• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತ್ಮಶುದ್ಧಿ, ತ್ಯಾಗದ ದ್ಯೋತಕ ಜೈನರ ಪರ್ಯೂಷಣ ಪರ್ವ

By Vanitha
|

ಮಾನವರು ಹಿಂದೆಲ್ಲಾ ಪ್ರಕೃತಿಯಲ್ಲಿ ಮಿಂದೇಳುತ್ತಾ, ತಮ್ಮ ಆಂತರ್ಯದ ಕೂಗಿಗೆ ಓಗೊಟ್ಟು ಬದುಕುತ್ತಿದ್ದರು. ಆ ಆಂತರ್ಯ(ಆತ್ಮ)ದ ಮಾತುಗಳೇ ಬಾಯಿ ಮಾತುಗಳಾಗಿ ಕೇಳುಗರನ್ನು ಮೌನದಲ್ಲಿ ಬಂಧಿಯಾಗಿಸುತ್ತಿತ್ತು. ಆದರೆ ಬರುಬರುತ್ತಾ ಮಂದಿಗೆ ನಾಡಿನ ವಿಕಾರತೆಗೆ ಒಗ್ಗಿಕೊಳ್ಳುತ್ತಾ ಜಂಜಡದ ಬದುಕಲ್ಲಿ ಒದ್ದಾಡುವುದು ಅನಿವಾರ್ಯವಾಯಿತು. ಏಕೆಂದರೆ ಆತನಿಗೆ ತನ್ನ ಆಂತರ್ಯದ ಒಳಮಾತುಗಳನ್ನು ಆಲಿಸುವಷ್ಟು ಪುರುಸೊತ್ತು ಇರುವುದೇ ಇಲ್ಲವಲ್ಲಾ...

ಈ ನಿಟ್ಟಿನಲ್ಲಿ ಆತ್ಮದ ಕರೆಗಳಿಗೆ ಕಿವಿ ನೀಡುವಾತ ನಿಜವಾಗಿಯೂ ಪ್ರಪಂಚದಲ್ಲಿ ಪರಮ ಸುಖಿ ಎಂಬ ಮಾತನ್ನು ಯಾರು ಅಲ್ಲಗಳೆಯುವಂತಿಲ್ಲ. ಈ ಆತ್ಮದ ಮಾತುಗಳನ್ನು ಆಲಿಸಲು ಕೆಲವರಿಗೆ ಪ್ರಕೃತಿ, ಪುಸ್ತಕ, ಧರ್ಮದ ಆಚರಣೆಗಳು ಸಹಕರಿಸುತ್ತದೆ. ನಿಮ್ಮ ಆತ್ಮದ ಕರೆಗಳನ್ನು ಆಲಿಸಲು ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಆಚರಿಸುವ ಜೈನ ಧರ್ಮದ 'ಪರ್ಯೂಷಣ ಪರ್ವ' ಆಸ್ಪದ ಮಾಡಿಕೊಡುತ್ತದೆ. ಹಾಗಾಗಿ ಈ ವಿಶೇಷ ಪರ್ವದ ಕುರಿತಾದ ಲೇಖನ ನಿಮಗಾಗಿ..ನಿಮ್ಮ ಆತ್ಮದ ಕರೆಗಳನ್ನು ಆಲಿಸುವುದಕ್ಕಾಗಿ.

******

ಜೈನ ಸಮಾಜದಲ್ಲಿ ಧಾರ್ಮಿಕವಾಗಿ ಹಾಗು ಸಾಂಸ್ಕೃತಿಕವಾಗಿ ಆಚರಿಸುವ ರಾಷ್ಟ್ರೀಯ ಪರ್ವವೇ ಈ ಪರ್ಯೂಷಣ. ಈ ಪರ್ವದ ಮುಖ್ಯ ಭಾಗವೇ ಆತ್ಮಶುದ್ಧಿ ಮತ್ತು ತ್ಯಾಗ. ಇದು ಯಾವಾಗಲೂ ಕಾಲದ ಮಿತಿಯಿಂದ ದೂರು ನಿಂತಿರುವುದರಿಂದ ಈ ಪರ್ವಕ್ಕೆ ಇತಿಹಾಸದ ನಿಶ್ಚಿತ ರೂಪ ಕೊಡಲು ಸಾಧ್ಯವಾಗುವುದಿಲ್ಲ.

ಈ ಪರ್ವ ಮಾನವರಿಗೆ ತನ್ನಲ್ಲಿರುವ ವಿಕಾರತೆ, ತ್ಯಾಗ, ಉದಾತ್ತ ಭಾವಗಳನ್ನು ಗ್ರಹಿಸಲು ಪ್ರೇರಣೆ ನೀಡುವುದರಿಂದ ಕ್ಷಮೆ ಮತ್ತು ಮೃದುತ್ವವನ್ನು ಸ್ವೀಕರಿಸಲು ಅವಕಾಶ ಒದಗಿಸುವುದರಿಂದ ಇದನ್ನು 'ಜನ-ಜನರ ಪರ್ವ', 'ರಾಷ್ಟ್ರೀಯ ಪರ್ವ' ಎಂದು ಕರೆಯಲಾಗುತ್ತದೆ.

ಪರ್ಯೂಷಣವನ್ನು ದಿಗಂಬರು, ಶ್ವೇತಾಂಬರ ಸಮಾಜದ ಬಾಂಧವರೆಲ್ಲಾ ಒಗ್ಗೂಡಿ ಇದನ್ನು ಆಚರಿಸುತ್ತಾರೆ. ಇದು ಭಾದ್ರಪದ ಶುಕ್ಲ ಪಕ್ಷದ ಪಂಚಮಿ ದಿನ ಎರಡೂ ಸಮಾಜದವರಿಗೂ ಮುಖ್ಯವಾದ ದಿನವಾಗಿರುತ್ತದೆ. ಇದನ್ನು ದಿಗಂಬರರು ಪಂಚಮಿಯಿಂದ ಚತುರ್ದಶಿಯವರೆಗೆ ಆಚರಿಸುತ್ತಾರೆ. ಇದನ್ನು ಇವರು 'ದಶಲಕ್ಷಣ ಪರ್ವ' ಎಂದು ಕರೆದರೆ, ಶ್ವೇತಾಂಬರರು ಪಂಚಮಿ ದಿನದಿಂದ 8 ದಿನಗಳ ಕಾಲ ಆಚರಣೆ ಮಾಡುತ್ತಾರೆ. ಇವರು 'ಪರ್ಯೂಷಣ' ಎಂದು ಕರೆಯುತ್ತಾರೆ. ಹಾಗಾಗಿ ಇದು ಪಂಚಮಿಯಂದು ಸಂವತ್ಸರಿಯ ರೂಪದಲ್ಲಿ ಆಯೋಜನೆ ಮಾಡುತ್ತಾರೆ.[ಜೈನರ ಸಲ್ಲೇಖನ ವ್ರತ ಕಾನೂನುಬಾಹಿರ ಆಚರಣೆಯಂತೆ!]

ಪರ್ಯೂಷಣ ಪದದ ಅರ್ಥ ಹಾಗೂ ವ್ಯುತ್ಪತ್ತಿ :

ಪರ್ಯೂಷಣದ ಪದ ಅಪಂಭ್ರಂಶವಾಗಿದೆ. ಇದು ಪಜ್ಜೂಸನ, ಪಜ್ಜೋಸವಣ, ಪಜ್ಜೋಸಮನ ಮುಂತಾದ ಪ್ರಾಕೃತ ಭಾಷಾ ರೂಪಗಳು ಹಾಗೂ ಪರ್ಯೂಷಣ, ಪರ್ಯೂಷನ, ಪರ್ಯೂಪವಾಸ, ಪರ್ಯೂಪಾಸನಾ ಎಂದು ಸಂಸ್ಕೃತದಲ್ಲಿ ಕರೆಯುತ್ತಾರೆ.

* ಪರ್ಯೂಷನ (ಪರಿ+ ಊಷನ) - ಕರ್ಮಾದಿ ವಿಕಾರಗಳ ದಹನ ಮಾಡುವುದು.

* ಪರ್ಯೂಷಣ (ಪರಿ+ಊಷಣ) - ಪರಭಾವದಿಂದ ವಿರತಿಯಾಗಿ ಸ್ವಭಾವದಲ್ಲಿ ರಮಣನಾಗಿರುವುದು

* ಪರ್ಯೂಶಮನ (ಪರಿ+ಉಪಶಮನ) - ಕ್ರೋಧ, ಮದ ಮತ್ಸರ ಎಂಬ ಅರಿಶಡ್ವರ್ಗ ಹಾಗೂ ಇನ್ನಿತರ ಕೆಟ್ಟ ಭಾವಗಳ ಉಪಶಮನ

* ಪರ್ಯೂಪವಾಸ (ಪರಿ+ ಉಪವಾಸ) - ವರ್ಷಾಯೋಗದಲ್ಲಿ ಒಂದೇ ಸ್ಥಾನದಲ್ಲಿರುತ್ತಾ, ತನ್ನ ಆತ್ಮದಲ್ಲಿಯೇ ಲೀನವಾಗಿರುವುದು

* ಪರ್ಯೂಪವಾಸನಾ (ಪರಿ+ಉಪಾಸನಾ) - ಉತ್ಕೃಷ್ಟ ಉಪಾಸನೆ ಅರ್ಥಾತ್ ಆತ್ಮೋಪಾಸನೆ ಮತ್ತು ಆತ್ಮಾರಾಧನೆ ಮಾಡುವುದು. ಈ ಎಲ್ಲಾ ಅರ್ಥಗಳ ದೃಷ್ಠಿಯಿಂದ ಪರ್ಯೂಷಣ ಎಂದರೆ ಆತ್ಮಾಲೋಚನೆ, ಆತ್ಮನಿರೀಕ್ಷಣೆ, ಆತ್ಮಾ ಜಾಗೃತಿ ಹಾಗೂ ಆತ್ಮೋಲಾಭಿದಾಶಯ ಮಹಾನ್ ಪರ್ವ.

ಈ ಪರ್ವದ ಪ್ರಮುಖ ಉದ್ದೇಶ :

ಜೈನ ಸಮಾಜದಲ್ಲಿ ಒಂದು ವರ್ಷದಲ್ಲಿ ಅನೇಕ ಪರ್ವಗಳ ಆಚರಣೆಯಲ್ಲಿ ತೊಡಗುತ್ತದೆ. ಇವೆಲ್ಲಾ ಸಾಮಾಜಿಕ ಹಾಗೂ ಧಾರ್ಮಿಕವಾಗಿ ಆಚರಣೆಗೊಳ್ಳುತ್ತದೆ. ಹೀಗೆ ಆಚರನೆಗೊಳ್ಳುವ ವಿಶಿಷ್ಟ ಪರ್ವಗಳಲ್ಲಿ ಪರ್ಯೂಷಣ ಪರ್ವವನ್ನು ಸರ್ವಶ್ರೇಷ್ಠ ಪರ್ವ ಎಂದು ಭಾವಿಸಲಾಗುತ್ತದೆ.

ಈ ಪರ್ವದ ಮುಖ್ಯ ಉದ್ದೇಶ ನಿರವಿಶೇಷದ ರೂಪದಲ್ಲಿ ಪ್ರತಿಯೊಂದು ಜೀವದ ಐಹಿಕ, ಪಾರ ಲೌಕಿಕ ಸುಖವನ್ನು ಪಡೆಯುವುದರ ಜೊತೆಗೆ ಮೋಕ್ಷವನ್ನು ಪಡೆಯುವುದು. ಒಟ್ಟಿನಲ್ಲಿ ಇದನ್ನು ಕೈಗೊಳ್ಳುವುದರಿಂದ ಆತ್ಮ,ಶುದ್ದಿ ಮಾಡಿಕೊಂಡು ಮೋಕ್ಷದ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸಬಹುದು.

ಪರ್ಯೂಷಣ ಪರ್ವದ ಹಿನ್ನೆಲೆ :

ಅನಾದಿ ಕಾಲದ ಗಣನೆಯಲ್ಲಿ ವರ್ಷದ ಪ್ರಾರಂಭವು ಶುಕ್ಲಪ್ರತಿಪದೆಯಿಂದ ಆರಂಭವಾಗುತ್ತಿತ್ತು. ಅನ್ಯ ಕಲ್ಪಗಳ ಹಾಗೇ ವರ್ತಮಾನ ಕಲ್ಪಕಾಲದ ಅವಸರ್ಪಣೀಯ ( 507-269 ಮನುಷ್ಯರ ಆಯಸ್ಸು ಸುಖ ಮುಂತಾದವುಗಳು ಕ್ರಮವಾಗಿ ಕುಂದುವ ಕಾಲ) ಮೂರನೇ ಕಾಲದಲ್ಲಿ ಜನರು ಜ್ಯೋತಿರಂಗ ಜಾತಿಯ ಕಲ್ಪವೃಕ್ಷಗಳ ಸಂಖ್ಯೆ ಕಡಿಮೆಯಾಗುವುದನ್ನು ಕಂಡರು. ಆಗ ಆಕಾಶದಲ್ಲಿ ಸೂರ್ಯಾಸ್ತ ಹಾಗೂ ಚಂದ್ರೋದಯ ಎರಡೂ ಏಕಕಾಲದಲ್ಲಿ ಕಂಡರು. ಕುಲಕರ ಪ್ರತಿಶ್ರುತಿಯು ಅದರ ರಹಸ್ಯವನ್ನು ತಿಳಿಸಿದ ಹಾಗೂ ಮುಂದಿನ ಶ್ರಾವಣ ಕೃಷ್ಣ ಪ್ರತಿಪದೆಯಿಂದ ದಿನ, ಪಕ್ಷ, ಮಾಸ, ಪರ್ವ ,ಯುಗ ಮುಂತಾದ ವ್ಯವಹಾರ ಕಾಲದ ಗಣನೆ ಪ್ರಾರಂಭವಾಯಿತು.

ಈ ಗಣನೆ ಪ್ರಕಾರ ಅವಸರ್ಪಣೀಯ ಆರನೆಯ ಕಾಲ (ದುಷಮಾ-ಕೆಟ್ಟ ಕಾಲ)ದ ಅಂತ್ಯದಲ್ಲಿ 48 ದಿನಗಳ ಕಾಲ (ಜ್ಯೇಷ್ಠ ಕೃಷ್ಣ 11 ರಿಂದ ಆಷಾಢ ಕೃಷ್ಣ 15ರವರೆಗೆ ಭಯಂಕರ ಪ್ರಳಯವಾಗುತ್ತದೆ. 'ಸಂವರ್ತಕ' ಎಂಬ ಪ್ರಚಂಡ ಪ್ರಳಯ ಗಾಳಿಯು ಬೀಸುತ್ತದೆ. ಪ್ರತಿ ಏಳೇಳು ಪ್ರಕಾರದ ಕೆಟ್ಟ ಮಳೆಯಾಗುತ್ತದೆ. ಅದರ ಫಲವಾಗಿ ಭಯಂಕರ ವಿನಾಶಗಳಾಗುತ್ತದೆ. ಮನುಷ್ಯ ಜೀವ ಜಂತುಗಳ ನಾಶವಾಗುತ್ತದೆ.

ಈ ಸಮಯದಲ್ಲಿ ದೇವಾದಿ ದೇವತೆಗಳ ಕೃಪೆಯಿಂದ ಕೆಲವೊಂದು ಪ್ರಾಣಿಗಳು ಆರ್ಯಾ ಖಂಡದಲ್ಲಿನ ಜಂಬೂದ್ವೀಪದ ಭರತಕ್ಷೇತ್ರದಲ್ಲಿನ ವಿಜಯಾರ್ಧ ಪರ್ವತದ ಗುಹೆಗಳಲ್ಲಿ ಆಸ್ರಯ ಪಡೆಯುತ್ತವೆ. ಶ್ರಾವಣ ಕೃಷ್ಣಾ ಪ್ರಥಮಾದಿಂದ 7 ವಾರದವರೆಗೆ 7 ಪ್ರಕಾರವಾದ ಸುವೃಷ್ಟಿಯಾಗುತ್ತದೆ. ಅದರಿಂದ ಪ್ರಳಯಕಾಲದ ಪ್ರಚಂಡತೆ ಉಪಶಮನವಾಗಿ ಪೃಥ್ವಿ ಪುನಃ ಇರಲು ಯೋಗ್ಯವಾಗುತ್ತದೆ. ಈ 48 ದಿನ ಭಾದ್ರಪದ ಶುಕ್ಲ ಚತುರ್ಥಿಗೆ ಪೂರ್ಣವಾಗುತ್ತದೆ.

ಜಗತ್ತಿನ ವಿನಾಶಕ್ಕೆ ಹೆದರಿ ವಿಜಯಾರ್ಧ ಪರ್ವತದಲ್ಲಿ ಆಶ್ರಯ ಪಡೆದಿದ್ದ ಜನರು ಪ್ರಾಣಿಗಳು ಭಾದ್ರಪದ ಶುಕ್ಲ ಪಂಚಮಿಯಂದು ಪರಸ್ಪತ ಸಂಧಿಸುತ್ತಾರೆ. ಅವರ ಕೆಟ್ಟ ಮನಸ್ಥಿತಿಗಳು ಅಷ್ಟೊತ್ತಿಗೆ ಮಂದವಾಗಿರುತ್ತದೆ. ಆ ಕಾರಣದಿಂದಲೇ ಆ ದಿನದಿಂದ ಉತ್ತಮಾ ಕ್ಷಮಾ, ಮಾರ್ದವ, ಆರ್ಜವ, ಶೌಚ, ಸತ್ಯ, ಸಂಯಮ, ತಪ, ತ್ಯಾಗ, ಆಕಿಂಚನ್ಯ, ಬ್ರಹ್ಮಚರ್ಯ ಎಂಬ ದಶಲಕ್ಷಣ ಧರ್ಮಗಳ ವಿಶೇಷ ಚಿಂತನ, ಮನನ ಹಾಗೂ ಆರಾಧನೆಗಾಗಿ ಈ ಪುನೀತ ಪರ್ವವನ್ನು ಆಚರಣೆ ಮಾಡಲಾಗುತ್ತದೆ.[ಸಲ್ಲೇಖನ : ಶ್ರವಣಬೆಳಗೊಳದಲ್ಲಿ ಜೈನ ಸ್ವಾಮಿಗಳ ಸಮಾವೇಶ]

ಈ ಪರ್ವದ ನಂಬಿಕೆ ಏನು ?

ಈ ಪರ್ವ ಆಚರಣೆಯ ಮುಖ್ಯ ಧ್ಯೇಯವೇ ಆತ್ಮವನ್ನು ಕೆಟ್ಟ ಸಂಗತಿ, ಆಲೋಚನೆ, ಕೆಲಸಗಳಿಂದ ದೂರ ನಿಲ್ಲುವುದಕ್ಕೆ ಪ್ರೇರೇಪಿಸುವುದಾಗಿದೆ. ಇದು ಮಾಯೆ ಲೋಭ ಸಂಗ್ರಹದಂತಹ ಕೆಡಕುಗಳಿಂದ ರಕ್ಷಿಸಿಕೊಳ್ಳಲು ಎಚ್ಚರಿಕೆ ನೀಡುತ್ತದೆ. ಕಳ್ಳತನ, ಮೋಸ, ವಂಚನೆ, ಭ್ರಷ್ಟಾಚಾರದಂತಹ ಮೂಲ ಪ್ರವೃತ್ತಿಗಳಿಂದ ದೂರವಾಗಲು ಸಾಧ್ಯವಾಗುತ್ತದೆ.

ಈ ಪರ್ವದ ಮೂಲಕ ಆತ್ಮ ಉಜ್ವಲಗೊಂಡು ಸಾಂಸಾರಿಕ ವಿಷಮತೆಯಿಂದ ಮುಕ್ತಿ ದೊರೆಯುತ್ತದೆ. ಪಾಪಗಳನ್ನು ನಾಶ ಮಾಡಿ ಶಾಶ್ವತ ಸುಖ ನೀಡುತ್ತದೆ. ಒಟ್ಟಿನಲ್ಲಿ ಈ ಪರ್ವದ ದಿನದಂದು ಜೈನರು ಆತ್ಮ ಚಿಂತನೆ, ವ್ರತ, ಉಪವಾಸ, ಶಾಸ್ತ್ರ, ಸ್ವಾಧ್ಯಾಯದಲ್ಲಿ ತೊಡುಗುತ್ತಾರೆ.

ಜೈನಧರ್ಮದವರಲ್ಲದವರೂ ಆಚರಿಸಬಹುದು

ಜಿನಮತದ ಮತ್ತೊಂದು ಹೆಸರೇ ಎಂದೇ ಪರಿಗಣಿತವಾಗಿರುವ ಈ ಪರ್ಯೂಷಣವನ್ನು ಕೇವಲ ಜೈನ ಧರ್ಮದವರು ಮಾತ್ರ ಆಚರಿಸಬೇಕೆಂಬ ಕಟ್ಟುಪಾಡು ಇಲ್ಲ. ಜೈನನೇತರರು ಸಹ ಪವಿತ್ರ ಭಾವನೆ ಹೊಂದಿ ಇದರಲ್ಲಿ ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ. ಈ ಸಂದರ್ಭದಲ್ಲಿ ಆಯೋಜನೆಯಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರವಚನಗಳಲ್ಲಿ ಭಾಗವಹಿಸಬಹುದು. ಹಾಗಾಗಿ ಇದರ ಆಯೋಜನೆಯನ್ನು ಜನಸಾಮಾನ್ಯರ ಹಿತ, ಸುಖ-ಶಾಂತಿಯ ಉದ್ದೇಶವನ್ನಿಟ್ಟುಕೊಂಡೇ ಮಾಡಲಾಗುತ್ತದೆ.

ಆಧಾರ ಗ್ರಂಥ : ಹತ್ತು ಧರ್ಮಗಳ ಸಂದೇಶ - ಉಪಾಧ್ಯಾಯ ಮುನಿಶ್ರೀ ಕಾಮಕುಮಾರ ನಂದಿ ಮಹಾರಾಜರು

English summary
Paryushana is one of the most important and special festival of jain community. The Paryushana festival is Bhadrapada shukla Chaturthi. This fest is for 8 days for Shwetambar and 10 days for Digambars in jain community. Normally is celebrated in the month of August or September.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X