ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮಾ ಗಾಂಧೀಜಿಯ ಕಾಣದ ಇನ್ನೊಂದು ಮುಖ

By ವಿವೇಕ ಪಟಗಾರ
|
Google Oneindia Kannada News

ಎಲ್ಲರಿಗೂ ತಿಳಿದಿರುವ ಹಾಗೆ ಅಕ್ಟೋಬರ್ 2 ಗಾಂಧಿ ಜಯಂತಿ. ಸಂಪೂರ್ಣ ದೇಶವೇ ನಾಳೆ ಗಾಂಧೀಜಿ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಿದೆ. ಈ ಒಂದು ದಿನವಾದರೂ ಕೆಲವಡೆ ಶ್ರಮಾದಾನ ಸರ್ವಧರ್ಮ ಪ್ರಾರ್ಥನೆ, ಗಾಂಧಿ ಟೋಪಿ ಹಾಕಿಕೊಂಡು ಅಲ್ಲಿಲ್ಲಿ ಭಾಷಣ ಮಾಡುವುದನ್ನು ನೋಡಬಹುದು. ಗಾಂಧೀಜಿ ಎಂದರೆ ಆವರು ಅಹಿಂಸೆಯ ಪ್ರತಿರೂಪ, ಅಹಿಂಸೆಯಿಂದಲ್ಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಂಥ ಮಹಾನುಭಾವರವರು. ಜಾತ್ಯತೀತ ವ್ಯಕ್ತಿ ಎಂದರೆ ಇದ್ದದ್ದು ಒಬ್ಬರೇ ಅವರೇ ಗಾಂಧಿ. ಗಾಂಧಿಯ ಬಗ್ಗೆ ಎಲ್ಲಾ ಕಡೆಯಿಂದಲ್ಲೂ ಹೆಚ್ಚಾಗಿ ಒಂದೇ ರೀತಿಯ ಭಾವನೆಗಳು ವ್ಯಕ್ತವಾಗುವವು.

ಇಂತಹ ಸಂದರ್ಭದಲ್ಲಿ ಗಾಂಧೀಯ ಬಗ್ಗೆ ಓಶೋ ರಜನೀಶರ ಅಭಿಪ್ರಾಯವನ್ನು ಓದಿದಾಗ ಗಾಂಧೀಜಿಯ ಇನ್ನೊಂದು ಮುಖದ ಪರಿಚಯವಾಗುವುದು. ಓಶೋ ಸಹಾ ಒಬ್ಬ ಅದ್ಬುತ ವ್ಯಕ್ತಿಯೇ. ಪ್ರೇಮಮಯ ಪ್ರಪಂಚಕ್ಕಾಗಿ ಹಂಬಲಿಸಿದವರು. ಅಂತಹ ಓಶೋ ರಜನೀಶರು ಗಾಂಧಿಯ ಬಗ್ಗೆ ಹೇಳಿದ ಒಂದೆರಡು ವಿಚಾರಗಳನ್ನು ನಾವು ಗಾಂಧಿ ಜಯಂತಿಯ ಈ ಸಂದರ್ಭದಲ್ಲಿ ತಿಳಿದುಕೊಳ್ಳುವುದು ಸೂಕ್ತ. ಗಾಂಧೀಯ ಬಗ್ಗೆ ಓಶೋನ ಅಭಿಪ್ರಾಯ ಈ ಕೆಳಗಿನಂತೆ ಇರುವುದು...

"ಹಿಂದೂ ಮುಸ್ಲೀಮರು ಬೇರೆಯಲ್ಲ. ಇಬ್ಬರೂ ಒಂದೇ, ಇಬ್ಬರ ನಡುವೆ ವ್ಯತ್ಯಾಸವಿಲ್ಲ ಎಂಬ ಗಾಂಧಿಯ ಹಾಡು ಶುದ್ಧ ಸುಳ್ಳು ಎಂಬುದು ಸಾಬೀತಾಗಿದೆ. ಇದಕ್ಕೆ ಗಾಂಧಿಯ ಮಗ ಹರಿದಾಸ್‌ನ ಉದಾಹರಣೆ ಸಾಕು. ಆತ ಹುಟ್ಟಿನಿಂದಲೇ ಬಂಡಾಯಗಾರನಾಗಿದ್ದ. ಆತನನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ತನ್ನ ತಂದೆಗಿಂತ ಆತ ಎಷ್ಟೋ ಮೇಲು.

Another face of Mahatma Gandhi, as seen by Osho

ಹರಿದಾಸ್ ಶಾಲೆಗೆ ಹೋಗಬಯಸಿದ್ದ. ಆದರೆ ಗಾಂಧಿ ಆತನಿಗೆ ಅನುಮತಿ ಕೊಡಲಿಲ್ಲ. ಶಾಲೆಯ ಶಿಕ್ಷಣ ಜನರನ್ನು ಕಲುಷಿತಗೊಳಿಸುತ್ತದೆ ಎಂಬುದು ಗಾಂಧಿಯ ನಂಬಿಕೆಯಾಗಿತ್ತು. ಹೀಗಾಗಿ ತನ್ನ ಮಕ್ಕಳಿಗೆ ಶಾಲೆಯ ಶಿಕ್ಷಣ ಬೇಡ ಎಂಬುದು ಆತನ ನಿಲುವಾಗಿತ್ತು. ತನ್ನ ಮಕ್ಕಳು ಧಾರ್ಮಿಕ ಗ್ರಂಥಗಳನ್ನು ಓದಲು ಶಕ್ಯವಾಗುವಂತೆ ತಾನೇ ಅವರಿಗೆ ಬೋಧಿಸುತ್ತೇನೆ ಎಂದು ಗಾಂಧಿ ಹೇಳುತ್ತಿದ್ದ. ಆದರೆ ಹರಿದಾಸ್ ಹಠಮಾರಿಯಾಗಿದ್ದ. ತನ್ನ ಓರಗೆಯ ಹುಡುಗರು ಕಲಿಯುವುದನ್ನು ತಾನೂ ಕಲಿಯಬೇಕು ಎಂದು ಹಠಹಿಡಿದಿದ್ದ. 'ಒಂದು ವೇಳೆ ನೀನು ಶಾಲೆಗೆ ಹೋದರೆ ನನ್ನ ಮನೆಯಲ್ಲಿ ನಿನಗೆ ಸ್ಥಾನವಿಲ್ಲ' ಎಂದು ಗಾಂಧಿ ಬೆದರಿಕೆ ಹಾಕಿದ.

ಅಹಿಂಸಾತ್ಮಕ ವ್ಯಕ್ತಿಯ ವರ್ತನೆ ಹೀಗಿರುತ್ತದೆ ಎಂದು ನಿಮಗನ್ನಿಸುತ್ತದೆಯೇ, ಅದರಲ್ಲೂ ಅಬೋಧನಾದ ತನ್ನ ಮಗನ ಬಗೆಗೆ? ಆತನ ಬೇಡಿಕೆಯೇನು ಅಪರಾಧವಾಗಿರಲಿಲ್ಲ. ತಾನು ವೇಶ್ಯೆಯ ಬಳಿಗೆ ಹೋಗಬೇಕು ಎಂದೇನು ಆತ ಕೇಳಿರಲಿಲ್ಲ. ತಾನು ಶಾಲೆಗೆ ಹೋಗಬೇಕು ಹಾಗೂ ಉಳಿದೆಲ್ಲಾ ಹುಡುಗರ ಹಾಗೆ ಕಲಿಯಬೇಕು ಎಂಬುದಷ್ಟೇ ಆತನ ಬೇಡಿಕೆಯಾಗಿತ್ತು. ಹರಿದಾಸನ ವಾದ ಸರಿಯಾಗಿತ್ತು. ಆತ ಹೇಳಿದ, "ನೀವೂ ಶಾಲೆಯ ಶಿಕ್ಷಣವನ್ನು ಪಡೆದಿದ್ದೀರಿ ಆದರೆ ಕಲುಷಿತಗೊಂಡಿಲ್ಲ. ಹೀಗಿರುವಾಗ ನಿಮಗೆ ಭಯ ಏಕೆ? ನಾನು ನಿಮ್ಮ ಮಗ. ನೀವು ಪಾಶ್ಚಾತ್ಯ ಶಿಕ್ಷಣ ಪಡೆಯಬಹುದಾದರೆ, ಬ್ಯಾರಿಸ್ಟರ್ ಪದವಿಯನ್ನು ಪಡೆಯಬಹುದಾದರೆ ನಾನೇಕೆ ಪಡೆಯಕೂಡದು? ನಿಮಗೇಕೆ ಇಷ್ಟು ಅಪನಂಬಿಕೆ?"

ಗಾಂಧಿ ಹೇಳಿದರು, "ನನ್ನ ಕೊನೆಯ ಮಾತನ್ನು ನಾನು ಹೇಳಿದ್ದೇನೆ. ನನ್ನ ಜೊತೆ ಈ ಮನೆಯಲ್ಲಿ ಇರಬೇಕೆಂದರೆ ಶಾಲೆಗೆ ಹೋಗಕೂಡದು. ಒಂದು ವೇಳೆ ಶಾಲೆಗೆ ಹೋಗಬೇಕೆಂಬುದೇ ನಿನ್ನ ನಿರ್ಧಾರವಾದರೆ ಈ ಮನೆಯಲ್ಲಿ ನಿನಗೆ ಜಾಗವಿಲ್ಲ."

ಆ ಹುಡುಗ ನನಗೆ ಇಷ್ಟವಾಗುತ್ತಾನೆ. ಆತ ಮನೆಯನ್ನು ಬಿಡಲು ನಿರ್ಧರಿಸುತ್ತಾನೆ. ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಬೇಡುತ್ತಾನೆ. ಗಾಂಧಿ ಆಶೀರ್ವಾದ ನೀಡಲು ಅಶಕ್ತರಾಗಿರುತ್ತಾರೆ. ನನಗೆ ಗಾಂಧಿಯ ವರ್ತನೆಯಲ್ಲಿ ಅಹಿಂಸೆಯಾಗಲೀ, ಪ್ರೀತಿಯಾಗಲೀ ಕಾಣುವುದಿಲ್ಲ. ಇಂಥ ಸಣ್ಣ ಸಣ್ಣ ಘಟನೆಗಳಲ್ಲಿ ನೀವು ನಿಜವಾದ ಮನುಷ್ಯನನ್ನು ಕಾಣಲು ಸಾಧ್ಯವೇ ಹೊರತು ಭಾಷಣಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಅಲ್ಲ.

ಮನೆ ತೊರೆದ ಹರಿದಾಸ ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡು ಶಾಲೆಗೆ ಹೋಗುತ್ತಾನೆ. ಎಷ್ಟೋ ವೇಳೆ ತನ್ನ ತಾಯಿಯನ್ನು ನೋಡುವುದಕ್ಕೆ ಪ್ರಯತ್ನಿಸಿ ಮನೆಗೆ ಹೋಗುತ್ತಾನೆ. ಆದರೆ ಅವನಿಗೆ ಆಕೆಯನ್ನು ನೋಡಲಾಗುವುದಿಲ್ಲ. ಆತ ಪದವಿಯನ್ನು ಪಡೆದ ನಂತರ ಗಾಂಧಿ, ಹಿಂದೂ ಮುಸ್ಲಿಂ ಐಕ್ಯತೆಯ ಬಗ್ಗೆ ಎಷ್ಟು ಸತ್ಯ ನಿಷ್ಠರಾಗಿದ್ದಾರೆ ಎಂದು ಪರೀಕ್ಷಿಸಲು ಮಹಮ್ಮದೀಯನಾಗುತ್ತಾನೆ. ಆತ ನಿಜಕ್ಕೂ ವರ್ಣರಂಜಿತ ವ್ಯಕ್ತಿತ್ವದವನು.

ಆತ ಮಹಮ್ಮದೀಯನಾದ ನಂತರ 'ಹರಿದಾಸ' ಎಂಬ ಅರ್ಥವನ್ನೇ ಕೊಡುವ ಅರೇಬಿಕ್ ಹೆಸರನ್ನು ಇಟ್ಟುಕೊಳ್ಳುತ್ತಾನೆ. ಅಬ್ದ್ ಎಂದರೆ ಅರೇಬಿಕ್ ಭಾಷೆಯಲ್ಲಿ ದೇವರು. ಅಬ್ದುಲ್ಲಾ ಎಂದರೆ ದೇವರ ಸೇವಕ. ಹೀಗೆ ಹರಿದಾಸ್ ಗಾಂಧಿ ಅಬ್ದುಲ್ಲಾ ಗಾಂಧಿಯಾಗುತ್ತಾನೆ.

ಈ ಸಂಗತಿಯನ್ನು ತಿಳಿದ ಗಾಂಧಿ ತೀವ್ರವಾದ ಆಘಾತಕ್ಕೊಳಗಾಗುತ್ತಾರೆ. ಕುಪಿತರಾಗುತ್ತಾರೆ. ಕಸ್ತೂರ ಬಾ, "ಏಕಿಷ್ಟು ಕೋಪಗೊಳ್ಳುತ್ತೀರಿ? ಪ್ರತಿ ಮುಂಜಾವು, ಪ್ರತಿ ಸಾಯಂಕಾಲಗಳಲ್ಲಿ ನೀವು ಹಿಂದೂ ಮುಸಲ್ಮಾನರು ಇಬ್ಬರೂ ಒಂದೇ ಎಂದು ಹೇಳುತ್ತೀರಿ. ನೀವು ಹೇಳಿದ್ದನ್ನೇ ಆತ ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರಬಹುದು. 'ಹಿಂದೂ ಮುಸಲ್ಮಾನರಿಬ್ಬರೂ ಒಂದೇ ಎನ್ನುವುದಾದರೆ, ಇಷ್ಟು ದಿನ ಹಿಂದೂ ಆಗಿ ಬಾಳಿದ್ದೇನೆ. ಇನ್ನು ಮುಂದೆ ಮುಸಲ್ಮಾನನಾಗಿ ಬದುಕಿ ನೋಡೋಣ' ಎಂದು ತೀರ್ಮಾನಿಸಿರಬಹುದು" ಎನ್ನುತ್ತಾರೆ ನಗುತ್ತಾ.

ಗಾಂಧೀಜಿ ವ್ಯಘ್ರರಾಗಿ, "ಇದು ನಗುವಂತಹ ಸಂಗತಿಯಲ್ಲ. ಈ ಕ್ಷಣದಿಂದ ಆತನಿಗೆ ನನ್ನ ಆಸ್ತಿಯ ಮೇಲೆ ಯಾವ ಒಡೆತನವೂ ಇಲ್ಲ. ಆತ ನನ್ನ ಮಗನೇ ಅಲ್ಲ. ಇನ್ನೆಂದೂ ಆತನನ್ನು ನಾನು ನೋಡಲು ಇಚ್ಛಿಸುವುದಿಲ್ಲ." ಎನ್ನುತ್ತಾರೆ. ಭಾರತದಲ್ಲಿ ಒಬ್ಬ ವ್ಯಕ್ತಿ ಸತ್ತಾಗ ಆತನ ಚಿತೆಗೆ ಬೆಂಕಿ ಕೊಡುವ ಕರ್ತವ್ಯ ಆ ವ್ಯಕ್ತಿಯ ಹಿರಿಯ ಮಗನದ್ದು. ಗಾಂಧೀಜಿ ತಮ್ಮ ವಿಲ್‌ನಲ್ಲಿ ಹೀಗೆ ಬರೆಸುತ್ತಾರೆ: "ಹರಿದಾಸ ನನ್ನ ಮಗನಲ್ಲ. ನಾನು ಸತ್ತ ನಂತರ ಆತ ನನ್ನ ಚಿತೆಗೆ ಬೆಂಕಿ ಇಡಬಾರದು ಎಂಬುದು ನನ್ನ ಇಚ್ಛೆ."

ಎಂಥಾ ಕೋಪ! ಎಂಥಾ ಹಿಂಸೆ!

ಹರಿದಾಸನನ್ನು ನಾನು ವೈಯಕ್ತಿಕವಾಗಿ ಬಲ್ಲೆ. ಆತ ಹೇಳಿದ, "ನನ್ನ ತಂದೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವುದಕ್ಕಾಗಿಯೇ ನಾನು ಮಹಮ್ಮದೀಯನಾದದ್ದು. ನಾನು ಎಣಿಸಿದಂತೆಯೇ ಅವರು ವರ್ತಿಸಿದರು. ಅವರು ಹೇಳಿದ ಧರ್ಮಗಳ ಸಮಾನತೆ - ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಧರ್ಮಗಳೆಲ್ಲಾ ಸಮಾನ- ಎಂಬುದು ಅರ್ಥಹೀನ. ಇದೆಲ್ಲ ಕೇವಲ ರಾಜಕೀಯ. ಅದನ್ನೇ ನಾನು ಸಾಬೀತು ಪಡಿಸಬೇಕಿತ್ತು, ಸಾಬೀತು ಪಡಿಸಿದೆ."

ಈ ಎಲ್ಲಾ ವಿಚಾರಗಳು ಓಶೋ ಗಾಂಧಿಯ ಬಗ್ಗೆ ಹೇಳಿರುವುದಾಗಿದೆ. ಹಿಂದೆ ಮುಂದೆ ಯೋಚನೆ ಮಾಡದೇ ವ್ಯಕ್ತಿಯನ್ನು ಪೂಜಿಸುವ ಅವರನ್ನು ಉನ್ನತ ಹುದ್ದೆಗೇರಿಸಿ ಪೂಜಿಸುವ ಮೌಢ್ಯ ಇನ್ನೂ ನಮ್ಮ ದೇಶದಲ್ಲಿ ಇರುವುದು ದುರಂತವೇ ಸರಿ.

ಗಾಂಧಿಯ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಎಲ್ಲಾ ವರ್ತನೆಗಳು, ಗುಣಗಳು ಆಯಾ ಸಂದರ್ಭಕ್ಕೆ ಸೂಕ್ತವಾಗಿತ್ತೇ ವಿನಃ ಅದು ಯಾವಾಗಲೂ ಎಲ್ಲಾ ಸಂದರ್ಭದಲ್ಲಿಯೂ ಸೂಕ್ತವಾಗಬೇಕು ಎಂಬ ನಿಯಮವೇನು ಇಲ್ಲ. ಒಬ್ಬ ವ್ಯಕ್ತಿ ರಾಜಕಾರಣಿ ಆಗಿರಲಿ, ನಟನಾಗಿರಲಿ, ಯಾವುದೇ ಕ್ಷೇತ್ರದಲ್ಲಿ ವಿಶೇಷ ಕಾರ್ಯನಿರ್ವಹಿಸಿದ ವ್ಯಕ್ತಿಯಾಗಿರಲಿ ಹಿಂದೆ ಮುಂದೆ ನೋಡದೆ ಅವರನ್ನು ಹಿಂಬಾಲಿಸುವ ಬಗ್ಗೆ ಮಾತ್ರ ನಾನು ವಿರೋಧಿಸುತ್ತಿರುವುದು. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಸಹಾ ಪ್ರಮುಖನೆ ಅದು ಆಯಾ ಕ್ಷೇತ್ರದಲ್ಲಿ ಮಾತ್ರ.

ಜಗತ್ತು ನಾಗಾಲೋಟದಲ್ಲಿ ಓಡುತ್ತಿರುವ ಈ ಸಂದರ್ಭದಲ್ಲಿ ಉತ್ತಮ ಭಾಷಣ ಮಾಡುವವನನ್ನು ದೇಶದ ಮುಖ್ಯಸ್ಥನಾಗಿ ಮಾಡುವುದು, ಉತ್ತಮ ಆಟಗಾರನನ್ನು ಜನಪ್ರತಿನಿಧಿಯನ್ನಾಗಿಸುವುದು, ಉತ್ತಮ ನಟ ನಟಿಯನ್ನು ಮಂತ್ರಿಯನ್ನಾಗಿಸುವುದು. ರಾಜಕಾರಣಿಯನ್ನು ನಟನೆಗೆ ತರುವುದು... ಇವೆಲ್ಲವು ಸಹಾ ವ್ಯಕ್ತಿಯನ್ನು ಇನ್ನೂ ಜನರು ಪೂಜಿಸುತ್ತಿರುವರು ಎಂಬುದಕ್ಕೆ ನಿದರ್ಶನವಾಗಿರುವುದು. ಯಾವುದೇ ವ್ಯಕ್ತಿಯನ್ನು ಹಿಂದೆ ಮುಂದೆ ಯೋಚನೆ ಮಾಡದೆ ಅವರನ್ನು ಹೊಗಳುವುದು ಅವರನ್ನು ಮಾದರಿ ವ್ಯಕ್ತಿಗಳನ್ನಾಗಿ ಮಾಡಿಕೊಳ್ಳುವುದು ಅವರಂತೆ ಆಗಲು ಬಯಸುವುದು ಇವೆಲ್ಲವು ಮೂರ್ಖತನವಾಗಿದೆ. ಯಾವುದೇ ವ್ಯಕ್ತಿಯ ಸಂದರ್ಭಕ್ಕೆ ಅನುಸಾರವಾಗಿ ಆತನ ಉತ್ತಮ ನಡತೆಯನ್ನು ನಾವು ಬಳಸಿಕೊಳ್ಳುವುದು ಬುದ್ದಿವಂತಿಕೆಯ ಲಕ್ಷಣವಾಗಿದೆ.

ಸತ್ಯ, ನ್ಯಾಯ, ಅಹಿಂಸೆ ಇವೆಲ್ಲಾ ಮೌಲ್ಯಗಳನ್ನು ನಾವಿರುವ ಮನೆ, ಸಮಾಜ ನಮಗೆ ಕಲಿಸಬೇಕೆ ವಿನಃ ಹರಿಶ್ಚಂದ್ರನ ಕಥೆಯಿಂದ, ಗಾಂಧೀಜಿಯ ಜೀವನ ಚರಿತ್ರೆಯಿಂದ ಬರುವುದಿಲ್ಲ ಅದು ಕೇವಲ ಒಂದು ಉದಾಹರಣೆ ಆಗಬಹುದು. ಮುಖ್ಯವಾಗಿ ಬೇಕಾಗಿರುವುದು ಆ ರೀತಿಯ ವಾತಾವರಣ ಮಾತ್ರವಾಗಿದೆ. ಎಲ್ಲವನ್ನು ಯಾವುದೇ ತರ್ಕ ಇಲ್ಲದೇ ಒಪ್ಪಿಕೊಳ್ಳುವ ಬದಲು ಸರಿ ತಪ್ಪಿನ ಬಗ್ಗೆ ನಿರ್ಧರಿಸುವ ತೀಮಾ೯ನವನ್ನು ಆಯಾ ಮಗು/ವ್ಯಕ್ತಿಗೆ ನಿಡೋಣ, ಏನಂತೀರಿ? [ಮಹಾತ್ಮ ಮತ್ತು ಮನುಬೆನ್ : ನಗ್ನ ಸತ್ಯಗಳು]

English summary
Another face of Mahatma Gandhi. Spiritual leader Osho (acharya Rajanish) has unveiled another unknown face of Gandhiji in his book. He says, though Gandhi was for non-violence, in his personal life he acted violently with his son Haridas Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X