ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನೊಡಲಿನ ಸಾಲುಗಳು : ಸುಪ್ರಿಯಾ ಆಚಾರ್ಯ

By * ಸುಪ್ರಿಯಾ ಆಚಾರ್ಯ ರಘುನಂದನ
|
Google Oneindia Kannada News

Supriya Acharya Raghunandan
ಮದುವೆಗೆ ಇನ್ನೇನು ಹದಿನಾರೇ ದಿನ ಉಳಿದಿತ್ತು. ಲಗ್ನ ಪತ್ರಿಕೆಗಳನ್ನು ಹಂಚಲು ಪ್ರಾರಂಭಿಸಿದ್ದೇ ಆ ದಿನ. ಬಿಸಿಲಿನಲ್ಲಿ ಸುತ್ತಿ ಮನೆಗೆ ಬರುತ್ತಿದ್ದಂತೆಯೇ, ಆಗತಾನೆ ಮಠದಲ್ಲಿ ಮುಂಜಿಯ ಊಟ ಮುಗಿಸಿ, ಕೇಸರಿ ಬಣ್ಣದ ಕಾಂಜಿವರಂನಲ್ಲಿ, ಎಂದಿಗಿಂತಲೂ ಕೊಂಚ ಹೆಚ್ಚೇ ಲಕ್ಷಣವಾಗಿ ಕಾಣ್ತಿದ್ದ ನನ್ನಮ್ಮ, ವೀಳ್ಯವಗಿದು ಕೆಂಪಾಗಿದ್ದ ಬಾಯಿಯಿಂದ ತುಸು ನಗುತ್ತಾ...

"ಮದುವೆಯ ಸೀರೆ-ರವಿಕೆಗಳು ಮೊನ್ನೆಯೇ ಸಿದ್ಧವಾಯಿತು, flower decoratorsಗೆ ಯಾವಾಗ ಹೇಳ್ತೀಯ? photographer ಅನ್ನು ಇನ್ನೂ ಗೊತ್ತು ಮಾಡಿಲ್ಲ. ಅಡುಗೆಯವರಿಗೆ ನಾನು advance ಕೊಟ್ಟು ಬಂದೆ. ನೆಂಟರಿಷ್ಟರಿಗೆ, ಬಳಗದವರಿಗೆ ನಾನು ಪತ್ರಿಕೆಗಳನ್ನು ಹಂಚಿದ್ದಾಯಿತು. ಅಲ್ಲಿಗೆ ನನ್ನ ಕೆಲಸಗಳು ಮುಗಿದ ಹಾಗಾಯಿತು. ನಿಮ್ ಕಲಾವಿದರ ಪಟ್ಟಿ ಅಂದ್ರೆ ಚಿಕ್ಕದಾಗಿರುತ್ತಾ? ಬೇಗ ಬೇಗ ಪತ್ರಿಕೆ ಹಂಚಿ ಮುಗಿಸಬಾರದ? ಅದಿರ್ಲಿ ಎರಡು battery ಕೊಂಡುತಾ ಎಂದು ಹೇಳಿದ್ದೆನಲ್ವ? ತಂದ್ಯಾ? ಈ ಗಡಿಯಾರ 5.15ಕ್ಕೆ ನಿಂತು ಹೋಗಿದೆ. Battery ಹಾಕ್ಲಿಲ್ಲಾಂದ್ರೆ ನಾಳೆ ಬೆಳಗ್ಗೆ ಏಳಲಿಕ್ಕೆ ಗಂಟೆ ಹೇಗೆ ಗೊತ್ತಾಗ್ತದೆ ಮಗ?" ಎಂದು non stop ಮಾತಾಡ್ತಾನೆ ಇದ್ಲು ನನ್ನಮ್ಮ.

ಒಬ್ಬಳೇ ಮಗಳ ಮದುವೆ. ಅರುವತ್ತರ ತಾಯಿ ಜೀವಕ್ಕೆ ಅದೇನೋ ಸಡಗರ. ಎಂದಿನಂತೆ ಆಗಿದ್ದರೆ , "ಅಯ್ಯೋ , ಸ್ವಲ್ಪ ಸುಮ್ನಿರ್ತಿಯಾಮ್ಮ, ಬರೀ ಹೇಳ್ತಾ ಇರಬೇಡ, ಎಲ್ಲ ಮಾಡ್ತೀನಿ" ಎಂದು ಸುಳ್ಳೇ ರೇಗಿ ಸುಮ್ಮನಾಗ್ತಿದ್ದೆ. ಆದ್ರೆ ಅಂದು ಹೂಂಗುಟ್ಟಿ ಸುಮ್ಮನಾದವಳಿಗೆ ಯಾಕೋ ಈ stress ತಡೆಯೋಕೆ ಆಗುತ್ತಿಲ್ಲ ಅನ್ನಿಸಿತು. ನಾನೊಬ್ಬಳೆ ಹೊತ್ತ ನನ್ನ ಮದುವೆಯ ಜವಾಬ್ದಾರಿ, ಜೊತೆಗೆ ಬೆನ್ನಟ್ಟಿ ಬಂದು ಕಾಡ್ತಿದ್ದ 'ಅಪ್ಪ'ನ ನೆನಪು. ಅವರಿದ್ದಿದ್ದರೆ...

"ಅವರ ಮುಂದೆ ನಿಂತು ಮದುವೆಗೆ ಮಾಡಬೇಕಾದ ಕೆಲಸಗಳನ್ನೆಲ್ಲ ನಾನು ಮಾಡ್ತಿದ್ದೀನಿ ಕಣೋ. ಮದುಮಗಳ ನಾಜೂಕುತನವೇ ಇಲ್ಲವಾಗಿ ಹೋಗಿದೆ ನನಗೆ. ಇಷ್ಟವಾಗ್ತಿದ್ದ ಜವಾಬ್ದಾರಿ ಈಗ ಕಷ್ಟವಾಗ್ತಿದೆ. ಇದಾವ ದೇವರ ನ್ಯಾಯಾನೋ" ಎಂದು ನನ್ನ ಮದುಮಗನನ್ನ ಕೇಳಿದ್ದೆ. ಆರು ವರ್ಷಗಳಿಂದ ನೆನ್ನೆಯ ತನಕ ಮದುವೆ, ಸೀರೆ, ಒಡವೆ, ಮಕ್ಕಳು, ಮೊಮ್ಮಕ್ಕಳು ಅಂತ ಕನಸು ಕಾಣ್ತಿದ್ದ ಇವಳಿಗೆ ಇಂದೇನಾಯಿತು ಎಂದು ಅನಿಸಿಯೋ ಏನೋ, ಅಷ್ಟಿಷ್ಟು ಸಾಂತ್ವನ, ಹೊಟ್ಟೆ ಹುಣ್ಣಾಗಿಸುವಷ್ಟು ನಗು, ಬೊಗಸೆ ತುಂಬಾ ಪ್ರೀತಿ ತುಂಬಿ ಕಳುಹಿಸಿದ್ದ ಅವನು.

ಎಂದೋ ಒಪ್ಪಿಕೊಂಡಿದ್ದ ಕಾರ್ಯಕ್ರಮವಿದ್ದುದರಿಂದ ಮನಸಿಲ್ಲದ ಮನಸಿನಿಂದ ಹಾಡೋಕೆ ಹೋದೆ ಅಂದು. 'ಖುಷಿಯಾಗಿರೆ ತಾಯಿ, ಈಗೇನಾಯಿತೀಗ?' ಎಂದು ಇನ್ನೊಂದೆಡೆ ಮನಸು ಚಿವುಟಿತ್ತು. ಭಾವಗೀತೆಗಳು ನಿರ್ಭಾವುಕತೆಯಿಂದ 3 ಗಂಟೆಗಳ ಕಾಲ ನುಡಿದವು.

ಇನ್ನೇನು ಕಾರ್ಯಕ್ರಮ ಮುಗಿಸುವಷ್ಟರಲ್ಲಿ ಕೋರಿಕೆಯ ಹಾಡಿದ್ದ ಚೀಟಿಯೊಂದು ನನ್ನ ಕೈ ಸೇರಿತ್ತು. ' ದೀಪವು ನಿನ್ನದೇ ಗಾಳಿಯು ನಿನ್ನದೇ, ಆರದಿರಲಿ ಬೆಳಕು...'. ಕೆ ಎಸ್ ನರವರ ಸಾಲುಗಳನ್ನು ಓದುತ್ತಿದ್ದಂತೆಯೇ ಅದೆಲ್ಲೋ ಕಳೆದು ಹೋಗಿದ್ದ, ಅಥವಾ ಅಲ್ಲೇ ಎಲ್ಲೋ ಅಲೆಯುತ್ತಿತ್ತೋ ಏನೋ, ಅದಾವುದೋ ಭಾವ ಮೈ ಹೊಕ್ಕಂತಾಗಿ ಕಣ್ಮುಚ್ಚಿ ಹಾಡಿದೆ. ಪ್ರತಿಯೊಂದು ಸಾಲಿನ ಕಲ್ಪನೆಯೂ ಕಣ್ಮುಂದೆ ಆಕಾರವನ್ನು ಪಡೆಯುತ್ತಾ, ತೇಲಿ ಮಾಯವಾದರೂ, ಆ ಹೆಸರಿಲ್ಲದ ಭಾವ ಮಾತ್ರ ಬೇರೂರಿತ್ತು. ಹಾಡು ಮುಗಿದರೂ ಕಣ್ತೆರೆಯಲಾಗಲಿಲ್ಲ. ಚಪ್ಪಾಳೆಗಳು ನಿಲ್ಲುತ್ತಿದ್ದಂತೆಯೇ "once more, once more" ಕೇಳಿ ಬಂತು. ಅದೇ ಪರವಶತೆಯಲ್ಲಿ ಮುಚ್ಚಿದ ಕಣ್ಣುಗಳೊಂದಿಗೆ ಮತ್ತೆ ಹಾಡಿದೆ- 'ದೀಪವು ನಿನ್ನದೇ ಗಾಳಿಯು ನಿನ್ನದೇ, ಆರದಿರಲಿ ಬೆಳಕು...' ಇದರ ಸೃಷ್ಟಿಯಾದಾಗ ಕೆ ಎಸ್ ನ ಅದಾವ ಭಾವಪರವಶಕ್ಕೊಳಗಾಗಿದ್ದರೋ ಎನಿಸಿ ಒಮ್ಮೆ ಮೈ ಝುಂ ಎಂದಿತು.

ಮನೆ ತಲುಪಿದವಳಿಗೆ battery ತರಲಿಲ್ಲವೆಂದು ನೆನಪಾಗಿ, ಅಮ್ಮ ಕೇಳೋಕೆ ಮುಂಚೆಯೇ ಮಾತು ಮರೆಸಿ, ಹರಟೆ ಕೊಚ್ಚಿ, ನಗಿಸಿ, ಮಲಗಿಸಿ, ನಾನೂ ಮಲಗಿದೆ. ಮರು ದಿನ ಮುಂಜಾವ 6.45ಕ್ಕೆ ಕೆಲಸದ ಹೆಂಗಸು ಬಾಗಿಲು ತಟ್ಟಿದಾಕ್ಷಣ ಮಲಗಿದ ಕೋಣೆಯಲ್ಲಿ ತಟ್ಟನೆ ಎದ್ದು ಕುಳಿತವಳಿಗೆ ಮತ್ತದೇ ಅಸ್ಪಷ್ಟ ಯಾತನೆ, ಯಾವುದೋ ಹಾಡಿನ ಅಸ್ಪಷ್ಟ ಸಾಲುಗಳ ಚಿತ್ರ, ಬಾಗಿಲು ಬಡಿದ ಸದ್ದು, ಮದುವೆಗೆ ಇನ್ನು ಉಳಿದಿರುವುದು ಹದಿನೈದು ದಿನಗಳು ಮಾತ್ರ, ಅದೇನೋ ಹಿಂಸೆ, ಮತ್ತೆ ಬಾಗಿಲ ಸದ್ದು.

ಅಮ್ಮ ಹಾಲ್ ನಲ್ಲಿ ಇನ್ನೂ ಮಲಗಿದ್ದಾಳೆ. battery ಇಲ್ಲದ ಗಡಿಯಾರ 5.15 ತೋರಿಸ್ತಾ ಇದೆ. ಕೆ ಎಸ್ ನರ ಸಾಲುಗಳು ಸ್ಪಷ್ಟವಾಗತೊಡಗಿದವು. 'ಕಡಲು ನಿನ್ನದೇ ಹಡಗು ನಿನ್ನದೇ, ಮುಳುಗದಿರಲಿ ಬದುಕು...'

"ಒಂದೂವರೆ ತಾಸಗಿರಬಹುದು" - ವೈದ್ಯರ ದನಿ... ಬೆಳಕಾಗಿ ಒಂದೂವರೆ ತಾಸಾಗಿತ್ತಾ? ಸುಮಾರು 5.15ರ ಮುಂಜಾವದ ವೇಳೆ?

once more ಎಂದು ಕೆ ಎಸ್ ನರ ಸಾಲುಗಳು ಅಂದು, ಬೆಳಕಾರದಿರಲೆಂದು ನನ್ನೊಡಲಿನಿಂದ ನನಗೇ ಅರಿವಿಲ್ಲದಂತೆ ಮತ್ತೆ ಮತ್ತೆ ಮೊರೆ ಇಟ್ಟಿದ್ದವು. ಅವೇ ಇಂದು - ಅಮ್ಮನ ನೆನಪಾಗಿ.....

English summary
Soliloquies of a Daughter: In fond memory of my mother, by Spriya Acharya Raghunandan in Bangalore. Supriya Acharya shot to fame after Nee Amrutadhare song from Amrutadhare movie by Nagathihalli Chandrashekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X