ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಹೆಮ್ಮೆಯ ಪುತ್ರ ಅಶ್ಫಾಕ್ ಬಲಿದಾನದ ನೆನಪು

By * ಸಿಎಸ್ ರಾಮಚಂದ್ರ ಹೆಗಡೆ, ಬೆಂಗಳೂರು
|
Google Oneindia Kannada News

Martyr Ashfaqullah Khan
ನಾವು ಯಾವ ಧರ್ಮಕ್ಕೆ ಸೇರಿದವರು ಎನ್ನುವುದಕ್ಕಿಂತ ಮುಖ್ಯವಾಗಿ ನಾವೆಲ್ಲ ಭಾರತೀಯರು. ಹಿಂದೂಸ್ತಾನದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿಂದೂ ಸೋದರರು ನೇಣುಗಂಬವನ್ನೇರಿದ್ದಾರೆ. ಆದರೆ ಮುಸಲ್ಮಾನರಲ್ಲಿ ಆ ಅದೃಷ್ಟಶಾಲಿ ನಾನೇ ಆಗಿರುವುದಕ್ಕೆ ತುಂಬಾ ಸಂತಸವೆನಿಸುತ್ತಿದೆ. ಅರೆ, ಒಬ್ಬ ಮುಸಲ್ಮಾನನನ್ನೂ ದೇಶಕ್ಕಾಗಿ ನೇಣಿಗೇರಲು ಬಿಡಿ ಅಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದ ಆಶ್ಫಾಕ್. ಡಿ.19ರಂದು ರಾಷ್ಟ್ರ ರಕ್ಷಣೆಗಾಗಿ ಅಶ್ಫಾಕ್ ಉಲ್ಲಾಖಾನ್, ರಾಮ್ ಪ್ರಸಾದ್ ಬಿಸ್ಮಿಲ್, ರೋಷನ್ ಸಿಂಗ್ ಬಲಿದಾನಗೈದ ದಿನ. ಅವರ ಸ್ಮರಣೆಗಾಗಿ ಈ ಲೇಖನ

"ಒಗ್ಗೂಡಿಸಿ ಆಳಲು ಸಾಧ್ಯವಾಗದಿದ್ದರೆ ಒಡೆದು ರಾಜ್ಯವಾಳು" ಇದು ಭಾರತಕ್ಕೆ ಬ್ರಿಟಿಷರು ನೀಡಿದ ವಿಷ ಬೀಜದ ನೀತಿ. ಈ ದೇಶದ ಹಿಂದೂ-ಮುಸ್ಲಿಂರಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಂಡರೆ ತಾವು ಆಳುವುದು ಕಷ್ಟ ಎಂದರಿತ ಬ್ರಿಟೀಷರು ಅವರಲ್ಲಿ ಪ್ರತ್ಯೇಕತೆಯ ಭಾವವನ್ನು ಅಂಕುರಿಸಿ ಕೋಮುವಾದದ ವಿಷ ಬೀಜ ಬಿತ್ತಿದರು. ಅಂದು ಬಂಗಾಳ ವಿಭಜನೆಯ ದುಷ್ಟ ಪ್ರಯತ್ನದಿಂದ ಆರಂಭವಾದ ಈ ವಿಷ ಬೀಜದ ಮೊಳಕೆ ಇಂದು ಉಗ್ರರನ್ನೂ ಮುದ್ದಿಸುವವರೆಗೆ ಹೆಮ್ಮರವಾಗಿ ಬೆಳೆದು ನಿಂತಿದೆ.

ಧರ್ಮ ಧರ್ಮಗಳ ಹೆಸರಲ್ಲಿ ಕಲಹ ಹುಟ್ಟು ಹಾಕಿ, ಆ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಷ್ಟ್ರ ದ್ರೋಹಿ ಪ್ರಜ್ಞೆ ದೇಶದ ಹೃದಯವನ್ನೇ ಭಗ್ನಗೊಳಿಸುತ್ತಿದೆ. ರಾಷ್ಟ್ರದ ಅತ್ಯಂತ ಪ್ರಮುಖ ಸ್ಥಾನವಾದ ಸಂಸತ್‌ನ ದಾಳಿಯ ಒಂಭತ್ತು ವರ್ಷಗಳ ನಂತರವೂ, ಸರ್ವೋಚ್ಚ ನ್ಯಾಯಾಲಯವೇ ಆರೋಪಿಯನ್ನು ತಪ್ಪಿತಸ್ಥನೆಂದು ನಿರ್ಧರಿಸಿ ಎರಡೆರಡು ಬಾರಿ ನೇಣು ಶಿಕ್ಷೆಯನ್ನು ವಿಧಿಸಿದ್ದರೂ ಸಂಸತ್ ದಾಳಿಯ ಪ್ರಮುಖ ಸೂತ್ರಧಾರ ಅಫ್ಜಲ್ ಗುರು ವಿನಂತಹ ದೇಶದ್ರೋಹಿ ಉಗ್ರನನ್ನು ಕೇವಲ ಧರ್ಮ ಕಾರಣಕ್ಕಾಗಿ ರಕ್ಷಿಸುವ ಹೀನ ಮನಸ್ಥಿತಿಯೂ ಆ ಕೋಮುವಾದದ ವಿಷಫಲ. ಇನ್ನೂ ಉಗ್ರ ಕಸಬ್ ಭಾರತದ ಪಾಲಿನ ಬಿಳಿಯಾನೆಯಾಗಿಬಿಟ್ಟಿದ್ದಾನೆ.

ಅಂದು ಬ್ರಿಟಿಷರು ಮಾಡಿದ್ದು ಇದನ್ನೇ. ಆದರೆ ಅದಕ್ಕೆ ದೇಶಭಕ್ತ ತರುಣ ಆಶ್ಫಾಕ್ ಉಲ್ಲಾಖಾನ್ ನೀಡಿದ ಉತ್ತರ, ಆಶ್ಫಾಕನ ದೇಶಭಕ್ತಿ, ರಾಷ್ಟ್ರಪ್ರೇಮ, ತ್ಯಾಗ, ಧರ್ಮಕ್ಕಿಂತ ಮಿಗಿಲಾದ ರಾಷ್ಟ್ರ ಪ್ರಜ್ಞೆ ಕೇವಲ ಮುಸಲ್ಮಾನರಿಗ? ಅಲ್ಲ. ಸಮಸ್ತ ಭಾರತೀಯರಿಗೂ ಅನುಕರಣೀಯ.

ಆಶ್ಫಾಕ್ ಉಲ್ಲಾಖಾನ್ ಉತ್ತರಪ್ರದೇಶದ ಶಹಜನಾಪುರದ ಶ್ರೀಮಂತ, ಸುಶಿಕ್ಷಿತ ಕುಟುಂಬದ ತರುಣ. ಅವನ ಪರಿವಾರದ ಹಲವರು ಬ್ರಿಟಿಷ್ ಸರಕಾರದ ಉಚ್ಚ ಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೂ ದೇಶದೆಡೆಗೆ ಆಶ್ಫಾಕನಿಗಿದ್ದ ಆದಮ್ಯ ಭಕ್ತಿ, ಪ್ರೇಮ ಅವನನ್ನು ದೇಶಭಕ್ತ ಕ್ರಾಂತಿಕಾರಿ ರಾಮಪ್ರಸಾದ್ ಬಿಸ್ಮಿಲ್ಲನೆಡೆಗೆ ಕರೆದುತಂದಿತು. ಈ ದೇಶದ ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ, ಸಾಮರಸ್ಯಕ್ಕೆ ಆದರ್ಶಪ್ರಾಯ ಮಾದರಿ ಇದ್ದರೆ ಅದು ರಾಮ್‌ಪ್ರಸಾದ್ ಮತ್ತು ಆಶ್ಫಾಕ್‌ರದ್ದೇ.

ಹಿಂದೂ ಮುಸ್ಲೀಮರಿಗೆ ಆದರ್ಶಪ್ರಾಯರು: ತಮ್ಮ ತಮ್ಮ ಧರ್ಮಗಳಲ್ಲಿ ನಿಷ್ಠರಾಗಿಯೂ ದೇಶದ ಸಮಗ್ರತೆಯ ವಿಷಯ ಬಂದಾಗ ಹೇಗೆ ಒಗ್ಗೂಡಿ ಮುನ್ನಡೆಯಬೇಕು ಎಂಬ ಆದರ್ಶವನ್ನು ಕಟ್ಟಿಕೊಟ್ಟವರು ಅವರು. ರಾಮ್‌ಪ್ರಸಾದ್ ಕಡು ಆರ್ಯಸಮಾಜಿ, ಆಶ್ಫಾಕ್‌ನಾದರೋ ನಿಷ್ಠಾವಂತ ಮುಸ್ಲಿಮ್. ರಾಮ್‌ಪ್ರಸಾದ್ ಜೈಲಿನಲ್ಲೇ ಹೋಮ ಹವನಗಳನ್ನು ಮಾಡಿದರೆ ಆಶ್ಫಾಕ್ ಪ್ರತಿನಿತ್ಯ ಐದು ಬಾರಿ ಪ್ರಾರ್ಥನೆ ಮಾಡುತ್ತಿದ್ದ. ಆದರೂ ಅವರಿಬ್ಬರು ಪರಸ್ಪರ ಸೋದರರಂತಿದ್ದರು. ಮತ್ತೊಮ್ಮೆ ರಾಮ-ಭರತರನ್ನು ನೋಡಿದಂತಾಯಿತು ಎಂದೊಮ್ಮೆ ಜೈಲು ಅಧಿಕಾರಿ ಉದ್ಗರಿಸಿದ್ದ.

ಡಿಸೆಂಬರ್ 19, 1927 ಕಾಕೋರಿ ಮೊಕದ್ದಮೆಯಲ್ಲಿ ರಾಮ್‌ಪ್ರಸಾದ್ ಬಿಸ್ಮಿಲ್, ಆಶ್ಫಾಕ್ ಉಲ್ಲಖಾನ್ ರಿಗೆ ಬ್ರಿಟಿಷ್ ಸರಕಾರದಿಂದ ನೇಣುಶಿಕ್ಷೆ. ಇಬ್ಬರಲ್ಲೂ ಮಾತೃಭೂಮಿಗಾಗಿ ನೇಣಿಗೇರುವ ಆನಂದ. ಅದಕ್ಕೂ ಮುನ್ನ ಬ್ರಿಟಿಷ್ ಸರಕಾರ ಇವರಿಬ್ಬರನ್ನೂ ಪ್ರತ್ಯೇಕಿಸಿ ಆಶ್ಫಾಕ್‌ನಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ ಎಲ್ಲ ಕ್ರಾಂತಿಕಾರಿಗಳನ್ನೂ ಸೆರೆ ಹಿಡಿಯುವ ಕುತಂತ್ರದ ಪ್ರಯತ್ನ ಮಾಡಿತ್ತು. ಅದಕ್ಕೆ ನಿಯೋಜಿಸಲ್ಪಟ್ಟವನು "ಖಾನ್ ಬಹದೂರ್ ತಹಸುಕ್ ಹುಸೈನ್" ಎಂಬ ಬ್ರಿಟಿಷ್ ಸರಕಾರದ ಪೋಲಿಸ್ ಸೂಪರಿಂಟೆಂಡೆಂಟ್.

1927ರ ಸೆಪ್ಟೆಂಬರ್ ತಿಂಗಳ ಒಂದು ದಿನ ಖಾನ್ ಬಹಾದೂರ್ ಸಾಹೇಬ ಆಶ್ಫಾಕ್ ಉಲ್ಲಾಖಾನ್‌ನನ್ನು ಭೇಟಿಯಾಗಿ "ನೋಡು ನೀನು ಮುಸಲ್ಮಾನ, ನಾನೂ ಮುಸಲ್ಮಾನ ನಿನ್ನನ್ನು ಬಂಧಿಸಿರುವುದಕ್ಕೆ ನನಗೆ ಬೇಸರವಿದೆ. ರಾಮಪ್ರಸಾದ್ ಒಬ್ಬ ಹಿಂದೂ, ನೀನಾದರೋ ಒಂದು ಸಂಪ್ರದಾಯಸ್ಥ ಇಸ್ಲಾಂ ಕುಟುಂಬದವನು. ಆ ಕಾಫಿರರು ನಿನ್ನ ಮತ ಮತ್ತು ಜಾತಿಗೆ ವಿರುದ್ಧವಾದವರು. ಆ ಕಾಫಿರರಿಗೆ ಏಕೆ ಸಹಾಯ ಮಾಡುವೆ? ನೀನು ರಾಮ್‌ಪ್ರಸಾದನ ವಿರುದ್ಧ ಸರಕಾರದ ಪರವಾಗಿ ಸಾಕ್ಷಿ ಹೇಳು. ನಿನ್ನನ್ನು ತಕ್ಷಣ ಬಿಟ್ಟು ಬಿಡುವುದೇ ಅಲ್ಲದೆ ಸರಕಾರದ ಉದ್ಯೋಗ ಕೊಡಿಸುತ್ತೇನೆ" ಎಂದು ಆ ಕ್ರಾಂತಿಕಾರಿ ದೇಶಭಕ್ತ ತರುಣನ ಮೆದುಳಿನಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಾನೆ.

ಅಶ್ಫಾಕನ ಸಿಡಿಲ ನುಡಿಗಳು: ಆದರೆ "ದೇಶಪ್ರೇಮವೇ ನಿಜವಾದ ಧರ್ಮ" ಎಂದರಿತಿದ್ದ ಆಶ್ಫಾಕ್ ಯಾವ ಪ್ರಲೋಭನೆಗೂ ಬಗ್ಗದೆ ನುಡಿಯುತ್ತಾನೆ, "ಸಾಕು ನಿಲ್ಲಿಸಿ ನಿಮ್ಮ ಅಪವಿತ್ರ ಮಾತುಗಳನ್ನು. ರಾಮ್‌ಪ್ರಸಾದ್ ನನ್ನ ಸೋದರ, ಆತನೊಬ್ಬ ನಿಜವಾದ ಭಾರತೀಯ. ಹಿಂದೂಸ್ತಾನದ ಸ್ವಾತಂತ್ರ್ಯವೇ ನಮ್ಮ ಲಕ್ಷ್ಯ. ಆಕಸ್ಮಾತ್ ರಾಮ್‌ಪ್ರಸಾದ್ ಹಿಂದೂ ಭಾವನೆಗಳಿಂದ ಪ್ರೇರಿತನಾಗಿದ್ದರೂ ನಾನು ಅವನೊಂದಿಗಿರುತ್ತಿದ್ದೆ. ಒಂದೊಮ್ಮೆ ಹಿಂದೂ ರಾಜರು ಮತ್ತು ಬ್ರಿಟಿಷರ ನಡುವೆ ಒಬ್ಬರನ್ನು ಆಯ್ದುಕೊಳ್ಳಬೇಕಾಗಿ ಬಂದರೆ ನಾನು ಹಿಂದೂ ರಾಜರನ್ನೇ ಆಯ್ದುಕೊಳ್ಳುವೆ. ಏಕೆಂದರೆ ಅವರು ಹಿಂದೂಸ್ತಾನದವರೇ ಆಗಿದ್ದಾರೆ". ಆಶ್ಫಾಕನ ಸ್ಪಷ್ಟ ನುಡಿಯಿದು.

1927ರ ಡಿಸೆಂಬರ್ 19ರಂದು ಗಲ್ಲಿಗೇರುವ ಮುನ್ನ ಆಶ್ಫಾಕ್ ಕಂಡಿದ್ದ ಕನಸು ನನ್ನೀ ಪ್ರಿಯ ಮಾತೃಭೂಮಿಯು ಮುಕ್ತಗೊಂಡು ಎಂದೆಂದಿಗೂ ವೈಭವದಿಂದ ಮೆರೆಯುವಂತಾಗಲಿ. ಆ ಕನಸು ನನಸಾಗಿದ್ದು ಅರ್ಧಭಾಗವಷ್ಟೇ. ಇಂದು ಆಶ್ಫಾಕ್ ಉಲ್ಲಾ ನೆನಪೇ ಇಲ್ಲ. ಈ ದೇಶದ ಮುಸ್ಲಿಂ ಸೋದರರಿಗೆ ಆಶ್ಫಾಕ್ ಉಲ್ಲಾ ಎಂದಿಗೂ ಆದರ್ಶವಾಗುವುದೇ ಇಲ್ಲ. ಹಿಂದೂ ಮುಸ್ಲಿಂರನ್ನು ಒಂದುಗೂಡಿಸಿ ನಾವೆಲ್ಲ ಭಾರತೀಯರು ಎಂದು ರಾಷ್ಟ್ರಪ್ರಜ್ಞೆ ಬೆಳಸುವ ನಾಯಕರಾರೂ ಕಾಣುತ್ತಿಲ್ಲ. ಹಾಗಾಗಿಯೇ ಬಹಿರಂಗವಾಗಿ ಲಾಡೆನ್‌ನನ್ನು ಸಮರ್ಥಿಸುವ ಶಹೀದ್ ಬುಖಾರಿ, ಪ್ರಾಧ್ಯಾಪಕನಾಗಿ ದೇಶದ್ರೋಹಕ್ಕೆ ಯುವಕರನ್ನು ಪ್ರೇರೇಪಿಸುವ ಉಗ್ರ ಪ್ರೊ. ಗಿಲಾನಿ, ದೇಶದ ಒಡಲಿಗೆ ಬೆಂಕಿ ಹಚ್ಚಿದ ದಾವೂದ್, ಆಫ್ಜಲ್ ಗುರುನಂತಹವರು ಇವರೆಲ್ಲರ ಮಾದರಿಯಾಗುತ್ತಿದ್ದಾರೆ.

ಎಲ್ಲೋ ಒಂದಷ್ಟು ರಾಷ್ಟ್ರ ಪ್ರೇಮಿ ಯುವಕರು ಸಿಕ್ಕರೂ ಅವರಲ್ಲಿ ಮತಾಂಧತೆಯ, ಕೋಮುವಾದದ ವಿಷ ಬಿತ್ತುವ ಕಾರ್ಯ ಅವ್ಯಾಹತವಾಗಿ ನಡೆದಿದೆ. ದೇಶ ದ್ರೋಹದ ಆರೋಪ ಸಾಬೀತಾದ ಐದು ವರ್ಷಗಳ ನಂತರವೂ ಆಫ್ಜಲ್ ಗುರುನಂತಹ ಉಗ್ರನನ್ನು ಮುದ್ದಿಸುತ್ತಿರುವ ಕೈಗಳೇ ಇಂದು ನಮ್ಮ ನಿಮ್ಮ ಅಕ್ಕಪಕ್ಕದ ಮನೆಯ ಮುಗ್ಧ ಸೋದರರನ್ನೂ ದಾರಿ ತಪ್ಪಿಸುತ್ತಿವೆ. ಈ ಗಂಭೀರತೆಯನ್ನು ಮನಗಂಡೇ ಆಶ್ಫಾಕ್ ಉಲ್ಲಾ ಆ ಉದ್ಗಾರ ತೆಗೆದಿರಬಹುದು. "ಅರೆ, ಓರ್ವ ಮುಸಲ್ಮಾನನನ್ನೂ ದೇಶಕ್ಕಾಗಿ ನೇಣಿಗೇರಲು ಬಿಡಿ".

ಓದುಗರಿಗೆ ಆಶ್ಫಾಕ್ ಉಲ್ಲಾ ನೆನಪೇ ಆಗದಿದ್ದರೆ ಅಮೀರ್ ಖಾನ್ ನಾಯಕತ್ವದ "ರಂಗ್ ದೇ ಬಸಂತಿ" ಸಿನಿಮಾದಲ್ಲಿ ಅಶ್ಫಾಕ್ ಪಾತ್ರವನ್ನು ಕುನಾಲ್ ಕಪೂರ್ ನಿರ್ವಹಿಸಿದ್ದು ನೋಡಿ ದೇಶದ ಹೆಮ್ಮೆಯ ಪುತ್ರನ ಬಲಿದಾನದ ಚರಿತ್ರೆಯ ಒಂದಂಶವಾದರೂ ತಿಳಿಯುತ್ತದೆ. [ಸ್ವಾತಂತ್ರ್ಯ ಹೋರಾಟ]

English summary
Martyr Ashfaqullah Khan the revolutionary won the friendship of Pandit Ram Prasad Bismil, also a revolutionary of Shahjahanpur. They showed the world what is called ideal Hindu- Muslim bhai bhai friendship. True sons of india were hanged by British Govt on 19 December 1927.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X