ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ನಾಡಿಮಿಡಿತ ಅರಿತ ಕಥೆಗಾರ: ‘ನಾಡಿ’

|
Google Oneindia Kannada News

(ಮಡಿಕೇರಿಯಲ್ಲಿ ಬರುವ ಜನವರಿ 7 ರಿಂದ 9, 2014ರ ವರೆಗೆ ನಡೆಯಲಿರುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜರವರು ಆಯ್ಕೆಗೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಇವರು ಸೃಷ್ಟಿಸಿರುವ ಅನೇಕ ಕಥೆ-ಕಾದಂಬರಿಗಳು ಜನಮಾನಸವನ್ನು ಸೂರೆಗೂಂಡಿವೆ. ಅದರಲ್ಲಿ ಕೆಲವಷ್ಟು ಚಲನಚಿತ್ರಗಳಾಗಿಯೂ ಹೆಸರು ಮಾಡಿವೆ. ಇಂತಹಾ ಅಪೂರ್ವ ಸಾಹಿತಿಯೊಬ್ಬರಿಗೆ ಕನ್ನಡ ಸಮ್ಮೇಳನದ ಅಧ್ಯಕ್ಷಗಿರಿ ಪ್ರಾಪ್ತವಾದ ಹಿನ್ನೆಲೆಯಲ್ಲಿ ಅವರ ಬದುಕು-ಬರಹದ ಕುರಿತ ಕಿರುನೋಟವೊಂದು ಇಲ್ಲಿದೆ.)

ನನ್ನ ಎಲ್ಲಾ ಆತ್ಮೀಯ ಸ್ನೇಹಿತರಿಗೂ ನನ್ನ ನಮಸ್ಕಾರ,

ಈ ಬಾರಿ ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಮ್ಮ ನಿಮ್ಮೆಲ್ಲರ ಮೆಚ್ಚಿನ ಸಾಹಿತಿ ನಾರ್ಬರ್ಟ್ ಡಿಸೋಜಾರವರಿಗೆ ಈ ಮೂಲಕ ನನ್ನ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ.

ಕನ್ನಡ ಭಾಷೆ, ಸಾಹಿತ್ಯ ಉಳಿಯಬೇಕು. ಸರ್ಕಾರ ಕನ್ನಡ ಮಾದ್ಯಮವನ್ನು ಕಡ್ಡಾಯಗೊಳಿಸಬೇಕು, ಇದೇ ಮುಂತಾದ ಹೇಳಿಕೆಗಳನ್ನು ನೀಡುತ್ತಾ ತಾವು ಹಿಂದಿನಿಂದ ಆಂಗ್ಲ ಸಾಹಿತ್ಯ, ಭಾಷೆಗೆ ಕುಮ್ಮಕ್ಕು ನೀಡುತ್ತಿರುವ, ಜತೆಗೆ ಆಡಳಿತಾರೂಢ ಸರ್ಕಾರಗಳಿಂದ ತಮಗೆ ಬೇಕಾದ ಅನುಕೂಲಗಳನ್ನು ಪಡೆದುಕೊಳ್ಳುವ ಸಲುವಾಗಿ ತಮ್ಮನ್ನು ತಾವು ಸಾಹಿತಿಗಳೆಂದು ಬಿಂಬಿಸಿಕೊಳ್ಳುವ ಒಂದು ವರ್ಗವೇ ನಮ್ಮ ನಡುವಿರುವ ಈ ದಿನಗಳಲ್ಲಿ ತಾವು ಬದುಕಿ ಬಾಳಿದ ಮಲೆನಾಡಿನ ಐಸಿರಿಯ ನಡುವಿನ ಪುಟ್ಟ ಊರು ಸಾಗರದ ಸುತ್ತ ಮುತ್ತ ನಡೆವ ಬೆಳವಣಿಗೆಗಳಿಂದ ಸ್ಪೂರ್ತಿಗೊಂಡು ಅತಿ ಸಾಮಾನ್ಯ ವಸ್ತುವನ್ನಿಟ್ಟುಕೊಂಡು ಓದುಗರಮನಸ್ಸಿಗೆ ತಟ್ಟುವಂತೆ ಕಥೆ ಹೆಣೆಯಬಲ್ಲ ಜಾಣ ಕಥೆಗಾರರಾದ ನಾ. ಡಿಸೋಜಾರಂಥವರು ಯಾವುದೇ ಪ್ರಚಾರವನ್ನು ಬಯಸದೆ ತಮ್ಮ ಪಾಡಿಗೆ ತಾವು ಕನ್ನಡದ ಕೆಲಸದಲ್ಲಿ ತೊಡಗಿರುವಂತಹವರೂ ನಮ್ಮೊಡನಿರುವುದು ನಮಗೆಲ್ಲರಿಗೂ ನಿಜಕ್ಕೂ ಖುಷಿಯ ಸಂಗತಿ. ಇಂತಹಾ ಅಪ್ಪಟ ಕನ್ನಡ ಪ್ರೇಮಿಯೊಬ್ಬರಿಗೆ ಈ ಬಾರಿ ಕನ್ನಡಮ್ಮನ ತೇರನ್ನೆಳೆಯುವ ಅವಕಾಶ ದೊರೆತಿರುವುದು ನಿಜಕ್ಕೂ ಸ್ವಾಗತಾರ್ಹ. ಈ ಹಿನ್ನೆಲೆಯಲ್ಲಿ ನಾ. ಡಿಸೋಜಾರವರ ಬದುಕು-ಬರಹಗಳ ಕುರಿತ ಸಂಕ್ಷಿಪ್ತ ನೋಟ ಇಲ್ಲಿದೆ.

Article about Na D'Souza

ಇದೀಗ 75ರ ಹರೆಯದ ನಾ. ಡಿಸೋಜಾ ಕಳೆದ ಕಾಲಮಾನದ ಸಾಕ್ಷಿಪ್ರಜ್ಞೆಯಾಗಿ ಹಲವಾರು ಸಂಗತಿಗಳನ್ನು ತಮ್ಮ ಕೃತಿಗಳ ಮೂಲಕ ದಾಖಲು ಮಾಡಿರುವುದನ್ನು ನಾವು ನೋಡುತ್ತೇವೆ. ಅದರಲ್ಲಿಯೂ ತಾವು ಬದುಕಿ ಬಾಳಿದ ಮಲೆನಾಡಿನ ಪರಿಸರ, ಅಲ್ಲಿನ ಜನರ ಮನದ ತಲ್ಲಣಗಳು, ಪರಿಸರ ನಾಶ, ಮಲೆನಾಡಿನ ಒಂದು ಕಾಲದ ಮಾಮೂಲಿ ಅತಿಥಿಯಾಗಿದ್ದ ಪ್ಲೇಗ್ ಎಂಬ ಮಹಾಮಾರಿಯಂತಹಾ ವಿಷಯಗಳಿಂದ ಹಿಡಿದು ಮಲೆನಾಡಿಗರ ಬದುಕನ್ನು ಮುಳುಗಿಸಿದ ಲಿಂಗನಮಕ್ಕಿಯಂತಹಾ ಯೋಜನೆಗಳಿಂದುಂಟಾದ ಪರಿಣಾಮಗಳನ್ನು ಸಹ ಇವರ ಸಾಹಿತ್ಯ ಕೃತಿಗಳಲ್ಲಿದೆ. ಮಲೆನಾಡಿನ ಅಪರೂಪದ ಚಿತ್ರಗಳು, ಅಲ್ಲಿನ ಕೆಲ ವಿಶೇಷ ವ್ಯಕ್ತಿಗಳು, ಅಲ್ಲದೆ ಸಮಾಜದ ಕೆಲ ಧೀಮಂತ ವ್ಯಕ್ತಿಗಳೂ ಇವರ ಕೃತಿಗಳಲ್ಲಿ ಹಾದು ಹೋಗಿದ್ದಾರೆ.

ಕಾದಂಬರಿ, ಸಣ್ಣ ಕಥೆ, ಮಕ್ಕಳ ಸಾಹಿತ್ಯ, ನಾಟಕ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಾಲ್ಲಿ ಕೆಲಸ ಮಾಡಿರುವ ಡಿಸೋಜಾರವರು ಹುಟ್ಟಿದ್ದು 1937 ಜೂನ್ 6 ರಂದು ಶಿವಮೊಗ್ಗದ ಸಾಗರದಲ್ಲಿ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಎಫ್. ಪಿ. ಡಿಸೋಜಾ ಹಾಗೂ ರೂಪೀನಾ ಡಿಶೋಜಾರವರ ಪುತ್ರನಾಗಿ ಜನಿಸಿದ ಡಿಸೋಜಾರ ಬಾಲ್ಯದಿಂದಲೂ ಮನೆಯಲ್ಲಿ ಸಾಹಿತ್ಯದ ವಾತಾವರಣಾವಿದ್ದಿತು. ತಂದೆ ಎಫ್.ಪಿ. ಡಿಸೋಜಾರವರಿಗೆ ಸಾಹಿತ್ಯ, ಸಂಗೀತದ ಕಡೆ ಒಲವಿತ್ತು, ತಾಯಿ ರೂಪಿನಾ ಡಿಸೋಜಾ ಕೂಡಾ ತಾವು ಮಕ್ಕಳಿಗೆ ಜನಪದ ಕಥೆಗಳನ್ನು ಹೇಳುತ್ತಿದ್ದರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ ಮಿಡಿಯೆಟ್ ಶಿಕ್ಷಣ ಪೂರೈಸಿದ ಡಿಸೋಜಾಗೆ ತಮ್ಮ ಹೈಸ್ಕೂಲ್ ಅವಧಿಯಿಂದಲೇ ಸಾಹಿತ್ಯದ ಕಡೆಗೆ ಒಲವಿದ್ದಿತು. ಶಿವರಾಮ ಕಾರಂತರ ಜೀವನ ದೃಷ್ಟಿ, ಆದರ್ಶ, ಬದುಕನ್ನು ಪ್ರೀತಿಸುವ ಬಗೆ, ಈ ಎಲ್ಲಾ ಅಂಶಗಳು ಡಿಸೋಜಾರವರ ಮೇಲೆ ಗಾಢವಾಗಿ ಪರಿಣಾಮ ಬೀರಿದ್ದವು, ಇದಲ್ಲದೆ ವಿದ್ಯಾರ್ಥಿ ದೆಸೆಯಲ್ಲಿ ಅವರಿಗೆ ದೊರೆತ ಗೋರೂರು ರಾಮಸ್ವಾಮಿ ಅಯ್ಯಂಗಾರರ ಒಡನಾಟ, ಅವರು ಸಾಹಿತ್ಯ ಸೃಷ್ಟಿಗೆ ನೀಡಿದ ಸ್ಪೂರ್ತಿಯಿಂದಾಗಿ ನಾ. ಡಿಸೋಜಾರವರು ಒಬ್ಬ ಮಹತ್ವದ ಸಾಹಿತಿಗಳಾಗಲು ಸಾಧ್ಯವಾಯಿತು.

ತಮ್ಮ ಕಾಲೇಜು ಶಿಕ್ಶಣದೊಂದಿಗೆ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಗಳಲ್ಲಿಯೂ ತೇರ್ಗಡೆ ಹೊಂದಿದ್ದ ಡಿಸೋಜಾರವರು ತಮ್ಮ ವಿದ್ಯಾಭ್ಯಾಸದ ಅವಧಿಯ ಬಳಿಕ ಲೋಕೋಪಯೋಗಿ ಇಲಾಖೆಯಲ್ಲಿ ಬೆರಳಚ್ಚುಗಾರರಾಗಿ 1959ರಿಂದ 1995ರ ವರೆಗೆ ಕಾರ್ಯನಿರ್ವಹಿಸಿದರು. ಈ ಸಂದರ್ಭದಲ್ಲಿ ಶರಾವತಿ ಯೋಜನೆ, ಕಾರ್ಗಲ್, ತೀರ್ಥಹಳ್ಳಿ, ಸಾಗರ, ಮಾಸ್ತಿಕಟ್ಟೆ ಇದೇ ಮೊದಲಾದ ಮಲೆನಾಡು ಪ್ರದೇಶಗಳಲ್ಲಿ ಕೆಲಸ ಮಾಡುವ ಅವಕಾಶ ಪಡೆದ ನಾ. ಡಿಸೋಜಾರವರಿಗೆ ಮಲೆನಾಡಿನ ಪರಿಸರ, ಜನ ಜೀವನ, ಅಲ್ಲಿನ ಜನರ ಸಮಸ್ಯೆಗಳು, ಆತಂಕಗಳೆಲ್ಲದರ ಸ್ಪಷ್ಟ ಚಿತ್ರಣವೊಂದು ಲಭ್ಯವಾಯಿತು. ಇದೆಲ್ಲದರ ಹಿನ್ನೆಲೆಯನ್ನಿಟ್ಟುಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಡಿಸೋಜಾರವರಿಂದ ಶ್ರೇಷ್ಠ ಗುಣಮಟ್ಟದ ಸಾಹಿತ್ಯ ಕೃತಿಗಳು ಹೊರಬಂದವು.

English summary
Article about Na D'Souza, President of 80th All India Kannada Sahitya Sammelana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X