ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುದ್ದಿನ ಮಳೆಮಾಸ ಜೂನಿನಲ್ಲೊಂದು ಲಹರಿ

By ಸುಶ್ರುತ ದೊಡ್ಡೇರಿ
|
Google Oneindia Kannada News

ಜೂನಿನ ಬಗ್ಗೆ ಅದೆಂಥದೋ ಮಮಕಾರ. ಮಳೆಮಾಸವೆಂಬ ಮುದ್ದು. ನೋಡಿ ನೋಡಿ ಬೇಸತ್ತಿದ್ದ ಮೇಯ ಪುಟವನ್ನು ತಿರುಗಿಸಿದ್ದೇ ಮ್ಯಾಜಿಕ್ಕಿನಂತೆ ಮಳೆಗಾಲ ಶುರುವಾಗಿಬಿಡುತ್ತದೇನೋ ಎಂಬ ಭ್ರಮೆ.

ಇರುವುದು ಮೂವತ್ತೊಂದೇ ದಿನಗಳಾದರೂ ಮುನ್ನೂರು ದಿನಗಳಿವೆಯೇನೋ ಎನಿಸುವಷ್ಟು ಬಿಸಿಲು ಮೇ ತಿಂಗಳಲ್ಲಿ. ದಿನಗಳನ್ನೆಣಿಸೆಣಿಸಿ ಸುಸ್ತಾಗಿ, ಅದ್ಯಾವಾಗ ಈ ಬೇಸಿಗೆಯ ಬೃಹನ್ಮಾಸ ಮುಗಿಯುತ್ತದೋ ಎನ್ನುತ್ತಾ ಉಸ್ಸೆಂದು ಕೂತಿದ್ದೇವೆ ಕುರ್ಚಿಯಲ್ಲಿ. ಕೈಗೆ ಸಿಕ್ಕಿದ ಯಾರದೋ ಮದುವೆಯ ಇನ್ವಿಟೇಶನ್ ಕಾರ್ಡೇ ಬೀಸಣಿಗೆಯಾಗಿದೆ.

ಗುಂಡಿ ತೆರೆದಂಗಿ, ಹಣೆಮೇಲೆ ಮೂಡಿದ ಬೆಮರ್ಮಣಿಗಳು, ಆಗಾಗ ಬಿಡುವ ನಿಟ್ಟುಸಿರು, ಕುಡಿದಷ್ಟೂ ಬೇಕೆನಿಸುವ ತಣ್ಣನೆ ನೀರು, ಹಾಗೇ ಕತ್ತೆತ್ತಿ ನೋಡಿದರೆ ಇನ್ನೂ ಮೇ ತಿಂಗಳನ್ನೇ ಮೇಲ್ಮೈಯಾಗಿಸಿಕೊಂಡಿರುವ ಕ್ಯಾಲೆಂಡರು.

ಎಲ್ಲೋ ಋತುರಾಜನಿಗೆ ಕರುಣೆ ಬಂದು ತಣ್ಣನೆಯದೊಂದು ಗಾಳಿ ಬೀಸಿದರೆ ಆ ಕ್ಯಾಲೆಂಡರಿನ ಪುಟಗಳು ಪಟಪಟನೆ ಬಡಿದುಕೊಂಡು ಕೆಳಗಿರುವ ಜೂನು ಹಣುಕಿ ನೋಡಿ 'ಹೇ ಬಂದೆ, ಮುಂದೆ ನನ್ನದೇ ರಾಜ್ಯಭಾರ' ಅನ್ನುತ್ತದೆ.

Waiting for Monsoon

ಮಳೆಮಾಸವೆಂಬ ಮುದ್ದು: ಜೂನಿನ ಬಗ್ಗೆ ಅದೆಂಥದೋ ಮಮಕಾರ. ಮಳೆಮಾಸವೆಂಬ ಮುದ್ದು. ನೋಡಿ ನೋಡಿ ಬೇಸತ್ತಿದ್ದ ಮೇಯ ಪುಟವನ್ನು ತಿರುಗಿಸಿದ್ದೇ ಮ್ಯಾಜಿಕ್ಕಿನಂತೆ ಮಳೆಗಾಲ ಶುರುವಾಗಿಬಿಡುತ್ತದೇನೋ ಎಂಬ ಭ್ರಮೆ.

ಜೂನ್ ಪುಟದ ತಾರೀಖಿನ ಅಂಕಿಗಳಿಗೆ ಬೇರೆಯದೇ ಬಣ್ಣ, ಬೇರೆಯದೇ ಶೈಲಿ, ಬೇರೆಯದೇ ಒನಪಿದ್ದಂತೆ ಭಾಸ. ಚಾತಕ ಪಕ್ಷಿಯ ತೆರೆದ ಕೊಕ್ಕಿನೊಳಗೆ ಬಿದ್ದ ಮಳೆಹನಿ, ಬಾಯಿಯನ್ನು ಒದ್ದೆ ಮಾಡಿ, ಗಂಟಲಿನೊಳಗೆ ತಣ್ಣಗೆ ಇಳಿದು, ಹೊಟ್ಟೆ ಸೇರಿ, ಅಲ್ಲಿದ್ದ ಕಾಳು-ಹುಳ-ಹಪ್ಪಟೆಗಳನ್ನು ತೇಲಿಸಿದಂತೆ ಕಲ್ಪನೆ. ಸೋನೆಯಿಂದ ಶುರುವಾಗುವುದು ಜೂನು. ಬಾನು ಮುಂಗಾರು ಮೋಡಗಳಿಂದಾವೃತವಾದಾಗಲೇ ಬರುವುದು ಜೂನು.

ಜೂನಿನ ಚೌಕ ದಿನಗಳಲ್ಲಿ ನಡೆಯುತ್ತ ಹೋದಂತೆ ಮಳೆ ಜಾಸ್ತಿಯಾಗುತ್ತ ಹೋಗುತ್ತದೆ. ನಾಗಂದಿಗೆಯಲ್ಲಿದ್ದ ಛತ್ರಿಯನ್ನಿಳಿಸಿ, ಹೊರಬಂದು ಬಿಚ್ಚಿದರೆ ಇಡೀ ಆಕಾಶವೇ ಕಪ್ಪಾಗಿದೆ. ಛತ್ರಿಯ ದಿಗಂತಗಳು ಕೈಗೆಟುಕುವಂತಿವೆ. ಬಣ್ಣದ ಛತ್ರಿಯಲ್ಲಂತೂ ಕಾಮನಬಿಲ್ಲೇ ಇದೆ.

ಮಡಿಚಿಟ್ಟಿದ್ದ ರೈನ್‌ಕೋಟುಗಳ ನೆರಿಗೆ ಮುರಿಯುವ ಹೊತ್ತು ಇದು. ಬಿಳಿಹುಲ್ಲಿನ ಗೊಣಬೆಗೆ ನೀಲಿ ಟಾರ್ಪಲಿನಂಗಿ. ಗದ್ದೆ ಬದುವಿನಲ್ಲಿ ಸಾಲಾಗಿ ನಡೆಯುತ್ತಿರುವ ಕಂಬಳಿಕೊಪ್ಪೆ ಹೊದ್ದ ರೈತರನ್ನು ಪಕ್ಕನೆ ನೋಡಿದರೆ ಕಪ್ಪು ದೇವರ ಮೂರುತಿಗಳೆಲ್ಲ ಒಟ್ಟಿಗೆ ಎಲ್ಲಿಗೋ ಹೊರಟಂತೆ ಕಾಣಿಸುತ್ತದೆ.

Lake

ಕೆರೆಗಳಿಗೆ ಹೊಸನೀರು ಬಂದಿದೆ:. ಈಗಷ್ಟೆ ದೊಗರಿನಿಂದ ಹೊರಬಂದು ಈಜಿನಭ್ಯಾಸ ಶುರುಮಾಡಿರುವ ಮರಿಮೀನುಗಳ ಬಾಯೊಳಗೆ ಕೆಸರುನೀರು ಹೋಗಿ ವಾಕರಿಕೆ ಬಂದಿದೆ. ಕಪ್ಪೆಗಳಿಗಿದು ಸಂತಾನೋತ್ಪತ್ತಿಯ ಕಾಲ. ಬಸುರಿ ಕಪ್ಪೆಗೆ ನೀಲಿಹುಳ ತಿನ್ನುವ ಬಯಕೆ. ಹಡೆದ ಕಂದಗಳ ಹಾರಾಟ ಕಂಡು ಅದು ಉದುರಿಸಿದ ಆನಂದಭಾಷ್ಪಕ್ಕೆ ಜಲಾಶಯದ ನೀರಿನ ಮಟ್ಟ ಇನ್ನಷ್ಟು ಹೆಚ್ಚಿದೆ.

ತೋಟದ ಹೊಟ್ಟುಗೆರೆಯಲ್ಲಿ ಜವಳಾಗಿದೆ. ಬಾವಿಗೆ ಬಂದ ಹೊಸ ನೀರು ಕೆಂಪಾಗಿದೆ. ಅಷ್ಟುದ್ದ ಹಗ್ಗವನ್ನು ಕೆಳಗಿಳಿಸಲು ನೂರು ಸುತ್ತು ತಿರುಗಬೇಕಿದ್ದ ಗಡಗಡೆ ಇನ್ನು ಹತ್ತು ಸುತ್ತು ತಿರುಗಿದರೆ ಸಾಕಪ್ಪಾ ಅಂತ ಖುಷಿಯಾಗಿದೆ.

ಮಲಗಿದಲ್ಲೇ ಮಲಗಿ ಬೇಸರವಾಗಿದ್ದ ಕಾರಿನ ವೈಪರುಗಳು ಕೆಲಸ ಸಿಕ್ಕ ಭರದಲ್ಲಿ ಗಾಜನ್ನು ವೇಗವಾಗಿ ಒರೆಸುತ್ತಿವೆ. ನಗರದ ಗುಂಡಿಬಿದ್ದ ರಸ್ತೆಯಲ್ಲಿ ದೊಡ್ಡ ಮೊಸಳೆಯೇ ಪ್ರತ್ಯಕ್ಷವಾಗಿ ಸರ್ಕಾರಕ್ಕೆ ಎಚ್ಚರಾಗಿದೆ. ಡಾಂಬರು ಸವರಿದ ಸಣ್ಣ ಜಲ್ಲಿಕಲ್ಲುಗಳಿಂದ ಗುಂಡಿಗಳನ್ನು ಮುಚ್ಚಲಾಗುತ್ತಿದೆ.

School

ಶಾಲೆಗಳು ಶುರುವಾಗಿವೆ: ಎಷ್ಟೊಂದು ಅಪ್ಪ-ಅಮ್ಮರ ಕನಸುಗಳು ಪುಟ್ಟ ಛತ್ರಿ ಹಿಡಿದೋ, ರೈನ್‌ಕೋಟು ತೊಟ್ಟೋ ಶಾಲೆಯತ್ತ ನಡೆದಿವೆ. ಪಾಟಿಚೀಲದೊಳಗಿನ ಸಣ್ಣ ಡಬ್ಬಿಯಲ್ಲಿನ ಚಪಾತಿ ಚೂರುಗಳಲ್ಲಿ ಕಾವಲಿ ಮೇಲಿನ ಬಿಸಿಯಲ್ಲದೇ ನಾದಿದ ಕೈಯ ಬಿಸುಪೂ ಸೇರಿಕೊಂಡಿದೆ. ಮಕ್ಕಳಷ್ಟೇ ಅಲ್ಲ, ಮೇಷ್ಟ್ರುಗಳೂ ಸ್ವೆಟರ್ ತೊಟ್ಟು ಬಂದಿದ್ದಾರೆ.

ಕಪ್ಪುಹಲಗೆಯ ಮೇಲೆ ಚಾಕ್ ಪೀಸ್ ಮೂಡಿಸುತ್ತಿರುವ ಚೀಂವ್‌ ಚೀಂವ್ ಸದ್ದನ್ನು ವರ್ಷಧಾರೆಯ ಸದ್ದು ನುಂಗಿದೆ. ಜಾರುವ ನೆಲದಲ್ಲಿ ಜೂಟ್-ಮುಟ್ಟಾಟ ಆಡುವಾಗ ಬಿದ್ದು ಮಂಡಿ ತರಚಿಕೊಂಡ ಹುಡುಗನಿಗೆ ಟಿಂಚರ್ ಹಚ್ಚಲಾಗುತ್ತಿದೆ. ಆತನ ಅಳುವನ್ನು ಇಡೀ ಕ್ಲಾಸು ಕಾರಿಡಾರಿನಲ್ಲಿ ನಿಂತು ಯೂನಿಫಾರ್ಮಿನಲ್ಲಿ ನೋಡುತ್ತಿದೆ. ಮುಂದೆ ಓದಿ: ಮಳೆಗಾಲದೊಂದಿಗೇ ಪಾಪಿ ಆಷಾಢವೂ ಬಂದಿದೆ

English summary
Waiting for Monsoon and First Rain a must experience in Month of June. In the month of June one can witness rain, first day in school, Ashadha month and its traditional myths, Muslims observe fasting as Ramzan also falls in this month an article by blogger Sushrutha Dodderi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X