ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಣತಿಯ ಹಾದಿಯಲ್ಲಿ "ಪರಿಣಿತಿ ಕಲಾ ಕೇಂದ್ರ"

By * ಚಿನ್ಮಯ.ಎಂ.ರಾವ್,ಹೊನಗೋಡು
|
Google Oneindia Kannada News

Patinithi Kala Kendra Sagara
ಭಾರತ ಹಲವು ಕಲೆಗಳ ತವರೂರು."ವೈವಿಧ್ಯತೆ"ಎಂಬ ಪದಕ್ಕೆ ಸಾರ್ಥಕತೆ ಬಂದಿದ್ದೇ ಭಾರತದಿಂದ ಎಂದರೆ ಇಂದು ಇಡೀ ವಿಶ್ವ ಮರುಮಾತನಾಡದೆ ಅಹುದೆಂದು ಒಪ್ಪಿಕೊಳ್ಳುತ್ತಿದೆ.ಭಾರತದ ಸಾಂಸ್ಕೃತಿಕ ಸಾರವನ್ನು ಬಿಗಿದಪ್ಪಿಕೊಳ್ಳುತ್ತಿದೆ. ಹತ್ತು ಹಲವು ಭಾಷೆ, ಜಾತಿ-ಜನಾಂಗ,ಬಗೆಬಗೆಯ ಭೌಗೋಳಿಕ ಪ್ರದೇಶಗಳು ಅಲ್ಲೆಲ್ಲಾ ಅವರವರ ಅಭಿರುಚಿಗೆ ತಕ್ಕಂತೆ ಪ್ರಾಚೀನಕಾಲದಿಂದಲೂ ಪರಂಪರಾಗತವಾಗಿ ಮುನ್ನಡೆದುಕೊಂಡು ಬರುತ್ತಿರುವ ಬಹುಬಗೆಯ ಕಲೋಪಾಸನೆ.ದಿಟವಾಗಿಯೂ ನಾವು ಸಾಂಸ್ಕೃತಿಕವಾಗಿ ಶ್ರೀಮಂತರು ಎಂಬುದಕ್ಕೆ ಇದಕ್ಕಿಂತ ಇನ್ನೇನು ಬೇಕು ನಿದರ್ಶನ? ವಿವಿಧತೆಯಲ್ಲೂ ಏಕತೆಗೆ ನಾವೇ ಸ್ಪಷ್ಟ ನಿದರ್ಶನ. ಅಂತೆಯೇ ಪೌರಾಣಿಕ ಸನ್ನಿವೇಶಗಳನ್ನು ಪ್ರದರ್ಶನ ಮಾಡಲು ನಮಗೆ ನೂರಾರು ಕಲಾಪ್ರಕಾರಗಳು ಬಳುವಳಿಯಾಗಿ ಬಂದಿವೆ. ಅಂತಹಾ ಕಲಾಮಾಧ್ಯಮದಲ್ಲಿ "ಭರತನಾಟ್ಯ"ವೂ ಒಂದು.

ಕೃತಯುಗದ ನಂತರ ವೈವಸ್ವತ ಮನ್ವಂತರದ ತ್ರೇತಾಯುಗ ಆರಂಭವಾಗುವ ಮಧ್ಯಕಾಲದಲ್ಲಿ ಅತಿಯಾದ ಕಾಮ, ಕ್ರೋಧಲೋಭ, ಮೋಹ, ಮದ, ಮಾತ್ಸರ್ಯಗಳಿಂದ ಸಮಾಜದಲ್ಲಿ ಅಶಾಂತಿಯುಂಟಾಗಿ (ಈಗಲೂ ಅಂತಹುದೇ ಸನ್ನಿವೇಶ ನಮ್ಮ ಸಮಾಜದಲ್ಲಿ ಉಂಟಾಗಿದೆ ಎಂಬುದು ವಿಷಾದಕರವಾದರೂ ನಗ್ನಸತ್ಯ) ಇಂದ್ರನನ್ನು ಮುಂದಾಗಿಸಿಕೊಂಡು ದೇವತೆಗಳೆಲ್ಲಾ ಬ್ರಹ್ಮನಲ್ಲಿ ಬಂದು ಜನರಲ್ಲಿ ಶಾಂತಿ ನೆಲೆಸಲು ರಂಜನೀಯವೆನಿಸುವಂತಹ ಐದನೆಯ ವೇದವೊಂದನ್ನು ರಚಿಸಿಕೊಡಲು ಪ್ರಾರ್ಥಿಸಿಕೊಂಡಾಗ ಬ್ರಹ್ಮನು ಆಗಬಹುದೆಂದು ಒಪ್ಪಿ ನೀಡಿದ ವೇದವೇ "ನಾಟ್ಯವೇದ".

ಆನಂತರದಲ್ಲಿ ಬ್ರಹ್ಮನ ಮಾರ್ಗದರ್ಶನದಂತೆ ಭರತಮುನಿಯು ಮುಂದೆ ಇಂದ್ರನ ಉತ್ಸವದಲ್ಲೇ ಪ್ರಥಮಪ್ರದರ್ಶನವನ್ನು ಪ್ರಯೋಗ ಮಾಡಿಸಿದನು.ಸುರಾಸುರರ ಕದನದಲ್ಲಿ ಸುರರು ಜಯಶಾಲಿಗಳಾಗುವ "ರೂಪಕ"ವನ್ನು ಪ್ರದರ್ಶಿಸಿ ಅಸುರರಿಂದ ವಿರೋಧ ಉಂಟಾದರೂ ಕೊನೆಯಲ್ಲಿ ಸುರರು ಅಸುರರಿಗೆ ನೃತ್ಯರೂಪಕದ ಬಹುಬಗೆಯ ಭಾವಗಳು,ನವರಸಗಳು,ಪಾತ್ರಗಳ ನೈಜತೆಯ ಬಗ್ಗೆ ತಿಳಿಹೇಳಿ ಸಮಾಧಾನಪಡಿಸಿದ್ದರಿಂದ ವಿಘ್ನಗಳ ನಡುವೆಯೂ "ಭರತನಾಟ್ಯ"ದ ಮೊದಲ ಪ್ರದರ್ಶನ ಯಶಸ್ವಿಯಾಯಿತು.

ಪರಿಣಿತಿ ಕಲಾಕೇಂದ್ರ: ಈ ಸಂಬಂಧವಾಗಿ ಇಂದೂ ಕೂಡ ಏಕವ್ಯಕ್ತಿ ನಾಟ್ಯಕ್ಕಿಂತ ಬಹುನರ್ತಕರನ್ನೊಳಗೊಂಡ ನೃತ್ಯರೂಪಕಗಳ ಮೂಲಕ ಪೌರಾಣಿಕ ಸನ್ನಿವೇಶಗಳ ಪ್ರದರ್ಶನ ಜನರಿಗೆ ಹೆಚ್ಚು ಪ್ರಿಯವೆನಿಸಿ ಜನಪ್ರಿಯವಾಗಿದೆ.ಒಂದಷ್ಟು ಸಮಯ ಲೌಕಿಕದಿಂದ ಅಲೌಕಿಕದೆಡೆಗೆ ಪಯಣಿಸಿ ಆ ಮೂಲಕ ಆನಂದ,ಮನಶ್ಶಾಂತಿಯನ್ನು ಹೊಂದಲು ಇದೇ ಸುಲಭೋಚಿತ ಮಾರ್ಗವೆನಿಸಿದೆ.ಅಂತಹಾ ಒಂದು ಸದವಕಾಶವನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ನಾಟ್ಯಾಚಾರ್ಯ ವಿದ್ವಾನ್.ಎಮ್.ಗೋಪಾಲ್ "ಪರಿಣಿತಿ ಕಲಾಕೇಂದ್ರ"ಎಂಬ ತಮ್ಮದೇ ಸಂಸ್ಥೆಯಡಿಯಲ್ಲಿ ಸಾಗರದ ಕಲಾರಸಿಕರಿಗೆ ವರ್ಷೋತ್ಸವದಲ್ಲಿ ಸಮರ್ಪಣೆ ಮಾಡಿದರು.ಇವರು ವಿದ್ವಾನ್.ಕೆ.ಕುಮಾರ್ ಮೈಸೂರು ಹಾಗು ಪ್ರೊಫೆಸರ್ ಎಂ.ಆರ್.ಕೃಷ್ಣಮೂರ್ತಿ ಇವರ ಶಿಷ್ಯ.

"ಮಥುರಾನಾಥ ಕೃಷ್ಣ"ಎಂಬ ಹೊಸ ನೃತ್ಯರೂಪಕಕ್ಕೆ "ಶ್ರೀಕೃಷ್ಣ"ನೇ ತಮಗೆ ಸ್ಪೂರ್ತಿಯೆನ್ನುವ ಗೋಪಾಲ್ ತಮ್ಮ ಹಿರಿಯ ಶಿಷ್ಯರೊಡಗೂಡಿ ಚರ್ಚಿಸಿ ಶ್ರೀಕೃಷ್ಣನನ್ನು ಕೇಂದ್ರೀಕರಿಸಿಕೊಂಡು ರಚಿಸಿದ ಮೊದಲ ರೂಪಕ ಇದು. ಗೋಕುಲದ ಪ್ರಜೆಗಳು ಕೃಷ್ಣನಿಗಾಗಿ ಕಾಯುವುದು, ಕಂಸನ ದುಸ್ವಪ್ನ, ಮಥುರಾಕ್ಕೆ ಬಂದ ಕೃಷ್ಣನಿಗೆ ವೈಭವದ ಸ್ವಾಗತ,ಗೋಪಿಕೆಯರ ನಡುವೆ ಕೃಷ್ಣನಿರುವಾಗ ಅಲ್ಲಿಯ ಸಂತಸ, ಕೃಷ್ಣನಿಂದ ಕಂಸನ ಸಂಹಾರ ಹಾಗು ಅಂತಿಮವಾಗಿ ಕೃಷ್ಣನೊಡಗೂಡಿ ಪ್ರಜೆಗಳ ಸಂಭ್ರಮ..ಇಷ್ಟು ಸನ್ನಿವೇಶಗಳನ್ನು ನಾಟ್ಯಶಾಸ್ತ್ರದ ಚೌಕಟ್ಟಿನಲ್ಲೇ ನಿರೂಪಿಸಿ ರಂಜಿಸುವುದು ಅಸಾಮಾನ್ಯ ಸಂಗತಿ.ಈ ವಿಚಾರದಲ್ಲಿ ಗೋಪಾಲ್ ಗೆದ್ದಿದಾರೆ ಎನ್ನುವುದಕ್ಕಿಂತ ಗೆಲುವಿನ ಹಾದಿಯಲ್ಲಿದ್ದಾರೆ.

ಮಾತುಗಳಿಲ್ಲದೆ ಕೇವಲ ಧಾತುವಿನಿಂದ ಸಾಗುವ ರೂಪಕದಲ್ಲಿ ಅಂತಿಮ ಹಂತದವರೆಗೂ ಆಂಗಿಕ ಅಭಿನಯವನ್ನು ಸಮರ್ಥವಾಗಿ ಅಭಿನಯಿಸುವುದೇ ಒಂದು ದೊಡ್ಡ ಸವಾಲು.ಹಿನ್ನೆಲೆಸಂಗೀತವೂ ಹಿತವಾಗಿರಬೇಕು ಕೇಳಲು. ಶ್ರೀಕೃಷ್ಣನಾಗಿ ಸುದೀಪ್.ಕೆ, ಬಲರಾಮನಾಗಿ ನವೀನ್ ಹೆಗಡೆ, ರಾಜನರ್ತಕಿಯಾಗಿ ಸಹನಾ ಎಲ್.ಶೆಟ್ಟಿ,ಕಂಸನ ಪಾತ್ರದಲ್ಲಿ ಶ್ವೇತ ಹೆಚ್.ಎನ್, ವಿಭಿನ್ನ ಪಾತ್ರದಲ್ಲಿ ಪವನ.ಡಿ ಹಾಗು ಮತ್ತಿತರ ವಿದ್ಯಾರ್ಥಿಗಳು ಶ್ರದ್ಧೆಯಿಂದ ನರ್ತಿಸಿ ಕಲಾರಸಿಕರ ಮನತಣಿಸಿದರು.

ಹಿನ್ನೆಲೆ ಸಂಗೀತದಲ್ಲಿ ಶ್ರೀಮತಿ ಅಂಜನಾ,ಮಾಲಾಶ್ರೀ,ಮೇಘ (ಹಾಡುಗಾರಿಕೆ).ರಾಘವೇಂದ್ರ ರಂಗದೋಳ್ (ರಿದಂ ಪ್ಯಾಡ್),ಎಂ.ಗೋಪಾಲ್(ನಟುವಂಗ)ಹಾಗು ನವೀನ್ ಶರ್ಮ(ಕೊಳಲು)ಅಚ್ಚುಕಟ್ಟಾಗಿ ಸಹಕರಿಸಿದರು. ಚಿನ್ಮಯ.ಎಮ್.ರಾವ್ ಹಾಗು ವೆಂಕಟೇಶ್ ಅವರ ಸಾಹಿತ್ಯಕ್ಕೆ ಅರುಣ್ ಘಾಟೆ ರಾಗಸಂಯೋಜನೆಗೆ ಸಹಕಾರ ನೀಡಿದ್ದಾರೆ. ಸಾಗರದ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಸುಂದರವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಧ್ವನಿವರ್ಧಕದ ತಂತ್ರಜ್ನಾನವನ್ನು ಇನ್ನೂ ಯೋಜಿಸಿ ಬಳಸಿಕೊಂಡಿದ್ದರೆ ಕಲಾವಿದರ ಶ್ರಮಕ್ಕೆ ಇನ್ನೂ ಹೆಚ್ಚು ಬೆಲೆಬರುತ್ತಿತ್ತು.

ಕೇವಲ ಮಹಾನಗರಿಗಳಲ್ಲಿ ಹಾಗು ಜಿಲ್ಲಾಕೇಂದ್ರಗಳಲ್ಲಿ ಮಾತ್ರ ನಡೆಯುತ್ತಿದ್ದ ಇಂತಹ ಭರತನಾಟ್ಯ ರೂಪಕವನ್ನು ಸಾಗರದಂತಹ ಸಣ್ಣ ಊರಿನಲ್ಲಿ ಹತ್ತಾರು ವರ್ಷದಿಂದ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ವಿದ್ವತ್ ಮಟ್ಟದಲ್ಲಿ ತಯಾರು ಮಾಡಿ ಪ್ರದರ್ಶನ ಏರ್ಪಾಡು ಮಾಡಿರುವುದು ಗೋಪಾಲ್ ಅವರ (98449 26369)ಕಷ್ಟಸಾಧ್ಯ ಸಾಧನೆ ಎಂದೆನಿಸುತ್ತದೆ.

ಗುರುಶಿಷ್ಯರ ನಡುವೆ ಅನಗತ್ಯ ಅಂತರವಿಲ್ಲದೆ ಅತ್ಯುತ್ತಮ ಬಾಂಧವ್ಯವಿದ್ದಾಗ ಮಾತ್ರ ಇಂತಹಾ ರೂಪಕದ ರಚನೆ ಸಾಧ್ಯ.ಪ್ರಾಯಶಹ ಗೋಪಾಲ್ ತಮ್ಮ ಶಿಷ್ಯರಿಗೆ ಸಂಸ್ಕಾರದ ಭದ್ರಬುನಾದಿಯನ್ನು ಹಾಕಿ ತಮ್ಮ ಮನೆಯ ಮಕ್ಕಳಂತೆ ಅವರನ್ನು ಬೆಳೆಸಿ ನಿರಂತರವಾಗಿ ತಮ್ಮೆಲ್ಲಾ ವಿದ್ಯೆಯನ್ನು ಧಾರೆಯೆರೆಯುತ್ತಿರುವುದೇ "ಪರಿಣಿತಿ ಕಲಾಕೇಂದ್ರ" ಇಷ್ಟು ಬೆಳೆಯಲು ಮೂಲಕಾರಣವೆನಿಸುತ್ತದೆ.

ಅಹಂಕಾರವಿಲ್ಲದೆ ಮುಕ್ತಮನಸ್ಸಿನಿಂದ ರೂಪಕಕ್ಕೆ ಸಲಹೆಗಳನ್ನು ಸ್ವೀಕರಿಸುತ್ತಿರುವ ಗೋಪಾಲ್ ಹಾಗು ಅವರ ಶಿಷ್ಯವೃಂದ ಇದನ್ನೇ ಇನ್ನೂ ಪರಿಷ್ಕರಿಸುತ್ತಾ ಹಲವೆಡೆ ಪ್ರದರ್ಶನ ನೀಡುವ ಉತ್ಸಾಹದಲ್ಲಿದ್ದಾರೆ."ಪರಿಣಿತಿ ಕಲಾಕೇಂದ್ರ" ಇನ್ನೂ ಹೆಚ್ಚು ಹೆಚ್ಚು ಪರಿಣತಿ ಪಡೆಯುತ್ತಾ ಮುಂದಾಗಲಿ ಎಂಬುದು ಕಲಾಭಿಮಾನಿಗಳ ಆಶಯ....ಸದಾಶಯ.

English summary
Parinithi Kala Kendra Sagara is the best institution for children to learn culture, folk, kathak and contemporary dances. Patinithi Kala Kendra founded by Bharatanatyam Vidwan m Gopal. Kendra recently celebrated annual day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X