ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಾಸನೆಯಂತೆ, ಪೂಜೆಯಂತೆ ಕೆಲಸ ಮಾಡಿದಾಗ ಮಾತ್ರ ಒಳ್ಳೆಯ ಫಲ

By ಬಿ.ಎಂ. ಲವಕುಮಾರ್
|
Google Oneindia Kannada News

ನಾವು ದಿನ ನಿತ್ಯವೂ ಒಂದಲ್ಲಾ ಒಂದು ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತೇವೆ. ನಾವು ಏನನ್ನು ಮಾಡುತ್ತೇವೆಯೋ ಅದನ್ನು "ಕರ್ತವ್ಯ" ಎಂಬಂತೆ ಭಾವಿಸಿ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇ ಆದರೆ ಅದರಿಂದ ಒಳ್ಳೆಯ ಪ್ರತಿಫಲ ದೊರೆಯುತ್ತದೆ ಎಂಬುದನ್ನು ನಮ್ಮ ಹಿರಿಯರು ಹೇಳುತ್ತಲೇ ಬಂದಿದ್ದಾರೆ.

ಆಧ್ಯಾತ್ಮದ ವಿಚಾರವಾಗಿ ಹೇಳುವುದಾದರೆ ಕರ್ತವ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸ್ವಾಮಿ ವಿವೇಕಾನಂದರು ಕರ್ಮಯೋಗದಲ್ಲಿ ಕರ್ತವ್ಯದ ಬಗ್ಗೆ ಒಂದಷ್ಟು ಹೇಳಿದ್ದಾರೆ. ಕರ್ತವ್ಯ ಎಂದರೆ ಏನು? ಎಂಬುವುದರ ಬಗ್ಗೆಯೂ ಅವರು ವಿವರಿಸಿದ್ದಾರೆ.

ಹಾಗೆ ನೋಡಿದರೆ ಕರ್ತವ್ಯ ಎಂಬುವುದು ವಸ್ತುನಿಷ್ಠವಾದದ್ದು, ಅದರ ಲಕ್ಷಣ ಹೇಳುವುದು ಅಸಾಧ್ಯ. ಏಕೆಂದರೆ ವ್ಯಕ್ತಿನಿಷ್ಠ ದೃಷ್ಟಿಯಿಂದ ನೋಡಿದ್ದೇ ಆದರೆ ಕರ್ತವ್ಯ ಎಂಬುವುದಿದೆ. ದೈವೋನ್ಮುಖವಾಗಿ ನಮ್ಮನ್ನು ಮುಂದುವರೆಸುವ ಯಾವುದೇ ಕಾರ್ಯಗಳಾಗಿರಲಿ ಅದು ಸತ್ಕರ್ಮ ಸತ್ಕ್ರಿಯೆ. ಅದನ್ನು ಮಾಡುವುದು ನಮ್ಮ ಕರ್ತವ್ಯವಾಗುತ್ತದೆ. ಒಬ್ಬನ ಜನ್ಮವನ್ನೂ ಹಾಗೂ ಅವನ ಸ್ಥಾನವನ್ನು ಅವಲಂಬಿಸಿದ ಕರ್ತವ್ಯಗಳನ್ನು ಕುರಿತು ಭಗವದ್ಗೀತೆಯಲ್ಲಿಯೂ ಹೇಳಲಾಗಿದೆ.

How to get maximum while performing our duty selflessly

ನಾವು ಯಾವ ಸಮಾಜದ ಮಧ್ಯೆ ಹುಟ್ಟಿದೇವೆಯೋ ಅದರ ಚಟುವಟಿಕೆಗಳಿಗೆ ಮತ್ತು ಆದರ್ಶಗಳಿಗೆ ಅನುಗುಣವಾಗಿ ಒಳ್ಳೆಯದಾಗುವಂತಹ ಕಾರ್ಯಗಳನ್ನು ಯಾವಾಗಲೂ ಮಾಡುವುದು ನಮ್ಮ ಕರ್ತವ್ಯವಾಗಬೇಕು.

ಸ್ವಾಮಿ ವಿವೇಕಾನಂದರು ಹೇಳುವ ಪ್ರಕಾರ ಸಮಾಜಕ್ಕೆ ಹೊಂದಿಕೊಂಡು ನಾವು ಹೋಗಬೇಕು. ಯಾವುದೇ ಕಾಲದಲ್ಲಾಗಲಿ ನಮ್ಮ ಕರ್ತವ್ಯವೆಂದು ಅರಿತು ಮುನ್ನಡೆಯಬೇಕು. ನಾವು ಮೊದಲು ಜನ್ಮಸಿದ್ಧವಾದ ಕರ್ತವ್ಯವನ್ನು ಮಾಡಬೇಕು. ಅದು ನೆರವೇರಿದ ನಂತರ ಸಮಾಜದಲ್ಲಿ ನಮ್ಮ ಸ್ಥಾನಕ್ಕೆ ತಕ್ಕುದಾದ ಕರ್ತವ್ಯವನ್ನು ಮಾಡಬೇಕು. ಏಕೆಂದರೆ ಪ್ರತಿಯೊಬ್ಬನಿಗೂ ಒಂದೊಂದು ಸ್ಥಾನ ಕಲ್ಪಿತವಾಗಿರುವುದರಿಂದ ಆ ಸ್ಥಾನಕ್ಕೆ ಸಂಬಂಧಿಸಿದ ಕರ್ತವ್ಯಗಳನ್ನು ನೆರವೇರಿಸಲೇ ಬೇಕಾಗುತ್ತದೆ.

ಇದೆಲ್ಲದರ ನಡುವೆಯೂ ನಮ್ಮಲ್ಲೊಂದು, ಅಂದರೆ ನಮ್ಮ ಸ್ವಭಾವದಲ್ಲೊಂದು ಅಪಾಯವಿದೆ. ಅದೇನೆಂದರೆ ತನ್ನನ್ನು ತಾನು ಪರೀಕ್ಷಿಸಿಕೊಳ್ಳದಿರುವುದು. ಮೊದಲು ನಾವು ಮಾಡಿದ ಕಾರ್ಯದ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ಕರ್ತವ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದೇನೆಯೇ ಎಂಬುವುದನ್ನು ಅರಿತುಕೊಳ್ಳಬೇಕು. ಹೀಗಾದಾಗ ತಕ್ಷಣಕ್ಕೆ ಸಾಧಕ-ಬಾಧಕಗಳ ಅರಿವಾಗುತ್ತದೆ.

ಕೆಳಮಟ್ಟದ ಕೆಲಸ ಮಾಡುವುದರಿಂದ ವ್ಯಕ್ತಿ ಕೀಳಾಗುವುದಿಲ್ಲ. ವ್ಯಕ್ತಿಯು ಮಾಡುವ ಕರ್ತವ್ಯದ ಸ್ವಭಾವದ ದೃಷ್ಟಿಯಿಂದ ಅವನ ಯೋಗ್ಯತೆಯನ್ನು ನಿರ್ಣಯಿಸದೆ ಅದನ್ನು ಆತನು ಮಾಡುವ ರೀತಿಯಿಂದಲೂ, ಯಾವ ಮನೋಭಾವದಿಂದ ಮಾಡುತ್ತಾನೆ ಎಂಬುವುದರಿಂದಲೂ ನಿರ್ಣಯಿಸಬೇಕು.

ಕರ್ತವ್ಯ ಜ್ಞಾನದ ಮೂಲಕ ಮಾಡಿದ ಕಾರ್ಯ ಉಪಾಸನೆಯಂತೆ, ಪೂಜೆಯಂತೆ, ಕರ್ತವ್ಯ ತತ್ವವು ಅದು ನೈತಿಕ ರೂಪದಲ್ಲಿರಲಿ ಅಥವಾ ಪ್ರೀತಿಯ ರೂಪದಲ್ಲಿರಲಿ ಎಲ್ಲ ಯೋಗಗಳಿಗೆ ಸಮಾನವಾಗಿರುತ್ತದೆ. ಇದರ ಉದ್ದೇಶ ಅಲ್ಪಾತ್ಮವನ್ನು ನಿಗ್ರಹಿಸಿ, ಉನ್ನತ ಆತ್ಮವು ಬೆಳಗುವಂತೆ ಮಾಡುವುದಾಗಿದೆ. ಅಷ್ಟೇ ಅಲ್ಲ ಕೆಳಮಟ್ಟದಲ್ಲಿ ನಮ್ಮ ಶಕ್ತಿ ಪೋಲಾಗದಂತೆ ನೋಡಿಕೊಂಡು ಅದು ಉನ್ನತ ಸ್ತರದಲ್ಲಿ ವ್ಯಕ್ತವಾಗುವಂತೆ ಮಾಡಬೇಕು. ಇದು ಸಿದ್ದಿಸಬೇಕಾದರೆ ನಮ್ಮಲ್ಲಿ ತುಚ್ಛಾಭಿಲಾಷೆಗಳು ಮೇಲೇಳದಂತೆ ತಡೆಯಬೇಕು. ಇದು ಕರ್ತವ್ಯ ಪಾಲನೆಗೆ ಅತ್ಯವಶ್ಯ.

ನಾವು ಅಭಿವೃದ್ಧಿ ಹೊಂದಲು ನಮಗೆ ಎಟುಕುವ ಕರ್ತವ್ಯವನ್ನು ಮಾಡುವುದೊಂದೇ ಮಾರ್ಗ. ಇದು ನಮ್ಮ ಜೀವನದಲ್ಲಿಯೂ, ಸಮಾಜದಲ್ಲಿಯೂ ಉಚ್ಚತರ ಪದವಿಗಳ ಸಂಬಂಧವಾದ ಕರ್ತವ್ಯಗಳನ್ನು ನೆರವೇರಿಸಲು ಶಕ್ತಿ ನೀಡುತ್ತದೆ. ಕರ್ತವ್ಯ ಯಾವುದೇ ರೀತಿಯದ್ದಾಗಲಿ ಅದನ್ನು ನಾವು ಅಸಡ್ಡೆ ಮಾಡಬಾರದು. ಕರ್ತವ್ಯವನ್ನು ಚೆನ್ನಾಗಿ ಮಾಡುವುದರಿಂದ ನಮ್ಮ ಶಕ್ತಿ ಹೆಚ್ಚುತ್ತದೆ.

ಆದರೆ ನೆನಪಿರಲಿ, ಅನಾರೋಗ್ಯಕರ ಪೈಪೋಟಿ, ಹೊಟ್ಟೆಕಿಚ್ಚನ್ನು ಸೃಷ್ಟಿಸಿ ನಮ್ಮ ಹೃದಯದಲ್ಲಿರುವ ದಯೆಗಳನ್ನೇ ಧ್ವಂಸ ಮಾಡುತ್ತವೆ. ಆದುದರಿಂದ ಕಾರ್ಯವನ್ನು ಒಳ್ಳೆಯ ಮನಸ್ಸಿನಿಂದ ಮಾಡುತ್ತಾ ಕರ್ತವ್ಯವನ್ನು ಪೂರೈಸಬೇಕು. ಹಾಗಾದಾಗ ಮಾತ್ರ ಮಾಡುವ ಕರ್ತವ್ಯಕ್ಕೆ ಫಲ ಮತ್ತು ನೆಮ್ಮದಿ ಸಿಗುತ್ತದೆ.

English summary
How to get maximum while performing our duty selflessly. Swami Vivekananda says we have to get adjusted to society and work accordingly. An article by BM Lavakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X