• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಹಿತ್ಯ ಲೋಕದ ಅಗಾಧ ಪ್ರತಿಭೆ ನಾ. ಡಿಸೋಜಾ ಕೊಡುಗೆಗಳು

|

ನಾ. ಡಿಸೋಜಾರವರ ಸಾಹಿತ್ಯ ಸೃಷ್ಟಿಯ ಹರವು ಅಗಾಧವಾದದ್ದು. ಈ ಮೊದಲೇ ಹೇಳಿದಂತೆ ಕಾದಂಬರಿ, ಸಣ್ಣ ಕಥೆ, ನಾಟಕ, ಮಕ್ಕಳ ಸಾಹಿತ್ಯ ಇಂತಹಾ ನಾನಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ 'ಅಕ್ಷರ ಕೃಷಿಕ' ಈ ಡಿಸೋಜಾ. ಡಿಸೋಜಾರ ಮೊದಲ ಕಾದಂಬರಿ'ಬಂಜೆ ಬೆಂಕಿ'ಯು ಪ್ರಕಟವಾದುದು 1964ರಲ್ಲಿ. 'ಮುಳುಗಡೆ', 'ದ್ವೀಪ', 'ತಿರುಗೋಡಿನ ರೈತ ಮಕ್ಕಳು', 'ಒಡ್ಡು', 'ಒಂದು ಜಲಪಾತದ ಸುತ್ತ', 'ಕೆಂಪು ತ್ರಿಕೋನ', 'ಪ್ರೀತಿ ಎಂಬ ಚುಂಬಕ', 'ಪ್ರಜ್ಞಾಬಲಿ', 'ದೇವರಿಗೇ ದಿಕ್ಕು', 'ಇಕ್ಕೇರಿಯಲ್ಲಿ ಕ್ರಾಂತಿ', 'ಮುಖವಾಡ' ಇದೇ ಮೊದಲಾದ ನಲವತ್ತು ಕಾದಂಬರಿಗಳನ್ನು ಬರೆದಿರುವ ನಾ. ಡಿಸೋಜಾ 'ನೆಲೆ', 'ತಿಂಗಳ ಪೂಜೆಗೆ ಬಂದ ಮಗ', 'ದೇವರ ಶಿಲುಬೆ ಮನೆಗೆ ಬಂದದ್ದು', 'ಬಣ್ಣ; , 'ಪಿಟೀಲು', 'ಕೊನೆ', 'ಸಮಾಧಿ' ಇಂತಹಾ ಕಾದಂಬರಿಗಳಲ್ಲಿ ಕ್ರೈಸ್ತ ಸಮಾಜದಲ್ಲಿರುವ ಅಂಧಶ್ರದ್ದೆಗಳ ಕುರಿತು ತೋರಿಸಿ ಕೊಟ್ಟಿದ್ದಾರಲ್ಲದೆ ಅವುಗಳು ಪಡೆದುಕೊಳ್ಲಬೇಕಾದ ಚಲನಾಶೀಲತೆಯ ಕುರಿತೂ ಚರ್ಚಿಸಿದ್ದಾರೆ.

ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ಸಲ್ಲಿಸಿರುವ ಡಿಸೋಜಾರವರು ಮಕ್ಕಳಿಗಾಗಿ ಮಿನಿ ಕಾದಂಬರಿ, ನಾಟಕ, ಸಣ್ಣ ಕಥೆ, ಜೀವನಚರಿತ್ರೆಗಳನ್ನು ಬರೆದಿದ್ದಾರೆ. ಬಾಲಗಂಧರ್ವ, ಕದಂಬ ಮಯೂರಶರ್ಮ, ಸದಾಶಿವ ಬ್ರಹ್ಮೇಂದ್ರ, ಬಿಹಾರಿ ದಾಸ್ ಇದೇ ಮೊದಲಾದ ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಮಕ್ಕಳ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿರುವ ಗರಿಮೆ ನಾ. ಡಿಸೋಜಾರವರದು. 'ದೇವರಿಗೆ ದಿಕ್ಕು', 'ತಬ್ಬಲಿ', 'ಕೃಷ್ಣನ ಕೊಡುಗೆ', 'ಹಕ್ಕಿಗಳಿಗೆ ಬಂತು ಬಣ್ಣ', ಇದೇ ಮುಂತಾದ ಮಕ್ಕಳ ನಾಟಕಗಳನ್ನು ರಚಿಸಿರುವ ಡಿಸೋಜಾರವರು 'ಗೇರುಸೊಪ್ಪೆ', 'ಪಾರಿವಾಳ ದ್ವೀಪ', 'ಮತ್ತೆ ಹೇಳಿದ ಅಜ್ಜಿ ಕಥೆಗಳು', 'ಹಿತೋಪದೇಶದ ಕಥೆಗಳು', 'ಗುರುದೇವರ ಕಥೆಗಳು' ಇಂತಹಾ ಮಿನಿ ಕಾದಂಬರಿ, ಸಣ್ಣ ಕಥೆಗಳನ್ನು ಮಕ್ಕಳಿಗಾಗಿ ಸೃಷ್ಟಿಸಿದ್ದಾರೆ. ಡಿಸೋಜಾರವರು ಸ್ವತಃ ಪ್ರಕೃತಿ ಪ್ರೇಮಿಯಾಗಿದ್ದರಿಂದ ಇವರ ಎಲ್ಲಾ ಕಾದಂಬರಿ, ನಾಟಕ, ಕಥೆಗಳಲ್ಲಿ ಕಾಡಿನ ಸೌಂದರ್ಯ, ಅಲ್ಲಿನ ಖಗ-ಮೃಗಗಳ ಝೇಂಕಾರ, ಬೆಟ್ಟ-ಗುಡ್ದಗಳ ರಮಣೀಯತೆ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿರುತ್ತವೆ.

ತಮ್ಮ ಮನೆ ಮಾತು ಕೊಂಕಣಿಯಾದರೂ ಕನ್ನಡಾಂಬೆಯ ಸೇವೆ ಮಾಡಿದ ಈ ಅಪರೂಪದ ಸಾಹಿತಿಗೆ ಅವರ ಸಾಹಿತ್ಯ ಪ್ರತಿಭೆಯನ್ನು ಮೆಚ್ಚಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಅವುಗಳಲ್ಲಿ ಮುಖ್ಯವಾಗಿ 1988ರಲ್ಲಿ 'ಬೆಳಕಿನೊಡನೆ ಬಂತು ನೆನಪು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ, 1990ರಲ್ಲಿ 'ಕಾಡಿನ ಬೆಂಕಿ' ಕಾದಂಬರಿಯು ಚಲನಚಿತ್ರವಾಗಿ ರಜತ ಕಮಲ ಪುರಸ್ಕಾರಕ್ಕೆ ಭಾಜನವಾಯಿತು. ಮುಂದೆ 2008ರಲ್ಲಿ ಗಿರಿಶ್ ಕಾಸರವಳ್ಳಿ ನಿರ್ದೇಶನದಲ್ಲಿ 'ದ್ವೀಪ'ಕಾದಂಬರಿಯು ಚಲನಚಿತ್ರವಾಗಿ ಸ್ವರ್ಣ ಕಮಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಇದಲ್ಲದೆ 1993ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1998ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ನಿರಂಜನ ಸಾಹಿತ್ಯ ಪ್ರಶಸ್ತಿ, 2007ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಗಳು ನಾ. ಡಿಸೋಜಾರ ಸಾಹಿತ್ಯ ಸೇವೆಗಾಗಿ ಒಲಿದು ಬಂದ ಗೌರವ ಪುರಸ್ಕಾರಗಳು. 'ಮುಳುಗಡೆಯ ಊರಿಗೆ ಬಂದವರು' ಕೃತಿಗಾಗಿ ಬಾಲ ಸಾಹಿತ್ಯಕ್ಕಾಗಿ ಕೊಡಮಾಡುವ ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕಾರಕ್ಕೂ ಡಿಸೋಜಾರವರು ಭಾಜನರಾಗಿದ್ದಾರೆ.

ಇನ್ನು 'ಬಳುವಳಿ', 'ಬೆಟ್ಟದ ಪುರದ ದಿಟ್ಟ ಮಕ್ಕಳು', 'ಆಂತರ್ಯ' ಕಾದಂಬರಿಗಳು ಚಲನಚಿತ್ರಗಳಾಗಿ ಜನ ಮನ್ನಣೆಯನ್ನು ಗಳಿಸಿದ್ದರೆ 'ಮುಳುಗಡೆ', 'ಕೊಳಗ', 'ಒಳಿತನ್ನು ಮಾಡಲು ಬಂದವರು', 'ಪರಾರಿಯಾಗುವ ಹುಡುಗ', 'ಬಣ್ಣ' ಇದೇ ಮೊದಲಾದ ಕಾದಂಬರಿಗಳು ವಿವಿಧ ವಿಶ್ವವಿದ್ಯಾನಿಲಯಗಳ ಪದವಿ ವಿಭಾಗದ ಪಠ್ಯಗಳಾಗಿ ಆಯ್ಕೆಗೊಂಡಿವೆ. ಅಲ್ಲದೆ ನಾ. ಡಿಸೋಜಾರ ಕಥೆ, ಕಾದಂಬರಿಗಳು ಕೊಂಕಣಿ, ಮಲಯಾಳಂ, ಹಿಂದಿ, ಇಂಗ್ಲೀಷ್, ಸಂಸ್ಕೃತ, ತೆಲುಗು ಭಾಷೆಗಳಿಗೆ ಅನುವಾದಗೊಂಡು ಅಲ್ಲಿನ ಓದುಗರಿಂದಲೂ ಸಾಕಷ್ಟು ಮೆಚ್ಚುಗೆ ಗಳಿಸಿದೆ.

ಇಂತಹಾ ಕನ್ನಡದ ಸೇವಾಕರ್ತನಿಗೆ ಈ ಬಾರಿ ಮಡಿಕೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಒಲಿದಿರುವುದು ನಿಜಕ್ಕೂ ನಮಗೆಲ್ಲರಿಗೂ ಅತ್ಯಂತ ಸಂತೋಷದ ಸಂಗತಿ. "ಹದಿನೈದು ದಿನಕ್ಕೊಂದು ಭಾಷೆ ಸಾಯುತ್ತಿದೆ!" ಎನ್ನುವ ವಿಶ್ವಸಂಸ್ಥೆಯ ವರದಿ ಹಿನ್ನೆಲೆಯಲ್ಲಿ ಕನ್ನಡವೂ ಅಳಿಯುವ ಭಾಷೆ ಆಗಬಾರದೆಂದರೆ ಇಂತಹಾ ಸಮ್ಮೇಳನಗಳ ಅವಶ್ಯಕತೆ ತುಂಬಾ ಇದೆ." ಎಂದು ಖಚಿತವಾಗಿ ನಂಬಿರುವ ಡಿಸೋಜಾರವರಿಗೆ ಒಲಿದ ಅಧ್ಯಕ್ಷಗಿರಿಗಾಗಿ ಅವರನ್ನು ಇನ್ನೊಮ್ಮೆ ಅಭಿನಂದಿಸುತ್ತಾ.....

ನನ್ನೆಲ್ಲಾ ಆತ್ಮೀಯ ಸ್ನೇಹಿತರಿಗೆ ಇದೋ ನನ್ನ ಆಹ್ವಾನ,

ಬನ್ನಿ ಮಡಿಕೇರಿಗೆ....

ಕನ್ನಡಮ್ಮನ ಜಾತ್ರೆಗೆ....

ನಾವು- ನೀವೆಲ್ಲರೂ ಕೂಡಿ ಕನ್ನಡದ ಹಿರಿಮೆಯನ್ನು ಜಗದಗಲ ಸಾರೋಣ....

ಕನ್ನಡ ತೇರನು ಎಳೆಯೋಣಾ...

ನಮಸ್ಕಾರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Article about Na D'Souza, President of 80th All India Kannada Sahitya Sammelana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more