ಸ್ನೇಹಕುಂಜ ಆರೋಗ್ಯ ಧಾಮ ಅನುಭವ ಕಥನ

By: *ಶ್ರೀಮತಿ ಪ್ರಿಯಾ. ಎಂ. ಕಲ್ಲಬ್ಬೆ.
Subscribe to Oneindia Kannada
Snehakunja Naturopathy Hospital , Honnavar
ಹೊನ್ನಾವರದ ಕಾಸರಕೋಡನಲ್ಲೊಂದು ಆರೋಗ್ಯ ಧಾಮ... ಸ್ನೇಹಧಾಮ.... ಸ್ನೇಹಕುಂಜ ದ ಆವರಣದಲ್ಲಿ, ಮಹಾಪುರುಷ ವಿವೇಕಾನಂದರ ಹೆಸರು ಹೊತ್ತು ನಿಂತಿರುವ ಈ "ವಿವೇಕಾನಂದ ಆರೋಗ್ಯಧಾಮ"ದ ಕುರಿತು ಒಂದಿಷ್ಟು ಅನುಭವ ಕಥನ..

ಉತ್ತರಕನ್ನಡದ ಈ ಕರಾವಳಿ ಭಾಗದಲ್ಲಿ ಸ್ನೇಹಕುಂಜದ ಹೆಸರನ್ನು ಕೇಳದವರಿಲ್ಲ. ನೋವುಗಳಿಗೆ ವಿಶೇಷ ಆರೈಕೆಗಳಿರುವ ಈ ಆಸ್ಪತ್ರೆ 35 ವರ್ಷಗಳಿಂದ ಸದ್ದಿಲ್ಲದೇ ಮಾಡುತ್ತಿರುವ ಕಾರ್ಯಕ್ರಮಗಳು ನೂರಾರು. ಈ ಲೇಖನ ಬರೆಯುವುದಕ್ಕಿಂತ ಮೊದಲು ನನ್ನನ್ನು ಕಾಡಿದ್ದ ಅಂಶಗಳಲ್ಲಿ ಯಾವುದನ್ನು ಹೇಳಲಿ ಯಾವುದನ್ನು ಬಿಡಲಿ ಎಂಬುದೂ ಒಂದು.

ಆಸ್ಪತ್ರೆಯ ಬಗೆಗೆ ಹೇಳ ಹೊರಟರೆ ಸ್ನೇಹಕುಂಜ ಎನ್ನುವ ಸಂಸ್ಥೆಯ ವಿರಾಟ್ ರೂಪ ಎಲ್ಲಿ ಮರೆಯಾಗಿ ದೋಷವೆಸಗುತ್ತೇನೋ ಅನ್ನಿಸಿದರೆ ಮತ್ತೆ ಕುಸುಮಕ್ಕ ಎಂಬ ಮಹಾ ಚೇತನದ ಕುರಿತು ಬರೆಯಹೊರಟರೆ ಅದೇ ಒಂದು ಪುಸ್ತಕವಾದೀತು! ಅವನ್ನೆಲ್ಲ ಈ ನನ್ನ ಪುಟ್ಟ ಲೇಖನದಲ್ಲಿ ಹೇಗೆ ಹಿಡಿದಿಡಲಿ ಎಂಬುದು ನನ್ನ ಸಮಸ್ಯೆ.

ಖಂಡಿತವಾಗಿ ಮೊದಲೇ ಹೇಳಿಬಿಡುತ್ತೇನೆ. ಇಲ್ಲಿಯ ಎಲ್ಲವನ್ನೂ ವಿವರಿಸಲು ನನ್ನಲ್ಲಿ ಪದಗಳಿಲ್ಲ. ಇದು ನನ್ನದೊಂದು ಅನುಭವ ಕಥನವಷ್ಟೇ. ನನ್ನಂಥ ಎಷ್ಟೋ ಜನರಿಗೆ
ಆರೋಗ್ಯ ಭಾಗ್ಯವನ್ನಿತ್ತ ಈ ಆಯುರ್ವೇದಿಕ್ ಆಸ್ಪತ್ರೆಯನ್ನು ಕಟ್ಟಿದ್ದು ಸುಮಾರು 35 ವರುಷಗಳಷ್ಟು ಹಿಂದೆ.

ಪರಿಸರ ತಜ್ಞೆ ಡಾ. ಕುಸುಮಾ ಸೊರಬ ಎಂಬ ಚೇತನದ ಕನಸಿನ ಕೂಸಿದು. ಆರೋಗ್ಯ, ಪರಿಸರ ಸಂರಕ್ಷಣೆ, ನ್ಯಾಯ, ಹಿಂದುಳಿದವರ ಆದಿವಾಸಗಳ ಕಲ್ಯಾಣ, ಹೀಗೆ ಹತ್ತು ಹಲವು ಕನಸುಗಳ ನನಸಾಗಿಸಿದ ಡಾ ಕುಸುಮಾ ಸೊರಬ ಅವರು ನಮ್ಮ ನಾಡು ಕಂಡ ಅಪರೂಪದ ಮಹಿಳೆ.

ಮುಂಬೈ ಅಂತ ಮಹಾನಗರಿಯಲ್ಲಿ ಆ ಕಾಲದಲ್ಲೇ ಆಲೋಪಥಿಕ್ ವೈದ್ಯಕೀಯ ಪರೀಕ್ಷೆ ಮುಗಿಸಿ ಅವಕಾಶಗಳು ಅವರಿಗೆ ಸಾಕಷ್ಟಿದ್ದಾಗಲೂ ಈ ಕರಾವಳಿಯ ತೀರದಲ್ಲಿ ಒಂದು ಹಳ್ಳಿಯ ಮೂಲೆಗೆ ಬಂದು ಕನಸು ಕಟ್ಟಿದವರು! ಆ ಕನಸನ್ನು ನನಸಾಗಿಸಿ ಬಾಳಿ ಬೆಳಗಿದವರು. ಆಗಲೇ ಹೇಳಿದಂತೆ ಅವರು ಮತ್ತು ಅವರ ವ್ಯಕ್ತಿತ್ವ, ಮತ್ತು ಅವರ ಸಾಧನೆಯ ಕುರಿತಾಗಿ ಹೇಳಬೇಕೆಂದರೆ ಒಂದು ಪುಸ್ತಕವೇ ಆದೀತು. ಅವರನ್ನು ಅರಿಯಲು ಈ ಮಣ್ಣಿಗೆ ಒಮ್ಮೆ ಬಂದರೆ ಸಾಕು..

ಇಂದು ಪರಿಸರ ಹೋರಾಟಗಾರರಾದ ಶ್ರೀ ಎಂ. ಆರ್. ಹೆಗಡೆಯವರ ಅಧ್ಯಕ್ಷತೆಯಲ್ಲಿ ಇಲ್ಲಿಯ ಕಾರ್ಯಚಟುವಟಿಕೆಗಳು ಸಮಿತಿಯ ನೇತ್ರತ್ವದಲ್ಲಿ ನಡೆಯುತ್ತಿವೆ. ನಾನು ಮುಖ್ಯವಾಗಿ ಹೇಳಬೇಕಾಗಿದ್ದು ವಿವೇಕಾನಂದ ಆರೋಗ್ಯ ಧಾಮವೆಂಬ ಆಸ್ಪತ್ರೆಯ ಕುರಿತು. ಡಾ. ಮಹೇಶ್ ಪಂಡಿತ್ ಅವರು ಇಲ್ಲಿಯ ಮುಖ್ಯ ವೈದ್ಯರು. ಇವರಲ್ಲದೇ ಸಹಾಯಕ ವೈದ್ಯರು, ಉಳಿದ ಸ್ಪೆಷಲಿಸ್ಟಗಳು ಇದ್ದಾರೆ.

ಬೋರ್ಗರೆವ ಸಮುದ್ರಘೋಷದಲ್ಲಿ ಇಲ್ಲಿಯ ಸುಂದರವಾದ ಪರಿಸರವಿದೆ. ಆಸ್ಪತ್ರೆ ಶುದ್ಧ ಹಳ್ಳಿಯ ವಾತಾವರಣ ಹೊಂದಿದ್ದು ವಾತಾವರಣವೂ ಪರಿಶುದ್ಧವಾಗಿದೆ.

ಅತ್ಯಾಧುನಿಕ ಸುಸಜ್ಜಿತ ಆಸ್ಪತ್ರೆಯ ಎಲ್ಲ ಉಪಕರಣಗಳಿದ್ದು ಸ್ಪೆಷಲ್ ವಾರ್ಡಗಳು ಇವೆ. ಆದರೆ ಪೇಟೆಯ ವೈಭವೀಕರಣವಿಲ್ಲದ ಸಾದಾ ಸೀದಾ ಕೋಣೆಗಳು. ಅಗತ್ಯ ಪರಿಕರಣಗಳು. ಎಲ್ಲಕ್ಕಿಂತ ಹೆಚ್ಚಾಗಿ ನಗುಮೊಗದ ದಾಯಿಗಳು.

ಅವರ ಪ್ರೀತಿಯ ಆರೈಕೆ ಇವೆಲ್ಲವೂ ಆಸ್ಪತ್ರೆಯನ್ನೂ ಮನೆಯಂತೆ ಆಪ್ತವನ್ನಾಗಿಸಿವೆ. ಆಸ್ಪತ್ರೆಯ ಸುತ್ತ ಮುತ್ತಲಿನ ತೋಟದಲ್ಲಿ ಎಲ್ಲವಿಧದ ಔಷಧೀಯಗಿಡಗಳು ಬೆಳೆಯುತ್ತಿವೆ. ಶುದ್ಧ ಸಾವಯವ ಪದ್ಧತಿಯಲ್ಲಿ ಬೆಳೆದ ಈ ಗಿಡಗಳಿಂದ ಇಲ್ಲಿಯೇ ಹಲವು ಔಷಧಗಳ ತಯಾರಿಕೆಯೂ ನಡೆಯುತ್ತದೆ. ಇದಲ್ಲದೇ ಇಲ್ಲಿಯ ಔಷಧೋಪಚಾರಗಳಿಗೆ ತಕ್ಕಂತೆ ಆಹಾರ ಮತ್ತು ತಿಂಡಿಯ ವ್ಯವಸ್ಥೆ ಕೂಡ ಇಲ್ಲಿದ್ದು ಅದು ಆಸ್ಪತ್ರೆಯ ರೋಗಿಗಳ ರೋಗಕ್ಕನುಸಾರವಾದ ಆಹಾರವನ್ನು ತಯಾರಿಸಿ ಕೊಡಲಾಗುತ್ತದೆ.

ಫಿಜಿಯೋಥೆರಪಿ, ಸ್ಲಿಮ್ಮಿಂಗ್ ಥೆರಫಿ, ಪಂಚಕರ್ಮ ಚಿಕಿತ್ಸೆಗಳು, ಡಿಸ್ಕ್ ಸ್ಲಿಪ್ ಅಂತ ನೋವುಗಳಿಗೆ ಇಲ್ಲಿ ಸುಲಭವಾದ ಔಷಧಗಳಿವೆ. ಚಿಕಿತ್ಸೆಗಳಿವೆ. ಹೆಚ್ಚಿನ ಚಿಕಿತ್ಸೆಗಳಿಗೆ
ಇಲ್ಲಿಯೇ ಉಳಿದು ತೆಗೆದುಕೊಳ್ಳಬೇಕಾಗುವುದರಿಂದ ದೀರ್ಘ ಚಿಕಿತ್ಸೆಗಳಿಗೆ ಕೆಲವುದಿನ ಉಳಿಯುವುದು ಅನಿವಾರ್‍ಯ.

ವಿದೇಶಿಗರು, ಹಾಗೂ ಬೆಂಗಳೂರು. ಮುಂಬೈ ಅಂತ ಮಹಾನಗರಗಳಿಂದಲೂ ಇಲ್ಲಿ ಚಿಕಿತ್ಸೆಗಾಗಿ ಜನರು ಬರುತ್ತಾರೆ. ದೂರದಿಂದ ಬರುವವರು ಮೊದಲೇ ಫೋನ್ ಮಾಡಿ ವಿಚಾರಿಸಿಕೊಳ್ಳುವುದು ಉತ್ತಮ.

ಎಲ್ಲಕ್ಕಿಂತ ಮುಖ್ಯವಾಗಿ ಹೇಳಲೇಬೇಕಾದ ಮತ್ತೊಂದು ವಿಶೇಷವೆಂದರೆ ಇಲ್ಲಿ ಒಂದು ಅದ್ಭುತ ಗ್ರಂಥಾಲಯವಿದೆ. ಅಂದರೆ ಬಹುದೊಡ್ಡದೆಂದಲ್ಲ. ಆದರೆ ಅತ್ಯುತ್ತಮ ಪುಸ್ತಕಗಳ ಸಂಗ್ರಹ, ಆಧ್ಯಾತ್ಮ, ಸಾಮಾಜಿಕ ಎಲ್ಲವೂ ಪುಸ್ತಕಗಳಿವೆ. ಮನಸ್ಸಿಗೆ, ಬುದ್ದಿಗೆ, ಆರೋಗ್ಯಕ್ಕೆ ಎಲ್ಲಕ್ಕೂ ಚೈತನ್ಯವನ್ನೀಯುವ ಶಕ್ತಿಸಂಚಾರದ ಕೇಂದ್ರವಿದು.

ಪ್ರವೇಶದ್ವಾರದಲ್ಲಿಯೇ ನಮ್ಮನ್ನು ಸ್ವಾಗತಿಸುತ್ತಿರುವ ದಿವಂಗತ ಡಾ. ಕುಸುಮಾ ಸೊರಬರ ಚೇತನ ಇಡೀ ಆಸ್ಪತ್ರೆಯ ಆವಾರದಲ್ಲಿ ನಮ್ಮನ್ನು ಸ್ಪರ್ಶಿಸುವ ಅನುಭವವಾಗುತ್ತದೆ.
ಇದು ಭ್ರಮೆಯಲ್ಲ. ಒಂದು ಸಂಸ್ಥೆ, ಒಂದು ಕನಸು ಅವರು ಕಟ್ಟಿ ಬೆಳೆಸಿದ ರೀತಿ, ಅಲ್ಲಿ ಇವತ್ತಿಗೂ ನಡೆಯುತ್ತಿರೋ ನೂರಾರು ಕಾರ್ಯಕ್ರಮಗಳ ಕುರಿತು ತಿಳಿಯುತ್ತಿದ್ದರೆ
ಮನುಷ್ಯ ಮನಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗುತ್ತದೆ.

ಸದಾ ಸ್ವಾರ್ಥವನ್ನೇ ಯೋಚಿಸುವ ನಾವುಗಳು ಒಮ್ಮೊಮ್ಮೆಯಾದರೂ ಮನಸಿನ ದೃಷ್ಟಿ ಸಮಾಜದತ್ತ ತೆರೆದರೆ ಎಷ್ಟೆಲ್ಲ ಒಳ್ಳೆಯದು ಮಾಡಬಹುದು!! ಸಮಾಜಕ್ಕೆ, ಪ್ರಪಂಚಕ್ಕೆ ಅನ್ನಿಸದೇ ಇರದು. ಅವರ ಬದುಕು ಸಾರ್ಥಕ. ಇನ್ನು ಅವರದ್ದೇ ಎಷ್ಟೋ ಕನಸುಗಳಿಗೆ ಜೀವ ತುಂಬುತ್ತಿರೋ ಇಲ್ಲಿರುವ ಪ್ರತಿಯೊಬ್ಬರ ಬದುಕೂ ಸಾರ್ಥಕ. ನಾವೂ ಮಾಡಬಹುದಾದ ಸಾರ್ಥಕತೆ ಇರೋ ಕೆಲಸಗಳು ಸಾಕಷ್ಟಿವೆ. ಒಮ್ಮೆ ಇಲ್ಲಿ ಭೇಟಿಕೊಡಿ.
Sneha Kunj
SNEHAKUNJA
Kasarkod
Honavar - 581 342
Ph: 94801 89642

ಎಂ.ಆರ್. ಹೆಗಡೆ ಬಗ್ಗೆ : ಸ್ನೇಹಕುಂಜ ಅಧ್ಯಕ್ಷರು, ನಿವೃತ್ತ ಶಿಕ್ಷಕರೂ ಆದ ಕುಮಟಾ ಹೊಲನಗದ್ದೆ ಮೋಹನ ರಾಮಕೃಷ್ಣ ಹೆಗಡೆ ಅವರಿಗೆ ರಾಜ್ಯ ಸರಕಾರ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ.

ಮೂಕ ಸಹ್ಯಾದ್ರಿಗೆ ಮಾತುಕೊಟ್ಟ ಖ್ಯಾತಿಯ ಡಾ| ಕುಸುಮಾ ಸೊರಬ ಸ್ನೇಹಕುಂಜ ಸ್ಥಾಪಿಸಿ, ಆಸ್ಪತ್ರೆ ಆರಂಭಿಸಿ ಆಧುನಿಕ ಮತ್ತು ಆಯುರ್ವೇದ ಚಿಕಿತ್ಸೆಗಳನ್ನು ನೀಡಿ ಪ್ರಸಿದ್ಧರಾಗುತ್ತಿರು ವಂತೆಯೇ ಅವರಲ್ಲಿರುವ ಪರಿಸರ ಪ್ರೀತಿ ಜಾಗೃತಗೊಂಡು ಹೋರಾಟಕ್ಕಿಳಿದರು.

ನಿಜವಾಗಿ ಪರಿಸರ ಕಾಳಜಿ ಇದ್ದ ಏಕೈಕ ವ್ಯಕ್ತಿಯಾಗಿದ್ದ ಅವರು ಶರಾವತಿ ಟೇಲರಿಸ್, ಕೈಗಾ, ಸೀಬರ್ಡ್ ಮೊದಲಾದ ಎಲ್ಲ ಯೋಜನೆಗಳ ವಿರುದ್ಧ ಹೋರಾಟ ನಡೆಸಿದ್ದರು. ಯೋಜನೆ ನಿಲ್ಲಲಿಲ್ಲ. ಆದರೆ ಪರಿಸರಕ್ಕಾಗಬಹುದಾಗಿದ್ದ ಅತಿ ಹಾನಿ ತಡೆದರು.

1997ರಿಂದ ಸ್ನೇಹಕುಂಜ ಬಳಗ ಸೇರಿದ ಎಂ.ಆರ್. ಹೆಗಡೆ ಅರಣ್ಯ ಸಮಿತಿಯ ಅಧ್ಯಕ್ಷರಾಗಿ, ತದಡಿ ಉಷ್ಣವಿದ್ಯುತ್ ಸ್ಥಾವರ ವಿರೋಧಿ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾ ಪರಿಸರ ಸಮಿತಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದು, ನೂರಾರು ಪರಿಸರ ಜಾಗೃತಿ ಕಾರ್ಯಕ್ರಮದಲ್ಲೂ ವೃಕ್ಷಾರೋ ಪಣೆ, ನೀರಿನ ಸಂರಕ್ಷಣೆ, ಸಾವಯವ ಗ್ರಾಮ ಯೋಜನೆ, ಎರೆಗೊಬ್ಬರ ತೊಟ್ಟಿ ನಿರ್ಮಾಣ ಮೊದಲಾದ ರಚನಾತ್ಮಕ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಎಲ್ಲೇ ಹೋರಾಟವಿರಲಿ ಅಲ್ಲಿ ಸ್ನೇಹಕುಂಜದ ಎಂ.ಆರ್. ಹೆಗಡೆ, ರವೀಂದ್ರ ಶೆಟ್ಟಿ ಬಳಗ ಹಾಜರಿರುತ್ತದೆ. ಅವರ ದೃಷ್ಟಿಯಂತೆ ಜಿಲ್ಲೆಯ ಹಿತಾಸಕ್ತಿಗೆ ಕೆಲಸ ಮಾಡುತ್ತ ಬಂದಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Snehakunja Naturopathy Hospital at Kasaragod, Honnavar is popular in the Uttara Kannada District with its unique treatment. A Citizen reporter Priya M Kallabe shares her experience with the hospital
Please Wait while comments are loading...