ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿ ಬೇಕಿದ್ದರೆ ಗಾಢವಾಗಿ ಪ್ರೀತಿಸುವುದ ಕಲಿಯಿರಿ

By * ಪ್ರಿಯಾ ಎಂ. ಕಲ್ಲಬ್ಬೆ, ಕುಮಟಾ, (ಉ.ಕ)
|
Google Oneindia Kannada News

Priya Kallabbe, Kumata, UK
“Nothing can bring you peace but yourself" ನಿನಗೆ ಶಾಂತಿ ಬೇಕಿದ್ದರೆ ನೀನೇ ತಂದುಕೊಳ್ಳಬೇಕು. ಬೇರಾವುದೂ ಅದನ್ನು ತಂದು ಕೊಡಲಾರದು - ಹೆಲೆನ್ ಕೆಲರ್.

ಮೂಕಿ, ಕಿವುಡಿ ಮತ್ತು ಕುರುಡಿ ಆಗಿದ್ದ ಹೆಲೆನ್ ಕೆಲರ್ ಹೇಳಿದ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಬದುಕಿನಲ್ಲಿ ಸಾಧನೆ ಮಾಡುವುದು ಕೇವಲ ಹೊರಗಿನ ಖ್ಯಾತಿಗಷ್ಟೇ ಅಲ್ಲ. ಅದು ಮನಸ್ಸಿನ ಶಾಂತಿಯ ಸಾಧನೆಯೂ ಹೌದು. ಮನಸ್ಸಿಗೊಂದು ನಿರಂತರತೆಯಿದೆ. ಅದನ್ನು ಸ್ವಲ್ಪ ಹೊತ್ತು ಹಿಡಿದು ಯಾವ ಪಾತ್ರೆಯಲ್ಲಿಟ್ಟು ತಂಪಾಗಿಸಲು ಸಾಧ್ಯವಿಲ್ಲ. ಮನಸ್ಸಿನ ವಿಶ್ರಾಂತಿಗೆ ಅಥವಾ ಶಾಂತಿಗೆ ತುಂಬಾ ಸಾಧನೆ ಬೇಕು. ಧ್ಯಾನ, ಯೋಗ ಮುಂತಾದವು ಅದಕ್ಕೆ ಸಾಧನಗಳು. ಆದರೆ ಒಂದು ವಿಷಯ ನೆನಪಲ್ಲಿಡಬೇಕು. ಯಾವುದೇ ಹೊತ್ತಿನಲ್ಲಿ ಮನಸ್ಸಿಗೆ ಶಾಂತಿ ತಂದುಕೊಳ್ಳಬೇಕೆಂದರೆ ಅದಕ್ಕೆ ನಾವೇ ಕಾರಣ. ಮತ್ತು ನಾವೇ ಅದನ್ನ ತಂದುಕೊಳ್ಳಬೇಕು.

ಪ್ರೀತಿ ಒಂದು ನಿರಂತರವಾದ ಮತ್ತು ಅಗಾಧ ಶಾಂತಿಯನ್ನು ತುಂಬುವ ಭಾವ. ಪ್ರೀತಿಸುವುದು ಮನಸ್ಸಿನ ಅತ್ಯಂತ ನಿಷ್ಟವೂ ಸುಂದರವೂ ಸಹಜವೂ ಆದ ಭಾಗ. ಮನಸ್ಸು ಪ್ರೀತಿಸುತ್ತದೆ. ಮತ್ತು ಪ್ರೀತಿಸಲ್ಪಡುವುದನ್ನೇ ಇಷ್ಟಪಡುತ್ತದೆ. ಈ ಪ್ರೀತಿ ಎನ್ನುವುದೇ ಬಹುತೇಕ ಕಡೆಗಳಲ್ಲಿ ಮನಸ್ಸಿಗೆ ಅಗಾಧ ನೆಮ್ಮದಿಯನ್ನು ಶಾಂತಿಯನ್ನು ಕೊಡುತ್ತದೆ. ಯಾವುದೇ ಮನಸ್ಸಿಗೆ ಪ್ರೀತಿ ಕೊಡುವ ನೆಮ್ಮದಿ ಮತ್ಯಾವುದೂ ಕೊಡಲಾರದು. ಆದರೆ ಪ್ರೀತಿಯ ಈ ರೂಪ ಅದು ಸಾಪೇಕ್ಷ. ಪ್ರೀತಿ ಬಯಸಲ್ಪಡುವುದು ಮತ್ತು ಕೊಡಲ್ಪಡುವುದು ಎರಡೂ ಇನ್ನೊಂದರ ಮೇಲೆ ಆಧಾರವಾಗಿರುವಂತದ್ದು. ಅದಕ್ಕೊಂದು ಮೂರ್ತತೆ ಬೇಕು. ಒಂದುವೇಳೆ ಅಂತಹ ಸಾಪೇಕ್ಷತೆಗೆ ಆಯಾಮಗಳು ದೊರೆಯದೇ ಹೋದರೆ ಪ್ರೀತಿ ಅಗಾಧ ನೋವನ್ನೂ ಮತ್ತು ಅದರ ಶೂನ್ಯತೆಯನ್ನು ಕೊಡುತ್ತದೆ. ಇದನ್ನು ಸಹಿಸುವುದು ಮನಸ್ಸಿನ ಮತ್ತೊಂದಿಷ್ಟು ಶಕ್ತಿಯು ವ್ಯಯ.

ಮೂಲದಲ್ಲಿ ಪ್ರೀತಿಸುವುದಾಗಲೀ ಶಾಂತಿಯ ಹೊಂದುವುದಾಗಲೀ ಬದುಕಿನ ವಾಸ್ತವಕ್ಕೆ ಶಕ್ತಿ ತುಂಬುವ ಕೇಂದ್ರಗಳಿದ್ದಂತೆ. ಅವೆರಡೂ ಸಹ ಮನಸ್ಸಿಗೆ ಮಹಾಶಕ್ತಿಯ ನೀಡಬಲ್ಲ ತಂತಿಗಳಂತೆ. ನಾನಿಲ್ಲಿ ಪ್ರೀತಿಯನ್ನು ವಿಭಾಗಿಸುತ್ತಿಲ್ಲ. ಪ್ರೀತಿಯ ರೂಪ ಯಾವುದೇ ಇರಲಿ ಅದು ಕೊಡುವ ಶಕ್ತಿ ಅನನ್ಯ, ಅಮೂಲ್ಯ. ಪ್ರೀತಿಗಾಗಿ ತಾನೇ ನಾವೆಲ್ಲ ಬದುಕಿನ ಎಲ್ಲ ಘೋರತೆಗಳನ್ನ ನಗುನಗುತ್ತ ಸಹಿಸುವುದು! ಆದರೆ ಈ ಪ್ರೀತಿಯೇ ಒಮ್ಮೊಮ್ಮೆ ಕೈಕೊಟ್ಟು ಬಿಡುತ್ತದೆ. ಆಗ ಮನಸ್ಸು ಸತ್ತುಹೋಗುವ ಹಂತದಲ್ಲಿರುತ್ತದೆ. ಅದನ್ನು ಮತ್ಯಾರಾದರೂ ಬದುಕಿಸಲಾರರು. ಆಗ ನಮಗೆ ಸಹಾಯಕ್ಕೆ ಬರುವುದು ನಾವು ಮಾತ್ರ.

ಅಲ್ಲಿಂದ ಹೊರಬಂದು ನಾವು ನೆಮ್ಮದಿಯನ್ನು ಕಂಡುಕೊಳ್ಳಲು ನಾವೇ ಮನಸ್ಸು ಮಾಡಬೇಕು. ಪ್ರೀತಿ ಕೊಡೋ ನೋವುಗಳಿಂದ ಹೊರಬಂದು ನೆಮ್ಮದಿಯಾಗಿ ಶಾಂತಿಯ ಮನಸ್ಸನ್ನ ಕಂಡುಕೊಳ್ಳಲು ಮತ್ತದೇ ಪ್ರೀತಿಯನ್ನು ಮನಸ್ಸಿನೊಳ್ಗೆ ತುಂಬಿಕೊಳ್ಳಲು ಮನಸ್ಸು ವಿಶಾಲವಾಗಿಸಬೇಕು. ಪ್ರೇಮ ನಿರಪೇಕ್ಷವಾಗಿಸಬೇಕು. ಸಹನೆ ಹೃದಯದ ಕವಾಟಗಳಲ್ಲಿ ತುಂಬಿಕೊಳ್ಳಬೇಕು. ಮತ್ತೆ ಕಾರ್ಯಶೀಲತೆಯಲ್ಲಿ ಉಳಿದೆಲ್ಲ ಬದುಕಿನ ಪ್ರೀತಿಯಿದೆ ಎಂಬುದು ಮನಸ್ಸಿಗೆ ಬುದ್ಧಿಗೆ ಅರಿವಾಗಿಸಬೇಕು. ಸೋಲುಗಳ ಗೆಲುವಾಗಿಸಿಕೊಳ್ಳುವ ಪರಿಯಿದು.

ಹೆಲೆನ್ ಕೆಲರ್ ಹೇಳಿದ್ದೂ ಇದನ್ನೇ. ಬದುಕಿನ ಈ ಪ್ರೀತಿಯನ್ನು ಮನಸ್ಸಿನ ನೆಮ್ಮದಿಯನ್ನು ನಿನ್ನೊಳಗೆ ಹುಡುಕಿಕೊಳ್ಳಬೇಕಾದ ಬಗೆಯಿದು. ಪ್ರೀತಿಯಾಗಲೀ ಶಾಂತಿಯಾಗಲೀ ಇನ್ನೊಬ್ಬರ ಮೇಲಿಲ್ಲ. ಅದು ನಿರಪೇಕ್ಷ ಪ್ರೀತಿಯನ್ನು ನಿನ್ನೊಳಗೆ ತುಂಬಿಕೊಳ್ಳುವುದರಲ್ಲಿದೆ. ಇಂತಹ ಪ್ರೀತಿ ಸಾಧ್ಯವಾದರೆ ಅದು ನಮ್ಮನ್ನು ನಾವೇ ಪ್ರೀತಿಸುವ ಪರಿ. ನಾನು ಹೇಳುತ್ತಿದ್ದದ್ದು ಮೇಲ್ನೋಟಕ್ಕೆ ಸ್ವಾರ್ಥ ಎನಿಸಬಹುದಾದರೂ ಮೂಲದಲ್ಲಿ ಮನುಷ್ಯನ ಸತ್ವವೆಂದರೆ ಇದೇ. ನಾವು ನಮ್ಮನ್ನು ಪ್ರೀತಿಸುವಷ್ಟು ಇನ್ಯಾರನ್ನೂ ಪ್ರೀತಿಸಿರುವುದಿಲ್ಲ. ಪ್ರೀತಿಸಲು ಸಾಧ್ಯವೂ ಇಲ್ಲ. ಮತ್ತೆ ಪ್ರೀತಿಸಲೂ ಬಾರದು. ಇದು ಬದುಕಿನ ವಾಸ್ತವಸತ್ಯ ಕೂಡ ಹೌದು. ಯಾಕೆಂದರೆ ನಾವೇನೆಂದು ಗೊತ್ತಿರುವುದು ನಮಗೆ ಮಾತ್ರ.

ನಮ್ಮದೇ ಮನಸ್ಸಿನ ಕೇಂದ್ರದಲ್ಲಿ ಇರುವ ಅಗಾಧ ಶಕ್ತಿಗಳಲ್ಲಿ ಪ್ರೀತಿ ಕೂಡ ಒಂದು. ಅದನ್ನು ನಿರಂತರ ನಿರಪೇಕ್ಷಿತವಾಗಿ ಹರಿಸಲ್ಪಡುವುದು ಮನಸ್ಸಿಗೆ ಶಾಂತಿಯ ತುಂಬಿಕೊಳ್ಳುವ ಮಾರ್ಗ. ಈ ಜಗತ್ತಿನಲ್ಲಿ ಬಹುಶಃ ಉಳಿದೆಲ್ಲ ಹಸಿವಿನಷ್ಟೇ ಪ್ರೀತಿಯ ಹಸಿವೂ ಕಾಡುತ್ತಿದೆ. ಮನುಷ್ಯ ಜೀವಗಳು ಪ್ರೀತಿಯ ಹನಿತೊಟ್ಟು ನೀರಿಗಾಗಿ ಕಾಯ್ದಿವೆ. ಆದರೆ ಕಾದ ಆ ಜೀವಗಳಿಂದ ಮರುಪ್ರೀತಿಯನ್ನು ಬಯಸಿ ಪ್ರೀತಿಸಲಾರಂಭಿಸಿದರೆ ಮತ್ತದೇ ನೋವಿನ ಕೂಪಕ್ಕೆ ಬೀಳುತ್ತೇವೆ. ಅಂಗವೈಕಲ್ಯಗಳನ್ನು ಮೀರಿ ನಿಲ್ಲುವ ಶಕ್ತಿ ತುಂಬಬಲ್ಲದಾದ ಪ್ರೀತಿಗೆ ಅದೆಷ್ಟು ಶಕ್ತಿ ಇರಬೇಡ. ಇದು ಜೀವನ ಪ್ರೀತಿಯ ದ್ಯೋತಕ.

ಮನುಷ್ಯ ಬದುಕಿನ ಪ್ರೀತಿಯ ರೂಪವಾಗಬೇಕೇ ವಿನಃ ಕುರುಡು ಪ್ರೀತಿಯ ಹಮ್ಮುಗಳಿಂದಲ್ಲ. ಅಂತಹ ಜೀವನ ಪ್ರೀತಿಯ ಕಂಡುಕೊಂಡ ಎಲ್ಲ ಎಲ್ಲ ಮಹನೀಯರ ಮತ್ತೊಮ್ಮೆ ನೆನಪಿಸಿಕೊಳ್ಳುವುದು ನಮಗೊಂದು ದಾರಿದೀಪವಾದೀತು. ಬದುಕಿನ ಪಯಣದ ತುಂಬ ಅಂತವರು ಸಿಕ್ಕೇ ಸಿಗುತ್ತಾರೆ. ನಮ್ಮ ಸುತ್ತಮುತ್ತಲೇ ಇರುವ ಅಂತವರ ನೋಡಿ ನಾವಷ್ಟು ಕಲಿಯೋಣ. ಬದುಕನ್ನ ಗಾಢವಾಗಿ ಪ್ರೀತಿಸುತ್ತ ಶಾಂತಿಯನ್ನು ಕಂಡುಕೊಳ್ಳೋಣ. ನಮ್ಮೊಳಗೇ ಇರುವ ನಮ್ಮ ನೆಮ್ಮದಿಯ ಜೊತೆ ಒಂದಿಷ್ಟು ಪ್ರೀತಿ ಹಂಚೋಣ. [ಪ್ರಿಯಾ ಅವರ ಜೀವನ್ಮುಖಿ ಸಂಕಲನ ವಿಮರ್ಶೆ]

English summary
Nothing can bring you peace but yourself. What a wonderful quote by Hellen Keller. Peace lies in yourself. One has to take the path of love to find mental peace. An essay by Priya M. Kallabbe, Kumata, Uttara Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X