ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವನದ ಪ್ರತಿ ಘಟದಲ್ಲೂ ಕಾಡುವ ಕಾಯ್ಕಿಣಿ ಕಥೆಗಳು

By * ವಿನಾಯಕ ಪಟಗಾರ, ಬೆಟ್ಕುಳಿ
|
Google Oneindia Kannada News

Jayanth Kaikini
ಜಯಂತ ಕಾಯ್ಕಣಿಯವರೇ, ಎಷ್ಟು ಬೇಗ ಅರ್ಧ ಶತಮಾನಗಳನ್ನು ದಾಟಿ 57ಕ್ಕೆ (ಜನನ:24/1/1955) ಕಾಲಿಟ್ಟಿದ್ದೀರಿ.. ಆದರೂ, ಬೆಳ್ಳಂಜಿ ಮೀನಿನಷ್ಟು ಬೆಳ್ಳಗಾಗಿ, ತೆಳ್ಳಗಾಗಿ, ಆಕರ್ಷಕವಾಗಿ ಕಾಣುವ ಗುಟ್ಟಾದರೂ ಏನು?

ಸರ್, ನಿಮ್ಮ ಕತೆ ಕವನಗಳು ನನಗೆ ದಿನಾಲೂ ನಿಮ್ಮ ನೆನಪನ್ನು ತರಿಸುತ್ತಿರುತ್ತವೆ. ಹಾಲಕ್ಕಿ ಅಜ್ಜಿ ಬಸಳೆ ಕಟ್ಟು ಮಾರುತ್ತಿರುವದನ್ನು ಕಂಡಾಗ, ಬಸಳೆ ಮತ್ತು ಶೆಟ್ಲಿ (ಶಿಗಡಿ) ಬೆರಸಿ ಮಾಡಿದ ಸಾರಿನಲ್ಲಿ ಊಟ ಮಾಡುವಾಗ, ಬಸಳೆ ಮತ್ತು ನಾನು ಕವಿತೆ ತಲೆಯಲ್ಲಿ ಗುಯಂ ಗೂಡುತ್ತದೆ. ಎರಡು ತತ್ತು ಹೆಚ್ಚಿಗೆ ಊಟ ಹೋಗುತ್ತದೆ. ಗೋಕರ್ಣದ ಬೀದಿಗಳಲ್ಲಿ ಓಡಾಡುವಾಗ ನಿಮ್ಮ ಕೋಟಿತೀರ್ಥದ ಕವನ ನೆನಪಿಗೆ ಬರುತ್ತದೆ. ಕುಮಟಾಕ್ಕೆ ಹೋಗಲು ದೀವಿಗೆ ಬ್ರಿಜ್ ದಾಟುವಾಗ ಅಘನಾಶಿನಿ ನದಿಯ ತೆಳುವಾದ ಅಲೆಗಳಂತೆ ಇದ್ದಾಗ ಇದ್ದಾಂಗ (1976) ಕತೆ ಮನಸ್ಸಿನಲ್ಲಿ ಅಲೆಗಳಂತೆ ಬಂದು ತಟ್ಟಿ ಹೋಗುತ್ತದೆ. ಆ ಕತೆಯಲ್ಲಿ ಬರುವ ದೀವಿಗೆ ಬ್ರಿಜ್ ಕಟ್ಟುವಾಗ ನಡೆಯುವ ಘಟನೆಗಳು, ಪಬ್ಬೂ, ದಂಡು, ಕಮ್ತಿ, ಮೆಸ್ತ್ರಿ, ಗಂಗೆ, ಮಾಂಸಿ, ಮೊದಲಾದ ಪಾತ್ರಧಾರಿಗಳು, ಅದರಲ್ಲಿ ಬರುವ ಹಾದರದ ಘಟನೆಗಳು ನೆನಪಾದಾಗ, ಒಂದು ಬ್ರಿಜ್ಜಿನ ನಿರ್ಮಾಣದ ಹಿಂದೆ ಎಷ್ಟೆಲ್ಲಾ ಅವಘಡಗಳು ನಡೆದಿರುತ್ತದಲ್ಲಾ ಎಂದು ಕೌತುಕವಾಗುತ್ತದೆ.

ದೀವಿಗೆಯಲ್ಲಿ ಯಾರಾದರೂ ಹಿರಿಯರು ಕಂಡರೆ, ಇವರೇ ಆ ಕತೆಯಲ್ಲಿ ಕಂಡು ಬರುವ ಪಾತ್ರಧಾರಿಗಳಾಗಿರಬಹುದೇ ಎಂದೆನಿಸುತ್ತದೆ. ಸಾಗರದ ಅಲೆಗಳಲ್ಲಿ ಆಟವಾಡುವಾಗ ಸಮುದ್ರಕತೆ, ದೂರದ ತೀರದಲ್ಲಿ ಕಂಡು ಬರುವ ಲಾಂಚ್ ನೋಡಿದಾಗ ದೋಣಿ ಕವಿತೆ, ಮೀನು ಪೇಟೆಯಲ್ಲಿ ಓಡಾಡುವಾಗ ನಿಮ್ಮ ಕತೆ ಕವಿತೆಗಳಲ್ಲಿ ಬರುವ ಬಂಗಾರ ಬಣ್ಣದ ಬಂಗಡೆ ಮೀನು, ಬೆಳ್ಳಿಯಂತೆ ಹೊಳೆಯುವ ಬೆಳ್ಳಂಜಿ ಮೀನುಗಳ ನೆನಪಾಗಿ ಅಂತಹ ಮೀನುಗಳು ಇದೇಯೇ ಎಂದು ಹುಡುಕಾಡುತ್ತೇನೆ.

ಸಂಸ್ಥೆಯೊಂದರ ಪ್ರತಿನಿಧಿಯಾಗಿ ಒಂದು ವಾರದ ತರಬೇತಿಗೆಂದು ಬಾಂಬೆಗೆ ಹೋದಾಗಲೂ ನಿಮ್ಮದೇ ಕತೆ ಕವನಗಳ ನೆನಪುಗಳ ಪುಳಕ. ಅಲ್ಲಿಯ ಜನಜಂಗುಳಿಯ ನಡುವೆ ಹಿಂದಿ -ಮರಾಠಿ ಬಾರದೇ ಅನಾಥನಂತೆ ಭಯದಿಂದ ಓಡಾಡುವಾಗಲೂ ಸಹ ನಿಮ್ಮ ಮಿಥೂನ ನಂಬರ್ ಟೂ, ಟಿಕ್ ಟಿಕ್ ಗೆಳೆಯ, ನೋ ಪ್ರೆಸೆಂಟ್ಸ್ ಪ್ಲಿಸ್, ಕೋಮಲ ಗಾಂಧಾರ ಮೊದಲಾದ ಕತೆಗಳು, ಮತ್ತು ಬೊಗಸೆಯಲ್ಲಿ ಮಳೆ ಅಂಕಣದಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕಾಣಸಿಗುತ್ತವೆಯೋ ಎಂದು ಹುಡುಕಾಡಿದ್ದೇನೆ.

ಇನ್ನು ಅರ್ಥವಾಗದ ವಿಷಯವೆಂದರೆ. ಪ್ರೀತಿ - ಪ್ರೇಮದ ವಿಷಯದಲ್ಲಿಯೂ ಸಹ ನೀವು ನೆನಪಾಗಿ ಕಾಡಿದ್ದು. ನಿಮ್ಮ ಹಾಡು 'ಅನಿಸುತ್ತಿದೆ ಯಾಕೋ ಇಂದು ನೀನೇನೇ ನನ್ನವಳೆಂದು' ಹಾಡನು ಗುನುಗಲು ಪ್ರಾರಂಭಿಸಿದ ಮೇಲೆ ನಾನು ಹುಡುಗಿ ನೊಡಲು ಪ್ರಾರಂಭಿಸಿದೆನೋ ಅಥವಾ ಹುಡುಗಿ ನೋಡಿದ ಮೇಲೆ ಈ ಹಾಡನ್ನು ಗುನುಗಲು ಶುರು ಮಾಡಿದೆನೋ ಗೊತ್ತಾಗುತ್ತಿಲ್ಲ. ಆದರೆ ಆ ಹಾಡಿನ ಶಬ್ದಗಳು ನನ್ನ ಮನಸ್ಸನ್ನು ಉಲ್ಲಸಿತಗೊಳಿಸಿದ್ದಂತೂ ಸುಳ್ಳಲ್ಲ. ಮೆಚ್ಚಿದ ಹುಡುಗಿ ಕೈಕೊಟ್ಟು ಇನ್ನೊಬ್ಬನನ್ನು ಮದುವೆಯಾದಾಗಲೂ ಸಹ ನೆನಪಾದದ್ದು 'ಮಳೆ ನಿಂತ ಹೋದ ಮೇಲೆ ಹನಿಯೊಂದು ಮೂಡಿದೆ, ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ' ಹಾಡೆ. ಆಗಾಗ 'ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ' ಹಾಡು ನೆನಪಾಗಿ ಕುಚಿಗುಳಿ ಇಟ್ಟು ಮರೆಯಾಗುತ್ತದೆ. ಈಗಲೂ ಆವಾಗಾವಾಗ ಈ ಎಲ್ಲ ಹಾಡುಗಳು ನನ್ನ ಮೊಬೈಲ್ ರಿಂಗಟೋನ್ ಗಳಲ್ಲಿ ಸ್ಪೋಟಗೊಂಡು ಶಾಂತವಾದ ಮನಸ್ಸಿನ ಹೊಳೆಯಲ್ಲಿ ಕಲ್ಲು ಬಿದ್ದ ಅನುಭವ ಉಂಟುಮಾಡುತ್ತಿರುತ್ತವೆ.

ನಿದ್ರೆ ಬರುವುದಕ್ಕಾಗಿಯೇ ಸಾಹಿತ್ಯ ಕೃತಿಗಳನ್ನು ಓದಬೇಕು ಎನ್ನುವ ಈಗಿನ ಕಾಲದಲ್ಲಿ ನನ್ನ ದಿನನಿತ್ಯದ ಜೀವನದಲ್ಲಿ ನೆನಪಾಗಿ ಕಾಡುವ ನಿಮ್ಮ ಕೃತಿಗಳು ನಿಜಕ್ಕೂ ಗ್ರೆಟ್ ಸರ್. ಒಣ ಸಾಹಿತ್ಯ ಬರೆದು ಓದುಗರನ್ನು ಬೋರು ಹೊಡೆಸಿ ಚಮಚಾಗಿರಿ ಮಾಡುತ್ತಾ, ಪ್ರಶಸ್ತಿ ಪಡೆಯವ ಸಾಹಿತಿಗಳ ಸಾಲಿನಲ್ಲಿ ನಿಲ್ಲದೆ, ತಮ್ಮದೇ ಶೈಲಿಯಲ್ಲಿ ಓದುಗರಿಗೆ ಆಪ್ತರಾಗುವ ರೀತಿ ನನಗಂತೂ ಅಪ್ಯಾಯಮಾನ. ಮಾನವೀಯ ಅಂತಃಕರಣಗಳ ಮೇಲೆ ಬೆಳಕು ಚೆಲ್ಲುತ್ತ ಬರೆಯವ ನೀವು ತಮ್ಮದೇ ಆದ ಗುರುತಿಸುವಿಕೆಯನ್ನು ಉಳಿಸಿಕೊಂಡಿದ್ದಿರಾ. ಇದು ಹಾಗೆಯೇ ಮುಂದುವರಿಯಲಿ.

ಬೆಂಗಳೂರಿನ ರಂಗುರಂಗಿನ ಪ್ರಪಂಚದಲ್ಲಿ ಗೋಕರ್ಣದ ಕೋಟಿತೀರ್ಥ, ಬೆಳಗ್ಗಿನ ಚಳಿಬಿಸಲಿನಲ್ಲಿ ಹಸಿರುಹಸಿರಾದ ಬಸಳೆ ಮಾರುತ್ತಿರುವ ಹಾಲಕ್ಕಿ ಅಜ್ಜಿ, ಗಣಪತಿ ದೇವಸ್ಥಾನದ ಮುಂದೆ ಚಳಿಯಲ್ಲಿ ನಡುಗುತ್ತಾ ದರ್ಬೆ ಮಾರುತ್ತಿರುವ ಅದೇ ಅಜ್ಜಿಯ ಮೊಮ್ಮಗಳ, ಬಂಗಾರ ಮತ್ತು ಬೆಳ್ಳಿ ಮೀನು ಮಾರುತ್ತಿರುವ ಹೆಂಗಸು, ಮೀನು ತುಂಬಿಕೊಂಡು ಬರುವ ಪಾತಿ ದೋಣಿ, ಗೋಕರ್ಣದ ಶಿವರಾತ್ರಿ, ಕುಮಟಿ ತೇರು, ಹೀಗೆ ಹತ್ತು ಹಲವಾರು ನಮ್ಮೂರಿನ ಚಿತ್ರಗಳು ಮರೆಯಾಗದಿರಲಿ.

ಇವುಗಳ ಬಗ್ಗೆ ಇನ್ನಷ್ಟು ಶಬ್ದತೀರಗಳು ಬೊಗಸಮಳೆಯಲ್ಲಿ ಹೊಯ್ಯಲಿ. ಅದರಲ್ಲಿ ಮೀಯುವ ಅದೃಷ್ಟ ನಮ್ಮದಾಗಲಿ. ಜಡ್ಡು ಗಟ್ಟಿದ, ಸಂವೇದನೆ ಕಳೆದುಕೊಳ್ಳುತ್ತಿರುವ ನಮ್ಮ ಮನಸ್ಸುಗಳು ಉಲ್ಲಾಸ ಉತ್ಸಾಹಗೊಳ್ಳುವಂತಹ, ಕೃತಿಗಳು ತಮ್ಮಿಂದ ಬರಲಿ ಎಂದು ನಿರೀಕ್ಷಿಸಿಸುತ್ತಾ ನಿಮ್ಮ ಮುಂದಿನ ಬದುಕು ಇನ್ನಷ್ಟು ಚೆನ್ನಾಗಿರಲ್ಲಿ ಎಂದು ಹಾರೈಸುತ್ತೇನೆ.

English summary
Vinayak Patagar from Karwar wonders how the characters created by Kannada short story writer and kannada novelist Jayanth Kaikini come across in real life. An open letter to Jayanth Kaikini, who completed 56 in Janyary 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X