ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗಾಲದೊಂದಿಗೇ ಪಾಪಿ ಆಷಾಢವೂ ಬಂದಿದೆ

By ಸುಶ್ರುತ ದೊಡ್ಡೇರಿ
|
Google Oneindia Kannada News

ಮಳೆಗಾಲದೊಂದಿಗೇ ಪಾಪಿ ಆಷಾಢವೂ ಬಂದಿದೆ. ಹೆಂಡತಿಯ ಜೊತೆ ಬೆಚ್ಚನೆ ಸಮಯವನ್ನು ಕಳೆಯುವ ಕನಸು ಕಾಣುತ್ತಿದ್ದ ನವವಿವಾಹಿತನಿಗೆ ಆಶಾಭಂಗವಾಗಿದೆ.

ಒಂದೇ ಕೊಡೆಯಲ್ಲಿ ಹೆಂಡತಿಯನ್ನು ಬಸ್‌ಸ್ಟಾಂಡಿನವರೆಗೆ ಬಿಟ್ಟುಬರಲು ಹೋದವ 'ಈಗಿನ ಕಾಲದಲ್ಲಿ ಈ ಆಶಾಢ-ಗೀಶಾಢ ಎಲ್ಲಾ ಏನೂ ಇಲ್ಲ ಕಣೇ. ಒಂದೆರಡು ದಿನ ಅಮ್ಮನ ಮನೇಲಿ ಇದ್ದಂಗೆ ಮಾಡಿ ಏನಾದ್ರೂ ನೆಪ ಹೇಳಿ ವಾಪಾಸ್ ಬಂದ್ಬಿಡು' ಅಂತ ಕಿವಿಯಲ್ಲಿ ಹೇಳಿದ್ದಾನೆ.

ಹೆಂಡತಿ ಆ ಕ್ಷಣಕ್ಕೆ ತಲೆಯಾಡಿಸಿದರೂ ತವರಿನ ಬಸ್ಸು ಹತ್ತುವಾಗ ಹುಸಿನಗೆ ನಕ್ಕದ್ದು ಕಂಡಕ್ಟರಿಗೆ ಮಾತ್ರ ಕಂಡಿದೆ. ಮನೆಗೆ ಬಂದ ಪುಣ್ಯಾತ್ಮ ಎರಡು ದಿನ ಕಳೆದು, ಒಂದು ವಾರ ಕಳೆದರೂ ಹೆಂಡತಿಯ ಪತ್ತೆಯಿಲ್ಲದೇ ಕಂಗೆಟ್ಟಿದ್ದಾನೆ. ಫೋನು ಮಾಡಿ ಮಾತಾಡೋಣ ಎಂದರೆ ಮೊಬೈಲು ತಾಕುತ್ತಿಲ್ಲ. ಗಾಳಿಮಳೆಗೆ ಎಲ್ಲೋ ಮರ ಬಿದ್ದು ಲ್ಯಾಂಡ್‌ಲೈನು ಸತ್ತುಹೋಗಿದೆ.

ಸಣ್ಣಗೆ ಪ್ರತೀಕಾರದ ಸಂಚು ಹೂಡಿದ್ದಾನೆ: 'ಅವಳು ಇಲ್ದೇ ಇದ್ರೆ ಏನು, ನಾನೇ ಇವತ್ತು ಮಜಾ ಹೊಡ್ದು ಉಡಾಯಿಸ್ತೀನಿ' ಅಂತ ಮನಸಲ್ಲೇ ಅಂದುಕೊಂಡು, ಮಾರ್ಕೆಟ್ಟಿಗೆ ಹೋಗಿ, ಕಡಲೆಹಿಟ್ಟು-ಮೆಣಸಿನಕಾಯಿಗಳನ್ನೆಲ್ಲ ತಂದು, ಮೈಕೈಯನ್ನೆಲ್ಲಾ ಹಿಟ್ಟು ಮಾಡಿಕೊಳ್ಳುತ್ತಾ ಕಲಸಿ, ಭರ್ಜರಿ ಬಜ್ಜಿ-ಬೋಂಡಗಳನ್ನು ಕರಿದು, ಅಕ್ಕ-ಪಕ್ಕದ ಮನೆಯ ಹುಡುಗರನ್ನೂ ಕರೆದು ತಿನ್ನಿಸಿ, ತಾನೂ ತಿಂದು ಸಂಭ್ರಮಿಸಿದ್ದಾನೆ.

First Rain a must experience in Month of June

'ಏನೂ, ಹೆಂಡತಿ ಊರಿಗೆ ಹೋದ್ಲು ಅಂತ ಪಾರ್ಟೀನಾ?' ಅಂತ ಕೇಳಿದ ಪಕ್ಕದ ಮನೆಯ ಹಿರಿಯರಿಗೆ 'ಹೆಹೆ.. ಹಂಗೇನಿಲ್ಲಾ.. ಹಿಂಗೇ, ಸುಮ್ನೇ' ಅಂತಂದು ಜಾರಿಕೊಂಡಿದ್ದಾನೆ. ವಾಪಸು ಬಂದ ಹೆಂಡತಿಗೆ ತನ್ನ ಸಾಹಸವನ್ನೆಲ್ಲ ಹೇಳಿ ಹೇಗೆ ಉರಿಸಬಹುದು ಅಂತ ನೆನೆದುಕೊಂಡು, ಮಿರ್ಚಿಯ ಖಾರಕ್ಕೆ ಬಾಯಿ ಸೆಳೆದಿದ್ದಾನೆ.

ರಂಜಾನ್ ಮಾಸ: ಶಾಲೆ, ಮಳೆ, ಆಷಾಢವಷ್ಟೇ ಅಲ್ಲ, ರಂಜಾನ್ ಮಾಸ ಸಹ ಬಂದಿದೆ ಜೂನಿನೊಂದಿಗೆ. ಮಳೆಗಾಲದಲ್ಲಿ ಏಕೋ ಹಸಿವೂ ಸ್ವಲ್ಪ ಜಾಸ್ತಿ. ಉಪವಾಸ ಆಚರಿಸುತ್ತಿರುವವರು ಸಂಜೆಯ ಹೊತ್ತಿಗೆ ಇಫ್ತಾರಿಗಾಗಿ ಕಾಯುತ್ತಿದ್ದಾರೆ.

ರಂಜಾನ್ ಮಾಸದ ಇಫ್ತಾರ್ ಭೋಜನಕ್ಕಾಗಿಯೇ ತೆರೆದಿರುವ ವಿಶೇಷ ಖಾದ್ಯದಂಗಡಿ-ಹೋಟೆಲುಗಳು ಘಮಘಮಿಸುತ್ತ ಹಸಿದವರನ್ನು ಸ್ವಾಗತಿಸಿವೆ. ತೂಗುಬಿಟ್ಟ ನೂರು ಕ್ಯಾಂಡಲ್ ಬಲ್ಬಿನ ಸಾಲುಸಾಲು ತಿಂಡಿಯಂಗಡಿಗಳು ಚಳಿರಾತ್ರಿಗೆ ವಿಚಿತ್ರ ಮಾದಕತೆಯನ್ನೇ ತಂದಿವೆ. ತಡರಾತ್ರಿಯವರೆಗೆ ನಡೆಯುವ ಈ ಬಗೆಬಗೆಯ ತಿನಿಸುಗಳ-ಮಾಂಸದಡುಗೆಗಳ ಮೇಳ ಮಳೆಗಾಲದ ಜಾತ್ರೆಯಂತೆ ಆಕರ್ಷಕವಾಗಿದೆ.

Ramzan

ಜೂನು ಪ್ರವರ್ಧಮಾನಕ್ಕೆ ಬರವಷ್ಟರಲ್ಲಿ ಮಳೆಯೂ ಪ್ರಬಲವಾಗಿದೆ. ರಾತ್ರಿಯಿಡೀ ಸುರಿವ ಮಳೆ ನೋಡುತ್ತಾ ಕೂಗೀಕೂಗೀ ಜೀರುಂಡೆಗೆ ಗಂಟಲುನೋವು ಬಂದಿದೆ.

ಕೋಡಿಯಲ್ಲೀಗ ಪ್ರವಾಹದೋಪಾದಿಯಲ್ಲಿ ನೀರು ಹರಿಯುತ್ತಿದೆ. ಬಾವಿಯ ನೀರು ಕೈಗೆ ಸಿಗುವಷ್ಟು ಮೇಲೆ ಬಂದಿದೆ. ಕರೆಂಟು ಹೋಗಿ ಮೂರು ದಿನವಾಗಿದೆ. ಜಲಪಾತಗಳು ಭೋರ್ಗರೆಯುತ್ತಿವೆ. ಅಂಗಳದ ತುಂಬ ಚುಪುರು ಕಳೆ ಬೆಳೆದು ಎಲ್ಲೆಲ್ಲೂ ಹಸಿರೇ ಕಾಣುತ್ತಿದೆ. 'ಈ ಸೀಸನ್ನಿನ ಲಾಸ್ಟ್ ಟೈಮು' ಅಂದುಕೊಂಡು ತಂದ ಮಾವಿನಹಣ್ಣಿನಲ್ಲಿ ಹುಳುಗಳು ಸಿಕ್ಕಿವೆ. ಪಕ್ಕದ ಮನೆಯ ಬಚ್ಚಲೊಲೆಯಿಂದ ಹಲಸಿನ ಬೀಜ ಸುಟ್ಟ ವಾಸನೆ ಬರುತ್ತಿದೆ.

ನಗರದಲ್ಲಿ ಟಿಕಾಣಿ ಹೂಡಿರುವ ಯಕ್ಷಗಾನ ಮೇಳದ ಕಲಾವಿದರು ಆಟ ಮುಗಿದ ಜಾವ ನ್ಯೂಸ್‌ಪೇಪರ್ ಓದಿ ಮಲಗಿದ್ದಾರೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಆದ ಅವಾಂತರ, ಮರ ಬಿದ್ದು ಆದ ತೊಂದರೆಗಳ ಸುದ್ದಿ ಅವರಿಗೆ ಊರ ನೆನಪು ತಂದು ಕಳವಳವಾಗಿದೆ.

Monsoon

ರಸ್ತೆಗಳಲ್ಲಿ ನಿಂತ ನೀರು ಆರುವಷ್ಟರಲ್ಲಿ ಮತ್ತೆ ಮಳೆ ಬಂದಿದೆ. ಫ್ಲೈ‌ಓವರಿನ ಕಟಾಂಜನಕ್ಕೆ ಅಂಟಿನಿಂತಿದ್ದ, ಎಂಥಾ ಭಾರೀ ಲಾರಿ ಹಾಯ್ದರೂ ಜಗ್ಗದ ಮಳೆನೀರಹನಿಗಳು, ಸುಂದರ ಹುಡುಗಿಯ ಸ್ಕೂಟಿ ಸಾಗಿದ್ದೇ ಸಳಸಳನೆ ಉದುರಿವೆ. ಹಾಗೆ ಉದುರಿದ ಹನಿಗಳು ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೈಮೇಲೆ ಬಿದ್ದು, ಅವನಿಗೆ ಪುಳಕವಾಗಿ ಕತ್ತೆತ್ತಿ ಮೇಲೆ ನೋಡಿದರೆ, ಓಡುತ್ತಿರುವ ಪಿಂಕ್ ಸ್ಕೂಟಿಯ ಹುಡುಗಿಯ ಹಾರುತ್ತಿರುವ ವೇಲು ಹಾಯ್ ಎಂದಿದೆ.

ಗದ್ದೆಗಳಲ್ಲಿ ಚಟುವಟಿಕೆ : ಮಾಗುತ್ತಿರುವ ಜೂನಿನೊಂದಿಗೆ ಮಳೆಗಾಲಕ್ಕೂ ಜನ ಹೊಂದಿಕೊಂಡಿದ್ದಾರೆ. ಗದ್ದೆಗಳಲ್ಲಿ ಚಟುವಟಿಕೆ ಜೋರಾಗಿದೆ. ತೋಟದ ಕಾದಿಗೆಗಳಲ್ಲಿ ನೀರು ಸರಿಯಾಗಿಯೇ ನಿಂತಿದೆ. ಅಡಿಕೆ ಮರಗಳಿಗೆ ಬಂದ ಕೊಳೆರೋಗಕ್ಕೆ ಔಷಧಿ ಹೊಡೆಸಲು ತಯಾರಿ ನಡೆದಿದೆ.

ಒಂದು ದಿನ ಹೊಳವು ಕೊಟ್ಟರೆ ಸಾಕು, ಸ್ಲಾಬ್ ಹಾಕಿ ಮುಗಿಸಬಹುದಿತ್ತು ಅಂತ ಮೇಸ್ತ್ರಿಗಳು ಅರ್ಧ ಕಟ್ಟಿದ ಮನೆಯ ಹೊರಗೆ ನಿಂತು ಮಾತಾಡಿಕೊಳ್ಳುತ್ತಿದ್ದಾರೆ. ಮರದಡಿಯಲಿ ನಿಂತ ಪ್ರೇಮಿ ತನ್ನ ಹುಡುಗಿಗೆ ಜರ್ಕಿನ್ ತೊಡಿಸಿ ತಾನು ತೋಯುತ್ತಲೇ ಉಳಿದು ಸಿನೆಮಾ ಹೀರೋ ಥರ ಮಿಂಚಿದ್ದಾನೆ.

ಜೂನ್ ತಿಂಗಳು ಮುಗಿಯಲು ಬಂದಿದೆ.ತನ್ನ ಕೊಡಪಾನದಲ್ಲಿದ್ದ ಚೂರುಪಾರು ನೀರನ್ನೆಲ್ಲ ಅದು ಈಗ ಕೊಡವಿ ಕೊಡವಿ ಚೆಲ್ಲುತ್ತಿದೆ.ಜುಲಾಯಿ ತನ್ನ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ.

ಮಳೆಗಾಲದ ಮಾಂತ್ರಿಕ ಕೋಲನ್ನು ಕೈಯಲ್ಲಿ ಹಿಡಿದು ರಿಲೇ ಓಡುತ್ತಿರುವ ಜೂನು ಅಗೋ ಅಲ್ಲಿ ನಿಂತು ತನ್ನನ್ನೇ ಕಾಯುತ್ತಿರುವ ಜುಲಾಯಿಗೆ ಅದನ್ನು ವರ್ಗಾಯಿಸಿ ಜವಾಬ್ದಾರಿ ಕಳೆದುಕೊಳ್ಳುವ ತವಕದಲ್ಲಿದೆ. ಕ್ಯಾಲೆಂಡರಿನ ಹಾಳೆಗಳು ಮತ್ತೆ ಪಟಪಟನೆ ಹಾರುತ್ತಿವೆ. ಜುಲಾಯಿ ನಿಂತಲ್ಲೇ ಚಡಪಡಿಸುತ್ತ ಜೂನು ತರುವ ಮಳೆಗಾಲದ ಮಂತ್ರದಂಡಕ್ಕಾಗಿ ಕಾಯುತ್ತಿದೆ. ಈ ಲಹರಿ ಮೌನಗಾಳ ಬ್ಲಾಗಿನಿಂದ ಹೆಕ್ಕಿದ್ದು.

English summary
Waiting for Monsoon and First Rain a must experience in Month of June. In the month of June one can Ashadha month traditional myths, Muslims observe fasting as Ramzan also falls in this month an article by blogger Sushrutha Dodderi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X