• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಲ್ಲೇಖನ ವ್ರತ ಎಂದರೇನು? ಜೈನ ಧರ್ಮೀಯರ ಪವಿತ್ರ ಮರಣ ಮಹೋತ್ಸವ!

By ಶುಭಾಶಯ ಜೈನ್
|

ಅಹಿಂಸೆ, ತ್ಯಾಗದ ಪರಮೋಚ್ಚ ಆದರ್ಶ ಮೆರೆದಿದ್ದು ಜೈನ ಧರ್ಮದಲ್ಲಿ ಅಂದ್ರೆ ತಪ್ಪಾಗ್ಲಿಕ್ಕಿಲ್ಲ. ಭವಬಂಧನಗಳನ್ನೇ ಕಳಚಿ ಮೋಹದ ಸಂಕಲೆಗಳನ್ನು ಕಡಿದುಕೊಂಡು ದಿಗಂಬರತ್ವವನ್ನೇ ಧರಿಸಿದ ಆದರ್ಶ ಪುರುಷ ಬಾಹುಬಲಿ. ತಪಸ್ಸು ಸಣ್ಣ ಸಾಧನೆ ಅಲ್ಲ, ದಿಗಂಬರ ವೇಷ ಧರಿಸುವುದೂ ಸಣ್ಣ ಸಾಧನೆಯಲ್ಲ. ಹಾಗೆಯೇ, ಇಚ್ಛಾಮರಣ, ಮರಣ ಮಹೋತ್ಸವದ ಆಚರಣೆ ಮಾಡ್ಬೇಕಾದ್ರೆ ಆತ ಅತೀದೊಡ್ಡ ಸಾಧಕನಾಗಿರಬೇಕು.

ಹಿರಿಯರು ರಸ ಹೀರಿ ಬಿಸಾಡಿದ ಕಬ್ಬಿನ ಜಲ್ಲೆಯಲ್ಲ!

ಬಾಹುಬಲಿ ಕಾಲ್ಪನಿಕ ವ್ಯಕ್ತಿಯಲ್ಲ. ಇತಿಹಾಸದ ಒಂದು ವ್ಯಕ್ತಿತ್ವ. ಇಂಥದ್ದೆ ಮತ್ತೊಂದು ಶ್ರೇಷ್ಠ ಆಚರಣೆ ಸಲ್ಲೇಖನ. ಸಲ್ಲೇಖನದ ಬಗ್ಗೆ ಅನೇಕರಿಗೆ ಗೊತ್ತಿಲ್ಲ, ಸ್ವ ಹಾಗೂ ಪರರಿಗೆ ಅಹಿಂಸಾತ್ಮಕವಾಗಿರುವ ಈ ಆಚರಣೆ ಹಿಂಸಾಸ್ವರೂಪದ್ದು ಅಂತ ಅನೇಕರ ತಿಳುವಳಿಕೆ. ಹಾಗಾಗಿಯೇ ಏನೋ, ಸಲ್ಲೇಖನವನ್ನು ನಿಷೇಧಿಸಬೇಕು ಎಂಬ ಕೂಗುಗಳ ಹಿಂದಿನಿಂದಲೂ ಕೇಳಿಬಂದಿದ್ದು. ಬನ್ನಿ ಸಲ್ಲೇಖನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಸಲ್ಲೇಖನದ ಅರ್ಥ ಕ್ಷೀಣವಾಗು ಎಂದು.. ಸಲ್ಲೇಖನಕ್ಕೆ ಸಂಲೇಹನಾ ಸಂತಾರಾ, ಸಮಾಧಿ ಮರಣ, ಸನ್ಯಾಸ ಮರಣ ಎಂದೂ ಹೇಳ್ತಾರೆ. ಸಲ್ಲೇಖನ ಅಂದ್ರೆ ಮರಣಪಡೆಯುವವರೆಗೂ ಉಪವಾಸ ಕೈಗೊಳ್ಳುವುದು ಅಥವಾ ಮರಣಕ್ಕಾಗಿ ಉಪವಾಸ ಕೈಗೊಳ್ಳುವುದು. ಸಲ್ಲೇಖನಕ್ಕೆ ಅದರದೇ ಆದ ನಿಯಮಾವಳಿಗಳಿವೆ. ಸಲ್ಲೇಖನವನ್ನು ಜೈನ ಗುರುಗಳ ಮಾರ್ಗದರ್ಶದಲ್ಲಿ ಸ್ವೀಕರಿಸಬೇಕು.

ಸಲ್ಲೇಖನ ಒಮ್ಮೆಗೇ ನಡೆದು ಬಿಡುವ ಪ್ರಕ್ರಿಯೆ ಅಲ್ಲ. ಸಲ್ಲೇಖನ ಸ್ವೀಕರಿಸಿದ ನಂತರ ಒಂದೊಂದೇ ಆಹಾರಗಳನ್ನು ತ್ಯಜಿಸ್ತಾ ಬರುವುದು. ಮೊದಲಿಗೆ ಘನ ಆಹಾರ ತ್ಯಜಿಸುವುದು, ನಂತರ ಹಾಲು, ನಂತರ ನಿಧಾನಕ್ಕೆ ನೀರನ್ನೂ ತ್ಯಜಿಸಿ ಉಪವಾಸ ಕೈಗೊಳ್ಳುವುದು ಸಲ್ಲೇಖನದ ಕ್ರಮ. ಸಮಾಧಿಮರಣಕ್ಕೆ ಕೆಲವು ದಿನಗಳಿಂದ ಹಿಡಿದು ವರ್ಷಗಳವರೆಗೂ ತಗುಲಬಹುದು.

ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಕಾರಣವಾಗುವ ಚಟುವಟಿಕೆಗಳನ್ನು ನಿಲ್ಲಿಸುವುದರ ಮೂಲಕ ಕರ್ಮಕ್ಷಯ ಮಾಡಿಕೊಳ್ಳುವುದು ಮತ್ತು ಮಾನವನ ಬಯಕೆ ಮತ್ತು ದೇಹವನ್ನು ಕೃಶಗೊಳಿಸ್ತಾ ಸಾಗುವುದು ಸಲ್ಲೇಖನದ ಆಶಯ. ಸಲ್ಲೇಖನ ಯಾವುದೇ ಸ್ವಾರ್ಥದ ಉದ್ದೇಶಕ್ಕಾಗಿ ಕೈಗೊಳ್ಳುವಂಥದ್ದಲ್ಲ. ವಿಷ ಸೇವನೆ, ಅಥವಾ ಹತ್ಯಾರ್ ಬಳಸಿ ಹಿಂಸೆಗೊಳಪಟ್ಟು ಸಾಯೋದಲ್ಲ. ಸಾವಿಗಾಗಿ ತಯಾರಿ ನಡೆಸಿ, ಸತತ ಅಭ್ಯಾಸ ನಡೆಸಿ, ಸ್ವ ಇಚ್ಛೆಯಿಂದ, ಯೋಜಿತ, ಶಾಂತಚಿತ್ತದಿದ, ಭಾವೋದ್ವೇಗಗಳಿಲ್ಲದೆ, ನಿರ್ಭಾವುಕರಾಗಿ ಪಂಚನಮಸ್ಕಾರಗಳನ್ನು ಜಪಿಸ್ತಾ ಆಧ್ಯಾತ್ಮಿಕ ಉದ್ದೇಶಕ್ಕಾಗಿ ಕೈಗೊಂಡಿದ್ದಾಗಿರ್ಬೇಕು.

ಬ್ರಾಹ್ಮಣರು ನಿತ್ಯ ಕರ್ಮ, ಸಂಧ್ಯಾವಂದನೆ ಮಾಡುವುದು ಪಾಪ ಕೃತ್ಯವೆ?

ಸಲ್ಲೇಖನ ಆತ್ಮಹತ್ಯೆಯಲ್ಲ

ಈ ಮರಣದ ಹಿಂದೆ ಯಾವುದೇ ಉದ್ದೇಶ ಇಲ್ಲ, ಆಕಾಂಕ್ಷೆ ಇಲ್ಲ, ಬಂಧನವಿಲ್ಲ. ಈ ಪವಿತ್ರ ಮರಣವನ್ನು ಅಭ್ಯಾಸ ಮಾಡುವ ವ್ಯಕ್ತಿ ಆಸೆ ಕೋಪ ಬಂಧನಗಳಿಂದ ಮುಕ್ತವಾಗಿರುತ್ತಾನೆ. ಹಾಗಾಗಿ ಇದು ಆತ್ಮಹತ್ಯೆ ಅಲ್ಲ. ಸಾವು ಸಮೀಪ ಆದಾಗ ತನ್ನ ಸಾವು ಹೀಗೇ ಆಗ್ಬೇಕು ಅಂತ ನಿರ್ಧಾರ ತೆಗೆದುಕೊಳ್ಳುವುದೇ ಸಲ್ಲೇಖನ. ಇದನ್ನು ಗೃಹಸ್ಥ ಸನ್ಯಾಸಿ, ಗಂಡು ಹೆಣ್ಣು, ಬಡವ ಬಲ್ಲಿದ, ವಿದ್ಯಾವಂತ ಅವಿದ್ಯಾವಂತ ಎಂಬ ಬೇಧವಿಲ್ಲದೆ ಆಯ್ಕೆಗೆ ಅವಕಾಶವಿದೆ.

ಅದು ಆತ್ಮಹತ್ಯೆ ಅಲ್ಲ.

ಸಲ್ಲೇಖನ ಅಂದ್ರೆ ಮರಣ ಮಹೋತ್ಸವ. ಅದನ್ನು ಎಲ್ಲರಿಂದ ಆಚರಿಸಲು ಸಾಧ್ಯವಿಲ್ಲ. ಸಲ್ಲೇಖನ ಅಂದ್ರೆ ಇಚ್ಛಾಮರಣ. ಆದ್ರೆ ಸಲ್ಲೇಖನ ಎಲ್ಲರಿಗೂ ಪಾಲನೆಗೆ ಅವಕಾಶವಿಲ್ಲ. ಅದಕ್ಕೆ ಸತತ ಪರಿಶ್ರಮ, ಅಭ್ಯಾಸಗಳು ಬೇಕು. ಸಾಧಕರಿಗಷ್ಟೇ ಇಚ್ಛಾಮರಣ ಅಥವಾ ಸಲ್ಲೇಖನ ಸಾಧ್ಯ ಅನ್ನೋದನ್ನು ನೆನಪಿಟ್ಟುಕೊಳ್ಳಬೇಕು. ಅದನ್ನ ಸಾಧಿಸೋದು ಸಾಮಾನ್ಯರ ಕೈಯಿಂದ ಸಾಧ್ಯವಿಲ್ಲ. ಸನ್ಯಾಸದ ಹಾಗೆನೇ ಈ ಸಲ್ಲೇಖನ ಕಠಿಣತಮ.. ಸತತ ಪ್ರಯತ್ನದಿಂದ ಮಾತ್ರ ಈ ಇಚ್ಛಾಮರಣ ಸಾಧಿಸಬಹುದು.

ಇದರ ಬಗ್ಗೆ ತಿಳಿಯದವರು ಇದೊಂದು ರೀತಿಯ ಆತ್ಮಹತ್ಯೆ ಅನ್ನೋ ರೀತಿ ಬಿಂಬಿಸ್ತಿದ್ದಾರೆ. ಜೈನ ಧರ್ಮದಲ್ಲಿರುವ ದಯಾಪರತೆ ಸಹನಶೀಲತೆ, ಅಹಿಂಸಾಗುಣ ಬೇರ್ಯಾವ ಧರ್ಮದಲ್ಲೂ ಇಲ್ಲ. ಎಲ್ಲಾ ಧರ್ಮದಲ್ಲೂ ಈ ಉನ್ನತ ಮೌಲ್ಯಗಳ ಬಗ್ಗೆ ಬೋಧಿಸಲಾಗಿದೆ. ಆದ್ರೆ ಆಚರಣೆಯಲ್ಲಿ ಕಣ್ಮರೆಯಾಗಿದೆಯಷ್ಟೆ. ಹಾಗಾಗಿ ಅಹಿಂಸಾತತ್ವದ ಪಾಲನೆಗಾಗಿ ಸ್ವ ಇಚ್ಛೆಯಿಂದ ಕೈಗೊಳ್ಳುವ ವ್ರತವೇ ಈ ಸಲ್ಲೇಖನ

ಮೂರು ಸಂದರ್ಭದಲ್ಲಿ ಸಲ್ಲೇಖನಕ್ಕೆ ಅವಕಾಶ

ಶ್ರೇಷ್ಠ ಜೈನ ಧರ್ಮದಲ್ಲಿ ಮೂರು ಸಂದರ್ಭಗಳಲ್ಲಿ ಮಾತ್ರ ಸಲ್ಲೇಖನಕ್ಕೆ ಅವಕಾಶ ನೀಡಲಾಗಿದೆ.

1) ಭೀಕರ ಬರಗಾಲ ಬಂದು ತಿಂದುಣ್ಣುವುದಕ್ಕೆ, ಇಲ್ಲದಿರುವಂತಹಾ ಪರಿಸ್ಥಿತಿಯಲ್ಲಿ,

2) ಗುಣಪಡಿಸಲಾಗದ ಖಾಯಿಲೆ ಬಂದು ಹಾಸಿಗೆ ಹಿಡಿಯುವ ಸಂದರ್ಭ ಬಂದಾಗ, 3) ವಯಸ್ಸಾಗಿ ಇನ್ನೇನು ಸಾವು ಸಂಭವಿಸ್ತಾ ಇದೆ ಅನ್ನೋವಾಗ ಆಹಾರ ತ್ಯಾಗ ಮಾಡಿ ದೇವರ ಧ್ಯಾನ ಮಾಡ್ತಾ, ಸಮಾಧಿ ಸ್ಥಿತಿಗೆ ತೆರಳೋದು

ಸ್ವ ಇಚ್ಛೆಯಿಂದ ದೇಹದಿಂದ ಆತ್ಮನ ಬಂಧನವನ್ನು ಮುಕ್ತಗೊಳಿಸುವುದೇ ಸಲ್ಲೇಖನದ ಉದ್ದೇಶ.

ಅದು ಕೂಡಾ ತಮ್ಮ ಅಸ್ತಿತ್ವದಿಂದ ಇನ್ಯಾವ ಉಪಯೋಗವೂ ಇಲ್ಲ ಮತ್ತು ಇತರರಿಗೆ ಅದರಿಂದ ಸಮಸ್ಯೆ ಎಂಬ ವಿಚಾರ ಅರಿವಿಗೆ ಬಂದಾಗ ಮಾತ್ರ ಸಲ್ಲೇಖನದ ಯ್ಕೆಗೆ ಅವಕಾಶವಿದೆ. ಸ್ವಂತ ಕೆಲಸಗಳನ್ನು ನಿರ್ವಹಿಸಲು ಮತ್ತು ಸಮಾಜದ ಪರಿವರ್ತನೆಗೆ ದೇಹ ಶಕ್ತವಾಗಿದ್ದು ಇನ್ನಷ್ಟು ಕರ್ತವ್ಯಗಳನ್ನು ಉಳಿಸಿಕೊಂಡಿರುವಾಗ ಸಲ್ಲೇಖನ ತೆಗೆದುಕೊಂಡ್ರೆ ಅದು ಆತ್ಮಹತ್ಯೆ ಆಗುತ್ತೆ. ಆದ್ದರಿಂದ, ಜೈನ ಸಮುದಾಯದ ಮುನಿಗಳು ತಪಸ್ವಿಗಳು ತಮ್ಮ ಜೀವಮಾನದ ಉದ್ದಕ್ಕೂ ಧರ್ಮಪ್ರಸಾರ ಮಾಡಿ, ಇಳಿವಯಸ್ಸಿನಲ್ಲಿ ಸಲ್ಲೇಖನ ವ್ರತಾಚರಣೆ ಮಾಡುವುದನ್ನು ಕಾಣುತ್ತೇವೆ.

9ನೇ ಶತಮಾನದಲ್ಲಿ ಜಿನಸೇನಾಚಾರ್ಯರು ಬರೆದ ಆದಿಪುರಾಣದಲ್ಲಿ ಸಲ್ಲೇಖನದ ಉಲ್ಲೇಖಗಳಿವೆ. 10ನೇ ಶತಮಾನದ ಸೋಮದೇವನ ಯಶಸ್ ತಿಲಕ, ವಡ್ಡಾರಾಧನೆಯಲ್ಲಿಯೂ ಸಲ್ಲೇಖನದ ಬಗ್ಗೆ ಮಾಹಿತಿಗಳಿವೆ. ಜೈನಗ್ರಂಥ ತತ್ವಾರ್ಥ ಸೂತ್ರದ ಪ್ರಕಾರ ಸಾವು ಸಮೀಪಿಸಿದಾಗ ಸ್ವಇಚ್ಛೆಯಿಂದ ಸಲ್ಲೇಖನ ಸ್ವೀಕರಿಸಬಹುದು ಎಂಬ ಉಲ್ಲೇಖ ಇದೆ.

ಸಲ್ಲೇಖನ ವಿಧಗಳು

ಷಾಯ ಸಲ್ಲೇಖನ (ಅಭಯಂತರ)- ಆಂತರಿಕ ಬಯಕೆಗಳನ್ನು ಹತ್ತಿಕ್ಕುವುದು ಅಥವಾ ಕ್ಷಯಿಸುವುದು, ಅಥವಾ ಅರಿಷಡ್ವರ್ಗಗಳನ್ನು ಜಯಿಸುವುದು

ಕಾಯ ಅಥವಾ ಬಾಹ್ಯ ಸಲ್ಲೇಖನ- ಬಾಹ್ಯ ಹಿಂಸೆಗೆ ಕಾರಣವಾಗುವ ಬಯಕೆಗಳನ್ನು, ಕ್ರಿಯೆಗಳನ್ನು ಹತ್ತಿಕ್ಕುವುದು..

ಇನ್ನು ಪ್ರಾಚೀನ ಶ್ವೇತಾಂಬರ ಗ್ರಂಥ ಅಚರಂಗ ಸೂತ್ರದಲ್ಲೂ 3 ಬಗೆಯ ಸಲ್ಲೇಖನಗಳನ್ನು ವಿವರಿಸಲಾಗಿದೆ.

1) ಭಕ್ತಪ್ರತ್ಯಾಖ್ಯಾಯನ- ಸಲ್ಲೇಖನ ಆಚರಿಸುವ ವ್ಯಕ್ತಿ ಏಕಾಂತದಲ್ಲಿ ಹುಲ್ಲುಕಡ್ಡಿಯಿಂದ ಮಾಡಿದ ಹಾಸಿಗೆ ಮೇಲೆ ಚಲಿಸದೆ ಸಾಯುವವರೆಗೆ ಆಹಾರ ನೀರು ತ್ಯಜಿಸಿ ಮಲಗುವುದು..

2) ಇಂಗಿತ ಮರಣ- ಖಾಲಿ ನೆಲದ ಮೇಲೆ ಮಲಗ್ತಾನೆ. ಕುಳಿತುಕೊಳ್ಳಲು, ನಿಲ್ಲಲು, ನಡೆಯಲು ಅವಕಾಶವಿದೆ. ಆದ್ರೆ ಆಹಾರ ತ್ಯಜಿಸಿರ್ತಾನೆ

.

3)ಪಾದಪೋಪಗನ - ಈ ವಿಧಾನದಲ್ಲಿ ವ್ಯಕ್ತಿ ಆಹಾರ ನೀರು ತ್ಯಜಿಸಿ ಮರಣದವರೆಗೆ ವೃಕ್ಷದ ಹಾಗೆ ಅಚಲವಾಗಿ ನಿಂತಿರುತ್ತಾನೆ

ಸಮಾಧಿ ಹೊಂದಿದವರಿಗಾಗಿ ನಿಷಿಧಿ

ಸಲ್ಲೇಖನ ಪಾಲಿಸಿ ಸಮಾಧಿ ಹೊಂದಿದವರ ಕುರಿತು ಅನೇಕ ಶಾಸನಗಳು ಬೆಳಕು ಚೆಲ್ಲುತ್ತವೆ. ಕರ್ನಾಟಕದಲ್ಲಿ ಸಲ್ಲೇಖನ ಆಚರಿಸಿ ಸಮಾಧಿ ಹೊಂದಿದವರ ನೆನಪಿಗಾಗಿ ನಿಷಿಧಿಗಳನ್ನು ಕೆತ್ತಲಾಗಿದೆ. 6ರಿಂದ 19ನೇ ಶತಮಾನದವರೆಗೆ 93 ನಿಷಿಧಿಗಳು ಶ್ರವಣಬೆಳಗೊಳದಲ್ಲಿ ಕಾಣಸಿಗುತ್ತವೆ.

ಶ್ರವಣಬೆಳಗೊಳದಲ್ಲಿ 7ನೇ ಶತಮಾನದಲ್ಲಿ ಸಲ್ಲೇಖನದಿಂದ ಸಮಾಧಿಯಾದ ವಿನಯದೇವಸೇನರ ಕುರಿತ ಶಾಸನವಿದೆ. ಕ್ರಿ ಶ. 869ರಲ್ಲಿ ಸಲ್ಲೇಖನ ಕೈಗೊಂಡು ಸಮಾಧಿ ಮರಣ ಹೊಂದಿದ ಗಂಗ ವಂಶದ ರಾಜ ನೀತಿಮಾರ್ಗನ ಕುರಿತ ಉಲ್ಲೇಖ ದೊಡ್ಡಹುಲಿ ನಿಷಧಿ ಶಾಸನದಲ್ಲಿದೆ. ಶಿಲಪ್ಪಡಿತರಂ ಶಾಸನದಲ್ಲಿ ಕೌಂದಿ ಅಡಿಗಲ್ ಎಂಬ ಜೈನ ಸನ್ಯಾಸಿನಿ ಸಲ್ಲೇಖನ ಸ್ವೀಕರಿಸಿ ಸಮಾಧಿ ಮರಣ ಹೊಂದಿದ್ದನ್ನು ಇಳಂಗೋ ಅಡಿಗಲ್ ಬರೆದಿದ್ದಾನೆ.

ಶ್ರವಣಬೆಳಗೊಳದಲ್ಲಿ ಗಂಗರಾಜ ಮಾರಸಿಂಹನ ನೆನಪಾಗಿ ಕೂಗೆ ಬ್ರಹ್ಮದೇವ ಸ್ಥಂಭದಲ್ಲಿ ನಿಷಿಧಿಯನ್ನು ಕೆತ್ತಲಾಗಿದೆ. ಕ್ರಿಶ. 982ರಲ್ಲಿ ರಾಷ್ಟ್ರಕೂಟ ರಾಜ 3ನೇ ಕೃಷ್ಣನ ಮೊಮ್ಮಗ ಇಂದ್ರರಾಜ ಸಲ್ಲೇಖನ ಸ್ವೀಕರಿಸಿ ಸಮಾಧಿ ಮರಣ ಹೊಂದಿದ ನೆನಪಿಗಾಗಿ ಗಂಧವರ್ಣ ಬಸದಿಯ ಮುಂಭಾಗದಲ್ಲಿ ಶಾಸನ ಕೆತ್ತಲಾಗಿದೆ.

1900- 1992 ವರೆಗೆ 37 ಜೈನ ಧರ್ಮೀಯರು ಸಲ್ಲೇಖನ ಸ್ವೀಕರಿಸಿ ಸಮಾಧಿ ಮರಣ ಹೊಂದಿದವರ ಅಂಕಿಅಂಶಗಳು ಜೈನ ಸಾಹಿತ್ಯಗಳಲ್ಲಿ ವರದಿಯಾಗಿದೆ. 1993ರಲ್ಲಿ 260 ಹಾಗೂ 2003ರಲ್ಲಿ 90 ಸಮಾಧಿ ಮರಣ ಹೊಂದಿದವರ ಕುರಿತು ವರದಿಯಾಗಿದೆ. ಅಹಮ್ಮದಾಬಾದ್ ನ ಎಲ್ ಡಿ ಇಂಡಾಲಜಿಯ ಸಂಸ್ಥೆಯ ನಿರ್ದೇಶಕ ಜಿತೇಂದ್ರ ಷಾ ಹೇಳುವಂತೆ ಪ್ರತಿವರ್ಷ ಸರಿಸುಮಾರು 240 ಜನ ಸಮಾಧಿ ಮರಣ ಹೊಂದುತ್ತಾರೆ. ಆದ್ರೆ ಅವು ಎಲ್ಲಿಯೂ ದಾಖಲಾಗಲ್ಲ.

ಈ ಹಿಂದೆಯೂ ಸಲ್ಲೇಖನವನ್ನು ಆತ್ಮಹತ್ಯೆಗೆ ಹೋಲಿಕೆ ಮಾಡಲಾಗ್ತಿತ್ತು. ಈ ಕುರಿತಾಗಿ ಸಲ್ಲೇಖನ ಆಚರಣೆ ಆತ್ಮಹತ್ಯೆ ಎಂದು ತಮಿಳು ಬೌದ್ಧ ಗ್ರಂಥ ಕುಂಡಲಕೇಶಿಯಲ್ಲಿ ಉಲ್ಲೇಖವಾಗಿದೆ. ಆದ್ರೆ ತಮಿಳಿನ ಜೈನ ಸಾಹಿತ್ಯ ನೀಲಕೇಶಿಯಲ್ಲಿ ಸಲ್ಲೇಖನ ಆತ್ಮಹತ್ಯೆ ಅಲ್ಲ, ಅದು ಜೈನ ಧರ್ಮರ ಸ್ವಇಚ್ಛಾ ಸಮಾಧಿ ಮರಣ ಎಂದು ವಿವರಣೆ ನಿಡಲಾಗಿದೆ.

ಸಲ್ಲೇಖನದ ಕುರಿತಾಗಿ ನ್ಯಾಯಾಲಯದಲ್ಲಿ ವಾದ ವಿವಾದಗಳು ನಡೆದೇ ಇದೆ. ಏನೇ ಆದ್ರೂ ಈ ಸಲ್ಲೇಖನದ ಬಗ್ಗೆ ಸಂಪೂರ್ಣ ಇತಿಹಾಸ, ತಿಳಿವಳಿಕೆ ಇಲ್ಲದೆ ಜೈನರ ಧಾರ್ಮಿಕ ಅರ್ಥಪೂರ್ಣ ಆಚರಣೆಗೆ, ಯಾರದೇ ಒತ್ತಡವಿಲ್ಲದ ಇಚ್ಛಾಮರಣದ ನಿಷೇಧಕ್ಕೆ ಕಾನೂನಿನ ಮುಖಾಂತರ ಒತ್ತಡ ತರಲಾಗ್ತಿದೆ. ಸಲ್ಲೇಖನದ ಬಗ್ಗೆ ತಿಳಿಯದವರಲ್ಲಿ ಇದೊಂದು ಆತ್ಮಹತ್ಯೆ ಎಂಬ ಅರಿವು ಇದೆ. ಆದ್ರೆ ಸಲ್ಲೇಖನದ ನಿಜವಾದ ಅರ್ಥ, ಉದ್ದೇಶ ತಿಳಿಸುವ ಪ್ರಯತ್ನ ಇಲ್ಲಿವರೆಗೂ ನಡೆದೇ ಇಲ್ಲ.

English summary
Sallekhana, also known as Samlehna, Santhara, Samadhi-marana or Sanyasana-marana; is a supplementary vow to the ethical code of conduct of Jainism. It is the religious practice of voluntarily fasting to death by gradually reducing the intake of food and liquids.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X