ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡಿಯ ಗಂಟೆ ಸದ್ದು, ಅಮ್ಮನ ರಂಗೋಲಿ ನೆನಪು ತರುವ ಬೆಂಗಳೂರಿನ ಆ ದಿನಗಳು...

|
Google Oneindia Kannada News

ಬೆಂಗಳೂರು ಬದಲಾಗಿದೆ. ಇಲ್ಲಿನ ಬದುಕು, ಸ್ನೇಹ, ನೆರೆಹೊರೆ ಎಲ್ಲವೂ ಮಗ್ಗುಲು ಬದಲಿಸಿದೆ. ನಾವು ಚಿಕ್ಕವರಿದ್ದಾಗ ಹೀಗಿರಲಿಲ್ಲ ಬಿಡ್ರೀ..ಎಂಬುದು ಖಂಡಿತಾ ಕ್ಲೀಷೆಯ ಮಾತಾಗಿ ಉಳಿದಿಲ್ಲ. ರಸ್ತೆಯ ಎರಡು ಬದಿಗಳಲ್ಲಿ ಸಾಲುಗಟ್ಟಿದ್ದ ಮರಗಳಷ್ಟೇ ಕಣ್ಮರೆ ಆಗಿರುವುದಲ್ಲ. ಮಮತೆ, ಮಮಕಾರಗಳೂ ವಿಳಾಸ ಕಳೆದುಕೊಂಡಿವೆ.

ಇಂಥ ಬೆಂಗಳೂರಿನಲ್ಲಿ ಆ ದಿನಗಳನ್ನು ಮತ್ತೆ ನೆನಪಿಸುವ ಪ್ರಯತ್ನ ಮಾಡಿದ್ದಾರೆ ಲಾಸ್ ಏಂಜಲೀಸ್ ನ ಫೋಟೋ ಗ್ರಾಫರ್ ಅರ್ಜುನ್ ಕಾಮತ್. ಅವರ ಮಾತುಗಳನ್ನು ಕೇಳಿದರೆ, ಈ ಆಸಾಮಿ ಯಾವ ತಲೆಮಾರಿನವರು ಅಂತ ಅನ್ನಿಸಬಹುದು. ಅದರೆ ಅವೆಲ್ಲವೂ ಅಕ್ಷರಶಃ ಸತ್ಯ.[ನಮ್ಮ ಬೆಂಗಳೂರು ಪೆನ್ಷನರ್ಸ್ ಪ್ಯಾರಡೈಸ್]

ನನಗೆ ಚಿಕ್ಕ ವಯಸ್ಸಿನಲ್ಲಿ ಯಾವುದೇ ಪಾರ್ಟಿಗೆ ಹೋಗಿ ಗೊತ್ತೇ ಇಲ್ಲ. ನನ್ನ ಮನೆಯ ಅಕ್ಕಪಕ್ಕದವರು, ಅಲ್ಲಿನ ಸಣ್ಣ-ಸಣ್ಣ ಸಂಗತಿಗಳು ಎಷ್ಟು ಖುಷಿ ಕೊಡ್ತಿದ್ದವು ಗೊತ್ತಾ? ಮನೆ ಮುಂದಿನ ರಂಗೋಲಿ, ನಾನು ಶಾಲೆಗಾಗಿ ಆಟೋದಲ್ಲಿ ಹೋಗುವಾಗ ವಯಸ್ಸಾದ ಅಜ್ಜ-ಅಜ್ಜಿ ಬೈ ಬೈ ಹೇಳುತ್ತಿದ್ದದ್ದು ನೆನಪಿನ ಚಿತ್ರಗಳಿಗೆ ಚಿನ್ನದ ಫ್ರೇಂನಂತೆ ಎಂದಿದ್ದಾರೆ.

ಅ ನೆನಪಿನಲ್ಲಿ ಅಥವಾ ಅಂಥದ್ದೇ ನೆನಪಿಗಾಗಿ 'ನಮ್ ಊರು ಬೆಂಗಳೂರು: ನೆನಪಿನ ದಾರಿಯಲ್ಲೊಂದು ನಡಿಗೆ' ಎಂಬ ಫೋಟೋ ಸರಣಿ ಮಾಡಿದ್ದಾರೆ ಅರ್ಜುನ್ ಕಾಮತ್. ಇದಕ್ಕೆ ರೂಪದರ್ಶಿ ಆಗಿರುವವರು ಅರ್ಚನಾ ಅಖಿಲ್ ಕುಮಾರ್.[ಕ್ರಿಕೆಟ್, ಸಿನಿಮಾ, ನಾಟಕ ಲಾಸ್ಟ್ ಸ್ಟಾಪ್ ಮಲ್ಲೇಶ್ವರ]

ಚಾಮರಾಜಪೇಟೆ, ನಾರಾಯಣ ಪಿಳ್ಳೈ ಬಡಾವಣೆ, ಕಮರ್ಷಿಯಲ್ ಸ್ಟ್ರೀಟ್ ಮತ್ತಿತರ ಕಡೆ ಕ್ಯಾಮೆರಾ ಕಣ್ಣಿನಲ್ಲಿ ಅವರು ಸೆರೆ ಹಿಡಿದಿರುವ ಚಿತ್ರಗಳು ವಾಹ್, ಒಂದಕ್ಕಿಂತ ಒಂದು ಚಂದ ಚಂದ.(ಫೋಟೋಗ್ರಾಫರ್ ಅರ್ಜುನ್ ಅವರ ಅನುಮತಿ ಪಡೆದು, ಇಲ್ಲಿ ಫೋಟೋಗಳನ್ನು ಬಳಸಲಾಗಿದೆ)

ತಲೆ ಬಾಚಿ, ಪೌಡರ್ ಹಾಕಿ

ತಲೆ ಬಾಚಿ, ಪೌಡರ್ ಹಾಕಿ

ಶಾಲೆಗೆ ಹೊರಡಬೇಕಾದ ಮೊಮ್ಮಗನ ತಲೆ ಬಾಚುತ್ತಿರುವ ಅಜ್ಜ, ಅದಾಗಲೇ ಸಿದ್ಧವಾಗಿರುವ ದೊಡ್ಡ ಹುಡುಗನಿಗೆ ಮಿರಿಮಿರಿ ಮಿಂಚುತ್ತಿರುವ ಶೂ ಲೇಸ್ ಕಟ್ಟುವ ಉಮ್ಮೇದಿ

ಉಭಯ ಕುಶಲೋಪರಿ

ಉಭಯ ಕುಶಲೋಪರಿ

ರಸ್ತೆ ಬದಿಯಲ್ಲಿ ಹೂವು ಮಾರುತ್ತಿದ್ದವರಿಗೆ ಮನೆ ವಾರ್ತೆಯೂ ಗೊತ್ತು. ದಿನ ದೇವರ ಪಾಲಿಗೆ ಹೂವು ಒದಗಿಸುವ ಹೆಂಗಸಿಗೆ ಹುಡುಗಿ ಎಷ್ಟು ಬೆಳೆದಿದ್ದಾಳೆ ಎಂಬ ಅಚ್ಚರಿ. ಅಕ್ಕ ನೀವಂತೂ ಹಾಗೇ ಇದೀರಿ ಎನ್ನುತ್ತಿರಬಹುದೇ ಹುಡುಗಿ.

ಘಲಘಲ ಹೆಜ್ಜೆ

ಘಲಘಲ ಹೆಜ್ಜೆ

ಜವಾಬ್ದಾರಿ ಎಂಬುದೇ ತಿಳಿಯದ ವಯಸ್ಸಿನಲ್ಲಿ ಪುಟ್ಟಿಗೆ ಜಡೆ ಹಾಕುತ್ತಿರುವ ದೊಡ್ಡ ಪುಟ್ಟಿ. ಮನೆಯೊಳಗೆ ಹೋಗಿ ಕೊಬ್ಬರಿ ಎಣ್ಣೆ, ಟೇಪು ತರ್ತೀನಿ ಎಂದು ಹೊರಟಂತಿರುವ ಮತ್ತೊಬ್ಬ ಹುಡುಗಿ ಕಾಡುವ ನೆನಪುಗಳು ಕೈ ಹಿಡಿದು ಜಗ್ಗಿದಾಗ..

ಏನ್ ಸಮಾಚಾರ?

ಏನ್ ಸಮಾಚಾರ?

ದಿನವಿಡೀ ನಡೆದ ಸಮಾಚಾರ ಏನು ಎಂದು ಕುತೂಹಲದಲ್ಲಿ ಮನೆಯ ಎದುರಿನ ಜಗುಲಿಯ ಮೇಲೆ ದಿನಪತ್ರಿಕೆಯ ಓದಿನಲ್ಲಿ ಮುಳುಗಿ ಹೋಗಿರುವವರ ಮುಂದೆ ಖಾಲಿ ರಸ್ತೆ, ಬೆನ್ನಿಗೆ ಮುಚ್ಚಿರುವ ಬಾಗಿಲು.

ನಂದೇ ದೃಷ್ಟಿ ಆಗುತ್ತೇನೋ?

ನಂದೇ ದೃಷ್ಟಿ ಆಗುತ್ತೇನೋ?

ಸಣ್ಣ ವಯಸ್ಸಿನಲ್ಲಿ ನೋಡಿದ್ದ ನೆನಪಿರುವ ಅಜ್ಜಿಗೆ ಬೆಳೆದ ಹುಡುಗಿಯು ಅಚ್ಚರಿ-ಖುಷಿ ಒಟ್ಟೊಟ್ಟಿಗೆ ತಂದಿದ್ದಾಳೆ. ಎಷ್ಟ್ ಚೆಂದ ಕಾಣ್ತೀಯೇ ಎಂದು ಕೆನ್ನೆ ಸವರಿ, ಅಂತಃಕರಣ ತೋರುತ್ತಿರುವ ಹಿರಿಯ ಜೀವದ ಸನ್ನಿಧಾನದಲ್ಲಿ.

ಅಮ್ಮನ ನೆನಪು

ಅಮ್ಮನ ನೆನಪು

ಬಾಲ್ಯದಲ್ಲಿ ಅಮ್ಮನಿಗೇ ಅಂಟಿಕೊಂಡಿರುತ್ತಿದ್ದಾಗ ರಂಗೋಲಿ ಹೇಗಿರಬೇಕು ಎಂದು ಹೇಳಿಕೊಡುತ್ತಿದ್ದಳು. ಹುಡುಗ ಆದರೇನು, ಹುಡುಗಿ ಆದರೇನು ಅಮ್ಮ ರಂಗೋಲಿ ಹಾಕುವಾಗ ಎದುರಿಗೆ ಕೂತು ಕಲಿಯಬೇಕು ಅಂತ ಯಾರಿಗೆ ಅನಿಸಲ್ಲ?

ರಸ್ತೆ ತುಂಬ ಮುಖ ಪರಿಚಯ

ರಸ್ತೆ ತುಂಬ ಮುಖ ಪರಿಚಯ

ಶಾಲೆಗೆ ಹೋಗುವಾಗ, ಸಂಗೀತ ಕಲಿಯುವಾಗ, ಗಣೇಶ ಕೂರಿಸಿದ ಮನೆಗಳಿಗೆ ಹೋಗುವಾಗ, ಅಂಗಡಿ-ದೇವಸ್ಥಾನ ಹೀಗೆ ಈ ರಸ್ತೆ ಎಲ್ಲೆಲ್ಲಿ ತಲುಪಿಸಿದೆ. ಈಗ ಮತ್ತೆ ವಾಪಸ್ ಬಂದಾಗ ಎಲ್ಲವೂ ನೆನಪಾಗುತ್ತದೆ. ಕಾಲುಗಳು ತಮ್ಮಷ್ಟಕ್ಕೆ ಸಾಗುತ್ತಿವೆ.

ಮದುವೆ ಯಾವಾಗ್ಲೇ ನಿಂದು?

ಮದುವೆ ಯಾವಾಗ್ಲೇ ನಿಂದು?

ಅಜ್ಜಿ ಅಂದರೆ ಅದು ಎದುರು ಮನೆಯಲ್ಲಿರುವ ಅಜ್ಜಿ. ಶಾಲೆಗೆ ಹೋಗುವಾಗ, ಕಾಲೇಜು ದಿನಗಳಲ್ಲಿ ಹತ್ತಿರ ಕರೆದು ಮಾತನಾಡಿಸಿ, ಸಿಹಿ ತಿಂಡಿ, ಚಕ್ಕುಲಿ-ಕೋಡುಬಳೆ ಕೊಟ್ಟು ಕಳುಹಿಸುತ್ತಿದ್ದರು. ಈಗ ಕೇಳುತ್ತಿದ್ದಾರೆ: ಹುಡುಗಿ ಯಾವಾಗ್ಲೇ ನಿನ್ ಮದುವೆ, ನನ್ನ ಕರೀತಿಯಾ ಅಲ್ವಾ?

ಕಾದಿರುವುದು ಎಷ್ಟೋ ಜೀವಗಳಿಗೆ

ಕಾದಿರುವುದು ಎಷ್ಟೋ ಜೀವಗಳಿಗೆ

ರಾತ್ರಿ ಅಪ್ಪ ಬರುವುದು ತಡವಾದರೆ ಅಮ್ಮ ಕಾಯುತ್ತಾ ನಿಲ್ಲುತ್ತಿದ್ದಳು. ಚಿಕ್ಕಮ್ಮ, ದೊಡ್ಡಮ್ಮ ಎಲ್ಲರೂ ಹೀಗೆ ಬಾಗಿಲ ಬಳಿ ನಿಲ್ಲುತ್ತಿದ್ದವರೇ. ಕಾಯುವ ನಿರೀಕ್ಷೆ, ಬಂದ ನಂತರ ಖುಷಿ, ತಡವಾಯಿತು ಎಂಬ ಹುಸಿ ಮುನಿಸು ಎಲ್ಲ ಭಾವವೂ ಬಾಗಿಲಿಗೆ ಅಂಟಿಕೊಂಡಂತಿದೆ. ದಿನ ಬೆಳಗ್ಗೆ ಮಾಡುತ್ತಿದ್ದ ಗುಡಿಯ ಗಂಟೆ ಸದ್ದು ಮತ್ತೆ ಮೊಳಗುತ್ತಿದೆ.

English summary
Arjun Kamath, Los Angeles based photographer, remembering old days of Bangalore. He shot photo series called 'Nam Ooru Bengaluru: A walk down memory lane'. The photographs feature Bengalurean model Archana Akil Kumar, and were shot at Chamrajpet, and on Narayana Pillai Street.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X