ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಣ್ಣೀರ ಹನಿಯಲೂ ಶಾಖವಾದ ಕಂಬಾರರ ಸಾಹಿತ್ಯ

By * ಅಂಜಲಿ ರಾಮಣ್ಣ, ಬೆಂಗಳೂರು
|
Google Oneindia Kannada News

Dr Chandrashekhar Kambar
ಅದು ಕಂಬಾರರ "ಜೈಸಿದ ನಾಯ್ಕ" ನಾಟಕ. ಮೊದಲ ಬಾರಿಗೆ ರಂಗದ ಮೇಲೆ ತರಲಾಗ್ತಿತ್ತು. ಅದರಲ್ಲಿ ಬರೋದೇ ಎರಡು ಹೆಣ್ಣು ಪಾತ್ರ. ನಾನು ನಾಯಕಿ. ಗಂಗಾಧರಸ್ವಾಮಿಯವರ ನಿರ್ದೇಶನ. ಎರಡು ತಿಂಗಳುಗಳ ಕಾಲದ ಹಗಲಿರುಳಿನ ಅಭ್ಯಾಸ. ಆ ದಿನ ಪ್ರಥಮ ಪ್ರದರ್ಶನ ಮೈಸೂರಿನ ಕಲಾಮಂದಿರದಲ್ಲಿ. ಮೊದಲ ಸಾಲಿನ ಪ್ರೇಕ್ಷಕರಾಗಿ ಕುಳಿತ್ತಿದ್ದಾರೆ ಡಾ.ಚಂದ್ರಶೇಖರ ಕಂಬಾರ, ಕೀರ್ತಿನಾಥ ಕುರ್ತುಕೋಟಿ, ಡಾ.ಗಿರೀಶ್ ಕಾರ್ನಾರ್ಡ್ ಮತ್ತೆಲ್ಲಾ ಉತ್ತಮೋತ್ತಮರು. ಆಗ ಚೆಲುವಿನ ಅಹಂವುಳ್ಳ ಆತ್ಮ, ವಿಶ್ವಾಸದ ಉತ್ತುಂಗದಲ್ಲಿದ್ದ ವಯಸ್ಸದು ನೋಡಿ ಅದಕ್ಕೆ ಅವರ್ಯಾರೂ ನನ್ನ ಟಾರ್ಗೆಟ್ ವೀಕ್ಷಕರಲ್ಲ! ನಾಟಕದ ಕೊನೆ ಚಪ್ಪಾಳೆಗಳ ಸುರಿಮಳೆ. ಮೇಲೆದ್ದ ಕುರ್ತುಕೋಟಿಯವರು “ನೀನು ಧಾರವಾಡ್ದವಳೇನು?" ಅಂತ ಕೇಳಿದ್ರು ಅದಕ್ಕೆ ಕಂಬಾರರು “ಆಕೀ ಒಡೆಯರ್ರ ಮಗಳು ನೋಡ್ರೀ" ಅಂತ್ಹೇಳಿ ನಕ್ಕರು. ನನಗೆ ಹೆಮ್ಮೆಯೂ ಇಲ್ಲ ಹೆಚ್ಚುಗಾರಿಕೆಯೂ ಅಲ್ಲ. ಹರೆಯದ ಕೈಯಲ್ಲಿತ್ತಲ್ಲ ಬುದ್ಧಿ ಅಂದ್ಮೇಲೆ ಯಾವುದರ ಬೆಲೆತಾನೇ ತಿಳಿದೀತು?

ಬಣ್ಣ ಕಳಚಿತು. ಕಣ್ಣ್ತುಂಬಾ ನಿದ್ದೆಯೂ ಆಯ್ತು. ಮಾರನೆಯ ಸಂಜೆ ಖಾಲೀ ಖಾಲೀ. ನಾಟಕ ತಾಲೀಮು ಇಲ್ಲವಲ್ಲ?! ಆಗ ನನ್ನೊಳಗೆ ಆವಾಹನೆಯಾಗಿದ್ದು ಕಂಬಾರರ “ಅಕ್ಕಕ್ಕು ಹಾಡುಗಳೇ". “ಬರಗಾಲ ಬಂತೆಂದು ಬರವೇನೋ ಹಾಡಿಗೆ, ಮನಸಿಗೆ ನಿನ್ನ ಕನಸಿಗೆ; ಹರಿಯುವ ಹಾಡನ್ನ ಕತ್ತಲ್ಲಿ ಅಮುಕದೆ ಬಿಡಬೇಕೋ ತಮ್ಮ ಬಯಲಿಗೆ...." ಓಹ್, ಇದನ್ನು ಹಾಡಾಗಿಸಿದ ದೇವರಲ್ಲವೇ ನೆನ್ನೆ ನನ್ನೆದುರು ಇದ್ದದ್ದು? ತಡಾವಾಗಾದ ಜ್ಞಾನೋದಯಕ್ಕೆ ಮರುಕವೇ ಶಿಕ್ಷೆ. ಆಗ ಮನೆಯಲ್ಲಿ ವೆರಾಂಡದಿಂದ ಅಡುಗೆ ಕೋಣೆಯವರೆಗೂ ಪುಸ್ತಕವೇ ಆಸ್ತಿ ಆಗಿದ್ದರೂ ಎಲ್ಲೂ ಕಂಬಾರರ ಒಂದು ವಾಕ್ಯವೂ ಸಿಗದ್ದು. ಅಮ್ಮನಿಗೆ ದುಂಬಾಲು ಬಿದ್ದೆ. ಲೈಬ್ರರಿಯಿಂದ ಅದೇನೆನೋ ಲೇಖನಗಳು ಮನೆಗೆ ಬಂದವು. ಲ್ಯಾಂಡ್ಸ್ಡೌನ್ ಕಟ್ಟಡದ ಮಳಿಗೆಗಳನ್ನೂ ಸುತ್ತಿದ್ದಾಯ್ತು, ಪ್ರಸಾರಾಂಗವನ್ನೂ ಇಣುಕಿದ್ದಾಯ್ತು. ಆದರೂ ಸಮಾಧಾನವಿಲ್ಲ. “ಕ್ಷಿತಿಜದ ಕಣ್ಣಲ್ಲಿ ಬೆಳಕು ಹೊಳೆಯೋ ಹಾಂಗ ಹಾಡಬೇಕೋ ತಮ್ಮ ಹಾಡಬೇಕು; ಆಕಾಶದಂಗಳ ಬೆಳದಿಂಗಳೂ ಕೂಡಾ ಕಂಗಾಲಾಗುವ ಹಾಡು ಹಾಡಬೇಕೋ...." ಹೀಗೇ ನಿರಂತರವಾಗಿ ಹಾಡ್ಕೋತಾ ಹಾಡ್ಕೋತಾ ಕಂಬಾರರ ಪದಗಳೊಂದಿಗೆ ಪ್ರೀತಿಗೆ ಬಿದ್ದೆ. ಅವರ ಅಕ್ಷರದೆಡೆಗಿನ ನನ್ನ ಮೋಹ ಕಾಡುಕುದುರೆಯಂತೆ.

ಅದ್ಯಾವ ಲೋಕದಲ್ಲಿ ನನ್ನ ಪಯಣ? : “ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತ" ನನ್ನನ್ನು “ಏಳಕೊಳ್ಳ ತಿಳ್ಳೀ ಆಡಿ ಕಳ್ಳೆಮಳ್ಳೆ ಆಡಿಸಿ ಕೆಡವಿತ್ತ..." ಆಮೆಲೆ ಸಿಕ್ಕಿದ್ದು “ಮರೆತೇನಂದರ ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ" ಅಂತಿದ್ದ ಕಂಬಾರರು. “ಸೊನ್ನಿಗೆ ಆಕಾರ ಬರೆದೇನಂದಿ, ಬಯಲಿಗೆ ಗೋಡೆ ಕಟ್ಟೇನಂದಿ......ಮರೆಯಲಿ ಹೆಂಗಾ ಮಾವೊತ್ಸೆ ತುಂಗಾ" ಸಾಲುಗಳು ನನ್ನೆಲ್ಲಾ ಅಂತಃಸತ್ತ್ವವನ್ನು ಪ್ರತಿಫಲಿಸುತ್ತಿತ್ತು ಆ ದಿನಗಳಲ್ಲಿ. ಮತ್ತೊಮ್ಮೆ ರಂಗದ ದಿನಗಳು. ಕಂಬಾರರ ಕರಿಮಾಯಿ ತಾಯೇ ಸಾಲುಗಳನ್ನು, ಬಿ.ಜಯಶ್ರೀ ಧ್ವನಿಪೆಟ್ಟಿಗೆಯ ಕಂಚು ಉಜ್ಜಿತೆಂದರೆ ಆಹಾ, ಅದ್ಯಾವ ಲೋಕದಲ್ಲಿ ನನ್ನ ಪಯಣ? “ಗುಂಡ ತೇಲಿಸಿದೆವ್ವ ಬೆಂಡ ಮುಳುಗಿಸಿದಿ; ಗಂಡಗಂಡರನೆಲ್ಲ ಹೆಂಡಿರ ಮಾಡಿ....ಸಾವಿರದ ಶರಣವ್ವ ಕರಿಮಾಯಿ ತಾಯೇ...." ಸಾಲುಗಳ ಮುತ್ತುದುರಿಸುತ್ತಾ ಭಾಷಣಗಳಲ್ಲಿ ಮೇಜುಗುದ್ದುತ್ತಿದ್ದ ದಿನಗಳವು. ಇವರ ಮತ್ತೊಂದು ಪದ್ಯ “ಗಿಣಿರಾಮ ಹೇಳಿತು" ಅದಕ್ಕೆ ಬಿ.ವಿ ಕಾರಂತರ ಸಂಗೀತ “ಗಿಣಿರಾಮ ಹೇಳಿದ ರೇಪಿನ ಕಥೆಯೊಂದ; ರಾಮಾ ಹರಿ ರಾಮಾ, ಮಾನಭಂಗಿತಳಾಗಿ ಕನಸೊಂದು ಬಿದ್ದಿದೆ; ರಾಮಾ ಹರಿ ರಾಮಾ" ಅಂತ ಕಾರಂತರು ಹಾಡ್ತಿದ್ದರೆ ಅದೆಲ್ಲಿರುತ್ತಿತ್ತೋ ನನ್ನ ಕಣ್ಣೀರು ಝುಳು ಝುಳು ಹರೀತಿತ್ತು.

ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು : ಹೀಗೆ ಒಂದೊಂದು ಕಣ್ಣೀರಿನ ಹನಿಯಲ್ಲೂ ಕಂಬಾರರ ಸಾಹಿತ್ಯ, ಭಾಷೆ ಎಲ್ಲವೂ ನನ್ನೊಳಗೇ ಶಾಖವಾಗ್ತಾ ಹೋಯ್ತು. “ಸ್ವಂತಚಿತ್ರ ಬರೆಯೋದು ಕಷ್ಟವಲ್ಲ ಮಿತ್ರ", "ಇಬ್ಬರ ತಕರಾರಿಗೆ ಹುಟ್ಟಿ ಹಲವರ ತಕರಾರಲ್ಲಿ ಬೆಳೆದವರು ನಾವು ತಕರಾರಿನವರು" ಎನ್ನುತ್ತಾ ಕಥೆಗೆ ಶುರುವಿಟ್ಟ ಕಂಬಾರರು, “ನನ್ನ ಮನದಾಗರೆ ಇದು ಏನ ಬೆಳೆದೈತಿ? ತುಂಬ ಮಲ್ಲೀಗಿ ಹೂಬಳ್ಳಿ; ಉದುರೀಸಿ ನಿನ್ನ ಪಾತಾಳ ತುಳುಕಲಿ" ಎಂದೆನ್ನುವ ಅರಗೊಡ್ಡಿಯ ಪ್ರೇಮಗೀತೆಯಾಗಿಸತೊಡಗಿದರು ನನ್ನನ್ನು. ಋಷ್ಯಶೃಂಗನ ನಾಟಕೀಯತೆಯಲ್ಲಿ “ಅಪ್ಪ ಸೂತ್ರಧಾರ ಕೇಳೋ ಕನಸ ಕಂಡಿನೆ, ಸುಖದ ನೋವ ಸದ್ದ ಮಾಡಿ ಹೆಂಗ ಹೇಳಲೆ" ಎಂದು ಉನ್ಮಾದಕ್ಕೆ ತಳ್ಳುತ್ತಾ, ಕಲೆಗಾರಣ್ಣನ ಲಾವಣಿಯಲ್ಲಿ “ಇಷ್ಟೆ ಕಣ್ಣಿನ ಇಷ್ಟಿಷ್ಟೆ ಚುಂಚದ ಹಕ್ಕಿ ಗಕ್ಕನೆ ಹಾರಿ ಬಂತು ಮೇಲಕ್ಕೆ ಕೆಳಕ್ಕೆ ರೆಂಬೆ ರೆಂಬೆಗೆ, ಕೊಂಬೆ ಕೊಂಬೆಗೆ ಸೋಂಕಿನ ಸೊಗಸ ಬೀರುತ, ಕಲೆಗಾರನ ಕಲ್ಪನೆಗೆ ಶರಣೆನ್ನಿರಿ" ಎಂದು ಕುಣಿಸುತ್ತಾ, “ವ್ಯರ್ಥಗಳ ಸಮರ್ಥಿಸಿಕೊಳ್ಳುತ್ತಾ, ಅಪಾರ್ಥದಲ್ಲಿ ಅರ್ಥಗಳ ಸೃಷ್ಟಿಸುತ್ತಾ, ಇಲ್ಲಾ ರಾಮಾಯಣದ ಮಹಿಮೆ ಜಪಿಸುತ್ತಾ" ಗೋದೂ ತಾಯಾಗಿಸಿ ನನ್ನೊಡನೆ ನನ್ನನ್ನು ಇಬ್ಬರಾಗಿಸಿ “ರೆಕ್ಕೆಯೊಳಗಿನ ಹಕ್ಕಿಯ ಥರ ನಮ್ಮ ನೆರಳುಗಳನ್ನೇ ಮೈಗೂ ಮನಸ್ಸಿಗೂ ಸುತ್ತಿಕೊಂಡು ಉರಿವ ಬೆಂಕಿಯ ಬಳಿ ಕೂತೆವು" ಎಂದೆಂದುಕೊಳ್ಳುವಂತೆ ಮಾಡಿಟ್ಟರು. ನಾನು ಒಳಗೇ ಹೇಳುತ್ತಾ ಹೋದೆ ಅವರದೇ ನುಡಿಯಾಗಿ “ಒಂದಾನೊಂದು ಕಾಲದಲ್ಲಿ ಏಸೊಂದ ಮುದವಿತ್ತಾ, ಮುದಕೊಂದು ಹದವಿತ್ತಾ, ಹದಕ ಹಂಗಾಮಿತ್ತಾ, ಅದಕೊಂದ ಶಿವನ ಲಗಾಮಿತ್ತಾ" “ನಾನೀಗ ನನ್ನ ಖಾಸಗಿಯನ್ನು ಕಾಣಬೇಕು. ಮಾತಾಡಬೇಕು ಅದರೊಂದಿಗೆ ನಿಜ ನೋಡಬೇಕು, ಶಬ್ದವೇ ಶಬ್ದವೆ ತೋರು ನಿಜವನ್ನ,ನನ್ನಳತೆಯ ಮನುಷ್ಯನಳತೆಯ ಸತ್ಯವನ್ನ."

“ಜೋಲಿ ತಪ್ಪಿದ ಪೋರಿ ಬಿದ್ದಾಳ ತೆಕ್ಕೀಗಿ, ಸಂದ ಉಳಿಯದ ಹಾಂಗ ಒಂದಾಗಿ ಮೈಮುರದಾ" ಅನ್ನೋ ಹಾಗೆ ನನ್ನನ್ನು ಜೀವನದೊಳಗೆ ಒಂದು ಮಾಡಿ “ಮಂದಾರ ಮರದಲ್ಲಿ ಪಾರ್ವತಿ ಹಣ್ಣು ತಿಂದದ್ದೇ ದೇವಲೋಕಕ್ಕೂ ಬಂತು ಹಸಿವಿನ ಬಾಧೆ" ಅದಕ್ಕೇ, “ಹಾವಲ್ಲ ಅದು ಹಗ್ಗ ಎನ್ನುವರು ಕೆಲಮಂದಿ ಹಗ್ಗದಲ್ಲೂ ಹರ್ಷ ಚಿಮ್ಮುವಾಕೆ ಈ ಮಾಯೆ" ಎನ್ನುವ ಅರಿವು ನನಗೆ ಮೂಡಿಸಿದ್ದು ಈ ಸೂರ್ಯ ಶಿಖರನ ಸಾಹಿತ್ಯ. “ಲೂಟಿ ಮಾಡಾಕ ಬಂದ ಮಾಟಗಾರೇನ ಸುಖದ ಶಿಖರದ ಮ್ಯಾಲ ಹತ್ತಿನಿಂತಾನ ಇಕ್ಕಟ್ಟೀನ ಬಿಕ್ಕಟ್ಟೆಲ್ಲಾ ಒಟ್ಟಿಗಿ ದೂರ ಮಾಡಿದ್ದ" “ಯಾರವ್ವ ಈ ಚೆಲುವ ತಂತಾನೆ ರಂಜಿಸುವ ಸೂರ್ಯನ ಥರ ಹೊಳೆಯುವ" ಅಂತ ಮನಸ್ಸಿನಲ್ಲೇ ನಾನು ಮುಲುಗುತ್ತಿರುವಾಗಲೇ ನಾಳಿನ ಸತ್ಯವನ್ನು ಇಂದೇ ಬಯಲಾಗಿಸಿಕೊಟ್ಟದ್ದು ಅವರ ಮಾತು ““ಅಜ್ಜ ಅಜ್ಜಿಗೆ ಬೇಜಾರು ನೆನಪೂ ಬೋರು, ಕುರುಡ ಮುದುಕ ಕೈಯಾಡಿಸಿ ಹುಡುಕುತ್ತಾನೆ ಎಲ್ಲಿದ್ದೀಯೆ ಮುದುಕಿ ಎಲ್ಲಿದ್ದೀಯೆ?"

English summary
Dr Chandrashekhar Kambar, who brought 8th Jnanpith award to Kannada, is a man of many facets. Folk writer, poet, music composer, movie director, professor, a true statsman. Tribute to the legendary Kannada laureate by Anjali Ramanna, advocate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X