• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ಮೊದಲ ಹನಿಗವನ ಪಕ್ಕಾ ಕದ್ದಮಾಲು!

By ರಾಘವೇಂದ್ರ ಜೋಶಿ, ಗದಗ
|

ಬರವಣಿಗೆಯ ಹೊಸ್ತಿಲಲ್ಲಿ ನಿಂತಿರುವವರಿಗಾಗಿ ಮಿತ್ರರಾದ ಜೋಗಿಯವರು 'ಹಲಗೆ-ಬಳಪ' ಅನ್ನುವ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಅನೇಕ ಉತ್ತಮ ಲೇಖಕರ ಅನುಭವಗಳಿವೆ. ಅವರೆಲ್ಲ ತಮ್ಮ ಆರಂಭಿಕ ಬರವಣಿಗೆಯ ಹುಟ್ಟು, ಸ್ಫೂರ್ತಿ, ಸವಾಲು, ತಲ್ಲಣ ಮತ್ತು ಆವತ್ತಿನ ತಮ್ಮ ಆತ್ಮವಿಶ್ವಾಸದ ಬಗ್ಗೆ ಹೇಳಿಕೊಂಡಿದ್ದಾರೆ. ಖುಷಿಯ ಸಂಗತಿ ಏನೆಂದರೆ, ಇಂಥ ದಿಗ್ಗಜರ ನಡುವೆ ಇಂಥವರ ಬರಹವೂ ಪುಸ್ತಕದಲ್ಲಿ ಜಾಗ ಪಡೆದುಕೊಂಡಿದೆ : ಹೂವಿನೊಂದಿಗೆ ನಾರೂ ಎಂಬಂತೆ. ಅದೀಗ ಇಲ್ಲಿದೆ. ಓದಿ - ಸಂಪಾದಕ.

ನಾನಾಗ ಐದನೇ ಕ್ಲಾಸು. ಮೇಸ್ಟ್ರು ದೀಪಾವಳಿಯ ಬಗ್ಗೆ ನಿಬಂಧ ಬರೆದುಕೊಂಡು ಬರಲು ಎಲ್ಲ ವಿದ್ಯಾರ್ಥಿಗಳಿಗೆ ಹಿಂದಿನ ದಿನವೇ ಹೋಂವರ್ಕ್ ಕೊಟ್ಟಿದ್ದರು. ಹಾಗಾಗಿ ನಾವೆಲ್ಲ ಶ್ರದ್ಧೆಯಿಂದ ಬರೆದುಕೊಂಡು ಬಂದಿದ್ದೆವು. ನನ್ನ ನಿಬಂಧ ಓದಿದ ಮೇಸ್ಟ್ರಿಗೆ ಅದು ಎಷ್ಟು ಇಷ್ಟವಾಗಿತ್ತೆಂದರೆ, ನನ್ನನ್ನು ಸೀದಾ ಸ್ಟೂಲ್ ಮೇಲೆ ಹತ್ತಿಸಿ, black board ಮೇಲೆ ನನ್ನಿಂದಲೇ ಬರೆಸಿ, ಎಲ್ಲ ವಿದ್ಯಾರ್ಥಿಗಳಿಗೆ ಅದನ್ನು ಕಾಪಿ ಮಾಡಿಕೊಳ್ಳಲು ಹೇಳಿದ್ದರು!

ಇದೇ ನನ್ನ ಪಾಲಿಗೆ ಮೊಟ್ಟ ಮೊದಲ ಬಾರಿಗೆ publish ಆದ ಬರಹ.

ಹಾಗೆ ನೋಡಿದರೆ, ನನ್ನ ಶಾಲಾ-ಕಾಲೇಜುಗಳ ದಿನಗಳಲ್ಲಿ ಪಠ್ಯಪುಸ್ತಕಗಳಿಗಿಂತ ನನ್ನನ್ನು ಜಾಸ್ತಿ ಆಕರ್ಷಿಸುತ್ತಿದ್ದುದು ಸುಧಾ, ಪ್ರಜಾಮತ, ಮಯೂರದಂಥ ಪತ್ರಿಕೆಗಳು. ಆ ದಿನಗಳಲ್ಲಿ ನಾನು ಓದಲು ಬಯಸುತ್ತಿದ್ದ ಕೃತಿಗಳ ಕೃತಿಕಾರನ ಬಗ್ಗೆ ನನಗೆ ಯಾವ ಕುತೂಹಲವೂ ಇರಲಿಲ್ಲ. ಅವರು ಯಾರು? ಎಂಥವರು? ಅನ್ನುವದು ನನಗೆ ಅಷ್ಟೊಂದು ಮುಖ್ಯವಾಗಿರಲೇ ಇಲ್ಲ. ಒಟ್ಟಿನಲ್ಲಿ ನನಗೆ ಕತೆ ಓದಬೇಕಿತ್ತು. ಕಾದಂಬರಿ ಓದಬೇಕಿತ್ತು ಅಷ್ಟೇ. ಬಹುಶಃ ಇದರಿಂದ ನನಗೊಂದು ರೀತಿಯ ಅನುಕೂಲವೇ ಆಯಿತು. ಯಾವೊಂದು ಕೃತಿಕಾರನ ಬಗ್ಗೆ ವಿನಾಕಾರಣ ಪೂರ್ವಾಗ್ರಹಪೀಡಿತನಾಗದೇ, ರಾಗ-ದ್ವೇಷಗಳಿಲ್ಲದೇ ಸುಮ್ಮನೇ ಕೈಗೆ ಸಿಕ್ಕ ಪುಸ್ತಕಗಳನ್ನು ಓದುವಂತಾಯಿತು, ಗ್ರಹಿಸುವಂತಾಯಿತು.

ಇಲ್ಲೊಂದು ಪ್ರಸಂಗವನ್ನು ಹೇಳಲೇಬೇಕು : ನಾನು ಒಂಭತ್ತನೇ ತರಗತಿಯಲ್ಲಿದ್ದಾಗ ಗದುಗಿನ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಅಫೀಶಿಯಲ್ಲಾಗಿ ನನ್ನ ಮೊದಲ ಹನಿಗವನ ಪ್ರಕಟಗೊಂಡಿತು. ತಮಾಷೆಯೆಂದರೆ, ಅದೊಂದು ಪಕ್ಕಾ ಕದ್ದ ಮಾಲು! ಇವತ್ತಿಗೂ ಅದರ ಮೂಲ ಕೃತಿಕಾರ ಯಾರು ಅಂತ ಗೊತ್ತಿಲ್ಲವಾದರೂ, ಅದೊಂದು ಸುಮ್ಮನೇ ಬಾಯಿಂದ ಬಾಯಿಗೆ ಹರಡುತ್ತಿದ್ದ, ಆವತ್ತಿನ slam bookಗಳಲ್ಲಿ ಗೀಚಲ್ಪಡುತ್ತಿದ್ದ ಕವನವದು. ಅವೇ ಸಾಲುಗಳನ್ನು ಹನಿಗವನವನ್ನಾಗಿಸಿ ಪತ್ರಿಕೆಗೆ ಬರೆದುಕೊಟ್ಟಿದ್ದೆ. ಅದಕ್ಕೊಂದು ಕಾವ್ಯನಾಮ ಬೇರೆ! ಅದು ಪ್ರಿಂಟೂ ಆಯಿತೆನ್ನಿ. ಕವನ ನೋಡಿದ ಹೈಸ್ಕೂಲಿನ ಕನ್ನಡ ಮೇಸ್ಟ್ರು ತುಂಬ ಖುಷಿಯಿಂದ ಬೆನ್ನು ತಟ್ಟಿದ್ದರು. ಆದರೆ ನಿಜ ಹೇಳಿದರೆ ಎಲ್ಲಿ ಬೆನ್ನಿಗೆರಡು ಬಾರಿಸುತ್ತಾರೆಂದು ಕೃತಿಚೌರ್ಯದ ಬಗ್ಗೆ ಹೇಳಲೇ ಇಲ್ಲ.

ಇದಾದ ಮೇಲೆ ಮೇಸ್ಟ್ರಿಗೆ ನನ್ನ ಮೇಲೆ ಒಂಥರಾ ಅಭಿಮಾನ ಮೂಡತೊಡಗಿತು. ನಾನೂ ಸುಮ್ಮನೇ ಗುಮ್ಮನ ಗುಸುಕನಂತೆ ಬರೆಯುತ್ತ ಹೋದೆ. ತಿದ್ದಿಕೊಳ್ಳುತ್ತ ಹೋದೆ. ನನ್ನನ್ನು ಅಂತರ್ ಶಾಲಾ ಪ್ರಬಂಧ ಸ್ಪರ್ಧೆಗಳಿಗೆ ಕಳಿಸತೊಡಗಿದರು. ಪ್ರಖ್ಯಾತ ಲೇಖಕರೊಬ್ಬರ ಮಗಳೊಬ್ಬಳು ನನಗೆ ಯಾವಾಗಲೂ ಎದುರಾಳಿ. ಅಪ್ಪನ ಕಡೆಯಿಂದ ಏನೆಲ್ಲ ಬರೆಸಿಕೊಂಡು ಕಂಠಪಾಠ ಮಾಡಿಕೊಂಡು ಬಂದಾಳೆಂದು ನನಗೆ ದಿಗಿಲಾಗುತ್ತಿತ್ತು. ಆದರೆ ಅನೇಕ ಕಡೆ ಬಹುಮಾನಗಳು ಬಂದವು. ಬರೆಯುವದು ಕೂಡ ಹ್ಯಾಗೆ ಕಿಕ್ ಕೊಡಬಲ್ಲದು ಎಂಬುದು ನಿಧಾನವಾಗಿ ಅರ್ಥವಾಗತೊಡಗಿತು.

ಎಷ್ಟು ಕಾಳಿತ್ತೋ, ಜೊಳ್ಳಿತ್ತೋ : ಆದರೆ ಒಂದಂತೂ ನಿಜ: ಆವತ್ತಿನಿಂದ ಇವತ್ತಿನವರೆಗೂ ನನ್ನೆಲ್ಲ ಬರಹಗಳ ಬಗ್ಗೆ ನನಗೆ ಪೂರ್ಣ ಪ್ರಮಾಣದ ಸಮಾಧಾನವಿಲ್ಲ. ಇದೊಂದು ವಿಷಯದಲ್ಲಿ ಮಾತ್ರ ನನ್ನದು ಸದಾ ಅತೃಪ್ತ ಆತ್ಮ! ಪತ್ರಿಕೆಗಳಿಗೆ ಬರೆದ ಲೇಖನಗಳಾಗಿರಬಹುದು ಅಥವಾ ನನ್ನದೇ ಬ್ಲಾಗ್ ನಲ್ಲಿ ಪ್ರಕಟ ಮಾಡಿದ ಬರಹಗಳಾಗಿರಬಹುದು, air ಮಾಡುವ ಕೊನೆಯ ಕ್ಷಣದವರೆಗೂ "ಎಲ್ಲ ಸರಿಯಿದೆ" ಅಂತ ಅನಿಸಿರುವ ಎಲ್ಲ ಬರಹಗಳೂ ನಂತರದ ದಿನಗಳಲ್ಲಿ ನನಗೇ ಸಪ್ಪೆ ಅನಿಸಿವೆ. ಎಲ್ಲೋ ಒಂದು ಕಡೆ ಬೇಡವಾಗಿದ್ದ ತಪ್ಪು ಪದ ನುಸುಳಿಕೊಂಡು ಆಯಾ ವಾಕ್ಯಕ್ಕೆ, ಅದರ ಭಾವಕ್ಕೆ ಸಲ್ಲಬೇಕಾಗಿದ್ದ ನ್ಯಾಯ ಒದಗಿಸಲಿಲ್ಲವೇನೋ ಅಂತ ಒದ್ದಾಡುವಂತಾಗಿದೆ. ಅಲ್ಲಿಗೆ-ಪಿಸುಮಾತಿನಲ್ಲಿ ಹೇಳುತ್ತಲೇ ಎಲ್ಲೋ ಒಂದು ಕಡೆ pause ಬಯಸಿದ್ದ ಬಿಂಬವೊಂದು blur ಆಗಿ, ಓದುಗರಿಗೆ ಸಿಗಬೇಕಿದ್ದ ನವಿಲುಗರಿಯ ಸ್ಪರ್ಶ ತಪ್ಪಿ ಹೋಗಿದೆ. ಇದು ಬಹುತೇಕ ಎಲ್ಲ ಬರಹಗಾರರ ಸಮಸ್ಯೆ.

ಇದೇ ಕಾರಣಕ್ಕೆ ಒಮ್ಮೊಮ್ಮೆ ಬರವಣಿಗೆ ಅನ್ನುವದು ಅಷ್ಟು ಸುಲಭವಲ್ಲ ಅಂತ ಅನಿಸಿದೆ. ಹಾಗಂತ ಅದು ಮಹಾಕಷ್ಟದ ಕೆಲಸವಲ್ಲ ಅಂತಲೂ ಹೇಳಬಲ್ಲೆ. ಹಾಗಾದರೆ ಪರಿಹಾರವೆಲ್ಲಿದೆ? ಅಂತ ಹುಡುಕಾಟ ನಡೆಸಿದಾಗ ನನಗೆ ಗೋಚರಿಸಿದ್ದು: ಒಬ್ಬ ಒಳ್ಳೆಯ ಓದುಗನಾಗದೇ ಒಬ್ಬ ಒಳ್ಳೆಯ ಬರಹಗಾರನಾಗಲು ಸಾಧ್ಯವೇ ಇಲ್ಲ! ನಿಜ: ಆದರೆ ಹಾಗೆ ಓದುವಾಗ ಇಂಥದ್ದನ್ನೇ ಓದಬೇಕು, ಇಂಥವರು ಬರೆದಿದ್ದನ್ನೇ ಓದಬೇಕು, ಹಳೆಗನ್ನಡ-ನಡುಗನ್ನಡ ಓದಬೇಕು, ಕವಿತೆ, ಎಡಪಂಥೀಯ, ಬಲಪಂಥೀಯ-ಅಂತೆಲ್ಲ ನಮಗೆ ನಾವೇ ಲಕ್ಷ್ಮಣರೇಖೆ ಎಳೆದುಕೊಳ್ಳುವಂತಿಲ್ಲ. ಜನಪ್ರಿಯವಾದದ್ದು, ಶ್ರೇಷ್ಠತೆಯುಳ್ಳದ್ದು ಅಂತೆಲ್ಲ ತಲೆಕೆಡಿಸಿಕೊಳ್ಳುವಂತಿಲ್ಲ. ಒಟ್ಟಿನಲ್ಲಿ ಓದಿ. ಕೈಗೆ ಸಿಕ್ಕಿದ್ದನ್ನೆಲ್ಲ ಓದಿ: ರನ್ನ, ಪಂಪ, ಪುರಾಣ, ಜಾಹೀರಾತು, ವಾತ್ಸಾಯನ, ಸರ್ವಜ್ಞ, ಪುರಂದರ, ಪತ್ತೇದಾರಿ, ಸಾಮಾಜಿಕ, ಸಾಂಸಾರಿಕ, ವೈಚಾರಿಕ, ಪ್ರವಾಸ ಕಥನ, ಪ್ರವಾದಿ ಕಥನ- yes, ಎಲ್ಲವನ್ನೂ ಕಣ್ಣಾಡಿಸಿ. ಪದಬಂಧ ಕೂಡ ಬಿಡಿಸಿ.

ಒಟ್ಟಿನಲ್ಲಿ ನೂರು ಓದಬೇಕು, ಒಂದು ಬರೀಬೇಕು : ಹಾಗೆ ಬರೆಯುವಾಗ ಆ ನೂರು ಓದುವಿಕೆಯಲ್ಲಿನ ಭಾವ ಈ ಒಂದು ಬರೆಯುವಿಕೆಯನ್ನು influence ಮಾಡದಂತೆ ಎಚ್ಚರವಹಿಸಿ. ಅಷ್ಟಾದರೆ ಸಾಕು: ಕತೆಗಳಿಗೇನು ಧಾಡಿ ನಮ್ಮಲ್ಲಿ? ಹೇಳಿಕೊಳ್ಳಲು ಜಗತ್ತಿನ ಎಲ್ಲರ ಬಳಿಯೂ ಕತೆಗಳಿವೆ. ಕವಿತೆಗಳಿವೆ. ಕೊರತೆಯಿರುವದು, ಪದಗಳಿಗೆ ಮಾತ್ರ; ಲಯಕ್ಕೆ ಮಾತ್ರ. ಎರಡು ವಾಕ್ಯಗಳ ಮಧ್ಯೆ ಸೇತುಬಂಧ ನಿರ್ಮಿಸುವ ಕಲೆ ನಮಗೆ ಒಲಿದಿದ್ದೇ ಆದರೆ, ನಮ್ಮ ಕತೆಯನ್ನು ಈ ಜಗತ್ತಿನಲ್ಲಿ ನಮಗಿಂತ ಚೆನ್ನಾಗಿ ಇನ್ಯಾರೂ ಹೇಳಲಾರರು.

ಉತ್ಪ್ರೇಕ್ಷೆಯೇನಲ್ಲ, ಬರವಣಿಗೆ ಅನ್ನುವದು ನನ್ನ ಪಾಲಿಗೆ ಅತ್ಯಂತ ಪ್ರೀತಿಯ ಕೆಲಸ. ಖುಷಿ ಕೊಡಬಲ್ಲ ಕಾಯಕ. ಹೀಗಾಗಿ ನನ್ನ ಬರವಣಿಗೆ ಯಾವತ್ತೂ ತನ್ನನ್ನು ತಾನು ತಿದ್ದಿಕೊಳ್ಳುವ, ಸುಧಾರಿಸುವಂಥ ಜಾಗೃತ ಮತ್ತು ವಿನಮ್ರ ಸ್ಥಿತಿಯಲ್ಲಿ ಇದ್ದೇ ಇರುತ್ತದೆ ಎಂದು ಮಾತ್ರ ಹೇಳಬಲ್ಲೆ. ಬಹುಶಃ ಇದಕ್ಕೆ ಏನೋ, ಜಗತ್ತಿನ ಯಾವುದೇ ಬರಹಗಳಿಗೆ ಹೊಸ ಪದಗಳ, ಹೊಸ ಚಿನ್ನೆಗಳ ಮತ್ತು ಹೊಸ ಭಾವಗಳ ಅಗತ್ಯತೆ ಇದ್ದೇ ಇರುತ್ತದೆ ಅಂತ ನನ್ನ ಭಾವನೆ ಮತ್ತು ನಂಬಿಕೆ. ಅಂತೆಯೇ, ಅವೆಲ್ಲ ಸೃಷ್ಟಿಯಾಗದ ಬರಹಗಳು ಯಾವುದೋ ಹೊಸ ಬರಹಗಾರನಿಗಾಗಿ ಶಬರಿಯಂತೆಯೋ, ಅಹಲ್ಯೆಯ ಶಾಪಗ್ರಸ್ಥ ಬಂಡೆಯಾಗಿಯೋ ಇನ್ನೂ ಕಾದು ಕುಳಿತೇ ಇವೆ: ಒಬ್ಬ ರಾಮನ ಸ್ಪರ್ಶ ಸುಖಕ್ಕಾಗಿ...

English summary
Raghavendra Joshi, originally from Gadag but staying in Bangalore, has shared his first experience as a writer to a book 'Halage Balapa' published by Girish Rao (Jogi). Joshi writes how he impressed his teacher with a plagiarised poem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X