ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'God Particle' ಎಂಬ ಅರ್ಥವಿಲ್ಲದ ಪದ

By ಡಾಕ್ಟರ್ ಕೆ.ಆರ್.ಎಸ್. ಮೂರ್ತಿ
|
Google Oneindia Kannada News

"God Particle" ಎಂಬ ಹೆಸರಿನಲ್ಲಿ ಅನೇಕಾನೇಕ ಸಮಾಚಾರ ಪತ್ರಿಕೆಗಳು, ಮಾಸ ಪತ್ರಿಕೆಗಳು, ರೇಡಿಯೋ, ಟೆಲಿವಿಷನ್ ಇತ್ಯಾದಿ ಮಾಧ್ಯಮಗಳಲ್ಲಿ ನೀವು ಒಂದೆರಡು ವರ್ಷಗಳ ಹಿಂದೆ ಓದಿರಬಹುದು, ಕೇಳಿರಬಹುದು, ನೋಡಿರಬಹುದು. ನಿಮಗೆಲ್ಲಾ ಗೊತ್ತೇ ಇದ್ದ ಹಾಗೆ ಬಹಳ ಪತ್ರಕರ್ತರು, ರೇಡಿಯೋ ಮತ್ತು ಟೆಲಿವಿಷನ್ ಗಳ ಉದ್ಯೋಗಸ್ತರು "ಇಲಿ ಬಂತು ಎಂದು ಯಾರೋ ಹೇಳಿದರೆ, ಹುಲಿಯೇ ಬಂತು" ಎಂದು ನನ್ನಂಥ ಮತ್ತು ನಿಮ್ಮಂತಹ "ಜಾಣ" ಜನ ಸಾಮಾನ್ಯರಿಗೆ ಕೂಗಿ ಹೇಳಿ, 'ಏನಪ್ಪಾ ಇದು' ಎಂದು ನಮ್ಮ ಕರ್ಣದಾನ ಮತ್ತು ನಯನ ದಾನವನ್ನು ಮಾಡಿಬಿಡುತ್ತೇವೆ.

ಸಾವಧಾನವಾಗಿ ಕೂತು ಯೋಚನೆಯನ್ನು ಮಾಡೋಣ. "ದೇವರು ಕಣ" ಅಥವಾ "ದೇವರ ಕಣ" ಅಥವಾ "ದೇವ ಕಣ" ಎನ್ನುವುದಕ್ಕೇ ಅರ್ಥವಿಲ್ಲ. ನೀವು ದೇವರನ್ನು ನಂಬುವರು ಅಂದು ಕೊಳ್ಳೋಣ. ದೇವರು ಯಾಕೆ ಒಂದು ಕಣದಲ್ಲಿ ಮಾತ್ರ ಇರುತ್ತಾನೆ / ಇರುತ್ತಾಳೆ; ಅಥವಾ ಇರುತ್ತದೆ? ಇದ್ದರೆ ಸರ್ವಾಂತರ್ಯಾಮಿಯು ಎಲ್ಲಾ ಕಣಗಳಲ್ಲೂ, ಎಲ್ಲಾ ಬಾಹ್ಯಾಕಾಶಗಳಲ್ಲೂ, ಕಂಡದ್ದು, ಮಾನವನಿಗೆ ಇನ್ನೂ ಕಾಣದ್ದು, ಅರಿಯದ್ದುಗಳಲ್ಲೆಲ್ಲಾ ಆವರಿಸಿ ಕೊಂಡಿರಬೇಕಲ್ಲವೇ?

The word God Particle has no meaning

ಈಗ ನಿಜ ವೈಜ್ಞಾನಿಕ ಹಿನ್ನೆಲೆ, ಅಣು ಮತ್ತು ಮೂಲ ಕಣ ವಿಜ್ಞಾನವನ್ನು ಕುರಿತು ಅರಿತು ಕೊಳ್ಳೋಣ. ಮೊದಲು ಸ್ವಲ್ಪ ವೈಜಾನಿಕ ಹಿನ್ನೆಲೆ ಚರಿತ್ರೆ ನಾನು ಹೇಳಬೇಕು. 1964ರಲ್ಲಿ ಪೀಟರ್ ಹಿಗ್ಗ್ಸ್ ಎನ್ನುವವರು ಈ ಕೆಳಗಿನ ರೀತಿ ಮಂಡಿಸಿದರು:

ಅವರು ಒಂದು ಕಾಂತ ಶಕ್ತಿ ಹಾಗೂ ವಲಯದ ಮಂಡನೆಯನ್ನು ಮಾಡಿ, ಇದರ ಕಾರಣದಿಂದಾಗಿ ಕೆಲವು ಮೂಲ ಕಣಗಳಿಗೆ ದ್ರವ್ಯ ರಾಶಿಯು ಇರುತ್ತದೆ ಎಂದು ವಿವರಿಸಿದರು. ಇದಕ್ಕೆ ನಾವು "ದ್ರವ್ಯ ಕಾಂತ ಮತ್ತು ದ್ರವ್ಯ ವಲಯ" ಎಂದು ಕರೆಯೋಣ. ಇದಕ್ಕೆ "ಹಿಗ್ಗ್ಸ್ ಎಫೆಕ್ಟ್ " ಎಂದು ಕರೆಯುತ್ತಾರೆ. ಇದನ್ನು ನಾವು "ಹಿಗ್ಗ್ಸ್ ಪರಿಣಾಮ" ಮತ್ತು "ಹಿಗ್ಗ್ಸ್ ಕಾರಣ" ಎಂದು ಕರೆಯೋಣ. ಈ ಹಿಗ್ಗ್ಸ್ ಪರಿಣಾಮವು ಹಿಗ್ಗ್ಸ್ ಅವರು ಮಂಡಿಸಿದ ದ್ರವ್ಯ ಕಾಂತದ ಕಾರಣವಾಗಿ ಮೂಲ ಕಣಗಳು ದ್ರವ್ಯ ಕಾಂತ ವಲಯದ ಮೂಲಕ ಚಲಿಸುವಾಗ ಅವಕ್ಕೆ ದ್ರವ್ಯ ರಾಶಿಯು ಆಗಿ ಬರುತ್ತದೆ.

ಇದಕ್ಕೆ ಒಂದು ಉದಾಹರಣೆಯನ್ನು ವಿವರಣೆಯ ಧ್ಯೇಯಕ್ಕಾಗಿ ತಿಳಿಸುತ್ತೇನೆ. ಇಂತಹ ಉದಾಹರಣಾ ವಿವರಣೆಗಳನ್ನು ನಾನು ಉಲ್ಲೇಖಿಸಿದ ಸಂದರ್ಭಕ್ಕೆ ಮಾತ್ರ ಅನ್ವಯಸಿ. ಬೇರಾವುದಕ್ಕೂ ಕುರುಡು - ಕುರುಡಾಗಿ ಉಪಯೋಗಿಸಬೇಡಿ. ಮಾನವ ಲೋಕದ ಅನುಭವದಲ್ಲಿ ಮುಳುಗಿರುವ ಮತ್ತು "ಸಿಕ್ಕಿ ಹಾಕಿಕೊಂಡು ಬಂಧಿತರಾಗಿರುವ" ನಮಗೆ ಅಣು ಲೋಕದ ಸುಲಭವಾಗಿ ಅನ್ವಯಿತವಾಗಿ ವೇದ್ಯವಾಗುವುದಿಲ್ಲ. ಅದರಿಂದಲೇ, ಸಮಯ - ಸಂದರ್ಭಗಳಿಗೆ ತಕ್ಕಂತೆ ಮಾತ್ರ, ಉದಾಹರಣಾ ಉಲ್ಲೇಖನವನ್ನು ಮಾಡಬೇಕಾಗುತ್ತದೆ.

ಮಾನವ ಲೋಕದಲ್ಲಿ ಯಾವುದೇ ವಸ್ತುವು ಎಣ್ಣೆ, ನೀರು, ಇತ್ಯಾದಿಗಳಂತಹ ಸ್ನಿಗ್ಧ ದ್ರವಗಳ ಮೂಲಕ ಚಲಿಸುವಾಗ ಘರ್ಷಿತ ಎಳೆತವನ್ನು ಅನುಭವಿಸುತ್ತದೆ. ನೀವು ನೀರಿನಲ್ಲಿ ಈಜುವಾಗ ಇಂತಹ ಪರಿಣಾಮವನ್ನು ನೀವು ಅನುಭವಿಸಿದ್ದೀರಲ್ಲವೇ?

ಹಾಗೆಯೇ, ಮೂಲ ಕಣಗಳು ಹಿಗ್ಗ್ಸ್ ಪರಿಣಾಮವನ್ನು ಅನುಭವಿಸುತ್ತವೆ ಎಂದು ಅವರು ವಿವರಿಸಿದರು. ವಿಜ್ಞಾನದಲ್ಲಿ ಕ್ಲಿಷ್ಟ ಗಣಿತ ಮತ್ತು ಇತರ ವೈಜ್ಞಾನಿಕ ತಂತ್ರಗಳನ್ನೂ ಇಂತಹ ಮಂಡನೆಯನ್ನು ಮಾಡುವುದು ಸಾಮಾನ್ಯ. ಹೆಸರಾಂತ ವಿಜ್ಞಾನಿಗಳು ಮಂಡನೆಯನ್ನು ಮಾಡಿದ್ದರೂ, ಅವೆಲ್ಲಾ ಪ್ರಯೋಗ, ಪರೀಕ್ಷೆ, ಪ್ರಮಾಣೀಕರಣ ತಂತ್ರಗಳಿಂದ ಸಾಕ್ಷಿಯಾಗಬೇಕು.

ಅಣು ಮತ್ತು ಮೂಲ ಕಣಗಳ ಪ್ರಯೋಗಗಳನ್ನು ಮಾಡಲು ಅತಿ ವೆಚ್ಚದ ಬೃಹತ್ ಉಪಕರಣಗಳನ್ನು ಕೂಡಿದ ಅಧಾರ ವಿನ್ಯಾಸ ರಚನೆಗಳನ್ನು ಸಂಯೋಜಿಸಬೇಕು. ಅಣು ಕಣಗಳನ್ನು ಒಂದಕ್ಕೆ ಇನ್ನೊಂದು ಅತೀವ್ರ ಶಕ್ತಿ ಮತ್ತು ವೇಗದಲ್ಲಿ ಡಿಕ್ಕಿ ಹೊಡೆಯುವಂತೆ ಮಾಡಬೇಕು. ಇಂತಹ ಕಲ್ಪನೆ, ಸಂಯೋಜನೆಗಳು ಮಾಡಲು ಅನೇಕಾನೇಕ ದೇಶಗಳ ಪ್ರಮುಖ ಮತ್ತು ಪ್ರಸಿದ್ಧ ವಿಜ್ಞಾನಿಗಳೂ, ತಂತ್ರಜ್ಞಾನಿಗಳೂ ಸಮೂಹಿತರಾಗಿ ವರ್ಷಾನುಗಟ್ಟಲೆ ಕೆಲಸ ಮಾಡಬೇಕು. ಇದಕ್ಕೆ ಬಿಲಿಯನ್ನು ಗಟ್ಟಲೆ ಡಾಲರು ಬೇಕಾಗುವುದರಿಂದ, ವಿವಿಧ ಸರಕಾರಗಳ ಧನ ಸಹಾಯ ಕೂಡಿಬರಬೇಕು.

CERN ಎಂಬ ಜಿನೀವಾ ನಗರದಲ್ಲಿ ಇರುವ ಯೂರೋಪಿನ ಅಣು ಕೇಂದ್ರ ಸಂಶೋಧನಾ ಸಂಸ್ಥೆಯು ಫ್ರಾನ್ಸು ಮತ್ತು ಸ್ವಿಟ್ಸರ್ ಲ್ಯಾಂಡ್ ಸೇರುವ ಜಾಗದಲ್ಲಿ 27 ಕಿಲೋಮೀಟರು ಸುತ್ತಳತೆಯಿರುವ ಸುರಂಗ ಗರ್ಭಿತ ಪ್ರಯೋಗಶಾಲೆಯಲ್ಲಿ ಸುಮಾರು ನೂರು ದೇಶಗಳಿಂದಲೂ ಕೂಡಿ ಬಂದಿರುವ, ಒಟ್ಟು ಹತ್ತು ಸಾವಿರಕ್ಕೂ ಹೆಚ್ಚಿನ ವಿಜ್ಞಾನಿ ಮತ್ತು ತಂತ್ರಜ್ಞಾನಿ ಗಳು ಸಂಶೋಧನೆಯನ್ನು 1954ರಲ್ಲೇ ಪ್ರಾರಂಭಿಸಿದ ಲಾರ್ಜ್ ಹ್ಯಾಡ್ರಾನ್ ಕೊಲೈಡರ್ (LHC) ನಲ್ಲಿ ಹಿಗ್ಗ್ಸ್ ಮಂಡನೆಯೇ ಅಲ್ಲದೆ, ಇನ್ನೂ ವಿವಿಧ ಪ್ರಯೋಗಗಳನ್ನು ಮಾಡುತ್ತಾ ಬಂದಿದ್ದಾರೆ.

ಹ್ಯಾಡ್ರಾನ್ ಎಂಬ ಪದ ಗ್ರೀಕ್ ಮೂಲದ್ದು. ಹ್ಯಾಡ್ರಾನ್ ಎನ್ನುವ ಹೆಸರು ಕ್ಯಾರ್ಕುಗಳಿಂದ ಮಾಡಲ್ಪಟ್ಟಿರುವ ದೊಡ್ಡ ಮೂಲ ಕಣಗಳಿಗೆ ಹೇಳುತ್ತಾರೆ. ಉದಾಹರಣೆಗೆ, ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು ಆರು ವಿಧದ ಕ್ವಾರ್ಕುಗಳಳಿಂದ ಮಾಡಲ್ಪಟ್ಟಿವೆ. ಇವೆ ಅಲ್ಲದೆ, ಮೇಸಾನ್ ಎಂಬ ಗುಂಪಿನ ಕೆಲವಂತೂ ಎರಡೇ ಕ್ವಾರ್ಕುಗಳಿಂದ, ಮತ್ತೆ ಕೆಲವು ನಾಲ್ಕು, ಐದು ಕ್ವಾರ್ಕು ಗಳಿಂದ ಮಾದಲ್ಪಟ್ಟಿರುವ ಹ್ಯಾಡ್ರಾನ್ ಗಳೂ ಇವೆ.

ಗ್ರೀಕ್ ಭಾಷೆಯಲ್ಲಿ ἁδρός (Hadron) ಎಂದರೆ ದಪ್ಪದ್ದು ಅಥವಾ ದೊಣ್ಣೆ ಎನ್ನುವ ಕನ್ನಡ ಪದಗಳಿಗೆ ಸಮಾನ. ನೀವೇನಂತೀರಿ? ದಪ್ಪ ಕಣ ಅಥವಾ ದೊಣ್ಣೆ ಕಣ? ಇಲ್ಲಿ ದಪ್ಪ ಕಣ ಅಥವಾ ದೊಣ್ಣೆ ಕಣ ಅಂದರೆ ಅಣು ಮತ್ತು ಕಣ ಲೋಕಗಳಲ್ಲಿ ಮಾತ್ರ ಹೋಲಿಕೆಗೆ ಯೋಗ್ಯ. ನಮ್ಮ, ನಿಮ್ಮ ಕಣ್ಣಿಗೆ ಕಾಣದಷ್ಟು ಅತಿ ಚಿಕ್ಕ ಗಾತ್ರ ಇರುವುದಕ್ಕೆ, ಮಾನವ ಲೋಕದ ನಮಗೆ, ಯಾವುದೂ ದಪ್ಪ ಅಥವಾ ದೊಣ್ಣೆಯಲ್ಲ. ಚಿಲ್ಟಾರಿ ಎಲೆಕ್ಟ್ರಾನಿಯನ್ನು ಕೇಳಿ ನೋಡೋಣವೇ?

1964ರಲ್ಲಿ ಮಂಡಿಸಿದರೂ ಹಿಗ್ಗ್ಸ್ ಕಾಂತ - ವಲಯಗಳು ಪ್ರಯೋಗ ಪಂಡಿತರಾದ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು 2012ರವರೆಗೂ ಹಿಗ್ಗ್ಸ್ ಅವರ ದ್ರವ್ಯ ಕಾಂತ - ವಲಯಗಳು ಖಾತರಿಯಾಗಿರಲಿಲ್ಲ. ಅದಕ್ಕೇ ಹೇಳಲಾಗದಷ್ಟು ಸಂಭ್ರಮ.

ಇಲ್ಲಿ ನಮ್ಮ ಭಾರತೀಯ ಮಹಾ ವಿಜ್ಞಾನಿಯೊಬ್ಬರ ಬಗ್ಗೆ ಬರೆಯುವುದು ನನಗೆ ಹೆಮ್ಮೆ. ಅವರ ಹೆಸರು ಸತ್ಯೇಂದ್ರನಾಥ ಬೋಸ್. ಕಲ್ಕತ್ತಾ ನಗರದಲ್ಲಿ 1894 ಜನವರಿ ಒಂದನೆಯ ತಾರೀಖು ಹುಟ್ಟಿ, 1974 ಫೆಬ್ರವರಿ 4ರವರೆಗೂ ಜಗತ್ತಿನಲ್ಲೇ ಸುಪ್ರಸಿದ್ಧ ಗಣಿತಶಾಸ್ತ್ರ ಮತ್ತು ಭೌತಶಾಸ್ತ್ರಜ್ಞ ಆಗಿದ್ದರು. ಇವರ ಹೆಸರಿನಲ್ಲಿ ಬೋಸಾನ್ ಎಂಬ ಐದು ಮೂಲ ಕಣಗಳ ಗುಂಪಿಗೆ ನಾಮಕರಣ ಮಾಡಿದ್ದಾರೆ. ಬೋಸಾನ್ ಎಂದರೆ ಒಂದು ಮೂಲ ಕಣ ಮಾತ್ರವಲ್ಲ, ಐದು ಬಗೆಯ ಬೋಸಾನ್ ಗಳು. ಈ ಐದರಲ್ಲಿ, ಹಿಗ್ಗ್ಸ್ ಪರಿಣಾಮಕ್ಕೆ ಕಾರಣವಾದ ಮೂಲ ಕಣಕ್ಕೆ ಹಿಗ್ಗ್ಸ್ - ಬೋಸಾನ್ ಎಂದು ಹೆಸರು.

ಈ ಹಿಗ್ಗ್ಸ್ ಬೋಸಾನ್ ಗೆ God Particle ಎಂಬ ಹೆಸರು ಅಂಟಿಕೊಂಡು ಬಂದಿರುವುದಕ್ಕೆ ಒಂದು ಉಪಕಥೆಯನ್ನು ಹೇಳುತ್ತೇನೆ. 1993ರಲ್ಲಿ ಹಿಗ್ಗ್ಸ್ ಬೋಸಾನ್ ಬಗ್ಗೆ ಉಲ್ಲೇಖವನ್ನು ಕೂಡಿದ ಒಂದು ಪುಸ್ತಕಕ್ಕೆ ಅದರ ಪ್ರಕಾಶಕ "God Particle" ಎಂದು ಹೆಸರಿಟ್ಟುಬಿಟ್ಟ. ಪ್ರಪಂಚದ ಎಲ್ಲಾ ಪತ್ರಕರ್ತರು ಅದನ್ನು ಪಟ್ಟೆಂದು ಹಿಡಿದು ಕೊಂಡು ಎಲ್ಲ ಕಡೆಯಲ್ಲೂ ಪ್ರಚಾರ ಮಾಡಿಬಿಟ್ಟರು.

ನಿಮಗೆ ಗಮನವಿರಲಿ : ವಿಜ್ಞಾನಿಗಳಿಗೆ ಈ ಸಂಬಂಧವೇ ಇಲ್ಲದ ಹೆಸರು ಕಂಡರೆ ಆಗುವುದಿಲ್ಲ. ನಾನೂ, ನೀವೂ ನಮ್ಮ ಪ್ರೀತಿ ಪಾತ್ರ ಕನ್ನಡ ಪತ್ರಿಕೋದ್ಯಮಿಗಳೂ ಹಿಗ್ಗ್ಸ್ ಬೋಸಾನ್ ಎಂದೇ ಕರೆಯೋಣ. ನಮ್ಮ ಭಾರತೀಯ ವಿಜ್ಞಾನಿಗಳಿಗೆ ಸಲ್ಲಬೇಕಾದ ಸೂಕ್ತ ಮರ್ಯಾದೆಯೂ ಹಿಗ್ಗ್ಸ್ ಬೋಸಾನ್ ಎಂದು ನಾವೆಲ್ಲರೂ ಅಕ್ಕರೆಯಿಂದ ಕರೆದಾಗಲೇ ಅಲ್ಲವೇ?

English summary
What is God Paticle? Does it really exist? If not, why so much hype about this God particle? Dr. K.R.S. Murthy explains this phenomenon in a simple way. He says, the word God Particle has no meaning at all. You can agree to disagree.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X