• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಷಾ ಸಮಾನತೆ ಮತ್ತು ಹಕ್ಕಿಗಾಗಿ ಬೆಂಗಳೂರು ನಿರ್ಣಯ

By ಅರುಣ್ ಜಾವಗಲ್
|

ಭಾರತ ಒಕ್ಕೂಟದ ಹಲವು ರಾಜ್ಯಗಳಲ್ಲಿ ಭಾಷಾ ಹಕ್ಕುಗಳು ರಾಜಕೀಯವಾಗಿ ಮುಖ್ಯವಾಹಿನಿಯ ವಿಷಯಗಳಾಗುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಹಲವಾರು ರಾಜ್ಯಗಳು ತಮ್ಮ ನುಡಿಯ ಹಿತ ಕಾಯುವಂತಹ ಕಾನೂನುಗಳನ್ನು ರಚಿಸುವ ಹೆಜ್ಜೆ ಇಟ್ಟಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪಶ್ಚಿಮ ಬಂಗಾಳ ಮತ್ತು ಗುಜರಾತ್ ರಾಜ್ಯಗಳು ತಮ್ಮ ರಾಜ್ಯದಲ್ಲಿನ ಸ್ಥಳೀಯ, ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಶಾಲೆಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸುವ ಘೋಷಣೆ ಹೊರಡಿಸಿವೆ, ಇಲ್ಲವೇ ಕಾನೂನು ಜಾರಿಗೆ ತಂದಿದೆ. ಕೇರಳದ ಸರ್ಕಾರ ಕೇರಳದಲ್ಲಿನ ವಲಸಿಗರಿಗೆ ಮಲಯಾಳಂ ಕಲಿಸುವ ಬಗ್ಗೆ ರಾಜ್ಯವ್ಯಾಪಿ ಯೋಜನೆಯೊಂದಕ್ಕೆ ಚಾಲನೆ ನೀಡಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಮೈಲಿಗಲ್ಲುಗಳಲ್ಲಿ ಒಡಿಯಾ ಭಾಷೆಯನ್ನು ಕೈಬಿಡುವ ಹಾಗೂ ಪಂಜಾಬಿ ಭಾಷೆಯನ್ನು ಕಡೆಗಣಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೆಜ್ಜೆಯನ್ನು ಕ್ರಮವಾಗಿ ಓಡಿಶಾ ಮತ್ತು ಪಂಜಾಬ್ ಸರ್ಕಾರಗಳು ಪ್ರತಿಭಟಿಸುವ ಮೂಲಕ ಪ್ರಾಧಿಕಾರ ತನ್ನ ಹೆಜ್ಜೆಯಿಂದ ಹಿಂದೇಟು ಹಾಕುವಂತೆ ಮಾಡಿವೆ. ಗೋವಾ ರಾಜ್ಯದಲ್ಲಿ ಕೆಳ ಹಂತದ ನ್ಯಾಯಾಲಯಗಳಲ್ಲಿ ಕೊಂಕಣಿ ಭಾಷೆ ತಿಳಿದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಭೋಜಪುರಿ ಮತ್ತು ರಾಜಸ್ಥಾನಿ ಭಾಷೆಗಳನ್ನು ಸಂವಿಧಾನದ ಎಂಟನೆಯ ಶೆಡ್ಯುಲಿಗೆ ಸೇರಿಸುವ ಬೇಡಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಕರ್ನಾಟಕದಲ್ಲಿ ತುಳು ಭಾಷಿಕ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಈಗ ತುಳು ಒಂದು ಭಾಷೆಯಾಗಿ ಕಲಿಸಲಾಗುತ್ತಿದೆ. ರಾಜಭೊಂಗ್ಶಿ ಮತ್ತು ಕುರುಖ್ ಭಾಷೆಗಳು ಪಶ್ಚಿಮ ಬಂಗಾಳದಲ್ಲಿ ಈಗ ಅಧಿಕೃತ ಭಾಷೆಗಳಾಗಿವೆ. ಓಡಿಶಾ ಸರ್ಕಾರ ಅಲ್ಲಿನ ಬುಡಕಟ್ಟು ಭಾಷೆಗಳಲ್ಲಿ ಪ್ರಾಥಮಿಕ ಶಿಕ್ಷಣ ಕಲ್ಪಿಸಲು ಈಗ ಮುಂದಾಗಿದೆ.

ಈ ರೀತಿ ಭಾಷಾ ಕೇಂದ್ರಿತವಾಗಿ ರಾಜಕೀಯ, ನಾಗರಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿನ ಕ್ಷಿಪ್ರ ಬೆಳವಣಿಗೆಗಳು ಮತ್ತು ರಾಜ್ಯ ಸರ್ಕಾರಗಳ ನಿರ್ಧಾರಗಳು ಖಂಡಿತ ಆಕಸ್ಮಿಕವಲ್ಲ. ಹಲವು ರಾಜ್ಯಗಳಲ್ಲಿನ ಈ ಬೆಳವಣಿಗೆಗಳು ಒಂದು ಶಕ್ತಿಯಂತೆ ಭಾರತೀಯರನ್ನು ಒಗ್ಗೂಡಿಸುತ್ತಿದೆ ಮತ್ತು ಇನ್ನಷ್ಟು ಬಲ ಪಡೆಯುತ್ತಿದೆ. ಇನ್ನೊಂದು ಹೊರಗಿನ ಭಾಷೆಯ ಹೇರಿಕೆಯಿಂದ ಸ್ಥಳೀಯ ಮೂಲ ಭಾಷೆಗಳನ್ನು ಕಾಪಾಡಿಕೊಳ್ಳಬೇಕು ಅನ್ನುವ ಚಿಂತನೆಯೇ ಇದೆಲ್ಲವನ್ನು ಬೆಸೆಯುತ್ತಿರುವ ಕೊಂಡಿಯಾಗಿದೆ.

ಭಾರತ ಒಕ್ಕೂಟದ ಮಟ್ಟದಲ್ಲಿ ಇದಕ್ಕಿರುವ ಅರ್ಥವೊಂದೇ - ಅದುವೇ ಭಾಷಾ ಸಮಾನತೆ. ಬಹು ಭಾಷಿಕ ಒಕ್ಕೂಟ ವ್ಯವಸ್ಥೆಯಾದ ಭಾರತದ ಒಗ್ಗಟ್ಟು ಮತ್ತು ಅಖಂಡತೆಯನ್ನು ಖಾತರಿಪಡಿಸುವ ಅಂಟು ಈ ಭಾಷಾ ಸಮಾನತೆಯಾಗಿದೆ. ಜಾಗತಿಕ ಮಟ್ಟದಲ್ಲಿ ಇಂಗ್ಲಿಶ್ ಯಜಮಾನಿಕೆ ಎಲ್ಲ ಭಾಷೆಗಳಿಗೂ ಒಂದು ದೊಡ್ಡ ಬೆದರಿಕೆಯಾಗಿದೆ. ಭಾರತದ ಒಕ್ಕೂಟದೊಳಗೆ ಈ ಯಜಮಾನಿಕೆಯನ್ನು ತಡೆಯುವ ಮತ್ತು ಭಾರತೀಯ ಭಾಷೆಗಳನ್ನು ಗಟ್ಟಿಗೊಳಿಸಿಕೊಳ್ಳುವ ಮತ್ತು ಆ ಮೂಲಕ ಬೇರೆ ಬೇರೆ ಭಾಷಿಕರಿಗೆ ಶಕ್ತಿ ತುಂಬುವ ಕೆಲಸ ಮಾಡಲು ಭಾಷಾ ಸಮಾನತೆ ಅತ್ಯಂತ ಮುಖ್ಯವಾಗಿದೆ.

ಬೇರೆ ಬೇರೆ ರಾಜ್ಯಗಳಲ್ಲಿ ಸ್ಥಳೀಯ ಭಾಷಾ ಹಕ್ಕುಗಳ ಸುತ್ತ ಸಂಘ ಸಂಸ್ಥೆಗಳ ಹುಟ್ಟು, ಬೆಳವಣಿಗೆ ಮತ್ತು ಪ್ರಭಾವದಲ್ಲಿನ ಹೆಚ್ಚಳವನ್ನು ಈಗ ಗಮನಿಸಬಹುದಾಗಿದೆ. ಒಂದು ರಾಜ್ಯದ ಭಾಷಿಕ ಹಕ್ಕುಗಳ ಹೋರಾಟಕ್ಕೆ ಬೇರೆ ರಾಜ್ಯಗಳ ಭಾಷಿಕ ಹಕ್ಕುಗಳ ಸುತ್ತಲಿನ ಗುಂಪುಗಳ ಸ್ಪಂದಿಸುವಿಕೆ ಈ ಹಿಂದೆಂದೂ ಕಾಣದ ಒಂದು ಬೆಳವಣಿಗೆಯಾಗಿದೆಯಲ್ಲದೆ ವಿವಿಧತೆಯಲ್ಲಿ ಏಕತೆ ಅನ್ನುವ ಆಶಯವನ್ನು ಎತ್ತಿ ಹಿಡಿಯುತ್ತಿವೆ.

ಬೆಂಗಳೂರು ಮೆಟ್ರೋದಲ್ಲಿ ಕರ್ನಾಟಕ ಸರ್ಕಾರದ ಭಾಷಾ ನೀತಿಯನ್ನು ಪಾಲಿಸಬೇಕೆಂದು ನಡೆದ ಹೋರಾಟಕ್ಕೆ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯದ ಭಾಷಾ ಹಕ್ಕುಗಳ ಗುಂಪುಗಳಿಂದ ಬೆಂಬಲ ವ್ಯಕ್ತವಾಗಿತ್ತು. ಈ ಎಲ್ಲ ಗುಂಪುಗಳು ಒಟ್ಟಾಗಿ ಒಂದೆಡೆ ಬಂದಾಗ ಅವರೆಲ್ಲರಿಗೂ ಇದ್ದ ಸಾಮಾನ್ಯ ಅಂಶವೆಂದರೆ ಭಾರತದ ಒಕ್ಕೂಟದ ಮಟ್ಟದಲ್ಲಿ ಭಾರತೀಯ ಭಾಷೆಗಳ ಸಮಾನತೆಯ ಬೇಡಿಕೆ.

ಭಾರತೀಯ ಭಾಷೆಗಳ ಸಮಾನತೆಗಾಗಿ ಕೆಲಸ ಮಾಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಸಂಸ್ಥೆ (ಕ್ಯಾಂಪೇನ್ ಫಾರ್ ಲ್ಯಾಂಗ್ವೇಜ್ ಈಕ್ವಾಲಿಟಿ ಅಂಡ್ ರೈಟ್ಸ್) Campaign for Language Equality and Rights (CLEAR). 2015ರಲ್ಲಿ ಹೊರ ಬಂದ ಚೆನ್ನೈ ಭಾಷಾ ಹಕ್ಕುಗಳ ಘೋಷಣೆ ಒಂದು ಐತಿಹಾಸಿಕ ಮೊದಲ ಹೆಜ್ಜೆಯಾಗಿತ್ತು. ಇದು ಮುಂದೆ 2016ರಲ್ಲಿ ದೆಹಲಿ ಭಾಷಾ ಹಕ್ಕುಗಳ ಘೋಷಣೆಗೆ ಬುನಾದಿಯಾಯಿತು.

ಈ ಹೆಜ್ಜೆಯನ್ನು ಮುಂದುವರೆಸುತ್ತ, ಭಾರತದಲ್ಲಿ ಭಾಷಾ ಸಮಾನತೆ ಮತ್ತು ಹಕ್ಕುಗಳ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅಂತರ್ ರಾಷ್ಟ್ರೀಯ ತಾಯ್ನುಡಿ ದಿನವಾದ 21ನೇ ಫೆಬ್ರವರಿಯಂದು ಬೆಂಗಳೂರಿನಲ್ಲಿ ಸೇರಿದ ಇಪ್ಪತ್ತೆರಡು ಭಾಷಿಕ ಪ್ರತಿನಿಧಿಗಳಾದ ನಾವು ಒಟ್ಟಾಗಿ ಈ ಕೆಳಗಿನ ಬೇಡಿಕೆಗಳಿಗಾಗಿ ಹೋರಾಡುವ ನಿರ್ಣಯ ಕೈಗೊಳ್ಳುತ್ತಿದ್ದೇವೆ:

1. ಸಂವಿಧಾನದ ಎಂಟನೆಯ ಶೆಡ್ಯೂಲಿಗೆ ಸೇರಿಸಬೇಕು ಅನ್ನುವ ಬೇಡಿಕೆಯನ್ನು ಭಾರತ ಸರ್ಕಾರದ ಮುಂದೆ ಇಟ್ಟಿರುವ ಭಾಷೆಗಳನ್ನು ಒಂದು ನಿಗದಿತ ಕಾಲದೊಳಗೆ ಸೇರಿಸಬೇಕು. ಎಂಟನೆಯ ಶೆಡ್ಯೂಲಿಗೆ ಯಾವುದೇ ಭಾಷೆಯನ್ನು ಸೇರಿಸುವ ಕುರಿತಂತೆ ಒಂದು ಎಲ್ಲರನ್ನು ಒಳಗೊಳ್ಳುವ, ಪಾರದರ್ಶಕವಾದ ನೀತಿಯನ್ನು ಭಾರತ ಸರ್ಕಾರ ಹೊರತರಬೇಕು.

2. ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರುವ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನವಿತ್ತು ಭಾರತ ಸರ್ಕಾರದ ಅಧಿಕೃತ ಭಾಷೆಗಳಾಗಿ ಘೋಷಿಸಬೇಕು.

3. ಒಂದು ರಾಜ್ಯದ ಸ್ಥಳೀಯ ಭಾಷೆ(ಗಳು)ಯನ್ನು ಪ್ರಾಥಮಿಕ ಶಿಕ್ಷಣದ ಭಾಷೆಯಾಗಿಸಬೇಕು. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಸ್ಥಳೀಯ ಭಾಷೆಗಳಲ್ಲಿ ತರುವ ಪ್ರಯತ್ನಕ್ಕೆ ಬೆಂಬಲ ನೀಡಬೇಕು. ಇದರ ಹರಡುವಿಕೆಗೆ ಸೂಕ್ತ ಅನುದಾನ ಒದಗಿಸಬೇಕು.

4. ಆಯಾ ರಾಜ್ಯದಲ್ಲಿನ ಎಲ್ಲ ಶಾಲೆಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆ(ಗಳು)ಯನ್ನು ಕಡ್ಡಾಯವಾಗಿ ಒಂದು ವಿಷಯವಾಗಿ ಕಲಿಸಬೇಕು.

5. ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಪರೀಕ್ಷೆ ಮತ್ತು ಸಂದರ್ಶನದ ಅವಕಾಶವನ್ನು ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರುವ ಎಲ್ಲ ಭಾಷೆಗಳಲ್ಲೂ ಕಡ್ಡಾಯವಾಗಿ ಒದಗಿಸಬೇಕು.

6. ಕೇಂದ್ರ ಸರ್ಕಾರಿ ಸ್ವಾಮ್ಯದ ಎಲ್ಲ ಹಂತದ ಉದ್ಯೋಗ ನೇಮಕಾತಿಯ ಪ್ರವೇಶಪರೀಕ್ಷೆ ಮತ್ತು ಸಂದರ್ಶನದ ಅವಕಾಶವನ್ನು ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರುವ ಎಲ್ಲ ಭಾಷೆಗಳಲ್ಲೂ ಕಡ್ಡಾಯವಾಗಿ ಒದಗಿಸಬೇಕು.

7. ಕೇಂದ್ರ ಸರ್ಕಾರ ಸೂಕ್ತ ಕ್ರಮಗಳ ಮೂಲಕ ಎಲ್ಲ ಭಾಷೆಗಳಿಗೂ ಸಮಾನ ಪ್ರೋತ್ಸಾಹ ನೀಡಬೇಕು.

8. ಸಂವಿಧಾನದ ಎಂಟನೆಯ ಶೆಡ್ಯೂಲಿನಲ್ಲಿರದ ಭಾಷೆಗಳ ಉಳಿವು ಮತ್ತು ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡಬೇಕು.

9. ಒಂದು ರಾಜ್ಯದಲ್ಲಿನ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳ ಆಡಳಿತ ಮತ್ತು ಕಾರ್ಯನಿರ್ವಹಣೆಯನ್ನು ಅಲ್ಲಿನ ಸ್ಥಳೀಯ ಭಾಷೆ(ಗಳು)ಯಲ್ಲಿ ಕಡ್ಡಾಯವಾಗಿ ನಡೆಸಬೇಕು.

10. ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ನೀಡುವ ಮಾಹಿತಿ ಮತ್ತು ಸೇವೆಗಳು ಕಡ್ಡಾಯವಾಗಿ ಆಯಾ ರಾಜ್ಯದ ಭಾಷೆ(ಗಳು)ಯಲ್ಲಿ ಇರುವುದನ್ನು ಖಾತರಿ ಪಡಿಸುವ ಕಾನೂನನ್ನು ರೂಪಿಸಬೇಕು.

11. ಒಂದು ರಾಜ್ಯದ ಅಧಿಕೃತ ಭಾಷೆ(ಗಳು)ಯನ್ನು ಅಲ್ಲಿನ ಹೈಕೋರ್ಟಿನ ಆಡಳಿತದ ಭಾಷೆ(ಗಳು)ಯಾಗಿಯೂ ಸೇರಿಸಬೇಕು.

12. ಕೇಂದ್ರ ಸರ್ಕಾರ ಯಾವುದೇ ಭಾಷೆಗೆ ಮಾನ್ಯತೆ ನೀಡುವಾಗ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಒಪ್ಪಲಾದ ವೈಜ್ಞಾನಿಕವಾದ ಸೂತ್ರಗಳನ್ನು ಆಧಾರವಾಗಿಟ್ಟುಕೊಳ್ಳಬೇಕು.

13. ಯಾವುದೇ ಭಾಷಿಕರು ತಮ್ಮ ನುಡಿಯ ಬಳಕೆಗೆ ಯಾವ ಲಿಪಿ ಇಲ್ಲವೇ ಲಿಪಿಗಳನ್ನು ಬಳಸಬೇಕು ಅನ್ನುವ ನಿರ್ಧಾರವನ್ನು ಸರ್ಕಾರದ ಹಸ್ತ ಕ್ಷೇಪವಿಲ್ಲದೇ ಆಯಾ ಭಾಷಿಕರ ನಿರ್ಧಾರಕ್ಕೆ ಬಿಟ್ಟುಕೊಡಬೇಕು.

14. ಸ್ಥಳೀಯ ಭಾಷೆ(ಗಳು)ಗೆ ಸೂಕ್ತ ಪ್ರೋತ್ಸಾಹ ನೀಡಲು ರಾಜ್ಯ ಭಾಷಾ ಪ್ರಾಧಿಕಾರವನ್ನು ರಾಜ್ಯ ಸರ್ಕಾರಗಳು ಅಸ್ತಿತ್ವಕ್ಕೆ ತರಬೇಕು ಹಾಗೂ ಅದರ ಅನುಷ್ಠಾನಕ್ಕೆ ಸೂಕ್ತ ಕಾನೂನು ರೂಪಿಸಬೇಕು.

15. ಅಳಿವಿನ ಅಂಚಿನಲ್ಲಿರುವ ಭಾಷೆಗಳ ಉಳಿವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಅನುದಾನದ ಜೊತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.

16. ಕೇಂದ್ರ ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳು ಶಿಕ್ಷಣದಲ್ಲಿ ಎಲ್ಲ ಭಾಷೆಗಳನ್ನು ಸಮಾನವಾಗಿ ಪ್ರೋತ್ಸಾಹಿಸಬೇಕು.

ಈ ನಿರ್ಣಯಗಳಿಗೆ ಸಹಿ ಹಾಕಿರುವ ಎಲ್ಲರೂ ಹಾಗೂ ಕ್ಲಿಯರ್ ಸಂಸ್ಥೆ ಒಟ್ಟಾಗಿ ಈ ಮೇಲಿನ ಎಲ್ಲ ಬೇಡಿಕೆಗಳು ಈಡೇರಲು ಎಲ್ಲ ಹಂತದ ಪಾಲುದಾರರೊಂದಿಗೆ ಕೆಲಸ ಮಾಡುವ ನಿರ್ಣಯ ಕೈಗೊಂಡಿದ್ದೇವೆ. ಬೇರೆ ಬೇರೆ ಭಾಷಾ ಹಕ್ಕುಗಳ ಗುಂಪುಗಳಿಗೆ ಈ ಮೇಲಿನ ಗುರಿಗಳನ್ನು ತಲುಪಲು ಬೇಕಿರುವ ಸಹಾಯ, ಮಾರ್ಗದರ್ಶನ ನೀಡುವುದು ಇದರಲ್ಲಿ ಸೇರಿದೆ.

ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಶೈಕ್ಷಣಿಕ, ಸಾಮಾಜಿಕ, ಮಾಧ್ಯಮ, ನೌಕರರ ಒಕ್ಕೂಟ, ವಿದ್ಯಾರ್ಥಿ ಸಂಘಟನೆಗಳು, ಗ್ರಾಹಕ ಕೂಟಗಳು, ಕಾನೂನು ತಜ್ಞರು ಮತ್ತು ಜನಸಾಮಾನ್ಯರ ಜೊತೆಗೂಡಿ ಈ ಕೆಲಸಕ್ಕೆ ಮುಂದಾಗಲಿದ್ದೇವೆ. ಯಾವ ಬೇಡಿಕೆಗಳಿಗೆ ಈಗ ಕಾನೂನಿನ ಅಡೆತಡೆಗಳಿಲ್ಲವೋ ಅವುಗಳ ಅನುಷ್ಠಾನಕ್ಕೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.

ನಮ್ಮ ಕೆಲವು ಬೇಡಿಕೆಗಳಿಗೆ ಸಂವಿಧಾನ ತಿದ್ದುಪಡಿಯ ಅವಶ್ಯಕತೆ ಇಲ್ಲ. ಅಂತಹ ಬೇಡಿಕೆಗಳ ಈಡೇರಿಕೆಗೆ ಬೇಕಾದ ಕಾನೂನು ಕರಡು ರೂಪಿಸುವ ಕೆಲಸಕ್ಕೆ ನೆರವು ನೀಡುತ್ತೇವೆ. ಆದರೆ ಕೆಲವು ಬೇಡಿಕೆಗಳಿಗೆ ಸಂವಿಧಾನ ತಿದ್ದುಪಡಿಯ ಅವಶ್ಯಕತೆ ಇದೆ. ಅಂತೆಯೇ ಭಾಷಾ ಸಮಾನತೆ ಸಾಧ್ಯವಾಗಿಸುವ ಸಂವಿಧಾನ ತಿದ್ದುಪಡಿಯತ್ತ ನಮ್ಮ ಕೆಲಸಗಳು ಮುಂದುವರೆಯಲಿವೆ. ತದನಂತರ ಭಾಷಾ ಸಮಾನತೆ ಮತ್ತು ಹಕ್ಕುಗಳ ಕುರಿತ ಮಸೂದೆಯೊಂದು ಸಂಸತ್ತಿನಲ್ಲಿ ಜಾರಿಯಾಗುವತ್ತ ಕಾನೂನು ರೂಪಿಸುವ ಹಾಗೂ ಅದಕ್ಕೆ ಬೇಕಿರುವ ಬೆಂಬಲ ಕಲೆಹಾಕುವತ್ತ ನಾವು ಕೆಲಸ ಮಾಡುತ್ತೇವೆ.

English summary
Representatives and votaries of native language rights of 22 languages, on the occasion of International Mother Language Day 2018, that is 21st February, resolve to unitedly fight for the several demands in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more