• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಜ್ಜನರು ಆಚರಿಸಬೇಕಾದ ಸತ್ಕರ್ಮ : ಮಡಿಮೈಲಿಗೆ

By ವಿಷ್ಣುದಾಸ ನಾಗೇಂದ್ರಾಚಾರ್ಯ, ಮೈಸೂರು
|

ಮಡಿ ಎಂದರೆ ಮೂಗು ಮುರಿಯುವ ಮಂದಿಯೇ ಬಹಳ. ಕಾರಣ ಮಡಿ ಆಚರಿಸುವವರು ಮಾಡುವ ಅವಾಂತರಗಳು ಹಾಗೂ ಮಡಿ ಎನ್ನುವ ವಿಷಯದ ಕುರಿತು ಇರುವ ಅಜ್ಞಾನ.

ತುಂಬ ಜನರು ಪ್ರಶ್ನೆ ಮಾಡುತ್ತಿರುತ್ತಾರೆ. ಮಡಿ ಎನ್ನುವ ಶಬ್ದವೇ ಸಂಸ್ಕೃತದಲ್ಲಿ ಇಲ್ಲ, ನೀವು ಹೇಗೆ ಮಡಿ ಮಾಡುತ್ತೀರಿ, ಎಂದು. ತುಂಬ ವಿಚಿತ್ರವಾದ ಜನ. ತಾವು ಇಡಿಯ ಶಾಸ್ತ್ರಪ್ರಪಂಚವನ್ನು ಓದಿರುವಂತೆ ಮತ್ತು ಸಂಸ್ಕೃತವಾಙ್ಮಯದ ಎಲ್ಲ ಶಬ್ದಗಳು ತಿಳಿದಿರುವಂತೆ ಮಾತನಾಡುತ್ತಾರೆ. ಮಾತನಾಡಲಿಕ್ಕಿಂತ ಮುಂಚೆ ಅದರ ಬಗ್ಗೆ ತಿಳಿದುಕೊಂಡಿರಬೇಕು, ನಿರ್ಣಯ ಮಾಡಿಕೊಂಡಿರಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದ ಮೂರ್ಖ ಜನರು.

ಮಡಿ ಎನ್ನುವದಕ್ಕೆ ಸಂಸ್ಕೃತದಲ್ಲಿ ಶುದ್ಧಿ, ಶೌಚ, ಪಾವನತ್ವ, ಪವಿತ್ರತೆ ಎನ್ನುತ್ತಾರೆ.

ಮಡಿಯಲ್ಲಿರುವವನನ್ನು ಶುದ್ಧ, ಶುಚಿ, ಪಾವನ, ಪವಿತ್ರ ಎನ್ನುತ್ತಾರೆ.

ಮೈಲಿಗೆಯಲ್ಲಿರುವವನು ಅಶುದ್ಧ, ಅಶುಚಿ, ಅಪವಿತ್ರ.

ಮಡಿಯಲ್ಲಿದ್ದೇನೆ ಎನ್ನುವದನ್ನು ಸಂಸ್ಕೃತದಲ್ಲಿ ಶುಚಿರಸ್ಮಿ, ಶುದ್ಧೋಸ್ಮಿ, ಪಾವನೋಸ್ಮಿ, ಪವಿತ್ರೋಸ್ಮಿ, ಎಂದೆಲ್ಲ ಹೇಳಬಹುದು. ಮೈಲಿಗೆಯಲ್ಲಿದ್ದೇನೆ ಎನ್ನುವದನ್ನು, ನಾಹಂ ಶುಚಿಃ, ನಾಹಂ ಶುದ್ಧಃ, ಅಪವಿತ್ರೋಸ್ಮಿ, ಅಪಾವನೋಸ್ಮಿ ಎಂದೆಲ್ಲ ಹೇಳಬಹುದು. ಶುಚಿರ್ಭೂತ್ವಾ ಎಂದರೆ ಮಡಿಯಾಗಿ ಎಂದೇ ಅರ್ಥ. ಮಡಿ ಎನ್ನುವ ಅರ್ಥದಲ್ಲಿ ಶುಚಿ ಎನ್ನುವ ಶಬ್ದವನ್ನು ಧರ್ಮಶಾಸ್ತ್ರದಲ್ಲಿ ಹೇರಳವಾಗಿ ಬಳಸಿದ್ದಾರೆ. [ಮಡಿ ಎಂದರೇನು? ಮಡಿಯ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ?]

ಮಡಿ ಎನ್ನುವ ಅರ್ಥದಲ್ಲಿ ಪಾವನತ್ವ ಎನ್ನುವ ಶಬ್ದವನ್ನು ಸ್ವಯಂ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರೇ ಪ್ರಯೋಗ ಮಾಡಿದ್ದಾರೆ. ಮಹಾಭಾರತ ತಾತ್ಪರ್ಯನಿರ್ಣಯ, ಹದಿನೈದನೆಯ ಅಧ್ಯಾಯ, ಐವತ್ನಾಲ್ಕನೆಯ ಶ್ಲೋಕ.

ಕಿಂ ತ್ವಂ ನ ಚಾಲಯಸಿ ಮಾಂ ರುಧಿರಪ್ರಸೇಕೇ

ಪ್ರಾಪ್ತೇಪಿ ಪಾವನವಿರೋಧಿನಿ ಕೋಸಿ ಚೇತಿ

ಕರ್ಣನ ತೊಡೆಯಮೇಲೆ ತಲೆಯಿಟ್ಟು ಪರಶುರಾಮ ದೇವರು ಮಲಗಿರುತ್ತಾರೆ. ಆಗ ಕರ್ಣನ ತೊಡೆಯನ್ನು ಕೀಟವೊಂದು ಕೊರೆಯಲಾರಂಭಿಸುತ್ತದೆ. ರಕ್ತ ಹರಿಯುತ್ತದೆ. ಆ ರಕ್ತ ತಾಗಿ ಪರಶುರಾಮ ದೇವರು ಎದ್ದೇಳುತ್ತಾರೆ. ಎದ್ದವರು,

ಪಾವನವಿರೋಧಿನಿ - ಪಾವನತ್ವವಿರೋಧಿನಿ ‘ಪಾವನತ್ವಕ್ಕೆ' ಮಡಿಗೆ ವಿರೋಧಿಯಾದ

ರುಧಿರಪ್ರಸೇಕೇ ಪ್ರಾಪ್ತೇ - ರಕ್ತದ ಹರಿವು ಬಂದಾಗಲೂ

ತ್ವಂ - ನೀನು

ಮಾಂ - ನನ್ನನ್ನು

ಕಿಂ ನ ಚಾಲಯಸಿ - ಅಲುಗಾಡಿಸಿ ಯಾಕೆ ಎಬ್ಬಿಸಲಿಲ್ಲ.

ಮೈಯಿಂದ ರಕ್ತ ಹೊರಬರುವದು ಮೈಲಿಗೆ. ಪೂಜೆ ಮಾಡಬೇಕಾದರೆ ರಕ್ತ ಬಂದರೆ ತಕ್ಷಣ ಪೂಜೆಯನ್ನು ನಿಲ್ಲಿಸಬೇಕು ಎಂದು ವಿಧಿಯಿದೆ. ಹೀಗಾಗಿ, ಮೈಲಿಗೆಯಾದ ರಕ್ತದ ಧಾರೆಯನ್ನು ಪಾವನವಿರೋಧಿನಿ ಎಂದು ಆಚಾರ್ಯರು ಕರೆಯುತ್ತಿದ್ದಾರೆ. ಪಾವನ ಎಂದರೆ ಮಡಿಯಲ್ಲಿರುವವನು. ಪಾವನತ್ವ ಎಂದರೆ ಮಡಿ. ಶುದ್ಧಿಗೆ ವಿರೋಧಿಯಾದ ರಕ್ತವು ಹರಿಯಬೇಕಾದರೂ ನನ್ನನ್ನು ಯಾಕೆ ಎಬ್ಬಿಸಲಿಲ್ಲ ಎನ್ನುವದು ಇಲ್ಲಿನ ಅರ್ಥ. [ಬ್ರಾಹ್ಮಣರನ್ನು ಕಂಡರೆ ನಗಬೇಕೋ ಅಳಬೇಕೋ!]

ಮಡಿ ಎನ್ನುವದು ಅನೇಕ ವಿಧ. ಮೈಲಿಗೆಯೂ ಅನೇಕ ವಿಧ.

1. ಮಡಿಯೇ ಆಗದ ಮೈಲಿಗೆ

ತಾನೇ ದೇವರು ಎಂದು ತಿಳಿಯುವ ಮನುಷ್ಯ ಎಂದಿಗೂ ಮಡಿಯಾಗುವುದಿಲ್ಲ. ದೇವತೆಗಳನ್ನು, ಗುರುಗಳನ್ನು ನಿಂದೆ ಮಾಡುವ, ದ್ವೇಷ ಮಾಡುವ ಮನುಷ್ಯ ಎಂದಿಗೂ ಮಡಿಯಾಗುವದಿಲ್ಲ. ಅವನನ್ನು ನೋಡಿದರೂ ನಾವು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.

2. ಪ್ರಾಯಶ್ಚಿತ್ತದಿಂದ ಕಳೆಯುವ ಮೈಲಿಗೆ

ಕೊಲೆ, ಸುಲಿಗೆ, ಹಿಂಸೆ, ಪರಸ್ತ್ರೀಗಮನ, ಕಳ್ಳತನ, ಸುಳ್ಳು ಮುಂತಾದ ಪಾತಕಗಳನ್ನು ಮಾಡಿದಾಗ ಉಂಟಾಗುವ ಮೈಲಿಗೆ. ಈ ಮೈಲಿಗೆಯನ್ನು ಕಳೆದುಕೊಳ್ಳಲು ಭಯಂಕರ ಪ್ರಾಯಶ್ಚಿತ್ತಗಳನ್ನು ಮಾಡಿಕೊಳ್ಳಬೇಕು. ಅಂತಹವನು ಎಷ್ಟು ಬಾರಿ ಸ್ನಾನ ಮಾಡಿದರೂ ಮಡಿಯಾಗುವದಿಲ್ಲ.

ಉದಾಹರಣೆಗೆ, ಬ್ರಾಹ್ಮಣನಾದವನು ಶೂದ್ರಸ್ತ್ರೀಯನ್ನು ಕೂಡಿದಲ್ಲಿ ಅವನು ಬ್ರಾಹ್ಮಣನೇ ಅಲ್ಲ. ‘ಶೂದ್ರಾಂ ಶಯನಮಾರೋಪ್ಯ ಬ್ರಾಹ್ಮಣ್ಯಾದೇವ ಹೀಯತೇ' ಕೂಡಿದ ಸಮಯದಿಂದ ಮುಂದಿನ ಸಂಧ್ಯೇಗೆ ಅವನು ಸಂಧ್ಯಾವಂದನೆಗೆ ಸಹಿತ ಅನರ್ಹ. ಅದಕ್ಕಾಗಿ ಅವನು ಭೂರಿ ಪ್ರಾಯಶ್ಟಿತ್ತವನ್ನು ಮಾಡಿಕೊಳ್ಳಬೇಕು. ಇದರರ್ಥ, ಶೂದ್ರಸ್ತ್ರೀ ನೀಚಳು ಎಂದಲ್ಲ. ಶೂದ್ರರು ಮನೆಯಲ್ಲಿ ಕೆಲಸಕ್ಕಿರುತ್ತಾರೆ, ಅಬಲೆಯರು. ಅವರಿಗೆ ಧಣಿಗಳ ವಿರುದ್ಧ ಧ್ವನಿಯೆತ್ತಿ ಮಾತನಾಡಲು ಸಾಧ್ಯವಿರುವುದಿಲ್ಲ. ಅದನ್ನು ದುರುಪಯೋಗ ಪಡಿಸಿಕೊಂಡ ಧಣಿ ಅವಳನ್ನು ಕೂಡಿದರೆ ಅವನು ತನ್ನ ಬ್ರಾಹ್ಮಣ್ಯವನ್ನೇ ಕಳೆದುಕೊಳ್ಳುತ್ತಾನೆ, ಅವನು ಮಾಡುವ ಸಕಲ ಸತ್ಕರ್ಮಗಳೂ ವ್ಯರ್ಥ ಎನ್ನುವದನ್ನು ಶಾಸ್ತ್ರ ತಿಳಿಸುತ್ತದೆ, ಆ ಮುಖಾಂತರ ಶೂದ್ರಸ್ತ್ರೀಯರನ್ನು, ಅವರ ಶೀಲವನ್ನು, ಪಾತಿವ್ರತ್ಯವನ್ನು ರಕ್ಷಿಸುತ್ತದೆ.

3. ಕಾಲದಿಂದ ಕಳೆಯುವ ಮೈಲಿಗೆ - ಇದರಲ್ಲಿ ಮೂರುವಿಧ

ನಮ್ಮ ಜ್ಞಾತಿಗಳು ಸತ್ತಾಗ ಉಂಟಾಗುವ ಮೈಲಿಗೆ. ಹತ್ತು ದಿನ, ಮೂರು ದಿನ, ಒಂದೂವರೆ ದಿನ, ಒಂದು ದಿನ, ಹೆಣದ ಸಂಸ್ಕಾರವಾಗುವವರೆಗೆ ಹೀಗೆ ಮೈಲಿಗೆಯಿರುತ್ತದೆ. ಆ ಕಾಲ ಮುಗಿದ ಬಳಿಕ ತಲೆಗೆ ಸ್ನಾನ ಮಾಡಿ ಜನಿವಾರವನ್ನು ಬದಲಾಯಿಸಿದಾಗ ಶುದ್ಧಿಯಾಗುತ್ತದೆ. ಈ ಮೈಲಿಗೆಯಲ್ಲಿ ಯಾರನ್ನೂ ಮುಟ್ಟಬಾರದು. ಸಂಧ್ಯಾವಂದನೆ ಅರ್ಘ್ಯದವರೆಗೆ ಮಾತ್ರ. ಊಟದಲ್ಲಿ ಚಿತ್ರಾಹುತಿ ಇರುವದಿಲ್ಲ. ಅಕ್ಷತೆಯನ್ನು ಹಚ್ಚಿಕೊಳ್ಳಬಾರದು.

ಹೆಣ್ಣುಮಕ್ಕಳು ರಜಸ್ವಲೆಯರಾದಾಗ ಉಂಟಾಗುವ ಮೈಲಿಗೆ. ಮೂರು ದಿನ ಮನೆಯ ಯಾವ ಪದಾರ್ಥವನ್ನೂ ಸ್ಪರ್ಶ ಮಾಡದೆ ಅವರು ವಿಶ್ರಾಂತಿಯನ್ನು ಪಡೆಯಬೇಕು. ನಾಲ್ಕನೆಯ ದಿವಸ ತಲೆಗೆ ಸ್ನಾನ ಮಾಡುವದರಿಂದ ಶುದ್ಧಿ. ಆಗ ಅವರು ಮನೆಯ ಪದಾರ್ಥಗಳನ್ನು ಮುಟ್ಟಬಹುದು. (ದೇವರ ಪೂಜೆಯ ಸಾಮಗ್ರಿಗಳನ್ನು ಹೊರತುಪಡಿಸಿ) ಅಡುಗೆ ಮಾಡುವ ಹಾಗಿಲ್ಲ. ಐದನೆಯ ದಿವಸ ಮತ್ತೊಮ್ಮೆ ತಲೆಸ್ನಾನ ಮಾಡುವದರಿಂದ ಪೂರ್ಣ ಶುದ್ಧರಾಗುತ್ತಾರೆ. ದೇವಕಾರ್ಯ ಪಿತೃಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. (ರಜಸ್ವಲಾಧರ್ಮದ ಕುರಿತು ನನ್ನ ಸ್ತ್ರೀಧರ್ಮನಿರ್ಣಯ ಪುಸ್ತಕದಲ್ಲಿ ವಿಸ್ತಾರವಾಗಿ ಚರ್ಚಿಸುತ್ತಿದ್ದೇನೆ).

ಮನೆಯಲ್ಲಿ ಮಗು ಹುಟ್ಟಿದಾಗ ಉಂಟಾಗುವ ಮೈಲಿಗೆ. ಸೂತಕ ಮತ್ತು ರಜಸ್ವಲೆಯಾದಾಗ ಬರುವ ಅಸ್ಪೃಶ್ಯತೆಯಂತೆ ಇಲ್ಲ. ಇಲ್ಲಿ ಮನೆಯ ಪದಾರ್ಥಗಳನ್ನು ಮುಟ್ಟಬಹುದು. ಆದರೆ, ದೇವರ ಪೂಜೆಗೆ ಅಧಿಕಾರವಿಲ್ಲ. ಹೆಣ್ಣು ಮಗು ಹುಟ್ಟಿದರೆ ಮೂರು ದಿನ ಮೈಲಿಗೆ, ಗಂಡು ಮಗು ಹುಟ್ಟಿದರೆ ಹತ್ತು ದಿನ ಮೈಲಿಗೆ. ಅನಂತರ ತಲೆಸ್ನಾನ ಮಾಡಿ ಜನಿವಾರ ಬದಲಾಯಿಸುವದರಿಂದ ಶುದ್ಧಿ.

4. ಸ್ನಾನ ಮಾಡುವದರಿಂದ ಕಳೆಯುವ ಮೈಲಿಗೆ

ಎಲ್ಲ ಮೈಲಿಗೆಗಳ ಕೊನೆಯಲ್ಲಿ ಸ್ನಾನ ಮಾಡಲೇಬೇಕಾದರೂ, ಪ್ರತೀನಿತ್ಯದ ಘಟನೆಗಳ ಆಧಾರದ ಮೇಲೆ ಈ ವಿಭಾಗ. ರಾತ್ರಿ ಮಲಗಿರುತ್ತೇವೆ. ನಿದ್ರೆ ಇದು ಮೈಲಿಗೆ. ಮಡಿಯಲ್ಲಿ ನಿದ್ರೆ ಮಾಡುವ ಹಾಗಿಲ್ಲ (ಕೆಲವರು ಮಡಿಯಲ್ಲಿದ್ದಾಗ ಮಲಗುತ್ತಾರೆ. ಎದ್ದು ಮಡಿ ಎಂದು ಹೇಳುತ್ತಾರೆ. ಮೂರ್ಖತನ. ನಿದ್ರೆ ಮಾಡುವುದೇ ಮೈಲಿಗೆ, ಹೀಗಾಗಿ ಮಡಿಯಲ್ಲಿ ಮಲಗಿ ಎದ್ದು ಮತ್ತೆ ಮಡಿ ಎನ್ನುವ ಮೂರ್ಖತನ ತೋರಬಾರದು)

ಮಲಗಿದಾಗ ಉಂಟಾಗುವ ಮೈಲಿಗೆಯಿಂದ ಅಸ್ಪೃಶ್ಯತೆ ಇರುವದಿಲ್ಲ. ಮನೆಯ ಪದಾರ್ಥಗಳನ್ನು ಮುಟ್ಟಬಹುದು. ಆದರೆ, ಜಪ, ಪೂಜೆಗಳನ್ನು ಮಾಡಲು ಬರುವದಿಲ್ಲ. ಆದ್ದರಿಂದಲೇ ಮಧ್ಯಾಹ್ನದ ನಿದ್ರೆಯನ್ನು ಶಾಸ್ತ್ರ ನಿಷೇಧ ಮಾಡುತ್ತದೆ. ರಾತ್ರಿ ಮಲಗಿ ಎದ್ದ ಮೇಲೆ ಸ್ನಾನ ಮಾಡುವದರಿಂದ ಶುದ್ಧರಾಗುತ್ತೇವೆ. ಹಾಗೆಯೇ ಹಂದಿ, ನಾಯಿ ಮುಂತಾದ ಹೊಲಸು ತಿನ್ನುವ ಪ್ರಾಣಿಗಳ ಸ್ವರ್ಶವಾದಾಗ, ರಕ್ತದ ಸ್ಪರ್ಶವಾದಾಗ, ಕೀವಿನ ಸ್ಪರ್ಶವಾದಾಗ ಸ್ನಾನ ಮಾಡಿ ಜನಿವಾರ ಬದಲಾಯಿಸಬೇಕು.

ಇಲ್ಲೊಂದು ಪ್ರಶ್ನೆಯನ್ನು ನೀವು ಕೇಳಬಹುದು. ಮೇಲಿನ ಪರಶುರಾಮದೇವರ ಘಟನೆ ನಡೆದಾಗ ಪರಶುರಾಮ ದೇವರು ಮಲಗಿ ಎದ್ದು ಮೈಲಿಗೆಯಾಯಿತು ಎನ್ನುತ್ತಾರೆ. ಮಲಗಿದ್ದರಿಂದಲೇ ಮೈಲಿಗೆಯಾದಾಗ ರಕ್ತಸ್ಪರ್ಶವಾದದ್ದಕ್ಕೆ ಯಾಕೆ ಮೈಲಿಗೆ ಎಂದರು ಎಂದು?

ಕಾರಣ, ನಿದ್ರೆಯಿಂದ ಉಂಟಾಗುವ ಮೈಲಿಗೆಗಿಂತ ರಕ್ತದ ಸ್ಪರ್ಶದಿಂದ ಉಂಟಾಗುವ ಮೈಲಿಗೆ ದೊಡ್ಡದು. ಕಾರಣ ನಿದ್ರೆ ಮಾಡಿ ಎದ್ದರೆ ಜನಿವಾರ ಬದಲಾಯಿಸಬೇಕಿಲ್ಲ. ಆದರೆ, ಮತ್ತೊಬ್ಬ ಮನುಷ್ಯನ ರಕ್ತದ ಸ್ಪರ್ಶವಾದರೆ ಜನಿವಾರ ಬದಲಾಯಿಸಬೇಕು. ಹೀಗಾಗಿ ಯಾಕೆ ಎಬ್ಬಿಸಲಿಲ್ಲ ಎಂದು ಕೇಳಿದರು ಶ್ರೀ ಪರಶುರಾಮ ದೇವರು. ಯಾವನ ಸ್ಮರಣೆಯಿಂದ ನಾವು ಪುನೀತರಾಗುತ್ತೇವೆಯೋ ಅಂತಹ ಪರಶುರಾಮನಿಗೆ ಮೈಲಿಗೆಯೇ ಇಲ್ಲ. ಅದು ಅವನ ವಿಡಂಬನೆಯಷ್ಟೆ.

5. ಕೈ ಕಾಲು ತೊಳೆಯುದರಿಂದ ಕಳೆಯುವ ಮೈಲಿಗೆ

ಮಲಮೂತ್ರ ವಿಸರ್ಜನೆಯಿಂದ, ವಾಂತಿ ಮಾಡಿಕೊಳ್ಳುವದರಿಂದ, ಮನುಷ್ಯ ಮೈಲಿಗೆಯಾಗುತ್ತಾನೆ. ಆದರೆ ಕೈ ಕಾಲ್ಗಳನ್ನು ತೊಳೆದು, ಬಾಯಿ ಮುಕ್ಕಳಿಸಿ ಆಚಮನ ಮಾಡಿ ಮೈಲಿಗೆಯನ್ನು ಕಳೆದುಕೊಳ್ಳಬೇಕು. ಇದರಿಂದ ಪೂಜೆಗೆ ಅರ್ಹತೆ ಒದಗುವದಿಲ್ಲ. ಮನೆಯ ಪದಾರ್ಥಗಳನ್ನು ಮುಟ್ಟಬಹುದು ಅಷ್ಟೆ. ಶುದ್ಧ ಸಂಪ್ರದಾಯದಲ್ಲಿ ಬಂದ ಜನ ಸೊಂಟದವರೆಗೆ ಸ್ನಾನ ಮಾಡುವದರಿಂದ ಶುದ್ಧಿಯನ್ನು ಮಾಡಿಕೊಳ್ಳುತ್ತಾರೆ.

6. ಆಚಮನದಿಂದ ಕಳೆಯುವ ಮೈಲಿಗೆ

ಸೀನುವದು, ಆಕಳಿಸುವದು ಮುಂತಾದವು ಮೈಲಿಗೆ. ಅದನ್ನು ಮಾಡಿದ ನಂತರ ಆಚಮನ ಮಾಡುವದರಿಂದ ಮೈಲಿಗೆ ಕಳೆಯುತ್ತದೆ. ಬಲಗಿವಿಯಲ್ಲಿ ತೀರ್ಥಗಳ ಸನ್ನಿಧಾನವಿರುವದರಿಂದ ಅದನ್ನು ಸ್ಪರ್ಶ ಮಾಡಿಯೂ ಮೈಲಿಗೆಯನ್ನು ಕಳೆದುಕೊಳ್ಳಬೇಕು.

7. ಗುರುಸ್ಮರಣೆ - ವಿಷ್ಣುಸ್ಮರಣೆಯಿಂದ ಕಳೆಯುವ ಮೈಲಿಗೆ

ನಮ್ಮ ಸಂಸಾರವೆಂಬ ಮೈಲಿಗೆಯೇ ಕಳೆಯುತ್ತದೆ ಈ ಸ್ಮರಣೆಗಳಿಂದ. ಮತ್ತೂ ಒಂದು ವಿಭಾಗವಿದೆ. ಅದು ಮೈಲಿಗೆಯವರ ಜೊತೆಯ ಸಂಪರ್ಕದಿಂದ ಉಂಟಾಗುವ ಮೈಲಿಗೆ. ಮೈಲಿಗೆಯಲ್ಲಿರುವವರಿಗೆ ಹೇಗೆ ಶುದ್ಧಿಯೋ ಹಾಗೆಯೇ ಅವರನ್ನು ಮುಟ್ಟುವವರಿಗೂ ಅದೇ ಮೈಲಿಗೆ. ಅಂದರೆ, ಭಗವದ್ ದ್ವೇಷಿಗಳ ಸಂಪರ್ಕ ಮಾಡಿದವನೂ ಪೂರ್ಣ ಮೈಲಿಗೆ. ಶುದ್ಧಿಯೇ ಇಲ್ಲ.

ಕೊಲೆ, ಸುಲಿಗೆ ಮಾಡಿದವರಿಗೆ ಎಷ್ಟು ಪಾಪವೋ ಅಷ್ಟೇ ಪಾಪ ಅವರೊಡನೆ ಸಂಪರ್ಕ ಇಟ್ಟುಕೊಂಡವರಿಗೆ. ಅವರಂತೆ ಇವರೂ ಪ್ರಾಯಶ್ಟಿತ್ತ ಮಾಡಿಕೊಳ್ಳಬೇಕು. ಸೂತಕ ಮುಂತಾದವುಗಳಿಂದ ಮೈಲಿಗೆಯಾದವರನ್ನು ಮುಟ್ಟಿದರೆ ಸ್ನಾನ ಮಾಡಿ ಜನಿವಾರ ಬದಲಾಯಿಸದರೆ ಶುದ್ಧಿ. ಮಲಮೂತ್ರ ವಿಸರ್ಜನೆ ಮಾಡಿ ಇನ್ನೂ ಕೈಕಾಲು ತೊಳೆಯದವರನ್ನು ಮುಟ್ಟಿದರೂ ಮೈಲಿಗೆ. ಮುಟ್ಟಿದವರೂ ಕೈಕಾಲು ತೊಳೆದುಕೊಂಡರೆ ಶುದ್ಧರಾಗುತ್ತಾರೆ.

ಇದೆಲ್ಲದರ ಜೊತೆಯಲ್ಲಿ ನಮ್ಮ ಅನುಸಂಧಾನದಲ್ಲಿ ಇರಬೇಕಾದ ಮಾತು ಅದು ಶ್ರೀ ಕನಕದಾಸರು ಹರಿಭಕ್ತಿಸಾರದಲ್ಲಿ ಹೇಳಿದ ಅದ್ಭುತ ಮಾತು. "ಜಲದೊಳಗೆ ಮುಳುಗಿದರೆ ತೊಲಗದಾ ಹೊಲೆಗೆಲಸವೀ ದೇಹದೊಳು ನೀ ನೆಲೆಸಿರಲು ಹೊಲಸುಂಟೆ ರಕ್ಷಿಸು ನಮ್ಮನನನವರತ". ಮೈಥುನದ ನಂತರ, ಮಲಮೂತ್ರ ವಿಸರ್ಜನೆಯ ಮನುಷ್ಯ ಕಾಲು ತೊಳೆದು ಆಚಮನ ಮಾಡಿದರೆ ಶುದ್ದನಾಗುತ್ತಾನೆ. ಮಲಮೂತ್ರ ವಿಸರ್ಜನೆ ಮಾಡುವ ಅಂಗದಿಂದ ಹುಟ್ಟಿಬರುವ ಈ ದೇಹ ಅದ್ಹೇಗೆ ಮಡಿಯಾಗಲು ಸಾಧ್ಯ? ಸಾಧ್ಯ. ಹೇಗೆಂದರೆ ವಿಷ್ಣುಸ್ಮರಣೆಯಿಂದ. ಆದಿಕೇಶವರಾಯ ನಮ್ಮ ದೇಹದಲ್ಲಿದ್ದಾನೆ ಎನ್ನುವ ಚಿಂತನೆಯೇ ನಮ್ಮನ್ನು ಮಡಿ ಮಾಡುತ್ತದೆ. ಹೀಗಾಗಿ ನಿರಂತರ ವಿಷ್ಣುಸ್ಮರಣೆ, ವಿಷ್ಣುಭಕ್ತಿ, ಗುರುಭಕ್ತಿ, ಸದಾಚಾರಗಳೇ ನಮ್ಮನ್ನು ಮಡಿಯಾಗಿಡುವ ವಸ್ತುಗಳು ಎನ್ನುವದನ್ನು ಸರ್ವಥಾ ಮರೆಯಬಾರದು.

"ಹೊರಗೆ ಮಿಂದು ಒಳಗೆ ಮೀಯವದವರ ಕಂಡು ನಗುತಿಪ್ಪ ಪುರಂದರವಿಠಲ" ಎಂದರೆ ಇದೇ. ನೀರಿನಲ್ಲಿ, ನಮ್ಮ ದೇಹದಲ್ಲಿ, ಸ್ನಾನ ಎನ್ನುವ ಕ್ರಿಯೆಯಲ್ಲಿ ನೆಲೆನಿಂತ ಭಗವಂತನನ್ನು ನೆನೆಯುತ್ತ, ಅವನು ಸಕಲದೋಷದೂರ ಎಂದು ಚಿಂತಿಸುತ್ತ, ಸಂಕಲ್ಪಮಾಡಿ, ಮಂತ್ರಗಳನ್ನು ಹೇಳಿ ಮಾಡುವ ಸ್ನಾನವೇ ಮಡಿಸ್ನಾನ. ಮನಸ್ಸಿನಲ್ಲಿ ಕಪಟ - ದ್ವೈಷ- ಅಸೂಯೆಗಳನ್ನು ಇಟ್ಟುಕೊಂಡವ ಎಂದಿಗೂ ಮಡಿಯಾಗುವದೇ ಇಲ್ಲ. ಮೊದಲಿಗೆ ಮನಸ್ಸಿನ ಶುದ್ಧಿ. ಆ ನಂತರ ದೇಹದ ಶುದ್ಧಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
What is madi (purity) mailige (impurity)? Who should follow it? What the shastras say? Vishnudasa Nagendracharya explains the importance of madi (cleanliness) and mailige (dirtiness) while taking bath, performing pooja, preparing food, during meditation etc in a methodical way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more