ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ ದೇಗುಲ 'ಬಿ' ಕೊಠಡಿ ತೆರೆದರೆ ಕೆಡುಕೆ?

By * ಕುಮಾರ ರೈತ, ಬೆಂಗಳೂರು
|
Google Oneindia Kannada News

Sri Anantha Padmanabha temple
'ದೇಗುಲದ ನೆಲ ಮಾಳಿಗೆ 'ಬಿ" ಕೊಠಡಿ ತೆರೆದರೆ ಆಪತ್ತು' ಎಂಬ ಭೀತಿ ಕೇರಳಿಗರಲ್ಲಿ ಉಂಟಾಗಿದೆ. ಅಲ್ಲಿ ನಿತ್ಯ ಇದೇ ಚರ್ಚೆ. ಇದರ ಬಗ್ಗೆ ವದಂತಿಗಳು ಹರುಡುತ್ತಿವೆ. ಕೊಠಡಿ ತೆರೆದರೆ ನಿಜಕ್ಕೂ ಕೆಡುಕು ಉಂಟಾಗುತ್ತದೆಯೆ? ಇಡೀ ದೇಶದ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಆ ಕೊಠಡಿಯಲ್ಲಿ ಇರುವುದಾದರೂ ಏನು? ಸುಪ್ರೀಂ ಕೋರ್ಟ್ ಕೂಡ ಸದ್ಯಕ್ಕೆ ಈ ಬಿ ಕೊಠಡಿಯನ್ನು ತೆರೆಯಬಾರದೆಂದು ಆದೇಶಿಸಿದೆ. ಇದರ ಹಿಂದಿನ ಮರ್ಮವಾದರೂ ಏನು? Just Journalism ಕನ್ನಡ ಬ್ಲಾಗ್ ನಲ್ಲಿ ಪ್ರಕಟವಾದ ಈ ಲೇಖನ ಓದಿರಿ.

ತಿರುವನಂತಪುರಂ ಮುಖ್ಯ ದೇಗುಲದ ಕುರಿತು ಹಿಂದೆ ಇದೇ ಬ್ಲಾಗಿನಲ್ಲಿ Exclusive ಮಾಹಿತಿ ಪ್ರಕಟವಾಗಿದೆ. ಪ್ರಾಚೀನ ದೇಗುಲದಲ್ಲಿ ಚಿನ್ನ, ವಜ್ರ-ವೈಢೂರ್ಯ ದೊರೆಯುವುದು ತೀರ ಅಪರೂಪ-ಅಸಾಮಾನ್ಯ ಸಂಗತಿಯಲ್ಲ. ನನ್ನ ಪ್ರಕಾರ ಆ ಇಡೀ ದೇಗುಲದ ವಾಸ್ತು ವಿಜ್ಞಾನ-ಕುತೂಹಲಕಾರಿ ಅಂಶಗಳನ್ನು ತಿಳಿಸುವ ಅನಂತಶಯನ ಮಹಾತ್ಮೆ-ಇನ್ನಿತರ ಸಂಬಂಧಿತ ಗ್ರಂಥಗಳು ಅಧ್ಯಯನಾರ್ಹ. ಇದರಿಂದ ಮತ್ತಷ್ಟು ವಿಶೇಷ ಸಂಗತಿ ತಿಳಿಯುವ ಸಾಧ್ಯತೆ ಇದೆ.

ದೇಗುಲದ ನೆಲ ಮಾಳಿಗೆಯಲ್ಲಿ 'ಅನಂತನ ಖಜಾನೆ" ಇರುವುದು ತೀರ ಗೋಪ್ಯವಾದ ಸಂಗತಿಯಾಗಿರಲೇ ಇಲ್ಲ. ಪದ್ಮನಾಭ ದೇವಾಲಯದ ಚರಿತ್ರೆ ತಿಳಿಯದಿದ್ದರಷ್ಟೆ ಇದು ಬೆರಗಿನ ಸಂಗತಿ. 1931ರಲ್ಲಿ ಟ್ರಾವೆಂಕೂರು ಸಂಸ್ಥಾನದ ಮಹಾರಾಜ ಬಲರಾಮ ವರ್ಮ ಅವರು ಖುದ್ದು ನಿಂತು ನೆಲ ಮಾಳಿಗೆ ಕೊಠಡಿಯೊಂದರ ಬಾಗಿಲು ತೆರೆಯಿಸಿದ್ದರು. ಅನೇಕ ವರ್ಷಗಳಿಂದ ತೆಗೆಯದೇ ಇದ್ದ ಕಾರಣ ಬೀಗ ತುಕ್ಕು ಹಿಡಿದಿತ್ತು. ಕೀಲಿ ಕೆಲಸ ಮಾಡದ ಕಾರಣ ಸತತ 2 ' (ಎರಡೂವರೆ ಘಂಟೆ) ಅವಧಿ ಪ್ರಯತ್ನದ ನಂತರ ಬೀಗ ಒಡೆದು ಬಾಗಿಲು ತೆರೆಯಲಾಯಿತು. ಈ ಸಂದರ್ಭದಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಕಾರ್ಯಾಚರಣೆಯಲ್ಲಿ ತೊಡಗಿದ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಲು ದೇಗುಲದ ಮುಖ್ಯ ದ್ವಾರದ ಮುಂದೆ ಆಂಬುಲೆನ್ಸ್ ನಿಲ್ಲಿಸಿಕೊಂಡು ವೈದ್ಯರು ಸಜ್ಜಾಗಿದ್ದರು. ನೆಲ ಮಾಳಿಗೆಯಲ್ಲಿ ಭಾರಿ ಗಾತ್ರದ ಫ್ಲಡ್ ಲೈಟ್ಸ್ ಹಾಕಲಾಗಿತ್ತು. ಅಲ್ಲಿಗೆ ಹೋಗುವ ಪ್ರತಿಯೊಬ್ಬರ ಕೈಯಲ್ಲಿಯೂ ಶಕ್ತಿಶಾಲಿ ಟಾರ್ಚ್ ಇದ್ದವು.

ವರ್ಷಾಂತರಗಳಿಂದ ಬಾಗಿಲು ತೆರೆಯದೇ ಇದ್ದರೆ ಕೆಟ್ಟ ಹವೆ ತುಂಬಿಕೊಳ್ಳುವ ಕಾರಣ ಅದನ್ನು ಹೊರ ಹಾಕಲು ಮುಂಚೆಯೇ ಫ್ಯಾನ್ ಗಳನ್ನು ಜೋಡಿಸುವ ತಂಡವನ್ನು ಅಲ್ಲಿಗೆ ಕಳುಯಿಸಲಾಗಿತ್ತು. ಪ್ರಯಾಸದಿಂದ ಬಾಗಿಲು ತೆರೆದಾಗ ಅಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನ-ವಜ್ರ-ವೈಢೂರ್ಯಗಳ ಆಭರಣಗಳು, ಚಿನ್ನದ ನಾಣ್ಯಗಳು-ಪಾತ್ರೆಗಳು, ನಾಣ್ಯಗಳನ್ನು ಅಳವಡಿಸಿದ್ದ ಹಿತ್ತಾಳೆ ಎದೆ ಕವಚಗಳು ಇದ್ದವು. ಇದರಲ್ಲಿ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಮತ್ತೆ ಯಥಾ ಪ್ರಕಾರ ಬಾಗಿಲಿಗೆ ಬೀಗ ಹಾಕಿ ಮುದ್ರೆಯೊತ್ತಲಾಯಿತು. ಇದಕ್ಕೂ ಮುಂಚೆ ಅಂದರೆ 1908ರಲ್ಲಿಯೇ ನೆಲ ಮಾಳಿಗೆ ಕೊಠಡಿಗಳ ಬಾಗಿಲು ತೆರೆಯುವ ಪ್ರಯತ್ನ ಮಾಡಲಾಗಿತ್ತು. ಈ ಕುರಿತ ಕೆಲ ವಿಚಾರಗಳನ್ನು 1933ರಲ್ಲಿ ತ್ರಿವೆಂಡ್ರಮ್ ನಲ್ಲಿ ಇದ್ದ ಎಮಿಲಿ ಗಿಲ್ ಕ್ರೈಸ್ಟ್ ಹಚ್ ಎನ್ನುವ ಮಹಿಳೆ ತಾವು ಬರೆದ 'ಟ್ರಾವೆಂಕೂರು; ಎ ಗೈಡ್ ಬುಕ್ ಫಾರ್ ದ ವಿಸಿಟರ್ಸ್" ಪುಸ್ತಕದಲ್ಲಿ ವಿವರಿಸಿದ್ದಾರೆ. ಈ ಸಂಗತಿ ಡಿಸೆಂಬರ್ 6, 1931ರ ಭಾನುವಾರದ 'ದ ಹಿಂದೂ" ಪತ್ರಿಕೆಯಲ್ಲಿಯೂ ಪ್ರಕಟವಾಗಿದೆ.

69 ವರ್ಷಗಳ ಹಿಂದೆ ಅಷ್ಟೆಲ್ಲ ಮುಂಜಾಗ್ರತೆ ವಹಿಸಿ ಬಾಗಿಲು ತೆರೆಯಲು ಕಾರಣ ದೇಗುಲದ ಆವರಣದಲ್ಲಿ ರಾತ್ರಿ ವೇಳೆ ಭಾರಿ ಗಾತ್ರದ ನಾಗರ ಹಾವುಗಳ ಸಂಚಾರವನ್ನು 'ಅನಂತ ಪದ್ಮನಾಭನ ಅಂಗರಕ್ಷಕ ಪಡೆ" ನೋಡಿದ್ದೇ ಆಗಿತ್ತು. 2011ರ ಜೂನ್ 3ರಿಂದ 7ರವರೆಗೆ ಕಾರ್ಯನಿಮಿತ್ತ ತಿರುವನಂತಪುರದಲ್ಲಿದ್ದೆ. ( ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದ ಸಂದರ್ಭದಿಂದ ಇಲ್ಲಿಯವರೆಗೂ ಅನೇಕ ಬಾರಿ ತಿರುವನಂತಪುರಂಗೆ ಭೇಟಿ ನೀಡಿದ್ದೇನೆ. ಹೋದಾಗಲೆಲ್ಲ ಈ ದೇಗುಲಕ್ಕೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ) ಅನಂತ ಪದ್ಮನಾಭನ ದೇಗುಲದ ಬಗ್ಗೆ ತೀವ್ರ ಕುತೂಹಲವಿರಿಸಿಕೊಂಡ ಕಾರಣ ನಿತ್ಯ ಬೆಳಿಗ್ಗೆ ದೇಗುಲಕ್ಕೆ ಹೋಗುತ್ತಿದ್ದೆ. ಪತ್ರಕರ್ತನ ಸ್ವಭಾವ, ಎಲ್ಲಿ ಹೋದರೂ ಮಾಹಿತಿ ಸಂಗ್ರಹಣೆಯಲ್ಲಿ ತೊಡಗುತ್ತಿದ್ದೆ.

ರಾತ್ರಿ 9ರಿಂದ ಬೆಳಗಿನ ಜಾವ 2.30ರವರೆಗೂ ಅಂಗರಕ್ಷಕ ಪಡೆ ಹೊರತು ಪಡಿಸಿ ಉಳಿದವರ್ಯಾರಿಗೂ ದೇಗುಲದ ಒಳಗೆ ಪ್ರವೇಶವಿಲ್ಲ. ಶತಶತಮಾನಗಳಿಂದ ಪಾಲಿಸಿಕೊಂಡು ಬಂದಿರುವ ರಿವಾಜು ಮತ್ತು ಭದ್ರತಾ ವ್ಯವಸ್ಥೆಯಿದು. ಇನ್ನೊಂದು ಕುತೂಹಲದ ವಿಷಯವೆಂದರೆ ಈ ಅವಧಿಯಲ್ಲಿ ಅಂಗರಕ್ಷಕ ಪಡೆ ಅವರ ಸಂವಾದ ನಡೆಯುವುದು ಕಣ್ಣು ಸನ್ನೆ-ಕೈ ಸನ್ನೆ ಮುಖಾಂತರವೇ. ಅನಗತ್ಯವಾಗಿ ಒಂದು ಮಾತನ್ನು ಅವರು ಆಡುವುದಿಲ್ಲ. ಕಣ್ಣೆವೆ ಮುಚ್ಚದೇ ದೇಗುಲವನ್ನು ಕಾಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಇವರು ಈಗಲೂ ಭಾರಿ ಗಾತ್ರದ ನಾಗರ ಹಾವುಗಳು ದೇಗುಲದ ಒಳಾವರಣದಲ್ಲಿ ಸಂಚರಿಸುವುದನ್ನು ನೋಡಿದ್ದಾರೆ. ಆಗ ಅವುಗಳನ್ನು ಹಿಡಿಯುವ-ಬಡಿಯುವ ಪ್ರಯತ್ನ ಮಾಡಿಲ್ಲ-ಮಾಡುವುದೂ ಇಲ್ಲ. ಇವುಗಳಿಂದ ಯಾರಿಗೂ ತೊಂದರೆಯಾಗಿಲ್ಲ. ದೇಗುಲ ರಕ್ಷಿಸಲು ಇವುಗಳು ಸಹಾಯಕ ಎಂಬ ನಂಬಿಕೆ ಅವರಿಗೆ.

ಕೇರಳದ ನಿವೃತ್ತ ಐ.ಪಿ.ಎಸ್. ಅಧಿಕಾರಿ, ಹಾಲಿ ಸುಪ್ರೀಂ ಕೋರ್ಟಿನಲ್ಲಿ ವಕೀಲರಾಗಿರುವ ಟಿ.ಪಿ. ಸುಂದರ ರಾಜನ್ ಅವರು ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿರದಿದ್ದರೆ ಅನಂತ ಭಂಡಾರ ಸಾರ್ವಜನಿಕ ಗಮನಕ್ಕೆ ಬರುತ್ತಲೇ ಇರಲಿಲ್ಲ. ದೇಗುಲ, ಅಲ್ಲಿಯ ಸಂಪತ್ತಿನ ನಿರ್ವಹಣೆ ಪಾರದರ್ಶಕವಾಗಿರಬೇಕು ಎಂದು ಇವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇದರ ಉಸ್ತುವಾರಿ ವಹಿಸಿಕೊಳ್ಳಬೇಕೆಂದು ಆದೇಶಿಸಿತ್ತು. ಇದನ್ನು ರಾಜ ಮನೆತನದ ಹಿರಿಯ ಮಾರ್ತಂಡ ವರ್ಮ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ 2011ರ ಮೇ 2ರಂದು ಕೇರಳ ಹೈಕೋರ್ಟ್ ಆದೇಶಕ್ಕೆ ತಡೆ ಅಜ್ಞೆ ನೀಡಿದ ಕೋರ್ಟ್, ದೇಗುಲದ ಸಮಸ್ತ ಸಂಪತ್ತಿನ ಲೆಕ್ಕ ಸಿದ್ದಪಡಿಸುವಂತೆ ಆದೇಶ ನೀಡಿತ್ತು. ಕೇರಳ ಹೈಕೋರ್ಟಿನ ನಿವೃತ್ತ ನ್ಯಾಮಮೂರ್ತಿಗಳಾದ ಎಂ.ಎನ್. ಕೃಷ್ಣನ್, ಕೆ.ಎಸ್. ರಾಜನ್, ಸೇರಿದಂತೆ ಏಳು ಮಂದಿ ಸಮಿತಿ ನೇಮಕ ಮಾಡಿದೆ. ಈ ಸಮಿತಿಯಲ್ಲಿ ರಾಜಮನೆತನದ ಮಾರ್ತಾಂಡ ವರ್ಮ ಕೂಡ ಇದ್ದಾರೆ. ಸಮೀಕ್ಷೆಗೆ ಅನುಕೂಲವಾಗುವಂತ ತಿರ್ಮಾನಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಎಂ.ಎನ್. ಕೃಷ್ಣನ್ ಅವರಿಗೆ ನೀಡಿದೆ.

2011ರ ಜೂನ್ 27ರಂದು ಈ ಸಮಿತಿ ನ್ಯಾಯಮೂರ್ತಿಗಳು ಕಾರ್ಯಾರಂಭ ಮಾಡಿದರು. ತದ ನಂತರದ ಬೆಳವಣಿಗೆ ಎಲ್ಲರಿಗೂ ತಿಳಿದೇಯಿದೆ. 2011ರ ಜುಲೈ 6ರಂದು ಸುಪ್ರೀಂ ಕೋರ್ಟ್ ಸಮಿತಿಯ ಯಾರೂ ಮಾಧ್ಯಮದ ಮುಂದೆ ಹೇಳಿಕೆಗಳನ್ನು ನೀಡದಂತೆ ಕಟ್ಟುನಿಟ್ಟಾಗಿ ಆದೇಶಿಸಿದೆ. ಕಂಡು ಬಂದಿರುವ ಸಂಪತ್ತು ಮತ್ತು "ಬಿ" ಕೊಠಡಿ ಬಾಗಿಲು ತೆರೆಯುವ ಕಾರ್ಯಾಚರಣೆಯನ್ನೂ ಕಡ್ಡಾಯವಾಗಿ ಚಿತ್ರೀಕರಿಸಲು ತಿಳಿಸಿದೆ. ನೆಲ ಮಾಳಿಗೆಯ 'ಎ, ಸಿ. ಡಿ. ಇ, ಎಫ್. ಕೊಠಡಿಗಳ ವೀಕ್ಷಣೆ ಕಾರ್ಯ ಅಷ್ಟೆನೂ ಪ್ರಯಾಸವಿಲ್ಲದೇ ಮುಗಿದಿದೆ. 'ಬಿ" ಕೊಠಡಿ ನಿಗೂಢವಾಗಿ ಉಳಿದಿದೆ. ಉಳಿದೆಲ್ಲ ಕೊಠಡಿಗಳಿಗಿಂತ ಈ ಕೊಠಡಿಯನ್ನು ಅತಿ ಹೆಚ್ಚಿನ ಸುಭದ್ರತೆಯಿಂದ ನಿರ್ಮಿಸಲಾಗಿದೆ. ಕೊಠಡಿಯ ಉಕ್ಕಿನ ಬಾಗಿಲುಗಳಿಗೆ ಹಾಕಿರುವ ಬೀಗದ ತಂತ್ರಜ್ಞಾನ ಅತ್ಯಂತ ಸಂಕೀರ್ಣವಾಗಿದೆ. ಇಂದಿನ ಆಧುನಿಕ ದುಬಾರಿ ಬೀಗಗಳಿಗೂ ಇದು ಸವಾಲೊಡ್ಡುತ್ತದೆ. ಭಾರಿ ಭೀತಿ-ಕುತೂಹಲ ಮೂಡಿಸಿರುವ ಈ ಕೊಠಡಿಯಲ್ಲಿ ಇರುವುದಾದರೂ ಏನು? ಈ ಪ್ರಶ್ನೆ ಪದೇ ಪದೇ ಉದ್ಭವಿಸುತ್ತಲೇ ಇದೆ.

ಇಲ್ಲಿ ಉಳಿದ ಕೊಠಡಿಗಳಂತೆ ಧನ-ಕನಕ, ವಜ್ರ-ವೈಢೂರ್ಯ-ಮುತ್ತು-ರತ್ನ-ಪಚ್ಚೆ-ಹವಳಗಳು ಇರಬಹುದು. ಇವೆಲ್ಲಕ್ಕಿಂತ ಅತಿ ಮುಖ್ಯ ದಾಖಲಾತಿಗಳು ಅಲ್ಲಿ ಇವೆ. ಪ್ರಾಚೀನ ಕಾಲದ ತಾಳೆ ಗರಿಗಳಿವೆ. ಹಿಂದಿನ ರಾಜ-ಮಹಾರಾಜರ ಆದೇಶಗಳಿವೆ. 'ಎತ್ತರ ಯೋಗಂ" ಸಮಿತಿ ಕಾಲ ಘಟ್ಟದ ದಾಖಲಾತಿಗಳೂ ದೊರೆಯಬಹುದು. ಟ್ರಾವೆಂಕೂರು ರಾಜ ಮನೆತನ ಮತ್ತು ಇವರಿಗೂ ಹಿಂದಿನ ರಾಜ ಮನೆತನಗಳ ಸವಿವರಗಳು ಲಭ್ಯವಾಗಬಹುದು. ಇವೆಲ್ಲದರಿಂದ ಅತ್ಯಮೂಲ್ಯ-ಅಷ್ಟೆ ಕುತೂಹಲಕಾರಿ ಸಂಗತಿಗಳು ತಿಳಿಯಬಹುದು. ಯಾವುದೇ ತೊಡಕು ಉಂಟಾಗದಿದ್ದರೆ ಈ ಎಲ್ಲ ವಿಚಾರ ಜುಲೈ 8ರ ರಾತ್ರಿಯೊಳಗೆ ತಿಳಿಯುವ ಸಾಧ್ಯತೆ ಇದೆ. ಇಷ್ಟಕ್ಕೂ ಈ ಎಲ್ಲ ಸಂಪತ್ತನ್ನು ಇಲ್ಲಿರಿಸಲು ಇರುವ ಮುಖ್ಯ ಕಾರಣಗಳಲ್ಲಿ ಒಂದು; ಇವೆಲ್ಲ ಕೊಠಡಿಗಳು ನೀರು-ಬೆಂಕಿ ಮತ್ತು ಸ್ಫೋಟಕಗಳ ನಿರೋಧಕ![ವಿಡಿಯೋ 1] [ವಿಡಿಯೋ 2]

English summary
What is there in chamber B of Sri Anantha Padmanabha temple? Why so much hype about the vault B? Why authorities are hesitating to open it? What is there in it? Find out here to know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X