ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮವರೇ ಏಕೆ ಬಾಳೆಹಣ್ಣು ಸಿಪ್ಪೆ ಎಸೆಯುತ್ತಾರೆ?

By ಮಾಧವ, ಬೆಂಗಳೂರು
|
Google Oneindia Kannada News

Are our people really ours?
ಸಮಸ್ಯೆಗಳು ಯಾರಿಗಿರುವುದಿಲ್ಲ ಹೇಳಿ? ಸಂಸಾರ, ಬಂಧು-ಬಳಗ ಅಂದ ಮೇಲೆ ನೂರೆಂಟು ಚಿಂತೆಗಳು, ಸಮಸ್ಯೆಗಳು ಇದ್ದದ್ದೆ. ಆದರೆ, ಕನ್ನಡಿ ಮುಂದೆ ನಿಂತು ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾವು ಯಾವತ್ತಾದರೂ ಯತ್ನಿಸಿದ್ದೇವೆಯಾ? ಅಥವಾ ನಮ್ಮ ಬಗ್ಗೆ ಚಿಂತಿಸದೆಯೆ ಇತರರ ಇಷ್ಟಕಷ್ಟಗಳ ಬಗ್ಗೆ ಒಂದು ಬಾರಿಯಾದರೂ ಯೋಚಿಸಿದ್ದೇವಾ? ಸರಿ, ಈ ಸಮಸ್ಯೆಗಳಿಗೆ, ನಮ್ಮಲ್ಲೇ ಇರುವ ದೋಷಗಳಿಗೆ ಪರಿಹಾರ ಏನು? ಮಾಧವ ಅವರು ಬರೆಯುವ ಈ ಸರಣಿ ಲೇಖನದಲ್ಲಿ ಸಮಸ್ಯೆ ಮತ್ತು ಪರಿಹಾರಗಳು ಒಂದೊಂದಾಗಿ ಬಿಡಿಸಿಕೊಳ್ಳುತ್ತಾ ಹೋಗುತ್ತವೆ. ಸಾಧ್ಯವಾದರೆ ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ. - ಸಂಪಾದಕ.

***
ನೀವು ನಿಮ್ಮ ಮನೆಯವರೊಂದಿಗೆ ಹೇಗೆ ನಡೆದುಕೊಳ್ಳುತ್ತೀರಿ? ಅನೇಕ ಮಂದಿ, ಬೀದಿಯಲ್ಲಿ ಸಿಗುವ ಅಪರಿಚಿತ ವ್ಯಕ್ತಿಯನ್ನು ತಮ್ಮ ಕುಟುಂಬದವರಿಗಿಂತ ಚೆನ್ನಾಗಿ ಮಾತನಾಡಿಸುತ್ತಾರೆ. "ನನ್ನ ಕುಟುಂಬ ಸದಸ್ಯರು ನನ್ನ ಖಾಸಗಿ ವಸ್ತುಗಳು" ಎಂಬ ದುರಾಲೋಚನೆ ನಮ್ಮ ಸಮಾಜದಲ್ಲಿ, ಹಟ್ಟಿ ಗಣಿಯ ಚಿನ್ನದ ಹಾಗೆ, ಒಳಗೆ ಹೂತು ಹೋಗಿದೆ.

ವಿಜಯಲಕ್ಷ್ಮಿ ಅಲಿಯಾಸ್ ವಿಜಿ ಅವರಿಗೆ ಮೂರು ಮಕ್ಕಳು, ಒಂದು ಗಂಡ. ಶಾಲೆಗೆ ಹೋಗುವ ಮುನ್ನ ಮಕ್ಕಳು ವಿಜಿಯವರಿಗೆ "ಮಾತೃ ದೇವೊ ಭವ" ಎಂದು ನಮಸ್ಕರಿಸುತ್ತಾರೆ. ಶಾಲೆ ಮುಗಿದು ಮನೆಗೆ ಬಂದ ಮಕ್ಕಳು, ತಿಂಡಿ ಕೊಡು, ಕತೆ ಹೇಳು, ಗೊಂಬೆ ಕೊಡಿಸು, ಆಟವಾಡು, ಎಂದೆಲ್ಲಾ ದೇವರನ್ನು ಪೀಡಿಸುತ್ತಾರೆ. ವಿಜಿ, ಮುಖ ಸಿಂಡರಿಸಿಕೊಂಡು, ಈ ಪಾತ್ರಗಳನ್ನೆಲ್ಲಾ ನಿರ್ವಹಿಸಿ, "ಉಫ್ ಅಪ್ಪಾ" ಎಂದು ಕುಳಿತುಕೊಳ್ಳುವ ಹೊತ್ತಿಗೆ ಪತಿರಾಯರು ಆಫೀಸ್ ಇಂದ ಆಗಮಿಸಿದ್ದಾರೆ.

ಆಫೀಸಿಂದ ಬಂದ ನಂತರ ಹೆಂಡತಿಗೆ ಒಂದು ಎರಡು ಒಳ್ಳೆಯ ಮಾತು? ಇಲ್ಲವೇ ಇಲ್ಲ. ಬೇಟೆಯನ್ನು ಮುಗಿಸಿ ಬಂದ ಹುಲಿಯ ಹಾಗೆ ಗಂಡ ವಿಜಿಯನ್ನು ನೋಡಿ "ಗುರ್ರ್" ಎಂದು ರೇಗುತ್ತಾರೆ. ಕಾಫಿ, ಪೇಪರ್, ಕನ್ನಡಕ ಮುಂತಾದ ವಸ್ತುಗಳಿಗೆ ಯಜಮಾನರಿಂದ ಆಜ್ಞೆಯಾಗುತ್ತದೆ. ವಿಜಿ ಏನೂ ಹೇಳದೆ ಆಜ್ಞೆಗಳನ್ನು ದಯಪಾಲಿಸುವುದೂ ಸತ್ಯ. ಎಲ್ಲರೂ ಮಲಗಿದ ಮೇಲೆ ತನ್ನ ಕರ್ಮವನ್ನು ದೂಷಿಸುವುದೂ ಸತ್ಯ. ವಿಜಿ ತಮ್ಮ ಚಿತ್ರಕಲೆಯ ಹವ್ಯಾಸಕ್ಕೆ ಚಪ್ಪಡಿ ಕಲ್ಲು ಹಾಕಿಸಿ ಎಷ್ಟೋ ವರ್ಷಗಳು ಕಳೆದು ಹೋಗಿವೆ. ಸಿನೆಮಾ, ಸಂಗೀತ ಮುಂತಾದ ಮನರಂಜನೆಯ ಚಟುವಟಿಕೆಗಳಂತೂ ಕೇಳುವುದೇ ಬೇಡ. ವಿಜಿಯ ಜೀವನವು ಗಂಡ-ಮಕ್ಕಳ ಸುನಾಮಿಯಲ್ಲಿ ಮುಳುಗಿ ಹೋಗಿದೆ. ಕುಟುಂಬಸೇವಕಿ ವಿಜಯಲಕ್ಷ್ಮಿಯವರು ಒಬ್ಬರೇ ಇದ್ದಾಗ ಕಾರಣವಿಲ್ಲದೆ (?) ಅಳುತ್ತಾರೆ.

***
ಸರ್ಕಾರಿ ನೌಕರ ಭೋಜಯ್ಯನವರಿಗೆ ತಮ್ಮ ಕುಟುಂಬದ ಬಗ್ಗೆ ಬಲು ಹೆಮ್ಮೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಭೋಜಯ್ಯನವರಿಗೆ ತಾವು ಕುಟುಂಬದವರ ಮೇಲೆ ಚಲಾಯಿಸುವ ಅಧಿಕಾರದ ಮೇಲೆ ಹೆಮ್ಮೆ. ಸದಾಕಾಲ ಪತಿ ಸೇವೆಯಲ್ಲಿ ನಿರತರಾಗಿರುವ ಪತ್ನಿ. ಹೇಳಿದಕ್ಕೆಲ್ಲಾ ತಲೆಯಾಡಿಸುವ ಮಕ್ಕಳು. ಭೋಜಯ್ಯನವರಿಗೆ ತಮ್ಮ ಮಗನನ್ನು ಒಬ್ಬ ದೊಡ್ಡ ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕೆಂಬ ಹಿರಿದಾಸೆ. ತಮ್ಮ ಮಗಳನ್ನು ಅಷ್ಟೇ ದೊಡ್ಡ ಐಪಿಎಸ್ ಅಧಿಕಾರಿಗೆ ಕೊಟ್ಟು ಮದುವೆ ಮಾಡಬೇಕೆಂಬ ಕನಸು. ಮಕ್ಕಳ ಆಸೆ ಏನೆಂದು ಯಾರು ಕೇಳುವರು?

ಯಾರೂ ಕೇಳಲಿಲ್ಲ. ಒಂದು ದಿವಸ, ಭೋಜಯ್ಯನವರ ಮಗ ಮುಂದಿನ ಮನೆಯ ಹುಡುಗಿಯ ಜೊತೆ ಓಡಿ ಹೋದನು. ಐಟಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ತಂದೆಯನ್ನು ಮರೆತನು. ಇದಾದ ಎರಡು ತಿಂಗಳಿಗೆ, ಭೋಜಯ್ಯನವರ ಮಗಳು ಹಿಂದಿನ ಮನೆಯ ಹುಡುಗನ ಜೊತೆ ಓಡಿ ಹೋದಳು. ತಂದೆಯನ್ನು ಧಿಕ್ಕರಿಸಿ ಬರೆದ ಮಗಳ ಪತ್ರವನ್ನು ಓದಿ, ಭೋಜಯ್ಯನವರಿಗೆ ಹೃದಯಾಘಾತವಾಯಿತು. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಅವರಿಗೆ, "ಅನ್ನ, ಮನೆ, ಉಡುಪು, ಹಣ ಎಲ್ಲವನ್ನೂ ಒದಗಿಸಿದ ನನಗೇ ನನ್ನ ಮಕ್ಕಳು ಏಕೆ ಮುಖಕ್ಕೆ ಬಾಳೆಹಣ್ಣು ಸಿಪ್ಪೆ ಎಸೆದರು?" ಎಂಬ ಆಲೋಚನೆ.

***
ಸ್ನೇಹಿತರೇ, ನಿಮ್ಮ ಮನೆಯವರು ಆಸೆ, ಆಕಾಂಕ್ಷೆ, ಖಾಸಗಿತನಗಳಿರುವ ವಿಶೇಷ ಜೀವಿಗಳೆಂದು ನೀವು ಮರೆತಿರಬಹುದು. ಅನೇಕ ಜನರಿಗೆ ಆಹಾರ ನೀಡುವ ಬೆಳೆಗಳನ್ನು ಆನೆಗಳು ದಬ ದಬ ಎಂದು ತುಳಿದುಹಾಕುವ ಹಾಗೆ, ನೀವು ನಿಮ್ಮ ಕುಟುಂಬದವರ ವಿಶಿಷ್ಟ ವ್ಯಕ್ತಿತ್ವಗಳನ್ನು ದಮನ ಮಾಡುತ್ತಿರಬಹುದು. ಶಾಂತಿ, ಸಹಾನುಭೂತಿಗಳಿಂದ ನಿಮ್ಮ ಸಂಸಾರವನ್ನು ನಡೆಸಲು ಈ ಕೆಳಗಿನ ತಂತ್ರಗಳು ಸಹಾಯ ಮಾಡುತ್ತವೆ:

* ನೀವು ನಿಮ್ಮ (ದು)ಸ್ತಿತಿಗೆ ತಂದೆ, ತಾಯಿ, ಗಂಡ, ದೇವರು ಮುಂತಾದವರನ್ನು ದೂಷಿಸುತ್ತೀರಾ? ಒಂದು ವಿಷಯ ನೆನಪಿರಲಿ. ನಿಮ್ಮ ಅವಸ್ತೆಗೆ ಸಂಪೂರ್ಣವಾಗಿ ನೀವೇ ಹೊಣೆ! ಹೌದು. ನಿಮ್ಮ ಗಂಡ ನಿಮಗೆ ಹೊಡೆಯಬಹುದು ಅಥವಾ ಹೆಂಡತಿ ಪೀಡಿಸಬಹುದು. ಇಂತಹ ನೀಚ ವರ್ತನೆಗಳನ್ನು ಸಹಿಸಿಕೊಂಡರೆ, ನೀವು ಅನ್ಯರಿಗೆ ಬಲಿಪಶು ಆಗುವುದು ಖಂಡಿತ. ನಿಮ್ಮ ಮೂಲಭೂತ ಮಾನವೀಯ ಹಕ್ಕುಗಳನ್ನು ಪಡೆಯಲು ನೀವೇ ಎದ್ದು ನಿಲ್ಲಬೇಕು.

* ಪ್ರತಿಯೊಂದು ಮನುಜನಿಗೂ ಖಾಸಗಿತನ ಎಂಬ ಒಂದು ಮೌಲ್ಯವಿರುತ್ತದೆ ಎಂಬುದು ನಿಮಗೆ ಗೊತ್ತೇ? ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಒಮ್ಮೊಮ್ಮೆ ಏಕಾಂತದ ಅವಶ್ಯಕತೆ ಇರುತ್ತದೆ. ಅನಿಸಿಕೆ-ಅನುಭವ-ಭಾವನೆಗಳನ್ನು ಸದಾಕಾಲ ಹರಟುತ್ತಿರಬೇಕು ಎಂಬ ಕುಟುಂಬ ತೆರಿಗೆಯನ್ನು ಇಂದೇ ಮುಕ್ತಗೊಳಿಸಿ. ಭಾವನೆಗಳ ಹಂಚಿಕೆ ಐಚ್ಛಿಕವೇ ಹೊರತು ಕಡ್ಡಾಯವಲ್ಲ.

* ಮದುವೆ ಮುಂತಾದ ಸಮಾರಂಭಗಳಿಗೆ ನಾವು ಜೊತೆಯಲ್ಲೇ ಹೋಗಬೇಕು, ಎಂದು ನಿಮ್ಮ ಜೀವನಸಂಗಾತಿಗೆ ಧಮ್ಕಿ ಹಾಕಬೇಡಿ. ಅವರಿಗೆ ಇಷ್ಟವಿಲ್ಲದಿದ್ದರೆ ನೀವು ಹೋಗಿಬನ್ನಿ. ಆದರೆ ಸಂಗಾತಿಯ ಊಟದ ವಿಷಯ ಮಾತ್ರ ಅವರಿಗೇ ಬಿಟ್ಟು ಬಿಡಿ!

* ಮಕ್ಕಳು ಮಾಲೀಕತ್ವದ ವಸ್ತುಗಳಲ್ಲ. ಅವರೂ ಸ್ವಾತಂತ್ರ್ಯ ಬಯಸುವ ಜೀವಿಗಳು. ಪುಟಾಣಿಗಳು ಬೆಳೆದು ನಿಂತ ಮೇಲೆ ಒಂದಲ್ಲಾ ಒಂದು ದಿನ ತಮ್ಮ ಕನಸುಗಳನ್ನು ಪೂರೈಸಲು ಮನೆಯನ್ನು ಬಿಟ್ಟು ಹೋಗಲೇಬೇಕು. ಹೀಗೆ ಹೊರಡುವಾಗ, ರಂಪ ರಾದ್ಧಾಂತ ಮಾಡಿ, "ನೀನು ಬಿಟ್ಟು ಹೋದರೆ ನಾನು ಸತ್ತೇಹೋಗ್ತೀನಿ", ಎಂದು ಹೇಳಿ, ಆಣೆ ಪ್ರಮಾಣ ಮಾಡಿಸಿ, ಕೊನೆಗೆ ಎರಡೂ ಕಡೆ ಬೇಸರ ಮಾಡಿಕೊಂಡು ಕಳಿಸಿಕೊಡುವ ಅವಶ್ಯಕತೆ ಇಲ್ಲ. ಗೂಡನ್ನು ಬಿಟ್ಟು ಹೊರಡುವುದು ಪರಿಣಾಮಕಾರಿ ಬದುಕಿನ ಒಂದು ಪ್ರಮುಖ ಭಾಗ.

* ಮನೆಯವರಿಂದ ಆಜ್ಞೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಆಜ್ಞೆ ಕೊಡುವುದನ್ನು ನಿಲ್ಲಿಸಿ. ಮನೆಯವರೊಬ್ಬರ ಒಂದು ನಿರ್ಧಾರದ ಬಗ್ಗೆ ನಿಮ್ಮ ದಿವ್ಯಾಭಿಪ್ರಾಯವನ್ನು ಒದಗಿಸುವ ಮುನ್ನ ಸುಮ್ಮನೆ ಇದ್ದು ನೋಡಿ. ನೀವು ಕಲ್ಪಿಸಿಕೊಂಡ ಪ್ರಳಯ ಖಂಡಿತ ಸಂಭವಿಸುವುದಿಲ್ಲ!

ಕುಟುಂಬ ಎಂಬುದು ಮನುಷ್ಯರಿಗೆ ಒಂದು ಅಪೂರ್ವ ಬೆಳವಣಿಗೆಯ ಘಟಕವೂ ಆಗಬಹುದು; ಗಂಭೀರ ಮಾನಸಿಕ ಸಮಸ್ಯೆಗಳ ಘಟಕವೂ ಆಗಬಹುದು. ನಿಮ್ಮ ಮನೆಮಂದಿಯನ್ನು ನೀವು ಆಪ್ತ ಸ್ನೇಹಿತರಾಗಿ ಕಾಣಬಹುದು ಅಥವಾ ಖಳನಾಯಕರಂತೆ ನೋಡಬಹುದು. ಆಯ್ಕೆ ನಿಮ್ಮದು. ಆದರೆ, ಮಾನವನ ಪ್ರತ್ಯೇಕ ಅಸ್ತಿತ್ವವನ್ನು ಗೌರವಿಸುವ, ಸಹನೆಯಿಂದ ತುಂಬಿದ, ನಿರ್ಬಂಧ ಇಲ್ಲದ ಪ್ರೀತಿಯನ್ನು ನೀಡುವ ಸಂಬಂಧಗಳಿವೆಯಲ್ಲ? ಅವು ನಿಜವಾಗಿಯೂ ಸುಂದರ, ಸುಕೋಮಲ ಮತ್ತು ಸಾರ್ಥಕ. ಇಂತಹ ಸಂಬಂಧಗಳು ನಿಮ್ಮದಾಗಲಿ.

English summary
Madhava will writing series of articles about self improvement skills. The article will explore one common character defect prevalent in our society. Some character defects are: approval-seeking, family ownership, addictive & compulsive behavior, being victimized by the past, comparing others, and so on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X