• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಕರೂಪ ಶಿಕ್ಷಣದ ಬಗ್ಗೆ ಮೊದಲು ಚರ್ಚೆಯಾಗಲಿ

By * ರಾಕೇಶ್ ಶೆಟ್ಟಿ
|

ಕಡೆಗೂ 'ಸರ್ಕಾರ ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಬೇಕು' ಅನ್ನುವ ಮಾತುಗಳನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ. ಕಳೆದ ಹಲವು ದಿನಗಳಿಂದ ಇಂಗ್ಲಿಷ್ ಮಾಧ್ಯಮದ ಸುತ್ತ ನಡೆಯುತ್ತಲಿರುವ ಚರ್ಚೆಯಲ್ಲಿ ನಾನು ನಿರೀಕ್ಷಿಸುತಿದ್ದ ಮಾತು "ಏಕರೂಪ ಶಿಕ್ಷಣ"ದ ಬಗ್ಗೆ. ಪೇಟೆಯ/ಉಳ್ಳವರ ಮಕ್ಕಳಿಗೊಂದು ಶಿಕ್ಷಣ, ಹಳ್ಳಿಯ/ಬಡವರ ಮಕ್ಕಳಿಗೊಂದು ಶಿಕ್ಷಣ ಕೊಟ್ಟು ಕಡೆಗೆ ಸಮಾನತೆ, ಸಾಮಾಜಿಕ ನ್ಯಾಯ, ಭಾಷೆ, ನಾಡು-ನುಡಿಯ ಅಳಿವು ಉಳಿವು ಅಂತ ಮಾತನಾಡುವುದೆಷ್ಟು ಸರಿ?

10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ನನಗೆ ಮಾತೃ ಭಾಷೆಯಲ್ಲಿ ಕಲಿಯುವುದೆಷ್ಟು ಸುಲಭ, ಆನಂದದ ವಿಷಯ ಅನ್ನುವುದರ ಅರಿವಿದೆ. ಹಾಗೆಯೇ 10ರ ನಂತರ ಇಂಗ್ಲಿಷ್ ಮಾದ್ಯಮಕ್ಕೆ (ಪಿಯುಸಿಯಲ್ಲಿ ಆಯ್ದುಕೊಂಡಿದ್ದು ವಿಜ್ಞಾನ ವಿಷಯ) ಕಾಲಿಟ್ಟಾಗ ಅನುಭವಿಸಿದ ಕಷ್ಟ, ಕೀಳರಿಮೆಯ ಅನುಭವವೂ ಆಗಿದೆ. ಹಾಗಾಗಿ ಈ ಚರ್ಚೆಯಲ್ಲಿ ಮತ್ತು ಈಗಿನ ನಮ್ಮ ಶೈಕ್ಷಣಿಕ ಪರಿಸ್ಥಿತಿಯಲ್ಲಿ ನಾನು ಇಂಗ್ಲಿಷ್ ಮೀಡಿಯಂ ಬೇಕು ಅನ್ನುವುದರ ಪರವೇ ನಿಲ್ಲುತ್ತೇನೆ.

ಒಂದು ವೇಳೆ ಸಾಹಿತಿಗಳು ಒತ್ತಾಯಿಸುತ್ತಿರುವಂತೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಆಗಬೇಕು ಅನ್ನುವುದಾದರೆ ಅದು ಈ ರಾಜ್ಯದಲ್ಲಿರುವ ಸರ್ಕಾರಿ/ಅನುದಾನಿತ/ಕೇಂದ್ರೀಯ/ಖಾಸಗಿ ಶಾಲೆಗಳಿಗೂ ಏಕರೂಪವಾಗಿ ಅನ್ವಯವಾಗಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಕಡ್ಡಾಯವಾಗಲಿ, ಆ ಮೂಲಕ ಬಡವರ ಮಕ್ಕಳು ಮಾತ್ರ ಕನ್ನಡದಲ್ಲಿ ಕಲಿತು ಮುಂದೆ ಇಂಗ್ಲಿಷ್ ಲೋಕಕ್ಕೆ ಕಾಲಿಟ್ಟು ಅರ್ಧಕ್ಕರ್ಧ ಜನ ಕೀಳರಿಮೆ, ಹೆದರಿಕೆಯಿಂದಾಗಿ ಹಿಂದೆ ಬೀಳಲಿ ಅನ್ನುವುದು ಇಬ್ಬಗೆಯ ನೀತಿಯಾಗುತ್ತದೆ.

ಏಕರೂಪ ಶಿಕ್ಷಣ ಅನ್ನುವಾಗ ಇನ್ನೊಂದು ಅಂಶವನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು. ಮಕ್ಕಳನ್ನು ಶಾಲೆಗೇ ಸೇರಿಸುವಾಗ ಅದು ಇಂಗ್ಲಿಷ್ ಮಾಧ್ಯಮ ಶಾಲೆಯೇ ಅಂತ ಮಾತ್ರ ಈಗಿನ ಪೋಷಕರು ನೋಡುತ್ತಿಲ್ಲ. ಅದರ ಜೊತೆಗೆ ಅವರು ಅಲ್ಲಿರುವುದು ಸೆಂಟ್ರಲ್ ಸಿಲಬಸ್ಸೋ, ಐ.ಸಿ.ಎಸ್.ಈ ಸಿಲಬಸ್ಸೋ (ಅಥವಾ ಇನ್ಯಾವುದೋ) ಅನ್ನುವುದನ್ನು ನೋಡುತಿದ್ದಾರೆ. ನಮ್ಮ ಮಕ್ಕಳು ಇಂತ ಸಿಲಬಸ್ಸ್ ಇರೋ ಶಾಲೆಯಲ್ಲಿ ಓದುತಿದ್ದಾರೆ ಅಂತ ಹೇಳಿಕೊಳ್ಳುವುದು ಈಗಿನ ಪೋಷಕರಿಗೆ ಗರ್ವದ ವಿಷಯವಾಗಿದೆ. ಅಸಲಿಗೆ ಈ ರೀತಿ ಬೇರೆ ಬೇರೆ ಸಿಲ್ಲಬಸ್ಸಿನ ಅಗತ್ಯ ಶಾಲಾ ಮಟ್ಟದಲ್ಲಿ ಏಕೆ ಅನ್ನುವುದು ಸಹ ಚರ್ಚೆಯಾಗಬೇಕಲ್ಲವೇ?

ಇದ್ಯಾವುದನ್ನು ಕೇಳದೇ, ಉಳ್ಳವರ ಮಕ್ಕಳು ಇಂಗ್ಲಿಷ್ ಮಾಧ್ಯಮಕ್ಕೆ ಹೋಗಬಹುದು, ಹೋದರೂ ಅವರು ಕನ್ನಡಕ್ಕಾಗುತ್ತಿರುವ ಅಪಾಯದ ಬಗ್ಗೆ ದನಿಯೇತ್ತಬಹುದು, ಆ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿ ಬಡವರ/ರೈತರ/ದಲಿತರ ಮಕ್ಕಳು ಮಾತ್ರ ಕನ್ನಡ ಮೀಡಿಯಂ ಇರುವ ಸರ್ಕಾರಿ ಶಾಲೆಯಲ್ಲಿ ಕಲಿಯಲಿ ಅನ್ನುವ ಧೋರಣೆಯನ್ನ ಒಪ್ಪಬೇಕಾ?

ಏಕರೂಪ ಸಿಲಬಸ್ ಕೂಡ ಬರಲಿ : ಏಕರೂಪ ಭಾಷಾ ಮಾಧ್ಯಮದಂತೆ, ಏಕರೂಪ ಸಿಲಬಸ್ ಕೂಡ ಬರಲಿ ಅನ್ನುವುದು ಸಹ ನಮ್ಮ ಬೇಡಿಕೆಯಾಗಬೇಕಲ್ಲವೇ? ಹಾಗೊಂದು ವೇಳೆ ಏಕರೂಪ ಶಿಕ್ಷಣ (ಭಾಷಾ ಮತ್ತು ಸಿಲಬಸ್) ಜಾರಿಯಾದರೆ ಆಗ ಜನರೇ ಸರ್ಕಾರಿ ಶಾಲೆಗಳೆಡೆಗೆ ತಿರುಗಿ ನೋಡುವ ಸಾಧ್ಯತೆಗಳೂ ಇವೆ. ಮತ್ತು ಇದು ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲೂ ಸಹಕಾರಿಯಾಗಬಹುದು. ಹಾಗಾಗಿ ಸರ್ಕಾರ ಅಂತಹ ಏಕರೂಪ ಶಿಕ್ಷಣ ನೀತಿಯ ಬಗ್ಗೆ ಅಗತ್ಯವಾಗಿ ಚಿಂತಿಸಲೆಬೇಕಿದೆ. ಸಾಹಿತಿಗಳ ಹೋರಾಟ ಈ ಅಂಶವನ್ನೇ ಇರಿಸಿಕೊಂಡರೆ ಬಹುಶಃ ಅವರಿಗೆ ಜನಸಾಮಾನ್ಯರ ಬೆಂಬಲವೂ ಸಿಗಬಹುದು.

ಈ ಚರ್ಚೆಯಲ್ಲಿ ಕನ್ನಡ ಮಾಧ್ಯಮದ ಪರ ನಿಂತವರು, ಇಂಗ್ಲಿಷ್ ಮೀಡಿಯಂ ಪರ ನಿಂತವರು, ಎಲ್ಲಿಯೂ ನಿಲ್ಲದೆ ಸರ್ಕಾರ ಬೇಕಾದ್ದು ಮಾಡಿಕೊಳ್ಳಲಿ ನಮ್ಮ ಮಕ್ಕಳನ್ನು ಖಾಸಗಿ ಶಾಲೆ ಸೇರಿಸುತ್ತೀವಿ ಅನ್ನುವವರು, ಹಾಗೆಯೇ ತುತ್ತಿನ ಚೀಲದ ತುರ್ತಿಗೆ ಬಿದ್ದು ಪರಿತಪಿಸುತ್ತ ಇದ್ಯಾವುದರ ಅರಿವೇ ಇಲ್ಲದಿರುವ ಜನರನ್ನು ಸೇರಿಸಿಕೊಂಡೇ ಪರಿಹಾರ ಹುಡುಕಬೇಕು. ಇಲ್ಲಿ ನಡೆಯುತ್ತಿರುವುದು ಚರ್ಚೆ ಮತ್ತು ಅಂತಿಮವಾಗಿ ಎರಡೂ ಬದಿಯವರು ಮುಂದಿನ ಪೀಳಿಗೆಯ ಮತ್ತು ನಾಡು-ನುಡಿಯ ಭವಿಷ್ಯದ ಬಗ್ಗೆಯೇ ಯೋಚಿಸುತ್ತಿರುವುದರಿಂದ ಕತ್ತಿ-ಗುರಾಣಿಗಳನ್ನು ಪಕ್ಕಕ್ಕಿಟ್ಟು, ಚಿಂತನ-ಮಂಥನದಲ್ಲಿ ತೊಡಗಿ ಒಂದು ಮಾರ್ಗ ಕಂಡುಹಿಡಿದರೆ ಮುಂದಿನ ಪೀಳಿಗೆ ನಮ್ಮನ್ನು ನೆನೆಸಿಕೊಳ್ಳಬಹುದು(ಒಳ್ಳೆಯ ಕಾರಣಕ್ಕಾಗಿ).

ಶಿಕ್ಷಣ ನಮ್ಮ ಮೂಲಭೂತ ಹಕ್ಕು ಅನ್ನುವ ಐತಿಹಾಸಿಕ ತೀರ್ಪಿನ ಕಡ್ಡಾಯ ಜಾರಿಯ ಜೊತೆಗೆ ರಾಜ್ಯ ಸರ್ಕಾರ ಏಕರೂಪ ಶಿಕ್ಷಣ ನೀತಿಯನ್ನು ಜಾರಿಗೆ ತಂದು ದೇಶಕ್ಕೆ ಮಾದರಿಯಾಗಲಿ.

English summary
Along with debate about Kannada or English medium education to Karnataka students, there is need to discuss about uniform education system. Kannada Sahitya Parishat president Pundalik Halambi also airs the same view. Writes Rakesh Shetty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more