ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಲ್ಕೋ ಶಾಪ್ ಫ್ಲೋರಿನಲ್ಲಿ ಪ್ರಪ್ರಥಮ ಮಹಿಳೆ

By * ಸುಧಾಮೂರ್ತಿ ; ಕನ್ನಡಕ್ಕೆ: ವಿಶ್ವನಾಥ ಹುಲಿಕಲ್
|
Google Oneindia Kannada News

JRD Tata
ಟೆಲ್ಕೋಗೆ ಸೇರಿಕೊಂಡ ನಂತರವೇ ನನಗೆ ತಿಳಿದಿದ್ದು ಜೆ ಆರ್ ಡಿ ಟಾಟಾ ಎಂತಹ ವ್ಯಕ್ತಿ ಎಂಬುದು. ಅವರೊಬ್ಬ ಭಾರತದ ಉದ್ದಿಮೆಯ ಅನಭಿಷಿಕ್ತ ದೊರೆ. ಆಗ ನನಗೆ ಹೆದರಿಕೆಯಾಗಲು ಶುರುವಾಯಿತು. ನನ್ನನ್ನು ಬಾಂಬೆಗೆ ವರ್ಗಮಾಡುವತನಕ, ನಾನು ಅವರನ್ನು ಭೇಟಿಯಾಗಲಿಲ್ಲ. ಹೀಗೊಂದು ದಿನ ನಾನು, SM ಎಂದೇ ಪರಿಚಿತರಾಗಿದ್ದ ಮಾಳಗಾಂವಕರ್ (ನಮ್ಮ ಕಂಪನಿಯ ಅಧ್ಯಕ್ಷರು) ಅವರನ್ನು ಭೇಟಿಯಾಗಿದ್ದೆ. ಯಾವುದೋ ಒಂದು ವರದಿಯನ್ನು ಅವರಿಗೆ ತೋರಿಸಬೇಕಾಗಿತ್ತು. ನಾನಾಗ ಟಾಟಾ ಕಂಪೆನಿಗಳ ಕೇಂದ್ರ ಕಛೇರಿಯಾದ 'ಬಾಂಬೆ ಹೌಸ್'ನ ಮೊದಲನೆಯ ಅಂತಸ್ತಿನಲ್ಲಿ SM ಅವರ ಕಚೇರಿಯಲ್ಲಿದ್ದೆ. ಆಗ ಧುತ್ತೆಂದು ಅಲ್ಲಿಗೆ ಜೆ ಆರ್ ಡಿ ಆಗಮಿಸಿದರು. ನಾನು 'ನಮ್ಮ ಜೆ ಆರ್ ಡಿ' ಅವರನ್ನು ನೋಡಿದ್ದು ಅದೇ ಮೊದಲ ಸಲ. ಬಾಂಬೆ ಹೌಸ್ ನ ಎಲ್ಲರೂ ಅವರನ್ನು ಪ್ರೀತಿಯಿಂದ 'ನಮ್ಮ ಜೆ ಆರ್ ಡಿ' ಎಂದೇ ಕರೆಯುತ್ತಿದ್ದರು. ಅವರಿಗೆ ನಾನು ಬರೆದ ಪತ್ರವನ್ನು ಜ್ಞಾಪಿಸಿಕೊಂಡು ನಾನಾಗ ಹೆದರಿಕೆಯಿಂದ ಕುಗ್ಗಿಹೋಗಿದ್ದೆ. ಆಗ SM, ಅವರನ್ನು ಉದ್ದೇಶಿಸಿ "ಜೇ, ಈಕೆ ಎಂಜಿನಿಯರ್. ಅಷ್ಟೇ ಅಲ್ಲ, ಸ್ನಾತಕೋತ್ತರ ಪದವಿ ಪಡೆದ ಎಂಜಿನಿಯರ್" ಎಂದು ಒಳ್ಳೆಯ ರೀತಿಯಿಂದ ಪರಿಚಯಿಸಿದರು. ಹಾಗೆಯೇ ಮುಂದುವರಿದು "ನಮ್ಮ ಟೆಲ್ಕೋ ಕಂಪೆನಿಯ ಶಾಪ್ ಫ್ಲೋರಿನಲ್ಲಿ ಕೆಲಸ ಮಾಡುತ್ತಿರುವ ಪ್ರಪ್ರಥಮ ಮಹಿಳೆ" ಎಂದರು. ಆಗ ಜೆ ಅರ್ ಡಿ ನನ್ನನ್ನು ನೋಡಿದರು. ಆಗ ನಾನು ಮನಸ್ಸಿನಲ್ಲಿಯೇ ದೇವರನ್ನು ಪ್ರಾರ್ಥಿಸುತ್ತಿದ್ದೆ- ದೇವರೇ, ಈ ಮಹಾನುಭಾವ ನನ್ನನ್ನು ಆ ಸಂದರ್ಶನದ ಬಗ್ಗೆಯಾಗಲೀ ಅಥವಾ ಅದಕ್ಕೆ ಕಾರಣವಾದ ಆ ಪತ್ರದ ಬಗ್ಗೆಯಾಗಲೀ ಏನನ್ನೂ ಕೇಳದಿರಲಿ.

ಅದೃಷ್ಟವಶಾತ್ ಅವರು ನನ್ನನ್ನು ಅದರ ಬಗ್ಗೆ ಏನೂ ಕೇಳಲಿಲ್ಲ. ಬದಲಾಗಿ ಅವರು ಹೀಗೆಂದರು "ನಮ್ಮ ದೇಶದಲ್ಲಿ ಹುಡುಗಿಯರು ಎಂಜನಿಯರಿಂಗ್ ಓದುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಅಂದ ಹಾಗೆ ನಿನ್ನ ಹೆಸರೇನು?"

ಟೆಲ್ಕೋ ಸೇರಿಕೊಂಡಾಗ ನಾನು ಸುಧಾ ಕುಲಕರ್ಣಿಯಾಗಿದ್ದೆ. ಈಗ ನಾನು ಸುಧಾ ಮೂರ್ತಿ, ಎಂದು ಉತ್ತರಿಸಿದೆ. ಅವರು ನನ್ನನ್ನು ನೋಡಿ ಮುಗುಳ್ನಕ್ಕು, SM ಅವರ ಜೊತೆ ಚರ್ಚೆಯನ್ನು ಮುಂದುವರಿಸಿದರು. ಬದುಕಿದೆಯಾ ಬಡಜೀವವೇ ಎಂಬಂತೆ ನಾನು ಅಲ್ಲಿಂದ ಕಾಲುಕಿತ್ತು ಬಚಾವಾದೆ. ಇದಾದ ನಂತರ ನಾನು ಜೆ ಆರ್ ಡಿ ಅವರನ್ನು ಆಗಾಗ ಭೇಟಿಯಾಗುತ್ತಿದ್ದೆ. ಅವರೋ ಟಾಟಾ ಗುಂಪಿನ ಸಕಲ ಉದ್ದಿಮೆಗಳ ಅಧ್ಯಕ್ಷರು! ನಾನೋ, ಕೇವಲ ಒಬ್ಬ ಎಂಜಿನಿಯರ್. ನಮ್ಮಿಬ್ಬರ ಮಧ್ಯೆ ಸಮಾನವಾದ ಅಂಶಗಳು ಯಾವುದೂ ಇರಲಿಲ್ಲ. ಆದರೂ ನನಗೆ ಅವರ ಬಗ್ಗೆ ಹಿಮಾಲಯದಷ್ಟು ಗೌರವ ಮತ್ತು ಆಶ್ಚರ್ಯ.

ಹೀಗೊಂದು ದಿನ ಆಫೀಸಿನ ಕಾರಿಡಾರ್ ನಲ್ಲಿ ನಾನು ನನ್ನ ಪತಿ ಮೂರ್ತಿಗಾಗಿ ಕಾಯುತ್ತಿದ್ದೆ. ಆಗ ಅಲ್ಲಿಗೆ ಬಂದ ಜೆ ಆರ್ ಡಿ, ಆಶ್ಚರ್ಯವೋ ಎಂಬಂತೆ ನನ್ನ ಬಳಿ ಬಂದರು. ಹೇಗೆ ಪ್ರತಿಕ್ರಿಯೆ ನೀಡಬೇಕೆಂದು ನನಗೆ ತಿಳಿಯಲಿಲ್ಲ. ನಾನು ಬರೆದ ಆ ಪತ್ರ ಜ್ಞಾಪಕಕ್ಕೆ ಬಂದು ನನ್ನನ್ನು ನಿತ್ರಾಣಗೊಳಿಸಿತು. ಆದರೆ ಜೆ ಆರ್ ಡಿ ಅದನ್ನು ಮರೆತಿದ್ದರು. ಅದು ಅವರಿಗೆ ಒಂದು ಸಣ್ಣ ಘಟನೆಯಾಗಿರಬಹುದು; ಆದರೆ ನನಗೆ ಮಹತ್ವದ ಘಟನೆಯಾಗಿತ್ತು.

English summary
Here is an inspirational article written by Infosys foundation chairman Sudha Murthy on her association with JRD Tata in Lasting Legacies (Tata Review- Special Commemorative Issue 2004). Translation by Vishvanath Hulikal, North Califoania, USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X