ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಬಿಪಿಒ ಉದ್ಯೋಗಿಯಾಗಿರುವ ನಾನು...

|
Google Oneindia Kannada News

ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಪವನ್, ಉತ್ತರಹಳ್ಳಿ ರಸ್ತೆಯಲ್ಲಿ ಐದಾರು ಕಿಲೋಮೀಟರ್ ಹೋದರೆ ಹೆಮ್ಮಿಗೆಪುರ ಅಂತೊಂದಿದೆ ಅಲ್ಲಿ ನಮ್ಮನೆ. ನಿಮಗೆ ನನ್ನ ಕೆಲಸದ ಬಗ್ಗೆ, ನನ್ನ ಥರವೇ ಕೆಲಸ ಮಾಡುವವರ ಬಗ್ಗೆ ಹೇಳಬೇಕು. ಗೋಳುಗುಟ್ಟುತ್ತಾ ಇದ್ದಾನೆ ಅಂದ್ಕೋಬೇಡಿ.

ನಾನು ಬಿಪಿಒ ಇಂಡಸ್ಟ್ರಿಗೆ ಬಂದಿದ್ದು 2005ರಲ್ಲಿ. ಕೆಲಸಕ್ಕೆ ಹೋಗುವಾಗ ನನ್ನ ಸಂಭ್ರಮ ನೋಡಬೇಕಿತ್ತು ನೀವು. ಮನೆ ಹತ್ತಿರವೇ ಕಾರು ಬರುತ್ತಿತ್ತು: ಆಫೀಸಿನವರೆಗೆ ಕರೆದುಕೊಂಡು ಹೋಗಿ, ವಾಪಸ್ ಮನೆ ಹತ್ತಿರವೇ ಬಿಡುತ್ತಿದ್ದರು. ಅಂದಹಾಗೆ, ಬಿಪಿಒ ಅಂದ್ರೆ ನಿಮಗೆ ಗೊತ್ತಾ, ಅಲ್ಲೇನು ಮಾಡ್ತಾರೆ ಗೊತ್ತಾ?[ತಮಿಳ್ನಾಡಿನಲ್ಲಿ ಕನ್ನಡ ಮಾತಾಡಿದ್ದಕ್ಕೆ ದಂಡ : ಪ್ರತಿಕ್ರಿಯೆ]

Taxi

ದುಡ್ಡು ಉಳಿಸಲು ದಾರಿ: ಸಿಂಪಲ್ ಆಗಿ ಹೇಳ್ತೀನಿ ಕೇಳಿ. ನಿಮ್ಮದೊಂದು ಹೋಟೆಲೊ, ದಿನಸಿ ಅಂಗಡಿಯೋ ಇದೆ ಅಂದುಕೊಳ್ಳಿ. ಅಲ್ಲಿಯ ಲೆಕ್ಕಾಚಾರಗಳನ್ನೆಲ್ಲ ನೋಡಿಕೊಳ್ಳುವುದಕ್ಕೆ ಒಬ್ಬ ಅಕೌಂಟೆಂಟ್ ಬೇಕು. ಪರ್ಮನೆಂಟ್ ಆಗಿ ಒಬ್ಬರನ್ನು ತೆಗೆದುಕೊಂಡು ಬಿಡೋಣ ಅಂತ ನೀವು ನಿರ್ಧರಿಸಿದರೆ, ಒಬ್ಬರ ಸಂಬಳ, ಆತ ಕೂರುವಷ್ಟು ಜಾಗದ ಬಾಡಿಗೆ, ಕಂಪ್ಯೂಟರ್, ಕರೆಂಟ್, ಬೋನಸ್ ಅದೂ ಇದೂ ಅಂತ ಖರ್ಚು ಬರುತ್ತೆ. ಅದರ ಬದಲು ಒಬ್ಬ ಅಕೌಂಟೆಂಟ್ ಗೆ, ವರ್ಷಕ್ಕೆ ಇಷ್ಟು ದುಡ್ಡು ಕೊಡ್ತೀನಿ. ನಮ್ಮ ಲೆಕ್ಕಾಚಾರ ನೋಡಿಕೊಂಡು ಬಿಡು ಅಂತ ಹೇಳೋದು.

ಆತ ನೀವಿದ್ದಲ್ಲಿಗೆ ವಾರದ ಲೆಕ್ಕದಲ್ಲೊ ತಿಂಗಳಿಗೆ ಒಮ್ಮೆಯೋ ಬಂದು ಲೆಕ್ಕಾಚಾರವನ್ನೆಲ್ಲ ಅಪ್ ಟು ಡೇಟ್ ಮಾಡಿಹೋಗ್ತಾನೆ. ನಿಮಗೆ ಆತನ ಬಗ್ಗೆ ಅಸಮಾಧಾನ ಇದ್ದರೆ ಯಾವಾಗ ಬೇಕಾದರೂ ಬೇಡ ಅನ್ನಬಹುದು. ಒಬ್ಬ ಪರ್ಮನೆಂಟ್ ನೌಕರನ ವಿಚಾರದಲ್ಲಿ ಇರುವ ಯಾವ ಜವಾಬ್ದಾರಿಯೂ ಮಾಲೀಕನಾಗಿ ನಿಮಗಿರುವುದಿಲ್ಲ. ಜತೆಗೆ ದುಡ್ಡೂ ಉಳಿಯುತ್ತೆ.[ಕನ್ನಡ ಕಲಿತರೆ ಏನು ಲಾಭ ಎಂದು ಪ್ರಶ್ನೆ ಕೇಳುವವರಿಗೆ]

ಇಲ್ಲಿಂದ ಎಲ್ಲಿಗೋ: ಈಗ ಹೇಳಿದನಲ್ಲಾ ಹೀಗೇ ಅಂತಾರಾಷ್ಟ್ರೀಯ ಕಂಪೆನಿಗಳೂ ಮಾಡ್ತವೆ. ಅವುಗಳ ಸಂಬಳ, ಬಿಲ್ಲಿಂಗ್, ಅಕೌಂಟ್ಸ್ ಮತ್ತಿತರ ವಿಭಾಗವನ್ನು ಔಟ್ ಸೋರ್ಸ್ ಮಾಡಿ, ಯಾವ ದೇಶ, ಕಂಪೆನಿಯು ದುಡ್ಡು ಉಳಿಸಿಕೊಡುತ್ತದೋ ಅವರಿಗೆ ವಹಿಸುತ್ತದೆ. ಬೆಂಗಳೂರಿನ ಡೇರಿ ಸರ್ಕಲ್ ನಲ್ಲಿ ಕೂತವರು ಲಂಡನ್, ಅಮೆರಿಕಾ, ಜಪಾನ್, ಟರ್ಕಿ, ವಿಯೆಟ್ನಾಂ, ಭಾರತದ ಹೀಗೆ ಯಾವುದೋ ತುದಿಯಲ್ಲಿರುವ ಕಂಪೆನಿಗಾಗಿ ಕೆಲಸ ಮಾಡುತ್ತಿರುತ್ತಾರೆ.

ಬಿಪಿಒ ನೌಕರರ ಸಂಘ ಅಂತ ಎಲ್ಲಾದರೂ ಕೇಳಿದ್ದೀರಾ? ಉಹುಂ, ನಾವು ಅಂಥ ಸಂಘ ಮಾಡಿಕೊಳ್ಳುವ ಹಾಗಿಲ್ಲ. ದಿನಕ್ಕೆ 9 ಗಂಟೆ ಕಡ್ಡಾಯವಾಗಿ ಕೆಲಸ ಮಾಡಬೇಕು. ವೈಟ್ ಫೀಲ್ಡೋ, ಐಟಿಪಿಎಲ್ ನಲ್ಲೋ ಇರುವ ಕಂಪೆನಿಗೆ ಕನಿಷ್ಠ ಎರಡು ಗಂಟೆ ಬೇಗ ಮನೆ ಬಿಡಬೇಕು. ವಾಪಸ್ ಮನೆ ತಲುಪುವುದಕ್ಕೂ ಎರಡು ಗಂಟೆ ಪ್ರಯಾಣ ಮಾಡಬೇಕು. ಇತ್ತೀಚೆಗೆ ಕಾಸ್ಟ್ ಕಟ್ಟಿಂಗ್ ಅಂತ ಕ್ಯಾಬ್ ಗಳನ್ನೂ ಎಷ್ಟೋ ಕಂಪೆನಿಗಳು ನಿಲ್ಲಿಸಿಬಿಟ್ಟಿವೆ.[ಪತ್ರ : ಮನನೊಂದ ಮಾಧ್ವನ ಮನದಾಳದ ಮಾತುಗಳು]

ವಾರಕ್ಕೆ ಒಂದೆರಡು ದಿನ : ಈಗ ನನ್ನ ಶಿಫ್ಟ್ ಮಧ್ಯಾಹ್ನ 3.30ಕ್ಕೆ ಶುರು. ನಾನು ಮಧ್ಯಾಹ್ನ 1.20ಕ್ಕೆ ಮನೆ ಬಿಡಬೇಕು. ರಾತ್ರಿ 12.30ಕ್ಕೆ ಕೆಲಸ ಮುಗಿದರೆ ಮನೆ ತಲುಪುವುದು ರಾತ್ರಿ 2.30 ಆಗುತ್ತದೆ. ನಿಮ್ಮ ಕಂಪೆನಿಯ ಹತ್ತಿರವೇ ಮನೆ ಮಾಡಬಹುದಲ್ವಾ ಅಂತೀರಾ, ಅಲ್ಲಿನ ಬಾಡಿಗೆ ಕಟ್ಟುವುದಕ್ಕೆ ಸಾಧ್ಯವಾ ಅನ್ನೋದು ಒಂದು ಕಡೆಯಾದರೆ, ಕುಟುಂಬದಲ್ಲಿರುವ ಇತರರ ಅನುಕೂಲವೂ ನೋಡಬೇಕು ಅಲ್ವಾ?

ಹಾಗಂತ ಗೆರೆ ಕುಯ್ದ ಹಾಗೆ 12.30ಕ್ಕೇ ಮುಗಿಯುವುದಿಲ್ಲ. ಕೆಲವು ಸಲ ಬೆಳಗ್ಗೆ 6 ಗಂಟೆಯವರೆಗೆ ಕೆಲಸ ಮಾಡಬೇಕಾಗುತ್ತದೆ. ಆದರೆ ಮತ್ತೆ 1.20ಕ್ಕೆ ಮನೆಯಿಂದ ಹೊರಡಲೇ ಬೇಕು. ಕಂಪೆನಿ ಕ್ಯಾಬ್ ಮಿಸ್ಸಾದರೆ ಕನಿಷ್ಠ ಐನೂರು ರುಪಾಯಿ ಖರ್ಚು, ಸ್ವಂತ ಗಾಡಿಯಲ್ಲಿ ಹೋಗ್ತೀನಿ ಅಂದರಂತೂ ಮುಗಿದೇಹೋಯಿತು. ಹೆಂಡತಿ, ಮಕ್ಕಳು, ತಂದೆ-ತಾಯಿ ಮುಖ ನೋಡೋದು, ಮಾತನಾಡೋದು ವಾರಕ್ಕೆ ಒಂದೆರಡು ದಿನ ಮಾತ್ರ ಕಣ್ರೀ.

ಕಮಿಟ್ ಮೆಂಟ್ : ನನ್ನ ಕೆಲಸದ ಕಾರಣಕ್ಕೋ ಏನೋ ಸೂರ್ಯನ ಬೆಳಕಿಗೆ ಕಣ್ಣು ಬಿಡುವುದಕ್ಕೆ ಆಗೋದೇ ಇಲ್ಲ. ರಜಾ ದಿನಗಳಲ್ಲೂ ರಾತ್ರಿ ಬೇಗ ನಿದ್ದೆ ಬರುವುದಿಲ್ಲ. ಊಟ-ತಿಂಡಿಯಂತೂ ಬಾಯಿಗೆ ರುಚಿ ಸಿಕ್ಕಿ ಅದ್ಯಾವ ಕಾಲ ಆಯಿತೋ? ಈ ಕೆಲಸ ಬಿಟ್ಟು ಬೇರೆ ನೋಡಿಕೊಳ್ಳೋಣ ಅಂತ ಇದ್ದೆ. ಆದರೆ ಇಲ್ಲಿನ ಅನುಭವ ಇಲ್ಲಿಗೆ ಮಾತ್ರ ಸಲ್ಲುತ್ತದೆ. ಈಗ ಮಾಡಿಕೊಂಡಿರುವ ಕಮಿಟ್ ಮೆಂಟ್ ಗೆ ಏನು ಮಾಡೋದಪ್ಪ ಅಂತ ಗಾಬರಿಯಾಗುತ್ತದೆ.

ಇನ್ನು ರಜಾ ವಿಷಯ ತುಂಬ ತಮಾಷೆಯಾಗಿರುತ್ತದೆ. ಅಮೆರಿಕಾ ಕಂಪೆನಿಯೊಂದರ ಪರವಾಗಿ ಇಲ್ಲಿ ಕೆಲಸ ಮಾಡುತ್ತಿದ್ದರೆ ಅಲ್ಲಿನ ಹಾಲಿಡೇಗಳು ಅನ್ವಯಿಸುತ್ತವೆ. ಫ್ರಾನ್ಸ್ ಕಂಪೆನಿಯದಾದರೆ ಅಲ್ಲಿಯದು. ಗಣೇಶನ ಹಬ್ಬ, ದೀಪಾವಳಿ ಅಂತೆಲ್ಲ ರಜೆ ಬೇಕೇ ಬೇಕು ಅನ್ನೋ ಹಾಗಿಲ್ಲ. ಇದೇ ವಿಷಯಕ್ಕೆ ಹೆಂಡತಿ ಜತೆ ಅದೆಷ್ಟು ಸಲ ಮಾತು ಬಿಟ್ಟಿದ್ದೀನೋ.[ಪತ್ರ : ಗಟ್ಟಿಮುಟ್ಟಾದ ತರ್ಕವಿಲ್ಲದ ಬಾಲಿಶ ವಿಚಾರಧಾರೆ]

ಅಮ್ಮನಿಗೆ ಹೇಳಬೇಕು: ಸಂಬಳ ಬಹಳ ಚೆನ್ನಾಗಿದೆ ಕಣ್ರೀ, ಬಹಳ ಸಲ ಖರ್ಚು ಮಾಡುವುದಕ್ಕೂ ಸಮಯ ಇರಲ್ಲ ಅಷ್ಟೇ. ಕೂತು-ಕೂತು ದಪ್ಪ ಹೊಟ್ಟೆ ಬಂದಿದೆ. ಕನ್ನಡಕವೇ ಕಣ್ಣಾಗಿದೆ. ಆದರೆ ಅದ್ಯಾಕೋ ಕೈ-ಕಾಲೇ ಸಣ್ಣ. ನಮ್ಮ ಕಂಪೆನಿಯಲ್ಲಿ ಜಿಮ್ ಕೂಡ ಇದೆ ಗೊತ್ತಾ? ಆದರೆ ಅದರೊಳಗೆ ಹೋಗುವಷ್ಟು ಚೈತನ್ಯ ಇರೋದೇ ಇಲ್ಲ.

ಇತ್ತೀಚೆಗೆ ಆಫೀಸಿನಿಂದ ಬಸ್ ಕಳುಹಿಸುತ್ತಿದ್ದಾರೆ. ಮನೆಯಿಂದ ಎರಡು ಕಿಲೋಮೀಟರ್ ದೂರಕ್ಕೆ ಅದು ಬರುತ್ತದೆ. ವಾಪಸ್ ಮನೆಯವರೆಗೆ ಬಿಡೋದಿಕ್ಕೆ ಸಾಧ್ಯವಿಲ್ಲ ಅಂತ ಕಟ್ಟುನಿಟ್ಟಾಗಿ ಕಂಪೆನಿಯಲ್ಲಿ ಹೇಳಿದ್ದಾರೆ ಆದ್ದರಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೀನಿ. ಈ ತಿಂಗಳಾದರೂ ಹೆಂಡತಿ-ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಬೇಕು. ಅಪ್ಪನಿಗೆ ಕಾಲು ನೋವಂತೆ, ಆಸ್ಪತ್ರೆಗೆ ತೋರಿಸಬೇಕು. ಅಮ್ಮ ವರಮಹಾಲಕ್ಷ್ಮಿ ಹಬ್ಬದ ದಿನ ಮಾಡಿದ್ದ ಹೋಳಿಗೆ ತುಂಬ ಚೆನ್ನಾಗಿತ್ತು ಅಂತ ಹೇಳಬೇಕು. ಮೊಬೈಲ್ ನಲ್ಲಿ ಇದೆಲ್ಲ ಸೇವ್ ಮಾಡಿಟ್ಟುಕೊಂಡಿದ್ದೀನಿ..

ಸರಿ ನಾನಿನ್ನು ಮಲಗ್ತೀನಿ. ಟೈಮ್ ಬೆಳಿಗ್ಗೆ 4.30.

English summary
Bengaluru bpo employee has written a letter about his job. How his professional life impact on personal life? He explains 11 years of bpo experience
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X