ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಂದಣ್ಣ' ಮೇಷ್ಟ್ರು ಕರ್ವಾಲೊವನ್ನು ವರ್ಣಿಸುತ್ತಿದ್ದ ಪರಿ, ವಾಹ್!

By Prasad
|
Google Oneindia Kannada News

ಹತ್ತತ್ತಿರ ಕ್ವಾರ್ಟರ್ ಸೆಂಚುರಿಗೂ ಹಿಂದಿನ ಸಂಗತಿಯಿದು. ದ್ವಿತೀಯ ಪಿಯೂಸಿ ಪರೀಕ್ಷೆ ಇನ್ನೇನು ಒಂದು ತಿಂಗಳು ಮಾತ್ರವೇ ಇದೆ ಎನ್ನುವಾಗ ನನ್ನ ಓದುವ ಆರ್ಭಟ ಆರಂಭವಾಗುತ್ತಿತ್ತು. ಆಗ ಮಾತ್ರವಲ್ಲ, ಎಂದೆಂದಿಗೂ ಅದೇ ನನ್ನ ಸ್ಪೆಷಾಲಿಟಿ. ತಲೆ ಹೋದಷ್ಟು ಓದುವುದು, ತಲೆಗೆ ತೋಚಿದ್ದು ಬರೆದುಬರುವುದು.

ಅಂಥಾ ಬ್ರೀಲಿಯೆಂಟ್ ಏನಲ್ಲ, ಆರ್ಡಿನರಿಯೂ ಅಲ್ಲ. ಎವರೇಜ್ ಅಂತಾರಲ್ಲ ಅಂಥಾ ವಿದ್ಯಾರ್ಥಿ ನಾನಾಗಿದ್ದೆ. ಎಷ್ಟೇ ಅರ್ಥ ಮಾಡಿಕೊಳ್ಳಲು ಯತ್ನಿಸಿದರೂ ಕೆಮಿಸ್ಟ್ರಿ ಅರ್ಥ ಆಗುತ್ತಿರಲಿಲ್ಲ, ಎಷ್ಟೇ ಕುಡುಮಿಕೊಂಡರೂ ಸೈನ್ಸ್ ನನ್ನ ಮಿದುಳಿನೊಳಗೆ ಇಳಿಯುತ್ತಿದ್ದುದು ಅಷ್ಟಕ್ಕಷ್ಟೇ. ಪುಸ್ತಕದ ನಾಲ್ಕು ಪುಟ ತಿರುಗಿಸುತ್ತಿದ್ದಂತೆ ತೂಕಡಿಕೆ.

ಪೂರ್ಣಚಂದ್ರ ತೇಜಸ್ವಿ ಅವರ ನಾನು ಮೆಚ್ಚಿದ ಕೃತಿಗಳು ಪೂರ್ಣಚಂದ್ರ ತೇಜಸ್ವಿ ಅವರ ನಾನು ಮೆಚ್ಚಿದ ಕೃತಿಗಳು

ಅಂಥ ಸಮಯದಲ್ಲಿ, ಸ್ವಲ್ಪ ರಿಲೀಫ್ ಸಿಗಲಿ, ಸ್ವಲ್ಪ ಬಿಡುವು ಸಿಗಲಿ ಎಂದು ಆಗ ಕೈಗೆತ್ತಿಕೊಳ್ಳುತ್ತಿದುದೇ ಪೂರ್ಣಚಂದ್ರ ತೇಜಸ್ವಿ ಅವರ ಅತ್ಯದ್ಭುತ ಕಾದಂಬರಿ 'ಕರ್ವಾಲೊ'. ಆ ಕಾದಂಬರಿಯಲ್ಲಿ ಅದೇನು ಮೋಡಿಯಿತ್ತೋ ಅಥವಾ ಪರವಶತೆಯಿತ್ತೋ ಒಂದಲ್ಲ ಎರಡಲ್ಲ ಡಜನ್ ಬಾರಿಗೂ ಹೆಚ್ಚು ಆ ಕಾದಂಬರಿಯನ್ನು ಓದಿದ್ದೇನೆ.

My favourite Kannada Novel of Poornachandra Tejaswi - Karvalo

ಜೇನು ಗೂಡನ್ನು ನೋಡಿದಾಗ, ಕೊಚ್ಚೆಯಲ್ಲಿ ಬಿದ್ದ ಹಂದಿ ಕೊಯ್ ಕೊಯ್ ಎಂದು ಕಿರುಚಿದಾಗ, ಬೇಲಿಯ ಮೇಲೆ ಓತಿಕ್ಯಾತವನ್ನು ಕಂಡಾಗ, ಕಸಿನ್ ಮನೆಯಲ್ಲಿ ಜೂಲು ನಾಯಿಯನ್ನು ಕಂಡಾಗ, ಹಚ್ಚಹಸುರಿನ ಬನವನ್ನು ಕಣ್ತುಂಬಿಕೊಂಡಾಗ, ತೇಜಸ್ವಿ ಎಂಬ ಮತ್ತಾರದೋ ಹೆಸರು ಕಿವಿಯ ಮೇಲೆ ಬಿದ್ದಾಗ 'ಕರ್ವಾಲೊ' ಮನದಲ್ಲಿ ಜಾಗೃತವಾಗಿಬಿಡುತ್ತದೆ.

ಪೂರ್ಣಚಂದ್ರ ತೇಜಸ್ವಿ 81ನೇ ಹುಟ್ಟುಹಬ್ಬ, ವಿವಿಧೆಡೆ ವಿಶಿಷ್ಟ ಕಾರ್ಯಕ್ರಮ ಪೂರ್ಣಚಂದ್ರ ತೇಜಸ್ವಿ 81ನೇ ಹುಟ್ಟುಹಬ್ಬ, ವಿವಿಧೆಡೆ ವಿಶಿಷ್ಟ ಕಾರ್ಯಕ್ರಮ

ಆ ಪುಸ್ತಕದಲ್ಲಿ ಆಪರಿಯ ಮಾಂತ್ರಿಕತೆಯನ್ನು ತೇಜಸ್ವಿ ತುಂಬಿದ್ದಾರೆ. ಕಾದಂಬರಿಯ ಒಳಹೋಗುತ್ತಿದ್ದಂತೆ ಕಣ್ಣ ಪರದೆಯ ಮೇಲೆ ನೈಜವಾಗಿ ನಡೆಯುತ್ತಿರುವ ಚಲನಚಿತ್ರವೇನೋ ಎಂಬಂತೆ ಆ ಘಟನಾವಳಿಗಳು ಸುರುಳಿ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಕರ್ವಾಲೊ ಕಾದಂಬರಿಯನ್ನು ಯಾಕೆ ಯಾರೂ ಚಲನಚಿತ್ರ ಮಾಡಿಲ್ಲ ಎಂದು ಹಲವು ಬಾರಿ ಯೋಚಿಸಿದ್ದಿದೆ.

ದ್ವಿತೀಯ ಪಿಯುಸಿಯಲ್ಲಿ ಪಠ್ಯವಾಗಿದ್ದ ಕರ್ವಾಲೊ ಕಾದಂಬರಿಯನ್ನು ನಮ್ಮ ಮೇಷ್ಟ್ರು ಎಷ್ಟು ಸುಂದರವಾಗಿ ವರ್ಣಿಸುತ್ತಿದ್ದರೆಂದರೆ, ಕೈಯಲ್ಲಿ ಪುಸ್ತಕವನ್ನೂ ಹಿಡಿಯದೆ, ಒಂದೊಂದು ಅಕ್ಷರ ಹಿಂದುಮುಂದಾಗದಂತೆ, ಸ್ವತಃ ಮಂದಣ್ಣನೇ ನಮ್ಮೆದುರಿಗೆ ನಿಂತು ಕಥೆಯನ್ನು ಹೇಳುತ್ತಿದ್ದಾನೋ ಎನ್ನಿಸುವಷ್ಟು ಪ್ರಭಾವಶಾಲಿಯಾಗಿರುತ್ತಿತ್ತು. ನಾವೆಲ್ಲರೂ ಆ ಮೇಷ್ಟ್ರಿಗೆ 'ಮಂದಣ್ಣ' ಅಂತಲೇ ಪ್ರೀತಿಯಿಂದ ಕರೆಯುತ್ತಿದ್ದೆವು. ಸ್ವತಃ ಪೂರ್ಣಚಂದ್ರ ತೇಜಸ್ವಿಯೇ ಅಷ್ಟು ಮನಮುಟ್ಟುವಷ್ಟು ವಿವರಿಸುತ್ತಿದ್ದರೋ ಇಲ್ಲವೋ, 'ಮಂದಣ್ಣ' ಅವರ ವರ್ಣನೆ ಹಾಗಿರುತ್ತಿತ್ತು. ಕರ್ವಾಲೊ ಕಾದಂಬರಿಯ ಬಗ್ಗೆ ಪ್ರೀತಿ ಹುಟ್ಟಿಕೊಳ್ಳಲು ಅವರೂ ಕೂಡ ಕಾರಣ.

ನಿರುತ್ತರ ಪುಸ್ತಕ ಪ್ರಕಾಶನದಿಂದ ತೇಜಸ್ವಿ ಹೆಸರಿನಲ್ಲಿ ಪ್ರಶಸ್ತಿನಿರುತ್ತರ ಪುಸ್ತಕ ಪ್ರಕಾಶನದಿಂದ ತೇಜಸ್ವಿ ಹೆಸರಿನಲ್ಲಿ ಪ್ರಶಸ್ತಿ

'ಥತ್ತೇರಿ ಸುವ್ವರ್ ಕಾ ಬೊಂಬಡಾ' ಎಂಬ ಪ್ಯಾರನ ಡೈಲಾಗು ಜೀವನಪರ್ಯಂತ ನಾನು ಮರೆಯುವುದಿಲ್ಲ. ಅಸಡ್ಡೆಯ ಪರಮಾವಧಿಯಂತಿರುವ ಪ್ಯಾರ ಮಾತ್ರವಲ್ಲ ವಯೋವೃದ್ಧ ವಿಜ್ಞಾನಿ ಕರ್ವಾಲೊ, ಅವರ ಅಸಿಸ್ಟಂಟು ಪ್ರಭಾಕರ, ಮಲೆನಾಡಿನ ಅನೂಹ್ಯವಾದ ಕಾಡಿನ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಮಂದಣ್ಣ, ಸ್ಪ್ಯಾನಿಯೆಲ್ ಜಾತಿಯ ಜೂಲಿನ ನಾಯಿ, ಇನ್ನೇನು ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಕೈತುದಿಯಿಂದ ನೆಗೆದು ಪಶ್ಚಿಮ ಘಟ್ಟದ ಅನಂತದೆಡೆಗೆ ಚಿಮ್ಮಿಹೋಗುವ ಹಾರುವ ಓತಿಕ್ಯಾತ....

ಕರ್ವಾಲೊ ಯಾವ ಪರಿ ನಮ್ಮನ್ನು ಆವರಿಸಿಕೊಂಡಿತ್ತೆಂದರೆ, ನಾವು ಸ್ನೇಹಿತರೆಲ್ಲ ಕುಳಿತುಕೊಂಡು ಮಾತನಾಡುವಾಗ, ಕರ್ವಾಲೊ ಚಲನಚಿತ್ರ ಮಾಡಿದರೆ ಕರ್ವಾಲೊ ಪಾತ್ರಕ್ಕೆ ಚಾರು ಹಾಸನ್ ಸೂಕ್ತವಾಗುತ್ತಾರೆ, ನಿರೂಪಕನ ಪಾತ್ರಕ್ಕೆ ಅನಂತ್ ನಾಗ್ ಗಿಂತ ಪರ್ಫೆಕ್ಟ್ ವ್ಯಕ್ತಿ ಮತ್ತೊಬ್ಬನಿಲ್ಲ, ಮಂದಣ್ಣನ ಪಾತ್ರ ಸಂಕೇತ್ ಕಾಶಿ ಆವಾಹಿಸಿಕೊಳ್ಳಬಲ್ಲರು, ಇನ್ನು ಪ್ರಭಾಕರನ ಪಾತ್ರಕ್ಕೆ ರಮೇಶ್ ಭಟ್ ಗಿಂತ ಮತ್ಯಾರಿದ್ದಾರೆ ಎಂಬೆಲ್ಲ ಚರ್ಚೆ ನಡೆಯುತ್ತಿದ್ದವು. ಕಡೆಗೆ ಯಾರೂ ಚಲನಚಿತ್ರ ಮಾಡಲು ಮುಂದೆ ಬರದಿದ್ದರೆ 'ನೀನೇ ನಿರ್ಮಾಣ ಮಾಡು, ನಾನೇ ನಿರ್ದೇಶನ ಮಾಡುತ್ತೇನೆ' ಎಂದು ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಕಾದಂಬರಿ ಬಗ್ಗೆ ನಮ್ಮಲ್ಲಿ ಗಂಭೀರತೆ ಮತ್ತು ಅಮಾಯಕತೆ ತುಂಬಿತ್ತು.

ಸಿದ್ದರಾಮಯ್ಯರಿಂದ ತೇಜಸ್ವಿ ಸಂಶೋಧನಾ ಕೇಂದ್ರ ಲೋಕಾರ್ಪಣೆ ಸಿದ್ದರಾಮಯ್ಯರಿಂದ ತೇಜಸ್ವಿ ಸಂಶೋಧನಾ ಕೇಂದ್ರ ಲೋಕಾರ್ಪಣೆ

ಈಗಲೂ ಕೈಯಲ್ಲಿ ಹಿಡಿದುಕೊಂಡರೆ ಬಿಟ್ಟೂಬಿಡದಂತೆ ಓದಿಸಿಕೊಂಡು ಹೋಗಬಲ್ಲಂಥ ಕೆಲವೇ ಕೆಲವು ಕಾದಂಬರಿಗಳಲ್ಲಿ ಕರ್ವಾಲೊ ಕೂಡ ಒಂದು. ಸೆಪ್ಟೆಂಬರ್ 8ರಂದು ಅವರ ಹುಟ್ಟುಹಬ್ಬ. ಅವರು ಬದುಕಿದ್ದರೆ 80ನೇ ಹುಟ್ಟುಹಬ್ಬಕ್ಕೆ ಸಹಸ್ರಚಂದ್ರ ದರ್ಶನ ಶಾಂತಿ ಮಾಡಿಸಿಕೊಳ್ಳುತ್ತಿದ್ದರೋ ಏನೋ. ಆದರೆ, ಅವರಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ಅವರೇನಿದ್ದರೂ ಪ್ರಕೃತಿ ಆರಾಧಕರಾಗಿದ್ದರು. ನಾನು ಅವರ ಕಾದಂಬರಿಗಳ ಆರಾಧಕ.

English summary
My favourite Kannada Novel of Poornachandra Tejaswi - Karvalo. Lets's wish him happy birthday on his birthday on 8th September. We can remembering him by reading his Kananda novels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X