ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಜಲಿರಾಮಣ್ಣ ಅವರ ನೆವಗಳು ನೆನಪುಗಳಾದ ಘಳಿಗೆ

By * ಅಂಜಲಿ ರಾಮಣ್ಣ
|
Google Oneindia Kannada News

Anjali Ramanna
ಒಂದು ಕಲ್ಪದಿಂದ ಅವಳು ನನ್ನ ಗೆಳತಿ. ಆ ತಿಂಡಿ ಹೆಸರು ಕೇಳಿ "ಅಯ್ಯಯ್ಯಾ~ ~ ~" ಅಂತ ಮೂಗ್ಮುರದ್ಲು. "ರಾಮ ರಾಮ, ಬೆಂಗಳೂರಿನಂತಹ ಹೈಟೆಕ್ ನಗರಿಯಲ್ಲಿ ಇದೆಂಥದ್ದೇ ನಿನ್ನ ಬಯಕೆ, ಹೋಗ್ಹೋಗ್..." ಅಂತ ಫೋನಿಟ್ಟ್ಲು. ರಿಸೀವರ್ ನಿಂದ ಬಂದ "ಕೀಂ..." ಅನ್ನೋ ಧ್ವನಿಗೆ ನನಗೆ ನಾನೇ Celia Barbour ಹೇಳಿದ್ದನ್ನು ನೆನಪು ಮಾಡ್ಕೊಂಡೆ "One bite of a dish can send you tumbling back into some half-forgotten memory. But a taste can also bump you gently into the future." ಎಷ್ಟು ನಿಜ ಅಲ್ಲ್ವಾ?! ಅದರ ಒಂದು ತುಣುಕು ನಾಲಿಗೆ ಮೇಲೆ ಕರಗ್ತಿರೋವಾಗ, ಹಲ್ಲುಗಳ ಹೊಳಪಿನೊಡನೆ ಒಂದಾಗ್ತಿರೋವಾಗ, ನನ್ನ ಮನಸ್ಸು ರಸಗ್ರಂಥಿಗಳನ್ನು ಮರೆತು ಹೇಗೆ ಗಿರಿಬೆಟ್ಟದ ಕೆರೆಯಲ್ಲಿ ಮುಳುಗ್ಹಾಕೋಕ್ಕೆ ಹೊರಟ್ನಿಲ್ಲತ್ತೆ.

ಹೂಂ, ನನ್ನ ಮೈಸೂರಿನಿಂದ ಹಾಗೇ ಪಕ್ಕಕ್ಕೆ ಹೊರಳಿದರೆ ಕಾವೇರಿ, ಕಪಿಲೆಯರು ಗುಪ್ತಗಾಮಿನಿಯೊಡನೆ ಒಂದಾಗ್ತಾರಲ್ಲ ನರಸೀಪುರ ಆ ರಸ್ತೆಲಿ ನನ್ನ ಪ್ರಯಾಣ ಶುರುವಾಗುತ್ತೆ. ಹಾಲ್ನ್ಹಳ್ಳಿ ದಾಟಿ, ನಾಡ್ನಳ್ಳಿ ಬರಡು ನೋಡಿ, ಚಿಕ್ಕಳ್ಳಿ ದನದ ಜಾತ್ರೆ ಮುಗ್ಸಿದ್ರೆ, ಅಲ್ಲೇ, ಅಲ್ಲೇ ಸಿಗುತ್ತೆ ವರುಣಾ ಕೆರೆ. ಕೆರೆ ಗುಂಟ ಹೆಜ್ಜೆಮೇಲ್ಹೆಜ್ಜೆ ಇಟ್ಟ್ಬಿಟ್ಟ್ರೆ ಆಗ್ಹೋಯ್ತು ಪಾದ ಭೂಮಿ ಮುಟ್ಟೋದೇ ವರಕೋಡಿನಲ್ಲಿ. ಎಡಕ್ಕೆ ಊರೊಳಕ್ಕೆ ಹೋಗೋ ಬಳ್ಳಿದಾರಿ, ಬಲಕ್ಕೆ ತೆಂಗಿನ ಮಟ್ಟಾಳೆ ಕಟ್ಟ್ಕೊಂಡ ಟೀ ಅಂಗಡಿ. ಉಹುಂ, ಅಲ್ಲೆಲ್ಲೂ ನಿಲ್ಲೋದು ಬೇಡ. ಇನ್ನೊಂದೆರಡು ಹೆಜ್ಜೆ ನಿಧಾನಕ್ಕೆ ನಾಜೂಕಾಗಿ ಎತ್ತಿಟ್ಟ್ಬಿಟ್ಟ್ರೆ ಸಣ್ಣ ಸೇತುವೆ. ಹಾಂ, ಅದರ ತಿರುವಿನಿಂದ್ಲೇ ಗಿರಿಬೆಟ್ಟದ ಕೆರೆಯ ದಂಡೆವರೆಗೂ ನನ್ನ ನೆನಪಿನ ಅವಿಭಾಜ್ಯ ಬದುಕು 14 ಎಕರೆ ವ್ಯಾಪ್ತಿಯಲ್ಲಿ ಉಸಿರಾಡೋದು.

ಅಲ್ಲಿ ಇಲ್ಲಿ ತೆಂಗಿನ ಮರಗಳು, ಆ ತುದಿಗೊಂದು ಈ ತುದಿಗೊಂದು ನೆಲಬಾವಿಗಳು, "ಟರ್ ಟರ್" ಅಂತ ಹಾಡ್ಹೇಳೋ ಪಂಪ್ ಸೆಟ್ಗಳು, ಎರಡೆರಡು ಸೀಬೆ ಮರ, ಕೆಂಪು ಹಳದಿ ದೊಡ್ದ ಚಿಕ್ಕ ಪಕಳೆಗಳ ಹೂವಿನ ಗಿಡಗಳು, ಬೇಲಿ ಮುಳ್ಳುಗಳು, ಕೈಕೇಯೀ, ಭರತ, ಲಕ್ಷ್ಮಿಯರಿದ್ದ ಕೊಟ್ಟಿಗೆ, ಮೂಲೆಯಲ್ಲಿ ನೇಗಿಲು, ಗುದ್ದಲಿ, ಪಿಕಾಸಿ, ಕುಡ್ಗೋಲುಗಳ ಹೊಳಪು, ಪಕ್ಕದಲ್ಲಿ ರೇಷ್ಮೆ ಕನಸಿನಲ್ಲಿದ್ದ ಚಂದ್ರಿಕೆಗಳು, ಹಸಿರು ಹಿಪ್ಪುನೇರಳೆ ಹರವು, ಪ್ರದೀಪ, ದಿಲೀಪ, ಟಾಮಿ, ರಿಕ್ಕಿಯರ ಬೌ ಬೌ, ಹೆಸರಿಲ್ಲದೆ ಕಿಲಕಿಲ ರಾಗವಾಗಿದ್ದ ಪಕ್ಷಿಗಳು, ಕುರಿ ಮರಿಗಳು, ಮೊಲಗಳು, ಆಗ್ಗಾಗೆ ಆಹ್ವಾನವಿಲ್ಲದೆ ಬರೋ ಅತಿಥಿಗಳಾಗಿದ್ದ ಹಾವುಗಳು, ಹಿರಿಯಕ್ಕನಂತಿದ್ದ ಭತ್ತದ ಗದ್ದೆಗೆ ತಂಗಿಯಾಗಿದ್ದ ಮೆಕ್ಕೆ ಜೋಳದ ಒಣ ಹೊಲ, ನಡು ನಡುವೆ ನುಸುಳುವ ರಾಗಿ. ಒಂದೆರಡೇ ಸೂರ್ಯಕಾಂತಿಯ ಅರಳುವಿಕೆ, ಟೊಮೇಟೋ, ಮೆಣಸಿನಕಾಯಿಗಳ ಜೊತೆ ದಾಯಾದಿಗಳಾಗಿದ್ದ ಇನ್ನೊಂದಿಷ್ಟು ತರಕಾರಿಗಳು... ನಡುವೆ, ಕೆಮ್ಮಣ್ಣಿನ ಗೋಡೆ ಮೇಲೆ ನಾಡ ಹೆಂಚಿನ ಅರಿವೆ ಹೊದ್ದ ನನ್ನರಮನೆ! ಒಳಗೆ, ಸಂಸಾರನ ಒಪ್ಪಓರಣಗೊಳಿಸ್ತಿದ್ದ ಅಮ್ಮ, ಸಾಥಿ ಅಕ್ಕ, ಇಜ್ಜಲಿನ ಘಮದಲ್ಲಿ ಅಕ್ಕಿ ರೊಟ್ಟಿ ಸುಡುತ್ತಿದ್ದ ಅಜ್ಜಿ, ಬೆತ್ತದ ಆರಾಮ ಕುರ್ಚಿಯಲ್ಲಿ ಮುಕೇಶ್ ಧ್ವನಿಗೆ ರಾಜ್ಕಪೂರ್ ಆಗಿ ನ್ಯೂಸ್ ಪೇಪರ್ ಓದುತ್ತಿದ್ದ ಪಪ್ಪ... ಈ ಸ್ವರ್ಗಕ್ಕೆ ಇಂದ್ರ ಪದವಿಯ ಗಮ್ಮತ್ತು ತಂದುಕೊಟ್ಟಿದ್ದವರು ಕಮಾನು ಕಾಲಿನ ಸೇಕರ, ಸಿಡುಬು ಕಲೆ ಮುಖದ ಚಿನ್ನ್ಬುದ್ದಿ, ಎಡವಟ್ಟ ಅಂತ ಬೈಸ್ಕೋತಿದ್ದ ರಾಚ, ಎಳಕು ಮಾದ, ಹುಡುಗ ಪುಟ್ಟ ಮತ್ತು ನನ್ನ ಹುಚ್ಚಯ್ಯ!

ಹೌದು, ನನ್ನ ಹುಚ್ಚಯ್ಯ, ಎಲ್ಲಿ ಹೋದ?! ನನ್ನ ಕಣ್ಣು ಯಾಕೆ ಹೀಗೆ ಹರೀತಿದೆ? ಬೊಚ್ಚು ಬಾಯಿ ಬಕ್ಕ ತಲೆಯ ಹುಚ್ಚಯ್ಯ ನಮ್ಮ ಜಮೀನಿಗೆ ಕೂಲಿಗೆ ಬರ್ತಿದ್ದ ಅನ್ನೋಕ್ಕೆ ನಾ ಈಗಲೂ ತಯಾರಿಲ್ಲ. "ಪಿಲ್ಲಿ ಇತ್ಲಾಗ್ ಬಾವ್ವಾ..." "ಪಿಲ್ಲಿ ತಕ್ಕೋಳವ್ವ....." "ಪಿಲ್ಲಿ ಪಿಲ್ಲಿ ಪಿಲ್ಲಿ..." ಹೀಗೆ ನನಗೆ ಪಿಲ್ಲಿ ಅಂತ ಹೆಸರಿಟ್ಟು ಅದೆಷ್ಟು ಮಮಕಾರ ತೋರಿದ್ದ. ಕೆರೆ ಪಕ್ಕದ ಪೊದೆಯಲ್ಲಿ ಯಾರ ಕಣ್ಣಿಗೂ ಕಾಣದೆ ಸುಮ್ಮನೆ ಅರಳಿ ಘಮ್ಮನೆ ಕೂತಿದ್ದ ರಾಜ ಹೊವನ್ನು ನನಗಾಗಿ ತೋರಿದ್ದು ಅವನು. ಅದ್ಯಾರ್ದೋ ತೋಟದ ಗೇರು ಮರಕ್ಕೆ ಕನ್ನ ಹಾಕಿ ಕೆಂಪನೆಯ ಎರಡು-ಮೂರು ಗೇರು ಹಣ್ಣನ್ನು ತಂದು, ಕೊಡದ ನೀರಲ್ಲಿ ತೊಳೆದು ನನ್ನ ಬಾಯ್ಗಿಡ್ತಿದ್ದ. ಸಣ್ಣ್ಸಣ್ಣ ಹೀಚು ಟೊಮೇಟೊ ಕಾಯಿಗಳ ರಾಶಿ ಮಾಡಿ ಮಡಿಲು ತುಂಬ್ತಿದ್ದ. ಹತ್ತಿ ಚೌಕದೊಳಗ್ನಿಂದ ಅವನು ಅಲ್ಯೂಮಿನಿಯಂ ತೂಕಿನಂತಹ ಡಬ್ಬ ಬಿಚ್ಚಿ ಊಟಕ್ಕೆ ಕೂತಾಗ್ಲೆಲ್ಲಾ ನಾ ಅವನ ಮಡಿಲು ಏರ್ತಿದ್ದೆ. "ಜಾತ್ಯಲ್ಲದ ಜಾತಿಯವರ ಜೊತೆ ಊಟಕ್ಕೆ ಕೂರ್ಬೇಡವೆ" ಅಂತ ಅಜ್ಜಿ ಒಂದೇ ಸಮನೆ ಏರು ದನಿಯಲ್ಲಿ ಮೇಲ್ಜಾತಿಯ ಮಠಾಧಿಪತಿಯಾಗ್ಬಿಡ್ತಿದ್ದ್ಲು. ನಾ ಮಾತ್ರ ಬದಲಾಗಲೊಲ್ಲ. ಹೀಗೇ ಒಮ್ಮೆ ನನ್ನ ಹುಚ್ಚಯ್ಯ ತನ್ನ ಡಬ್ಬದೊಳಗ್ನಿಂದ ಕಪ್ಪಗೆ, ದುಂಡಗಿದ್ದ, ಮೇಲೊಂದೆರಡು ಎಳ್ಳು ಕಾಳುಗಳನ್ನು ಮೆತ್ತಿಸಿಕೊಂಡಿದ್ದ ತಿಂಡಿ ತೆಗೆದು, ಅತ್ತಿತ್ತ ನೋಡಿ, ಮೆಲ್ಲನೆ "ತಿಂತೀಯ ಪಿಲ್ಲಿ" ಅಂದ. ಅವನ ವಾತ್ಸಲ್ಯದಷ್ಟೇ ವಿನಯದಿಂದ ನಾ ಹೂಂ ಅಂದೆ ತಿಂದೆ. "ಆಹಾ, ಇದೆಷ್ಟ್ಶು ಚೆನ್ನಾಗಿದೆ. ದಿನಾ ತರ್ತೀಯಾ ನನಗೆ" ಅಂತ ಕೇಳಿದೆ. ಹುಚ್ಚಯ್ಯನಿಗೆ ಎಷ್ಟು ಸಂತೋಷ ಆಗಿತ್ತು ಅಂದ್ರೆ ಅಜ್ಜಿಯೆದುರು "ಅವ್ವವ್ರೇ ನನ್ನ ಪಿಲ್ಲಿ ಕಜ್ಜಾಯ ತಿಂತು ಅಂತ ಜೋರಾಗಿ ಹೇಳಿಬಿಟ್ಟಿದ್ದ. ಅಜ್ಜಿಯ ಗೊಣಗೊಣ ಮಣಮಣ...

ಅವತ್ತ್ನಿಂದ ನಾನು, ಹುಚ್ಚಯ್ಯ ಮತ್ತು ಕಜ್ಜಾಯ ಕೂಡಿದಾಗ್ಲೆಲ್ಲಾ ಆ ದೇವರು ಹೊಟ್ಟೆ ಉರ್ಕೊಂಡಿರ್ತಾನೆ ನಮ್ಮ ನಗುವಿನ ಹಂಚಿಕೆ ನೋಡಿ! ನಮ್ಮ ಜಮೀನಿನ ಹಿಂದುಗಡೆಗೆ ಆತ್ಕೊಂಡಿತ್ತು ಸದಾನಂದಯ್ಯನವರ ಭೂಮಿ. ಅದರಲ್ಲಿನ ಕಳ್ಳ ದಾರಿ ದಾಟಿದರೆ ಹುಚ್ಚಯ್ಯನ ಹಳ್ಳಿ ಪಿಲ್ಲಹಳ್ಳಿ. ಅಂತೂ ಅಮ್ಮನ್ನ ಕಾಡಿ ಬೇಡಿ ಒಪ್ಪಿಸಿ ಒಮ್ಮೆ ನನ್ನನ್ನು ಗದ್ದೆ ಬದುನಲ್ಲ್ಲೇ ಜೋಪಾನ್ವಾಗಿ ಕೈಹಿಡಿದು ನಡೆಸ್ಕೊಂಡು ಪಿಲ್ಲಹಳ್ಳಿ ಜಾತ್ರೆಗೆ ಕರ್ಕೊಂಡ್ಹೋಗಿದ್ದ. ಅವನಿಗೆ ಅಗತಾನೆ ಲಂಗ ದಾವಣಿಯಲ್ಲಿ ಅರಳಿನಿಂತಿದ್ದ ಮೊಮ್ಮಗಳು. ನಾ ಚುಡೀದಾರಿಣಿ ಚಿಕ್ಕವಳು. ಅಮ್ಮನ ಅಪ್ಪಣೆಯನ್ನೂ ಮೀರಿ ನಾನೂ ಅವಳ ಲಂಗ ದಾವಣಿ ತೊಟ್ಟು, ಅವ್ಳೆ ತಲೆಗೆ ಎಣ್ಣೆ ಮೆತ್ತಿ ಹಾಕಿಕೊಟ್ಟ ಬದನೆ ಜಡೆಗೆ ಕನಕಾಂಬರ ಮುಡಿದು ಹುಚ್ಚಯ್ಯನ ಹೆಗಲ ಮೇಲೆ ಜಾತ್ರೆಲೀ ಕುಣಿದದ್ದೇ ಕುಣಿದದ್ದು. "ನನ್ನ ಪಿಲ್ಲಿ...ನನ್ನ ಪಿಲ್ಲಿ" ಅಂತ ಕೆಂಪು ಟೇಪು ಕೊಡಿಸಿದ್ದ ಅವ. ಮತ್ತೆ ನಾ ಕಾನ್ವೆಂಟ್ ಹುಡುಗಿಯ ವೇಷ ಧರಿಸಿ ಹೊರಟು ನಿಂತಾಗ ಹೆಂಡತಿಗೆ ತಾನೇ ಹೇಳಿ ಮಾಡಿಸಿದ್ದ, ನನ್ನೆತ್ತರಕ್ಕೂ ಕಜ್ಜಾಯದ ರಾಶಿ ತಂದು ಮುಂದಿರಿಸಿದ್ದ ಹುಚ್ಚಯ್ಯ.

ಆಮೆಲೆ ನಾ ದೊಡ್ಡವಳಾದೆ. ತುಂಬಾ ದೊಡ್ದವಳಾದೆ. ಮೈಸೂರು ಬ್ರಾಹ್ಮಣರಿಗೆ ಕಜ್ಜಾಯ ಪದವೇ ವರ್ಜ್ಯ ಅಂತ ತಿಳಿದುಕೊಳ್ಳೋ ಅಷ್ಟು ದೊಡ್ದವಳಾದೆ. ಇನ್ನೂ ಎಷ್ಟು ದೊಡ್ದವಳಾದೆ ಅಂದ್ರೆ ಇನ್ನೆಂದೂ ಹುಚ್ಚಯ್ಯನನ್ನು ನೋಡದಷ್ಟು...

ಈಗ ನಾನು ಯೂರೋ-2 ಮಾಡೆಲ್ನ ಕಾರಿನಲ್ಲಿ ಓಡಾಡ್ತೀನಿ ಆದರೂ ಕಜ್ಜಾಯ ತಿಂತೀನಿ. ಅದೊಂದೇ ನನಗಿಷ್ಟ ಅಂತಲ್ಲ. ಆಗೊಮ್ಮೆ ಈಗೊಮ್ಮೆ ಹುಚ್ಚಯ್ಯನ ಹುಚ್ಚು-ಮುಗ್ಧ ಪ್ರೀತಿಯಲ್ಲಿ ನಾ ಬದುಕೋಕೋಸ್ಕರ ಕಜ್ಜಾಯ ತಿಂತೀನಿ. ಆ ದಿನ ಬೇಡ ಬೇಡ ಅಂದಿದ್ದ ಅಮ್ಮನೇ ಈಗ ಕಜ್ಜಾಯ ತಂದು ತಂದು ನನ್ನ್ಮುಂದೆ ಹಿಡೀತಾಳೆ. ಅವಳಿಗೆ ಈಗ ಗೊತ್ತಾಗಿದೆ ಹುಚ್ಚಯ್ಯ ಮತ್ತು ಪಿಲ್ಲಿ ಕಜ್ಜಾಯದಲ್ಲಿ ಒಂದಾಗಿದ್ದು!

English summary
One bite of a dish can send you tumbling back into some half-forgotten memory. But a taste can also bump you gently into the future. An article by Anjali Ramanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X