ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುದ್ಧಿಜೀವಿಗಳು ತೆಪ್ಪಗಿದ್ದರೆ ಜಗದ್ಗುರು ಭಾರತ!

By * ಕುಮಾರಗುರು, ಬೆಂಗಳೂರು
|
Google Oneindia Kannada News

Ayodhya issue resolve burden of Indian
ಇದೀಗ ಅಯೋಧ್ಯಾ ವಿವಾದದ ಗೊಂದಲ ಕಳೆದು ಅಂತಿಮ ತೀರ್ಮಾನದ ಹಾದಿಯಲ್ಲಿದೆ ಎಂದು ಆಶಿಸಬಹುದಾಗಿದೆ. ಆದರೆ ನಮ್ಮ ದೇಶದ ತಥಾಕಥಿತ ಬುದ್ಧಿಜೀವಿಗಳು ಇದನ್ನು ಆಗಗೊಟ್ಟಾರೆಯೇ ಎಂಬುದೇ ನನ್ನ ಅನುಮಾನ. ಡಿವಿಜಿಯವರು ಹೇಳಿರುವಂತೆ "ಬಳಲಿ ನೆಲದಲಿ ಮಲಗಿ ಮೈಮರೆತು ನಿದ್ರಿಪನ ಕುಲುಕಿ ಹಾಸಿಗೆಯನರಸೆನುವ ಉಪಕೃತಿ"ಯ ವಿಕೃತಿ ಇವರದು. ಜಾತಿ, ಮತ, ಪಂಗಡ, ಸಂಪ್ರದಾಯ, ಭಾಷೆಯ ವೈವಿಧ್ಯವಿರುವ ನಮ್ಮ ನಾಡಿನ ಜನ ವೈಮನಸ್ಯಗಳನ್ನು ತೊಡೆದು ಒಂದಾಗಿ ಬಾಳಿ "ಇದು ಸಾಧ್ಯ" ಎಂದು ಜಗತ್ತಿಗೆ ಸಾರಬೇಕಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ, ಬೋಧಿಸುವ ಭಾರ ಭಾರತೀಯರಮೇಲಿದೆ. Burden of Indian.

ಬೆಟ್ಟದಷ್ಟಿರುವ ನಮ್ಮಲ್ಲಿನ ಸಮಸ್ಯೆಗಳಿಗೆ ಮುಖ್ಯವಾಗಿ ಜಾತಿ ಪದ್ಧತಿಯನ್ನು ದೂರುವುದು ಪ್ಯಾಷನ್ ಆಗಿದೆ. ಹಾಗೂ ಜಾತಿಯನ್ನು ತೊಡೆದುಹಾಕುವ ಐಲುತನವೂ ಆಗಾಗ ಇಣುಕುತ್ತಿರುತ್ತದೆ. ಸಮಾಜದಲ್ಲಿ ಜನ ಸಾಮಾನ್ಯರು ದೈನಂದಿನ ಬದುಕು ಸಾಗಿಸುತ್ತಿರುವ ರೀತಿಯನ್ನು ಗಮನಿಸಿದರೆ ಜಾತಿ, ಮತ, ಪಂಗಡ, ಸಂಪ್ರದಾಯ, ಭಾಷೆ ಈ ಯಾವುದೂ ನಮ್ಮ ಸಮಸ್ಯೆಗಳಿಗೆ ಕಾರಣವಲ್ಲ ಎಂಬುದು ಸ್ಪಷ್ಟ. ಇವುಗಳಲ್ಲಿ ಒಂದಲ್ಲಾ ಒಂದು ನೆವ ಆಗಿರುತ್ತದೆ ಅಷ್ಟೆ.

ಎಲ್ಲಾ ಬಗೆಯ ಶೋಷಣೆಗಳಿಗೂ, ತತ್ಫಲವಾದ ಅನಾಚಾರ, ಹಿಂಸೆ ಅಶಾಂತಿ ಇವುಗಳಿಗೆ ಮುಖ್ಯ ಕಾರಣ ಸ್ವಾರ್ಥ, ಅಸೆಬುರುಕತನ. ಇದಕ್ಕೆ ಕಾರಣ ಅಧ್ಯಾತ್ಮಿಕತೆಯ ಕೊರತೆ. ಜನರೆಲ್ಲಾ ಅಧ್ಯಾತ್ಮಿಕರಾಗಿಬಿಡುವುದು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ, ಅಂದಮೇಲೆ ಸಮಸ್ಯೆಗಳು ಪರಿಹಾರವಾಗದೆ ಎಂದೆಂದಿಗೂ ಹಾಗೇ ಇರಬೇಕೆ? ಇದಕ್ಕೇನಾದರೂ ಉಪಾಯವಿದೆಯೇ?

ಸಮಾಜದಲ್ಲಿ ಯಾವ ನೆವದಿಂದಾಗಿ ಅಸಮಾಧಾನ ಗಲಭೆ ಅಶಾಂತಿಗಳು ಉಂಟಾಗುತ್ತವೆಯೋ ಅಂತಹ ನೆವಗಳನ್ನು ಸುಧಾರಿಸಿದರೆ ಅಥವಾ ಸಾಧ್ಯವಾದಷ್ಟೂ ಅವನ್ನು insulate ಮಾಡಿದರೆ ಸಮಸ್ಯೆಗಳು ಉಲ್ಬಣಿಸುವುದನ್ನು ತಡೆಯಬಹುದು, ತಡಮಾಡಬಹುದು. ಇದನ್ನು ಸಾಧಿಸಲು ನಮ್ಮಲ್ಲಿ "ರಾಜಕೀಯ ಇಚ್ಛಾಶಕ್ತಿ" ಇಲ್ಲವೇ ಇಲ್ಲ ಎಂಬುದು ಸಾಬೀತಾಗಿರುವುದರಿಂದ ಸಮಾಜದ ಇತರ ವರ್ಗಗಳವರು ಏನಾದರೂ ಮಾಡಬಹುದೇ? ಮುಖ್ಯವಾಗಿ ಮಾಧ್ಯಮಗಳು, ಪೀಠಾಧಿಪತಿಗಳು, ಸಂಘ ಸಂಸ್ಥೆಗಳು ಹಾಗೂ ಜವಾಬ್ದಾರಿಯುತ (ಹೊಣೆಯರಿತ) ಪ್ರಜೆಗಳು (citizens)ಧೃಡವಾದ ಹೆಜ್ಜೆಗಳನ್ನಿಡಬಲ್ಲರೆ? ಗಮನಿಸೋಣ:

ಜಾತೀಯತೆ ಮತ್ತು ಅಸ್ಪೃಶ್ಯತೆ : ಜಾತಿ ಪದ್ಧತಿ ನಿರ್ಮೂಲವಾಗಬೇಕು ಎಂದು ಹುಟ್ಟಿಕೊಂಡ ವೇದಿಕೆಗಳು ನಿರ್ಮೂಲವಾದವೇ ವಿನಹ ಜಾತೀಯತೆ ನಿರ್ಮೂಲವಾಗಿಲ್ಲ. ಪ್ರತಿ ಉಪ ಜಾತಿಯೂ ಇದೀಗ ತನ್ನದೇ ಆದ ಗುರು ಪೀಠವನ್ನು ಹೊಂದಿ ತಾನು ಮತ್ತಷ್ಟು ಬಲಾಢ್ಯವಾಗುವ ಪ್ರಯತ್ನದಲ್ಲಿವೆ. ಇದನ್ನು ಸ್ವಾಗತಿಸೋಣ. ಜಾತಿ ಪದ್ಧತಿಯ ನಿರ್ಮೂಲನೆ ಅಸಾಧ್ಯವಾಗಿರುವುದರಿಂದ ಜಾತಿ ಸಾಮರಸ್ಯಕ್ಕಾಗಿ ಪ್ರಯತ್ನಿಸುವುದೇ ಮೇಲು. ಇದೀಗ ಮಾದಾರ ಸ್ವಾಮಿಗಳು ಹಾಗೂ ಪೇಜಾವರರು ಮಾಡುತ್ತಿರುವ ಪ್ರಯತ್ನಗಳು ಪ್ರೌಢವೆನ್ನಲಾಗದಿದ್ದರೂ ಸಾಧುವಾದ ಪ್ರಯತ್ನ. ಆದರೆ ಮತ್ತೆ ಇಲ್ಲೂ ಬುದ್ಧಿಜೀವಿಗಳು ಕಡ್ಡಿ ಆಡಿಸುತ್ತಿದ್ದಾರೆ. ಜಾತಿ ಪದ್ಧತಿಯ ನಿವಾರಣಾ ಕ್ರಮವಾಗಿ ಜಾತಿ ಸೂಚಕ ಉಪ ನಾಮಗಳನ್ನು ಬಳಸಬಾರದೆಂದು ಈ ಹಿಂದೆ ಕೆಲವರು ಅಭಿಪ್ರಾಯಪಟ್ಟಿದ್ದರು.

ಆದರೆ ಇದೀಗ ಮಾದಿಗ, ಶೂದ್ರ, ಚಮ್ಮಾರ ಇತ್ಯಾದಿ ಉಪ ನಾಮಗಳು ಬಳಕೆಗೆ ಬರುತ್ತಿವೆ! ಸ್ವಾಗತವಿರಲಿ. ನಮ್ಮ ಮನೆಯ ಆಚಾರ ನಮ್ಮ ಮನೆಯೊಳಗಿರತಕ್ಕದ್ದು ಹೊರಗೆ ಈ ಸಂಪ್ರದಾಯ ಸೂಚಕವಾದ ಆಕಾರಗಳು (ವಿಭೂತಿ, ನಾಮ, ತಿಲಕ) ಇವನ್ನು ಧರಿಸುವುದು ಬೇಕಿಲ್ಲ ಎಂಬ ಪ್ರಾಜ್ಞ ಸಲಹೆಯೂ ಅಲ್ಪ ಕಾಲ ಚಾಲ್ತಿಯಲ್ಲಿತ್ತು, ಆದರೆ ನೋಡಿ, ತಾನು ಜಾತ್ಯತೀತತೆಯ ವೀರನೆಂದು ಘೋಷಿಸಿಕೊಂಡಿರುವ ಚಪಲದ ಮುದುಕ ಖುಷ್ವಂತ್ ಸಿಂಗ್ ತನ್ನ ಗಡ್ಡ ಪೇಟ ತೆಗೆಯಲಾರದೇ ಕುಂಟು ನೆಪಗಳನ್ನು ಹೇಳುತ್ತಿದ್ದಾನೆ. ಆದ್ದರಿಂದ ಎಲ್ಲ ರೀತಿಯ ಮತ ಚಿನ್ಹೆಗಳನ್ನೂ ಆದರಿಸೋಣ. ಯಾರೋ ಕೆಲವರು ಮತ್ತೊಬ್ಬರೊಂದಿಗೆ ಸಹಭೋಜನಮಾಡುವುದು ಇತ್ಯಾದಿಗಳು ಜಾತಿ ಸಾಮರಸ್ಯಕ್ಕೆ ಪುರಾವೆಯಾಗಬೇಕಿಲ್ಲ. ಇಂತಿರ್ಪ ಸಂದರ್ಭದಲ್ಲಿ ಕರ್ತವ್ಯವೇನು?

ಪತ್ರಿಕೆಗಳು : ಮೊದಲಿಗೆ ಪತ್ರಿಕೆಗಳ ಪಾತ್ರ ಬಹಳ ಹಿರಿದು. ಚುನಾವಣೆ ಘೋಷಣೆಯಾದಕೂಡಲೆ ಟಿಕೆಟ್ ಹಂಚಿಕೆಯ ಹಂತದಿಂದ ಎಲ್ಲಾ ರಾಜಕೀಯ ಪಕ್ಷಗಳು (ಎಡಚರೂ ಸೇರಿದಂತೆ) ಜಾತಿ ಲೆಕ್ಕಾಚಾರದಲ್ಲಿ ತೊಡಗುತ್ತವೆ. ನಂತರ ಪತ್ರಿಕೆಗಳು ಈ ರಾಜಕೀಯ ಪಕ್ಷಗಳು ಮಾಡಿದ ಹೊಲಸನ್ನು ಎಲ್ಲೆಡೆಗೂ ಹರಡುತ್ತವೆ. ಇದು ಸಚಿವ ಸಂಪುಟ ರಚನೆಯವರೆಗೂ ನಂತರವೂ ಮುಂದುವರೆಯುತ್ತ್ದೆ. ಜನ ಸಾಮಾನ್ಯರಿಗೆ ಯಾವ ಪಕ್ಷದವರು ಯಾವ ಜಾತಿಗೆ ಎಷ್ಟು ಟಿಕೆಟ್ ಕೊಟ್ಟಿದ್ದಾರೆ ಸಂಸದ,ಶಾಸಕರಲ್ಲಿ ಯಾವ ಜನಾಂಗದವರಿದ್ದಾರೆ ಎಂಬಿತ್ಯಾದಿ ವಿವರಗಳು ಗೊತ್ತಿರುವುದಿಲ್ಲ. ಈ ಸಂಗತಿಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಜಾತಿ ಸಾಮರಸ್ಯ ಕೆಡಿಸುವುದರಲ್ಲಿ ಪತ್ರಿಕೆಗಳು ಮಾಧ್ಯಮಗಳ ಪಾತ್ರವೇ ಹಿರಿದು. ಜನ ಸಾಮಾನ್ಯರು ತಮ್ಮಷ್ಟಕ್ಕೆ ತಾವು ನೆಮ್ಮದಿಯಿಂದ ಇರಬೇಕೆಂದಾದಲ್ಲಿ ಈ ಜಾತಿವಾರು ಅಂಕಿ ಸಂಖ್ಯೆಯನ್ನು ಪ್ರಕಟಿಸುವುದನ್ನು ಪತ್ರಿಕೆಗಳು ನಿಲ್ಲಿಸಿದರೆ ಒಳಿತು. ಅಲ್ಲದೆ ಜಾತಿ ಹೆಸರಿನ ಸಂಘಟನೆಗಳು ಹಮ್ಮಿಕೊಳ್ಳುವ ಯಾವುದೇ ಪ್ರತಿಭಟನೆ, ಸಮಾವೇಷ ಇತ್ಯಾದಿ ಕಾರ್ಯಕ್ರಮಗಳ ವಿವರಗಳನ್ನು ಮಾಧ್ಯಮಗಳಲ್ಲಿ ವರದಿ ಮಾಡದಿರುವುದು ಒಳಿತು.

ಪೀಠಾಧಿಪತಿಗಳು : ನೈತಿಕತೆ ಸಚ್ಚಾರಿತ್ರ್ಯ ಸಂಯಮಗಳನ್ನು ಎಲ್ಲಾ ಪೀಠಾಧಿಪತಿಗಳೂ ಬೋಧಿಸುತ್ತಾರಾದರೂ ಇವರೆಲ್ಲರೂ ತಮ್ಮ ತಮ್ಮ ಸ್ವಂತ ಬ್ರಾಂಡ್ ಪ್ರಮೋಟರ್ಸ್ ಅಗಿರುವುದರಿಂದ ಮತ್ತೂ ಕೆಲವರು ರಾಜಕೀಯಸ್ಥರ ಖಜಾಂಚಿಗಳಾಗಿರುವುದರಿಂದ ಇವರಿಂದ ಹೆಚ್ಚು ನಿರೀಕ್ಷಿಸುವಂತಿಲ್ಲ.

ಸಂಘ ಸಂಸ್ಥೆಗಳು : ವಿಶೇಷ ಸಾಧನೆಮಾಡಿದವರನ್ನು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸುವುದು ಸಹಜ. ಈ ಸನ್ಮಾನಿತರನ್ನು ಹೊಗಳುವ ಭರದಲ್ಲಿ ಅವರ ಜಾತಿಯನ್ನೋ ಪ್ರದೇಶವನ್ನೋ ಭಾಷೆಯನ್ನೋ ಎತ್ತಿ ಹೇಳುವುದನ್ನು ನಿಲ್ಲಿಸುವುದು ಒಳಿತು. ಕೆಲವು ಬಾರಿ ಸಂಘ ಸಂಸ್ಥೆಗಳಲ್ಲಿ ಕಾರಣಾಂತರಗಳಿಂದ ಯಾವುದೋ ಒಂದು ಜಾತಿಯವರ ಪಂಗಡದವರ ಪ್ರಾಬಲ್ಯ ಹೆಚ್ಚಾಗಿ ಕಂಡುಬರಬಹುದು. ಅಯ್ಯೋ ಅಲ್ಲಿರೋರೆಲ್ಲ ಅವರೇ ಕಣ್ರೀ ಎಂಬ ಸಿನಿಕತನದ ಕುಹಕತನದ ಮಾತನ್ನಾಡಬಾರದು. ನಾವಾದರೋ 7 ಜ್ಞಾನಪೀಠ ಪಡೆದವರು ಎಂಬ ಹೆಮ್ಮೆ ಇಟ್ಟುಕೊಳ್ಳಬೇಕಾಗಿಲ್ಲ. ಪ್ರಾದೇಶಿಕ ವೈಶಿಷ್ಟ್ಯಗಳು ನಾಶವಾಗುತ್ತಿರುವುದರ ಕುರಿತು ಅಕ್ರೋಶಗೊಳ್ಳಬೇಕಿಲ್ಲ. ಪರಿವರ್ತನೆಯೊಂದೇ ಖಾಯಂ.

ಹೊಣೆಯರಿತ ರಾಷ್ಟ್ರಕರು : ಅಂತರ್ಜಾತೀಯ ವಿವಾಹಗಳನ್ನು ಒಲ್ಲದ ಮಂದಿ ವಿವಾಹ ಸಂಬಂಧಗಳನ್ನು ಕುದುರಿಸುವ ಮಾತುಕತೆಯ ಸಂದರ್ಭದ ವಿನಹ ಬೇರಾವುದೇ ಸಂದರ್ಭದಲ್ಲಿ ಯಾರೂ ಯಾರ ಜಾತಿಯನ್ನೂ ಕೇಳಬಾರದು, ತಿಳಿದುಕೊಳ್ಳುವ ಕುತೂಹಲವನ್ನೂ ಹೊಂದಬಾರದು. ಮಕ್ಕಳಿಗೆ ಹೆಸರನ್ನಿಡುವಾಗ ಅನ್ಯ ಕೋಮಿನ ಹೆಸರುಗಳನ್ನು ಇಡುವುದರಿಂದ ಕಟ್ಟಾ ಜಾತೀವಾದಿಗಳ ಹಾದಿತಪ್ಪಿಸಬಹುದು. ಹಿಂದೂಗಳು ಮುಸಲ್ಮಾನರ ಕ್ರೈಸ್ತರ ಗುಣವಾಚಕ ನಾಮಗಳನ್ನು ಇಟ್ಟುಕೊಳ್ಳಬಹುದು. ಎಲ್ಲಾ ಜಾತಿ ಜನಾಂಗ ಕೋಮಿನಲ್ಲೂ ಒಳ್ಳೆಯವರೂ ಕೆಟ್ಟವರೂ ಇರುತ್ತಾರಷ್ಟೆ, ಮಾಧ್ಯಮಗಳಲ್ಲಿ ವರದಿಯಾಗುವ ಅಪರಾಧ ಸುದ್ದಿಗಳಲ್ಲಿ ಹೆಸರನ್ನು ನೋಡಿ ಅಯಾ ಜನಾಂಗದವರ ಬಗ್ಗೆ ಅನಾವಶ್ಯಕವಾಗಿ ಕೆಟ್ಟ ಅಭಿಪ್ರಾಯ ಪೂರ್ವಾಗ್ರಹಗಳನ್ನು ಹೊಂದುವುದರಿಂದ ಪಾರಾಗಲು ಇದರಿಂದ ಸಾಧ್ಯವಾದೀತು.

ಮತಾಂತರ : ಈ ರಾಷ್ಟ್ರದ ಪ್ರಜೆ ತನ್ನಿಷ್ಟದಂತೆ ಮತಾಚಾರವನ್ನು ಅನುಸರಿಸಬಹುದು. ಸಂವಿಧಾನದತ್ತ ಹಕ್ಕು ಇದು ಇದಕ್ಕೆ ಯಾವುದೇ ವಿರೋಧ ಸಲ್ಲ. ಆದರೆ ಈಶಾನ್ಯ ಭಾರತದಲ್ಲಿ ಮತಾಂತರದಿಂದಾಗಿ ದೇಶದ ಏಕತೆ ಅಖಂಡತೆ ಭದ್ರತೆಗೆ ಅಪಾಯವೊದಗಿದೆ. ಈ ಕಾರಣಕ್ಕಾಗಿ ಪ್ರಲೋಭನೆಗಳಿಂದ ನಡೆಯುತ್ತಿರುವ ಹಿಂಡು ಹಿಂಡು ಸಗಟು ಮತಾಂತರವನ್ನು ಕಾನೂನಿನ ಮೂಲಕ ನಿಷೇಧಿಸಬೇಕು ಮತ್ತು ಹತೋಟಿಯಲ್ಲಿಡಬೇಕು. ಈ ಮತಾಂತರ ಪಿಡುಗಿಗಾಗಿ ಯಾರೂ ಸ್ಥಳೀಯ ಕ್ರೈಸ್ತರನ್ನು ಅನುಮಾನಿಸಬೇಕಾಗಿಲ್ಲ. ಇದರ ಹಿಂದೆ ಇರುವ ಅಂತರರಾಷ್ಟ್ರೀಯ ಪಿತೂರಿಯನ್ನು ಎದುರಿಸಬೇಕು.

ಇಸ್ಲಾಂನ ಕೆಲವು ತತ್ವಗಳನ್ನು ಪುನರ್ವ್ಯಾಖ್ಯಾನಿಸದ ಹೊರತು ನಿಷ್ಠಾವಂತ ಮುಸಲ್ಮಾನರು ದೇಶಕ್ಕೆ ನಿಷ್ಠೆಯಿಂದಿರುವುದು ಸಾಧ್ಯವಿಲ್ಲ. ಅವರು ಇಲ್ಲಿನವರೊಂದಿಗೆ ಹೊಂದಿ ಬಾಳುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಇದೀಗ ಪ್ರಕಟವಾಗಿರುವ ಅಲಹಾಬಾದ್ ಹೈಕೋರ್ಟ್ ತೀರ್ಪು ಮಹತ್ವದ ಮಂಥನಕ್ಕೆ ದಾರಿಯಾಗಲಿ. ಹಿಂದೂ ಸಮಾಜ ಮುಸಲ್ಮಾನರಿಗಾಗಿ ತಾನು ಮಾಡಬಹುದಾದ್ದಕ್ಕಿಂತ ಹೆಚ್ಚಿನದನ್ನೇ ಮಾಡಿದೆ. ಚೆಂಡು ಈಗ ಅವರ ಅಂಗಳದಲ್ಲಿದೆ. ಮತಾಂಧ ಮೊಗಲ್ ದೊರೆಗಳು ಹಿಂದೂಗಳ ಮೇಲೆ ನಡೆಸಿದ ಘೋರ ಕೃತ್ಯಗಳಿಗೂ ಮೊದಲು ನಮ್ಮ ದೇಶಕ್ಕೆ ಬಂದ ಮುಸಲ್ಮಾನ್ ಮತೀಯರಿಗೆ ಹಾರ್ದಿಕ ಸ್ವಾಗತ ನೀಡಿ ಸಕಲ ಸೌಲಭ್ಯಗಳನ್ನೂ ಕಲ್ಪಿಸಿದವರು ಇದೇ ಹಿಂದೂಗಳು ಅದಕ್ಕೂ ಹೆಚ್ಚಾಗಿ ಇಲ್ಲಿನ ವೈದಿಕರು ಎಂಬ ಅಂಶವನ್ನು ನಮ್ಮ ಬುದ್ಧಿಜೀವಿಗಳು ಮೊದಲು ಅರಿಯಬೇಕಾಗಿದೆ. 33 ಕೋಟಿ ದೇವರುಗಳಿರುವ ಈ ನಾಡಿಗೆ ಇನ್ನೆರಡು ದೇವರುಗಳು ಭಾರವಲ್ಲ.

ಸ್ವಲ್ಪ ಮಟ್ಟದ ಕೊಡುಕೊಳ್ಳುವಿಕೆ ಸಾಕು, ಅನೇಕ ವೈಷಮ್ಯಗಳು ದೂರವಾಗುತ್ತವೆ. ಬೇಟೆಗಾರ ಮತಗಳು ಹುಟ್ಟುಹಾಕಿರುವ ಪೈಪೋಟಿಗೆ ಭಾರತ ಮಾತ್ರ ಸೂಕ್ತ ಉತ್ತರ ನೀಡಬಲ್ಲುದು. ಈಗಾಗಲೇ ವಿಶ್ವಸಂಸ್ಥೆ ಒಪ್ಪಿರುವ ಸರ್ವ ಧರ್ಮ ಸಮಭಾವ ಭಾರತದ್ದೆ ಕೊಡುಗೆ. ಇದನ್ನು ಇತರ ಮತೀಯರೂ ಒಪ್ಪಿಕೊಳ್ಳುವ ಕಾಲ ಹತ್ತಿರವಾಗುತ್ತಿದೆ. ಇಷ್ಟಾದರೆ ಇಡೀ ವಿಶ್ವವೇ ಹಿಂದೂ ಆದಂತೆ. (A Hindu by spirit not by rituals) "ತನ್ನ ಮತ ಗ್ರಂಥಗಳಾಚೆಗೂ ಯೋಚಿಸಬಲ್ಲವನೇ ಹಿಂದೂ" ಹಿಂದೂ ರಾಷ್ಟ್ರದ ಸಂಕುಚಿತ ಕನಸು ಕಾಣುವುದು ಅಪರಾಧ. ಹಿಂದೂ ವಿಶ್ವದ ಕನನು ನಮದಾಗಲಿ, ಅದು ನನಸಾಗಲಿ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ</a> | <a href=ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS" title="ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS" />ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X