• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತು

By ಪೂರ್ಣಿಮ ಜಿ.ಆರ್., ಪಬ್ಲಿಕ್ ಅಫೇರ್ಸ್ ಸೆಂಟರ
|

ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಎಂದಾಕ್ಷಣ ನೆನಪಾಗುವುದು ನಮ್ಮ ಶಾಲೆ, ಆಟ, ಪಾಠ, ಶಾಲೆಯಲ್ಲಿ ಮಾಡಿದ ಗಲಾಟೆ, ಪಡೆದ ಬಹುಮಾನ, ಸಿಹಿತಿಂಡಿ ಹಾಗು ನಮ್ಮ ನೆಚ್ಚಿನ ಚಾಚಾ ನೆಹರು!

ಇವೆಲ್ಲಾ ನೆನಪುಗಳನ್ನು ಶಾಲೆಗೆ ಹೋಗುವ ಮಕ್ಕಳಲ್ಲಿ ಕಾಣಬಹುದು. ಆದರೆ ಶಾಲೆಗೆ ಹೋಗದ, ಮಧ್ಯದಲ್ಲಿ ಶಾಲೆ ಬಿಟ್ಟ, ಬೀದಿಮಕ್ಕಳ, ಬಾಲಕಾರ್ಮಿಕರ, ಅಪಾಯದ ಅಂಚಿನಲ್ಲಿರುವ ಮಕ್ಕಳ ದಿನಾಚರಣೆಯನ್ನು ಮಾಡುವವರು ಯಾರು? ಅವರ ಹಕ್ಕುಗಳಿಗೆ ರಕ್ಷಣೆ ನೀಡಿ, ಅವರನ್ನು ಸಹ ಇತರ ಸಹಪಾಠಿ ಮಕ್ಕಳ ಹಾಗೆ ಜೀವನ ಕಳೆಯುವಂತೆ ಮಾಡುವ ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಯಾರದು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾದ ಸಂದರ್ಭ ಬಂದಿದೆ.

ನೆಹರು ಜನ್ಮದಿನ, ಮಗುತನದ ಮುಗ್ಧತೆ ಉಳಿಸುವ ಮಕ್ಕಳದಿನ

ಮಕ್ಕಳ ಮೇಲೆ ದಿವಂಗತ ಪಂಡಿತ್ ಜವಾಹರ್‌ಲಾಲ್‌ರವರಿಗೆ ಇದ್ದ ಅತೀವ ಕಾಳಜಿ ಮತ್ತು ಪ್ರೀತಿ, ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ನೆಹರು ಜನ್ಮದಿನವಾದ ನವೆಂಬರ್ 14ರಂದು ಮಕ್ಕಳ ದಿನವನ್ನಾಗಿ ಆಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಮಕ್ಕಳ ದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸುವುದಕ್ಕೆ ಹೆಚ್ಚಿನ ಒತ್ತು ನೀಡಿರುವುದನ್ನು ನೋಡುತ್ತಿದ್ದೇವೆ, ಆದರೆ ಇದರ ವಿಶಾಲತೆಯನ್ನು ಗಮನಿಸಿದಾಗ ಇದಕ್ಕೆ ಇರುವ ಪ್ರಾಮುಖ್ಯತೆಯೇ ಬೇರೆ.

ಮಕ್ಕಳ ಕ್ಷೇಮಾಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವಸಂಸ್ಥೆಯು 1954ರಿಂದ ನವೆಂಬರ್ 20ರಂದು ವಿಶ್ವ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಪ್ರಪಂಚದ ಬಹುತೇಕ ದೇಶಗಳು ಈ ದಿನದಂದೇ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತವೆ. ನವೆಂಬರ್ 1989ರಲ್ಲಿ ಮಕ್ಕಳ ಹಕ್ಕುಗಳ ಸಮಾವೇಶವನ್ನು(Convention on the Rights of the Child-CRC) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸರ್ವಾನುಮತದಿಂದ ಅಂಗಿಕರಿಸಿದ್ದು, 190 ದೇಶಗಳು ಇದನ್ನು ಅನುಮೋದಿಸಿದವು.

ಪ್ರದ್ಯುಮ್ನನ ಕೊಲೆಯಂಥ ಘಟನೆಗಳಿಗೆ ಕೊನೆ ಎಂದು?

ಮಕ್ಕಳ ಹಕ್ಕುಗಳ ಸಮ್ಮೇಳನವು ಇತಿಹಾಸದಲ್ಲಿಯೇ ಅತ್ಯಂತ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಮಾನವ ಹಕ್ಕುಗಳ ಒಪ್ಪಂದವಾಗಿದೆ. ಇದು ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯ, ಕುಟುಂಬ ಪರಿಸರ, ಮೂಲಭೂತ ಆರೋಗ್ಯ, ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆಗಳ ವಿಶೇಷ ಸಂರಕ್ಷಣಾ ಕ್ರಮಗಳನ್ನು ಒಳಗೊಂಡಿದೆ. ಈ ಸಮಾವೇಶವು ಮಕ್ಕಳ ಹಕ್ಕುಗಳ ಆಧಾರದ ಮೂಲತತ್ವಗಳನ್ನು ಹೊಂದಿದ್ದು, ಯಾವುದೇ ತಾರತಮ್ಯವಿಲ್ಲದೆ ಮಕ್ಕಳ ಸಕ್ರಿಯ, ಮುಕ್ತ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆ ಮತ್ತು ನಿರ್ಣಯಿಸುವಿಕೆಯನ್ನು ದೇಶಗಳು ಉತ್ತೇಜಿಸಬೇಕು ಎಂಬುದಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡುವುದು, ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯುವುದು ಹಾಗೂ ಅವರ ಪಾಲನೆ ಪೋಷಣೆ ಮಾಡುವುದು ಪ್ರತಿಯೊಂದು ದೇಶದ ಜವಾಬ್ದಾರಿಯಾಗಿದೆ.

ಭಾರತದಲ್ಲಿ ಮಕ್ಕಳ ಕಾನೂನು ಮತ್ತು ಸಾಂವಿಧಾನಿಕ ನಿಬಂಧನೆಗಳು:

ಭಾರತದ ಸಂವಿಧಾನವು ಎಲ್ಲಾ ಮಕ್ಕಳ ಮೂಲಭೂತ ಹಕ್ಕುಗಳನ್ನು ಮತ್ತು ಅಗತ್ಯಗಳನ್ನು ರಕ್ಷಿಸುವ ಪ್ರಾಥಮಿಕ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ವಿಧಿಸಿದೆ. ಅವುಗಳಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ, ಮಕ್ಕಳಿಗೆ ಅನ್ವಯಿಸುವ ಕಾರ್ಮಿಕ ಕಾನೂನುಗಳ ಕಾಯ್ದೆ, ಬಾಲಕಾರ್ಮಿಕರ ನಿಯಂತ್ರಣ ಮತ್ತು ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಆರೈಕೆ ಮತ್ತು ರಕ್ಷಣೆಗೆ ಸಂಬಂಧಿಸಿದ ಜುವೆನೈಲ್ ಜಸ್ಟಿಸ್ ಆಕ್ಟ್ ಮತ್ತು ಭಾರತದ ದಂಡ ಸಂಹಿತೆಯಲ್ಲಿ ಮಕ್ಕಳಿಗೆ ಅನ್ವಯಿಸುವ ಕಾನೂನುಗಳು ಪ್ರಮುಖವಾದವು. ಇವುಗಳ ಜೊತೆಗೆ ಮಕ್ಕಳ ಹಕ್ಕುಗಳ ಕಾಯ್ದೆಯನ್ನು ರಕ್ಷಿಸಲು ಆಯೋಗವನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಚಿಸಿದ್ದು, ಅದಕ್ಕೆ ನಿರ್ದಿಷ್ಟ ಕಾರ್ಯ ಮತ್ತು ಅಧಿಕಾರಗಳನ್ನು ಸೂಚಿಸಿದೆ.

ಮಕರ ರಾಶಿಯ ಮಕ್ಕಳ ಬಗ್ಗೆ ಇವೆಲ್ಲ ನಿಮಗೆ ಗೊತ್ತಿದೆಯೆ?

ಇವುಗಳಲ್ಲದೆ ಮಕ್ಕಳ ಬದುಕುಳಿಯುವಿಕೆ, ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಹಲವಾರು ಮಕ್ಕಳ ಕೇಂದ್ರಿತ ನೀತಿಗಳನ್ನು ಅನುಷ್ಠಾನಗೊಳಿಸಿದೆ. ಇಷ್ಟೆಲ್ಲಾ ಕಾಯ್ದೆ ಕಾನೂನು ಸೌಕರ್ಯಗಳಿದ್ದರೂ ಸಹ ನಮ್ಮ ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಅಪೌಷ್ಟಿಕತೆ, ಬಾಲಕಾರ್ಮಿಕತೆ, ಮಕ್ಕಳ ಆತ್ಮಹತ್ಯೆ ಪ್ರಕರಣಗಳು, ಮಕ್ಕಳ ಕಳ್ಳಸಾಗಣೆ, ಚಿಕ್ಕವಯಸ್ಸಿನಲ್ಲಿ ವಿವಾಹ, ಬಾಲಾಪರಾಧ, ನವಜಾತ ಶಿಶುವಿನ ಮರಣ ಇತ್ಯಾದಿ ಸಮಸ್ಯೆಗಳು ಮಕ್ಕಳ ಹಕ್ಕುಗಳ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ. ಮಕ್ಕಳ ಜೀವನದಲ್ಲಿ ಪ್ರಮುಖ ಪಾತ್ರವಹಿಸುವ ಅಂಶಗಳೆಂದರೆ ಮಹಿಳೆ(ತಾಯಿ), ಆರೋಗ್ಯ, ಶಿಕ್ಷಣ, ಪರಿಸರ, ಸಾಮಾಜಿಕ ಭದ್ರತೆ, ಸಮಾಜ ಮತ್ತು ಸರ್ಕಾರ.

ಮಹಿಳೆ ಮತ್ತು ಆರೋಗ್ಯ:

ಮಕ್ಕಳು ಎಂದಾಕ್ಷಣ ನೆನಪಾಗುವುದು ಮಹಿಳೆಯರು, ಮಕ್ಕಳ ಹಕ್ಕುಗಳು ನಿಕಟವಾಗಿ ಮಹಿಳೆಯರಿಗೆ ಸಂಬಂಧಿಸಿದ್ದು. ಅವರ ಅಳಿವುಉಳಿವು ಆರೋಗ್ಯವಂತ ಕುಟುಂಬವನ್ನು ಅವಲಂಬಿಸಿರುತ್ತದೆ. ಏಕೆಂದರೆ ತಾಯಿಯ ಗರ್ಭದಲ್ಲಿರುವಾಗಲೇ ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಯು ಪ್ರಾರಂಭವಾಗುತ್ತದೆ. ಈ ಬೆಳವಣಿಗೆಯು ಮಹಿಳೆಗೆ ಇರುವ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದ ಮೇಲೆ ಅವಲಂಬಿತವಾಗಿರುತ್ತದೆ.

ಭಾರತದಂತಹ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಲ್ಲಿ ಎದ್ದು ಕಾಣುವ ಅಸಮಾನತೆ, ಸಾಮಾಜಿಕ ಮತ್ತು ಆರ್ಥಿಕ ದೌರ್ಜನ್ಯ, ಬಡತನ, ಅನಕ್ಷರತೆ, ಸಣ್ಣ ವಯಸ್ಸಿನಲ್ಲಿ ವಿವಾಹ, ಬೇಗ ಮಕ್ಕಳನ್ನು ಪಡೆಯುವುದು, ರಕ್ತಹೀನತೆ ಮತ್ತು ಮೂಲಸೌಕರ್ಯಗಳ ಕೊರತೆ ಇತ್ಯಾದಿ ಕಾರಣಗಳಿಂದ ಮಕ್ಕಳ ಹಕ್ಕುಗಳನ್ನು ಸರಿಯಾದ ರೀತಿಯಲ್ಲಿ ಪೋಷಿಸಿ ಬೆಳಸಲು ಸಾಧ್ಯವಾಗುತ್ತಿಲ್ಲ.

ಮಕ್ಕಳ ಜೀವನದಲ್ಲಿ ಮೊದಲ 6 ವರ್ಷಗಳು ಅತ್ಯಂತ ನಿರ್ಣಾಯಕ ಹಂತವಾಗಿದ್ದು, ಈ ಸಮಯದಲ್ಲಿ ಅವರಿಗೆ ಸೂಕ್ತವಾದ ಚುಚ್ಚುಮದ್ದು, ಆರೋಗ್ಯ ತಪಾಸಣೆ, ಸ್ವಚ್ಫ ಮತ್ತು ಸುರಕ್ಷಿತ ಪರಿಸರ, ಶುದ್ಧ ಕುಡಿಯುವ ನೀರು, ಶಾಲಾಪೂರ್ವ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಾಕಷ್ಟು ಪೌಷ್ಠಿಕಾಂಶ ನೀಡುವುದು ಬಹುಮುಖ್ಯ. ಪೌಷ್ಠಿಕಾಂಶದ ಕೊರತೆಯಿಂದ ರಕ್ತಹೀನತೆಯಲ್ಲಿ ಬಳಲುತ್ತಿರುವ ತಾಯಿಯು ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಾಳೆ.

2017ರ ಗ್ಲೋಬಲ್ ನ್ಯೂಟ್ರಿಷನ್ ವರದಿಯು, ಭಾರತದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಅರ್ಧಕ್ಕಿಂತಲೂ ಹೆಚ್ಚಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದೆ. ಇದಕ್ಕೆ ಪುಷ್ಠಿ ನೀಡುವಂತೆ ಎನ್.ಎಫ್.ಎಚ್.ಎಸ್ 2015-16ರ ವರದಿಯು ಭಾರತದಲ್ಲಿ ನವಜಾತ ಶಿಶುವಿನ ಮರಣದರ 41, ಐದು ವರ್ಷ ಒಳಗಿನ ಮಕ್ಕಳ ಮರಣದರವು 50 ಇದೆ. ಹಾಗೆಯೇ 15ರಿಂದ 49 ವಯಸ್ಸಿನ ಶೇ.50.3ರಷ್ಟು ಗರ್ಭಿಣಿ ಮಹಿಳೆಯರು ಮತ್ತು 6ರಿಂದ 59 ತಿಂಗಳ ಶೇ.58.4ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದರೆ, ಕರ್ನಾಟಕದಲ್ಲಿ ಇದರ ಪ್ರಮಾಣ ಅನುಕ್ರಮವಾಗಿ ಶೇ. 45.4 ಮತ್ತು 60.9ರಷ್ಟಿದೆ.

6ರಿಂದ 23 ತಿಂಗಳ ಮಕ್ಕಳಲ್ಲಿ ಕೇವಲ ಶೇ.9.6ರಷ್ಟು ಮಕ್ಕಳು ಸಾಕಷ್ಟು ಪೂರಕ ಆಹಾರವನ್ನು ಪಡೆಯುತ್ತಿವೆ (ಕರ್ನಾಟಕದಲ್ಲಿ ಶೇ.8.2ರಷ್ಟಿದೆ), 5 ವರ್ಷ ಒಳಗಿನ ಶೇ.35.7ರಷ್ಟು, ಕರ್ನಾಟಕದಲ್ಲಿ ಶೇ.35.2ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ, 12ರಿಂದ 23 ತಿಂಗಳ ಶೇ.62ರಷ್ಟು ಮಕ್ಕಳು ಪೂರ್ಣ ಲಸಿಕೆಯನ್ನು ಪಡೆದಿವೆ. ಇವುಗಳನ್ನು ಗಮನಿಸಿದಾಗ ಕಂಡು ಬರುವ ಪ್ರಮುಖ ಅಂಶವೆಂದರೆ ಆಹಾರ ಮತ್ತು ಆರೋಗ್ಯ ಒಂದಕ್ಕೊಂದು ಪೂರಕ ಸಂಬಂಧ ಹೊಂದಿದ್ದು, ಉತ್ತಮ ಪೌಷ್ಠಿಕಾಂಶದ ಆಹಾರವನ್ನು ಒದಗಿಸುವುದರಿಂದ ಆರೋಗ್ಯ ವ್ಯವಸ್ಥೆಯ ಮೇಲೆ ಕಡಿಮೆ ಹೊರೆ ಬೀಳುತ್ತದೆ.

ಶಿಕ್ಷಣ ಮತ್ತು ಜೀವನ ಕ್ರಮ:

ಶಿಕ್ಷಣವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತ ಅವಶ್ಯಕತೆಯಾಗಿದೆ. 6ರಿಂದ 14 ವರ್ಷ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ನೀಡುವ ಗುರಿಉದ್ದೇಶವನ್ನು ಹೊಂದಿದ ಕಾಯ್ದೆಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಸ್ಪಲ್ಪ ಮಟ್ಟಿನ ಪ್ರಗತಿಯನ್ನು ಸಹ ಕಾಣುತ್ತಿದೆ. ಆದರೆ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯಗಳನ್ನು ಉನ್ನತದರ್ಜೆಗೇರಿಸುವತ್ತಾ ಸರ್ಕಾರವು ಚಿಂತಿಸಬೇಕು. ಶಾಲಾ ಮೂಲಸೌಕರ್ಯಗಳ ಪರಿಶೀಲನೆಯನ್ನು ಪ್ರತಿವರ್ಷವು ಮಾಡಬೇಕು. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯ ಸದಸ್ಯರನ್ನು ಸಬಲೀಕರಿಸಬೇಕು.

14ರಿಂದ 18 ವರ್ಷ ಮಕ್ಕಳ ಜೀವನದಲ್ಲಿ ಬಹು ಪ್ರಮುಖವಾದ ಹಂತವಾಗಿದ್ದು, ದೈಹಿಕವಾಗಿ ಮತ್ತು ಮಾನಸಿಕವಾಗಿ ಮಕ್ಕಳು ಪ್ರಬುದ್ಧತೆಗೆ ಬರುವ ವಯಸ್ಸಾಗಿದೆ. ಈ ವಯಸ್ಸಿನ ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ಹದಿಹರೆಯದ ಶಿಕ್ಷಣ, ಅಪಾಯಕಾರಿ ಆರೋಗ್ಯ ನಡವಳಿಕೆಗಳ ಬಗ್ಗೆ ಅರಿವು, ಉತ್ತಮ ಜೀವನ ಶೈಲಿಯ ಅರಿವು ಮೂಡಿಸುವುದರ ಜೊತೆಗೆ ಪೂರಕ ವಾತಾವರಣ ಕಲ್ಪಿಸಬೇಕು. ಮಕ್ಕಳಿಗೆ ಶಾಲೆಗಳಲ್ಲಿ ದೊರೆಯುವ ಮೂಲ ಸೌಕರ್ಯಗಳ ಮಾಹಿತಿಯನ್ನು ಪೋಷಕರಿಗೆ ನೀಡಬೇಕು. ಸಾರ್ವಜನಿಕರು ಅವುಗಳನ್ನು ಮೇಲ್ವಿಚಾರಣೆ ಮಾಡುವಂತೆ ಮಾಡಬೇಕು.

ಮಕ್ಕಳ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ:

ಮಕ್ಕಳ ವಿರುದ್ಧ ಅಪರಾಧ ಮತ್ತು ಮಕ್ಕಳು ಮಾಡಿದ ಅಪರಾಧ ಮಾಹಿತಿಯನ್ನು ನ್ಯಾಷಿನಲ್ ಕ್ರೈಂ ರೆಕಾರ್ಡ್ ಬ್ಯೂರೋ(ಎನ್.ಸಿ.ಆರ್.ಬಿ) ತಿಳಿಸುತ್ತದೆ. ಇದರ ಪ್ರಕಾರ ಮಕ್ಕಳ ಅಪರಾಧದ ಪ್ರಮಾಣ 2.1ರಷ್ಟಿದೆ. ಬಡತನ, ಅನಕ್ಷರತೆ, ಪೂರಕ ಸಂದರ್ಭಗಳು, ದುಷ್ಚಟಗಳ ಕಾರಣದಿಂದಾಗಿ ಮಕ್ಕಳು ಅಪರಾಧಗಳಿಗೆ ಒಳಗಾಗುತ್ತಿದ್ದಾರೆ. ಮಕ್ಕಳಲ್ಲಿ ಆತ್ಮ ಸ್ಥೈರ್ಯ ಕಡಿಮೆಯಾಗುತ್ತಿದ್ದು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಸಹ ಈ ವರದಿಯಲ್ಲಿ ನೋಡಬಹುದು. ಒಟ್ಟು 9408 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 1468 ಮಕ್ಕಳು 14 ವರ್ಷ ವಯಸ್ಸಿನ ಒಳಗಿನವರಾಗಿದ್ದರೆ ಉಳಿದ 7940 ಮಕ್ಕಳು 14ರಿಂದ 18 ವಯಸ್ಸಿನವರಾಗಿದ್ದಾರೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಯ ಪ್ರಕರಣಗಳು ಸಮಾಜದ ಅಭಿವೃದ್ಧಿಗೆ ಅಂಟಿದ ಬಹುದೊಡ್ಡ ಕಪ್ಪುಚುಕ್ಕೆ.

ಮಕ್ಕಳೇ ಮನೆಯ ಮಾಣಿಕ್ಯ, ಮಕ್ಕಳೇ ದೇಶದ ಸಂಪತ್ತು, ಮಕ್ಕಳೇ ಆಸ್ತಿ ಎಂಬ ಮಾತುಗಳನ್ನು ಕೇಳುತ್ತಾ ಬರುತ್ತಿದ್ದೇವೆ. ಆದರೆ ಎಲ್ಲಾ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸುವ ಜವಾಬ್ದಾರಿಯನ್ನು ತಂದೆ, ತಾಯಿ, ಶಿಕ್ಷಕ ಮತ್ತು ಸಮಾಜ ತೆಗೆದುಕೊಳ್ಳಬೇಕು. ಮಕ್ಕಳಿಗೆ ತಮ್ಮ ಪ್ರತಿಭೆಗಳನ್ನು ಬೆಳಸಿಕೊಳ್ಳಲು ಸಮಾನ ಅವಕಾಶ ನೀಡಬೇಕು. ಮಕ್ಕಳನ್ನು ದೇಶದ ಆಸ್ತಿ ಎಂದು ಪ್ರತಿಬಿಂಬಿಸುವ ನಾವು ಮಕ್ಕಳ ಹಕ್ಕುಗಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು, ಮಕ್ಕಳಿಗೆ ಆಸ್ತಿ ಮಾಡುವ ಪೋಷಕರಿಗಿಂತ ಮಕ್ಕಳನ್ನು ಆಸ್ತಿಯನ್ನಾಗಿ ಬೆಳಸುವ ಪೋಷಕರನ್ನು ದೇಶ ಬೆಂಬಲಿಸಬೇಕು.

English summary
Childrens Day Special story : Children are the asset of India. We have to safeguard, empower them with proper education and nourishment. An article on the birthday of Jawaharlal Nehru by Poornima GR, programme officer, public affairs center.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X