ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕ ಮಾರಾಟ ಸ್ಥಗಿತಕ್ಕೆ ಸಾಹಿತಿಗಳ ಆಕ್ಷೇಪ

By Staff
|
Google Oneindia Kannada News

ಬೆಂಗಳೂರು: ಹಂಪಿಯ ಕನ್ನಡ ವಿಶ್ವ ವಿದ್ಯಾಲಯ ಮುದ್ರಿಸಿರುವ ಕನ್ನಡ ಚಲನಚಿತ್ರ ಇತಿಹಾಸ ಪುಸ್ತಕದ ಮಾರಾಟವನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ ಎಂದು ಪ್ರಸಿದ್ಧ ಕನ್ನಡ ಸಾಹಿತಿಗಳು ಅಭಿಪ್ರಾಯಪಟ್ಟಿದ್ದಾರೆ.

ಚಲನಚಿತ್ರ ಕ್ಷೇತ್ರ ತುಂಬಾ ಪ್ರಭಾವಶಾಲಿಯಾದುದು. ಆ ಮಾಧ್ಯಮದ ಬಗ್ಗೆ ಬರೆದಿರುವ ಸಂಗತಿಗಳನ್ನು ವಸ್ತುನಿಷ್ಠ ದೃಷ್ಟಿಕೋನದಿಂದ ನೋಡಬೇಕು. ವಿವಾದಕ್ಕೆ ಅನುಕೂಲವೆನಿಸಿರುವ ಭಾಗಗಳ ಬಗ್ಗೆ ಕೆಲವರು ತಪ್ಪು ಕಲ್ಪನೆಗಳನ್ನು ಹುಟ್ಟುಹಾಕಿರುವುದು ಸರಿಯಲ್ಲ ಎಂದು ಖ್ಯಾತ ಸಾಹಿತಿ ಡಾ. ಎಂ. ಚಿದಾನಂದ ಮೂರ್ತಿ , ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌, ಜಿ. ರಾಮಕೃಷ್ಣ , ಡಾ. ಸಿದ್ಧಲಿಂಗಯ್ಯ ಮುಂತಾದವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖ್ಯಾತ ಚಲನಚಿತ್ರ ನಿರ್ದೇಶಕ ಜಿ.ವಿ. ಅಯ್ಯರ್‌ ಈ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ಎಂ. ಎಚ್‌. ಕೃಷ್ಣಯ್ಯ, ಎಚ್‌. ಎಸ್‌. ಪಾರ್ವತಿ, ಪತ್ರಕರ್ತ ಬಿ.ವಿ. ವೈಕುಂಠ ರಾಜು, ಸ್ವಾತಂತ್ರ್ಯ ಹೋರಾಟಗಾರ ಎಚ್‌. ಎಸ್‌. ದೊರೆಸ್ವಾಮಿ ಮತ್ತಿತರರು ಈ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ಒಳಹೊರಗನ್ನು ತಿಳಿದಿರುವ ತಜ್ಞರ ಸಂಪಾದಕತ್ವದಲ್ಲೇ ಈ ಪುಸ್ತಕ ಸಿದ್ಧವಾಗಿದೆ. ಚಿತ್ರರಂಗದಲ್ಲಿ ನುರಿತ ನಟರು, ನಿರ್ದೇಶಕರು ಮತ್ತು ಕಲಾವಿದರು ಇಲ್ಲಿನ ಬರಹಗಳನ್ನು ಪರಿಶೀಲಿಸಿ, ತಮ್ಮ ಸಲಹೆಗಳನ್ನು ನೀಡಿದ್ದಾರೆ. ಸಾವಿರಾರು ದಾಖಲೆ, ಸಂದರ್ಶನಗಳ ಆಧಾರದೊಂದಿಗೆ ಸಿದ್ಧವಾಗಿರುವ ಈ ಪುಸ್ತಕದಲ್ಲಿ ತಪ್ಪುಗಳೇನಾದರೂ ಇದ್ದಲ್ಲಿ ಮುಂದಿನ ಮುದ್ರಣದಲ್ಲಿ ಸರಿಪಡಿಸಿಕೊಳ್ಳಬಹುದು ಎಂದು ಸಾಹಿತಿಗಳು ಸಲಹೆ ನೀಡಿದ್ದಾರೆ.

ಕೃತಿಯ ಸಂಪಾದಕರು ಪೂರ್ವಾಗ್ರಹ ಪೀಡಿತರಲ್ಲ ಎಂಬುದು ನಮಗೆ ಮನವರಿಕೆಯಾಗಿದೆ. ಹೀಗೆ ಶ್ರಮವಹಿಸಿ ಮಾಹಿತಿ ಸಂಗ್ರಹಿಸಿ ಪ್ರಕಟಿಸಿರುವ ಪುಸ್ತಕದಿಂದ ಮುಂದಿನ ಜನಾಂಗಕ್ಕೆ ಉಪಯೋಗವಾಗಲಿದೆ. ಅಂತಹ ಪುಸ್ತಕವನ್ನು ನಿಷೇಧಿಸುವುದು ಸರಿಯಲ್ಲ ಎಂದು ಸಾಹಿತಿಗಳು ಹೇಳಿದ್ದಾರೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X