• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂದರ್ಶನವೆಂಬ ಚಂಡಮಾರುತದಲ್ಲಿ ಸಿಲುಕಿದ ನಾವೆ ನಾನು!

By ಪ್ರಸಾದ್ ನಾಯಿಕ್, ಅಂಗೋಲಾ
|

''ಅದೇನು ಹೇಳಿದರೂ ಓಕೇನೇ, ಸುಳ್ಳಾದರೂ ಸರಿಯೇ, ಆದರೆ ಕಾನ್ಫಿಡೆಂಟಾಗಿ ಹೇಳು ಮಗಾ'', ಎಂದಿದ್ದ ಸಹಪಾಠಿ ಅಲೋಕ್.

ಇಷ್ಟಕ್ಕೂ ಕಳೆದ ವಾರ ನಡೆದಿದ್ದ ಪ್ರತಿಷ್ಠಿತ ಕಂಪೆನಿಯೊಂದರ ಸಂದರ್ಶನದಲ್ಲಿ ಅಲೋಕ್ ಅದ್ಹೇಗೆ ಉತ್ತೀರ್ಣನಾಗಿದ್ದ ಎಂಬುದೇ ನನಗೆ ಅಚ್ಚರಿಯ ಸಂಗತಿಯಾಗಿ ಕಾಡಿತ್ತು. ಸಂದರ್ಶನವೆಂದರೆ ಕಲಿತ ವಿಷಯಗಳ ಬಗ್ಗೆ ಗಿಳಿಪಾಠ ಒಪ್ಪಿಸುವುದಷ್ಟೇ ಅಲ್ಲ ಎಂದು ಎಲ್ಲೆಲ್ಲಿಂದಲೋ ಕೇಳಿ ತಿಳಿದಿದ್ದ ನನಗೆ ಈ ಸಂಗತಿಯು ಅಲೋಕನ ವಿಚಾರದಲ್ಲಿ ಸತ್ಯವಾಗಿದ್ದು ನಿಜಕ್ಕೂ ದಿಗಿಲಿಗೊಳಪಡಿಸಿತ್ತು.

ಅಲೋಕನ ಅಂಕಗಳು ಸುಮಾರಾಗಿದ್ದರೂ ಅವನನ್ನು ದಡಸೇರಿಸಿದ್ದು ಅವನಿಗೆ ಸಿಕ್ಕ 'ಮಾತಿನ ಮಲ್ಲ' ಬಿರುದಿನ ಹಿಂದಿರುವ ಸ್ಕಿಲ್ಲುಗಳೇ. ಅದ್ಯಾವ ಅಜ್ಜಿಕಥೆ ಹೇಳಿದ್ದನೋ, ನಮ್ಮ ಕಾಲೇಜಿಗೆ ಸಂದರ್ಶನಕ್ಕೆಂದು ಬಂದ ಸಂಸ್ಥೆಯವರನ್ನೂ ಯಾಮಾರಿಸಿಬಿಟ್ಟಿದ್ದ ಆತ. ವಾರದೊಳಗೆ ನೇಮಕಾತಿಯ ಆದೇಶ ಪತ್ರವೂ ಕೈಸೇರಿತ್ತು. ಆ ರಾತ್ರಿ ನಮ್ಮ ಹಾಸ್ಟೆಲ್ ರೂಮಿನೊಳಗೆ ನಡೆದ ಗುಂಡುಪಾರ್ಟಿಯಲ್ಲಿ ಈ ಸಿಹಿಸುದ್ದಿಯನ್ನು ಕೇಳಿದ ನಾನು ಎಲಾ ಇವನಾ ಎಂದು ಕಣ್ಣರಳಿಸಿದ್ದೆ.

ಆದರೆ ಬಲಿಯಾಗಲಿರುವ ಮುಂದಿನ ಕುರಿಯು ನಾನೇ ಎಂಬುದನ್ನು ತಿಳಿಯಲು ಅಶರೀರವಾಣಿಯೇನೂ ಬೇಕಾಗಿರಲಿಲ್ಲ. ಎರಡು ದಿನಗಳ ತರುವಾಯ ಬರಲಿರುವ ಕಂಪೆನಿಯೊಂದರ ಸಂದರ್ಶನವೊಂದಕ್ಕಾಗಿ ನಾನು ಅರ್ಜಿಯನ್ನು ಕಳುಹಿಸಿದ್ದೆ. 'ಎಂಥಾ ಹಾಳು ಜನ್ಮವಪ್ಪಾ' ಎಂದು ಮತ್ತೊಮ್ಮೆ ಪರಿತಪಿಸಿದ್ದೆ ನಾನು. ಎಂಜಿನಿಯರಿಂಗ್ ವಿದ್ಯಾರ್ಥಿಗಳ ಜೀವನವೆಂದರೆ ಹೆಜ್ಜೆಹೆಜ್ಜೆಗೂ ಯುದ್ಧಗಳೇ. ವಿಪರ್ಯಾಸವೆಂದರೆ 'ಯುದ್ಧಕಾಲೇ ಶಸ್ತ್ರಾಭ್ಯಾಸ'ಗಳು ನನಗೆ ವಂಶವಾಹಿಯಾಗಿ ಬಂದ ಗುಣಬಳುವಳಿ.

ವಿಜ್ಞಾನ ವಿಭಾಗದ ಸೀಟು ಸಿಗಬೇಕೆಂದು ಎಸ್ಸೆಸ್ಸೆಲ್ಸಿಯಲ್ಲಿ ಪರದಾಟ, ಮುಂದೆ ಒಳ್ಳೆಯ ಎಂಜಿನಿಯರಿಂಗ್ ಕಾಲೇಜು ಸಿಗಬೇಕೆಂದು ಪದವಿಪೂರ್ವ ಮಟ್ಟದಲ್ಲಿ ಪರದಾಟ, ಅಂತೂ ಕೊನೆಗೂ ಒಂದು ಕಾಲೇಜಿನಲ್ಲಿ ಸೀಟು ಸಿಕ್ಕಿತಪ್ಪಾ ಎಂದು ನಿಟ್ಟುಸಿರಿಟ್ಟು ಸುಧಾರಿಸಿಕೊಳ್ಳುವಷ್ಟರಲ್ಲಿ ಉದ್ಯೋಗ, ಸಂದರ್ಶನ ಇತ್ಯಾದಿಗಳ ಜಂಜಾಟ. ನಾಲ್ಕು ವರ್ಷಗಳ ಕಾಲ ಒದ್ದಾಡಿದ್ದರೂ ಆರಕ್ಕೇರದ ಮೂರಕ್ಕಿಳಿಯದಂತಿದ್ದ ನನ್ನ ಅಂಕಗಳೇನೂ ಆಕರ್ಷಕವಾಗಿರಲಿಲ್ಲ. ಜೊತೆಗೇ ಅಲೋಕನಂತೆ ಮಾತಿನಮಲ್ಲನೂ ನಾನಲ್ಲ. ಇನ್ನೇನಾಗಲಿದೆಯೋ ಎಂಬ ಚಿಂತೆಯಲ್ಲೇ ಮುಳುಗಿದ್ದೆ ನಾನು.

ಈ ಚಿಂತೆಗೆ ಕಾರಣಗಳೂ ಇದ್ದವು ಅನ್ನಿ. ಕಳೆದ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ ಹನ್ನೊಂದು ಸಂದರ್ಶನಗಳನ್ನು ಕೊಟ್ಟಿದ್ದೆನಾದರೂ ಒಂದೇ ಒಂದರಲ್ಲೂ ನನಗೆ ಬರಖತ್ತಾಗಿರಲಿಲ್ಲ. ಈ ದುರ್ದೈವವನ್ನು ಅನುಭವಿಸಿದವರಿಗೇ ಗೊತ್ತು ಅದರ ಸಂಕಟ. ಕನ್ಯಾಪಿತೃಗಳ ಮನೆಯಲ್ಲಿ ಕಾಫಿ-ಸಮೋಸದ ಆತಿಥ್ಯವನ್ನು ಸವಿದು ಹುಡುಗಿಯು ದಪ್ಪಗೋ, ಕುಳ್ಳಗೋ, ಕೊಂಚ ಕಪ್ಪಗೋ ಇದ್ದಾಳೆಂದು ಬಂದ ನೆಂಟಸ್ತಿಕೆಗಳೆಲ್ಲಾ ಹೇಗೆ ತಪ್ಪಿಹೋಗುತ್ತವೆಯೋ ಅಂಥದ್ದೇ ಸನ್ನಿವೇಶವಿದು. ಅಲ್ಲಿ ರೋಸಿಹೋಗುವುದು ವಧುವಾಗಲಿರುವ ಹೆಣ್ಣಾದರೆ ಇಲ್ಲಿ ನಾನು. ಫಾರ್ಮಲ್ ದಿರಿಸು, ಹೊಳೆಯುವ ಬೂಟು, ಮೇಲೆ ಕೊರಳಪಟ್ಟಿ, ಕೆಳಗೆ ಸೊಂಟಪಟ್ಟಿ, ಕೈಯಲ್ಲಿ ಅಂಕಪಟ್ಟಿ... ಇತ್ಯಾದಿಗಳೊಂದಿಗೆ 'ಟಾರ್ಚರ್ ಚೇಂಬರ್'ನಂತಿರುವ ಸಂದರ್ಶನದ ಕೋಣೆಯ ಒಳಹೊಕ್ಕರೆ ಎಂದಿನ ಡ್ರಾಮಾಗಳು ಶುರು.

ಈ ಬಾರಿ ಸಂದರ್ಶನವು ಶುರುವಾಗುವ ಸುಮಾರು ಒಂದೂವರೆ ಘಂಟೆಯ ಮುಂಚೆಯೇ ಹೋಗಿ ಸಂಬಂಧಿ ವಿಧಿವಿಧಾನಗಳನ್ನು ನಾನು ಯಶಸ್ವಿಯಾಗಿ ಮುಗಿಸಿದ್ದೆ. ಗ್ರೂಪ್ ಡಿಸ್ಕಷನ್ ಎಂಬ ನಾಟಕವನ್ನು ಮುಗಿಸಿ ಸಂದರ್ಶನದವರೆಗೆ ಬರುವಷ್ಟರಲ್ಲಿ ಸಾಕುಸಾಕಾಗಿತ್ತು. ಕಾಲೇಜಿನ ಪುಂಡರ ಜೊತೆಗಿನ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿ ಅನುಭವವಿದ್ದ ನಾನು ಸಿಕ್ಕಿದ್ದೇ ಚಾನ್ಸು ಎಂದಂದುಕೊಂಡು ಜೋರಾಗಿಯೇ ಮಾತಾಡಿದ್ದೆ. ಯಕ್ಷಗಾನದ ವೇಷಧಾರಿಯಂತೆ ಗತ್ತಿನಿಂದ ಕೈಕಾಲುಗಳನ್ನಾಡಿಸಿದೆ, ಅಗತ್ಯ ಬಿದ್ದಾಗ ಮೇಜು ಕುಟ್ಟಿದೆ. ಥೇಟು ಸಂಸತ್ತಿನಲ್ಲಿ ನಡೆಯುವ ಕೋಲಾಹಲದಂತಿದ್ದ ಈ ಹಂತದಲ್ಲಿ ಅದೇನು ಕೇಳಿದರೋ ಸಂಸ್ಥೆಯ ಪ್ರತಿನಿಧಿಗಳು. ಆದರೆ ಹೇಗೋ ಮುಂದಿನ ಹಂತವಾದ ಸಂದರ್ಶನಕ್ಕೆ ನನ್ನನ್ನು ವಿಧಿಯು ಎತ್ತಿಹಾಕಿತ್ತು. ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆಯಾದಂತೆ ಆ ಕ್ಷಣಕ್ಕಂತೂ ನನಗಷ್ಟೇ ಸಾಕಿತ್ತು.

ಯೋಚನೆಗಳ ಗುಂಗಿನಿಂದ ನಾನು ಹೊರಬಂದಿದ್ದು ಸಹಪಾಠಿಯಾದ ರಿಯಾ ಚಟರ್ಜಿ ಸಂದರ್ಶನದ ಕೋಣೆಯಿಂದ ಹೊರಬಂದಾಗ. ''ಒಂದು ಘಂಟೆಯಾಯಿತಲ್ಲೇ ನೀನು ಒಳಗೆ ಹೋಗಿ? ನೌಕರಿ ಕೊಡುತ್ತಿದ್ದಾರೋ, ಸ್ವಯಂವರ ನಡೆಸುತ್ತಿದ್ದಾರೋ'' ಎಂದು ಅಚ್ಚರಿಯಿಂದ ಕೇಳಿದೆ ನಾನು. ''ಹೇಗೂ ನಿನ್ನ ಸರದಿಯೂ ಬರಲಿದೆಯಲ್ಲಾ, ನೀನೇ ಅನುಭವಿಸು'', ಎಂದು ರೋಸಿಹೋದವಳಂತೆ ತಲೆಯಾಡಿಸಿ ಹೊರಹೋದಳು ರಿಯಾ.

ಅಷ್ಟರಲ್ಲಿ ನಂತರದ ಸರದಿಯಲ್ಲಿದ್ದ ಗೌತಮನಿಗೆ ಕರೆ ಬಂದಿತು. ಸರದಿಯ ಪ್ರಕಾರ ಗೌತಮನ ನಂತರ ಒಳಹೋಗಬೇಕಿದ್ದ ನಾನು ನನ್ನ ದಾಖಲೆಗಳನ್ನು ಎದೆಗವಚಿಕೊಂಡು ಜೀವವನ್ನೇ ಹಿಡಿದಿಟ್ಟುಕೊಂಡವನಂತೆ ಮುದುಡಿ ಕೂತೆ. ಗೌತಮನಿಗೂ ಬರೋಬ್ಬರಿ ನಲವತ್ತೈದು ನಿಮಿಷಗಳು ಕಳೆದುಹೋಗಿದ್ದವು. ಅವನೂ ಸಂದರ್ಶನದ ಕೋಣೆಯಿಂದ ಹೊರಬಂದಾಗ ತನ್ನ ಕಿಡ್ನಿಯೊಂದನ್ನು ತೆಗೆಸಿಕೊಂಡು ಬಂದವನಂತೆ ಬೆವತು ಸುಸ್ತಾಗಿದ್ದ. ಒಳಗೆ ಏನೇನಾಯಿತು ಎಂದು ಕೇಳುವಷ್ಟರಲ್ಲಿ ನನ್ನ ಕರೆಯು ಬಂದಾಗಿತ್ತು.

ಅಂತೂ ಒಳಗೊಳಗೇ ಸಣ್ಣಗೆ ಕಂಪಿಸುತ್ತಾ ನಿರ್ಲಿಪ್ತತೆಯ ಮುಖವಾಡವೊಂದನ್ನು ಧರಿಸಿ ಹೇಗೂ ಒಳನಡೆದೆ. ಬಹುಮುಖ್ಯವಾದ ಪತ್ರಿಕಾಗೋಷ್ಠಿಯೊಂದು ನಡೆಯಲಿರುವಂತೆ ಸಂಸ್ಥೆಯ ಎಂಟು ಜನ ಪ್ರತಿನಿಧಿಗಳು ಮೇಜಿನ ಆ ಬದಿಯ ಸಾಲಿನಲ್ಲಿ ಕುಳಿತಿದ್ದರು. ಅದರಲ್ಲಿ ನಾಲ್ವರು ಬಿಳಿಕೂದಲನ್ನೂ, ಬೋಳುತಲೆಯನ್ನೂ ಹೊಂದಿದ್ದ ಹಿರಿಯರು. ಮೂವರು ಮಧ್ಯವಯಸ್ಸಿನವರಾಗಿದ್ದರೆ ಉಳಿದಿಬ್ಬರು ಯೌವನವನ್ನೇ ಉಸಿರಾಡಿಕೊಂಡಿರುವಂತಿದ್ದರು.

ಮಹಿಳಾ ಸಶಕ್ತೀಕರಣದ ಪರಿಕಲ್ಪನೆಯು ತಮ್ಮ ಸಂಸ್ಥೆಯಲ್ಲಿದೆ ಎಂದು ತೋರಿಸುವುದಕ್ಕೋ ಅಥವಾ ಸಮಿತಿಯನ್ನು ಫ್ಯಾಷನೇಬಲ್ ಆಗಿಸುವುದಕ್ಕೋ ಮಧ್ಯವಯಸ್ಸಿನ ಮತ್ತು ಯೌವನದ ಕೆಟಗರಿಯಲ್ಲಿ ಒಬ್ಬೊಬ್ಬ ಮಹಿಳೆಯರನ್ನು ಇರಿಸಲಾಗಿತ್ತು. ನನಗೆ ಮುಖಪರಿಚಯವಿದ್ದ ದೇವರುಗಳನ್ನೆಲ್ಲಾ ಒಂದೇ ಏಟಿಗೆ ಸ್ಮರಿಸಿಕೊಂಡು ಮುಂದೆ ಬರಲಿರುವ ಚಂಡಮಾರುತಕ್ಕೆ ಎದೆಯೊಡ್ಡಿ ಆ ಮುಳ್ಳಿನ ಕುರ್ಚಿಯಲ್ಲಿ ಕುಳಿತುಕೊಂಡೆ.

ಆರಂಭಿಕ ಪರಿಚಯದ ಮತ್ತು ಕ್ಲೀಷೆ ಎನ್ನಬಹುದಾದ ಪ್ರಶ್ನೋತ್ತರಗಳೆಲ್ಲಾ ಮುಗಿದ ನಂತರ ಈ ಬೃಹತ್ ಸಮಿತಿಯು ವಿಷಯಕ್ಕೇ ಬಂದಿಳಿಯಿತು. ನಾನು ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರಿಂದ ಕಲ್ಲು, ಸಿಮೆಂಟು, ಇಟ್ಟಿಗೆ, ಜಲ್ಲಿ, ಮರಳು, ಕಟ್ಟಡ, ಸೇತುವೆ, ಮಣ್ಣು, ಮಸಿ ಇತ್ಯಾದಿಗಳ ಬಗ್ಗೆ ಕೇಳಿ ನನ್ನ ತಿಳಿವಳಿಕೆಯನ್ನು ಅಡ್ಡಡ್ಡ ಉದ್ದುದ್ದ ಸೀಳಿ ಪೋಸ್ಟ್-ಮಾರ್ಟಮ್ ಮಾಡಲಾಯಿತು. ಎಂದಿನಂತೆ ಹೈಡ್ರಾಮಾಗಳು ಈ ಹಂತದಲ್ಲೇ ಆದವು.

ತಲೆಬುಡ ತಿಳಿದಿಲ್ಲದಿದ್ದರೂ ಏನೋ ಹೇಳಿ ಸಾಗಹಾಕುವ ನನ್ನ ಪ್ರಯತ್ನಗಳು, 'ಜಟ್ಟಿ ಹೇಗೂ ಬಿದ್ದಾಗಿದೆ, ಇನ್ನೇನು ಈತನ ಮೀಸೆಯನ್ನೂ ಮಣ್ಣು ಮಾಡಿಬಿಡೋಣ' ಎನ್ನುವಂತೆ ಶತಾಯಗತಾಯ ಯತ್ನಿಸುತ್ತಿದ್ದ ಸಂಸ್ಥೆಯ ಪ್ರತಿನಿಧಿಗಳು, ನಡುನಡುವೆ ನನ್ನ ಸಾಮಾನ್ಯ ಜ್ಞಾನವನ್ನೋ ಮೂರ್ಖತನವನ್ನೋ ಜಗಜ್ಜಾಹೀರುಗೊಳಿಸುವಂತೆ ನಾನು ಮಾತುಗಳಲ್ಲಿ ತರುತ್ತಿದ್ದ ಕಿಲಾಡಿತನದ ವಿಫಲ ಪ್ರಯತ್ನಗಳು ಇತ್ಯಾದಿ. ಹನ್ನೊಂದು ಯುದ್ಧಗಳಲ್ಲಿ ಕಾದಾಡಿ ಎಲ್ಲದರಲ್ಲೂ ಸೋತು ಕಾಲ್ಕಿತ್ತು ಬಂದಿದ್ದ ವೀರಾಧಿವೀರ ಕಾಲಾಳು ಕೂಡ ನಾನಾಗಿದ್ದರಿಂದ ಕೊಂಚಮಟ್ಟಿಗೆ ಎಲ್ಲವನ್ನೂ ಸಹಿಸಿಕೊಂಡೆ.

ಇವೆಲ್ಲದರ ನಡುವೆ ಒಂದು ವಿಷಯವನ್ನಂತೂ ಹೇಳಲೇಬೇಕು. ಸಂದರ್ಶನಕ್ಕೆ ಬರುವ ಒಂದೊಂದು ಗುಂಪಿನಲ್ಲಿ ಒಂದೊಂದು ತರಹದ ಪ್ರತಿನಿಧಿಗಳಿರುತ್ತಾರೆ. ಸಮಿತಿಯ ಗಾತ್ರವು ದೊಡ್ಡದಾದಂತೆ ಈ ವೈವಿಧ್ಯತೆಗಳೂ ಹೆಚ್ಚುತ್ತವೆ ಎಂಬುದು ನನ್ನ ಅನುಭವದ ಮಾತು. ಇಲ್ಲೂ ಅಂತಹ ವೈವಿಧ್ಯತೆಯನ್ನು ಕಾಣುವ ಯೋಗವು ನನಗೊದಗಿ ಬಂದಿತ್ತು. ಬಿಳಿಕೂದಲಿನ, ಬೋಳುತಲೆಯ ಇಬ್ಬರು ತಮ್ಮ ಅಪಾರ ಅನುಭವದ ಕಥೆಗಳನ್ನು, ಅಗಾಧ ಜ್ಞಾನವನ್ನು ಬೇಡವೆಂದರೂ ನನ್ನ ತಲೆಯ ಮೇಲೆ ಸುರಿಯುತ್ತಿದ್ದರು. ಅವರ ಪ್ರತಿಯೊಂದು ಮಾತುಗಳೂ ಬೌನ್ಸರುಗಳಂತೆ ನನ್ನ ತಲೆಯ ಮೇಲಿನಿಂದ ಹಾರಿಹೋಗುತ್ತಿದ್ದವು ಅನ್ನುವುದು ಬೇರೆ ವಿಷಯ. ಆದರೆ ಈ ಬಗ್ಗೆ ಯಾವ ಸುಳಿವೂ ಇಲ್ಲದಂತೆ ಅಥವಾ ಈ ಪ್ರಕ್ರಿಯೆಯನ್ನು ಎಂಜಾಯ್ ಮಾಡುತ್ತಿರುವವರಂತೆ ಪಿಟೀಲು ಕುಯ್ಯುತ್ತಲೇ ಹೋಗಿದ್ದರು ಈ ಅತಿರಥ ಮಹಾಶಯರು.

ಇನ್ನು ಸಮಿತಿಯ ಇತರ ಮೂವರು ತಾವು ಬಂದ ಕರ್ಮಕ್ಕೆ ಏನಾದರೊಂದು ಮಾಡಬೇಕು ಎನ್ನುವಂತೆ ಆಗೊಮ್ಮೆ ಈಗೊಮ್ಮೆ ಪ್ರಶ್ನೆಗಳನ್ನೆಸೆಯುತ್ತಿದ್ದರು. ಯಾವಾಗಲೂ ಈ ಪ್ರಭೇದದ ಸಂಸ್ಥೆಯ ಪ್ರತಿನಿಧಿಗಳು ಅಪಾಯಕಾರಿಗಳು. ಅಭ್ಯರ್ಥಿಗೆ ಇನ್ನೇನು ಪಿಚ್ ಒಂದು ಮಟ್ಟಿಗೆ ಅರ್ಥವಾಯಿತು ಎನ್ನುವಷ್ಟರಲ್ಲಿ ಶ್ರೀಲಂಕಾದ ಮಾಲಿಂಗನಂತೆ ವಿಚಿತ್ರವಾಗಿ ಸೊಟ್ಟಕೈಯಿಂದ ಚೆಂಡೆಸೆದೋ, ನಮ್ಮದೇ ಕುಂಬ್ಳೆಯಂತೆ ಚಾಣಾಕ್ಷ ಗೂಗ್ಲಿಯನ್ನೆಸೆದೋ ಎಲ್ಬೀಡಬ್ಲ್ಯೂನಲ್ಲಿ ಕೆಡವಿಬಿಡುತ್ತಾರೆ.

ಇಂಥದ್ದೇ ಮತ್ತೊಂದು ತರಹದ ತ್ರಿಮೂರ್ತಿಗಳೂ ಈ ಸಮಿತಿಯಲ್ಲಿದ್ದರು. ಇವರುಗಳು ತಮಗೂ ಈ ಸಂದರ್ಶನಕ್ಕೂ ಯಾವುದೇ ಸಂಬಂಧವಿಲ್ಲದಂತೆ ಸ್ಟ್ರಾ ಒಂದನ್ನು ಹಣ್ಣಿನ ರಸಾಯನದ ಪುಟ್ಟ ಪ್ಯಾಕೆಟ್ಟೊಂದರ ಒಳಗೆ ತಳ್ಳಿ ಆ ಬಣ್ಣದ ಪಾನೀಯವನ್ನು ಹೀರುವುದರಲ್ಲೇ ವ್ಯಸ್ತರಾಗಿದ್ದರು. ಬಹುಶಃ ಸಂದರ್ಶನಗಳೆಂದರೆ ಇವರುಗಳ ಮಟ್ಟಿಗೆ ವಿಹಾರವೆಂಬಂತಿರಬಹುದು. ಭವಿಷ್ಯದ ಎಂಜಿನಿಯರುಗಳಾಗಬೇಕಿರುವ ನನ್ನಂತಹ ದಡ್ಡಶಿಖಾಮಣಿಗಳು ಪುಕ್ಕಟೆ ಮನರಂಜನೆಯನ್ನು ಕೊಡುತ್ತಿದ್ದರೆ ಯಾರಿಗಾದರೂ ಇಂಥಾ ಭಾವನೆಗಳು ಮೂಡುವುದು ಸಹಜವೇ. ತಮ್ಮ ಮುಂದಿನ ಸಂದರ್ಶನಗಳಿಗೆ ಈ ಮೂವರು ಸಂದರ್ಶಕರು ಸಿನೆಮಾಕ್ಕೆ ಹೋದಂತೆ ಪಾಪ್ ಕಾರ್ನ್ ಡಬ್ಬಿಯನ್ನಿಟ್ಟುಕೊಂಡು ಹೋದರೂ ಅಚ್ಚರಿಯಿಲ್ಲ. ಉಳಿದೊಬ್ಬ ಸಂದರ್ಶಕನಿಗೆ ತನ್ನ ಮೊಬೈಲಿನಲ್ಲಿ ನಿಮಿಷಕ್ಕೊಮ್ಮೆ ಕರೆ ಬರುತ್ತಿತ್ತು. ಆಗಾಗ ಸಂದರ್ಶನದ ಕೋಣೆಯ ಒಳಗೆ ಮತ್ತು ಹೊರಗೆ ಅಲೆದಾಡುತ್ತಾ, ಗಡಿಯಾರದ ಲೋಲಕದಂತೆ ಅತ್ತಿತ್ತ ಪರದಾಡುತ್ತಾ ಎಲ್ಲೂ ಸಲ್ಲದವನಾಗಿಬಿಟ್ಟಿದ್ದ.

ಇನ್ನು ಸಂದರ್ಶನಗಳ ಮುನ್ನ ಸಂಸ್ಥೆಯ ಈ ಪ್ರತಿನಿಧಿಗಳು ನಡೆಸಿಕೊಡುವ ಪ್ರೆಸೆಂಟೇಷನ್ನುಗಳ ಬಗ್ಗೆ ಹೇಳಲೇಬೇಕು. ನನ್ನ ಸೀನಿಯರ್ ಆಗಿದ್ದ ಶಶಿಯ ಶೈಲಿಯಲ್ಲಿ ಹೇಳುವುದಾದರೆ ಇವುಗಳಿಗೂ ರಾಜಕೀಯ ಪಕ್ಷಗಳು ಬಿಡುಗಡೆಗೊಳಿಸುವ ಚುನಾವಣಾ ಪ್ರಣಾಳಿಕೆಗಳಿಗೂ ಏನೂ ವ್ಯತ್ಯಾಸವಿಲ್ಲ. ಅವೆಷ್ಟು ಭರವಸೆಗಳು, ಬಣ್ಣಬಣ್ಣದ ಮಾತುಗಳು, ಪದಗಳಲ್ಲೇ ಕಟ್ಟುವ ಗಾಳಿಗೋಪುರಗಳು. ನಾನು ಎಂಜಿನಿಯರಿಂಗ್ ನ ಮೊದಲ ವರ್ಷದಲ್ಲಿದ್ದಾಗ ಗತ್ತಿನಿಂದ ಸೀನಿಯರ್ ಆಗಿ ಓಡಾಡಿಕೊಂಡಿದ್ದ ಶಶಿ ಸಂದರ್ಶನವೊಂದರಲ್ಲಿ ಪಾಸಾಗಿ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದೇನೋ ಹೌದು. ಆದರೆ ಎರಡು ವರ್ಷಗಳಲ್ಲೇ ಆ ಕಂಪೆನಿಯು ಬಡಪಾಯಿ ಶಶಿಯನ್ನು ಹೈರಾಣಾಗಿಸಿತ್ತು. ಎಂಜಿನಿಯರಿಂಗ್ ನ ಅಂತಿಮ ವರ್ಷವೆಂಬ ದಡಕ್ಕೆ ನಾನೀಗ ಬಂದು ಮುಟ್ಟಿದರೆ ಸ್ನಾತಕೋತ್ತರ ಪದವಿಗೆಂದು ಇಲ್ಲಿಗೇ ಮರಳಿ ಬಂದಿದ್ದ ಶಶಿ. ಹೀಗಾಗಿ ಈ ಚುನಾವಣಾ ಪ್ರಣಾಳಿಕೆಗಳ ಬಲೆಗೆ ಬೀಳಬೇಡ ಎನ್ನುವ ಎಚ್ಚರಿಕೆಯು ಅವನಿಂದಲೇ ಬಂದಿತ್ತು. ಇದೆಷ್ಟು ಸತ್ಯ ಎಂಬುದನ್ನು ಬಹುಶಃ ಭವಿಷ್ಯವೇ ಹೇಳಬೇಕು.

ಚಹಾ-ಕಾಫಿ, ಗೊಂದಲ, ಪ್ರಶ್ನೋತ್ತರ ಇತ್ಯಾದಿಗಳ ನಡುವೆಯೇ ಈ ಬಾರಿಯ ಸಂದರ್ಶನವನ್ನು ಹೇಗೋ ಸಂಭಾಳಿಸಿಕೊಂಡಿದ್ದೆ. ಅತ್ತ ಬಾಲನ್ನು ದಬದಬನೆ ಬೌಂಡರಿಯಾಚೆಗೂ ಅಟ್ಟದೆ, ಇತ್ತ ಔಟ್ ಕೂಡ ಆಗದೆ ದಿನವಿಡೀ ಕುಟ್ಟುತ್ತಾ ಟೆಸ್ಟ್ ಪಂದ್ಯದ ದಿನದಾಟವನ್ನು ಮುಗಿಸುವ ಆಟಗಾರನಂತೆ. ನೆಲಕಚ್ಚಿದ್ದ ನನ್ನ ಈ ಹಿಂದಿನ ಹನ್ನೊಂದು ಸಂದರ್ಶನಗಳು ಏನಿಲ್ಲವೆಂದರೂ ಸಂಭಾಳಿಸುವ ಕಲೆಯನ್ನು ಕಲಿಸಿಕೊಟ್ಟಿದ್ದವು.

ಆದರೆ ಅದೃಷ್ಟವಶಾತ್ ಈ ಸಂದರ್ಶನದಲ್ಲಿ ಕಲ್ಲು, ಸಿಮೆಂಟುಗಳಾಚೆಗೂ ಚರ್ಚೆಗಳಾದವು. ಹವ್ಯಾಸ, ಆಸಕ್ತಿ, ಬಹುಮತವಿಲ್ಲದೆ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರ, ಪಕ್ಕದ ರಾಜ್ಯದಲ್ಲಿ ಬಂದ ಬರ, ಮಂಡನೆಯಾಗಲಿರುವ ಆಯವ್ಯಯ ಪತ್ರ, ನದಿಜೋಡಣೆ ವಿವಾದ ಇತ್ಯಾದಿಗಳ ಬಗ್ಗೆ ವಿಚಾರ ವಿನಿಮಯಗಳಾದವು. ನನ್ನ ಸಂದರ್ಶನವು ಮುಗಿಯುವಷ್ಟರಲ್ಲಿ ಆ ಮೂವರ ರಸಾಯನದ ಪ್ಯಾಕೆಟ್ಟೂ ಖಾಲಿಯಾಗಿತ್ತು. ಜೊತೆಗೇ ನನ್ನ ಮಟ್ಟಿಗೆ ದೊಡ್ಡದೊಂದು ಬಿಡುವಿನ ನಂತರ ಸುಖಾಂತ್ಯದ ಸಂದರ್ಶನವನ್ನು ಕೊಟ್ಟ ಸಂತಸ.

ಮಂದಹಾಸವನ್ನು ಹೊತ್ತು ಮರಳಿ ಹಾಸ್ಟೆಲ್ಲಿಗೆ ಬಂದ ನನ್ನನ್ನು ಕಂಡು ಅಲೋಕನಿಗೆ ಸಮಾಧಾನ. ''ಟೆಸ್ಟ್ ಮ್ಯಾಚ್ ಡ್ರಾ ಆದರೂ ಓಕೆ ಮಗಾ, ಆದರೆ ಸೋಲಬಾರದು ನೋಡು'', ಎಂದು ಥೇಟು ಸಿನಿಮೀಯ ಶೈಲಿಯಲ್ಲಿ ನಗೆಯಾಡಿದ್ದ. ಫಲಿತಾಂಶವೇನೂ ಬರದಿದ್ದರೂ ಆ ದಿನವೇ ನಮ್ಮ ಗ್ಯಾಂಗಿನ ಹುಡುಗರ ಜೊತೆ ಸಿಟಿಗೆ ಹೋಗಿ ಬಿಯರ್ ಸವಿದು ಬಂದೆ. ವಾರದ ನಂತರ ನಿರೀಕ್ಷಿತ ಶುಭಸುದ್ದಿಯು ನೇಮಕಾತಿ ಪತ್ರದ ರೂಪದಲ್ಲಿ ನನ್ನ ಕೈಸೇರಿತ್ತು. ನನ್ನ ಪುಣ್ಯಕ್ಕೆ ಈ ಮಹತ್ವದ ಟೆಸ್ಟ್ ಮ್ಯಾಚ್ ಅನ್ನು ನಾನು ಡ್ರಾ ಮಾಡಿಸುವ ಬದಲು ಗೆದ್ದುಬಂದಿದ್ದೆ. ಐ ಹ್ಯಾಡ್ ಮೇಡ್ ಇಟ್ ಫೈನಲೀ!

***

ಯುರೇಕಾ ಗ್ರೂಪ್ ಆಫ್ ಇಂಡಸ್ಟ್ರೀಸ್ ಅನ್ನು ಸೇರಿ ಇವತ್ತಿಗೆ ಭರ್ಜರಿ ಐದು ವರ್ಷ. ನೌಕರಿ ಸಿಕ್ಕಿತಲ್ಲಾ ಎಂಬ ಖುಷಿಗಿಂತಲೂ ಇನ್ನು ಮುಂದೆ ಸಂದರ್ಶನವೆಂಬ ಭೂತವನ್ನು ಎದುರಿಸಬೇಕಾಗಿಲ್ಲವಲ್ಲಾ ಎಂಬ ನಿರಾಳತೆಯೇ ಅಂದಿಗೂ ಇಂದಿಗೂ. ಆದರೆ ಶಶಿಯಂತೆಯೇ ಕಾಳಿಗಿಂತ ಜೊಳ್ಳೇ ಹೆಚ್ಚು ಎಂಬಂತಿನ ಅನುಭವಗಳು ನನಗೂ ಆಗಿಹೋದವು. ಜಾಹೀರಾತನ್ನಷ್ಟೇ ನೋಡಿಕೊಂಡು ಉತ್ಪನ್ನವನ್ನು ಖರೀದಿಸುವುದೂ, ಪುಸ್ತಕದ ಮುಖಪುಟವನ್ನಷ್ಟೇ ನೋಡಿ ಪುಸ್ತಕ ಚೆನ್ನಾಗಿದೆಯೆಂದು ಭಾವಿಸುವುದೂ ಒಂದೇ ಎಂದು ತಿಳಿದೂ ಆಯಿತು. ಜೊತೆಗೇ ಔದ್ಯೋಗಿಕ ಜೀವನದಲ್ಲಿ 'ಚುನಾವಣಾ ಪ್ರಣಾಳಿಕೆ'ಯೆಂಬ ಪರಿಕಲ್ಪನೆಯ ಜ್ಞಾನೋದಯವೂ. ಕಾಲೇಜಿನ ಪ್ರೆಸೆಂಟೇಷನ್ನಿನಲ್ಲಿ ಸಂಸ್ಥೆಯನ್ನು ತೋರಿಸಿದ್ದು ಬಳುಕುವ ರೂಪದರ್ಶಿಯಂತಿರುವ ಲಲನಾಮಣಿಯೆಂದೂ, ಆದರೆ ನಿಜಕ್ಕೂ ಇರುವುದು ತೊಂಭತ್ತು ಕೇಜಿ ತೂಗುವ, ಸದಾ ಗೊಣಗುವ ಗೊಡ್ಡುಮುದುಕಿಯೆಂದೂ ತಿಳಿಯಲು ಕಂಪೆನಿಯೊಳಗೆ ಬಲಗಾಲಿಟ್ಟು ಬರಬೇಕಾಯಿತು.

ಆದರೆ ಶಶಿಯಂತೆ ಚುರುಕುಬುದ್ಧಿಯವನು ನಾನಲ್ಲ ತಾನೇ! ನನ್ನ ಜೀವನದಲ್ಲಿ ಎಲ್ಲವೂ ಲೇಟು. ನಡೆಯಲು ಪ್ರಾರಂಭಿಸಿದ್ದರಿಂದ ಬುದ್ಧಿ ಬಂದಾಗಿನವರೆಗೂ. ಇನ್ನೇನು ಹೊಸ ಕಂಪೆನಿಗೆ ಹಾರುವುದೋ ಅಥವಾ ಇಲ್ಲಿದ್ದುಕೊಂಡೇ ಹೊಸ ಡಿಗ್ರಿಯೊಂದನ್ನು ಮಾಡಿಕೊಳ್ಳಲೇ ಎಂದು ಯೋಚಿಸಲು ಆರಂಭಿಸುವಷ್ಟರಲ್ಲೇ ಮಗಳು ಒಂದನೇ ತರಗತಿಗೆ ಬಂದಾಗಿದೆ. ಭಯಂಕರ ಯೋಚನೆಗಳು, ದೀರ್ಘ ಸಮಾಲೋಚನೆಗಳು, ಸಾಧಕ ಬಾಧಕಗಳ ಅಧ್ಯಯನಗಳು... ಇತ್ಯಾದಿ ಪ್ರಹಸನಗಳ ನಂತರ ಯುರೇಕಾದಲ್ಲೇ ಮುಂದುವರೆಯುತ್ತೇನೆ ಎಂಬ ನಿರ್ಣಯವನ್ನು ಕ್ಯಾಬಿನೆಟ್ ನಿರ್ಣಯದಂತೆ ಕೈಗೊಂಡೆ. ಹೊಸ ಕಂಪೆನಿಯೆಂದರೆ ಮತ್ತದೇ ಸಂದರ್ಶನಗಳು ಎಂಬ ತಲೆನೋವು ಒಂದೆಡೆಯಾದರೆ, ಇಲ್ಲೇ ಇದ್ದರೆ ಭಡ್ತಿಯೂ ಸಿಗಬಹುದು ಎಂಬ ನನ್ನ ಧರ್ಮಪತ್ನಿಯ ದೂರಾಲೋಚನೆಯ ಆಮಿಷ ಕೂಡ.

ನಿನ್ನೆ ಕಾನ್ಫರೆನ್ಸ್ ರೂಮಿನಲ್ಲಿ ಕುಳಿತು ಏನೋ ಲೋಕಾಭಿರಾಮದ ಮಾತನ್ನಾಡುತ್ತಿದ್ದಾಗಲೇ ''ನಿಮ್ಮ ಪ್ರಮೋಷನ್ ಡ್ಯೂ ಇದೆ ಅಲ್ವೇನ್ರೀ'' ಎಂದು ನನ್ನ ತಲೆಯಲ್ಲಿ ಹುಳ ಬಿಟ್ಟಿದ್ದರು ಸಹೋದ್ಯೋಗಿಯಾಗಿದ್ದ ಮಿಶ್ರಾ. ''ಓ ಹೌದಲ್ವಾ'' ಎಂದು ನಾನೂ ಕಣ್ಣರಳಿಸಿದೆ. ''ಮುಖ್ಯ ಕಛೇರಿಯಿಂದ ಬಂದ ಗಾಳಿಸುದ್ದಿಯಿದು. ಇನ್ನೇನು ಒಂದು ವಾರವೋ, ಹತ್ತು ದಿನವೋ. ಒಂದು ಬ್ಯಾಚಿನವರಿಗೆ ಪ್ರಮೋಷನ್ ಆರ್ಡರ್ ಬೇಗನೇ ಸಿಗಲಿದೆಯಂತೆ'' ಎಂದು ಹೇಳಿ ಮತ್ತೊಬ್ಬರೂ ತಮ್ಮ ದನಿಗೂಡಿಸಿದರು. ನಾನೇನೂ ಹೇಳದಿದ್ದರೂ ಒಳಗೊಳಗೇ ಹಿಗ್ಗಿ ಹೀರೇಕಾಯಿಯಾದೆ ಎನ್ನುವುದಂತೂ ಒಪ್ಪಿಕೊಳ್ಳಲೇಬೇಕಾದ ಸತ್ಯ.

ಇದಾದ ಒಂದು ವಾರದ ನಂತರ ನನ್ನ ಹೆಸರಿನಲ್ಲಿ ಬಂದ ಪತ್ರವೊಂದು ನನ್ನ ತುಟಿಯಂಚಿನಲ್ಲಿ ನಗುವನ್ನು ಮೂಡಿಸಿತ್ತು. ಖುಷಿಖುಷಿಯಾಗಿಯೇ ಆ ಮುಚ್ಚಿದ ಕವರ್ ಅನ್ನು ತೆಗೆದು ಪತ್ರವನ್ನು ಓದತೊಡಗಿದೆ. ''ನಿಮ್ಮ ಮೊದಲ ಭಡ್ತಿಯು ಸಂಸ್ಥೆಯ ಈ ಕೆಳಕಂಡ ಬ್ಯಾಚ್ ನ ಉದ್ಯೋಗಿಗಳ ಜೊತೆಗೇ ಆಗಲಿದೆ ಎಂದು ಹೇಳಲು ಆಡಳಿತ ಮಂಡಳಿಯು ಸಂತಸಪಡುತ್ತಿದೆ. ಈ ಸಂಬಂಧ ನಿಮ್ಮ ಈವರೆಗಿನ ಸಾಧನೆಯ ಮೌಲ್ಯಮಾಪನ ಮತ್ತು ಮುಂದಿನ ಗುರಿಗಳ ಬಗ್ಗೆ ಚರ್ಚಿಸಲು ಮುಂದಿನ ಸೋಮವಾರದಂದು ಮಧ್ಯಾಹ್ನ ಎರಡು ಘಂಟೆಗೆ ಸಂದರ್ಶನವನ್ನು ನಿಗದಿಪಡಿಸಲಾಗಿದೆ'', ಎಂದು ಅದರಲ್ಲಿ ಬರೆದಿತ್ತು.

'ಸಂದರ್ಶನ' ಎಂಬ ಪದದಿಂದಲೇ ಬೆಚ್ಚಿಬೀಳುವ ನನಗೊಂದು ಹೊಸ ದುಃಸ್ವಪ್ನ. ''ಏನಯ್ಯಾ ಇದು ಹೊಸ ರಾಗ?'', ಎಂದು ಗೆಳೆಯ ಮಿಶ್ರಾನಿಗೆ ಇಂಟರ್ ಕಾಮ್ ನಲ್ಲಿ ಕರೆ ಮಾಡಿ ಕೇಳಿದರೆ ''ಬ್ಯಾಡ್ ಲಕ್ ಸರ್ ಜೀ, ಪ್ರತೀ ಪ್ರಮೋಷನ್ನಿಗೂ ಇನ್ನು ಇಂಟವ್ರ್ಯೂ ತಗೋತಾರಂತಪ್ಪಾ. ಹೊಸ ರೂಲ್ ಬಂದುಬಿಟ್ಟಿದೆ'', ಎಂದು ನೀರಸವಾಗಿ ಹೇಳಿ ಫೋನಿಟ್ಟ ಆತ. ನನಗಂತೂ ನಗಬೇಕೋ ಅಳಬೇಕೋ ತಿಳಿಯಲಿಲ್ಲ.

''ಅಯ್ಯೋ ಪ್ರಾರಬ್ಧವೇ'', ಎಂದು ನಾನು ತಲೆಯ ಮೇಲೆ ಕೈಯಿಟ್ಟಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The hardship of facing an interview. A Kannada essay by Prasad Naik from Angola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more