ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈವಿಧ್ಯಮಯ ಭಾರತದಲ್ಲಿ ಏಕತೆ ರೂಪಿಸಿದ ರಾಮಾಯಣ

By ಪಿ.ಕೌಸಲ್ಯ
|
Google Oneindia Kannada News

ಮ್ಯಾಥೋ ಅರ್ನೋಲ್ಡ್ ಹೇಳುವಂತೆ ವ್ಯಕ್ತಿ ಪ್ರತಿಭೆ ಮತ್ತು ಯುಗ ಶಕ್ತಿ ಮಿಳಿತವಾದಾಗಲೇ ಮಹಾನ್ ಕೃತಿ ರಚನೆ ಸಾಧ್ಯ. ವಾಲ್ಮೀಕಿ ಎಂಬ ವ್ಯಕ್ತಿಯ ಕಾವ್ಯಪ್ರತಿಭೆಯ ಅಭಿವ್ಯಕ್ತಿಯಾಗಿ ರಾಮಾಯಣ ಭಾವಗೀತೆಯ ಗುಣಹೊಂದಿದೆ. ಇಂತಹ ಕವಿ-ಕೃತಿ ನಮಗೆ ಲಭಿಸಿರುವುದು ಕೇವಲ ಭಾರತೀಯರ ಹೆಮ್ಮೆ ಮಾತ್ರವಲ್ಲ, ಕುವೆಂಪು ಅವರೇ ಹೇಳುವಂತೆ 'ಭುವನದಭಾಗ್ಯ'

ಮಾಸ್ತಿಯವರ ದೃಷ್ಟಿಯಲ್ಲಿ : ವಾಲ್ಮೀಕಿ ರಚಿಸಿರುವ ಆರು ಕಾಂಡಗಳಲ್ಲಿ ಅಯೋಧ್ಯಾ ಕಾಂಡವು ಬಹಳ ಶ್ರೇಷ್ಟತೆಯನ್ನು ಹೊಂದಿದೆ. ಇದು ರಾಮಾಯಣವೆಂಬ ಕಾವ್ಯ ಸೌಧದ ಮಧ್ಯಭಾಗ ಎಂದು ಅವರ ಭಾವನೆ. ವಾಲ್ಮೀಕಿ ಕಥೆಯನ್ನು ಬಾಲಕಾಂಡದಿಂದ ಆರಂಭಿಸಿದ್ದು, ಇಲ್ಲಿ ಭಾವದ ಕಣ್ಣು ಇದ್ದು, ಕಾವ್ಯದ ರಸ ಉಕ್ಕುತ್ತದೆ. [ವಾಲ್ಮೀಕಿ ಯಾರು? ಪುಸ್ತಕದ ವಿರುದ್ಧ ಭುಗಿಲೆದ್ದ ಆಕ್ರೋಶ]

ಪ್ರಕೃತಿ ವರ್ಣನೆಗಳಲ್ಲಿ ಸಹಜವಾದ ವರ್ಣನೆ, ಪ್ರೌಢವಾದ ವರ್ಣನೆ ಅಂದರೆ ಸ್ವಭಾವೋಕ್ತಿ ಹಾಗೂ ವಕ್ತ್ರೋಕ್ತಿ ಈ ಎರಡನ್ನೂ ರಾಮಾಯಣದಲ್ಲಿ ಕಾಣಬಹುದೆನ್ನುತಾರೆ ಮಾಸ್ತಿ. ವಾಲ್ಮೀಕಿ ಕಾಣದ ವಿಷಯವಿಲ್ಲ, ವರ್ಣಿಸದ ವಿವರವಿಲ್ಲ ಎಂಬುದು ಮಾಸ್ತಿಯವರ ಹೊಗಳಿಕೆ. ರಾಮಾಯಣದಲ್ಲಿ ಕಂಡುಬರುವ ವಿಧಿವಿಲಾಸದ ರೂಪಣವನ್ನು ಕುರಿತು ಮಾಸ್ತಿ ಹೇಳುತ್ತಾರೆ. ರಾಮಾಯಣದಲ್ಲಿ ರುಚಿಗಿಂತ ಶುಚಿಗೆ ಪ್ರಾಶಸ್ತ್ಯ, ಶೃಂಗಾರ ಇಲ್ಲಿ ಒಂದು ಸಲವಾದರೂ ಕದಡಿ ಬಗ್ಗಡವಾಗುವುದಿಲ್ಲ. ಗಂಡು ಹೆಣ್ಣಿನ ಪ್ರೇಮ ಜೀವನದಲ್ಲಿ ಬಹುಮುಖ್ಯ ತತ್ವ. ಆದರೆ ಅದನ್ನು ಗಂಭೀರವಾಗಿ ನಡೆಯಿಸಿಕೊಂಡು ಹೋಗಬೇಕು. ವಾಲ್ಮೀಕಿ ರಾಮಾಯಣದಲ್ಲಿ ಈ ಗಾಂಭೀರ್ಯವನ್ನು ಕಾಣುತ್ತೇವೆ ಎನ್ನುತ್ತಾರೆ ಮಾಸ್ತಿ.

valmiki

ಕಾವ್ಯ ಸಂಸ್ಕೃತಿ ರುವಾರಿ ವಾಲ್ಮೀಕಿ ಮಹರ್ಷಿ : ವಾಲ್ಮೀಕಿಯ ವಿಸ್ತಾರವಾದ ಪ್ರಪಂಚ ಜ್ಞಾನದ ಫಲವಾಗಿ ಅವರ ಕಾವ್ಯದಲ್ಲಿ ಅವನು ಕಂಡ ಅಥವಾ ಆಶಿಸಿದ ಒಂದು ಸಂಸ್ಕೃತಿ ಚಿತ್ರ ದೊರೆಯುತ್ತದೆ. ಒಡವೆ ಮೇಲಣ ಆಸೆ ಹಾನಿಕರವಾದದ್ದು, ಮನುಷ್ಯ ಆಸೆಯನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು. ಗಂಡು ಹೆಣ್ಣನ್ನಾಗಲಿ, ಹೆಣ್ಣು ಗಂಡನ್ನಾಗಲಿ ಬಲಾತ್ಕಾರದಿಂದ ತೆಗೆದುಕೊಳ್ಳಬಾರದು ಎಂಬ ನೀತಿ ರಾಮಾಯಣದಲ್ಲಿ ಅಡಗಿದೆ ಎಂದು ವಿವರಿಸುತ್ತಾರೆ ಮಾಸ್ತಿ. [ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ಸಿಗಲಿ]

ಡಿ.ವಿ.ಜಿ ಅವರ ದೃಷ್ಟಿಯಲ್ಲಿ : ಹೃದಯ ಪರಿಣಾಮದಿಂದ ನೋಡಿದರೆ ಅದು ಕಾವ್ಯ, ಕಲ್ಪಿತ ಕಥಾನಕಕ್ಕಿಂತ ಹೆಚ್ಚಿ ಪ್ರಭಾವವುಳ್ಳ ಕಾವ್ಯ. ರಾಮಾಯಣವು ಚರಿತ್ರೆಯನ್ನು ಅಂತರ್ಗತ ಮಾಡಿಕೊಂಡಿರುವ ಕಾವ್ಯವಾದುದರಿಂದಲೇ ಅದು ವಾಸ್ತವಿಕ ಪ್ರಮಾಣವೆಂಬಂತೆ ಜನಾಂಗೀಕಾರವನ್ನು ಸಂಪಾದಿಸಿಕೊಂಡಿದೆ. ನಮಗೆ ಅದು ಚಾರಿತ್ರಿಕ ಸಾಮಗ್ರಿಯೂ ಹೌದು. ಅದಕ್ಕಿಂತ ಹೆಚ್ಚಾಗಿ ಅದು ಹೃದಯ ಸಂಸ್ಕಾರ ಸಾಮಗ್ರಿ. ದೇಶ ಚರಿತ್ರೆ ಅದಕ್ಕಿಂತ ಮಿಗಿಲಾಗಿ ಜನತಾಂತರಾತ್ಮ ಚರಿತ್ರೆ ಎಂದು ಡಿವಿಜಿಯವರು ವಿಶ್ಲೇಷಿಸಿದ್ದಾರೆ.

8ನೇಯ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ದಕ್ಷಿಣಪೂರ್ವ ಏಷ್ಯಾದಲ್ಲಿ ಏರ್ಪಟ್ಟಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ರಾಮಾಯಣ ಇಂಡೋನೇಷ್ಯಾ ಜಾವಾ, ಸುಮಾತ್ರಾ ಮತ್ತು ಬೋರ್ನಿಯಾ, ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಲಾಓಸ್‍ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ರೂಪದಲ್ಲಿ ಇಂದಿಗೂ ಜನಮನ ಸೂರೆಗೊಳ್ಳುತ್ತಿದೆ.

ಭಾರತೀಯರಾದ ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರಸಿ ಇನ್ನಾವುದೇ ಧಾರ್ಮಿಕತೆಯ ಅವಲಂಬಿತನಾಗಿದ್ದರೂ ರಾಮಾಯಣದ ಸಂಗತಿಗಳನ್ನು ಪರಿಗ್ರಹಿಸದೇ ಇರುವುದಿಲ್ಲ. ಈ ದೇಶದ ಪ್ರತಿಯೊಬ್ಬರಿಗೂ ಇದು ಒಂದಲ್ಲ ಒಂದು ರೀತಿಯಲ್ಲಿ ಪರಿಚಯಕ್ಕೆ ಬಂದಿರುತ್ತದೆ. ರಾಮಾಯಣ ಈ ಮಣ್ಣಿನ ಮಹಾಕಾವ್ಯವಷ್ಟೇ ಅಲ್ಲ. ಈ ನೆಲ ಪುರಾಣದ ಪದಕ ಪಡೆದಿದೆ. "ಲ್ಯಾಂಡ್ ಆಫ್ ಲೆಜೆಂಡ್" ಎಂದು ಕರೆಯಬಹುದಾದ ರಾಮಾಯಣವನ್ನು ಅರಿಯದ ಮನುಜನಿಲ್ಲ ಬಳಸದ ತೀರ್ಮಾನಗಳಿಲ್ಲ. ಜೀವಿಸದ ಭಾರತೀಯನಿಲ್ಲ.

ಒಟ್ಟಾರೆಯಾಗಿ ವಾಲ್ಮೀಕಿಯ ಈ ರಾಮಾಯಣ ಕೃತಿ ವೈವಿಧ್ಯಮಯ ಭಾರತದಲ್ಲಿ ಏಕತೆಯನ್ನು ರೂಪಿಸಿರುವುದು ಅಮೋಘವಾದ ಸಾಂಸ್ಕೃತಿಕ ಸಂಗತಿಯಾಗಿದೆ. ಅಖಂಡ ಭಾರತದ ಸಮೈಕ್ಯ ಭಾವದ ನಿರ್ಮಾತೃವಾಗಿದ್ದಾರೆ. ನಮ್ಮ ಅಂತರಂಗದ ಸಹೃದಯತೆಗೆ ದೃಷ್ಟಾಂತವನ್ನು ಕೊಡಬಲ್ಲ ಕಾವ್ಯ ರಚನೆ ಬಹುದೊಡ್ಡ ತಪಶ್ಚರ್ಯೇ ಅಂತಹ ತಪಸ್ವಿ ಮಹರ್ಷಿ ವಾಲ್ಮೀಕಿಗೆ ನಮ್ಮೆಲ್ಲರ ನಮನಗಳು.

ಸಂಗ್ರಹ : ಶ್ರೀಮತಿ ಪಿ.ಕೌಸಲ್ಯ
ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ,
ಬೆಂಗಳೂರು.

English summary
The moral, social, and spiritual values of Valmiki Ramayana relevant for modern life. Here is article on Valmiki Ramayana in the occasion of Valmiki jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X