ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೂ, ನನ್ನ ಜಿಮ್ ಹಾಡುಗಳು

By * ಕೀರ್ತಿ ಶಂಕರಘಟ್ಟ, ಬೆಂಗಳೂರು
|
Google Oneindia Kannada News

Why this english songs in gyms
ಬೆಳಗ್ಗೆ ಅಷ್ಟು ಬೇಗ ಏಳೋದೇ ದೊಡ್ಡ ವಿಷ್ಯ. ಅಂತದ್ರಲ್ಲಿ ಬೆಳಗ್ಗೆ ಬೆಳಗ್ಗೆ ಮೈ ನೋವು ಮಾಡ್ಕೊಂಡು ಅರ್ಧಂಬರ್ಧ ಅರ್ಥ ಆಗೋ ಭಾಷೆಯ ಹಾಡು ಕೇಳಬೇಕು ಅಂದ್ರೆ ಅದೆಷ್ಟು ಉರೀಬೇಡ. ನಂಗೂ ದಿನಾ ಇದೇ ಆಗ್ತಿತ್ತು.. ಐದೂವರೆಗೆ ಎದ್ದು ಅಮ್ಮ ಕೊಡೊ ಬಿಸಿ ಬಿಸಿ ಬ್ರೆಡ್ಡು, ಬೂಸ್ಟ್ ಕುಡ್ಕೊಂಡು ಗಡ ಗಡ ನಡುಗ್ತಾ ಚಳೀಲಿ ಜಿಮ್ ಗೆ ಹೋದ್ರೆ ಅಲ್ಲಿ ಅದ್ಯಾವ್ದೋ ಏಳು ಸಮುದ್ರದ ಆಚೆ ಇರೋ ದೇಶದ ಇಂಗ್ಲಿಶ್ ಹಾಡುಗಳು ನನ್ನ ಕಿವೀಗೆ ಕರ್ಕಶವಾಗಿ ಕೇಳೋದು. ಎಲ್ಲೋ ಅಲ್ಲೊಂದು, ಇಲ್ಲೊಂದು ವಾಕ ವಾಕ, ವೆಂಗ ಬಾಯ್ಸ್ ಹಾಡು ಬಂದ್ರೆ ಮಾತ್ರ ನಾನು ಸ್ವಲ್ಪ ಬಾಯ್ ಆಡಿಸ್ಬೋದು. ಇಲ್ಲದೇ ಇದ್ರೆ ಜಿಮ್ಮಿಗೆ ಬರೋ ಸಾಕಷ್ಟು ಜನ ಅವ್ರೇ ಹಾಡಿರೋ ಹಾಡು ಅನ್ನೋ ತರ ಹಾಡ್ತಿರ್ತಾರಲ್ಲ, ಅವರ ಮುಖ ಮುಖ ನೋಡೋದಷ್ಟೇ ನನ್ನ ಕಾಯಕ.

ಒಂದು ಕಡೆ ನಮ್ಮ ಟ್ರೈನೆರ್ ಜಾಸ್ತಿ ವೇಯ್ಟ್ ಎತ್ತಿ ಅಂತ ಕೊಡೋ ಟಾರ್ಚರ್, ಇನ್ನೊಂದು ಕಡೆ ಈ ದರಿದ್ರ ಇಂಗ್ಲಿಷ್ ಹಾಡು. ಈ ಕಿತ್ತೋಗಿರೋ ಹಾಡು ನಿಲ್ಸಿ ಅಂತ ಹೇಳೋಣ ಅಂದ್ರೆ, ಮೊನ್ನೆ ಮೊನ್ನೆ ಸೇರ್ಕೊಂಡಿರೋ ನನ್ ಮಗ ಎಷ್ಟು ಗಾಂಚಲಿ ಮಾಡ್ತಾನೆ’ ಅಂತ ಅನ್ಕೊತಾರೆ ಅನ್ನೋ ಲಾಜಿಕ್ಕು. ಏನಾದ್ರು ಆಗ್ಲಿ ಅಂತ ಕಷ್ಟ ಪಟ್ಟು ಕೈಲಿದ್ದ 25 ಕೆಜಿ ಡಂಬಲ್ ಎತ್ತುತಾ ಆ ಹಾಡನ್ನ ಅರಗಿಸಿ ಕೊಳ್ತಾ ಇದ್ದೆ. ಅವಳ್ಯಾರೋ ನಮ್ ಏರಿಯಾ ಕಾಗೆ ತರ ಕಿರುಚ್ತಾ ಇದ್ರೆ, ಟ್ರೆಡ್ ಮಿಲ್ ಮೇಲೆ ಓಡ್ತಾ ಇದ್ದ ಆ ಕಪ್ಪು ಟಿ ಶರ್ಟಿನ ಹುಡುಗ ಫುಲ್ ಆ ಹಾಡನ್ನ ಎಂಜಾಯ್ ಮಾಡ್ತಾ ಇದ್ದ. ನೀವೋ, ನಿಮ್ ಹಾಡೋ ಅಂತ ಮನಸಲ್ಲೇ ಉಗೀತಾ, ಮತ್ತೆ ಇರೋ ಬರೋ ಶಕ್ತಿ ಬಿಟ್ಟು ಡಂಬಲ್ ಎತ್ತುತಾ ಇದ್ದೆ. ಅವತ್ತು ಮನೆಗೆ ಹೋದ ಮೇಲೂ ಆ ಇಂಗ್ಲಿಶ್ ಹಾಡುಗಳು ನಮ್ಮ ಮನೆಯ ಗಾಯತ್ರಿ ಮಂತ್ರವನ್ನ ಓವರ್ ಟೇಕ್ ಮಾಡಿ ಕಾಟ ಕೊಡ್ತಾ ಇದ್ವು. ಅವರೆಲ್ಲಾ ಆ ಇಂಗ್ಲಿಷ್ ಹಾಡುಗಳನ್ನ ಅದ್ ಹೇಗೆ ಅಷ್ಟು ಚೆನ್ನಾಗಿ ಹಾಡ್ತಾರೆ ಅನ್ನೋದೇ ನನ್ನ ಕಾಡ್ತಿದ್ದ ಪ್ರಶ್ನೆ. ಅವರ ಬಗ್ಗೆ ಒಂದು ಕಡೆ ಹೆಮ್ಮೆ, ಇನ್ನೊಂದ್ ಕಡೆ ಹೊಟ್ಟೆ ಉರಿ.

ಆದ್ರೆ ಮರುದಿನ ಜಿಮ್ ಗೆ ಹೋದವನಿಗೆ ಸಿಕ್ಕಾಪಟ್ಟೆ ಆಶ್ಚರ್ಯ. ಅವನು ಹಾಕೋ ಎಲ್ಲಾ ಹಾಡುಗಳನ್ನ ನಾನು ಆರಾಮಾಗಿ ಹಾಡ್ತಾ ಇದ್ದೀನಿ. ಇಷ್ಟು ದಿನ ಎಲ್ಲರ ಬಾಯನ್ನ ನಾನು ಬಾಯ್ ಬಾಯ್ ಬಿಡ್ಕೊಂಡು ನೋಡ್ತಾ ಇದ್ದೆ. ಆದ್ರೆ ಅವತ್ತು ಎಲ್ಲರೂ ನನ್ನನ್ನ ಬಾಯ್ ಬಾಯ್ ಬಿಡ್ಕೊಂಡು ನೋಡ್ತಾ ಇದ್ರೂ. ಇಷ್ಟು ದಿನ ನನ್ನ ಮನಸ್ಸಿಗೆ ಬರ್ತಾ ಇದ್ದ ಪ್ರಶ್ನೆಗಳು ಇವತ್ತು ಅವರನ್ನ ಕಾಡ್ತಾ ಇದ್ವು. ನಿಮಗೂ ಆಶ್ಚರ್ಯ ಆಗ್ಬೋದು, ಅದ್ ಹೇಗೆ ಇದ್ದಕ್ಕಿದ್ದ ಹಾಗೇ ಎಲ್ಲ ಹಾಡುಗಳನ್ನ ನಾನು ಹಾಡ್ತಾ ಇದ್ದೆ ಅಂತ. ಉತ್ತರ ಸಿಂಪಲ್ಲು, ಅವತ್ತು ಜಿಮ್ಮಲ್ಲಿ ಹಾಕಿದ್ದಿದ್ದು ಅದೇ ಕಿತ್ತೋಗಿರೋ ಕರ್ಕಶ ಇಂಗ್ಲಿಷ್ ಹಾಡಲ್ಲ. ಇಂಪಾದ ಕನ್ನಡ ಹಾಡುಗಳು. ಅದಕ್ಕೆ ನನ್ನ ಬಾಯಲ್ಲಿ ಎಲ್ಲಾ ಹಾಡುಗಳನ್ನ ನಾನು ಆರಾಮಾಗಿ ಹಾಡ್ತಾ ಇದ್ದೆ. ಕನ್ನಡ ಹಾಡುಗಳನ್ನ ಕೇಳಿದ ಕುಶೀಲಿ ಡಂಬಲ್ ನ ಎರಡು ಮೂರು ಸಲ ಜಾಸ್ತೀನೆ ಎತ್ತುತಾ ಇದ್ದೆ. ದಿನಾ ಹಿಂಗೆ ಇರಬಾರದಿತ್ತ ಅಂತ ಅನ್ನಿಸ್ತು. ಅಷ್ಟಕ್ಕೂ ಅಲ್ಲಿ ಹಾಕಿದ್ದ ಹಾಡುಗಳನ್ನ ಈ ಹೊತ್ತಲ್ಲಿ ನೆನಪಿಸ್ಕೊಳ್ಳೆ ಬೇಕಪ್ಪ.

ಅಲ್ಲಿ ಹಾಕಿದ್ದಿದ್ದು ಇತ್ತೀಚಿನ ಹೊಸ ಕನ್ನಡ ಹಾಡಲ್ಲ, 60-70ರ ದಶಕದ ಸ್ಲೋ ಮೋಶನ್ ಹಾಡುಗಳೂ ಅಲ್ಲ. ಅದೆಲ್ಲ 80-90′s ಹಿಟ್ಸ್. ಜೀವ ಹೂವಾಗಿದೆ, ಭಾವ ಜೇನಾಗಿದೆ’ ಅಂತ ಹಾಡು ಬರ್ತಾ ಇತ್ತು. ನನ್ನ ಜೀವದಲ್ಲಿ ಶಕ್ತಿ ಏರ್ತಾ ಇತ್ತು. ಅಣ್ಣಾವ್ರ ವಾಯ್ಸು ಹಂಗೆ ವರ್ಕ್ ಔಟ್ ಮಾಡೋಕೆ ಇನ್ಪಿರೆಶನ್ ಅನ್ನೋ ಹಾಗಿತ್ತು. ಅದು ಮುಗೀತ ಇದ್ದ ಹಾಗೇ ಬಾ ನಲ್ಲೆ ಬಾ ನಲ್ಲೆ ಮಧು ಚಂದ್ರಕೆ’. ಹನಿಮೂನ್ ಮಾತ್ರ ಗೊತ್ತಿರೋ ಇಂಗ್ಲಿಶ್ ಪುತ್ರರಿಗೆ ನಮ್ಮ ಮಧುಚಂದ್ರದ ಹಾಡು ಅಷ್ಟು ರುಚಿಸಿಲ್ಲ ಅಂತ ಗೊತ್ತಾಗ್ತಾ ಇತ್ತು. ನಾನು ಮಾತ್ರ ದೂರದಲ್ಲಿ ಟ್ರೆಡ್ ಮಿಲ್ ಮೇಲೆ ಓಡ್ತಾ ಇದ್ದ ಪಿಂಕ್ ಟಿಶರ್ಟ್ ಹುಡುಗಿ ನೋಡಿ ಮಧುಚಂದ್ರವನ್ನ ಎಂಜಾಯ್ ಮಾಡ್ತಾ ಇದ್ದೆ. ಅದು ಮುಗೀತಾ ಇದ್ದಂಗೆ ಶುರುವಾಗಿದ್ದೆ ಚೆಲುವೆ ಒಂದು ಕೇಳ್ತೀನಿ’.. ವಾ ವಾ ಹಂಸಲೇಖ ಮ್ಯುಸಿಕ್ ನ ಆ ಜಾಗದಲ್ಲಿ ಎಂಜಾಯ್ ಮಾಡ್ತಾ ಇದ್ದಿದ್ದು ನಾನು ಮತ್ತು ಕಷ್ಟ ಪಟ್ಟು ಡಿಬ್ಸ್ ಹೊಡೀತ ಇದ್ದ ಆ ದಾವಣಗೆರೆ ಹುಡುಗ ಮಾತ್ರ.

ಇನ್ನೆಲ್ಲರೂ ಅವತ್ತು ಮೂಕ ಪ್ರೇಕ್ಷಕರು. ನಾನು ಎಷ್ಟೋ ಸಲ ಅರ್ಥ ಆಗದೆ ಇದ್ರೂ ಇಂಗ್ಲಿಶ್ ಹಾಡು ಕೇಳ್ತಾ ಇರ್ತೀನಿ. ಆದ್ರೆ ಎಲ್ಲ ಇಂಗ್ಲಿಶ್ ಹಾಡಿನ ಪ್ರೇಮಿಗಳ ಮಧ್ಯೆ ಕನ್ನಡಿಗನಾಗಿ ಕನ್ನಡ ಹಾಡನ್ನ ಎಂಜಾಯ್ ಮಾಡೋದ್ ಇದ್ಯಲ್ಲ, ಅದರ ಮಜಾನೆ ಬೇರೆ. ಇನ್ನೇನ್ ನಾನ್ ಜಿಮ್ಮಿಂದ ಹೊರಡಬೇಕು, ಅಷ್ಟರಲ್ಲಿ ಶುರು ಆಯ್ತು ಚೆಲುವೆಯೇ ನಿನ್ನ ನೋಡಲು ಮಾತುಗಳು ಬರದವನು… ಹಾಡು ಕೇಳಿ, ಮಾತು ಬಾರದಂತೆ ನಿಂತಿದ್ದ ಉಳಿದವರನ್ನ ನೋಡಿ, ಸಿರಿಗನ್ನಡಂ ಗೆಲ್ಗೆ ಅಂತ ಮನಸಲ್ಲಿ ಅನ್ಕೊಂಡು, ಹಾಡು ಮುಗಿಯೋ ತನಕ ಅಲ್ಲೇ ಇದ್ದು, 4 ವರ್ಕ್ ಔಟ್ ಜಾಸ್ತಿ ಮಾಡಿ ಬಂದೆ. ನಂಗೊತ್ತು ನಾಳೆ ಬೆಳಿಗ್ಗೆ ಮತ್ತದೇ ಅರಚುವ ಸಂಗೀತ ನನ್ನ ಕಿವಿಗೆ ಹಿಂಸೆ ಕೊಡುತ್ತೆ ಅಂತ. ಆದ್ರೂ ಅವತ್ತು ಒಂದು ದಿನ ಕನ್ನಡ ಹಾಡುಗಳ ಮಧ್ಯೆ ನಾನೊಬ್ಬನೇ ಹೀರೋ ಆಗಿದ್ದೆ ಅನ್ನೋ ಸಮಾಧಾನ ನಂಗೆ. ನಾವಾಡುವ ನುಡಿಯೇ ಕನ್ನಡ ನುಡಿ… (ಕೃಪೆ : ನಾನ್ ಕೀರ್ತಿ ಬ್ಲಾಗ್)

English summary
Why this English songs and why not Kannada songs in fitness centers (gyms)? Asks Keerthi in a Kannada essay in his Kannada blog. What do you say?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X