ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಡುವ ಕೋಪ ಶಮಗೊಳಿಸಲು 6 ಸೂತ್ರಗಳು

By ಮಾಧವ, ಮೈಸೂರು
|
Google Oneindia Kannada News

"ಕೋಪ ಎಂಬುದು ಪ್ರತಿಯೊಂದು ಮನುಷ್ಯನಿಗೂ ನೈಸರ್ಗಿಕವಾದುದು. ಅದು ಬಂದಾಗ ಹೊರಗೆ ಹಾಕುವುದು ಆರೋಗ್ಯಕ್ಕೆ ಒಳ್ಳೆಯದು" ಎಂದು ಕೋಪವನ್ನು ಸಮರ್ಥಿಸಿಕೊಳ್ಳುವವರ ಪೈಕಿ ನೀವೂ ಇರಬಹುದು. ನಿಜ, ಸಿಟ್ಟನ್ನು ಒಳಗೆ ಇಟ್ಟುಕೊಂಡು ಬುಸುಗುಟ್ಟುವುದಕ್ಕಿಂತ, ಅದಕ್ಕೆ ಒಂದು ಹೊರದಾರಿ ಕಲ್ಪಿಸುವುದು ಒಳ್ಳೆಯದು. ಆದರೆ, ಕೋಪವೇ ಬರದಂತೆ ರೂಢಿ ಮಾಡಿಕೊಳ್ಳುವುದು ಇನ್ನೂ ಉತ್ತಮ, ಅಲ್ಲವೇ? ಈಗ ಹೇಳಿ ನಿಮ್ಮ ಬರುವುದೇ ಇಲ್ಲವೆ? ಇಲ್ಲವಾದರೆ ನಿಮಗೆ ನೀವೇ ಸುಳ್ಳು ಹೇಳಿಕೊಳ್ಳುತ್ತಿದ್ದೀರೆಂದೇ ಅರ್ಥ.

ಸಮೀರನು ಮೊನ್ನೆ ಬೆಂಗಳೂರಿನ ಗಾಂಧಿನಗರದ ಬಳಿ ಕಾರಿನಲ್ಲಿ ಚಲಿಸುತ್ತಿದ್ದಾಗ ಮುಂದೆ ಇರುವ ಒಂದು ದುಬಾರಿ ಕಾರಿಗೆ ಡಿಕ್ಕಿ ಹೊಡೆದನು. ಎರಡೂ ಕಾರುಗಳು ರಸ್ತೆ ನಡುವೆಯೇ ನಿಂತವು. ಜನರೆಲ್ಲಾ ಡೊಂಬರಾಟವನ್ನು ನೋಡುವಂತೆ ಉತ್ಸಾಹದಿಂದ ಕಾರುಗಳ ಸುತ್ತ ನಿಂತರು. ಮುಂದಿನ ಕಾರಿನಿಂದ ಇಳಿದ ಯುವಕ, ಸಮೀರನನ್ನು ಹೊರಗಿಳಿಸಿ, ಪೀಠಿಕಾರೂಪದ ಬೈಗುಳಗಳನ್ನು ಒದಗಿಸಿ, ನಂತರ ಒಂದಿಷ್ಟು ದೂರವಾಣಿ ಕರೆಗಳನ್ನು ಮಾಡಿದನು. ಹತ್ತು ನಿಮಿಷದಲ್ಲಿ ಆ ಯುವಕನ ಸ್ನೇಹಿತರು ಹತ್ತು ಮೋಟಾರ್ ಬೈಕುಗಳಲ್ಲಿ ಬಂದರು. ಸಮೀರನ ಮುಂದೆ ನಿಂತರು. ಸುಡುವ ಬಿಸಿಲಲ್ಲಿ ನಿಂತ ಸಮೀರ ತನ್ನ ಆಯ್ಕೆಗಳನ್ನು ಯೋಚಿಸಿದನು.

ಆಯ್ಕೆ 1 : ಶರ್ಟ್ ತೋಳನ್ನು ಮಡಚಿ, ಬಿಪಿ ಏರಿಸಿಕೊಂಡು, ಬೀದಿ ಬೈಗುಳಗಳನ್ನು ಪ್ರಾರಂಭಿಸುವುದು. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಜೊತೆಗೆ ಧರ್ಮದೇಟು ಬೀಳಬಹುದು.
ಆಯ್ಕೆ 2 : ಕಾರಿನಲ್ಲಿ ವಾಪಸ್ಸು ಕುಳಿತುಕೊಂಡು, ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು. ಇದರಿಂದ ಸಮೀರನ ಮೇಲೆ ಪೊಲೀಸ್ ಕೇಸ್ ಆಗಬಹುದು.
ಆಯ್ಕೆ 3 : ಆಕ್ಸಿಡೆಂಟ್ ಆಗಿರುವುದು ದುರದೃಷ್ಟಕರ, ಆದರೆ ಮುಂದಿನ ಕ್ರಮವನ್ನು ಒಬ್ಬ ಪೊಲೀಸ್ ಅಧಿಕಾರಿಯ ಬಳಿ ಚರ್ಚಿಸೋಣ ಎಂದು ಯುವಕನಿಗೆ ಶಾಂತ ಆದರೆ ಸ್ಥಿರ ದನಿಯಲ್ಲಿ ಹೇಳುವುದು. ಈ ರೀತಿಯ ಸಂಧಾನದಿಂದ ಎರಡೂ ಪಾರ್ಟಿಗಳಿಗೆ ಸಮಾಧಾನವಾಗುವ ಒಂದು ತೀರ್ಮಾನದ ಸಾಧ್ಯತೆ ಇರುತ್ತದೆ.

ಕೋಪದ ಅಪಾಯಗಳನ್ನು ಈ ಮೊದಲೇ ತಿಳಿದುಕೊಂಡ ಸಮೀರ, ತನ್ನ ಆಯ್ಕೆಗಳನ್ನು ಪರಿಗಣಿಸಿ ಒಂದು ಮುಗುಳ್ನಗೆ ನಕ್ಕನು.

ದೇವರಾಜನು ಒಮ್ಮೊಮ್ಮೆ ತನ್ನ ಹೆಂಡತಿಯ ಮೇಲೆ ಸಿಟ್ಟಿಗೆದ್ದು ಅವಳಿಗೆ ಕಪಾಳಮೋಕ್ಷ ಮಾಡುತ್ತಾನೆ. ಸ್ವಲ್ಪ ಹೊತ್ತಿನ ನಂತರ ಅವಳ ಬಗ್ಗೆ ಅವನಿಗೆ ಕರುಣೆ ಬರುತ್ತದೆ, ಪ್ರೀತಿ ಮೂಡುತ್ತದೆ. ರಾತ್ರಿಯ ಹೊತ್ತಿಗೆ ಇಬ್ಬರೂ ಘಟನೆಯನ್ನು ಮರೆಯುತ್ತಾರೆ. ಆದರೆ, ಮಾರನೆಯ ದಿನ, ಚಟ್ನಿಗೆ ಉಪ್ಪು ಹೆಚ್ಚೆಂಬ ಕಾರಣಕ್ಕೆ ಹೆಂಡತಿಗೆ ಮತ್ತೆ ಬಾಸುಂಡೆ ಬೀಳುತ್ತದೆ. ರಾತ್ರಿ ನಿಂದ ಬಂದ ದೇವರಾಜನು ಹೆಂಡತಿಯನ್ನು ಮಾತಾಡಿಸಿದರೆ ಹಿಂದಿರುಗುವುದು ಹಗೆತನದ ಮೌನ. ದೇವರಾಜನಿಗೆ ಕೋಪ ಇನ್ನೂ ಹೆಚ್ಚುತ್ತದೆ. ಆ ಕೋಪವನ್ನು ಅವನು ಮಕ್ಕಳ ಮೇಲೆ ತೋರಿಸಿಕೊಳ್ಳುತ್ತಾನೆ. ಮಕ್ಕಳಿಗೆ ಅಮ್ಮನ ಮೇಲೆ ಬೇಸರ. ಅಮ್ಮನಿಗೆ ಗಂಡನ ಮೇಲೆ ದ್ವೇಷ. ದೇವರಾಜನ ನಿವಾಸ ಮನೆಯಲ್ಲ. ಕೋಪದ ಕೆಂಡ ಕಾರುವ ಯುದ್ಧಭೂಮಿ.

ಕೋಪ ಎಂಬ ನಕಾರಾತ್ಮಕ ಭಾವನೆಯು ನಿಮ್ಮ ಬದುಕನ್ನೂ ಕ್ರಮೇಣ ನಶಿಸುತ್ತಿರಬಹುದು. ಈ ಕೆಳಗಿನ ಸಲಹೆಗಳು ಸಿಟ್ಟಿನ ದುಷ್ಪರಿಣಾಮಗಳನ್ನು ಜೀವನದಿಂದ ಕಿತ್ತುಹಾಕಲು ಇಚ್ಛಿಸುವ ಜನರಿಗೆ ಮಾತ್ರ!

ನಿಮ್ಮ ಕೋಪಕ್ಕೆ ಕಾರಣರು ನೀವೇ

ನಿಮ್ಮ ಕೋಪಕ್ಕೆ ಕಾರಣರು ನೀವೇ

ಕೋಪ ಎಂಬುದು ನಿಮಗೆ ನೀವೇ ಹೇಳಿಕೊಳ್ಳುವ ನಕಾರಾತ್ಮಕ ವಾಕ್ಯಗಳ ಪ್ರತಿಕ್ರಿಯೆ ಎಂಬುದನ್ನು ಮೊದಲು ಸ್ಪಷ್ಟಮಾಡಿಕೊಳ್ಳಿ. ಹೌದು, ನಿಮ್ಮ ಕ್ರೋಧಕ್ಕೆ 'ಅವರು' ಕಾರಣರಲ್ಲ. ಸಿಟ್ಟನ್ನು ಮೂಡಿಸಿಕೊಳ್ಳುವವರು ನೀವೇ. ಹಾಗಂತ ಅನ್ಯರ ಕೆಟ್ಟ ವರ್ತನೆಗಳನ್ನು ನೀವು ಸಹಿಸಿಕೊಳ್ಳಬೇಕು ಎಂದರ್ಥವಲ್ಲ. ಒಲ್ಲದ ಪರಿಸ್ಥಿತಿಯನ್ನು ಬದಲಿಸಲು ಅಥವಾ ಅಪ್ರಸನ್ನ ವ್ಯಕ್ತಿಯನ್ನು ತಿದ್ದಲು ಪ್ರಯತ್ನಿಸಿ. ಆದರೆ ನಿಮ್ಮ ಪ್ರಯತ್ನದಿಂದ ಕೋಪವನ್ನು ಬೇರ್ಪಡಿಸಿರಿ.

ಮಕ್ಕಳನ್ನು ಹದ್ದುಬಸ್ತಿನಲ್ಲಿಡುವುದು ಹೀಗೆ

ಮಕ್ಕಳನ್ನು ಹದ್ದುಬಸ್ತಿನಲ್ಲಿಡುವುದು ಹೀಗೆ

ಮಕ್ಕಳ ಹಠ-ತುಂಟಾಟಗಳನ್ನು ನಿಯಂತ್ರಿಸಲು ಅವರನ್ನು ಹೊಡೆದು ಬಡೆದು, ಕೂಗಾಡುವ ಅವಶ್ಯಕತೆ ಇಲ್ಲ. ಮಕ್ಕಳನ್ನು ಶಿಸ್ತುಗೊಳಿಸಲು ನಿಮ್ಮ ಧ್ವನಿ ಹೆಚ್ಚಿಸುವುದು, ದಿಟ್ಟವಾಗಿ ನೋಡುವುದು, ಅವರ ಹಟಕ್ಕೆ ಕಿವಿ ಕೊಡದೆಯಿರುವುದು, ಮುಂತಾದವುಗಳು ಉತ್ತಮ ತಂತ್ರಗಳು. ಇವೆಲ್ಲಾ ನೀವು ಕಲಿಯಬೇಕಾದ ನಟನೆಯ ಅಂಶಗಳು. ಮುನಿಸಿದಂತೆ ಕಾಣಬೇಕು, ಆದರೆ ಕೋಪ ಇರಬಾರದು. ಮಕ್ಕಳಿಗೆ ಹಳೆ ಹಾಸಿಗೆಗೆ ಹೊಡೆದಂತೆ ಹೊಡೆದರೆ ಅವರು ನಿಸ್ಸಂಶಯವಾಗಿ ಮೊಂಡು ಬೀಳುತ್ತಾರೆ. ನಿಮ್ಮನ್ನು ದ್ವೇಷಿಸಲೂ ಪ್ರಾರಂಭಿಸುತ್ತಾರೆ.

ಕೊಂಕಾಚಾರ್ಯರಿಗೆ ಶಾಂತವಾಗಿಯೇ ಉತ್ತರಿಸಿ

ಕೊಂಕಾಚಾರ್ಯರಿಗೆ ಶಾಂತವಾಗಿಯೇ ಉತ್ತರಿಸಿ

ಕೆಲವರು ಬಹಳ ವರ್ಷಗಳ ಪರಿಶ್ರಮದಿಂದ ಚುಚ್ಚಿ ಚುಚ್ಚಿ ಮಾತಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಅವರಿಗೆ ಅನ್ಯರ ದೋಷಗಳನ್ನು ಎತ್ತಿ ಹಿಡಿದು ಲೋಕಕ್ಕೆಲ್ಲಾ ಪ್ರದರ್ಶಿಸುವ ಆಸೆ. ಇಂಥ ಸೂಕ್ಷ್ಮದ ಅರಿವಿಲ್ಲದ ವ್ಯಕ್ತಿಗಳು ಎದೆಗೆ ಒದ್ದವರ ಹಾಗೆ ನಿಮ್ಮ ಬಗ್ಗೆ ಅಪಮಾನಕರ ಮಾತುಗಳನ್ನು ನಿಮ್ಮ ಎದುರಿಗೇ ಆಡುತ್ತಾರೆ. ಈ ಸಂದರ್ಭದಲ್ಲಿ ನೀವು ಆನೆ ಪಟಾಕಿಯ ಹಾಗೆ ಸ್ಪೋಟಗೊಳ್ಳುವುದು ಬೇಡ. ವ್ಯಂಗ್ಯವಲ್ಲದ ಒಂದು ಜಾಣ ಉತ್ತರದಿಂದ ಅವರ ಬಾಯನ್ನು ಮುಚ್ಚಿಸಿ. ಕೊಂಕಾಚಾರ್ಯರಿಗೆ ಹೇಗೆ ಬೇರೆಯವರ ಬಗ್ಗೆ ಕೊಂಕಾಗಿ ಮಾತಾಡುವ ಅಧಿಕಾರವಿದೆಯೋ, ಹಾಗೆಯೆ ನಿಮ್ಮ ಯೋಗ್ಯತೆಯನ್ನು ಶಾಂತವಾಗಿ ಉಳಿಸಿಕೊಳ್ಳುವ ಅಧಿಕಾರ ನಿಮಗಿದೆ.

ಕೋಪದಿಂದ ಆರೋಗ್ಯಕ್ಕೆ ಹಾನಿ

ಕೋಪದಿಂದ ಆರೋಗ್ಯಕ್ಕೆ ಹಾನಿ

ನೀವು ಕಾರನ್ನು ಚಲಿಸುವಾಗ ಮುಂದೆ 'ಕಟ್' ಮಾಡುವ ವಾಹನದ ಚಾಲಕನಿಗೆ ನೀವು ಮುಖ ತಿವಿಯುವುದನ್ನು, ಕಿವುಡಾಗುವತನಕ ಹಾರ್ನ್ ಮಾಡುವುದನ್ನು ಅಥವಾ ರಾವಣನ ಹಾಗೆ ದುರುಗುಟ್ಟಿನೋಡುವದನ್ನು ಮುಂದಿನ ಬಾರಿ ಮಾಡಬೇಡಿ. ನಂತರ ನಿಮ್ಮ ಭಾವನೆಗಳನ್ನು ಗಮನಿಸಿ. ನಿಮ್ಮ ಕೋಪದ ಚಿಹ್ನೆಗಳಿಂದ ಅವರ ಡ್ರೈವಿಂಗ್ ಬದಲಾಗುವುದಿಲ್ಲ, ಆದರೆ ನಿಮ್ಮ ಆರೋಗ್ಯ ಕೆಡುತ್ತದೆ.

ಆಪ್ತ ಸ್ನೇಹಿತರಂತೆ ಕಾಣಲು ಪ್ರಾರಂಭಿಸಿ

ಆಪ್ತ ಸ್ನೇಹಿತರಂತೆ ಕಾಣಲು ಪ್ರಾರಂಭಿಸಿ

ನಿಮ್ಮ ಮನೆ ಮಂದಿಯನ್ನು ಆಪ್ತ ಸ್ನೇಹಿತರಂತೆ ಕಾಣಲು ಪ್ರಾರಂಭಿಸಿ. ಮನೆಯವರಿಗೆ, "ನಿಂಗೆ ನಾಚಿಕೆ ಆಗಲ್ವ...", ಎಂದು ಶುರುವಾಗುವ ನಿಮ್ಮ ಬೈಗುಳಗಳನ್ನು ಒಂದು ನಾಗರೀಕ, ಒಳ್ಳೆಯ ಉದ್ದೇಶದ ಸಲಹೆಯಾಗಿ ಪರಿವರ್ತಿಸಿ. ಅವರ ಆಯ್ಕೆಗಳನ್ನು, ನಿರ್ಧಾರಗಳನ್ನು ಗೌರವಿಸಿ. ಆಗ ಕುಟುಂಬ ಕದನಗಳು, ಗಂಭೀರ ಮೌನಗಳು, ಅಗಾಧವಾದ ಖಿನ್ನತೆಗಳು, ಕೂತಲ್ಲಿ ನಿಂತಲ್ಲಿ ಸಿಡುಕಾಟಗಳು, ಹೊಡೆದಾಟ-ಬಡೆದಾಟಗಳು ಕ್ರಮೇಣವಾಗಿ ಕಡಿಮೆಯಾಗಿ ಕಡೆಗೆ ಹೊರಟುಹೋಗುತ್ತವೆ.

ಪ್ರೀತಿಯ ಮಿತ್ರರಂತೆ ಕಾಣಿರಿ

ಪ್ರೀತಿಯ ಮಿತ್ರರಂತೆ ಕಾಣಿರಿ

ಹೆಂಡತಿ-ಮಕ್ಕಳನ್ನು ನೀವು ಪ್ರೀತಿಯ ಮಿತ್ರರಂತೆ ಕಂಡರೆ, ಕೋಪ ಮೂಡುವ ಅನೇಕ ಸಂದರ್ಭಗಳು ಅದೃಶ್ಯವಾಗುತ್ತವೆ. ಮನೆಯವರನ್ನು ಮಾಲೀಕತ್ವದ ವಸ್ತುಗಳಂತೆ ಕಾಣುವ, ಖಾಸಗಿತನ ಎಂಬ ಮೌಲ್ಯದ ಅರಿವೇ ಇಲ್ಲದ ನಮ್ಮ ಸಮಾಜದಲ್ಲಿ ಇದನ್ನು ಪಾಲಿಸುವುದು ಸ್ವಲ್ಪ ಕಷ್ಟ. ಆದರೆ ಈ ವಿಷಯದಲ್ಲಿ ನೀವು ಜಯಿಸಿದರೆ, ಮಿಕ್ಕ ಸಲಹೆಗಳನ್ನು ನೀವು ಬಹಳ ಸುಲಭವಾಗಿ ಅಳವಡಿಸಿಕೊಳ್ಳಬಹುದು.


ಜೀವನ ಎಂದ ಮೇಲೆ ಸಣ್ಣ ಪುಟ್ಟ ಕಿರಿಕಿರಿಗಳು, ಬೇಸರಗಳು ಇದ್ದೇ ಇರುತ್ತವೆ. ಎಷ್ಟೋ ಸಂದರ್ಭಗಳು, ವ್ಯಕ್ತಿಗಳು ನಮಗೆ ಇಷ್ಟವಾಗುವುದಿಲ್ಲ. ಇಷ್ಟಪಡುವಂತೆ ನಮ್ಮನ್ನು ನಾವೇ ವಂಚಿಸಿಕೊಳ್ಳಲೂ ಆಗುವುದಿಲ್ಲ. ಇದನ್ನೆಲ್ಲಾ ನೀವು ಈಗಾಗಲೇ ಅನುಭವಿಸಿದ್ದೀರಿ. ಮುಂದೆಯೂ ಅನುಭವಿಸುತ್ತೀರಿ. ಆದರೆ, ಹೃದಯಾಘಾತ, ಹೊಟ್ಟೆ ಹುಣ್ಣುಗಳು, ಅಜೀರ್ಣ, ಬೆನ್ನು ನೋವು, ತಲೆನೋವು ಮುಂತಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಕೆಟ್ಟ ಕೋಪ ಇದೆಯಲ್ಲ? ಅದನ್ನು ನೀವು ಇವತ್ತಿನಿಂದಲೇ ತೆಗೆದುಹಾಕಬಹುದು. ಆಯ್ಕೆ ನಿಮ್ಮದು.

English summary
Do you get angry? If you say you don't, then you will be lying to yourself. It is a natural tendency of a human being to get angry for any or no reason. But, there better to be calm than get angry for our health sake. Here find 6 useful tips to control anger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X