ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಸಂದರ್ಶನ

By Shami
|
Google Oneindia Kannada News

Anjali Ramanna, C Manjula
ಶ್ರೀಮಂತ, ಬಡವ, ಕೆಳವರ್ಗಕ್ಕೆ ಸೇರಿದ ಮಹಿಳೆಯರ ಕಷ್ಟನಷ್ಟ, ದುಃಖ ದುಮ್ಮಾನ, ಮಾನಾಪಮಮಾನ, ಸಾಮಾಜಿಕ ಮತ್ತು ಕೌಟುಂಬಿಕ ಗೋಳುಗಳನ್ನು ಆಲಿಸುವುದಕ್ಕೆಂದೇ ನಮ್ಮ ರಾಜ್ಯದಲ್ಲಿ ಒಂದು ಸರಕಾರಿ ಪ್ರಾಯೋಜಿತ ಸಂಸ್ಥೆಯಿದೆ. ಶೋಷಿತ ಮಹಿಳೆಯರ ಕಣ್ಣೀರು ಒರೆಸುವ ಸೆರಗಿನಂತೆ ಕೆಲಸ ಮಾಡಬೇಕಾದ ಆ ಸಂಸ್ಥೆಯ ಹೆಸರು ಮಹಿಳಾ ಆಯೋಗ. ಈ ಆಯೋಗಕ್ಕೆ ಅಧ್ಯಕ್ಷೆಯಾಗಿ ಎಬಿವಿಪಿ ಕಾರ್ಯಕರ್ತೆ ಸಿ.ಮಂಜುಳಾ ನೇಮಕಗೊಂಡಿದ್ದಾರೆ. ಆಯೋಗ ಏನು ಮಾಡುತ್ತಿದೆ? ಏನು ಮಾಡಬೇಕಿತ್ತು? ಮುಂದೇನು ಮಾಡಬಹುದು? ಹೊಸ ಅಧ್ಯಕ್ಷರ ಸಂದರ್ಶನ, ವಕೀಲೆ ಅಂಜಲಿ ರಾಮಣ್ಣ ಅವರಿಂದ.

ಅಂಜಲಿ : ಮಹಿಳೆ ಎನ್ನುವ ಕಾರಣಕ್ಕೆ ತಾವು ಕೆಲಸ ಮಾಡುವಾಗ ಕಷ್ಟ ಎದುರಿಸಿದ್ದು ಉಂಟೆ?

ಮಂಜುಳಾ : ಹೌದು, ಇನ್ನೂ ಪುರುಷಪ್ರಧಾನ ವ್ಯವಸ್ಥೆಯೇ ಅಸ್ತಿತ್ವದಲ್ಲಿರುವುದರಿಂದ ಮಹಿಳೆ ಎನ್ನುವ ಕಾರಣಕ್ಕೆ ಮನೆಯಲ್ಲಿಯೇ ಆಗಲಿ, ಹೊರಗಡೆಯೇ ಆಗಲಿ ತೊಂದರೆಗಳನ್ನು ಎದುರಿಸಬೇಕಾಗಿದೆ. ನನಗೂ ಕೂಡ ತೊಂದರೆಗಳಾಗಿವೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಲು ಸಾಧ್ಯವಿದ್ದರೂ ರಾಜಮಾರ್ಗದಲ್ಲಿ ಯಶಸ್ಸು ಸಿನ, ಗುವುದು ಮಹಿಳೆ ಎನ್ನುವ ಕಾರಣದಿಂದ ಇಂದಿಗೂ ನಿಧಾನವಾಗುತ್ತಿದೆ. ಮಹಿಳಾ ಆಯೋಗಕ್ಕೆ ಬರುವ ಕೆಲವು ಪುರುಷರು ಕೂಡ ತಾವು ಪುರುಷರು ಎನ್ನುವ ಅಹಂನ ಜೊತೆಗೇ ಬರುತ್ತಾರೆ.

ಅಂಜಲಿ : ಮಹಿಳೆಗೆ ಮೊದಲ ಮುಳುವು ಗಾಳಿಮಾತುಗಳು. ಅದನ್ನು ಹೇಗೆ ನಿಭಾಯಿಸುತ್ತೀರಾ?

ಮಂಜುಳಾ : ವೃತ್ತಿ ಜೀವನದಲ್ಲಿ ಎಂದಿಗೂ ನನಗೆ ಈ ಸಮಸ್ಯೆ ಎದುರಾಗಿಲ್ಲ. ಮಹಿಳೆಯರು ಹೊರಗೆ ಕೆಲಸ ಮಾಡುವಾಗ ತನ್ನ ಸುತ್ತಲು ಯಾರು ಇದ್ದಾರೆ, ತನ್ನ ಒಡನಾಟ ಎಂತಹ ವ್ಯಕ್ತಿಗಳೊಂದಿಗಿದೆ ಎನ್ನುವುದರ ಬಗ್ಗೆ ವಿಶೇಷ ನಿಗಾ ವಹಿಸಿಬಿಟ್ಟರೆ ಇಂತಹ ಸಮಸ್ಯೆಯೇ ಬರದು. ಜೊತೆಗೆ ಗಾಳಿಮಾತುಗಳಿಗೆ ಮಾತುಗಳ ಬದಲು attitude ಅವಳ ಉತ್ತರವಾಗಬೇಕು, ಆಗ ಗಾಳಿಮಾತುಗಳು ಸಹಜವಾಗಿ ಸಾಯುತ್ತವೆ. ಅವಳ ನಡವಳಿಕೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗದಂತಿರಬೇಕು.

ಅಂಜಲಿ : ಆಯೋಗ, ಅಧಿಕಾರ, ಯೋಜನೆಗಳು ನಿಮ್ಮ ದೃಷ್ಟಿಯಲ್ಲಿ ಹೇಗಿವೆ?

ಮಂಜುಳಾ : ಆಯೋಗದ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ ಅದಕ್ಕೆ ಹಣಕಾಸು ಮತ್ತು ನೆಟ್ವರ್ಕಿಂಗ್ ಇಲ್ಲದಿರುವುದು ಮುಖ್ಯವಾದ ಕಾರಣ. ಸಾಮ-ಭೇದ-ದಂಡ ಮೂರೂ ವಿಧದ ಕಾರ್ಯ ಶೈಲಿ ನನ್ನದು. ಈಗ ಅಧಿಕಾರವಿರುವುದರಿಂದ ಅದನ್ನು ಮಾಡಲು ಸಾಧ್ಯವೆನ್ನುವ ಭರವಸೆಯಿದೆ. ರಾಜ್ಯದ ಯಾವುದೇ ಸ್ಥಳದ ಪೋಲಿಸರೊಂದಿಗೆ ನಮ್ಮ ಸಂಪರ್ಕ ತ್ವರಿತಗತಿಯಲ್ಲಿ ಮತ್ತು ಉತ್ತಮ ಗುಣ ಮಟ್ಟದಲ್ಲಿರಬೆಕು. ಅದಕ್ಕಾಗಿ ಫ್ಯಾಕ್ಸ್, ಫೋನ್, ಈಮೇಲ್‌ಗಳ ಬಳಕೆ ಯಶಸ್ವಿಯಾಗಿ ಆಗಬೇಕು. ಅಯೋಗದಲ್ಲಿರುವ ಸಲಹೆಗಾರರ ಬೋರ್ಡ್‌ನಲ್ಲಿ ವಕೀಲರುಗಳನ್ನು ಹೊಂದುವುದರಿಂದ ಕಾನೂನು ಸಲಹೆಗಳು ಸಹ ಮಹಿಳೆಯರಿಗೆ ಸುಲಭವಾಗಿ ಸಿಗುವಂತಾಗುತ್ತದೆ. ಇವುಗಳನ್ನು ಜಾರಿಗೆ ತರುವುದು ನನ್ನ ಮೊದಲ ಆದ್ಯತೆ.

ಅಂಜಲಿ : ಪೊಲಿಸರಿಂದ ಮಹಿಳೆಯರು ಸಮಸ್ಯೆಗಳನ್ನು ಎದುರಿಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈ ನಿಟ್ಟಿನಲ್ಲಿ ತಮ್ಮ ಕ್ರಮ ಏನಿರಲಿದೆ?

ಮಂಜುಳಾ : ಮಹಿಳಾ ಅಯೋಗ ಸಂವಿಧಾನದಿಂದ ಅಧಿಕಾರವನ್ನು ವಿದ್ಯುಕ್ತವಾಗಿ ಪಡೆದುಕೊಂಡು ರಚನೆಯಾದ ಸಂಸ್ಥೆ. ಆದರೆ ಇದು ನ್ಯಾಯಾಲಯವಲ್ಲ. ನ್ಯಾಯಾಲಯಕ್ಕೆ ಮಹಿಳೆಯರ ಸಮಸ್ಯೆಗಳು ಹೋಗುವ ಮುಂಚೆ ಬಗೆಹರಿಸಲು ಸಾಧ್ಯವೇ ಎಂದು ಪರೀಶೀಲಿಸುವ ಸಾಂಸ್ಥಿಕ ಮಾರ್ಗ. ಹಾಗೆಯೇ, ಮಹಿಳಾ ಸಮಸ್ಯೆಗಳು ನ್ಯಾಯಾಲಯದ ಮೆಟ್ಟಲೇರಿದಾಗ ಅವುಗಳನ್ನು ತ್ವರಿತಗತಿಯಲ್ಲಿ ಮತ್ತು ನ್ಯಾಯಯುತವಾಗಿ ವಿಲೇವಾರಿ ಮಾಡಲು ಬೇಕಾದಂತಹ ದಾಖಲೆಗಳನ್ನು ಒದಗಿಸುವ ಜವಾಬ್ದಾರಿ ಮಹಿಳಾ ಅಯೋಗದ ಮೇಲಿದೆ. ನಮಗೆ ಇಲ್ಲಿ ಪ್ರಮಾಣ ಪತ್ರದಲ್ಲಿ ಸಾಕ್ಷಿ ಪಡೆಯುವ ಅಧಿಕಾರವಿದೆ ಮತ್ತು ಅದು ನ್ಯಾಯಾಲಯದಲ್ಲಿ ಪರಿಗಣಿಸಲ್ಪಡುವ ಒಂದು ದಾಖಲೆಯಾಗಿರುತ್ತೆ.

ನಮ್ಮಲ್ಲಿ ಬರುವ ಹೆಚ್ಚು ದೂರುಗಳು ರಕ್ಷಣೆ ಕೇಳುವಂಥದ್ದು. ಈಗಿರುವ 440 ಅರ್ಜಿಗಳಲ್ಲಿ 26 ಅರ್ಜಿಗಳು ರಕ್ಷಣೆ ಕೇಳಿರುವಂಥದ್ದು. ಹೀಗಿರುವಾಗ ನಮ್ಮ ಮೊದಲ ಮತ್ತು ಹತ್ತಿರದ ಸಂಬಂಧಿಗಳು ಎಂದರೆ ಪೋಲಿಸಿನವರು. ಅವರೊಂದಿಗೆ ಆಯೋಗದ ವ್ಯವಹಾರ ಉತ್ತಮಗೊಂಡರೆ, ಪೊಲೀಸರು ಸಹಕರಿಸಿದರೆ ಮುಕ್ಕಾಲು ಭಾಗ ಸಮಸ್ಯೆ ಬಗೆಹರಿದಂತೆ. ಅದಕ್ಕಾಗಿ ಸದ್ಯದಲ್ಲಿಯೇ ನಾನು ಪೊಲೀಸ್ ವರಿಷ್ಠಾಧಿಕಾರಿಗಳ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳ ಸಭೆ ಕರೆಯಲಿದ್ದೇನೆ. ಮಹಿಳೆಯರ ಸಮಸ್ಯೆಗಳೆಡೆಗೆ ಅವರನ್ನು ಸೂಕ್ಷ್ಮರನ್ನಾಗಿಸುವುದು, ಅವರುಗಳ ವರ್ತನೆ ಮತ್ತು ದೃಷ್ಟಿಕೋನದಲ್ಲಿ ತುರ್ತಾಗಿ ಬೇಕಿರುವ ಬದಲಾವಣೆಗಳ ಬಗ್ಗೆ ಚರ್ಚಿಸುವುದು ಮತ್ತು ಮಹಿಳೆಯರ ದೂರುಗಳಿಗೆ ಆದ್ಯತೆ ಕೊಡಿಸುವಂತೆ ಅವರ ಮನ ಒಲಿಸುವುದು ಈ ಸಭೆಯ ಉದ್ದೇಶ.

ಅಂಜಲಿ : ಪೊಲೀಸರನ್ನು ಮಹಿಳೆಯರ ಸಮಸ್ಯೆಗಳೆಡೆಗೆ ಸೂಕ್ಷ್ಮರನ್ನಾಗಿಸುವುದು ಹೇಗೆ ಸಾಧ್ಯ?

ಮಂಜುಳಾ : ಮೊದಲನೆಯದಾಗಿ ಪೊಲೀಸರು ತಿಳಿಯಬೇಕಾದ್ದೆಂದರೆ ಅವರು ಸಲಹೆ ನೀಡಲು ಬುದ್ಧಿವಾದ ಹೇಳಲು ಇರುವ ಸಂಸ್ಥೆಯಲ್ಲ. ಅವರ ಕೆಲಸ ಕಾನೂನು ಅವರಿಗೆ ವಹಿಸಿರುವ ಕರ್ತವ್ಯವನ್ನು ನಿರ್ವಹಣೆ ಮಾಡುವುದಷ್ಟೆ. ಯಾವುದೇ ಮಹಿಳೆ ದೂರು ನೀಡಲು ಬಂದಾಗ ನಿರಾಕರಿಸದೆ, ಕಡೆಗಣಿಸದೆ, ಬುದ್ಧಿ ಹೇಳದೆ, ದೂರು ಸ್ವೀಕರಿಸಿ ಕ್ರಮ ಜರುಗಿಸುವುದಷ್ಟೇ ಅವರ ಕೆಲಸ. ಅರಿತುಕೊಂಡು ತಾವೇ ಮಾಡಿದರೆ ಆಯೋಗದ ಕೆಲಸವೂ ಸುಲಭವಾಗುವುದು. ಮಹಿಳೆಯರಿಗೂ ಪೊಲೀಸರ ಮೇಲೆ ನಂಬಿಕೆ, ಗೌರವ ಹೆಚ್ಚಾಗುವುದು. ಈ ಕರ್ತವ್ಯದಿಂದ ವಿಮುಖರಾದರೆ ನಾನು ಪೋಲೀಸರ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಿದ್ದೇನೆ.

ಅಂಜಲಿ : ವಿದ್ಯಾವಂತ, ಆರ್ಥಿಕ ಸಬಲ ಮಹಿಳೆಯರು ಆಯೋಗದ ಸಹಾಯ ಪಡೆಯುತ್ತಿಲ್ಲ. ಇಲ್ಲಿ ಬರುವ ನೊಂದ ಮಹಿಳೆಯರೆಲ್ಲಾ ಗ್ರಾಮೀಣ ಪ್ರದೇಶದವರು ಮತ್ತು ಅವಿದ್ಯಾವಂತರು. ಹೌದೇ?

ಮಂಜುಳಾ : ಇದು ಸ್ವಲ್ಪ ಮಟ್ಟಿಗೆ ಸತ್ಯ. ಇದಕ್ಕೆ ಕಾರಣ, ವಿದ್ಯಾವಂತ ಆರ್ಥಿಕ ಸಬಲ ಮಹಿಳೆಯರು ಸಮಸ್ಯೆಗಳ ಇತ್ಯರ್ಥಕ್ಕೆ ತಮ್ಮದೇ ಒಂದು support system ಹೊಂದಿರುತ್ತಾರೆ. ಬೇರೆ ಮಹಿಳೆಯರಿಗೆ ನಮ್ಮ ಸಹಾಯ ಹೆಚ್ಚು ಬೇಕಾಗಿದೆ. ಆಯೋಗದ ವಿಕೇಂದ್ರೀಕರಣ ಆಗದ ಕಾರಣ ನಾವು ಹೆಚ್ಚು ಮಹಿಳೆಯರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿನ ಸಾಂತ್ವನ ಕೇಂದ್ರಗಳೊಂದಿಗೆ ಕೈಜೋಡಿಸಿ ಈಗ ಮಹಿಳಾ ಆಯೋಗದ ಸಹಾಯವನ್ನು ಎಲ್ಲ ಮಹಿಳೆಯರಿಗೂ ತಲುಪಿಸಬೇಕೆನ್ನುವ ಯೋಜನೆ ಇದೆ. ಸಂವಿಧಾನಾತ್ಮಕವಾಗಿ ಆಯೋಗ ಯಾವ ಬೇಧವೂ ಇಲ್ಲದೆ ಎಲ್ಲ ಮಹಿಳೆಯರಿಗೂ ಸೇರಿದ್ದು. ವಿದ್ಯಾವಂತರು, ಆರ್ಥಿಕ ಸಬಲರು ಆಯೋಗಕ್ಕೆ ಬೆಂಬಲವಾಗಿ ನಿಂತಾಗ ಮಾತ್ರ ಯಶಸ್ಸು ಸಾಧ್ಯ.

ಅಂಜಲಿ : ಮಹಿಳಾ ಹೋರಾಟ ಇಂದಿಗೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಕೂಗನ್ನು ಸಮಾಜಕ್ಕೆ ತಲುಪಿಸಲು ಸೋತಿದೆ ಎಂಬ ಅಭಿಪ್ರಾಯವಿದೆ. ಇದು ಸರಿಯೇ?

ಮಂಜುಳಾ : ನನ್ನ ಅಭಿಪ್ರಾಯ ಮತ್ತು ಅನುಭವದಲ್ಲೂ ಕೂಡ ಇದು ಸತ್ಯ. ಇದಕ್ಕೆ ಕಾರಣ ಮಹಿಳೆಯರು ಸಂಘಟಿತರಾಗಿಲ್ಲದಿರುವುದು. ವಿದ್ಯಾವಂತ, ಅವಿದ್ಯಾವಂತ, ಆರ್ಥಿಕ ಸಬಲರು ಮತ್ತು ದುರ್ಬಲ ಮಹಿಳೆಯರ ನಡುವೆ ಇಂದಿಗೂ ಒಂದು ದೊಡ್ಡ ಕಂದರವಿದೆ. ಎಲ್ಲ ಸ್ತರಗಳ ಮಿತಿಯನ್ನು ದೂರ ಮಾಡಿ ಎಲ್ಲ ಮಹಿಳೆಯರೂ ಸಂಘಟಿತರಾಗಿ ಕೂಗು ಹಾಕಿದಾಗ ಮಾತ್ರ ನಿರೀಕ್ಷಿತ ಪ್ರತಿಫಲ ದೊರಕಲು ಸಾಧ್ಯ.

ಅಂಜಲಿ : ಅಸಂಘಟಿತರನ್ನು ಸಂಘಟಿತರನ್ನಾಗಿ ಮಾಡುವ ದಿಕ್ಕಿನಲ್ಲಿ ಆಯೋಗದ ಕೊಡುಗೆ ಏನಿರಲಿದೆ?

ಮಂಜುಳಾ : ಇಂದಿನ ಯುವತಿಯರಿಗೆ ನಾವು ನೀಡುತ್ತಿರುವ ವಿದ್ಯಾಭ್ಯಾಸ ಕನಸು ಮತ್ತು ಭ್ರಮೆಯನ್ನು ನೀಡುತ್ತಿದೆಯೇ ಹೊರತು ಜೀವನವನ್ನು ಎದುರಿಸಲು ಬೇಕಾದ ಪ್ರಾಯೋಗಿಕ ಜ್ಞಾನವನ್ನಲ್ಲ. ವಿಶ್ವವಿದ್ಯಾಲಯಗಳ ಮಹಿಳಾ ಅಧ್ಯಯನ ವಿಭಾಗದೊಂದಿಗೆ ಕೈಜೋಡಿಸಿ, ಮಹಿಳೆಯರಿಗಾಗಿ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಯುವತಿಯರಿಗೆ ವ್ಯಕ್ತಿತ್ವ ವಿಕಸನ ಮತ್ತು ಕಾನೂನು ಶಿಬಿರಗಳನ್ನು ಕಾಲೇಜು ಮಟ್ಟದಲ್ಲೆ ಆಯೋಜಿಸುವುದು ನನ್ನ ಮೊದಲ ಯೋಜನೆ. ಪ್ರತೀ ವರ್ಗದ ಮಹಿಳೆ ಪರಾವಲಂಬನೆ ಯಾವ ಸಮಸ್ಯೆಗೂ ಶಾಶ್ವತ ಪರಿಹಾರವಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು. ಯಾವುದು ಹಿಂಸೆ ಮತ್ತು ಅಸಭ್ಯ, ಯಾವ ಹಂತದವರೆಗೂ ತಾಳ್ಮೆಯಿರಬೆಕು ಎನ್ನುವ ನಿರ್ಧಾರ ತೆಗೆದು ಕೊಳ್ಳಬೇಕಾದವಳು ಮಹಿಳೆ. ಈ ಆತ್ಮ ವಿಶ್ವಾಸ ಬರುವುದು ಪ್ರಾಯೋಗಿಕ ಜ್ಞಾನವಿದ್ದರೆ ಮಾತ್ರ.ಜೊತೆಗೆ ಸಾಮಾಜಿಕ mind set ಕೂಡ ಬದಲಾಗಲೇ ಬೇಕು.

ಅಂಜಲಿ : ಮಹಿಳಾಪರ ಕಾನೂನುಗಳು ದುರ್ಬಳಕೆಯಾಗುತ್ತಿದೆ ಎನ್ನುವ ಮಾತಿನ ಬಗ್ಗೆ ನಿಮ್ಮ ಅನುಭವ, ಅನಿಸಿಕೆಗಳೇನು?

ಮಂಜುಳಾ : ಇಲ್ಲವೇ ಇಲ್ಲ ಎಂದು ಹೇಳಲು ಬಾರದು. ಆದರೆ ಅತ್ಯಲ್ಪ ಪ್ರಮಾಣದಲ್ಲಿ, ತೀರ ನಗಣ್ಯ ಎನ್ನುವ ಮಟ್ಟದಲ್ಲಿ ಈ ರೀತಿಯಾಗುತ್ತಿದೆ. ಆದರೆ ಅದಕ್ಕಾಗಿ ಎದ್ದಿರುವ ಕೂಗು ಮಾತ್ರ ವಿಪರೀತ ದೊಡ್ಡದು. ಪುರುಷ ಪಲಾಯನವಾದಿ. ಅವನು ಸಮಸ್ಯೆಗೆ ಎಂದಿಗೂ ತಾತ್ಕಾಲಿಕ ಪರಿಹಾರ ಹುಡುಕುತ್ತಾನೆ. ಮಹಿಳೆಯರು ಅನ್ಯಾಯ ಮಾಡುತ್ತಿದ್ದಾರೆ ಎಂದಾದರೆ ಅದಕ್ಕೆ ಅವನೇ ಕಾರಣ. ನಾನಿಲ್ಲಿ ಇರುವುದು ಮಹಿಳಾಪರ ಸರ್ಕಾರದ ಧ್ವನಿಯಾಗಿ. ನಾನು ಅದನ್ನೇ ಮಾಡುತ್ತೇನೆ. ಸಹಾಯ ಎಂದಿಗೂ ಹಕ್ಕು ಆಗಲಾರದು. ಕಾನೂನು ಮಾತ್ರವೇ ಮಹಿಳೆಗೆ ಸ್ವಾಭಿಮಾನ ಮತ್ತು ಸ್ವತಂತ್ರ್ಯವಿರುವ ಬದುಕನ್ನು ಕಟ್ಟಿಕೊಡಬಲ್ಲುದು. ಅದಕ್ಕಾಗಿಯೇ ಅಧ್ಯಯನ ಮಾಡಿದ ನಂತರ ಕಾನೂನಿನಲ್ಲಿ ತಿದ್ದುಪಡಿ ತರಲು ಮತ್ತು ಅವಶ್ಯಕವಿರುವೆಡೆ ಹೊಸ ಕಾನೂನನ್ನು ರೂಪಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದ್ದೇನೆ.

ಅಂಜಲಿ : ಈ ಕ್ಷಣದಲ್ಲಿ ಮಹಿಳೆ ಎದುರಿಸುತ್ತಿರುವ ಮುಖ್ಯವಾದ ಸಮಸ್ಯೆ ಏನು?

ಮಂಜುಳಾ : ಅತಿ ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ ವಿವಾಹಪೂರ್ವ ಲೈಂಗಿಕತೆ. ನಂತರದ್ದು ಕೌಟುಂಬಿಕ ದೌರ್ಜನ್ಯ. ಲೈಂಗಿಕತೆ ಬದುಕಿನುದ್ದಕ್ಕೂ ಇರುವಂಥದ್ದೇ ಆದ್ದರಿಂದ ಯುವತಿಯರು ಸ್ವಲ್ಪ ತಾಳ್ಮೆವಹಿಸಿ ಮದುವೆಯ ನಂತರ ಇದರಲ್ಲಿ ಮುಂದುವರೆದರೆ ಅವರ ಭವಿಷ್ಯ ಹೆಚ್ಚು ಸುರಕ್ಷಿತವಾಗುತ್ತದೆ. ಇದರಲ್ಲಿ ತಪ್ಪಿತಸ್ಥ ಪುರುಷರಿಗೆ ಕಾನೂನು ರೀತ್ಯ ಶಿಕ್ಷೆ ಕೊಡಿಸಲು ಆಯೋಗ ಎಲ್ಲಾ ರೀತಿಯಾದ ಕ್ರಮ ತೆಗೆದುಕೊಳ್ಳಲಿದೆ. ಕೌಟುಂಬಿಕ ದೌರ್ಜನ್ಯದ ವಿಷಯಕ್ಕೆ ಬಂದರೆ, ಎಷ್ಟೇ ಸಬಲಳಾದ ಮಹಿಳೆಯನ್ನೂ ಇನ್ನೂ ಕುಟುಂಬದಲ್ಲಿ ಅಧೀನಳನ್ನಾಗಿಯೇ ನೋಡುತ್ತಿದ್ದೇವೆ. ಸುಧಾರಣೆಗೆ ಸಾಕಷ್ಟು ಸಮಯ ನೀಡಿಯಾಗಿದೆ. ಇನ್ನು ಮುಂದೆ ಬುದ್ಧಿವಾದ ಹೇಳದೆ ಕ್ರಮ ಜರುಗಿಸುವುದಷ್ಟೇ ಆಯೋಗದ ಕೆಲಸವಾಗಲಿದೆ.

ಅಂಜಲಿ : ಅಧ್ಯಕ್ಷರು ಬದಲಾದಾಗ ಮಾತ್ರ ಮಹಿಳಾ ಅಯೋಗ ಸುದ್ದಿಯಾಗುತ್ತದೆ. ಉಳಿದಂತೆ ಎಲ್ಲ ದಿನಗಳು ಮೌನಿ. ಯಾಕೆ ಹೀಗೆ?

ಮಂಜುಳಾ : ಈ ಮಾತು ನೂರಕ್ಕೆ ನೂರೂ ಸತ್ಯ. ಈಗಾಗಲೇ ಇರುವ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ, ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಲ್ಲಿಯಾಗಲೀ ನಮಗಿರುವ ಕೊರತೆ ಎಂದರೆ ನಮ್ಮದೇ ಆದ ಹಣಕಾಸು ವ್ಯವಸ್ಥೆಯಿಲ್ಲದಿರುವುದು. ನಮ್ಮ ಆಲೋಚನೆಗಳು ಜನರನ್ನು ತಲುಪಲು ಸಾಧ್ಯ ಮಾಧ್ಯಮಗಳಿಂದ ಮಾತ್ರ. ಮಹಿಳಾ ಆಯೋಗಕ್ಕೆ ತನ್ನದೆ ಆದ ಹೆಚ್ಚುವರಿ ನೀಡಲೇ ಬೇಕೆಂದು ನಾನೀಗ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ. ಹಾಗೆಯೇ, ಸರ್ಕಾರದ ಕಡೆಯಿಂದ ಹಣದ ಸಹಾಯ ದೊರಕದಿದ್ದರೆ ನಮ್ಮ ಸಾಧನೆಗಳನ್ನು, ಯೋಜನೆಗಳನ್ನು ಹೇಳಿಕೊಳ್ಳಲು ಇನ್ನು ಮುಂದೆ ಮಾಧ್ಯಮದವರ ಮುಂದೆ ಬರುವುದಿಲ್ಲವೆಂದೂ ಸರ್ಕಾರಕ್ಕೆ ಹೇಳಿಬಿಟ್ಟಿದ್ದೇನೆ.

ಸಿ. ಮಂಜುಳಾ ಬಗ್ಗೆ : ಮೂಲತಃ ಪಾಂಡವಪುರ ಮೈಸೂರಿನವರಾದ ಮಂಜುಳ ಕಾನೂನು ಪದವಿಧರೆಯಾಗಿದ್ದು, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಯಶಸ್ವಿಯಾಗಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಶಿವಮೊಗ್ಗದಲ್ಲಿ ವಕೀಲ ವೃತ್ತಿಯ ಅಭ್ಯಾಸ ಮಾಡುತ್ತಿದ್ದರು. ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು. ಹುಟ್ಟಿದ್ದು ಪಾಂಡವಪುರದಲ್ಲಿ, ಬೆಳೆದದ್ದು ಮೈಸೂರಿನಲ್ಲಿ, ಇರುವುದು ಶಿವಮೊಗ್ಗೆಯಲ್ಲಿ, ಈಗ ರಾಜ್ಯ ಮಟ್ಟದ ಅಧಿಕಾರ, ಎಲ್ಲೆಡೆಯೂ ವಿಹಾರ. [ಮಹಿಳೆ]

English summary
Karnataka Womens Commission chairman C Manjula interview. By Anjali Ramanna in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X