ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ

By ಗಗನ್ ಪ್ರೀತ್
|
Google Oneindia Kannada News

ಬಂಡೀಪುರ ಎಂಬ ಹೆಸರಿಗೆ ಖ್ಯಾತಿ ಇದೆ. ಇಲ್ಲಿನ ರಾಷ್ಟ್ರೀಯ ಉದ್ಯಾನಕ್ಕೆ ವಿಶ್ವವಿಖ್ಯಾತಿ ಇದೆ. ಈ ಜಾಗಕ್ಕೆ ಬಂಡೀಪುರ ಎಂಬ ಹೆಸರು ಬಂದದ್ದು ಹೇಗೆ ಗೊತ್ತಾ? ಬಹಳ ಹಿಂದೆ ಕಾಡಿನಿಂದ ಮರಗಳನ್ನು ಕಡಿದು, ಎತ್ತಿನ ಬಂಡಿಯಲ್ಲಿ ಸಾಗಿಸುತ್ತಿದ್ದರು. ಆಗ ಈ ಜಾಗವನ್ನು ಚೆಕ್ ಪೋಸ್ಟ್ ಥರ ಬಳಸುತ್ತಿದ್ದರು. ಆ ಕಾರಣದಿಂದಲೇ ಇದಕ್ಕೆ 'ಬಂಡೀಪುರ' ಎಂದು ಹೆಸರಾಯಿತು.

ಇನ್ನು ಮೈಸೂರು ರಾಜರಿಗೆ ಬಂಡೀಪುರ ಅಂದರೆ ಬೇಟೆಯ ಜಾಗದಂತೆ. ಆಗೆಲ್ಲ ಬೇಟೆ ಆಡೋದು ಅಂದರೆ ಒಂದು ಕ್ರೀಡೆ. ಮೈಸೂರಿನಿಂದ ಬರುತ್ತಿದ್ದ ರಾಜರು, ಅಲ್ಲಿ ನಿರ್ಮಿಸಿದ್ದ ವಸತಿಗೃಹದಲ್ಲೇ ತಂಗುತ್ತಿದ್ದರು. ಇವೆಲ್ಲ ಇತಿಹಾಸಕ್ಕೆ ಸಂಬಂಧಿಸಿದ ವಿಚಾರವಾಯಿತು. ಈಗ ಅಲ್ಲಿನ ಮುಖ್ಯ ಆಕರ್ಷಣೆ ಹುಲಿಗಳ ಬಗ್ಗೆ ತಿಳಿಯೋಣ.['ಜಂಗಲ್ ಡೈರಿ'-ಇದು ಗಗನ್ ನ ಕನಸಿಗೆ ದಾರಿ]

ಹುಲಿಗಳು ತುಂಬ ಸಂಕೋಚದ ಪ್ರಾಣಿಗಳು. ಸಾಧ್ಯವಾದಷ್ಟು ಮನುಷ್ಯರ ಸಂಪರ್ಕದಿಂದ ದೂರವಿರಲು ಬಯಸುತ್ತವೆ. ತಮ್ಮ ಜೀವಕ್ಕೆ ಅಥವಾ ಮರಿಗಳ ಜೀವಕ್ಕೆ ಅಪಾಯ ಎನ್ನಿಸಿದಾಗ ಮಾತ್ರವೇ ಅವುಗಳು ದಾಳಿ ಮಾಡುತ್ತವೆ. ಹಾಗಾದರೆ ಸಫಾರಿಗೆ ಹೋಗುವುದು ಅಪಾಯಕಾರಿಯಲ್ಲವೇ? ಆ ಹುಲಿಗಳು ದಾಳಿ ಮಾಡುವುದಿಲ್ಲವೇ ಎಂಬ ಪ್ರಶ್ನೆಗಳು ಮೂಡುತ್ತವೆ. ಖಂಡಿತ ಅಪಾಯ ಇಲ್ಲ.

ಮನುಷ್ಯರು ಆಹಾರವಲ್ಲ

ಮನುಷ್ಯರು ಆಹಾರವಲ್ಲ

ವಾಹನಗಳಲ್ಲಿ ಸಫಾರಿ ಮಾಡುವುದರಿಂದ ಸುರಕ್ಷಿತವಾಗಿರುತ್ತೇವೆ. ಇನ್ನು ಹುಲಿಗಳು ಮನುಷ್ಯರನ್ನು ಆಹಾರದ ರೀತಿ ನೋಡುವುದೇ ಇಲ್ಲ. ಹೇಗೆ ಹುಲಿಯನ್ನು ಕಂಡಾಗ ನಮಗೊಂದು ಭಯವಿರುತ್ತದಲ್ಲಾ, ಅದೇ ರೀತಿ ಅವುಗಳಿಗೂ ಭಯವಿರುತ್ತದೆ. ನಾವು ಕಾಡು ಬಿಟ್ಟು ನಾಡು ಸೇರಿಕೊಂಡಿದ್ದೇವೆ. ಹಾಗಾಗಿ ಅವುಗಳ ಕಣ್ಣಿಗೆ ನಾವು ಅನ್ಯಗ್ರಹ ಜೀವಿಗಳಂತೆ ಕಾಣಿಸುತ್ತೇವೆ.

ಗಂಡುಹುಲಿ ವ್ಯಾಪ್ತಿ 75 ಕಿ.ಮೀ

ಗಂಡುಹುಲಿ ವ್ಯಾಪ್ತಿ 75 ಕಿ.ಮೀ

ಸಫಾರಿ ವೇಳೆಯಲ್ಲಿ ಅವುಗಳಿಗೆ ತೊಂದರೆಯಾಗದ ರೀತಿಯಲ್ಲಿ ಹುಲಿಗಳು ಚಟುವಟಿಕೆಯಲ್ಲಿ ತೊಡಗಿಕೊಂಡು ನಿರಾಳವಾಗಿರುತ್ತವೆ. ಹೀಗಿದ್ದಲ್ಲಿ ನಮಗೆ ಒಳ್ಳೆಯ ಫೋಟೋಗಳನ್ನು ತೆಗೆಯುವ ಅವಕಾಶವೂ ಇರುತ್ತದೆ. ಒಂದು ಗಂಡು ಹುಲಿಯ ವ್ಯಾಪ್ತಿ 75 ಚದರ ಕಿ.ಮೀ. ಇರುತ್ತದೆ ಗೊತ್ತಾ?

11 ವರ್ಷದ ಹುಲಿಗೆ ಮೈ ತುಂಬ ಗಾಯ

11 ವರ್ಷದ ಹುಲಿಗೆ ಮೈ ತುಂಬ ಗಾಯ

ಇನ್ನು ಬಂಡೀಪುರದ ಗಂಡು ಹುಲಿ ಪ್ರಿನ್ಸ್ ಬಗ್ಗೆ ಹೇಳುವುದಾದರೆ ಇದು ವಾಹನಗಳ ಓಡಾಟಕ್ಕೆ ರೂಢಿಯಾಗಿದೆ. ತನ್ನಷ್ಟಕ್ಕೆ ಚಟುವಟಿಕೆಯಲ್ಲಿ ತೊಡಗಿರುತ್ತದೆ. ಅಕಸ್ಮಾತ್ ಈ ಹುಲಿಯು ವಾಹನಕ್ಕೆ ಎದುರಾದಲ್ಲಿ ಅದಕ್ಕೆ ದಾರಿ ಮಾಡಿಕೊಡಬೇಕು. ಅಂತಹ ಗಾಂಭೀರ್ಯ ಇದರದು. ಪ್ರಿನ್ಸ್ ನ ವಯಸ್ಸು ಸುಮಾರು 11 ವರ್ಷ ಇರಬಹುದು. ದೇಹದ ತುಂಬಾ ಗಾಯದ ಗುರುತುಗಳಿವೆ. ಏಕೆಂದರೆ, ಈವರೆಗೆ ಸುಮಾರು ನಾಲ್ಕು ಹುಲಿಗಳನ್ನು ಹೊಡೆದಾಟದಲ್ಲಿ ಕೊಂದಿದೆ ಈ ಪ್ರಿನ್ಸ್.

ಪ್ರಿನ್ಸ್ ಕಣ್ಮರೆ

ಪ್ರಿನ್ಸ್ ಕಣ್ಮರೆ

ಬಂಡೀಪುರದಲ್ಲಿ ಸುಮಾರು ದಿನ ಪ್ರಿನ್ಸ್ ಕಣ್ಮರೆಯಾಗಿತ್ತು. ಎಲ್ಲರ ಮನಸ್ಸಿನಲ್ಲೂ ಈ ಬಗ್ಗೆಯೇ ಆತಂಕ ಕಾಡುತ್ತಿತ್ತು. ಇದರ ಹುಡುಕಾಟದಲ್ಲಿ ಸಫಾರಿ ವಾಹನಗಳ ಚಾಲಕರು ತೊಡಗಿದ್ದರು. ಬೆಳಗ್ಗೆ ಸಫಾರಿಗೆ ತೆರಳಿದ್ದ ನನ್ನ ಕಣ್ಣುಗಳು ಸಹ ಅದೇ ಹುಡುಕಾಟದಲ್ಲಿತ್ತು. ಸಫಾರಿಯ ದಾರಿಯಲ್ಲಿ ನಮಗೆ ಚಿರತೆ ಹೆಜ್ಜೆ ಗುರುತುಗಳು ಕಂಡವು.

ಹುಲಿ ಬಂತು ಹುಲಿ

ಹುಲಿ ಬಂತು ಹುಲಿ

ಉತ್ಸಾಹಗೊಂಡ ನಾನು ಆ ಚಿರತೆ ಗುರುತನ್ನು ಹಿಂಬಾಲಿಸುತ್ತಾ ಹೊರಟೆ. ಇದ್ದಕ್ಕಿದ್ದಂತೆ ನನ್ನೊಡನೆ ಸಫಾರಿಗೆಂದು ಬೆಂಗಳೂರಿನಿಂದ ಬಂದಿದ್ದ ಛಾಯಾಗ್ರಾಹಕರು 'ಹುಲಿ ಹುಲಿ' ಎಂದರು. ಎಲ್ಲಿರಬಹುದು ಅಂತ ನೋಡಿದರೆ ನಮ್ಮ ಪಕ್ಕದಲ್ಲೆ ಇದ್ದ ಚಿಕ್ಕದೊಂದು ಕೊಳದಲ್ಲಿ ಪ್ರಿನ್ಸ್ ಆರಾಮವಾಗಿ ಕೂತಿದೆ.

ಆಶ್ಚರ್ಯ, ಸಂತೋಷ ಜೊತೆಜೊತೆಗೆ

ಆಶ್ಚರ್ಯ, ಸಂತೋಷ ಜೊತೆಜೊತೆಗೆ

ಒಂದು ಕಡೆ ಆಶ್ಚರ್ಯ, ಮತ್ತೊಂದು ಕಡೆ ಸಂತೋಷ. ಎದುರಿಗಿರುವುದು ಪ್ರಿನ್ಸ್. ಆ ಕೊಳದಲ್ಲಿ ಕೆಲ ಹೊತ್ತು ವಿಶ್ರಮಿಸಿದ್ದ ಹುಲಿ, ನಿಧಾನವಾಗಿ ಎದ್ದು, ಮೈ ಮುರಿದು ನಮ್ಮ ವಾಹನದ ಹಿಂದೆ ಹೊರಟಿತು. ವಾಹನದ ಹಿಂದಿದ್ದ ಒಂದು ಮರದ ಬಳಿ ಹೋಗಿ ಅದನ್ನು ಮೂಸಿ ಮುಖವನ್ನು ಉಜ್ಜಿ, ಮೂತ್ರವನ್ನು ಮಾಡುತ್ತಾ ತನ್ನ ಗುರುತು ಹಾಕಿತು. ನಂತರ ಹಾಗೇ ಮುಂದಕ್ಕೆ ಹೊರಟಿತು.

10 ಅಡಿ ದೂರದಲ್ಲಿ ವ್ಯಾಘ್ರ

10 ಅಡಿ ದೂರದಲ್ಲಿ ವ್ಯಾಘ್ರ

ಹತ್ತಿರದಲ್ಲಿದ್ದ ದಯ್ಯದಕಟ್ಟೆಯ ನೀರಿನ ಕೊಳಕ್ಕೆ ಪ್ರಿನ್ಸ್ ಬರಬಹುದು ಎಂದು ಊಹಿಸಿ, ನಾವು ಆ ಕಟ್ಟೆಯ ಬಳಿ ನಿಂತೆವು. ನಿರೀಕ್ಷೆ ಹುಸಿಯಾಗಲಿಲ್ಲ. ನಮಗೆ ಎದುರಾಗಿ ಹತ್ತಿರ ಬರುತ್ತಿದ್ದ ಹಾಗೇ ನಿಂತು ಒಮ್ಮೆ ದಿಟ್ಟಿಸಿ ನೋಡಿತು ಪ್ರಿನ್ಸ್, ಎದೆ ಝಲ್ ಎಂದಿತು. ಅಂಥ ವ್ಯಾಘ್ರವೊಂದು ಸುಮಾರು 10 ಅಡಿ ಹತ್ತಿರದಲ್ಲಿ ನಿಂತಿತ್ತು.

ಮೋಹಕ ರೂಪಕ್ಕೆ ಸೋತ ಮನ

ಮೋಹಕ ರೂಪಕ್ಕೆ ಸೋತ ಮನ

ಪ್ರಿನ್ಸ್ ನ ಬಣ್ಣ, ಆಕಾರಕ್ಕೆ ನಮ್ಮ ಮನಸು ಶರಣಾದವು. ಹಾಗೇ ಎದುರು ಬರುತ್ತಾ ಮುಂದೆ ಹೋಗಿ ದಯ್ಯದಕಟ್ಟೆಯೊಳಗಿನ ನೀರಲ್ಲಿ ಕುಳಿತ ಪ್ರಿನ್ಸ್. ಕೆಲ ಹೊತ್ತು ಅಲ್ಲೇ ಇತ್ತು. ನಂತರ ಎದ್ದು ಅರಣ್ಯದ ಬೇಲಿಯೊಳಗೆ ಹೊರಟು ಹೋಯಿತು. ಈ ದೃಶ್ಯಗಳನ್ನು ಕಂಡ ನಮಗೆ ಸಿಕ್ಕ ಸಾರ್ಥಕ್ಯದ ಕ್ಷಣಗಳು ಫೋಟೋಗಳಾದವು. ಎಷ್ಟೋ ಹೊತ್ತು ಯಾರೂ ಮಾತೇ ಆಡಲಿಲ್ಲ.

ಲೇಖಕರ ಪರಿಚಯ

ಲೇಖಕರ ಪರಿಚಯ

ಬೆಂಗಳೂರಿನಲ್ಲಿರುವ ಗಗನ್ ಪ್ರೀತ್ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದು ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ. 'ಜಂಗಲ್ ಡೈರಿ' ಆತ ಮಾಡಿಕೊಂಡಿರುವ ಸಾಹಸದ ಹೆಸರು. ಆಸಕ್ತರಿಗಾಗಿ ಕಾಡಿನ ಪ್ರವಾಸ, ಫೋಟೋಗ್ರಫಿಯ ಅನುಭವ ಪಡೆಯುವುದಕ್ಕೆ ನೆರವು ಮಾಡುತ್ತಾರೆ. ಪ್ರಾಣಿಗಳ ಸ್ವಭಾವದ ಅಧ್ಯಯನ, ಫೋಟೋಗ್ರಫಿ..ಹೀಗೆ ಹಲವು ಹವ್ಯಾಸಗಳಿರುವ ಈತನಿಗೆ ವನ್ಯಜೀವಿಗಳ ಬಗ್ಗೆ ಎಲ್ಲೆಡೆ ಪ್ರೀತಿ ಪಸರಿಸುವ ಉದ್ಡೇಶ ಇದೆ. ಫೇಸ್ ಬುಕ್ ಪೇಜ್ https://www.facebook.com/gagan.preeth619?pnref=story.unseen-section ಮೊಬೈಲ್ ಫೋನ್ ನಂಬರ್ 9036862030.

English summary
Gagan preeth, a wildlife enthusiast and photographer from Bengaluru has shared his experience about wild life safari at Bandipur and Tiger Prince. Shared his photos which have taken in Bandipur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X