿದ್ದರು. ಅವರ ಸಂದರ್ಶನ ಮಾಡಿದೆ. ನಂಜೇಗೌಡರ ವಿಷಯ ಪ್ರಸ್ತಾಪ ಮಾಡಿದಾಗ ಅವರು ಕೆರಳಿದರು. ಆಗಲೇ ಅವರ ನಿಜವಾದ ಎದೆ ನೋವು ಏನು ಎಂದು ತಿಳಿದಿದ್ದು. ನನ್ನ ಜತೆಯಲ್ಲಿ ನಿಂತು ಫೋಟೋ ಕೂಡ ತೆಗೆಸಿಕೊಂಡ ಅವರು, ಪತ್ರಿಕೆಯಲ್ಲಿ ಸಂದರ್ಶನ ಬಂದ ನಂತರ ನನಗೆ ರವಿ ಬೆಳಗೆರೆ ಗೊತ್ತೇ ಇಲ್ಲ ಅಂದರು !’

ರವಿ ನಂತರ ಮಾತಾಡಿದ್ದು ಜಾಣಗೆರೆ ವೆಂಕಟರಾಮಯ್ಯ. ಜಾಣಗೆರೆ ಮೆಲ್ಲಗೆ ಯು.ಆರ್‌.ಅನಂತಮೂರ್ತಿ ಕಾಲೆಳೆದದ್ದು ಹೀಗೆ-

‘ಸತ್ಯ ಹೇಳೋಕೆ ಬಹಳ ಜನ ಹೆದರುತ್ತಾರೆ. ಸರ್ಕಾರದ ವಿರುದ್ಧ ಮಾತನಾಡಲು ಯಾರೂ ಬರುವುದಿಲ್ಲ. ಎಲ್ಲರಿಗೂ ರಾಜಕಾರಣಿಗಳ ಹತ್ತಿರ ಅವರದೇ ಆದ ಕೆಲಸಗಳಿರುತ್ತವೆ. ಇದಕ್ಕೆ ಉದಾಹರಣೆಯೆಂದರೆ, ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಬಿಡುತ್ತೀನಿ ಎಂದರೆ ಯಾವ ಸಾಹಿತಿಯೂ ಬರಲಿಲ್ಲ. ಪಾದಯಾತ್ರೆ ಮಾಡುತ್ತೀನಿ ಎಂದರೆ ಜ್ಞಾನಪೀಠ ಪ್ರಶಸ್ತಿ ವಿಜೇತರು ಬಂದರು’.

ರಾಜ್‌ ಕುಟುಂಬದ ಮನೆಯಾಳಾಗಿದ್ರಂತೆ ಕೃಷ್ಣ... ಜಾಣಗೆರೆ ಹೇಳ್ತಾರೆ ಕೇಳಿ...

‘ಅಪಹರಣವಾದಾಗ ದಿನಾ ಚಳವಳಿ. ನಿಷೇಧಾಜ್ಞೆ ಮೀರಿ ಚಳವಳಿ ಮಾಡ್ತಿದ್ವಿ. ರಾಜ್‌ ಕುಟುಂಬದವರು ಕೃಷ್ಣರನ್ನು ತಮ್ಮ ಮನೆಯಾಳಾಗಿಸಿಕೊಂಡಿದ್ದರು. ಅಷ್ಟು ಕೆಲಸ ಮಾಡಿದವರನ್ನು ಕೊನೆಗೆ ರಾಜ್‌ ಬಿಡುಗಡೆಯಾದಾಗ ನೆನಸಿಕೊಳ್ಳಲೇ ಇಲ್ಲ. ಅದರ ಬದಲಿಗೆ ನೆಡುಮಾರನ್‌, ಡಾ। ಭಾನು ಮುಂತಾದವರನ್ನು ನೆನಸಿಕೊಂಡರು. ನಾನು ಒಮ್ಮೆ ಈ ಮಾತನ್ನು ಅವರ ಬಳಿ ಕೇಳಿದಾಗ ಮಾತೇ ಬರಲಿಲ್ಲ. ಎರಡು ವರ್ಷದ ಮೇಲಾದರೂ ರಾಜ್‌ ಸತ್ಯ ಹೇಳುವುದು ಒಳ್ಳೆಯದು. ಕಾಡಿನಲ್ಲಿರುವಾಗ ಅವರು ಒಂದೇ ಮಾತಲ್ಲಿ ಯಾವುದೇ ಕಾರಣಕ್ಕೂ ಬೇಡಿಕೆ ಈಡೇರಿಸಬೇಡಿ ಅನ್ನಬಹುದಿತ್ತು. ಆದರೆ ಹೇಳಲಿಲ್ಲ. ಅದರ ಬದಲು ಅವನ್‌ ಬೇಡಿಕೆ ಈಡೇರಿಸಿ, ನನ್ನನ್ನು ಬಿಡಿಸಿಕೊಂಡು ಹೋಗಿ ಎಂದು ಅತ್ತರು. ಬಂದ ಮೇಲೂ ಮನೆ ಮಹಡಿಯ ಮೇಲೆ ನಿಂತು ನನ್ನನ್ನು ನೋಡಿಕೊಂಡ ಹಾಗೆ ನನ್ನ ಮಕ್ಕಳನ್ನು, ಮೊಮಕ್ಕಳನ್ನು ನೋಡಿಕೊಳ್ಳಿ ಎಂದರು.

‘ಜನ ವೀರಪ್ಪನ್‌ ನೋಡಲು ಕಾಡಿಗೆ ಹೋಗಬೇಕಾಗಿಲ್ಲ. ನಾಡಿನಲ್ಲೇ ಇದ್ದಾರೆ. ನೆಡುಮಾರನ್‌, ಡಾ। ಭಾನು, ಪುಗಳೇಂದಿ, ಭಕ್ತವತ್ಸಲಂ ಯಾವ ವೀರಪ್ಪನ್ಗೂ ಕಡಿಮೆ ಇಲ್ಲ. ಆರ್‌. ಆರ್‌. ಗೋಪಾಲ್‌ ಸಂಧಾನಕಾರನಲ್ಲ. ಬದಲಿಗೆ ಆತ ಒಬ್ಬ ದಲ್ಲಾಳಿ. ರಾಜ್‌ ಅಪಹರಣದ ಸಮಯದಲ್ಲಿ ಸುಪ್ರೀಂ ಕೋರ್ಟ್ನಿಂದ ರಾಜ್ಯಕ್ಕೆ ಛೀಮಾರಿಯಾದಾಗ ಕರ್ನಾಟಕದ ಮಾನ ಕಾಪಾಡಿದವರು ಅಬ್ದುಲ್‌ ಕರೀಂ. ತಾವು ನಿವೃತ್ತರಾದರೂ ಟಾಡಾ ಖೈದಿಗಳು ಬಿಡುಗಡೆಯಾಗಬಾರದು ಎನ್ನುವ ಕಾರಣಕ್ಕೆ ಸುಮಾರು 8 ಲಕ್ಷ ರು. ಖರ್ಚು ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ಕರೀಂಗೆ 5 ಲಕ್ಷ ರುಪಾಯಿ ಕೊಡಬೇಕು ಎಂದು ಸರ್ಕಾರಕ್ಕೆ ಹೇಳಿದೆ. ಆದರೆ ಇದುವರೆಗೂ ಅವರಿಗೆ ಹಣ ಸಿಕ್ಕಿಲ್ಲ. ವೀರಪ್ಪನ್ಗೆ ಮಾತ್ರ ಕೋಟಿ ಕೋಟಿ ಹಣ ಕೊಟ್ಟರು. ಅದು ಎಲ್ಲಿ ಹೋಯ್ತು. ನಮ್ಮನ್ನು ನಾಶ ಮಾಡೋಕೆ ವೀರಪ್ಪನ್‌ ಮೂಲಕ ಆ ಹಣ ತಮಿಳು ಉಗ್ರರಿಗೆ ಹೋಯ್ತು.

ಈ ಪುಸ್ತಕದ ಮೂಲಕ ದಿನಕರ್‌ ಮತ್ತು ರವಿ ಜನರನ್ನು ಕ್ರಾಂತಿಗೆ ಸಿದ್ಧಪಡಿಸುತ್ತಿದ್ದಾರೆ. ಸತ್ಯ ಹೊರಕ್ಕೆ ಬರಬೇಕು. ಬೆಳಿಗ್ಗೆಯಿಂದ ಪೋಲಿಸರಿಂದ ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದೀನಿ. ಇನ್ನು ಸಂತೋಷವಾಗಿ ಅರೆಸ್ಟ್‌ ಅಗ್ತೀನಿ. (ತಮಿಳು ಚಿತ್ರಗಳ ಪ್ರದರ್ಶನಕ್ಕೆ ಅಡ್ಡಿ ಮಾಡಿದ ಕಾರಣ ಜಾಣಗೆರೆ ಭಾನುವಾರ ಪೊಲೀಸರಿಗೆ ಬೇಕಾಗಿದ್ದರು!) ನಮ್ಮ ನೋವನ್ನು ರೆಟ್ಟೆಗೆ ತರಬೇಕು. ಇಲ್ಲವಾದರೆ ಈ ರಾಜ್ಯ ಹಾಳಾಗತ್ತೆ’.

ದಿನಕರ್‌ ಯಾರಿಗೂ ತಪ್ಪು ಮಾಡಲು ಬಿಡುವುದಿಲ್ಲ. ಅವರು ಬಹಳ ಬೋಲ್ಡ್‌ ಮತ್ತು ಆನೆಸ್ಟ್‌ ಆಫೀಸರ್‌. ಅಂತಹವರು ಬಹಳ ಅಪರೂಪ. ನಾನು 2 ವರ್ಷ ಅವರ ಜತೆ ಕೆಲಸ ಮಾಡಿದ್ದೇನೆ. ಈ ಪುಸ್ತಕ ಪ್ರತಿ ಮನೆಯಲ್ಲೂ ಇರಬೇಕು. ಈ ಪುಸ್ತಕದಿಂದ ಸತ್ಯ ಏನು, ರಾಜಕೀಯವೆಂದರೇನು ಗೊತ್ತಾಗುತ್ತೆ. ಪೋಲಿಸರ ಜವಾಬ್ದಾರಿಯ ಬಗ್ಗೆ ತಿಳಿಯುತ್ತೆ ಎಂದು ಸನ್ಮಾನಿತರಾದ ಅಬ್ದುಲ್‌ ಕರೀಂ ಅಭಿಪ್ರಾಯ ಪಟ್ಟರು.

ಬಾಲಂಗೋಚಿ : ಒಂದೆಡೆ ಸತ್ಯ, ನ್ಯಾಯ, ನಿಷ್ಠೆ ಗಳ ಬಗ್ಗೆ ಬೋಧನೆ ನಡೆಯುತ್ತಿದರೆ, ಇನ್ನೊಂದೆಡೆ ಪುಸ್ತಕ ಮಾರುವವರ ಹತ್ತಿರ ಪೋಲೀಸರು ಮಾಮೂಲು ಕೀಳುತ್ತಿದ್ದರು !

ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X