ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನ ಚೈತನ್ಯವೇ ಇಲ್ವಾ? ಹಾಗಾದ್ರೆ ಹೀಗೆ ಮಾಡಿ!

By ಮಾಧವ, ಮೈಸೂರು
|
Google Oneindia Kannada News

ನೀವು ಅನೇಕ ಜನರನ್ನು ನೋಡಿರಬಹುದು. ಜೀವ ಇರುತ್ತದೆ, ಆದರೆ ಜೀವನಚೈತನ್ಯ ಇರುವುದಿಲ್ಲ. ಯಾವುದೇ ಆಸೆ ಇರುವುದಿಲ್ಲ, ಆಸಕ್ತಿಯಂತೂ ಕೇಳುವುದೇ ಬೇಡ. ಇಂತಹ ಜನರು ಜೀವನ ಪರ್ಯಂತ ಬೇರೆ ಜನರ ಮಾತಿಗೆ ತಲೆ ದೂಗಿಸಿ, ದೂಗಿಸಿ, ಕೆಟ್ಟ ಪರಿಸ್ಥಿತಿಗಳಿಗೆ, ಜನರಿಗೆ ಹೊಂದಿಸಿಕೊಂಡು ಹೋಗಿ, ಹೋಗಿ, ಕೊನೆಗೆ ನಿರಾಸಕ್ತಿಯ ಪಾತಾಳ ಸೇರಿರುತ್ತಾರೆ. ಅವರು ಇರಲಿ, ನಿಮ್ಮ ಜೀವನ ಸಂದರ್ಭವೇ ಇಂತಹ ಒಂದು ದುಃಸ್ಥಿತಿಯನ್ನು ಪ್ರತಿಬಿಂಬಿಸಬಹುದು.

ನಿಮ್ಮ ಬದುಕಿಗೆ ಒಂದು ಚೈತನ್ಯಪೂರ್ವಕ ತಿರುವನ್ನು ನೀಡಲು ಈ ಕೆಳಗಿನ ತಂತ್ರಗಳು ಸಹಾಯ ಮಾಡುತ್ತವೆ.

* ಮೊದಲನೆಯದಾಗಿ, ತಂದೆ ತಾಯಿಯರ ಮಾತನ್ನು ನಾನು ಯಾವಾಗಲೂ ಕೇಳಬೇಕು, ಅವರಿಗೆ ಯಾವಾಗಲೂ ಸಂತೋಷವಾಗುವಂತೆ ನಡೆದುಕೊಳ್ಳಬೇಕು ಎಂಬ ನಿಮ್ಮ ಮಾನಸಿಕ ವಾಕ್ಯವನ್ನು ಪರಿಶೀಲಿಸಿ. ಪೋಷಕರ ಮಾತನ್ನು ಕೇಳುವುದು ಚಿಣ್ಣರಿಗೆ ಸೂಕ್ತ. ಬೆಳೆದು ನಿಂತ ನಿಮಗೆ ಅದು ಎಷ್ಟು ಸೂಕ್ತ? ನಿಮ್ಮ ತಂದೆ-ತಾಯಿಯರ ಮೇಲೆ ನಿಮಗೆ ಗೌರವ, ಪ್ರೀತಿ, ಆತ್ಮೀಯತೆ ಎಲ್ಲಾ ಇರಬಹುದು. ಆದರೆ, ಅವರ ಸ್ವರಗಳಿಗೆಲ್ಲಾ ಕುಣಿಯಲು ನೀವೇನು ಅವರ ಕೈಗೊಂಬೆಯ? ನೆನಪಿರಲಿ, ಅನ್ಯರ ಸಂತೋಷಕ್ಕೆ ನೀವು ಹೊಣೆಯಲ್ಲ. ಅವರವರನ್ನು ಅವರವರೇ ಸಂತೋಷಗೊಳಿಸಿಕೊಳ್ಳಬೇಕು.

Personality development : Tips to instil life in your lifestyle

* ಒಂದೇ ಒಂದು ಸಲ ವಿಶಾಲಾಕ್ಷಮ್ಮನವರ ಸೊಸೆಯ ನಾದಿನಿಯ ಮಗುವಿನ ನಾಮಕರಣಕ್ಕೆ ಹೋಗಬೇಡಿ. ಇಷ್ಟ ಇರಲಿ ಬಿಡಲಿ, ನಿಮ್ಮನ್ನು ಆಹ್ವಾನಿಸಿದ ಸಮಾರಂಭಗಳಿಗೆಲ್ಲಾ ನೀವು ಹೋಗುತ್ತಿದ್ದರೆ ನಿಮ್ಮ ಅಮೂಲ್ಯ ಸಮಯವನ್ನು, ಚೈತನ್ಯವನ್ನು ಕಳೆದುಕೊಳ್ಳುತ್ತೀರಿ.

* ಒಂದು ನೀರಸ ಸಂಗ್ರಹಣದ ಮಧ್ಯೆ ನೀವಿದ್ದರೆ, ನಿಮಗೆ 'ಮಾತಾಡಿಸಬೇಕು' ಎಂದು ಅನಿಸುವ ವ್ಯಕ್ತಿಯ ಬಳಿ ಹೋಗಿ ಮುಜುಗರವಿಲ್ಲದೆ ನಿಮ್ಮ ಪರಿಚಯ ಮಾಡಿಕೊಳ್ಳಿ. ಯಾಕೆ? ಯಾಕೆಂದರೆ ಒಬ್ಬ ಹೊಸ ವ್ಯಕ್ತಿಯನ್ನು ಭೇಟಿಯಾಗುತ್ತೀರಿ, ಹೊಸ ವಿಷಯಗಳು ತಿಳಿಯುತ್ತವೆ, ಸಮಯ ಕಳೆಯುತ್ತದೆ, ಇಷ್ಟಲ್ಲದೆ ಇದು ಒಂದು ಹೊಸ ಅನುಭವ! "ನಾನು ನನ್ನನ್ನು ಇನ್ನೆಂದೂ ಬೋರ್ ಮಾಡಿಕೊಳ್ಳಲು ಬಿಡುವುದಿಲ್ಲ", ಎಂದು ಇಂದೇ ಘೋಷಿಸಿ.

* ನೀವು ದೋಷರಹಿತ ಬಟ್ಟೆ ಅಥವಾ ಇನ್ನಿತರ ವಸ್ತುವನ್ನು ಖರೀದಿಸಿದ ಅಂಗಡಿಯಲ್ಲಿ "No Exchange Policy" ಇದ್ದರೂ ಕೂಡ, ಅದನ್ನು ವಾಪಸ್ಸು ಅಂಗಡಿಗೆ ತೆಗೆದುಕೊಂಡು ಹೋಗಿ, ಅಂಗಡಿಯ ಮಾಲೀಕನಿಗೆ ವಸ್ತುವಿನ ಸಮಸ್ಯೆಯನ್ನು ಹೇಳಿ, ನಿಮ್ಮ ಹಣವನ್ನು ವಾಪಸ್ಸು ಕೇಳಿ. ಇಂತಹ ಸಣ್ಣ ವಿಷಯದಲ್ಲೂ ನೀವು ಸ್ವಲ್ಪ ಧೈರ್ಯವನ್ನು ಹೊಂದಿಸಿಕೊಂಡರೆ, ಕಾಲಕ್ರಮೇಣ ನಿಮಗೆ ಒಂದು ಹೊಸ ವಿಶ್ವಾಸ ಮೂಡುತ್ತದೆ.

* ಒಂದೇ ಒಂದು ಸಲ ನಿಮ್ಮ ಜೀವನದ ಸರ್ವಾಧಿಕಾರಿಗೆ ಎದುರು ಮಾತಾಡಿ.

* ನಿಮಗೆ ಒಂದೇ ಊರಿನಲ್ಲಿ ಹಲವು ವರ್ಷ ನೆಲೆಸಿ ಬೇಜಾರಾಗಿದೆಯಾ? ನಿಮಗೆ ಬೇರೆ ಜಾಗಕ್ಕೆ ಸ್ಥಳಾಂತರಿಸಲು ಏನು ಭಯ? ಅನೇಕ ಜನರು ತಮ್ಮ ಸುತ್ತ ಮುತ್ತಲಿನ ವಾತಾವರಣಕ್ಕೆ ಎಷ್ಟು ಹೊಂದಿಕೊಂಡುಬಿಟ್ಟಿರುತ್ತಾರೆಂದರೆ ಒಂದು ಸ್ವಲ್ಪ ದಿವಸದ ಅವಧಿಗೂ ಅವರು ಬೇರೆ ಕಡೆ ಹೋಗಲು ಯತ್ನಿಸುವುದಿಲ್ಲ. ಈ ವಾಕ್ಯವನ್ನು ನೀವು ಓದುತ್ತಿದಾಗಲೇ, ಪುಷ್ಪಕ ವಿಮಾನದಿಂದ ರಾವಣ ಗಗನದಿಂದ ಇಳಿದು, ನಿಮ್ಮನ್ನು ಪರಿವಾರ ಸಮೇತವಾಗಿ ಅಪಹರಿಸಿ, ನಾರ್ವೆ ದೇಶದ ಒಂದು ಮೈದಾನದಲ್ಲಿ ಬಿಟ್ಟು ಬಿಟ್ಟರೆ, ನೀವು, ನಿಮ್ಮ ಪರಿವಾರ ಏನು ಮಾಡುತ್ತೀರಿ? ಅಲ್ಲೇ ಕುಳಿತುಕೊಂಡು ಪೇಚಾಡುತ್ತೀರ? ಅಥವಾ ಸೃಜನಾತ್ಮಕ ರೀತಿಯಲ್ಲಿ ಜೀವನ ಮುಂದುವರಿಸುತ್ತೀರ? ನೀವು ಈಗಿರುವ ಜಾಗದಲ್ಲಿ ಸಂತೋಷವಾಗಿದ್ದರೆ, ಅಲ್ಲೇ ನೆಲೆಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ, ಒಂದೇ ಊರಿನಲ್ಲಿ ಇದ್ದು ಇದ್ದು ಬೇಸತ್ತರೂ, ಅದೇ ಜಾಗದಲ್ಲಿ, ಎತ್ತಿನ ಗಾಡಿಯ ಹಾಗೆ ಟಪ್ ಟಪ್ ಎಂದು ಹೊಡೆದು ಜೀವನವನ್ನು ಮುಂದಕ್ಕೆ ನಡೆಸುತ್ತಿರುವ ಜನರ ಮನೋಭಾವವನ್ನು ಇಲ್ಲಿ ಪ್ರಶ್ನಿಸಲಾಗುತ್ತಿದೆ.

* ನಿಮ್ಮ ಖಾಸಗಿತನವನ್ನು ಬೇರೆಯವರು ಕಸಿದುಕೊಳ್ಳಲು ಬಿಡಬೇಡಿ. ಪರಿವಾರ ಎಂಬ "ಸಂಸ್ಥೆ"ಯಲ್ಲಿ ಕುಟುಂಬ "ನೌಕರರು", ಒಬ್ಬರನ್ನೊಬರು ಯಾವಾಗಲೂ ಅರ್ಥ ಮಾಡಿಕೊಳ್ಳಬೇಕು ಹಾಗು ಮನೆಯವರು ಮಾಡುವ ಎಲ್ಲಾ ವ್ಯವಹಾರದ ಬಗ್ಗೆ ಇತರರಿಗೆ ಅರಿವು ಇರಬೇಕು ಎಂಬ "company policy" ಭ್ರಮೆಯಲ್ಲಿ ಬದುಕುತ್ತಾರೆ. ಆದರೆ ವಾಸ್ತವವೇ ಬೇರೆ. ಯಾರೇ ಎಷ್ಟೇ ಪ್ರಯತ್ನ ಪಟ್ಟರೂ ನಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಇದು ವಿರಕ್ತ ಜೀವನವನ್ನು ಪ್ರತಿಪಾದಿಸುವ ಸೂತ್ರವಲ್ಲ, ಕೇವಲ ಒಂದು ಸಹಜ ಸತ್ಯ. ಈ ಸತ್ಯವನ್ನು ಅರ್ಥ ಮಾಡಿಕೊಂಡರೆ, ನಮ್ಮ ಪ್ರತ್ಯೇಕ ಅಸ್ತಿತ್ವವನ್ನು ಗೌರವಿಸುತ್ತಲೇ, ಮನೆಯವರೊಂದಿಗೆ ಒಂದು ಆತ್ಮೀಯ ಸಂಬಂಧವನ್ನು ಬೆಳೆಸಿಕೊಳ್ಳಬಹುದು.

* ಕೊನೆಯದಾಗಿ, ನೀವು ಹಿರಿಯ ನಾಗರಿಕರಾದರೆ, ನಿಮ್ಮ ಮಕ್ಕಳು ಅಥವಾ ಮೊಮಕ್ಕಳು ನಿಮಗೆ ಜೀವನದಲ್ಲಿ ಅರ್ಥ ಒದಗಿಸಬೇಕು ಎಂಬ ಮನೋಭಾವವನ್ನು ತೆಗೆದುಹಾಕಿ. ನಿಮ್ಮ ಸ್ವತಂತ್ರ ಜೀವನವನ್ನು ಆಚರಿಸಲು ಪ್ರಾರಂಭಿಸಿ. ಇದಕ್ಕೆ ದೃಷ್ಟಾಂತವಾಗಿ ಮುಂದಿನ ಕಥೆಯನ್ನು ಓದಿರಿ.

ಫಾತಿಮಾ ಎಪತ್ತು ವರ್ಷದ ವಿಧವೆ. ಅವರ ಐದು ಜನ ಗಂಡು ಮಕ್ಕಳು ತಾಯಿಯನ್ನು ಮರೆತು ಎಷ್ಟೋ ವರ್ಷಗಳು ಕಳೆದುಹೋಗಿವೆ. ಒಂಟಿತನದ ಬಲೆಗೆ ಬಿದ್ದ ಫಾತಿಮಾ ಅಗಾಧವಾದ ಖಿನ್ನತೆಗೆ ಒಳಗಾದರು. ಅವರ ಜೊತೆ ಸ್ವಲ್ಪ ಹೊತ್ತು ಮಾತಾಡಿದರೆ ಸಾಕು, ಅವರ ಮಕ್ಕಳು ಮಾಡಿದ ದ್ರೋಹವನ್ನು ನೆನಪಿಸಿಕೊಂಡು ಅಳುತ್ತಿದರು. ಮೊಮಕ್ಕಳನ್ನು ನೋಡುವ ಭಾಗ್ಯ ತನಗಿಲ್ಲ ಎಂದು ಪೇಚಾಡುತ್ತಿದರು. ಫಾತಿಮಾ ಕ್ರಮೇಣವಾಗಿ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾ ಬಂದರು. ಇದಕ್ಕೆ ತುರ್ತು ಪರಿಹಾರವಾಗಿ, ಅವರ ಮಕ್ಕಳು ಮಾಡಿದ್ದು ತಪ್ಪೇ ಆದರೂ, ಮಕ್ಕಳ ನೆನಪಿನಲ್ಲಿ ನೀವು ಉಳಿದ ಜೀವನವನ್ನು ಹಾಳು ಮಾಡಿಕೊಳ್ಳಬಾರದು ಎಂದು ಹೇಳಲಾಯಿತು. ಪರಿಣಾಮಕಾರಿ ಬದುಕಿನ ದೆಸೆಯಲ್ಲಿ ನೀವು ನಡೆಯಬೇಕು, ಎಂದು ಅವರಿಗೆ ಸಲಹೆ ನೀಡಲಾಯಿತು. ಆದರೆ, ಫಾತಿಮಾ ಈ ಸಲಹೆಗಳನ್ನೆಲ್ಲಾ ತಿರಸ್ಕರಿಸಿದರು. ತಾನು ಇಷ್ಟಪಡುವ ಯಾವುದಾದರೂ ಕೆಲಸದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದೇ ಖಿನ್ನತೆಗೆ ರಾಮಬಾಣ, ಎಂದು ಅವರಿಗೆ ಪದೇ ಪದೇ ಹೇಳಲಾಯಿತು. "ಈ ವಯಸ್ನಲ್ಲಿ ನಾನ್ ಏನ್ ಮಾಡ್ಬೋದು, ಹೇಳಿ?", ಎಂದು ಅವರು ಪ್ರಶ್ನಿಸಿದಾಗ, ಅವರು ನಿಸ್ಸಂಶಯವಾಗಿ ಮಾಡಬಹುದಾದ ಕೆಲವು ಚಟುವಟಿಕೆಗಳ ಬಗ್ಗೆ ಹೇಳಲಾಯಿತು. ಅವುಗಳ ಪಟ್ಟಿ ಇಲ್ಲಿದೆ...

1) ಪಾರ್ಕಿನಲ್ಲಿ ನಡೆಯುವುದು, 2) ಹೊಸ ಅಡುಗೆ ಕಲಿಯುವುದು, 3) ಪಕ್ಕದ ಮನೆಯವರ ಜೊತೆ ಹರಟೆ ಹೊಡೆಯುವುದು, 4) ರೈಲ್ವೆ ನಿಲ್ದಾಣಕ್ಕೆ ಹೋಗಿ ಟಾಟಾ ಬಾಯ್ ಬಾಯ್ ಚಟುವಟಿಕೆಗಳನ್ನು ಗಮನಿಸುವುದು, 5) ಅನಾಥಾಶ್ರಮಕ್ಕೆ ಹೋಗಿ ಅಲ್ಲಿನ ಮಕ್ಕಳ ಜೊತೆ ಕಾಲ ಕಲಿಯುವುದು, 6) ಹೊಸ ಹಾಡುಗಳನ್ನು ಕಲಿತು ಒಬ್ಬರೆ ಜೋರಾಗಿ ಮನ ಬಿಚ್ಚಿ ಹಾಡುವುದು, 7) ಹತ್ತು ನೌಕರಿಗಳಿಗೆ ಅರ್ಜಿ ಹಾಕಿ ಹಣ ಸಂಪಾದನೆ ಪ್ರಾರಂಭಿಸುವುದು, 8) ಕಿಟ್ಟಿ ಪಾರ್ಟಿಯನ್ನು ನಿಯೋಜಿಸಿ ಹತ್ತು ಗೆಳತಿಯರನ್ನು ಆಹ್ವಾನಿಸಿವುದು, 9) ಹೊಸ ಚಲನಚಿತ್ರಗಳನ್ನು ನೋಡಿ ಅವುಗಳ ವಿಮರ್ಶೆ ಬರೆಯುವುದು, 10) ಯೌವನದ ಪ್ರೇಮವನ್ನು ನೆನಪಿಸಿಕೊಂಡು ಅದರ ಬಗ್ಗೆ ಒಂದು ಸಣ್ಣ ಕಥೆ ಬರೆಯುವುದು, 11) ರೇಡಿಯೋ ಹಾಡುಗಳಿಗೆ ಡಾನ್ಸ್ ಮಾಡುವುದು, 12) ಇಷ್ಟವಾದ ಒಂದು ವಿಷಯವನ್ನು ಅಂತರ್ಜಾಲದ ಮೂಲಕ ಕಲಿಯುವುದು, 13) ದೇವಸ್ಥಾನಕ್ಕೆ ಹೋಗಿ ಐದು ಜನರ ಪರಿಚಯ ಮಾಡಿಕೊಳ್ಳುವುದು.

ಈ ಪಟ್ಟಿಯನ್ನು ಓದಿದ ಫಾತಿಮಾ ಅವರಿಗೆ ಒಳಗೆ ಒಂದು ದೀಪ ಉರಿಯಲು ಆರಂಭವಾಯಿತು. ಮುಂದಿನ ಬಾರಿ ಅವರು ಜೀವನದ ಬಗ್ಗೆ ಬೇಸರಪಟ್ಟಿಕೊಳ್ಳುವ ಬದಲು ಹೊಸ ರೀತಿಯಲ್ಲಿ ಯೋಚಿಸಲು ಶುರು ಮಾಡಿದರು. ಸ್ವಯಂ ಕರುಣೆಯನ್ನು ಜೀವನದಿಂದ ಕಿತ್ತಿ ಹಾಕಿದರು. ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಈಗ, ಒಂದು ವರ್ಷದ ನಂತರ ಫಾತಿಮಾ ಒಬ್ಬ ಹೊಸ ವ್ಯಕ್ತಿ ಎಂದೇ ಹೇಳಬಹುದು. ಅವರ ಬುದ್ಧಿಶಕ್ತಿ-ಮನಸುಗಳನ್ನು ಸೃಜನಾತ್ಮಕ ಮತ್ತು ಕ್ರಿಯಾಶೀಲ ಹಾದಿಯ ಬಳಿ ತಿರುಗಿಸಿ, ಜಯವನ್ನು ಗಳಿಸಿದರು.

ಸ್ನೇಹಿತರೇ, ನಮ್ಮ ದೇಶದಲ್ಲಿ ದಬ್ಬಾಳಿಕೆಗಳಿಗೆ ಒಳಗಾದ ಜನರು ಅನೇಕ ಮಂದಿ ಇದ್ದಾರೆ ಎಂದು ನಿಮಗೇ ಗೊತ್ತು. ಆದರೆ, ಅದರಲ್ಲಿ ಹೆಚ್ಚು ಜನ, ಅವರ ಹಕ್ಕುಗಳಿಗೆ ಅವರೇ ನಿಲ್ಲದೆ ದಮನವನ್ನು ಒಪ್ಪಿಕೊಂಡು ಮೂಲೆ ಸೇರಿದ್ದಾರೆ. ಒಂದು ವಾಕ್ಯವನ್ನು ನಿಮ್ಮ ಮನಸ್ಸಿನಲ್ಲಿ ಅಚ್ಚುಗೊಳಿಸಿ, "ನನ್ನ ಅವಸ್ಥೆಗೆ ಸಂಪೂರ್ಣವಾಗಿ ನಾನೇ ಹೊಣೆ!". ಈ ವಾಕ್ಯದಿಂದ ಜೀವನದಲ್ಲಿ ಎದ್ದೇಳಲು ಪ್ರಾರಂಭಿಸಿ. ನೀವು ಎದ್ದು ನಿಲ್ಲಬೇಕು ಎಂದರೆ ನೀವೊಬ್ಬ ಅವಮಾನಕರ ಆಕ್ರಮಣಕಾರಿ ಮಾನವನಾಗಬೇಕು ಎಂದು ಅರ್ಥವಲ್ಲ. ನಿಮ್ಮ ಆತ್ಮಸ್ಥೈರ್ಯದ ಬಗ್ಗೆ ಒಂದು ಪ್ರಶಾಂತ ನಂಬಿಕೆ ಮತ್ತೆ ಒಂದು ಸ್ವಲ್ಪ ಜಾಣ್ಮೆ ಬೆಳಿಸಿಕೊಂಡರೆ ಸಾಕು. ಜಾಣ್ಮೆಯ ಉದಾಹರಣೆಗೆ ಒಂದು ಪುಟ್ಟ ಸನ್ನಿವೇಶವನ್ನು ಇಲ್ಲಿ ಹೇಳಿ, ಈ ಸರಣಿ ಲೇಖನವನ್ನು ಮುಕ್ತಾಯಗೊಳಿಸುತ್ತಿದೇನೆ. ಶುಭಮಸ್ತು.

ಜಾಣ್ಮೆಯ ಉದಾಹರಣೆ

ಇಬ್ಬರು ಗಂಡಸರು ಬಾರಿನಲ್ಲಿ ಕುಳಿತಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಅವರು ಮಾತಿಗೆ ಇಳಿದರು. ಮಾತು ರಮ್ಮಿನ ಜೊತೆಯೇ ಧಾರಾಕಾರವಾಗಿ ಹರಿಯಿತು. ಎಲ್ಲೋ ನಡುವೆ ಪಂಜಾಬ್ ರಾಜ್ಯದ ಕಡೆಗೆ ಸಂವಾದ ತಿರುಗಿತು. ಒಬ್ಬ ಹೇಳಿದ, "ಅದು ಒಂದು ಒಳ್ಳೆ ರಾಜ್ಯ". ಅದಕ್ಕೆ ಇನ್ನೊಬ್ಬ ಹೇಳಿದ, "ಏನ್ ಸಾರ್ ಚೆನಾಗಿದೆ ಅಲ್ಲಿ? ಪಂಜಾಬ್ ನಿಂದ ಒಳ್ಳೇದು ಬಂದಿರುವುದು ಎರಡೇ : ಕ್ರಿಕೆಟ್ ಆಟಗಾರರು ಮತ್ತೆ ಸೂಳೆಗಳು". ಇದನ್ನು ಕೇಳಿ ಮೊದಲನೆಯವನು ಎದ್ದು ನಿಂತ. "ಏನೊ ಮುಂಡೆ ಮಗ್ನೆ. ಹೆಂಗಿದೆ ಮೈಗೆ? ನನ್ ಹೆಂಡ್ತಿ ಪಂಜಾಬ್ ಅವ್ಳು...". ಆಗ ಇನ್ನೊಬ್ಬ, "ಓ, ಹೌದಾ ಸಾರ್? ಅವರು ಬೌಲರ್ರಾ ಅಥವಾ ಬ್ಯಾಟ್ಸಮನ್ನಾ?"

English summary
Have you lost interest in living? Have you been bored of routine lifestyle? Then, here are few tips to instil life in your lifestyle. We are on the earth to live in style and in our own way. Mind it, this is your life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X